ಸುಳ್ಳು - ಸತ್ಯ - ಆಣೆ



ಸುಳ್ಳು ಯಾಕೆ ಹೇಳಲೀ ನಾನು.... ಮೊನ್ನೆ ವಾಕಿಂಗ್ ನಲ್ಲಿ ಯಾರೋ ಒಬ್ಬರು ಹೇಳ್ತಿದ್ರು  “ನನ್ನ ಜೀವಮಾನದಲ್ಲಿ ಒಂದು ಸುಳ್ಳು ಹೇಳಿಲ್ಲ" ಅಂತ.... ಅವರ ಮುಖ ನೋಡಿ ಸಣ್ಣ ನಗೆ ಬೀರಿದೆ... ಯಾಕ್ರೀ ನಗ್ತೀರಾ ಅಂತ ತಮಾಷೆಯಾಗಿ ಧಮ್ಕಿ ಹಾಕಿದರು. ಮನಸ್ಸಿಗೆ ಬಂತು ಅವರು ಹೇಳಿದ್ದು ಸರಿ ಅಂತ... ಯಾಕಂದ್ರೆ ಒಂದೋ ಅವರು ಹೇಳಿದ್ದು ಒಂದು ಸುಳ್ಳು ಹೇಳಿಲ್ಲ ಅಂತ... ನೂರಾರು ಹೇಳಿರಬಹುದಲ್ಲ... ಅಥವಾ ಅವರು ಹೇಳಿದ್ದು ಹಸಿ ಸುಳ್ಳು ಇರಬಹುದಲ್ಲ.  ಚೆನ್ನಾಗಿ ಪರಿಚಯವಿಲ್ಲದಿದ್ದ ಕಾರಣ ಇದನ್ನು ಅವರಿಗೆ ಹೇಳುವ ಧೈರ್ಯ ಬರಲಿಲ್ಲ.. ಸುಮ್ನೆ ಮುಂದೆ ಹೆಜ್ಜೆ ಹಾಕ್ದೆ.

 ಗೊದ್ದ ಗೋಡೆ ಹಾಕಿದ್ ಕಂಡೆ                             ಇಲಿ ಬೆಕ್ಕಿನ್ ತಿನ್ನೋದ್ ಕಂಡೆ                     ಕಂಡೇನಕ್ಕ ಮುಂಗ್ ಸೀಯ                         ಕಡಾಯಿ ಗಾತ್ರವ...

ಇದು ನಾನು ಚಿಕ್ಕಂದಿನಲ್ಲಿ ಕಲಿತ ದಾಸರ ಪದ. ಆಗ ಅದು ಅರ್ಥವೇ ಇಲ್ಲದ ತಮಾಷೆಯಾಗಿ ಮಾತ್ರ ಕಾಣುತ್ತಿತ್ತು. 

ಸುಳ್ಳು ನಮ್ಮಲ್ಲಿಲ್ಲವಯ್ಯ,  ಸುಳ್ಳು ನಮ್ಮಲ್ಲಿಲ್ಲ.    ಸುಳ್ಳೇ ನಮ್ಮನೆ ದೇವರು ..... 

ಎನ್ನುವುದು ಹಾಡಿನ ಪಲ್ಲವಿ ಎಂದು   ನಂತರದ ದಿನಗಳಲ್ಲಿ ತಿಳಿದಾಗ, ಅದರ ಹಿಂದಿರುವ ವ್ಯಂಗ್ಯ ಅರ್ಥವಾಯಿತು.

ಚಿಕ್ಕಂದಿನಲ್ಲಿ ಸುಳ್ಳು ಹೇಳುವುದು ತಪ್ಪು, ಅದು ಪಾಪ, ದೇವರು ಕಣ್ಣು ಕಿತ್ತುಕೊಂಡು ಬಿಡ್ತಾನೆ ಅಂತ ಹೆದರಿಸಿದ್ದರೂ... ಸುಳ್ಳು ಹೇಳಲಿಲ್ಲವಾ..  ಅಂತ ನನ್ನನ್ನು ನಾನು ಪ್ರಶ್ನೆ ಮಾಡ್ಕೊಂಡ್ರೆ... ಬೇಕಾದಷ್ಟು ಸಣ್ಣ ಪುಟ್ಟ ಸುಳ್ಳುಗಳು ಹೇಳಿದ್ದುಂಟು. ಅದು ಆ ಸಮಯದ ಬೈಗುಳ / ಹೊಡೆತ / ಶಿಕ್ಷೆ ತಪ್ಪಿಸಿಕೊಳ್ಳಲು.

