ಅಪಘಾತ- ಸಾವು- ನೋವು
ಬೀchi ಯವರ ಮಾತುಗಳು.. ಅವರದೇ ಪದಗಳಲ್ಲಿ ಅಲ್ಲವಾದರೂ ಭಾವ ಮಾತ್ರ ಬರೆಯುತ್ತೇನೆ...
ಬೆಳಿಗ್ಗೆ ಪತ್ರಿಕೆ ಓದುವಾಗ ತಲೆಬರಹ ದಲ್ಲಿ ಇದ್ದದ್ದು... ಚೀನಾದಲ್ಲಿ ಭಾರಿ ಭೂಕಂಪ... ಅಪಾರ ಮಂದಿಯ ಸಾವು.. ತ್ಚ್..ತ್ಚ್..ತ್ಚು.... ಎಂದು ಮುಂದಿನ ಸುದ್ದಿಗೆ ಹೋಗುತ್ತೇವೆ.. ಅದೇ ಭೂಕಂಪ ಭಾರತದ ಉತ್ತರದಲ್ಲಿ ಆದರೆ... ನಮ್ಮ ಬಾಯಿಂದ 'ಅಯ್ಯೋ ಪಾಪ.. ಎಷ್ಟು ಕಷ್ಟ ಆಗಿರುತ್ತೋ' ಅನ್ನುವ ಮಾತು ಬರಬಹುದು. ಅದೇ ಒಂದು ಅಪಘಾತ ನಮ್ಮ ರಾಜ್ಯದಲ್ಲಾದರೆ... ನಮ್ಮೂರಿನವರು/ ನಮ್ಮ ಹತ್ತಿರದವರು ಯಾರಾದರೂ ಇದ್ದಾರಾ ಎಂದು ಹುಡುಕುತ್ತೇವೆ, ಅವರಿಗೆ ಫೋನ್ ಮಾಡಿ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತೇವೆ. ಅಕ್ಕ ಪಕ್ಕದ ಮನೆಯವರಿಗೆ ಈ ತರಹ ಕಷ್ಟ ಬಂದಾಗ ಅವರಲ್ಲಿ ಹೋಗಿ, ಸಮಾಧಾನ ಮಾಡಿ, ಕೈಲಾದ ಸಹಾಯ ಮಾಡುತ್ತೇವೆ... ಈ ಎಲ್ಲ ಹಂತದಲ್ಲಿ ನಮಗಾಗುವ ನೋವು /ದುಃಖ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯೇ. ಅದೇ ಆ ಕೆಟ್ಟ ಘಟನೆ ನಮ್ಮ ಮನೆಯಲ್ಲಿ ನಡೆದರೆ ಆಗುವ ನೋವು,ದುಃಖ, ಅನುಭವಿಸಬೇಕಾದ ಸಂದಿಂಗ್ಧ, ಮತ್ತು ತುಮುಲ ಹೇಳತೀರದು.
ಈ ಮಾತಿನ ಸತ್ಯ ಅರಿವಾದದ್ದು 25-12-2024 ರ ಸಂಜೆ. ನನ್ನಣ್ಣನ ಮಗ ರವಿ ಕಲ್ಬುರ್ಗಿಯಿಂದ ಫೋನ್ ಮಾಡಿ ತಿಳಿಸಿದ ಸುದ್ದಿ. ....ಒಂದು ಅಪಘಾತದಲ್ಲಿ ಆದ ಅವನ ಹೆಂಡತಿ ವಿನುತಳ ಸಾವು. ಸುದ್ದಿಯನ್ನು ಅರಗಿಸಿಕೊಳ್ಳಲು ಕೆಲ ನಿಮಿಷಗಳೇ ಬೇಕಾಯಿತು. ಮೈಸೂರಿನ ವಿನುತಾ... ದೂರದ ಘಾಣಗಾಪುರದ ದೇವರ ದರ್ಶನ ಮಾಡಿಕೊಂಡು ಗುಲ್ಬರ್ಗಕ್ಕೆ ಹಿಂತಿರುಗುವ ಹಾದಿಯಲ್ಲಿ ಅಪಘಾತದಿಂದ ಸತ್ತದ್ದು.. ವಿಧಿ ಬರೆದ ಬರಹವೇ? " ವಿಧಿ ಬರೆದ ಬರಹವ ತಪ್ಪಿಸಲು ಹರಿಹರ ವಿರಿಂಚಾದ್ಯರಿಗೆ ಸಾಧ್ಯವೇ? ನಮ್ಮ ಪಾಡೇನು" ಎಂಬ ನಳ ಚರಿತ್ರೆಯ ಸಾಲುಗಳು ನೆನಪಿಗೆ ಬಂದವು.
