ಚರಮಗೀತೆ - ಬಿನ್ನವತ್ತಳೆ
ನಾನು ಬರೆದ ಬ್ಲಾಗ್ ನ ಲೇಖನಗಳಿಗೆ ಭೇಷ್ ಎನ್ನುವ ಪ್ರತಿಕ್ರಿಯೆಗಳು ಬಂದಾಗ ಸಹಜವಾಗಿ ಖುಷಿಯಾಗುತ್ತದೆ. ಕೆಲವರು ಸಲಹೆ/ ಸೂಚನೆಗಳನ್ನು ಕೊಟ್ಟಿದ್ದಾರೆ, ಅವುಗಳಲ್ಲಿ ಕೆಲವನ್ನು ಅಳವಡಿಸಿಕೊಂಡಿದ್ದೇನೆ.
ನನ್ನ ಮಾವನ ಬಗ್ಗೆ ಬರೆದ ಲೇಖನಕ್ಕೆ ಬಂದದ್ದು ವಿಶೇಷ ಪ್ರತಿಕ್ರಿಯೆ, ನನ್ನ ಸ್ನೇಹಿತ ಶಿವನಿಂದ (ಕೆ. ಎನ್. ಶಿವಶಂಕರ). ನನಗೆ ಮಾವನಾಗುವುದಕ್ಕೂ ಮುಂಚೆ... ನಾನು ಹಾಗೂ ಶಿವ, ಅವರ ಮನೆಯ ಮುಂದೆ ತಾಳ ಹಾಕಿಕೊಂಡು ಜೋರಾಗಿ ಹಾಡಿದ " ಸರ್ವ ಮಂಗಳನಾಮ ಸೀತಾರಾಮ" ಹಾಡಿಗೆ ಅವರ ಸಿಡುಕು ಎಂದು ಹೇಳಬಹುದಾದ ಪ್ರತಿಕ್ರಿಯೆ "ಏನದು ಮನೆ ಮುಂದೆ ಇದೆಲ್ಲ.. ನಿಲ್ಸಿ". ನಾವು ಬೈಸಿಕೊಂಡೆವೇನೋ ಎಂಬಂತೆ ಸಪ್ಪಗಾಗಿದ್ದು ಸತ್ಯ. ಈ ವಿಷಯ ಯಾಕೆ ಬರೀಲಿಲ್ಲ ಅಂತ ಶಿವನ ಪ್ರಶ್ನೆ... ಯಾಕೆ ಬರೀಲಿಲ್ಲ ಅಂತ ನನಗೆ ನಾನೇ ಪ್ರಶ್ನೆ ಮಾಡಿಕೊಂಡಾಗ ಅನ್ನಿಸಿದ್ದು... ಪ್ರಾಯಶಃ ನಾನು ಮಾವ ಕೃಷ್ಣಮೂರ್ತಿಯವರ ಬಗ್ಗೆ ಮಾತ್ರ ಯೋಚಿಸಿದ್ದಿರಬಹುದಾ? ಅಥವಾ ಸತ್ತವರ ಬಗ್ಗೆ ಯಾಕೆ ಈ ಕಹಿ ಘಟನೆಯ ನೆನಪು ಎಂದಿರಬಹುದಾ? ನಾ ಹೇಳಲಾರೆ... ಯಾಕೆಂದರೆ ಇದು ಘಟನೆಯ ನಂತರದ ವಿಶ್ಲೇಷಣೆ.(postmortem).
ಖಾಸಗಿ ಮಾತು ಕಥೆಗಳಲ್ಲಿ, ಏನೇ ವಿಷಯ ಮಂಥನಗಳು ನಡೆಯಲಿ, ಸಾರ್ವಜನಿಕ ವಾಗಿ, ಸತ್ತವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದು ಲೋಕ ನಿಯಮವೇ ಎಂದು ಹೇಳಬಹುದು. ಹಾಗಾಗಿ ಎಲ್ಲರೂ ಸತ್ತವರ ಒಡನಾಟದ ಕೆಲ ಸುಂದರ ಕ್ಷಣಗಳನ್ನು ನೆನೆದು ಅದನ್ನು ಹಂಚಿಕೊಳ್ಳುವುದು ಸಾಮಾನ್ಯ.