ನಾನಿನ್ನು ದೊಡ್ಡಜಾಲದಲ್ಲಿದ್ದ ಸಮಯ, ನನ್ನಣ್ಣ ಕಿಟ್ಟಣ್ಣ... ಏನೋ ಆಟ ಆಡಿಸಲು ಕಿತ್ತಲೆ ತೊಳೆ ಪೆಪ್ಪರ್ ಮೆಂಟ್ ( ಅದರಲ್ಲಿ ಪೆಪ್ಪರ್- ಮೆಣಸು ಅಥವಾ ಮಿಂಟ್ - ಪುದಿನ... ಇರಲಿ, ಇಲ್ಲದಿರಲಿ .... ಅವೆಲ್ಲ ಪೆಪ್ಪರ್ ಮೆಂಟ್ ಜಾತಿಗೆ ಸೇರಿದವುಗಳೇ) ತಂದಿಟ್ಟಿದ್ದ. ನನಗೆ ಅದನ್ನು ತಿನ್ನುವ ಆಸೆ... ಕೇಳಲಿಲ್ಲವೋ ಅಥವಾ ಕೇಳಿ ಸಿಗಲಿಲ್ಲವೋ, ಯಾರೂ ಇಲ್ಲದ ಸಮಯದಲ್ಲಿ ಕದ್ದು ತಿಂದದ್ದು ಸತ್ಯ... ಕಿಟ್ಟಣ್ಣ ಕೇಳಿದಾಗ ತಿಂದಿಲ್ಲ ಎಂದು ಸುಳ್ಳು ಹೇಳಿದ್ದು ಅಷ್ಟೇ ಸತ್ಯ. ನನ್ನಲ್ಲಿದ್ದ ಕಳ್ಳನನ್ನು ಹಿಡಿದ ಕಿಟ್ಟಣ್ಣ ಒದೆ ಕೊಟ್ಟು ಜೊತೆಗೆ ಪೆಪ್ಪರ್ಮೆಂಟು ಕೊಟ್ಟಿದ್ದೂ ಸತ್ಯ.

ಮಕ್ಕಳಿಗೆ ಸುಳ್ಳು ಹೇಳೋದು ಬಹಳ ಬೇಗ ಸಿದ್ಧಿಸುತ್ತೆ ಅನ್ಸುತ್ತೆ. 

ಇದಕ್ಕೆ ಕಾರಣ ಅವರಿಗೆ ಕಲಿಸುವ ಜಾನಿ ಜಾನಿ ಎಸ್ ಪಪ್ಪಾ... ಹಾಡಿನ .....ಟೆಲ್ಲಿಂಗ್ ಲೈಸ್... ನೋ ಪಪ್ಪಾ... ಸ್ಪೂರ್ತಿ ಇರಬೇಕೇನೋ.. 


 ಮಣ್ಣು ತಿಂದಿಲ್ಲ ಎಂದು ಹೇಳಿ... ಅಮ್ಮ ಯಶೋದೆ  "ಬಾಯಿ ತೆಗಿ... ತೋರಿಸು" ಎಂದಾಗ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸಿದ ಕೃಷ್ಣನು ಒಬ್ಬ ಮಾರ್ಗದರ್ಶಿಯೇನೋ.

 ಸುಳ್ಳು ಹೇಳಲು ಬರದ ಮುಗ್ಧ ತನವೂ ಇರುತ್ತೆ. ಏನೋ ಕಾರಣದಿಂದ ಅಪ್ಪ ಮಗನಿಗೆ " .... ಅವರು ಬಂದಾಗ ನಾನು ಮನೆಯಲ್ಲಿ ಇಲ್ಲ " ಅಂತ ಹೇಳು... ಎನ್ನುವ ಸಲಹೆಗೆ ಮಗನು  ಆ ಅವರು ಬಂದಾಗ  "ನಮ್ಮಪ್ಪ ಹೇಳಿದರು ನೀವು ಬಂದಾಗ ಅವರು ಮನೆಯಲ್ಲಿ ಇಲ್ಲ ಅಂತ ಹೇಳು" ಅಂತಾನೆ ಹೇಳಿದ್ದು.... ಪಾಪ ಮುಗ್ಧ ಹುಡುಗ... ಸುಳ್ಳು ಹೇಳುವ ಕಲೆಯನ್ನು ಇನ್ನೂ ಗಳಿಸಿಲ್ಲದ್ದು.