ಈ ವಯಸ್ಸಿಗೆ ಸಾವು ಬರಬಾರದಿತ್ತು , ಅಕಾಲ ಮರಣ ಎಂದು ಹಲುಬಿದವರು.. ಈ ಸುದ್ದಿಯನ್ನು ಕೇಳಿದ ಬಹಳಷ್ಟು ಮಂದಿ.
ಆದರೆ ಕಾಲನಿಗೆ ಎಲ್ಲವೂ ಸಕಾಲವೇ.. ಅಕಾಲ ಎಂಬುದು ಪ್ರಾಯಶಃ ಅವನ ನಿಘಂಟಿನಲ್ಲೇ ಇಲ್ಲವೇನೋ...
ಗರ್ಭದಲ್ಲಿ ಜೀವ ತಳೆಯುತ್ತಿರುವ ಭ್ರೂಣದಿಂದ ಹಿಡಿದು... ಶತಕ ಮುಟ್ಟಿ... ಅದನ್ನು ದಾಟಿರುವವರಿಂದೊಡಗೊಂಡು ಎಲ್ಲರಿಗೂ ಯಾವ ಹಂತದಲ್ಲಿ ಬೇಕಾದರೂ ಸಾವು ಬರಬಹುದು. ಇದೇ ಜೀವನ ಸತ್ಯ.
ಒಂದು ಜಾನಪದ ಗೀತೆ ನೆನಪಿಗೆ ಬರುತ್ತಿದೆ.. ಜನ ಪದರ ಮಾತುಗಳು ಅನುಭವದ ಮೂಸೆಯಿಂದ ಬಂದವು... ಕಟು ಸತ್ಯ..
ಜವರಾಯ ಬಂದಾರೆ, ಬರೀ ಕೈಲಿ ಬರಲಿಲ್ಲಾ...
ಕುಡುಗೋಲು ಕೊಡಲ್ಯೊಂದು ಹೆಗಲೇರಿ..
ಒಳ್ಳೊಳ್ಳೆ ಮರನಾ ಕಡಿ ಬಂದ,
ಫಲ ಬಿಟ್ಟ ಮರನಾ ಕಡಿ ಬಂದ.
ಅಂತಹ ಒಂದು ಒಳ್ಳೆಯ ಮರವೇ ವಿನುತ. ವಿನುತಾ ವಾರಿಗೆಯಲ್ಲಿ ಸೊಸೆಯಾದರೂ... ಸಾಮಾನ್ಯವಾಗಿ, ಲೋಕಾ ರೂಢಿಯಾಗಿ ಇರಬೇಕಾದ ಅಂತರ ಇರಲಿಲ್ಲ. ( ನಮ್ಮ ಕುಟುಂಬದ ಎಲ್ಲಾ ಸೊಸೆಯರು ಹೀಗೆ ಇದ್ದಾರೆ ಎಂಬುದೇ ಸಂತಸದ ವಿಷಯ)
ಎಲ್ಲರೂ ಕೂತು ಹರಟುವಾಗ.. ತಮಾಷೆಯಾದ ಮಾತುಗಳು, ಕಾಲೆಳೆಯುವ ಪ್ರಸಂಗಗಳು ಸಾಮಾನ್ಯ.
