ಅಜ್ಜಿ ತಾತ - ಪ್ರೀತಿಯ ಸ್ರೋತ
" ತಾತ.. ಬೆಳಿಗ್ಗೆ ಸ್ಕೂಲ್ಗೆ ಬಿಡಕ್ಕೆ ಬಸ್ ಹತ್ರ ಬರ್ತೀಯ ತಾನೆ? " ಇದು ನನ್ನ ಮೊಮ್ಮಗಳು ಮೊನ್ನೆ ಕೇಳಿದ ಮಾತು. ನಮ್ಮ ಮನೆಯಲ್ಲಿದ್ದಾಗ ಅವಳನ್ನು ಬಸ್ಸಿಗೆ ಹತ್ತಿಸಲು ನಾನು ಹೋಗುವುದು ಒಂದು ಅಭ್ಯಾಸ.
ಮೂರ್ನಾಲ್ಕು ದಿನದಿಂದ ಮಗಳು ಮತ್ತು ಮೊಮ್ಮಗಳು ನಮ್ಮ ಮನೆಯಲ್ಲಿದ್ದಾರೆ. ಅವಳಿಗೆ ಪರೀಕ್ಷೆ ಶುರು.. ಅದಕ್ಕೆ ಅವರಮ್ಮನ ಜೊತೆಗೆ
ನಾವು ಅಜ್ಜಿ ತಾತ ಅವಳಿಗೆ ಪಾಠ ಹೇಳಿಕೊಡುವ ಹುಮ್ಮಸ್ಸು. ಮೊಮ್ಮಗಳ ಜೊತೆ ಕಾಲ ಕಳೆಯುವ ಒಂದೊಂದು ಕ್ಷಣವು... ಒಂದೊಂದು ಸ್ವರ್ಗದ ಮೆಟ್ಟಿಲು.
19.04.2018 ರ ದಿನ ನಮ್ಮ ಜೀವನದ ಒಂದು ವಿಶೇಷ ಮೈಲಿಗಲ್ಲು... ಅಂದು ನಮ್ಮ ಜೀವನಕ್ಕೆ ಮೊಮ್ಮಗಳು ವಿಸ್ಮಯನ ಆಗಮನ, ಹಾಗಾಗಿ ನಮಗೆ ಅಜ್ಜಿ ತಾತ ಆಗಿ ಬಡ್ತಿ ಸಿಕ್ಕಿದ ದಿನ. ಕೆಲವೇ ಕ್ಷಣಗಳ ಹಿಂದೆ ಇದ್ದ ಒಂದು ಸಣ್ಣ ಆತಂಕ ಕಳೆದು ಸಂತೋಷ ಚಿಮ್ಮಿದ ದಿನ. ಸುಮಾರು ಏಳು ದಿನಗಳ ಕಾಲ ಸತತವಾಗಿ ಆಸ್ಪತ್ರೆಯಲ್ಲಿ ಜೊತೆಯಲ್ಲಿದ್ದು, ಮಗಳು ಮೊಮ್ಮಗಳನ್ನು ನೋಡಿಕೊಂಡ ಸಮಯ ಮಿಶ್ರಭಾವದೊಂದಿಗೆ ಇತ್ತು.
ತಾತನಾಗಿ ಮಗುವಿನ ಎಲ್ಲಾ ಆರೈಕೆಯಲ್ಲೂ ಭಾಗಿಯಾಗಿ... ರಾತ್ರಿ ನಿದ್ದೆ ಕೆಟ್ಟು, ಮೈ ಸೋತಿದ್ದರೂ ಮನಸ್ಸಿಗೆ ಏನೋ ಆಹ್ಲಾದ... ಆ ಮುದ್ದು ಬೊಮ್ಮಟೆಯನ್ನು ಎತ್ತಿ ಮುದ್ದಾಡಿದಾಗ ಸಿಕ್ಕ ಆನಂದ ಹೇಳಲು ಪದಗಳು ಇಲ್ಲ ಎಂದೇ ನನ್ನ ಭಾವನೆ. ಅಜ್ಜಿ ತಾತನಿಗೆ ಒಂದು ವಿಶೇಷ ಸವಲತ್ತು. ಅದು ಮಗುವಿನೊಂದಿಗಿನ ಒಡನಾಟ... ಯಾವುದೇ ವಿಶೇಷ ಜವಾಬ್ದಾರಿ ಇಲ್ಲದೆ. ಎಲ್ಲ ಜವಾಬ್ದಾರಿಗಳು ಮಗುವಿನ ಅಪ್ಪ ಅಮ್ಮನದು... ಅಜ್ಜಿ ತಾತನದು ಬರೀ ಸುಖದ ಕ್ಷಣಗಳು.
ಮೊಮ್ಮಗಳು ಮನೆಗೆ ಬರುತ್ತಾಳೆ ಎಂದು ತಿಳಿದಾಗ... ಅವಳ ಬರುವಿಕೆಗಾಗಿ ಕಾಯುವ ಸಮಯ... ಇನ್ನೇನು ಬಂದಳು ಎಂದಾಗ ಬಾಗಿಲ ಹಿಂದೆ ಬಚ್ಚಿಟ್ಟುಕೊಂಡು ಅವಳಿಗೆ ಆಟ ಆಡಿಸುವ ಕ್ಷಣ ಇಂದಿಗೂ ನನಗೆ ಖುಷಿ ಕೊಡುವಂಥದ್ದು. ಮಧ್ಯಾಹ್ನ ಅವಳ ಜೊತೆ ಮಾತಾಡುತ್ತಾ, ಆಟವಾಡುತ್ತಾ ಮಲಗಿಸುವುದು ಸಹ ಖುಷಿಯ ಆಯಾಮ. ಉತ್ಸಾಹದ ಚಿಲುಮೆಯೊಂದಿಗೆ ಸತತವಾಗಿ ಆಡಲು ನನಗೆ ಸಾಧ್ಯವಾಗದಿದ್ದರೂ.. ಎಲ್ಲಾ ಆಟಗಳಲ್ಲೂ ಅವಳ ಜೊತೆ ಕೈಗೂಡಿಸಲೇಬೇಕು... ಹಾಗೆ ಸೆಳೆಯುವ ಅಯಸ್ಕಾಂತ ಅದು.