ಇನ್ನು ಧರ್ಮರಾಯನ ಬಾಯಲ್ಲಿ    " ಅಶ್ವತ್ಥಾಮೋ ಹತಃ ಕುಂಜರಃ ".. ಎಂದು ಹೇಳಿಸಿ ಕುಂಜರಃ ಎಂಬ ಶಬ್ದ ಬಂದಾಗ ಶಂಖವನ್ನು ಊದಿದ ಕೃಷ್ಣ.... ದ್ರೋಣರಿಗೆ ಅನ್ಯಾಯ ಮಾಡಿದ್ದು (ಲೋಕ ಹಿತಕ್ಕೇ ಇರಬಹುದು)  ಕಡಿಮೆ ಸುಳ್ಳೇ?

ಸತ್ಯಂ ಬ್ರೂಯಾತ್ ಪ್ರಿಯಂ   ಬ್ರೂಯಾತ್,            ನ   ಬ್ರೂಯಾತ್  ಸತ್ಯಮಪ್ರಿಯಂ .. ಅಪ್ರಿಯವಾದ ಸತ್ಯವನ್ನು ಹೇಳಬೇಡ ಎಂದಾಗ... ಪರೋಕ್ಷವಾಗಿ ಸುಳ್ಳು ಹೇಳಲು ಪ್ರೇರೇಪಿಸಿದಂತೆ ಆಗಲಿಲ್ಲವೇ?

ಸಾವಿರ ಸುಳ್ಳು ಹೇಳಿ ಒಂದು ಕನ್ಯಾ ದಾನ ಮಾಡಬೇಕು ಎಂದಾಗಲು ಸುಳ್ಳು ಹೇಳಲು ಇಂಬು ಕೊಟ್ಟಂತಾಗಲಿಲ್ಲವೇ? ಇಂಥ ಸಂದರ್ಭದಲ್ಲೇ  "ಅಪದ್ಧಕ್ಕೆ ಅಪ್ಪಣೆ ಏಕೆ " ಎಂಬ ನುಡಿಗಟ್ಟು ಉಪಯೋಗಕ್ಕೆ ಬಂದಿರಬೇಕು.

ಸುಳ್ಳು ಹೇಳೋದು ಯಾಕ್ ಇರಬೇಕು ಅಂತ ಯೋಚನೆ ಮಾಡಿದಾಗ ಹೊಳೆದ ಅಂಶಗಳು...

  * ಆಗುವ ಅವಮಾನ ಅಥವಾ ಮುಖ ಭಂಗವನ್ನು ತಪ್ಪಿಸಿಕೊಳ್ಳಲು,

  * ನಾನು ವಿಶಿಷ್ಟ ಎಂಬ ಹೆಚ್ಚುಗಾರಿಕೆಯ ಜಂಬ ಕೊಚ್ಚಿಕೊಳ್ಳಲು,

  * ಬೇರೊಬ್ಬರಿಗೆ ಅವಮಾನ ಮಾಡಲು / ಸೇಡು ತೀರಿಸಿಕೊಳ್ಳಲು,

  * ಇನ್ನೊಬ್ಬರಿಗೆ ಮೋಸ ಮಾಡಲು ಬುನಾದಿ ಹಾಕುವಾಗ,

 *ವೈಯುಕ್ತಿಕ ಲಾಭಗಳಿಗಾಗಿ,

  *ವ್ಯಾಪಾರದಲ್ಲಂತೂ ಸ್ವಾಭಾವಿಕ ಸುಳ್ಳು...

ಇನ್ನೂ ಅನೇಕ ಕಾರಣಗಳು ನನ್ನ ಸೀಮಿತ ಜ್ಞಾನಕ್ಕೆ ಗೊತ್ತಿಲ್ಲದಿರಬಹುದು.

ನನಗೆ ತಿಳಿದಂತೆ, ಸುಳ್ಳು ಹೇಳದೆ ಇದ್ದಿದ್ದು... ಕನ್ನಡಿಯನ್ನು ಬಿಟ್ಟರೆ... ಸತ್ಯ ಹರಿಶ್ಚಂದ್ರ ಮಾತ್ರ. ಪಾಪ ಸತ್ಯಕ್ಕಾಗಿ ಅವನು ಪಟ್ಟ ಬವಣೆ... ಹೇಳತೀರದು. ಸತ್ಯ ಹರಿಶ್ಚಂದ್ರ ಚಿತ್ರದ ನಕ್ಷತ್ರಿಕನ ಪಾತ್ರ ಮಾಡಿದ ನರಸಿಂಹರಾಜುವಿನ  ಮಾತುಗಳು  " ..... ನನ್ನ ಹೆಸರು ನಕ್ಷತ್ರಿಕ ಅಲ್ಲ.. ಕಡೆಗೆ ನಾನು ಮನುಷ್ಯನೇ ಅಲ್ಲ" ಅಂತ ಸುಳ್ಳು ಹೇಳಿ ಬೆಂಕಿಯಿಂದ ತಪ್ಪಿಸಿಕೊಂಡ ದೃಶ್ಯ ನನಗೆ ಬಹಳ ಮೆಚ್ಚುಗೆ. ಅದನ್ನ ಕೇಳಿ ನಕ್ಕಿದ್ದೇ..ನಕ್ಕಿದ್ದು ಎನ್ನುವ ಮಾತು ಸುಳ್ಳಲ್ಲ.