ಸತ್ತ ವ್ಯಕ್ತಿಯ ಶವದ ಮುಂದೆ ಹೊಗಳಿ ಹಾಡುವ ಪದ್ಧತಿಯನ್ನು ಮೊದಲ ಬಾರಿಗೆ ಕಂಡದ್ದು ನಾನು ಮದರಾಸಿನಲ್ಲಿ ಇದ್ದಾಗ.... "ಪೋಯಿಟ್ಟಾಳೇ.. ಪೋಯಿಟ್ಟಾಳೇ.. ಎಂಗಮ್ಮ ಪೋಯಿಟ್ಟಾಳೇ.." ಎಂದು ಎದೆ ಬಡೆದುಕೊಂಡು, ಕಣ್ಣೀರಿಲ್ಲದೆ ಅಳುತ್ತಿದ್ದ ಹೆಂಗಸನ್ನು ನೋಡಿದಾಗ.... ಆಗಿನ್ನೂ ನನಗೆ ತಮಿಳು ಭಾಷೆ ಅರ್ಥವಾಗುತ್ತಿರಲಿಲ್ಲ... ನಂತರ ಕೇಳಿ ತಿಳಿದದ್ದು ಆಕೆ ಹಣಕ್ಕಾಗಿ ಅಳುವ ವ್ಯಕ್ತಿಯೆಂದು.
ರಾಜಸ್ಥಾನ ರಾಜ್ಯದಲ್ಲೂ ಈ ಪದ್ಧತಿ ಇದ್ದು.... ಕೂಲಿಗಾಗಿ ಅಳುವ ಹೆಂಗಸನ್ನು " ರುಡಾಲಿ" ಎಂದು ಕರೆಯುತ್ತಾರೆ. ಇದೇ ಹೆಸರಿನ ಒಂದು ಹಿಂದಿ ಚಿತ್ರವೂ ಬಂದಿತ್ತು.
ನಾನು ನನ್ನ ಮಾವನ ನೆನಪಿಗೆ ಬರೆದ ನಾಲ್ಕು ಸಾಲುಗಳನ್ನು.. ಚರಮಗೀತೆಗೆ ಹೋಲಿಸಿದ್ದು, ನನ್ನ ಹಿರಿಯ ಗೆಳೆಯ ಪದ್ಮನಾಭ್ ಅವರು...ಸ್ನೇಹಿತರ ಗುಂಪಿನ ಮಾತುಕತೆಯ ಮಧ್ಯದಲ್ಲಿ. ನಾ ಬರೆದಾಗ ಅದನ್ನು ಚರಮಗೀತೆ ಎಂದು ಕಲ್ಪಿಸಿರಲಿಲ್ಲ... ಮನಸ್ಸಿಗೆ ತೋಚಿದ್ದನ್ನು ಗೀಚಿದ್ದು ಅಷ್ಟೇ. ಚರಮಗೀತೆ ಪದ ಕೇಳಿದಾಗ ಮನಸ್ಸು ಅದರ ಕಡೆಗೆ ಓಡಿತು... ಚರಮಗೀತೆ ಸತ್ತವರನ್ನು ಹೊಗಳಿಹಾಡುವ ಕೊನೆಯ ಹಾಡು, ಎಂದು ಅರ್ಥೈಸಿಕೊಂಡವನು ನಾನು.
ಹೈಸ್ಕೂಲಿನಲ್ಲಿ ಓದುತ್ತಿದ್ದಾಗ SRS ಮೇಷ್ಟ್ರು... ozymodias ಇಂಗ್ಲೀಷ್ ಪದ್ಯದ ಪಾಠ ಮಾಡುತ್ತಾ, ಆಗಿನ ಕಾಲದ ರಾಜರುಗಳು ತಮ್ಮ ಗೋರಿಯ ಮೇಲೆ ಅಥವಾ ತಮ್ಮ ಪ್ರತಿಮೆಗಳ ಮುಂದೆ ತಮಗೆ ಬೇಕಾದಂತೆ ತಮ್ಮನ್ನು ಹೊಗಳುವ ಸಾಲುಗಳನ್ನು ಬರೆಸುತ್ತಿದ್ದರು, ಎಂದು ಹೇಳಿದ ಮಾತುಗಳು ನೆನಪಿಗೆ ಬಂದು ಅವು ಸಹ ಬಲವಂತದ ಚರಮ ಗೀತೆಗಳು ಇರಬಹುದಲ್ಲವೇ ಎಂದೆನಿಸಿತು.
