ಮಂತ್ರಾಲಯಕೆ ಹೋಗೋಣ...
ಮಳೆ ಹನಿಗಳ ಸಿಂಚನ ಮೈ ಮೇಲೆ, ಮಂತ್ರಾಲಯಕೆ ಹೋಗೋಣ.. ಗುರುರಾಯರ ದರುಶನ ಮಾಡೋಣ.. ಎಂಬ ಹಾಡು ಕಿವಿಯ ಮೇಲೆ, ಝಗಮಗಿಸುವ ದೀಪಾಲಂಕಾರ ಕಣ್ಣಿಗೆ, ಮಳೆಯಲ್ಲೇ ಸಡಗರದಿಂದ ಓಡಾಡುತ್ತಿದ್ದ ಜನಸಾಗರ... ಇದು ಮೊನ್ನೆ ಭಾನುವಾರ ಮಂತ್ರಾಲಯದ ನೆಲದ ಮೇಲೆ, ಮಗಳು, ಮೊಮ್ಮಗಳೊಡನೆ ಕಾಲಿಟ್ಟಾಗ ನನಗಾದ ಅನುಭವ.
ಪ್ರಯಾಣ ಮಾಡಿ ದಣಿದಿದ್ದ ಕಾರಣ, ಕೈಕಾಲು ಮುಖ ತೊಳೆದು ಬರಲೂ ಸಹ ಸಮಯ ಇಲ್ಲದಂತೆ ದರ್ಶನದ ಸಮಯ ಕೊನೆಯ ಹಂತದಲ್ಲಿತ್ತು. ಹೊರಗಿಂದಲೇ ಕೈಮುಗಿದು, ನಮ್ಮ ಕೋಣೆಗೆ ಬಂದು ವಿರಮಿಸಿದ್ದಾಯ್ತು.
ಕಾಲ ಸರಿದಂತೆ ಜೀವನಶೈಲಿಯಲ್ಲಿ ಬದಲಾವಣೆಗಳು ಬಂದು... ಸೆಖೆಯನ್ನು ನೀಗಲು ಫ್ಯಾನ್ ಹಾಗೂ AC ಯ ಅನುಕೂಲತೆಗಳು ನಮ್ಮ ಕೋಣೆಯಲ್ಲಿದ್ದವು. ಮಗಳು ಮೊಮ್ಮಗಳ ಜೊತೆಯಲ್ಲಿ ಒಂದಿಷ್ಟು ಮಾತು ಆಟ ಆಡಿ ಮಲಗಲು ಅಣಿಯಾದರೂ... ತಕ್ಷಣ ನಿದ್ರೆ ಬರಲಿಲ್ಲ.... ನೆನಪಿಗೆ ಬಂದದ್ದೇ ಕಷ್ಟದಿಂದ ಕಳೆದ ಆ ರಾತ್ರಿ.....
ಮದುವೆಯಾದ ಹೊಸತು... ಮಂತ್ರಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿ ನಾವಿಬ್ಬರೂ ಹೊರಟೇ ಬಿಟ್ಟೆವು. ಮಂತ್ರಾಲಯವನ್ನು ಮುಟ್ಟಿದಾಗ ಮಧ್ಯಾಹ್ನ... ಸುಡುವ ಬಿಸಿಲು, ಹೇಗೋ ನಮ್ಮ ಹಣಕಾಸಿನ ನಿಲುಕಿನಲ್ಲಿದ್ದ ಒಂದು ಕೋಣೆಯನ್ನು ಆಯ್ಕೆ ಮಾಡಿ ದೇವರ ದರ್ಶನ ಮಾಡಿ... ಆಗೆಲ್ಲಾ ಕೋಣೆಯ ಬಳಿ ಬಂದು ಮಾರುತ್ತಿದ್ದ ಇಡ್ಲಿಯನ್ನು ತಿಂದು ದಿನದ ಕೊನೆಗೆ ಬಂದೆವು. ಫ್ಯಾನಿನ ಗಾಳಿ ಪ್ರಖರ ಸೆಖೆಯೊಡನೆ ಗುದ್ದಾಡಿ ಸೋಲುತ್ತಿತ್ತು, ಗೆಲ್ಲುವ ಪ್ರಯತ್ನ ಮಾಡುತ್ತಲೇ ಇತ್ತು... ದುರ್ದೈವವೋ ಏನೋ ಕರೆಂಟ್ ಕೂಡ ಹೋಗಬೇಕೆ... ತಡೆಯಲಾರದ ಸೆಖೆ, ಎಲ್ಲ ಕಿಟಕಿ, ಇದ್ದ ಸಣ್ಣ ಬಾಲ್ಕನಿಯ ಬಾಗಿಲು ತೆರೆದರೂ ಗಾಳಿಯ ಸುಳಿವಿಲ್ಲ, ಜೊತೆಗೆ ಸೊಳ್ಳೆಯ ಕಾಟ. ಎಷ್ಟೋ ಹೊತ್ತು ಬಾಲ್ಕನಿಯಲ್ಲೇ ಕೂತು, ಪೇಪರ್ ನಲ್ಲಿ ಗಾಳಿ ಹಾಕಿಕೊಂಡು, ತಂಪಾಗುವವರೆಗೂ ಹೇಗೋ ಕಾಲದೂಡಿ, ಕರೆಂಟ್ ಸಹ ಬಂದು ಒಂದಷ್ಟು ಹೊತ್ತು ನಿದ್ದೆ ಮಾಡಲು ಸಾಧ್ಯವಾಯಿತು. ದೇವರ ದರ್ಶನ ಹಾಗೂ ಊಟದ ಅನುಭವಗಳು ನೆನಪಿಗೆ ಬಾರದಿದ್ದರೂ ರಾತ್ರಿ ಅನುಭವ ಮಾತ್ರ ನೆನಪಿನಿಂದ ಇನ್ನೂ ಮಾಸಿಲ್ಲ.