ತಪ್ಪು ಮಾಡದವರು ಯಾರವ್ರೆ                          ತಪ್ಪೇ ಮಾಡದವರು ಎಲ್ಲವ್ರೇ 

ಎನ್ನುವ ಹಾಡನ್ನು ಸ್ವಲ್ಪ ಬದಲಿಸಿ

ಸುಳ್ಳು ಹೇಳದವರು ಯಾರವ್ರೇ                        ಸುಳ್ಳೇ ಹೇಳದವರು ಎಲ್ಲವ್ರೆ 

ಎಂದು ಹಾಡಿದರೆ ಅದು ತಪ್ಪೂ ಆಗಲಾರದು, ಸುಳ್ಳೂ ಆಗಲಾರದು.. ಏನಂತೀರಿ? ದಯವಿಟ್ಟು ಸುಳ್ಳು ಹೇಳಬೇಡಿ.

“ಸತ್ಯಮೇವ ಜಯತೆ” ಇದು ಭಾರತದ ಧ್ಯೇಯ ವಾಕ್ಯ.... ಈಚೆಗೆ ಇದು ಸುಳ್ಳೇನೋ ಎನ್ನುವ ಅನುಭವ / ಅಭಿಪ್ರಾಯ ನನ್ನದು... ನಮ್ಮ ರಾಜಕಾರಣಿಗಳು ಹೇಳುವ ಮಾತುಗಳನ್ನು ಕೇಳುತ್ತಾ ಇದ್ದಾಗ.

God sees the truth but waits ಎನ್ನುವ ಹೇಳಿಕೆಯನ್ನು ಮುಂದಿಟ್ಟುಕೊಂಡು  ಕಾಯುತ್ತಲೆ ಇರಬೇಕೆನೋ..

ಈಗಿನ social media ಎಂಬ ಸಾಗರದಲ್ಲಿ ತೇಲುವ ಸುಳ್ಳು ಸುದ್ದಿಗಳನ್ನು ಗಮನಿಸಿದರೆ, ಸುಳ್ಳು ನಮ್ಮ ಜನ ಜೀವನದ ಬಹು ಮುಖ್ಯ ಅಂಗವಾಗಿದೆ ಅನಿಸುತ್ತದೆ. Artificial Intelligence ಉಪಯೋಗಿಸಿಕೊಂಡು ಎಂಥ ವಿಷಯ... ಏನು ಬೇಕಾದರೂ ಸೃಷ್ಟಿಸಬಹುದು.



 ಇದನ್ನು fact check - ಸರಿಯೇ ಎಂದು ಪ್ರಾಮಾಣಿಕರಿಸಲು ಸಾಧ್ಯವಾದರೂ... ಅಷ್ಟರಲ್ಲಿ ಸುಳ್ಳು ಮೂರು ಲೋಕವನ್ನು ಸುತ್ತಿರುತ್ತದೆ. ಸತ್ಯ ಎದ್ದೇಳುವ ಮುನ್ನ ಸುಳ್ಳು ಊರೆಲ್ಲ ಸುತ್ತಿರುತ್ತದೆ ಎಂಬ ನಾಣ್ಣುಡಿ ಸುಮ್ಮನೆ ಬಂದಿಲ್ಲ. 

ಸುಳ್ಳು ಹೇಳುವುದು ಅಷ್ಟು ಸುಲಭ ಅಲ್ಲ ಕಣ್ರೀ... ಮೊದಲು ಸುಳ್ಳು ಹೇಳುವ ಚಾಕ ಚಕ್ಯತೆ ಬೇಕು, ಯಾರಿಗೆ ಏನು ಸುಳ್ಳು ಹೇಳಿದ್ದೇನೆ ಎಂಬ ನೆನಪಿರಬೇಕು... ಅಲ್ಲೇನಾದರೂ ವ್ಯತ್ಯಾಸವಾದರೆ ಎದುರಿಸುವ ಭಂಡತನವೂ ಇರಬೇಕು. 