ಪುಟ್ಟ ಮಗುವಿನಿಂದಲೂ ಅವಳನ್ನು ಎತ್ತಿಕೊಂಡು ಉಯ್ಯಾಲೆಯಲ್ಲಿ ತೂಗುತ್ತಾ, ಹಾಡು ಹೇಳುವಾಗಿನ ಸುಖ... ಅದರಲ್ಲೂ ಒಂದು ದಿನ... ಅವಳು ಹಾಡಿನ ಕೊನೆಯನ್ನು ಗುನುಗಿದಾಗ (humming) ನನಗಾದ ಖುಷಿಗೆ ಮುತ್ತುಗಳ ಸುರಿಮಳೆಗರೆದೆ.
ಇಂದಿಗೂ ಉಯ್ಯಾಲೆಯ ತೂಗಾಟ ಮುಂದುವರೆದಿದೆ. ಅವಳು ಏನನ್ನಾದರೂ ತಿನ್ನುವ ಮುಂಚೆ.. "ನೀ ತಿಂದಾಯಿತಾ ..ತಾತ" ಎಂದು ವಿಚಾರಿಸಿದಾಗ.. ನನ್ನಮ್ಮನೆ ಮುಂದೆ ಇದ್ದಾಳೆಂಬ ಭಾವನೆ.
ಚಿಕ್ಕಂದಿನ ನಮ್ಮ ಜೀವನದಲ್ಲಿ ಅಜ್ಜಿ ತಾತ ನಮಗೆ ಹಾಸು ಹೊದ್ದಿಕೆಯಂತಿದ್ದರು. ಅವರ ಪ್ರೀತಿ ಅಕ್ಕರೆ ನಮ್ಮನ್ನು ಬೆಚ್ಚಗಿಡುತ್ತಿದ್ದ ಭಾವ ಈಗಲೂ ನೆನೆದರೆ ಮೈ ಪುಳಕವಾಗುತ್ತದೆ. ನನಗೆ ತಿಳಿದಂತೆ ಅವರು ನಮ್ಮನ್ನು ಅಪ್ಪಿ ಮುದ್ದಾಡದಿದ್ದರೂ... ಅವರ ಸಾನ್ನಿಧ್ಯವೇ ಆ ಭಾವವನ್ನು ಮೂಡಿಸುತ್ತಿತ್ತು. ಮನೆಯಲ್ಲಿ ಇದ್ದ ಅಪ್ಪನ ಅಮ್ಮ ಅಜ್ಜಿ... ಚಿಕ್ಕಬಳ್ಳಾಪುರಕ್ಕೆ ಹೋದಾಗ ಅಥವಾ ಅವರೇ ನಮ್ಮ ಮನೆಗೆ ಅಪರೂಪಕ್ಕೆ ಬರುತ್ತಿದ್ದ ಅಜ್ಜಿ ತಾತ... ಅಮ್ಮನ... ಅಪ್ಪ ಅಮ್ಮ ನನಗೆ ಪ್ರೀತಿ ಪಾತ್ರರು.
ತುಂಬಾ ಹತ್ತಿರದಿಂದ ಕಂಡದ್ದು ನಮ್ಮ ಮನೆಯಲ್ಲಿದ್ದ ಪುಟ್ಟಮ್ಮಜ್ಜಿ. ಬಾಗಿದ ಬೆನ್ನಿನ , ಕೆಂಪು ಸೀರೆಯ, ಬೋಳು ತಲೆಯ ಮೇಲೆ ಸೆರಗನ್ನು ಹೊದ್ದ, ತನ್ನ ಹಾಸಿಗೆಯನ್ನು ಸುತ್ತಿ, ಕಟ್ಟಿ ಅದಕ್ಕೆ ಒರಗಿ ಕುಳಿತುಕೊಳ್ಳುತ್ತಿದ್ದ ಅಜ್ಜಿಯ ಚಿತ್ರಣ.. ಈಗ ಕಂಡಂತೆ ಇದೆ. ಸಾಮಾನ್ಯವಾಗಿ ಏನಾದರೂ ಒಂದು ದೇವರ ನಾಮವನ್ನು ಹೇಳಿಕೊಳ್ಳುತ್ತಿದ್ದ ಅಜ್ಜಿ ಹೇಳುತ್ತಿದ್ದ.." ಹಕ್ಕಿಯ ಗೂಡಿಗೆ ಹರಳನಿಟ್ಟಿದ್ದೇನೋ ರಾಮ ರಾಮ... ಹೆತ್ತ ತಾಯಿ ತಂದೆಗಳು ಮತ್ತಾಗಲಾರರು ರಾಮ ರಾಮ..." ತುಂಬಾ ಪ್ರಿಯ. ಚಿಕ್ಕ ಬಿಂದಿಗೆಯೊಂದನ್ನು ಹಿಡಿದುಕೊಂಡು ನೀರು ತರುವುದು, ಕೂತ ಜಾಗದಲ್ಲೇ ಕೆಲಸಗಳನ್ನು ಮಾಡುವುದು, ಸ್ನಾನದ ನಂತರ ತುಳಸಿ ಕಟ್ಟೆಯ ಬಳಿ ಕೂತು ದೇವರ ನಾಮ ಹೇಳುವುದು ಅವರ ದಿನಚರಿ. ಅವರೇ ಕಾಯಿ ಬಿಡಿಸುವಾಗ ಒಂದು ಬೀಜ ಅಥವಾ ಐದು ಬೀಜ ಇರುವ ಕಾಯಿ ಸಿಕ್ಕಿದರೆ ಅದನ್ನು ನನಗೆ ಗುಟ್ಟಾಗಿ ಕೊಟ್ಟು... ನಾನು ಅದನ್ನು ಬೇರೆಯವರಿಗೆ ಸವಾಲು ಕೊಡಲು ಅಥವಾ ಸವಾಲನ್ನು ತೀರಿಸಲು ಸಹಾಯ ಮಾಡುತ್ತಿದ್ದದ್ದು.