ಚರಮ ಗೀತೆಗೆ ನಮ್ಮ ಸಾಹಿತ್ಯದಲ್ಲಿ ಅದರದೇ ಆದ ವಿಶಿಷ್ಟ ಸ್ಥಾನವಿದೆ.
ಮೊದಲು ನೆನಪಾಗುವುದೇ - ಭೋಜರಾಜ ಕಾಳಿದಾಸನ ಪ್ರಸಂಗ. ಭೋಜರಾಜನಿಗೆ ಕಾಳಿದಾಸನಿಂದ ತನ್ನ ಚರಮಗೀತೆಯನ್ನು ಕೇಳಲು ಆಸೆ. ಚರಮಗೀತೆ ಹೇಳುವುದು ಸತ್ತ ನಂತರ ಹಾಗಾಗಿ ಕಾಳಿದಾಸ ಒಪ್ಪದೇ ಇದ್ದಾಗ ಅವನನ್ನು ದೇಶದಿಂದ ಗಡೀಪಾರು ಮಾಡುತ್ತಾನೆ. ಸನ್ಯಾಸಿಯ ವೇಷದಲ್ಲಿ ಧಾರಾ ನಗರದ ಮಾಂಸದಂಗಡಿಯ ಬಳಿ ಇದ್ದ ಕಾಳಿದಾಸನನ್ನು ಬುಡುಬುಡಿಕೆಯವನ ವೇಷದಲ್ಲಿದ್ದ ಭೋಜರಾಜ ಕಾಳಿದಾಸನನ್ನು ಗುರುತಿಸಿ... ಮಾಂಸದಂಗಡಿಯಲ್ಲಿ ಸಂನ್ಯಾಸಿಗೇನು ಕೆಲಸ ಎಂದು ಕೇಳುತ್ತಾನೆ. ಅದಕ್ಕುತ್ತರವಾಗಿ ಬಂದ “ರಾಜನಿಂದ ಬಹಿಷ್ಕರಿಸಲ್ಪಟ್ಟ ಪ್ರಜೆಗೆ ಇನ್ನೆಲ್ಲಿ ಜಾಗ” ಎಂಬ ಮಾತನ್ನು ಕೇಳಿ ಸಂನ್ಯಾಸಿಯು ಕಾಳಿದಾಸನೇ ಎಂದು ಭೋಜರಾಜನಿಗೆ ಅರಿವಾಗುತ್ತದೆ. ಮಾತಿನ ಮಧ್ಯೆ ಭೋಜರಾಜ ಸತ್ತನೆಂದು ಸನ್ಯಾಸಿಗೆ ತಿಳಿಸುತ್ತಾನೆ.
ಆಗ ಕಾಳಿದಾಸ ಭೋಜರಾಜನಿಗಾಗಿ ಚರಮಗೀತೆ ಹೇಳುತ್ತಾನೆ ಅದೇ:
ಅದ್ಯ ಧಾರಾ ನಿರಾಧಾರಾ ನಿರಾಲಂಬಾ ಸರಸ್ವತಿ ಪಂಡಿತಾಃ ಖಂಡಿತಾಃ ಸರ್ವೇ ಭೋಜರಾಜೇ ದಿವಂಗತೇ. ಭೋಜ ರಾಜ ತಕ್ಷಣ ಸತ್ತು ಬೀಳುತ್ತಾನೆ.. ಆಗ ಕಾಳಿದಾಸ ಕಾಳಿಯನ್ನು ಪ್ರಾರ್ಥಿಸಿ ಮತ್ತೊಂದು ಶ್ಲೋಕವನ್ನು ಹೇಳುತ್ತಾನೆ ಹಾಗೂ ಭೋಜರಾಜನನ್ನು ಬದುಕಿಸಿಕೊಳ್ಳುತ್ತಾನೆ ಎಂಬುದು ಕಥೆಯ ಸಾರಾಂಶ.