ಸಾಕಷ್ಟು ಜವಾಬ್ದಾರಿಗಳನ್ನು ತನ್ನ ತಲೆಯ ಮೇಲೆ ಹೊತ್ತು.... ಕ್ಲಿಷ್ಟಕರ ಸಮಯದಲ್ಲಿ... ನಿಭಾಯಿಸಿ, ಸರಿ ದೂಗಿಸಿದ ಗೃಹಿಣಿ. ಉತ್ಸಾಹದ ಬುಗ್ಗೆ. ಈಚೆಗಷ್ಟೇ ಮಗಳ ಮದುವೆಯನ್ನು ಮಾಡಿದ್ದ... ಇನ್ನೂ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದ್ದ ಜೀವ ಈಗಿಲ್ಲ. ರವಿಯ ಜೀವನವನ್ನು ಆವರಿಸಿದ್ದ ವಿನುತಾ.. ಅವನನ್ನು ಒಂಟಿಯಾಗಿಸಿ ಹೋದಳು ಎನ್ನುವ ಭಾವ ಗಟ್ಟಿಯಾದದ್ದು... ಅವನು ಆಡಿದ ಕೆಲವು ಮಾತುಗಳಿಂದ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ.. ಜನವರಿ ಮೊದಲ ವಾರದಲ್ಲಿ, ಕೆಲ ದಿನಗಳು ನಾವೆಲ್ಲ ಅವರ ಮನೆಯಲ್ಲಿ ಸಂತೋಷವಾಗಿ ಕಾಲ ಕಳೆಯುವ ಯೋಜನೆಯಿತ್ತು... ದೈವೆಚ್ಚೆ... ಆ ಸಮಯದಲ್ಲಿ ನಾವೆಲ್ಲ ಅವರ ಮನೆಯಲ್ಲೇ ಇದ್ದೆವು... ವಿನುತಾ ಇರಲಿಲ್ಲ... ಸಂತೋಷವೂ ಇರಲಿಲ್ಲ.
ತಾನೊಂದು ಬಗೆದರೆ ದೈವ ಒಂದು ಬಗೆಯಿತು ಎನ್ನುವ ಮಾತು ಎಷ್ಟು ಸತ್ಯ ಅಲ್ಲವೇ?.
ಏನಾದರೂ ಜೀವನ ಮುಂದುವರಿಯಲೇ ಬೇಕಲ್ಲವೇ...
ಶವ ಇರುವವರೆಗೂ ಮನೆಯಲ್ಲಿ ಇರುವ ದುಃಖದ ವಾತಾವರಣ, ಶವವು ಮನೆಯನ್ನು ಬಿಟ್ಟ ನಂತರ, ತಲೆಗೆ ಸ್ನಾನ ಮಾಡಿದ ಮೇಲೆ... ಒಂದಷ್ಟು ಲವಲವಿಕೆ ಬರುವುದನ್ನು ಗಮನಿಸಿದ್ದೇನೆ... ನಂತರ ದಿನಗಳಲ್ಲಿ ಕರ್ಮಾಂತರ ಕಾರ್ಯಕ್ರಮಗಳು.... ಆ ದಿಕ್ಕಿನಲ್ಲಿ ತಮ್ಮ ಬಂಧು ಬಾಂಧವರಿಗೆ ಆಪ್ತರಿಗೆ ತಿಳಿಸುವ ಕಾರ್ಯದಲ್ಲಿ ನಿರತವಾಗುವುದರಿಂದ ಇನ್ನಷ್ಟು ನೋವು ಕಡಿಮೆಯಾಗುತ್ತದೆ... ಶ್ರಾದ್ಧದ
ಪುಷ್ಕಳ ಭೋಜನವೂ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತವೆ. ತುಂಬ ಹತ್ತಿರದವರಿಗೆ.. ನೋವು/ ದುಃಖ ಇದ್ದರೂ... ಜೀವನ ಪ್ರವಾಹದಲ್ಲಿ ಈಜಲೇಬೇಕಾದ ಅನಿವಾರ್ಯ ಇರುತ್ತದೆ... ಹಾಗೆ ಕಾಲ ಎಲ್ಲವನ್ನು ಸರಿ ಮಾಡುತ್ತದೆ ಎನ್ನುವುದು ಸಹ ಅಷ್ಟೇ ಸತ್ಯ.
ಯಾವಾಗ ಎಲ್ಲಿ, ಏನು, ಹೇಗೆ, ಎಷ್ಟು ಆಗಬೇಕು ಎನ್ನುವುದು ಪೂರ್ವ ನಿರ್ಧಾರ ವಾಗಿರುತ್ತದೆ ಎನ್ನುವುದು.... ನಂಬಲೇ ಬೇಕಾದ ಸಂಗತಿ...