ಹಬ್ಬ ಹರಿದಿನಗಳಲ್ಲಿ ಒಬ್ಬಟ್ಟು ಮಾಡುವಾಗ.. ಅಜ್ಜಿಯ ಕೈಚಳಕ ನೋಡುವುದೇ ಚೆನ್ನ... ಒಬ್ಬಟ್ಟು ಮಾಡೋದು ತುಂಬಾ ಸುಲಭ ಅಲ್ವೇನಜ್ಜಿ ಅಂತ ಕೇಳಿದಾಗ ಊನಪ್ಪಾ ನೀನೂ ಮಾಡಬಹುದು ಅಂತ ಉತ್ಸಾಹ ತುಂಬಿದವಳು. ಅಜ್ಜಿಗೆ ಕಾಫಿ ಎಂದರೆ ಅಚ್ಚುಮೆಚ್ಚು.. ಆಕೆಗೆ ಮೀಸಲಾದ ಒಂದು ದೊಡ್ಡ ಹಿತ್ತಾಳೆಯ ಲೋಟದ ತುಂಬಾ ಕಾಫಿ ಕೊಡಬೇಕಿತ್ತು. ಕಾಫಿ ಕೊಟ್ಟ ತಕ್ಷಣ.. ತನ್ನ ತೋರು ಬೆರಳನ್ನು
ಲೋಟದೊಳಗೆ ಇಳಿಸಿ ಕಾಫಿ ಅಳತೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದದ್ದನ್ನು ನೋಡಿದ್ದೇನೆ. ಕಡಿಮೆಯಾದಾಗ ಮುಖದಲ್ಲಿನ ಅಪ್ರಸನ್ನತೆಯೂ ಕಂಡಿದ್ದೇನೆ.. ಆದರೆ ಎಂದೂ ಮಾತನಾಡಿದವಳಲ್ಲ.
ಕಾರ್ತಿಕ ಮಾಸದ ಸಂಜೆ, ತುಳಸಿ ಕಟ್ಟೆಯ ಪಕ್ಕದಲ್ಲಿ ಕೂತು.. ತಾನೇ ಹತ್ತಿಯಿಂದ ತಯಾರಿಸಿದ ದಪ್ಪ ಬತ್ತಿಯ ದೀಪವನ್ನು ಹಚ್ಚಿಟ್ಟು ಹಾಡುಹೇಳುತ್ತಾ ಕೂರುತ್ತಿದ್ದ ಅಜ್ಜಿ.
ತನ್ನ ಮಗನನ್ನು (ನನ್ನ ಅಪ್ಪನನ್ನು) ಪ್ರೀತಿಯಿಂದ "ಶಾಮಿ" ಎಂದು ಕರೆಯುತ್ತಿದ್ದ ಅಜ್ಜಿಯೇ ... ನಾವುಗಳು ನಮ್ಮಪ್ಪನನ್ನು ಶಾಮಣ್ಣ ಎಂದು ಕರೆಯಲು ಕಾರಣ ಇರಬೇಕು.
ಅಜ್ಜಿಯ ಕೆಲಸ ಮಾಡುವ ಉತ್ಸಾಹ ಕೆಲ ಸಮಯ ನಮ್ಮಮ್ಮನಿಗೂ ಅಜ್ಜಿಗೂ ವಾಗ್ವಾದ ನಡೆಯುತ್ತಿತ್ತು. ಅಜ್ಜಿಯ ಉತ್ತರ " ಸುಮ್ನೆ ಕೂತು ತಿನ್ಬೇಕೇನೆ ಲಕ್ಷುಂದೇವಿ.. ಕೈಲಾಗೋವಷ್ಟು ಕೆಲಸ ಮಾಡ್ತೀನಿ". ಇಂತಹ ಒಂದು ಸಂದರ್ಭದಲ್ಲಿ... ಅವಲಕ್ಕಿ ಮಾಡಲು ಭತ್ತ ಬೇಯಿಸುತ್ತಿದ್ದ ದೊಡ್ಡ ಪಾತ್ರೆಯನ್ನು ಕೆದಕಲು ಹೋಗಿ ಮೈ ಮೇಲೆ ಚೆಲ್ಲಿಕೊಂಡು... ಸುಟ್ಟ ಗಾಯಗಳಾಗಿ.. ಅಜ್ಜಿ ಪಟ್ಟ ಯಾತನೆ ನೋಡಲು ಕಷ್ಟವಾಗಿತ್ತು. ಕಾಡ್ ಲಿವರ್ ಆಯಿಲ್ ನ capsule ಗಳನ್ನು ತಂದು.. ಅದನ್ನು ಕೊಯ್ದು ಗಾಯಕ್ಕೆ ಹಚ್ಚಿದಾಗ.. ಅಜ್ಜಿ ನೋವಿನಿಂದ ಮುಲುಗುವುದು... ಜೊತೆಗೆ "ಯಾರಿಗೆ ನೋವು ಕೊಟ್ಟಿದ್ದೇನೋ.. ಈಗ ನಾನು ಅನುಭವಿಸಬೇಕು..." ಎಂಬ ಮಾತು ಕರ್ಮ ಸಿದ್ದಾಂತವೇ. ಅಜ್ಜಿಗೆ 14 ಮಕ್ಕಳಾಗಿ... ಕೊನೆಗೆ ಉಳಿದದ್ದು ಎರಡೇ ನನ್ನಪ್ಪ ಮತ್ತು ಚಿಕ್ಕಪ್ಪ. ಒಮ್ಮೆ ಅಜ್ಜಿಯ ಸ್ವಗತ " ಎಲ್ಲಾ ಮಕ್ಕಳು ಮೊಮ್ಮಕ್ಕಳು.. ಇದ್ದಿದ್ರೆ ಒಂದು ಮೆರವಣಿಗೆನೇ ಆಗ್ತಿತ್ತು" ... ಆಗ ಸರಿಯಾಗಿ ಅರ್ಥವಾಗದಿದ್ದರೂ ಈಗ ಅಜ್ಜಿಯ ನೋವಿನ ಆಳ ಅರ್ಥವಾಗುತ್ತದೆ. ಅಜ್ಜಿ ದೊಡ್ಡಜಾಲದಲ್ಲಿ ಸತ್ತಾಗ ಬೆಂಗಳೂರಿನಿಂದ ಚಿಕ್ಕಪ್ಪನ ಜೊತೆ ಹೋಗಿ.... ಅಜ್ಜಿಯ ಹಣೆಗೆ ಹಚ್ಚಿದ್ದ ವಿಭೂತಿಯ ನೆನಪು ಮಾತ್ರ ಇದೆ.