ಎರಡನೆಯ ಗೀತೆಯನ್ನು ಕವಿರತ್ನ ಕಾಳಿದಾಸ ಚಿತ್ರದ ರಾಜಕುಮಾರ್ ಹಾಗೂ ಶ್ರೀನಿವಾಸ ಮೂರ್ತಿಯವರ ಅಭಿನಯದ ದೃಶ್ಯದ ಮೂಲಕ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ.
https://youtu.be/lSJauSaUSrg?si=KQXVe6yymQPl_-pd
ಇನ್ನೊಂದು ಕಂತಿ ಹಾಗೂ ಹಂಪ ಇವರ ಪ್ರಸಂಗ. ಕಂತಿ ಕಾಲ್ಪನಿಕ ವ್ಯಕ್ತಿ ಎಂಬ ಅಭಿಪ್ರಾಯವಿದ್ದರೂ ಸಹ, ಹಂಪ ಕೊಟ್ಟ ಸಮಸ್ಯಾತ್ಮಕ ಸಾಲುಗಳಿಗೆ ಆಕೆಯ ಚಮತ್ಕಾರಿಕ ಉತ್ತರಗಳು, ಆಕೆಯ ಜಾಣ್ಮೆಯನ್ನು ಎತ್ತಿ ಹಿಡಿಯುತ್ತದೆ. ಕೆಳಗಿನ ಲಿಂಕ್ ನೋಡಿ.
https://modmani.blogspot.com/2012/02/blog-post_23.html
ಕಂತಿಯ ಬಾಯಿಂದ ಹೊಗಳಿಕೆಯನ್ನು ಕೇಳಲು ಆಸೆ ಪಟ್ಟ ಹಂಪ.. ಕೊನೆಯದಾಗಿ ಹಿಡಿದ ದಾರಿ... ತಾನು ಸತ್ತಿದ್ದೇನೆಂಬ ಸುದ್ದಿಯನ್ನು ಕಂತಿಗೆ ಮುಟ್ಟಿಸಿದ್ದು. ಕಂತಿ ತನ್ನ ದುಃಖವನ್ನು ಪ್ರಕಟಿಸುತ್ತಾ ಹಂಪನನ್ನು ಹೊಗಳುತ್ತಾ... ಸಾಹಿತ್ಯ ಲೋಕಕ್ಕೆ ಆದ ನಷ್ಟವನ್ನು ಹೇಳುತ್ತಾಳೆ. ಇದನ್ನು ಕೇಳಿದ ಹಂಪ ಎದ್ದು ಬರುತ್ತಾನೆ ಎನ್ನುವುದು ನನಗಿರುವ ಮಾಹಿತಿ. ಆದರೆ ಕಂತಿ ಆ ಸಮಯದಲ್ಲಿ ಹೇಳಿದ ಸಾಲುಗಳು ಮಾತ್ರ ನನ್ನ ಗಮನಕ್ಕೆ ಬಂದಿಲ್ಲ... ಯಾರಿಗಾದರೂ ಗೊತ್ತಿದ್ದರೆ ದಯಮಾಡಿ ತಿಳಿಸಿ.
ಸತ್ತವರ ಗುಣಗಾನ ಮಾಡುವುದು, ಹೊಗಳುವುದು ಚರಮಗೀತೆಯ ಉದ್ದೇಶವಾದರೆ, ಬದುಕಿರುವವರ ಗುಣಗಾನ ಮಾಡುವುದು( ಉದ್ದೇಶ ಏನೇ ಆಗಲಿ) ಸರ್ವಕಾಲಕ್ಕೂ ಉಂಟು.
ಮೊದಲನೆಯದಾಗಿ ದೇವರನ್ನು ಹೊಗಳಿ, ನಮ್ಮ ಬೇಡಿಕೆಗಳನ್ನು ಅವನ ಮುಂದಿಡುವುದು.
ಹಿಂದಿನ ಕಾಲದ ರಾಜ ಮಹಾರಾಜರುಗಳು ತಮ್ಮ ಅಹಂನ್ನು ಮೆರೆಸಲು ಹೊಗಳು ಭಟ್ಟರ ತಂಡವನ್ನೇ ಇಟ್ಟುಕೊಂಡಿರುತ್ತಿದ್ದರು. ರಾಜನ ಮುಖಃಸ್ತುತಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಜಾಣರು ಆಗಲೂ ಇದ್ದರು...
ಈಗಿನ ಪ್ರಜಾ ರಾಜ್ಯದಲ್ಲಿ ಮಂತ್ರಿಗಳನ್ನು ಒಲೈಸಿ, ಅವರನ್ನು ಹೊಗಳಿ, ಬಿರುದುಗಳನ್ನು ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಈಗಲೂ ಇದ್ದಾರೆ.