ಎಷ್ಟೋ ಸಲ, ಇನ್ನೊಬ್ಬರು ಹೇಳಿದ್ದು ಸುಳ್ಳು ಎಂದು ನಮಗೆ ಗೊತ್ತಿದ್ದರೂ... ಅದನ್ನು ಕೆದಕಲು ಹೋಗದಿದ್ದರೆ ಒಳ್ಳೆಯದೇ... ಯಾಕಂದ್ರೆ.. ಅದನ್ನ ಸುಳ್ಳು ಅಂತ ನಿರೂಪಿಸಬೇಕಾಗಿದ್ದು ನಾವೇ.. ಅದರಿಂದ ಸಾಧಿಸೋದು ಏನು ಇಲ್ಲ... ಆದರೆ ನಮಗೆ ಗೊತ್ತು ಅಂತ ಅದನ್ನು ಹೇಳಿದವರಿಗೆ ತಿಳಿಯುವಂತೆ ಮಾಡಿದರೆ ಸಾಕು.

ಬರೀ ಬುರುಡೆ, ರೈಲು ಬಿಡು, ಪಟ್ಟಿ ಕಟ್ಟು, ಬಣ್ಣ ಕಟ್ಟು, ತೌಡು ಕುಟ್ಟು, ರೀಲ್ ಸುತ್ತು.. ಅನ್ನುವ ಪದಗಳು ಉಪಯೋಗಕ್ಕೆ ಬರುತ್ತೆ.

ಹಸಿ ಸುಳ್ಳು, ಶುದ್ಧ ಸುಳ್ಳು, ಅರ್ಧ ಸತ್ಯ, ಸುಳ್ಳಿನ ಕಂತೆ, ಸಬೂಬು ಇವೆಲ್ಲ ಸುಳ್ಳಿನ ಬಹುಮುಖಗಳು.

" ಉತ್ಪ್ರೇಕ್ಷೆ " .. ಇಲ್ಲದ್ದನ್ನು ಆರೋಪಿಸಿ ಹೇಳುವ ಮಾತುಗಳು ಸಹ ಸುಳ್ಳೇ.

" ಚಾಡಿ ಮಾತು " ಸುಳ್ಳಿನ ಇನ್ನೊಂದು ರೂಪ, ಅಲ್ಲಿಯೂ ಇಲ್ಲದ್ದನ್ನು ಹೇಳುವುದರಿಂದ.

ಸುಳ್ಳಿನ ಮೂಲಧಾರೆ ಮೆದುಳಿನಿಂದ ಪ್ರಾರಂಭವಾದರೂ, ಅದನ್ನು ಹೇಳುವುದು ನಾಲಿಗೆ.  "ಸುಳ್ಳು ಹೇಳಲಿ ಬೇಡ ನಾಲಿಗೆ..." ಎಂದು ಹೇಳಿದರೂ ನಾಲಿಗೆಗೆ ಚಪಲ..ಬುದ್ಧಿ  ಹೇಳಿದಂಗೆ ಮಾತಾಡ್ತಾ ಹೋಗುತ್ತೆ, ... ಪಾಪ ನಾಲಿಗೆ ಹೇಳಿದ ಸುಳ್ಳಿನ ಪರಿಣಾಮ ಎಷ್ಟೋ ಸಲ ಹಲ್ಲುಗಳ ಮೇಲೆ ಆಗುವುದು ಉಂಟು. ಸುಳ್ಳು ಹೇಳಿದ್ರೆ.. ಹಲ್ಲುದುರುಸ್ಬಿಡ್ತೀನಿ ಅನ್ನೋದು ಸಾಮಾನ್ಯ ಮಾತು.

"ನಿಜದ ತಲೆ ಮೇಲೆ ಹೊಡದಂಗೆ ಸುಳ್ಳು ಹೇಳ್ತಾನೆ" ಇದು ಸುಳ್ಳುಗಾರನನ್ನು ಹೊಗಳುವ ಪರಿ.

ನನಗೆ ಮದುವೆಯಾದ ಹೊಸತು.. 