ಇನ್ನು ಚಿಕ್ಕಬಳ್ಳಾಪುರದ ಅಜ್ಜಿ ತಾತ... ಅಜ್ಜಿ ಬಲು ಇಷ್ಟ.... ತಾತ ಕೋಪಿಷ್ಟ... ಅಂತಹ ಕೋಪಿಷ್ಟ ತಾತನ ಜೊತೆಯಲ್ಲಿ ಸಮಾಧಾನದಿಂದ ಗುರುಗಳೇ ಎಂದು ಸಂಬೋಧಿಸುತ್ತಾ... ಜೀವನ ಸಾಗಿಸಿದ ಅಜ್ಜಿ ತಾಳ್ಮೆಯೇ ಮೂರ್ತಿವೆತ್ತಂತವಳು
ಅಜ್ಜಿಯ ನಗುಮುಖ...ಕೆನ್ನೆಗೆ ಹಚ್ಚಿದ ಅರಿಶಿಣ, ಸಂಜೆಯ ಸಮಯಕ್ಕೆ ಇದ್ದ ಸ್ವಲ್ಪ ಕೂದಲನ್ನೇ ಅಣಿಯಾಗಿ ತಲೆ ಬಾಚಿಕೊಂಡು... ಬಾಚಣಿಗೆಯನ್ನು ನೀರಿನಲ್ಲಿ ಅದ್ದಿ ಕನ್ನಡಿಯನ್ನು ನೋಡಿಕೊಂಡು ಮುಂದೆಲೇ ಬಾಚಿಕೊಳ್ಳುತ್ತಿದ್ದ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ. ಮನೆಯ ತುಂಬಾ ಮೊಮ್ಮಕ್ಕಳು (ಓದುವುದಕ್ಕಾಗಿ ಬಂದಿರುತ್ತಿದ್ದ ಹೆಣ್ಣುಮಕ್ಕಳ ಮಕ್ಕಳೂ ಸೇರಿ) .... ಶಾಲೆಗೆ ಹೋಗಲು ಸಮಯ ಆಗಿ ಊಟಕ್ಕೆ ಹಾಕಜ್ಜಿ ಅಂದ ತಕ್ಷಣ ತಗೋ ತಟ್ಟೆ ಎಂದು ಹೇಳಿ.. ಏನೋ ಹೊಂದಿಸಿ ಊಟಕ್ಕೆ ಹಾಕುತ್ತಿದ್ದ ಅಜ್ಜಿಯ ಕೈ ರುಚಿಯನ್ನು ಕೇಳಿ ಸಂತೋಷಿಸಿದ್ದೇನೆ.. ಆ ಭಾಗ್ಯ ನನ್ನದಾಗಿರಲಿಲ್ಲ ... ಅಲ್ಲಿಗೆ ಹೋಗಿದ್ದು ನಾನು ಓದಲಿಲ್ಲ.
ಅಜ್ಜಿಯ ಹೆಣ್ಣು ಮಕ್ಕಳಲ್ಲೆಲ್ಲ... ನಮ್ಮಮ್ಮನ ಮನೆಯ ಪರಿಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ.. ಹಾಗಾಗಿ ಅಜ್ಜಿಗೆ ನಮ್ಮ ಮೇಲೆ ವಿಶೇಷ ಕಾಳಜಿ. ಅಮ್ಮನಿಗೆ ಸಮಾಧಾನ ಮಾಡುತ್ತಾ "ಅಚ್ಚಾ ... ಇಂದಿಗೆ ಅನ್ನದ ಮಕ್ಕಳು... ಮುಂದೆ ಅವೇ ಚಿನ್ನದ ಮಕ್ಕಳು... ತಾಳ್ಮೆ ಇರಲಿ" ಎಂಬ ಮಾತು ಕಿವಿಯಲ್ಲಿ ರಿಂಗಣಿಸುತ್ತಿದೆ. ಅಚ್ಚಾ... ನಮ್ಮಮ್ಮ ಲಕ್ಷ್ಮೀದೇವಮ್ಮನ ಅಡ್ಡ ಹೆಸರು. ತಾತ ಪೂಜೆ ಮಾಡುತ್ತಿದ್ದ... ಹಾಗೂ ನನಗೆ ಸಂಧ್ಯಾ ವಂದನೆಯನ್ನು ಹೇಳಿಕೊಟ್ಟ ನೆನಪು ಚೆನ್ನಾಗಿದೆ... ತಾತನ " ಹರಿ ಗೋವಿಂದ ಗೋವಿಂದ.. ಗುರು ಗೋವಿಂದ ಗೋವಿಂದ" ಗೋವಿಂದ ನಾಮ... ಜೊತೆಗೆ ಆಗಾಗ ಪಂಚೆಯನ್ನು ಸರಿ ಮಾಡಿಕೊಳ್ಳುತ್ತಿದ್ದ ಚಿತ್ರಣ ನೆನಪಿದೆ. ತಾತನ ಜೊತೆ ಒಂದೆರಡು ಸಲ ಮಾರುಕಟ್ಟೆಗೆ ಹೋಗಿ ಬಂದ ನೆನಪು ಅಲ್ಪಸ್ವಲ್ಪ ಇದೆ... ಆದರೂ ತಾತ ಎಂದರೆ ಭಯವೇ..
ನಮ್ಮ ಮನೆಗೆ ಬಂದಾಗ, ಅವರ ಜೊತೆಯಲ್ಲೇ ಇರುತ್ತಿದ್ದ ಹುರಿಟ್ಟು, ಅವಲಕ್ಕಿ ಇವೆಲ್ಲ ನಮಗೆ ಆಕರ್ಷಣೆಗಳು. ಅವರು ಹೋಗುವಾಗ ನಮ್ಮ ಕೈಯಲ್ಲಿ ಇಡುತ್ತಿದ್ದ ಕಾಸು... ನನಗೆ ಖುಷಿ ಕೊಡುತ್ತಿತ್ತು.