ಇನ್ನೊಂದು ಮುಖ... ಸಮಾಜಕ್ಕೆ ಒಂದಷ್ಟು ಸೇವೆ ಸಲ್ಲಿಸಿದ/ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಧನ್ಯವಾದ ಹೇಳುವ ಪರಿ.
ಇಂತಹ ಸನ್ಮಾನಕ್ಕೆ ನಾನೂ ಭಾಜನನಾಗಿದ್ದೆ ಎಂದು ನೆನೆದಾಗ ಸ್ವಲ್ಪ ಸಂಕೋಚವಾಗುತ್ತದೆ.
ಅಧಿಕಾರ ಹೊಂದಿದ ಗಣ್ಯ ವ್ಯಕ್ತಿಗಳಿಗೆ , ಕೊಡುವ ಅಭಿನಂದನಾ ಪತ್ರಕ್ಕೆ “ಬಿನ್ನವತ್ತಳೆ” ಎಂಬ ಹೆಸರು ಉಂಟು. ಬಿನ್ನವತ್ತಳೆಯಲ್ಲಿ ಬೇಡಿಕೆಗಳು ಸೇರುವುದುಂಟು.
ನನ್ನ ಜೀವನದ ಮೊದಲ ಬಿನ್ನವತ್ತಳೆ ಸಮರ್ಪಣೆ ಕಾರ್ಯಕ್ರಮದಲ್ಲಿ ( ಆಗ ಅದು ಏನು ಎಂದು ತಿಳಿಯದೆ ಇದ್ದರೂ... ಹಿಂತಿರುಗಿ ನೋಡಿದಾಗ ಒಂದಷ್ಟು ಸ್ಪಷ್ಟತೆ ಸಿಕ್ಕಿದೆ ) ಭಾಗವಹಿಸಿದ್ದು ನನ್ನೂರು ದೊಡ್ಡಜಾಲದಲ್ಲಿ. ಭೂದಾನ ಚಳುವಳಿಯ ಅಂಗವಾಗಿ ವಿನೋಬಾ ಭಾವೆಯವರು ( ಅವರ ಗಡ್ಡದ ನೆನಪು ಈಗಲೂ ಇದೆ) ನಮ್ಮೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಾಗ. ಬಸವಣ್ಣನಗುಡಿಯ ಮುಂದೆ ಕಾರ್ಯಕ್ರಮ... ಪೆಟ್ರೋಮ್ಯಾಕ್ಸಿನ ಬೆಳಕು... ಹಿರಿಯರಾದ ವಿಶ್ವೇಶ್ವರ ಶಾಸ್ತ್ರಿಗಳು... ತಾವೇ ತಮ್ಮ ಕೈಯಾರೆ ಬರೆದ ಬಿನ್ನವತ್ತಳೆ ಪತ್ರವನ್ನು ಓದಲು ಶುರು ಮಾಡಿದಾಗ..." ಬಯಸುವೆವು ತಮಗೆ ಸುಖಾಗಮನಂ... ಹಳ್ಳಿಗಾಡಿನ ಬೀದಿಗಳಲ್ಲಿ ಬಯಸುವೆವು ತಮಗೆ ಸುಖಾಗಮನಂ.." ಎಂದು ರಾಗವಾಗಿ ಹಾಡಿ... ನಂತರ ಸುದೀರ್ಘವಾಗಿ ಓದಿ (ವಿಷಯದ ಒಂದು ತುಣುಕೂ ನನಗೆ ನೆನಪಿಲ್ಲ)... ವಿನೋಬಾ ಭಾವೆ ಯವರಿಗೆ ಕೊಟ್ಟು... ನಮಗೆಲ್ಲಾ ಹೇಳಿ ಚಪ್ಪಾಳೆ ಹೊಡೆಸಿದ್ದು.
ನಮ್ಮಪ್ಪ ಶತಾಯುಷಿಯಾದಾಗ... ಗಿರಿನಗರ ಹಿರಿಯ ನಾಗರಿಕರ ವೇದಿಕೆ ಹಾಗೂ ಬಡಗನಾಡು ಸಂಘ ಅವರಿಗೆ ಸನ್ಮಾನ ಮಾಡಿ ಕೊಟ್ಟ ಅಭಿನಂದನಾ ಪತ್ರಗಳು ನನ್ನಲ್ಲಿದೆ.