ಅವತ್ಯಾಕೋ ಕಾಲು ತುಂಬಾ ನೋಯ್ತಿತ್ತು... ನನ್ ಹೆಂಡ್ತಿಗೆ ಹೇಳಿದ್ನಾ... ಅದೇ ತಪ್ಪಾಗೋಯ್ತು..ನನ್ನ ಹೆಂಡತಿಗೋ ವಿಪರೀತ ಕಾಳಜಿ... ಅಯೋಡೆಕ್ಸ್ ಡಬ್ಬಿ ತಂದು... ಹಚ್ಚಕ್ಕೆ ತಯಾರಾಗಿ ಬಿಟ್ಲು.. ಎಲ್ಲಿಂದ ಬಂತೋ ಸ್ಪೂರ್ತಿ.. ನನಗೆ ಗೊತ್ತಿಲ್ಲ.. ನೋಯ್ತಾ ಇದ್ದದ್ದು ಎಡಗಾಲು ಆದರೆ ಕೊಟ್ಟಿದ್ದು ಬಲಗಾಲು... ಪಾಪ ಮುಲಾಮು ಹಚ್ಚಿ ನೀವಿದ್ದೇ ನೀವಿದ್ದು... ನಂತರ ಸತ್ಯ ಹೇಳಿದಾಗ ನನ್ನ ಹೆಂಡತಿ ತೋರಿಸಿದ ಹುಸಿ ಕೋಪ ತುಂಬಾನೇ ಚೆನ್ನಾಗಿತ್ತು.  ಹುಸಿಕೋಪ ಮಾಡಿಕೊಂಡ ಹೆಣ್ಣಿನ ಮುಖ ಬಲು ಸುಂದರ ಎಂದು ಓದಿದ್ದೆ... ಅನುಭವವಾಯಿತು. ಸುಳ್ಳಿಗೆ ಸುಳ್ಳು ಕೋಪದಿಂದ  ಉತ್ತರ ಬಂದಿತ್ತು.

ಗಂಡ ಹೆಂಡತಿಯ ಮಧ್ಯೆ ಪಾರದರ್ಶಿಕತೆ ಇರಬೇಕು ಎಂಬುದು ಆಶಯವಾದರೂ... ನಿಜ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಇಬ್ಬರೂ ಪರಸ್ಪರ ಸುಳ್ಳುಗಳನ್ನು ಹೇಳೇ ಇರುತ್ತಾರೆ ಎಂದು ನನ್ನ ಆಪ್ತ ಸಮಾಲೋಚನೆಯ ಸಮಯದ ಅನುಭವ. ಇದಕ್ಕೆ ನಾನೂ ಹೊರತಲ್ಲ ಎಂಬುವುದು ಖಂಡಿತ ಸತ್ಯ.

ಈಗಿನ ಸಮಾಜದಲ್ಲಿ... ಯಾರನ್ನಾದರೂ ನೈತಿಕವಾಗಿ ಎದುರಿಸಿ ಗೆಲ್ಲಲಾಗದಿದ್ದರೆ.. ಅವರ ಮೇಲೆ ಸುಳ್ಳೆಂಬ ಕೆಸರನ್ನು ಎರಚಿದರೆ , ಅದನ್ನು ಸಂಪೂರ್ಣವಾಗಿ ತೊಳೆದು ಬರಬೇಕಾದರೆ ಸಾಕಷ್ಟು ಸಮಯ ಬೇಕು.. ಅಲ್ಲಿಯ ತನಕ ಸುಳ್ಳಿನದೇ ಮೇಲು ಕೈ... ಅನಾಹುತಗಳು ಆಗೇ ಹೋಗಿರುತ್ತವೆ.

ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು... ಈ ಹಾಡು ಎಷ್ಟು ಸೂಕ್ತವಾಗಿದೆ ಅಲ್ಲವೇ.

ಒಂದು ಸುಳ್ಳನ್ನು ಪದೇ ಪದೇ ಹೇಳಿದಾಗ... ಅದು ನಿಜವೋ ಎನ್ನುವಂತೆ ಪರಿವರ್ತಿತವಾಗುತ್ತದೆ  ಎಂದು ಮೊದಲು ತೋರಿಸಿಕೊಟ್ಟವನು ಗೊಬ್ಬೆಲ್ಸ್ ಎಂಬ ಹಿಟ್ಲರ್ ನ ಅಧಿಕಾರಿ. ಅದನ್ನು ಗೊಬೆಲ್ಸ್  ಟ್ರೂತ್ ಎಂದೇ ಕರೆಯುತ್ತಾರೆ.

ನ್ಯಾಯಾಲಯಗಳಲ್ಲಿ ಸುಳ್ಳು ಸಾಕ್ಷ ಹೇಳುವ ಒಂದು ತಂಡವೇ ಇರುತ್ತದೆ ಎಂದು ಕೇಳಿದ್ದೇನೆ. ಇವರು ಹಣಕ್ಕಾಗಿ ಸಾಕ್ಷ್ಯ ಹೇಳುವವರು... ಇದು ನಮ್ಮ    ನ್ಯಾಯಾಂಗ ವ್ಯವಸ್ಥೆಯ ಅಪಹಾಸ್ಯವೇ ಸರಿ.