ತುಂಬಾ ಹತ್ತಿರದಿಂದ ಕಂಡದ್ದು ... ನಮ್ಮಪ್ಪನನ್ನು... ಶಾಮಣ್ಣ ತಾತನಾಗಿ. ಮೊಮ್ಮಕ್ಕಳು, ಮರಿ ಮಕ್ಕಳು ಹಾಗೂ... 5ನೇ ತಲೆಮಾರಿನ ಮರಿ ಮಗಳ ಮಗಳನ್ನು ಕಂಡ, ನೂರೆಂಟು ವರ್ಷದ ತುಂಬು ಜೀವನ ನಡೆಸಿದ ಅದೃಷ್ಟ ಶಾಮಣ್ಣ ತಾತನದು. ಮೊಮ್ಮಕ್ಕಳ ಮನೆಯಲ್ಲಿ ಹೋಗಿ ಅವರ ಜೊತೆ ಇದ್ದು... ಸಂತೋಷದಿಂದ ಕಾಲ ಕಳೆದವರು. ಇಲ್ಲಿನ ಹೆಗ್ಗಳಿಕೆ ಎಂದರೆ.. ಮೊಮ್ಮಕ್ಕಳ ಹೆಂಡತಿಯರು ಸಹ.. ತಾತನನ್ನು ತುಂಬಾ ಇಷ್ಟಪಟ್ಟು ತಮ್ಮ ಮನೆಯಲ್ಲಿ ಇರಿಸಿಕೊಂಡು.. ಆದರಿಸಿದ್ದು, ಪ್ರೀತಿ ತೋರಿಸಿದ್ದು.
ಬಹುಪಾಲು ನಮ್ಮ ಮನೆಯಲ್ಲಿರುತ್ತಿದ್ದ.. ಶಾಮಣ್ಣ ತಾತನ ಸಹಚರ್ಯ ನನ್ನ ಮಗಳು ಚೈತ್ರಳಿಗೆ ಸಂಪೂರ್ಣ ಸಿಕ್ಕಿತ್ತು. ಅವಳನ್ನು ಒಪ್ಪಿಕೊಂಡು ಅಪ್ಪಿಕೊಂಡ ರೀತಿ ಅಸಾಧಾರಣ.
ತಾತ ಮೊಮ್ಮಗಳು ಆಟವಾಡುತ್ತಿದ್ದದ್ದು.. ಕೆಲಸಲ ಜಗಳವಾಡುತ್ತಿದ್ದದ್ದನ್ನು ನಾನು ನೋಡಿ ಸವಿದಿದ್ದೇನೆ. ಮೊಮ್ಮಗಳು ಕೊಟ್ಟ ಎಲ್ಲ ತಿಂಡಿಯನ್ನು ... ಗೋಬಿ ಮಂಚೂರಿ, ಪಾನಿಪುರಿ... ಸ್ವಲ್ಪವಾದರೂ ತಿಂದು ರುಚಿ ನೋಡುತ್ತಿದ್ದವರು. ಅವಳು ಮಾಡುತ್ತಿದ್ದ ಎಲ್ಲಾ ಅಲಂಕಾರವನ್ನು ಸಹಿಸಿಕೊಂಡವರು. ನಮ್ಮಪ್ಪನ ನೂರನೆಯ ವರ್ಷದ ಆಚರಣೆಯಲ್ಲಿ 19 ಮೊಮ್ಮಕ್ಕಳು,
23 ಮರಿ ಮಕ್ಕಳು,
ಒಬ್ಬ ಮರಿ ಮರಿ ಮಗಳು
ಸೇರಿದ ದಂಡು ಸಡಗರ ಸಂಭ್ರಮದಿಂದ ಪಾಲ್ಗೊಂಡಿತ್ತು... ಅದನ್ನು ನೋಡಿದ ನನ್ನ ಸಂತೋಷ ಮುಗಿಲು ಮುಟ್ಟಿತ್ತು.
ವಾರಿಗೆ ಸಂಬಂಧ ದಿಂದ ನಾನು ತಾತನಾಗಿದ್ದು, ನನ್ನ 20 ವರ್ಷ ವಯಸ್ಸಿನಲ್ಲಿ...ನನ್ನ ದೊಡ್ಡಕ್ಕ ಅಜ್ಜಿಯಾದಾಗ. ಮಾತನಾಡಲು ಶುರು ಮಾಡಿದಾಗ, ಸಹನ ಅಂಕಲ್ ಅಂತ ಕರೆದರೆ ನನಗೆ ಇಷ್ಟವಾಗದು..."ತಾತ ಅಂತ ಕರಿ" ಎಂದು ಹೇಳಿ...ಹಾಗೆ ಕರೆಸಿಕೊಂಡ ಹೆಮ್ಮೆ ನನ್ನದು.
ಚಿಕ್ಕಂದಿನ ಆಟದಲ್ಲಿ.. ಇನ್ನೊಬ್ಬ ಹುಡುಗನ ಬೆನ್ನಿಗೆ ತಲೆ ಬಗ್ಗಿಸಿ ತಾಗಿಸಿ ಭುಜದ ಮೇಲೆ ಕೈ ಇಟ್ಟು" ಅಜ್ಜಿ ಗುಜ್ಜಿ
ಮನೆ ದಾರಿ ಯಾವುದೂ... " ಅಂತ ಹೇಳ್ತಾ ಮುಂದೆ ಹೋಗ್ತಿದ್ದದ್ದು ಒಂದಾಟ.. ಅಜ್ಜ ಅಜ್ಜಿ ಮೊಸರಿನ ಬಜ್ಜಿ ಸಜ್ಜಿಗೆ ತಿಂದು ಹೆಚ್ಚಿತು ಬೊಜ್ಜು...
