ಚರಮಗೀತೆ - ಬಿನ್ನವತ್ತಳೆ
ನಾನು ಬರೆದ ಬ್ಲಾಗ್ ನ ಲೇಖನಗಳಿಗೆ ಭೇಷ್ ಎನ್ನುವ ಪ್ರತಿಕ್ರಿಯೆಗಳು ಬಂದಾಗ ಸಹಜವಾಗಿ ಖುಷಿಯಾಗುತ್ತದೆ. ಕೆಲವರು ಸಲಹೆ/ ಸೂಚನೆಗಳನ್ನು ಕೊಟ್ಟಿದ್ದಾರೆ, ಅವುಗಳಲ್ಲಿ ಕೆಲವನ್ನು ಅಳವಡಿಸಿಕೊಂಡಿದ್ದೇನೆ. ನನ್ನ ಮಾವನ ಬಗ್ಗೆ ಬರೆದ ಲೇಖನಕ್ಕೆ ಬಂದದ್ದು ವಿಶೇಷ ಪ್ರತಿಕ್ರಿಯೆ, ನನ್ನ ಸ್ನೇಹಿತ ಶಿವನಿಂದ (ಕೆ. ಎನ್. ಶಿವಶಂಕರ). ನನಗೆ ಮಾವನಾಗುವುದಕ್ಕೂ ಮುಂಚೆ... ನಾನು ಹಾಗೂ ಶಿವ, ಅವರ ಮನೆಯ ಮುಂದೆ ತಾಳ ಹಾಕಿಕೊಂಡು ಜೋರಾಗಿ ಹಾಡಿದ " ಸರ್ವ ಮಂಗಳನಾಮ ಸೀತಾರಾಮ" ಹಾಡಿಗೆ ಅವರ ಸಿಡುಕು ಎಂದು ಹೇಳಬಹುದಾದ ಪ್ರತಿಕ್ರಿಯೆ "ಏನದು ಮನೆ ಮುಂದೆ ಇದೆಲ್ಲ.. ನಿಲ್ಸಿ". ನಾವು ಬೈಸಿಕೊಂಡೆವೇನೋ ಎಂಬಂತೆ ಸಪ್ಪಗಾಗಿದ್ದು ಸತ್ಯ. ಈ ವಿಷಯ ಯಾಕೆ ಬರೀಲಿಲ್ಲ ಅಂತ ಶಿವನ ಪ್ರಶ್ನೆ... ಯಾಕೆ ಬರೀಲಿಲ್ಲ ಅಂತ ನನಗೆ ನಾನೇ ಪ್ರಶ್ನೆ ಮಾಡಿಕೊಂಡಾಗ ಅನ್ನಿಸಿದ್ದು... ಪ್ರಾಯಶಃ ನಾನು ಮಾವ ಕೃಷ್ಣಮೂರ್ತಿಯವರ ಬಗ್ಗೆ ಮಾತ್ರ ಯೋಚಿಸಿದ್ದಿರಬಹುದಾ? ಅಥವಾ ಸತ್ತವರ ಬಗ್ಗೆ ಯಾಕೆ ಈ ಕಹಿ ಘಟನೆಯ ನೆನಪು ಎಂದಿರಬಹುದಾ? ನಾ ಹೇಳಲಾರೆ... ಯಾಕೆಂದರೆ ಇದು ಘಟನೆಯ ನಂತರದ ವಿಶ್ಲೇಷಣೆ.(postmortem). ಖಾಸಗಿ ಮಾತು ಕಥೆಗಳಲ್ಲಿ, ಏನೇ ವಿಷಯ ಮಂಥನಗಳು ನಡೆಯಲಿ, ಸಾರ್ವಜನಿಕ ವಾಗಿ, ಸತ್ತವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದು ಲೋಕ ನಿಯಮವೇ ಎಂದು ಹೇಳಬಹುದು. ಹಾಗಾಗಿ ಎಲ್ಲರೂ ಸತ್ತವರ ಒಡನಾಟದ ಕೆಲ ಸುಂದರ ಕ್ಷಣಗಳನ್ನು ನೆನೆದು ಅದನ್ನು ಹಂಚಿಕೊಳ್ಳು...