ನಾವು ಹೇಳಿದ್ದು ಸತ್ಯ ಎಂದು ಪ್ರತಿಪಾದಿಸಲು " ಆಣೆ " ಮಾಡುವುದು ಒಂದು ರೂಡಿ. ಚಿಕ್ಕಂದಿನಲ್ಲಿ ನಾವುಗಳು ನನ್ನಾಣೆ, ನನ್ನ ಕಣ್ಣಾಣೆ, ಅಮ್ಮನಾಣೆ, ಅಪ್ಪನಾಣೆ, ನಿನ್ನಾಣೆ, ದೇವರಾಣೆ ಹೀಗೆ ಹೇಳುತ್ತಿದ್ದದ್ದು. ಆಣೆ ಇಟ್ಟು ಹೇಳಿದ್ದು ಸುಳ್ಳಾದರೆ... ಕಣ್ಣು ಹೋಗುತ್ತೆ, ಅಪ್ಪ ಅಮ್ಮ ಸಾಯ್ತಾರೆ... ನಿನ್ನಾಣೆ  ಅಂತ ಇಟ್ಟಾಗ ಆಗೋ ನಷ್ಟ, ನನಗಲ್ಲ ಅವರಿಗೆ. ಇನ್ನು ದೇವರಾಣೆ ಇಟ್ರೆ ದೇವರಿಗೆ ಏನೂ ಆಗಲ್ಲ... ದೇವರೇ ನೋಡ್ಕೋತಾನೇ, ನಮಗೆ ಶಿಕ್ಷೆ ಕೊಡ್ತಾನೆ ಅಷ್ಟೇ.

ಈಗಿನ ರಾಜಕಾರಣಿಗಳಿಗೆ ಧರ್ಮಸ್ಥಳದ ಮಂಜುನಾಥನ ಮುಂದೆ ಆಣೆ ಪ್ರಮಾಣ ಮಾಡುವ ಚಪಲ. ಕೆಲವು ಸಲ ಬೇರೊಬ್ಬರಿಗೆ ಮಂಜುನಾಥನ ಮುಂದೆ ಆಣೆ ಪ್ರಮಾಣ ಮಾಡಲು ಸವಾಲು ಹಾಕುವುದೂ ಉಂಟು.

" ನಾನು ಬರೆದಿರುವುದೆಲ್ಲಾ ಸತ್ಯ... ಸತ್ಯವಲ್ಲದೆ ಬೇರೆನನ್ನೂ ಬರೆದಿಲ್ಲ  " ಎಂದು ಆಣೆ ಮಾಡಿ ಹೇಳಿದ ಮೇಲೂ... ನಾನು ಹೇಳಿರೋದ್ರಲ್ಲಿ ಒಂದಿಷ್ಟಾದರೂ ಸುಳ್ಳಿದೆ ಅಂತ ನಿಮಗೆ ಅನ್ಸಿದ್ರೆ... ನಿಮ್ಮ ಅನಿಸಿಕೆ  ಸುಳ್ಳಾಗಲಿ ಎಂದು ಆಶಿಸುತ್ತಾ...

ನಮಸ್ಕಾರ.


D C Ranganatha Rao

9741128413




    

    

    

Comments

  1. Guru Prasanna K28 May 2025 at 11:02

    ಸುಳ್ಳು ನಮ್ಮ ಜೀವನದ ಅವಿಭಾಜ್ಯ ಅಂಗ. ಸುಳ್ಳು ಹೇಳೋಣ, ಆದರೆ ಅದರಿಂದ ಯಾವುದೇ ಅನಾಹುತ ತೊಂದರೆ ಆಗದಂತಿರಲಿ ಅಷ್ಟೇ. ಸತ್ಯ ಹೇಳಿ ಕಷ್ಟ ಅನುಭವಿಸಿದ ಹರಿಶ್ಚಂದ್ರನನ್ನು ನಮ್ಮ ಗುರಾಣಿಯನ್ನಾಗಿ ಇಟ್ಟುಕೊಳ್ಳೋಣ. 😅

    ಪಾಪ ಅಮಾಯಕ ಮಕ್ಕಳೆಂದು ಅವರ ಪೋಷಕರು ಅದೆಷ್ಟು ಸುಳ್ಳು ಹೇಳಿರುತ್ತಾರೋ.

    ವ್ಯಾಪಾರಸ್ಥರು, ರಾಜಕಾರಣಿಗಳಿಗೆ ಸುಳ್ಳೇ ಜೀವಾಳ ಅದು ಅವರ ಅಗತ್ಯತೆ ಕೂಡ. ಇರಲಿ.