ಅಜ್ಜನ ಕೋಲಿದು ನನ್ನಯ ಕುದುರೆ ಹೆಜ್ಜೆ ಹೆಜ್ಜೆಗೂ ಕುಣಿಯುವ ಕುದುರೆ ಕಾಲಿಲ್ಲದಯೇ ನಡೆಯುವ ಕುದುರೆ ಕೂಳಿಲ್ಲದೆಯೇ ಬದುಕುವ ಕುದುರೆ ಎನ್ನುವ ಪದ್ಯ...
ತನ್ನ ಕೋಳಿ ಕೂಗದೆ ಬೆಳಗಾಗುವುದಿಲ್ಲ ಹಾಗೂ ಅಗ್ಗಿಷ್ಟಿಕೆಯ ಬೆಂಕಿ ಇಲ್ಲದೆ ಊರಿನ ಒಲೆ ಉರಿಯುವುದಿಲ್ಲ ಎಂಬ ಜಂಭದಿಂದ ಊರು ಬಿಟ್ಟು ಹೋದ... ಹಿಂತಿರುಗಿ ಬಂದಾಗ ಜೀವನ ಎಂದಿನಂತೆ ನಡೆಯುತ್ತಿದ್ದನ್ನು ಕಂಡು ತನ್ನ ಜಂಭಕ್ಕೆ ನಾಚಿದ ಅಜ್ಜಿಯ ಕಥೆ ಹಾಗೂ ಪುಸ್ತಕದಲ್ಲಿದ್ದ ಅಜ್ಜಿಯ ಚಿತ್ರ ಜ್ಞಾಪಕ ಇದೆ.
ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಮದುವೆ ಚಿಂತೆ ಹಾಗೂ ಅಜ್ಜಿ ಇಲ್ಲದ ಮನೆ ಮಜ್ಜಿಗೆ ಇಲ್ಲದ ಊಟ.. ಎನ್ನುವ ನಾಣ್ಣುಡಿಗಳು ನನಗೆ ತಿಳಿದಂತಹವು.
ನಮ್ಮೂರಲ್ಲಿದ್ದ "ದೊಡ್ಡೀ" ಹೆಸರಾಂಕಿತ ಅಜ್ಜಿ ಆನಂಗಾನಂಗ ಅಂತ ಒಂದು ಪಟ್ಟಣ. ಆ ಪಟ್ಟಣಕ್ಕೆ ಸೋಮಶೇಖರ ಎಂಬ ರಾಜ.. ಆರಮನೆ, ರಾಜಬೀದಿ, ರಥದಬೀದಿ, ಅಂಗಡಿ ಬೀದಿ, ಸುಂದರವಾದ ಕೆರೆ, ಕೂಗೋ ನೀರು ನಗೋ ಮಾವಿನ ಕಾಯಿ, ಊರಿಗೆಲ್ಲ ಒಬ್ಳೇ ಪದ್ಮಾವತಿ....." ಹೀಗೆ ಹೇಳುತ್ತಿದ್ದ ಕಥೆಗಳನ್ನು ಕೇಳಲು ಅವರ ಸುತ್ತ ಬಾಯಿ ಬಿಟ್ಕೊಂಡು ಕುತ್ಕೊಳ್ತಿದ್ದ ಮಕ್ಕಳು ನಾವು.
ಈಚೆಗೆ 90 ವರ್ಷ ದಾಟಿದ ನನ್ನ ದೊಡ್ಡಕ್ಕನ ಕಣ್ಣಿನ ದೃಷ್ಟಿಯು ಪೂರ ಕುಂದಿದೆ... ಹೊಸ ಮರಿ ಮಗನ ಆಗಮನ... ಆ ಮಗುವನ್ನು ತಂದು ಅಜ್ಜಿಯ ಕೈಲಿಟ್ಟಾಗ... ಮಗುವನ್ನು ನೋಡಲಾಗದ ಅಜ್ಜಿ ..ಅದರ ಮುಖ ಮೈ ಸವರಿ ಪುಳಕಿತಗೊಂಡದ್ದು... ಪ್ರಾಯಶಃ ಕಣ್ಣಿಂದ ನೋಡಲಿಲ್ಲ ಅನ್ನುವ ನೋವೂ ಸೇರಿತ್ತೇನೋ ಎಂಬ ಊಹೆ.... ಈ ವಿಷಯ ತಿಳಿದಾಗ ನನಗನಿಸಿದ್ದು.
ದೇವನಹಳ್ಳಿಯಿಂದ ಬಟ್ಟೆ ಮಾರಲು ಬರುತ್ತಿದ್ದ ಅಜ್ಜಿಗೆ ನಮ್ಮನ್ನು ಕಂಡರೆ ಇಷ್ಟ. ಹಾಗಾಗಿ ನಮಗೆ ಅಲ್ಲಿಂದ ತಂದುಕೊಟ್ಟ ಸೀಬೆಹಣ್ಣು ನಮಗೆ ಪ್ರಿಯ.
ಬೆಟ್ಟ ಹಲಸೂರು ಅಜ್ಜಿ, ಬಾಯಿ ತುಂಬ ಮಾತನಾಡುತ್ತಾ, ಹಾಕುತ್ತಿದ್ದ ಕೈ ತುತ್ತು ಅಪ್ಯಾಯಮಾನ.
ಕರಲಮಂಗಲದಲ್ಲಿ ನನ್ನ ಕೊನೆಯ ಅಕ್ಕ ಗಿರಿಜಾಂಬ ಮನೆಗೆ ಹೋದಾಗ.. ಅವರ ಎದುರು ಮನೆಯಲ್ಲಿದ್ದ ಅಜ್ಜಿಯ ಬಗ್ಗೆ ನಮಗೆಲ್ಲ ಕುತೂಹಲ. ಅವರು ಈಚೆ ಬರುತ್ತಿದ್ದದ್ದು ಅಪರೂಪ... ತಿಳಿಯದವರು ಅವರ ಮನೆಗೆ ಹೋದರೆ ಬೈಗುಳ ಗ್ಯಾರಂಟಿ ಎಂಬ ತಿಳುವಳಿಕೆ ನಮ್ಮದು. ಒಂದೆರಡು ಸಲ ಕುತೂಹಲದಿಂದ ಅವರ ಮನೆ ಬಾಗಿಲನ್ನು ಇಣಿಕೆ ಅಜ್ಜಿ ಬಂದದ್ದನ್ನು ನೋಡಿ.. ಓಡಿ ಬಂದದ್ದು ಇದೆ. ಆ ಅಜ್ಜಿ ರೇಡಿಯೋವನ್ನು "ಗೌಡ್ ಜಾನ್" ಎಂದು ಕರೆಯುತ್ತಿದ್ದರು ಎಂಬ ನೆನಪು.