ಇದರ ಮುಂದುವರಿದ ಭಾಗವೇ ಅಭಿನಂದನಾ ಗ್ರಂಥ. ಈ ಗ್ರಂಥದಲ್ಲಿ ಅಭಿನಂದಿಸುವ ವ್ಯಕ್ತಿಯ ಬಗ್ಗೆ... ಅವರ ವಿವಿಧ ಕಾರ್ಯರಂಗದ ಒಡನಾಡಿಗಳು, ಹಾಗೂ ಕೆಲ ಆಯ್ದ ಗಣ್ಯರ ಬರಹಗಳನ್ನು ಜೋಡಿಸಲಾಗಿರುತ್ತದೆ. ಇಲ್ಲಿಯೂ ಬಹಳಷ್ಟು ಹೊಗಳಿಕೆಗಳು ಇದ್ದರೂ... ಒಂದಷ್ಟು ವಸ್ತುನಿಷ್ಠ ಸಂಗತಿಗಳು... ಬೇರೆ ಬೇರೆಯವರ ಅನುಭವದಲ್ಲಿ ಹಾಗೂ ದೃಷ್ಟಿಕೋನದಲ್ಲಿ ಇರುವುದರಿಂದ ವ್ಯಕ್ತಿಯ ಸಮಗ್ರ ಚಿತ್ರಣವು ದೊರೆಯಬಹುದಾದ ಸಾಧ್ಯತೆ ಹೆಚ್ಚು.
ನಾನು ಇಂತಹ ಕೆಲ ಗ್ರಂಥಗಳಿಗೆ ಲೇಖನವನ್ನು ಬರೆದುಕೊಟ್ಟ ಹೆಮ್ಮೆ ಇದೆ.
ಚರಮ ಗೀತೆಗಳು ಹಾಗೂ ಅಭಿನಂದನಾ ಲೇಖನಗಳ ಧ್ಯೇಯ ಒಂದೇ ಆದರೂ ಸಂದರ್ಭಗಳು ಮಾತ್ರ ಸಂಪೂರ್ಣ ಭಿನ್ನ...
ಪಂಜೆ ಮಂಗೇಶರಾಯರ ಮಕ್ಕಳ ಕವನಗಳು ನನಗೆ ತುಂಬ ಪ್ರಿಯ.
ನಾಗರಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ.. ಕೈ ಗಳ ಮುಗಿವೆ ಹಾಲನ್ನೀವೆ ಬಾಬಾ ಬಾಬಾ ಬಾಬಾಬಾ
ಇಂದ ಮೊದಲಾಗಿ ಪ್ರತಿ ಚರಣದ ಕೊನೆಯ ಸಾಲುಗಳ ಓಟ
ಪೋಪೋ ಪೋಪೋ ಪೋಪೋಪೋ
ತಾತಾ ತಾತಾ ತಾತಾತಾ
ನೀನೀ ನೀನೀ ನೀನೀನೀ ...
ಹಾಗೇ
ಬರಲಿದೆ ಬರಲಿದೆ ಆಹಾ ಬರಲಿದೆ
ಬುಸುಗುಟ್ಟುವ ಪಾತಾಳದ ಹಾವೋ
ಇಂದ ಮೊದಲಾಗಿ
ತೆಂಕಣ ಗಾಳಿಯು ಕೊಂಕಣ ಸೀಮೆಗೆ
ಬಂತೈ ಬಂತೈ ಇದೊ ಇದೊ ಬಂತೈ
ಪದ್ಯಗಳನ್ನು ರಾಗವಾಗಿ ಹಾಡುತ್ತಾ, ತಕ್ಕ ಅಭಿನಯ ಮಾಡುತ್ತಿದ್ದ ಆ ಬಾಲ್ಯದ ದಿನಗಳೇ ಸೊಗಸು.
ಅಂತಹ ಕವಿ ಹೃದಯ ತಮ್ಮನನ್ನು ಕಳೆದುಕೊಂಡಾಗ ಬರೆದ ಈ ಸಾಲುಗಳು (ಚರಮಗೀತೆ?) ನನ್ನ ಮೇಲೆ ಪ್ರಭಾವ ಬೀರಿದ್ದು ನಂತರದ ದಿನಗಳಲ್ಲಿ.