    ಕೊನೆ ಹನಿ

    ಅಂದಹಾಗೆ ಕುಡುಕರ ಬಾಯಿಂದ ಎಂದೂ ಸುಳ್ಳೇ ಬರುವುದಿಲ್ಲವಂತೆ.!🤔

    ಗುರು ಪ್ರಸನ್ನ
    ಚಿಂತಾಮಣಿ

    ReplyDelete
  2. ಸತ್ಯ, ಸುಳ್ಳು, ಆಣೆ ದೇವರಾಣೆಗೂ ಒಂದು ಬಹಳ ಉತ್ತಮ ಬರಹ. ದೇವರಾಣೆಗೂ ನನಗೆ ಗೊತ್ತು, ನೀವು ಎಲ್ಲಾ ವಿಶಯದಲ್ಲಿ ಪ್ರಭುತದೆಯ ಅಂಕಣ ವನ್ನು ಬರೆಯುತೀರಿ. ಪ್ರತಿಯೊಬ್ಬರೂ ನಾನು ಯಾವಾಗಲು ಸತ್ಯವನ್ನು ಹೇಳುತೀನಿ ಅಂತ ಹೇಳುದರೂ ಕೆಲವೊಮ್ಮೆ ಪರಿಸ್ಥಿತಿಯಲ್ಲಿ ಅರವಿಲ್ಲದೆ ಸುಳ್ಳು ಹೇಳುತಾರೆ. ನಾನು ಸಹ ಹೊರತಲ್ಲ. ಪ್ರತಿ ವರುಶ ಪ್ರತಿಭಾ ಪುರಸ್ಕಾರದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಅಂಕ ದಲ್ಲಿ ಅವರ hm ರಿಕಮೆಂಡೇಶನ್ ಒಂದಿಗೆ ಕೆಲವು ಬಡ ಪೊಸಕರ ಮಕ್ಕಳಿಗೆ ಪುಟ್ಟ ಸುಳ್ಳನ್ನು ಹೇಳುತ್ತೆನೆ ಅದು ದೇವರ ಸನ್ನಿಧಿಯಲ್ಲಿ. ಬಹುಸಹ ಒಂದು ಒಳ್ಳೆಯ ಕೆಲಸಕ್ಕೆ ದೇವರು ಕ್ಷಮಿಸುತಾನೆ ಎಂಬ ಭರವಸೆ. ಧನ್ಯವಾದಗಳು ಸರ್ ಮಂಜುನಾಥ್

    ReplyDelete
  3. ಸುಳ್ಳಿನ ಬಗ್ಗೆ ತುಂಬಾ ರಸವತ್ತಾಗಿ ವರ್ಣಿಸಿದ್ದೀರಾ, ತುಂಬಾ ಇಷ್ಟ ಆಯ್ತು

    ReplyDelete
  4. ನಿಮಗೆ ಹಿಂದಿನ ವಿಷಯ ಮಾತ್ರ ಹಂಚಿಕೊಳ್ಳಲು ಇಷ್ಟ ಇರಬಹುದು, ಇಂದಿನ ವಿಷಯ ಸಹ ಹಂಚಿಕೊಳ್ಳಿ

    ReplyDelete
  5. Hosa vishayam, hosa baravanige👌

    ReplyDelete
  6. ಎಲ್ಲಾ ಆಯಾಮಗಳಲ್ಲೂ ವಿವರಿಸಿದ್ದೀರಾ ಸರ್..
    सत्यं ब्रूयात् प्रियं ब्रूयात् , न ब्रूयात् सत्यम् अप्रियम् , प्रियं च नानृतम् ब्रूयात् , एष धर्मः सनातन:

    ಸತ್ಯವನ್ನು ಹೇಳಬೇಕು. ಪ್ರಿಯವಾದುದನ್ನು ಹೇಳಬೇಕು. ಸತ್ಯವಾದರೂ ಅಪ್ರಿಯವಾದುದನ್ನು ಹೇಳಬಾರದು. ಪ್ರಿಯವಾದುದ್ದಾದರೂ ಸುಳ್ಳನ್ನು ಹೇಳಬಾರದು. ಇದೇ ಸನಾತನಧರ್ಮ.’ ಮನುಸ್ಮೃತಿ ಯ ಈ ಶ್ಲೋಕ ಎಲ್ಲಾ ಸಮಯದಲ್ಲೂ ಸರಿಹೊಂದುತ್ತದೆ

    ReplyDelete
  7. ಸುಳ್ಳನ್ನು ಇಷ್ಟು ಸೊಗಸಾಗಿ ವಿವರಿಸಬಹುದೆಂಬ ಸತ್ಯವನ್ನು ನಿಮ್ಮ ಸುಂದರವಾದ ಅರ್ಥಗರ್ಭಿತ ಲೇಖನ ದ ಮೂಲಕ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು
    ಅತ್ತಿಗನಾಳ್ ಆನಂದ್

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