ಪ್ರೀತಿ ಆದರಗಳ ಹೊಳೆಯಲ್ಲಿ ಮೀಯಿಸಿದವರು ನನ್ನ ಹೆಂಡತಿಯ ಅಮ್ಮನ ಅಮ್ಮ ಸೀತಮ್ಮಜ್ಜಿ ಹಾಗೂ ಅಪ್ಪನ ಅಮ್ಮ, (ನಾನು ಅಮ್ಮ ಎಂದು ಕರೆಯುತ್ತಿದ್ದ) ಅಜ್ಜಿ. ಆ ಸವಿ ಮತ್ತೆ ಮತ್ತೆ ನೆನಪಿಗೆ ಬರುತ್ತದೆ... ಮನಸ್ಸು ಸುಖಿಸುತ್ತದೆ.
ಕೊನೆಯದಾಗಿ... ಅಶಕ್ತ ಪೋಷಕ ಸಭಾದ ಕೆಲ ಅಜ್ಜ ಅಜ್ಜಿಯರು... ಮುಖ ನೋಡಿದ ಕೂಡಲೇ ಹರ್ಷ ವ್ಯಕ್ತಪಡಿಸುವ, ಸಂಭ್ರಮಿಸುವ ಮನಸ್ಸುಗಳು. ಅವರೊಂದಿಗೆ ಕಳೆಯುವ ಸಮಯ ಧನ್ಯತಾಭಾವವನ್ನು ಕೊಡುತ್ತದೆ.
ಮೊಮ್ಮಕ್ಕಳಾಗಿ ಅಜ್ಜಿ ತಾತನ ಪ್ರೀತಿಯನ್ನು ಅನುಭವಿಸುತ್ತಿರುವ... ಹಾಗೂ ಅಂತ ಪ್ರೀತಿಯ ನೆನಪಿನಲ್ಲಿ ಸುಖಿಸುತ್ತಾ ಅಜ್ಜಿ ತಾತನಾಗಿ, ಆ ಪ್ರೀತಿಯನ್ನು ಮೊಮ್ಮಕ್ಕಳಿಗೆ ಧಾರೆಯರೆಯುತ್ತಿರುವ, ಅಜ್ಜಿ ತಾತ ಆಗಲು ಸರದಿಯಲ್ಲಿರುವ ಎಲ್ಲರಿಗೂ ನನ್ನ ನಮಸ್ಕಾರ....
D C Ranganatha Rao
9741128413
ಎಷ್ಟೊಂದು ಸವಿನೆನಪು?! ನಮ್ಮ ನೆನಪುಗಳೂ ಜೊತೆಯಲಿ ತೇಲಿ ಬಂದವು!!
ReplyDeleteಎಷ್ಟೊಂದು ನೆನಪುಗಳು ನುಗ್ಗಿ ಬರುತ್ತವೆ ಚಿಕ್ಕಪ್ಪ ನಿಮ್ಮ ಬರಹವನ್ನು ಓದಿದಾಗ, ನಿಮಗೆ ವಂದನೆಗಳು ಮತ್ತೆ ಬಾಲ್ಯಕ್ಕೆ, ಅಜ್ಜಿ ತಾತನ ಒಡನಾಟಕ್ಕೆ ಕರೆದು ಒಯ್ದಿದ್ದಕ್ಕಾಗಿ
ReplyDeleteTumbha nenapugalu kanmunde rup antha bantu🙂
ReplyDeleteಬದುಕಿನ ಚಿತ್ರಣವೇ ಕಣ್ಣ ಮುಂದೆ ಬಂದಹಾಗಾಯಿತು
ReplyDeleteತಾತ ಹಿಡಿದು ಮೊಮ್ಮಗಳ ತನಕ ಕಂಡ ನೀವು ಧನ್ಯರು
🙏
ಅದ್ಭುತ ಜೀವನ ಹಿರಿಯರದ್ದು
ReplyDeleteನಿಜ....ತಾತ, ಅಜ್ಜಿ ಹಾಗೂ ಮೊಮ್ಮಕ್ಕಳ ಒಡನಾಟ ಯಾವುದೇ ಕೊಡು ಕೊಳ್ಳುವಿಕೆ ಇಲ್ಲದ ಮಧುರವಾದ ಸಂಬಂಧ.....ನಿಮ್ಮ ತಾತರವರಿಂದ ಪಡೆದ ಪ್ರೀತಿ ಇಂದ ಮೊಮ್ಮಗಳ ತುಂಟಾಟದ ತನಕ ಸುಂದರವಾಗಿ ಎಲ್ಲಾ ಹಂತಗಳನ್ನು ನಿಮ್ಮ ಅಗಾಧ ನೆನಪಿನ ಶಕ್ತಿಯಿಂದ ವಿವರಿಸಿ ನಮ್ಮನ್ನು memory recall ಮಾಡಲು ಪ್ರೇರೇಪಿಸಿದ ಬರಹ ಓದಿ ಖುಷಿ ಆಯಿತು
ReplyDeleteಧನ್ಯವಾದಗಳು
ಬಾಬು
ನೀಮ್ಮ ಲೇಖನ ಓದುತ್ತಿದ್ದರೆ ನಾನು ನನ್ನ ಅಜ್ಜಿ ಜೊತೆ ಇದ್ದಾನೆನಪುಗಳು ಸುಳಿದವು
ReplyDeleteನೆನಪಿನ ಬುತ್ತಿ ಯಲ್ಲಿ ಅದೆಷ್ಟು ಜನರು, ಅದೆಷ್ಟು ಘಟನೆಗಳು...ಓದಿದ ಸಂತಸ ನನ್ನದು.