ನಾ ಕೇಳಿದ / ಓದಿದ ಒಂದು ಸಣ್ಣ ಕಥೆ ಇಲ್ಲಿ ಪ್ರಸ್ತುತ ಎನಿಸುತ್ತದೆ.
ಯಮ ಒಂದು ಬಾರಿ ವಿಷ್ಣುವನ್ನು ನೋಡಲು ವೈಕುಂಠಕ್ಕೆ ಬಂದಾಗ... ಬಾಗಿಲ ಮೇಲೆ ಕುಳಿತಿದ್ದ ಒಂದು ಪಕ್ಷಿಯನ್ನು ಕಂಡನಂತೆ. ಅವನ ದೃಷ್ಟಿ ಕ್ಷಣಕಾಲ ಆ ಪಕ್ಷಿಯ ಮೇಲೆ ಇದ್ದು.. "ಈ ಪಕ್ಷಿ ಇನ್ನು ಸ್ವಲ್ಪ ಸಮಯದಲ್ಲಿ ದೂರದ ಒಂದು ಮರದ ಕೊಂಬೆಯ ಮೇಲೆ ಸಾವನ್ನಪ್ಪ ಬೇಕು ಎಂಬುದು ವಿಧಿ... ಆದರೆ ಹಲೋ ಇದೇಕೆ ಇಲ್ಲಿದೆ ಎಂದು ಯೋಚಿಸಿ ಒಳಗೆ ಹೋದನಂತೆ ಅಲ್ಲೇ ಇದ್ದ ವಿಷ್ಣುವಿನ ವಾಹನ ಗರುಡ ಈ ದೃಶ್ಯವನ್ನು ಗಮನಿಸಿದ.... ಯಮನ ದೃಷ್ಟಿ ಪಕ್ಷಿಯ ಮೇಲೆ ಬಿದ್ದಿದೆ ಇದನ್ನು ಕಾಪಾಡಬೇಕು ಎಂದು ತಕ್ಷಣವೇ ಆ ಪಕ್ಷಿಯನ್ನು ಎತ್ತಿಕೊಂಡು ಹೋಗಿ ದೂರದ ಮರದ ಮೇಲೆ ಇಟ್ಟು ಬಂದನಂತೆ. ಹೊರಕ್ಕೆ ಬಂದ ಯಮ ಪಕ್ಷಿ ಇದ್ದ ಜಾಗವನ್ನು ಗಮನಿಸಿ.. ಅದು ಇಲ್ಲದ್ದನ್ನು ಕಂಡು ಮುಸಿನಕ್ಕು ಮುಂದೆ ಹೋದನಂತೆ... ನಂತರ ಗರುಡನಿಗೆ ಗೊತ್ತಾಗುವುದು ಆ ಪಕ್ಷಿಯು ಸತ್ತಿದೆ ಎಂದು. ಸಹಾಯ ಮಾಡಲು ಮನಸ್ಸು ಬಂದು... ಮಾಡಿದರೂ ಸಹ.. ಪಕ್ಷಿಯನ್ನು ದೂಡಿದ್ದು ಅದರ ಸಾವಿನ ಸ್ಥಳಕ್ಕೆ. ವಿಧಿ ಹೇಗಾದರೂ ಮಾಡಿ ಆ ಸಮಯಕ್ಕೆ ಅಲ್ಲಿರುವಂತೆ ಮಾಡುತ್ತದೆ ಎನ್ನುವುದು ಒಂದು ಸತ್ಯವಲ್ಲವೇ.
ಒಂದು ದಿನ ಮುಂಚೆ ವಾಪಸ್ ಬರಲು ರಿಸರ್ವೇಶನ್ ಸಿಗದ ಕಾರಣ ಅಲ್ಲೇ ಉಳಿಯ ಬೇಕಾಯಿತು... ಉಳಿದ ಕಾರಣದಿಂದ ಅನಿವಾರ್ಯವಾಗಿ ಎಲ್ಲರ ಜೊತೆ ಹೋಗ ಬೇಕಾಯಿತು... ಪರಿಣಾಮವಾಗಿ ಜೀವ ತೆರಬೇಕಾಯಿತು. ವಿಧಿ.