ಎಲ್ಲಿ ಹೋದನು ಅಮ್ಮ, ಪುಟ್ಟಣ್ಣ ನಮ್ಮ
ನಿಲ್ಲದವನನು ತರುವೆ ಹುಡುಕಿ ನಾನಮ್ಮ
ಅಲ್ಲಿಲ್ಲ ಇಲ್ಲಿಲ್ಲ ಎಲ್ಲಿಹನು ತಮ್ಮ?
ತಲ್ಲಣಿಸುತಿದೆ ಮನವು ಹೇಳು ಸೀತಮ್ಮ.
"ನೀನು ಭೂಮಿಗೆ ಯಾವುದೇ ಕಾರಣಕ್ಕೂ ಮತ್ತೆ ಬರಬೇಡ" ಎಂಬ ಸಮಾಧಿಯ ಮೇಲಿನ ಬರಹವನ್ನು ಹೇಗೆ ಅರ್ಥೈಸಲಿ? ಮತ್ತೆ ಹುಟ್ಟಿ ಬಾ ಎಂಬುದರ ವಿರುದ್ಧ ಅರ್ಥವೋ ಅಥವಾ ಪುನರ್ಜನ್ಮ ಬೇಡ ಎಂಬ ಹಾರೈಕೆಯೋ...
ನನ್ನ ಚರಮಗೀತೆ ಯನ್ನು ನಾನೇ ಬರೆಯ ಬೇಕೆಂಬ ಹಂಬಲವೂ ಚಿಗುರೊಡೆದಿದೆ. ಬರೆದಾದಮೇಲೆ ಅದನ್ನು ನಿಮಗೆ ತಲುಪಿಸುವ (ದುರಾಸೆ ಎನ್ನ ಬಹುದೇ) ಬಗೆ ಹೇಗೆ ಎಂದು ನಿರ್ಧಾರ ವಾದ ಮೇಲೆ ಮುಂದಿನ ಹೆಜ್ಜೆ.
ಮುಗಿಸುವ ಮುನ್ನ:
ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಬದುಕನ್ನು ಜಟಕಾ ಬಂಡಿಗೆ ಹೋಲಿಸುತ್ತಾ “ಮದುವೆಗೋ ಮಸಣಕೊ ಹೋಗೆಂದ ಕಡೆ ಹೋಗು...” ಎಂದು ಹೇಳಿದ್ದನ್ನು ಅಕ್ಷರಶಃ ಪರಿಪಾಲಿಸುತ್ತಾ... ಮಾವನ ಅಂತ್ಯ ಸಂಸ್ಕಾರಕ್ಕೆ ಮಸಣಕ್ಕೆ ಹೋಗಿದ್ದಾಯ್ತು....
ಭಾನುವಾರ ಮದುವೆಯ 50ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಹೋಗಿದ್ದೂ ಆಯ್ತು.
ಮೈಸೂರಿನಲ್ಲಿ ನನ್ನಣ್ಣ ಸತ್ತಿ ಸರ್ ಹಾಗೂ ಸರೋಜಾ ಅತ್ತಿಗೆ ಅವರ ವೈವಾಹಿಕ ಜೀವನ ಐವತ್ತು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ, ಮಗಳು ಸುಮಾ ಹಾಗೂ ಅಳಿಯ ಹೇಮಂತ್ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಹೋಮ, ಹವನ, ಶಿವನಿಗೆ ರುದ್ರಾಭಿಷೇಕ, ಪುಷ್ಕಳವಾದ ಊಟ, ನಂತರ ಎಲ್ಲರನ್ನೂ ಒಂದುಗೂಡಿಸಿ ಒಂದಷ್ಟು ಮನರಂಜನೆ ಹಾಗೂ ಆಟಗಳಲ್ಲಿ ಭಾಗವಹಿಸಿ, ನೆಂಟರು ಇಷ್ಟರೊಡನೆ ಸಂಭ್ರಮ ಪಟ್ಟಿದ್ದಾಯಿತು.
ಬದುಕಿನ ಬಂಡಿ ಸಾಗುತ್ತಿದೆ... ಮುಂದೆ ಬರಲಿರುವುದನ್ನು ಅನುಭವಿಸಲು ಮನಸ್ಸು ಸಜ್ಜಾಗುತ್ತಿದೆ.
ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ.. ಎಂದು ಗುಣುಗುಣಿಸುತ್ತಾ..
ನಮಸ್ಕಾರ
D C Ranganatha Rao
9741128413
Comments
Post a Comment