ReplyDeleteಅಜ್ಜ-ಅಜ್ಜಿ ಆ ಪದಗಳು ಅಪ್ಪ-ಅಮ್ಮ ಪದಗಳಿಗಿಂತ ಮಕ್ಕಳಿಗೆ ಹೆಚ್ಚು ಪ್ರಿಯ.ಕಾರಣ ಅಜ್ಜ-ಅಜ್ಜಿಯಿಂದ ಬರಿಯ ಪ್ರೀತಿ ಮಾತ್ರ...ಶಿಕ್ಷೆ, ಬೈಗುಳ ಇಲ್ಲವೇ ಇಲ್ಲ ಎಂಬುದಕ್ಕೆ.
ReplyDeleteಅಜ್ಜ-ಅಜ್ಜಿಯ ನೆನಪುಗಳ ಸಿಹಿಹೂರಣವನ್ನು ಲೇಖನದಾದ್ಯಂತ ಉಣಬಡಿಸಿದ್ದೀರಿ. ನಿಮ್ಮ ನೆನಪಿನ ಶಕ್ತಿ, ನಿರೂಪಣೆ, ಹಾಗೂ ಸಚಿತ್ರವಾಗಿರುವ ಲೇಖನ ಸ್ತುತ್ಯಾರ್ಹ. ಕಣ್ಣಮುಂದೆ ಕಟ್ಟಿದಂತಿರುತ್ತದೆ ಹಾಗೂ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ದಿತು. ಸಿಹಿನೆನಪುಗಳೇ ಹಾಗೆ...ಬಲು ಮಧುರ.
ಆದರೆ ಇಂದಿನ ಮಕ್ಕಳು, ಮೊಮ್ಮಕ್ಕಳಿಗೆ ಅದೇಕೋ ಆಪ್ಯಾಯತೆ, ಸಂಬಂಧಗಳ ಮಹತ್ವ ನಾವು ಕಲಿಸುತ್ತಿಲ್ಲವೇನೋ. ಹೀಗಾಗಿ ಅವರಿಗೆ ಈ ರೀತಿಯ ಸಿಹಿಯನ್ನು ಸವಿಯಲಾಗುವುದಿಲ್ಲವೇನೋ.... ಆತುರ, ಸಮಯದ ಅಭಾವ, ಬೇರೆ ಬೇರೆ ಚಟುವಟಿಕೆಗಳು.
ಕಾಲಾಯ ತಸ್ಮಾಯ ನಮ:
ಮುಗಿಸುವ ಮುನ್ನ...
ಅಜ್ಜ-ಅಜ್ಜಿಗೂ ಮಕ್ಕಳಿಗಿಂತ ಮೊಮ್ಮಕ್ಕಳ ಮೇಲೆ ಒಂದು ಹಿಡಿ ಹೆಚ್ಚಿನ ಪ್ರೀತಿ...ಅದೇಕೋ?
ವಂದನೆಗಳೊಡನೆ,
ಗುರುಪ್ರಸನ್ನ
ಚಿಂತಾಮಣಿ
Ajja ajjiyara nenape madura avaru namma joteyalle irabeku anta annisutittu.ajja ajjiyara hattira oydaddakke vandanegalu.
ReplyDeleteWonderful article. Just going through your flow of thoughts, I just recalled my old memories of Rukminamma and Jayamma (mother of my mother ). Also you have welcomed up coming ajji/thatha. We are also in the queue and we wish your blessings. Dhanyavadagalu for the wonderful article. MANJUNATH. BSNL R
ReplyDeleteಅಜ್ಜ ಅಜ್ಜಿ ಇರುವ ಕುಟುಂಬದಲ್ಲಿ ಬೆಳೆದ ಮಕ್ಕಳ ವ್ಯಕ್ತಿತ್ವ ವಿಭಿನ್ನವಾಗಿರುತ್ತದಂತೆ. ಅಜ್ಜ ಅಜ್ಜಿಯರು ತಮ್ಮ ಮೊಮ್ಮಕ್ಕಳಿಗೆ ನೀಡುವ ಪ್ರೀತಿ ಸ್ಪಟಿಕದಷ್ಟು ಸ್ವಚ್ಛ ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ. ಈಗ ಭಾರತದಲ್ಲಿ ಕೂಡು ಕುಟುಂಬಗಳು ಅಪರೂಪವಾಗುತ್ತಿರುವಂತೆಯೇ ಮಕ್ಕಳಿಗೆ ಅಜ್ಜ ಅಜ್ಜಂದಿರ ಪ್ರೀತಿ ಸಿಗುವುದು ದುಸ್ತರವಾಗುತ್ತದೆ.ನಿಮಗೆ ಅಜ್ಯ ಅಜ್ಜಿಯ ಪ್ರೀತಿಯ ಜೊತೆಗೆ ಮೊಮ್ಮಗಳ ಪ್ರೀತಿ ಸಹಾ ಸಿಕ್ಕಿದೆ. ನೀವೇ ಧನ್ಯರು
ReplyDeleteNimma nenapina shakthi ge hats off sir hadarinda saragavagi haridu baruttide baravanige nice.
ReplyDeleteನಿಮ್ಮ ಪೂರ ಫ್ಯಾಮಿಲಿಯ ಚಿತ್ರಣವೇ ತುಂಬಿದೆ, ಸಣ್ಣಿಲಿ, ದೊಡ್ಡಿಲಿ, ಸೊಂಡಿಲಿ, ಮೂಗಿಲಿ ಹೀಗೆ ನಿಮ್ಮ ಕುಟುಂಬದ ನೆನಪು ನಿಮ್ಮ ತಲೆಯಿಂದ ಬರವಣಿಗೆ ರೂಪದಲ್ಲಿ ಇಳಿಸಿದ್ದೀರಾ, ಚೆನ್ನಾಗಿದೆ. ನಿಮ್ಮ ಕುಟುಂಬದ ಪರಚಯ ಇರುವವರಿಗೆ ಇನ್ನಷ್ಟು ಸಂತೋಷ ಆಗುತ್ರದೆ.
ReplyDeleteರತ್ನಪ್ರಭಾ