ಅಪಘಾತದ ನಂತರದಲ್ಲಿ ಕಾಣಬರುವ ರಕ್ತ, ವಿರೂಪಗೊಂಡ / ಛಿದ್ರಗೊಂಡ ದೇಹಗಳನ್ನು ನೋಡುವುದು ಒಂದು ಭೀಕರ ದೃಶ್ಯ... ಅದರಲ್ಲೂ ನಮಗೆ ಬೇಕಾದವರನ್ನು ನೋಡುವುದು ಹಿಂಸೆಯೂ ಸಹ. ಈ ಸಾವು ನೋವುಗಳ ಮಧ್ಯೆ ಎದುರಿಸಬೇಕಾದದ್ದು ಮತ್ತೊಂದು ಕಾನೂನಿನ ಸಂಕಷ್ಟ. ಅದು post mortem ... ಶವ ಪರೀಕ್ಷೆಯ ರೂಪದಲ್ಲಿ, ದೇಹವನ್ನು ಮತ್ತಷ್ಟು ಕೊಯ್ದು ಪರೀಕ್ಷೆ ಮಾಡುವ ವಿಧಾನ.
ಅಸಹಜ / ಅನುಮಾನಾಸ್ಪದ ಸಾವುಗಳಿಗೆ ಶವ ಪರೀಕ್ಷೆ ಕಡ್ಡಾಯ. ಇದು ಕಾನೂನು. Law is an ass ಎನ್ನುವ ಹೇಳಿಕೆ ಇದೆ. ಕತ್ತೆಗೆ ಹಾಕಿದ ಭಾರವನ್ನು ಹೊತ್ತು ನಡೆಯುವುದು ಅಷ್ಟೇ ಗೊತ್ತು... ಏನಿದೆ ಎಂದು ತಿಳಿಯುವ ವ್ಯವಧಾನವಿಲ್ಲ, ವಿವೇಚನೆಯೂ ಇಲ್ಲ. ಅದರಂತೆ ನಮ್ಮ ಕಾನೂನು ಪಾಲಕರು ಸಹ ಅಪಘಾತದ ಸಂದರ್ಭದಲ್ಲಿ ಸಾವು ಅಸಹಜವೇನೋ ಸರಿ... ಆದರೆ ಅದರ ಹಿಂದೆ ಕೊಲೆಯ ಕುತಂತ್ರ ಇದೆ ಎಂದು... ಎಲ್ಲ ಸಲವು ಯೋಚಿಸುವುದು ಎಷ್ಟು ಸರಿ? ದುರಂತ ಅಂದರೆ ನಮ್ಮ ವ್ಯವಸ್ಥೆಯಲ್ಲಿ ಎಲ್ಲವನ್ನು... ಎಲ್ಲರನ್ನೂ ಅನುಮಾನದಿಂದ ನೋಡುವ ಪ್ರವೃತ್ತಿ ಹೆಚ್ಚಿದೆ. ಹಾಗಾಗಿ ಅಧಿಕಾರಿಗಳು ಏನೇ ನಿರ್ಧಾರ ಮಾಡುವಾಗಲು... ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಾರೆ... ತಮ್ಮನ್ನು ಕಾಪಾಡಿಕೊಳ್ಳಲು ಅಥವಾ ಅದರಿಂದ ಒಂದಷ್ಟು ಲಾಭ ಮಾಡಿಕೊಳ್ಳಲು. ಕಾನೂನು ಮಾಡುವಾಗ ಎಲ್ಲಾ ದೃಷ್ಟಿಕೋನದಿಂದಲೂ ಅಪರಾಧಿಯನ್ನು ಕಟ್ಟಿಹಾಕಲು ಬೇಕಾದ ಮಾರ್ಗಗಳನ್ನು ತೆರೆದಿಡಲಾಗುತ್ತದೆ ಎಂಬುದು ನಿಜವಾದರೂ.. ವಾಸ್ತವವಾಗಿ ಅದು ಸಾಮಾನ್ಯ ಜನರನ್ನು ಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಬಹುಜನರ ಅಭಿಪ್ರಾಯ.
