ಹರಕೆ - ಅರಿಕೆಯೋ, ಆಮಿಷವೋ?
ಬಸವನಗುಡಿಯ ದೊಡ್ಡ ಬಸವಣ್ಣನ ಹಾಗೂ ದೊಡ್ಡ ಗಣೇಶನ ದೇವಸ್ಥಾನ ಎಲ್ಲ ಯಾತ್ರಿಗಳು ಬಂದು ನೋಡುವ ತಾಣ. ಅವುಗಳಿರುವ ಗುಡ್ಡ, ಕಹಳೆ ಬಂಡೆ, ಒಂದಷ್ಟು ಹಸಿರು, ಜೊತೆಗೆ ನಾಗರಿಕತೆಯ ಕುರುಹಾಗಿ ನೀರಿನ ಟ್ಯಾಂಕ್, ಮಂಕುತಿಮ್ಮನ ಕಗ್ಗದ ಕರ್ತೃ ಡಿವಿಜಿ ಯವರ ಪುತ್ಥಳಿ... ಎಲ್ಲವೂ ಅಂದವನ್ನು ಹೆಚ್ಚಿಸಿದೆ. ದೈನಂದಿನ ಓಡಾಟದಲ್ಲಿ, ಈ ಜಾಗದ ಪಕ್ಕದಲ್ಲಿ ಬಹಳ ಸಲ ಓಡಾಡಿದರೂ, ಒಳ ಹೋಗಿ ಬರುವುದು ಕಡಿಮೆಯೇ. ಹೋದ ಸೋಮವಾರ ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರ ಹಾಗೂ ಪೂಜೆ. ಇದನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ನನಗಾಯಿತು. ಅದಕ್ಕೆ ಕಾರಣ ನನ್ನ ಹೆಂಡತಿ ವಿಜಯ ಹೊತ್ತಿದ್ದ ಹರಕೆ. ಹರಕೆಗೆ 12 ವರ್ಷ ಎನ್ನುವ ಮಾತಿದೆ... ಆದರೆ ಈ ಹರಕೆ ಸಲ್ಲಿಸಲು ಸುಮಾರು ಮೂರು 12 ವರ್ಷಗಳು ಕಳೆದದ್ದು ಸತ್ಯ. ನನ್ನ ಮಗಳು ಚಿಕ್ಕವಳಿದ್ದಾಗ ಹರಸಿಕೊಂಡಿದ್ದಂತೆ, ಈಗ ಕಾಲ ಕೂಡಿ ಬಂದಿದ್ದು. ಅದರ ಫಲವೇ ಮೊದಲ ಬಾರಿ ದೊಡ್ಡ ಗಣೇಶನ ಮುಂದೆ ಕೂತಿದ್ದು, ಪೂಜೆ ಮಂಗಳಾರತಿಯಲ್ಲಿ ಭಾಗಿಯಾಗಿದ್ದು. ಸಾಮಾನ್ಯವಾಗಿ ಅಲ್ಲಿಗೆ ಹೋದಾಗ, ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ, ಬರುವುದು ವಾಡಿಕೆ. ಬೆಣ್ಣೆಯ ಅಲಂಕಾರ ನಿಜಕ್ಕೂ ಒಂದು ಕಲೆ. ಅಷ್ಟು ದೊಡ್ಡ ವಿಗ್ರಹಕ್ಕೆ ಬೆಣ್ಣೆಯನ್ನು ಹಚ್ಚಿ, ಬಣ್ಣದ ಕಾಗದಗಳಿಂದ ಅಲಂಕರಿಸಿ, ವಿಗ್ರಹಕ್ಕೆ ಸುಂದರ ರೂಪವನ್ನು ಕೊಡುವುದು. ಜೊತೆಗೆ ವಿದ್ಯುತ್ ದೀಪದ ಬೆಳಕಿನ ಅಲಂಕಾರ. ಎಂಥವರ ಮನಸ್ಸನ್ನೂ ಸೆಳೆಯುವ ದೃಶ್ಯ. ಇನ್ನು ಭಕ್ತ ಸಮುದ...