ಕಾನೂನು ಉಲ್ಲಂಘಿಸಿ ಅದನ್ನು ಸುಲಭವಾಗಿ ಜೀರ್ಣಿಸಿಕೊಳ್ಳುವ ರಾಜಕೀಯ ಅಥವಾ ಹಣದ ಬಲ ಇರುವವರು ಎಲ್ಲದರಿಂದಲೂ ಪಾರಾಗುತ್ತಾರೆ... ಆದರೆ ಕಾನೂನನ್ನು ನಿಯತ್ತಾಗಿ ಪಾಲಿಸುವ ಅಮಾಯಕರು ಕಷ್ಟಕ್ಕೊಳಗಾಗುತ್ತಾರೆ. ಇದು ಅನಿವಾರ್ಯವೇ? ಎನ್ನುವ ಪ್ರಶ್ನೆ ಬಹಳ ಸಲ ಕಾಡಿದ್ದಿದೆ.. ಆದರೆ ಅದಕ್ಕೆ ಸೂಕ್ತ ಉತ್ತರ/ ಪರಿಹಾರ ಕಾಣದ ಅಸಹಾಯಕತೆ ನನ್ನದು.
ಇಂದಿನ ಸಾಮಾಜಿಕ ಪರಿಸ್ಥಿತಿ... ಬಹುಜನರ ಮನಸ್ಥಿತಿ... ಕಾನೂನು ಉಲ್ಲಂಘಿಸುವುದರಲ್ಲೇ ಸಂಭ್ರಮಿಸುವುದು. ಅದರಲ್ಲೂ ಯುವಜನತೆ ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಅದನ್ನು ಸಂಭ್ರಮ ಪಡುವುದರಲ್ಲಿ ಸಿದ್ಧ ಹಸ್ತರು. ಈ ಮನಸ್ಥಿತಿ ಬದಲಾಗಬೇಕಾಗಿರುವುದು ಅವಶ್ಯವಾದರೂ... ಬದಲಾವಣೆ ತರುವ ಹರಿಕಾರರು ಬೇಕು... ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬುದೇ ಯಕ್ಷಪ್ರಶ್ನೆ.
ಅಪಘಾತ ಎನ್ನುವುದೇ ಒಂದು ಆಕಸ್ಮಿಕ... ಆದರೆ ಒಂದಷ್ಟು ಮುನ್ನೆಚ್ಚರಿಕೆ ಹಾಗೂ ಸಹನೆ... ಅಪಘಾತವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಅಂತ ಮನೋಭಾವ ಎಲ್ಲರಲ್ಲೂ ಬೆಳೆಯಲಿ ಎಂದು ಆಶಿಸುತ್ತಾ....
ನಮಸ್ಕಾರ
D C Ranganatha Rao
9741128413
Truth is hard to digest. If we know the date of of death what would be the status . And sudden deaths r better than one suffering and dying . But accidents r definitely hard to accept
ReplyDeleteಸಾಮಾನ್ಯವಾಗಿ ಅಪಘಾತ ಯಾರದೋ ತಪ್ಪು ಅಥವ ಅವಘಡ (break fail ,short circuit etc) ಸಾವಿಗೆ ಅಥವ ಗಾಯವಾಗಿ
ReplyDeleteತೊಂದರೆ ಪಡೆವವರು ಅಮಾಯಕರು
ಇತ್ತಿಚಿನ volvo car accident, ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ನಿಂದ ಅಯ್ಯಪ್ಪ ಭಕ್ತರ ಮರಣ...ತಿರುಪತಿ ಸಾಲಿನಲ್ಲಿ ಪ್ರಾಣ ಕಳೆದುಕೊಂಡವರು ....ಹೀಗೆ ಅನೇಕ ಸಂದರ್ಭಗಳಲ್ಲಿ ಶಿಕ್ಷೆ ಅನುಭವಿಸುವವರು
ತಪ್ಪಿತಸ್ಥ ಅಲ್ಲದವರು...ದೈವ ಭಕ್ತರು ಆಗಿರು
ತ್ತಾರೆ....ಕಾಪಾಡಬೇಕಾದ ದೈವ ಯಾಕೆ ಕೊಲ್ಲುತ್ತಾನೋ ಎಂಬುದು ಯಕ್ಷ ಪ್ರಶ್ನೆ
ವಿನುತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ...
ಕೋಟ್ಯಾಂತರ ಭಕ್ತರು ಸೇರುವ ಮಹಾ ಕುಂಭಮೇಳ ಯಾವುದೇ ದುರ್ಘಟನೆ ಇಲ್ಲದೆ
ಸುಸೂತ್ರವಾಗಿ ನಡೆಯಲಿ ಎಂಬ ಆಶಯ ದೊಂದಿಗೆ....
ಧನ್ಯವಾದಗಳು
ಬಾಬು
ಲೇಖನವನ್ನು ನಿರೀಕ್ಷಿಸಿದ್ದೆ, ಆದರೆ ಇಷ್ಟು ಬೇಗ ಎಂಬ ಎಣಿಕೆ ಇರಲಿಲ್ಲ, ಅಂತೆಯೇ ಕಾಲನ ಓಟದಲ್ಲಿ ನಾವೆಲ್ಲರೂ ಭಾಗಿಗಳು, ಮನುಷ್ಯ ಸಹಜ ಮರೆವು ಇಂತಹ ನೋವನ್ನು ಸಹ ಮರೆಸುತ್ತದೆ ಅಥವಾ ಬಹಳ ಹತ್ತಿರದವರಿಗೆ ಮರೆತಂತೆ ಪಕ್ಕಕ್ಕೆಸರಿಸುತ್ತದೆ,ಮುಂದಿನ ದಿನಗಳ ಪ್ರಯಾಣವನ್ನು ಎಲ್ಲರೂ ಮಾಡಲೇಬೇಕಲ್ಲ, ಆದರೂ ವಿನುತಾಳ ಅನುಪಸ್ಥಿತಿ ನಾವಿರುವವರೆಗೂ ಖಾಯಂ, ಕಾಲನ ಓಟಕ್ಕೆ ನಾವು ಕೂಡ ಒಂದಲ್ಲ ಒಂದು ದಿನ ತಲೆಬಾಗಲೇಬೇಕು, ನಮ್ಮ ಸರದಿಗಾಗಿ ಕಾಯುವುದು ಹುಟ್ಟಿನ ಮರುಕ್ಷಣದಲ್ಲೇ ಪ್ರಾರಂಭ, ಅದನ್ನು ಕೂಡ ಪಕ್ಕಕ್ಕೆ ಸರಿಸಿದವರಂತೆ ನಡೆಯುವುದು ನಮ್ಮ ಪೊಳ್ಳು ನಂಬಿಕೆಯಷ್ಟೇ- ಅನುರಾಧ
ReplyDeleteಕುಡುಗೋಲಿನ್ ಜೊತೆಬರುವ ಜವರಾಯ ನಿಗೆ ಕರುಣೆಯ
ReplyDeleteJanma's after janma's we are all in the race to attain ultimate peace, let the almighty give strength to her family.
ReplyDeleteಡಿವಿಜಿಯವರ ಬದುಕುಜಟಕಾ ಬಂಡಿ ವಿಧಿ ಅದರ ಸಾಹೇಬಾ........ಎಂಬುದು ಇಂತಹ ಘಟನೆಗಳೇ ಸಾಕ್ಷಿ.
ReplyDeleteHi sir, The main reason for this article is due to death of Sri.Ravis wife. Got this sad information from Harish. Felt sad for unreasonable death. Pray God to give strength to Ravi to overcome the situation. I remember I had come to Mysore for Chandrashekar ias ceremony. OM SHANTI to soul of Ravis wife. 🙏🙏🙏🙏
ReplyDeleteದಿನಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸಾವು ನೋವಿನ ಸುದ್ದಿ ನೋಡಿದ ಕ್ಷಣ ಒಮ್ಮೆ ಬೇಸರಗೊಂಡು ನಿಟ್ಟುಸಿರು ಬಿಟ್ಟು ಸುಮ್ಮನಾಗುವುದು ಸಹಜ. ಆದರೆ ಆ ಸಾವು ನೋವಿಗೆ ಈಡಾದವರು ನಮ್ಮ ಆತ್ಮೀಯರು, ಬಂಧುಗಳು, ಕುಟುಂಬದವರು ಆಗಿದ್ದರೆ ಅದರ ಪರಿಣಾಮವೇ ಬೇರೆ ರೀತಿ ಇರುತ್ತದೆ.
ReplyDeleteಸಹಿಸಲು ಬಹಳ ಕಷ್ಟ
ಆಕಸ್ಮಿಕವಾಗಿ ಅಪಘಾತಕ್ಕೆ ಈಡಾದವರು ಒಂದು ರೀತಿಯಾದರೆ, ಸ್ವಯಂ ದುಡುಕಿನಿಂದ, ಅಜಾಗರೂಕತೆಯಿಂದ ಸಾವನ್ನಪ್ಪುವವರು ಕೆಲವರು. ಎರಡು ನೋವಿನ ಸಂಗತಿಗಳೇ.
ಕಗ್ಗವೇ ಹೇಳಿದ ಹಾಗೆ ವಿಧಿಯ ಲೆಕ್ಕಣಿಕೆ ನಮ್ಮ ಕೈಯಲ್ಲಿ ಇಲ್ಲ. ಅಸಹಜ ಸಾವು ನೋವುಗಳಾದಾಗ ಕಾನೂನು, ಪೋಲಿಸ್ ವ್ಯವಸ್ಥೆ ಅದರ ನಿಯಮಗಳನ್ನು ಪಾಲಿಸುವುದು ಸರಿಯೇ. ಏಕೆಂದರೆ ಈಗಿನ ಕಾಲದಲ್ಲಿ ಯಾವುದನ್ನು ಸುಲಭವಾಗಿ ಸ್ವೀಕರಿಸಲಾಗುವುದಿಲ್ಲ.
ನಾವು ವ್ಯವಸ್ಥೆಯ ಒಂದು ಭಾಗವಾಗಿರುವುದರಿಂದ ಹೊಂದಿಕೊಂಡು ಹೋಗಲೇಬೇಕು.
ಜಾತಸ್ಯಂ ಮರಣಂ ಧ್ರುವಂ. 😢
ವಂದನೆಗಳು
ಗುರು ಪ್ರಸನ್ನ,
ಚಿಂತಾಮಣಿ.
ಜನನ ಮರಣದ ಮಧ್ಯೆ ನಾವು ಬದುಕುತ್ತಿರುತ್ತೆವೆ. ನಮಗೂ ಸಾವು ಕಟ್ಟಿಟ್ಟ ಬುತ್ತಿ. ಯಾವಾಗ ಎಲ್ಲಿ ಯಾವ ಪರಿಸ್ಥಿತಿಯಲ್ಲಿ ಸಾವು ಬರುವುದೋ ಗೊತ್ತಿಲ್ಲದಿದ್ದರೂ ಆ ಸಂದರ್ಭ ಖಚಿತ ಎಂಬುದು ಎಲ್ಲರಿಗೂ ಗೊತ್ತು. ಆದರೂ ಸಂಬಂಥಗಳ ಸರಪಣಿ ಬಿಡಿಸಲಾಗದ ಅನುಬಂಧ. ಹೋದವರಿಗೆ ಅರಿಯದಿದ್ದರೂ ಇದ್ದವರು ಜೀರ್ಣಿಸಿಕೊಳ್ಳಲು ಕಷ್ಟವಾಗುವುದು. ನಿಮ್ಮ ಲೇಖನ ಓದಿ ಕಣ್ಣು ತೇವವಾಯ್ತು. ಭಗವಂತನು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲೆಂದು ಹಾರೈಸುತ್ತೇನೆ
ReplyDeleteರತ್ನಪ್ರಭಾ
ಹತ್ತಿರದವರನ್ನು. ಯಾವರೀತಿಲಿ ಕಳೆದುಕೊಂಡರು ಆ ನೋವು ನಾವು ಇರುವವರೆಗೂ ಇರುತ್ತದೆ. .
ReplyDeleteSo sad to hear this tragedy.Pray the almighty to give sufficient strength and courage at this hour of crisis.
ReplyDelete