ಬೆಳಿಗ್ಗೆ ಬೇಗ ಎದ್ದು, ತಯಾರಾಗಿ ಉತ್ಸಾಹದ ಬುಗ್ಗೆ ಮೊಮ್ಮಗಳು ಹಾಗೂ ಮಗಳ ಜೊತೆಯಲ್ಲಿ ರಾಯರ ದರ್ಶನ ಮಾಡಲು ಹೊರಟು ಸಂಪ್ರದಾಯದಂತೆ ಮೊದಲು ಮಂಚಾಲಮ್ಮನ ದರ್ಶನಕ್ಕೆ ಹೋದಾಗ ಕಂಡದ್ದು, ಬೃಹತ್ ಪ್ರಾಕಾರದ ಒಂದು ಭಾಗವೇ ಆಗಿದ್ದ ಮಂಚಾಲಮ್ಮನ ಗುಡಿ.
ಮಂಚಾಲಮ್ಮನ ದರ್ಶನ ಮುಗಿಸಿ, ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನಕ್ಕೆ ಹೊರಟಾಗ ಕಂಡಿದ್ದು ಜನಗಳು ಸಲ್ಲಿಸುತ್ತಿದ್ದ ಪ್ರದಕ್ಷಿಣೆ ನಮಸ್ಕಾರ, ದಾಪುಗಾಲು ಹಾಕಿ ನಮಸ್ಕಾರ, ಹೆಜ್ಜೆಯ ನಂತರ ಅದಕ್ಕೆ ತಗಲುವ ಹಾಗೆ ಮತ್ತೊಂದು ಪಾದವಿಟ್ಟು ಪ್ರದಕ್ಷಿಣೆ ಹಾಕುವವರು, ಉರುಳುಸೇವೆ, ದೀರ್ಘದಂಡ ನಮಸ್ಕಾರಗಳು ಹೀಗೆ ವಿವಿಧ ಸೇವೆಗಳು, ಅವರ ಇಷ್ಟದಂತೆ / ಹರಕೆ ಹೊತ್ತಂತೆ.
ದೇವರ ದರ್ಶನ, ಮಂಗಳಾರತಿ, ತೀರ್ಥ ಹಾಗೂ ಮಂತ್ರಾಕ್ಷತೆಗಳನ್ನು ಪಡೆದು, ನಮ್ಮ ನಮಸ್ಕಾರಗಳನ್ನು ಮುಗಿಸಿ, ಸ್ವಲ್ಪ ಹೊತ್ತು ಕೂತು ಜನಗಳ ಭಕ್ತಿಯನ್ನು ಮತ್ತೊಮ್ಮೆ ಗಮನಿಸುತ್ತಾ ಕಳೆದ ಕ್ಷಣಗಳು ಮಧುರ. ಪ್ರಾಕಾರವನ್ನು ತಂಪಾಗಿಡಲು ಬೃಹತ್ ಫ್ಯಾನ್ ಗಳನ್ನು ಹಾಕಿದ್ದು ಅನುಕೂಲವಾಗಿತ್ತು.
https://drive.google.com/file/d/1HGc9m06yPTj79N9lGr621aLtwCRyKfy5/view?usp=drivesdk
ದೇವಸ್ಥಾನದ ಹೊರಭಾಗಕ್ಕೆ ಬಂದು ಸುತ್ತಮುತ್ತ ಓಡಾಡಿದಾಗ ಕಂಡದ್ದು ವೈಭವೋಪೇತವಾದ, ರಾಜಮಾರ್ಗದಂತೆ ಕಾಣುತ್ತಿದ್ದ ವಿಶಾಲವಾದ ರಸ್ತೆ, ಅಕ್ಕ ಪಕ್ಕದಲ್ಲಿ ಸುಂದರವಾದ ಭಿತ್ತಿ ಚಿತ್ರಗಳನ್ನು ಒಳಗೊಂಡ ಕಟ್ಟಡಗಳು.
ಅಬ್ಬಾ... ಎಷ್ಟು ಬದಲಾವಣೆಗಳು.. ಮೊದಲ ಬಾರಿ ಮಂತ್ರಾಲಯಕ್ಕೆ ಬಂದದ್ದು, 52 ವರ್ಷಗಳ ಹಿಂದೆ ಶಹಾಬಾದಿನಲ್ಲಿದ್ದಾಗ, ಹೋಲಿ ಹಬ್ಬದ ರಜೆಯ ದಿನ. ಎಲ್ಲಾ ಬ್ರಹ್ಮಚಾರಿಗಳ ಗುಂಪು... ಬ್ರಹ್ಮಚಾರಿ ಶತಮರ್ಕಟಃ ಎನ್ನುವ ಅಭಿದಾನಕ್ಕೆ ತಕ್ಕಂತೆ ನಮ್ಮ ನಡೆ ನುಡಿಗಳು. ನಾವು ಬಂದ ಬಸ್ಸು ದೇವಸ್ಥಾನದ ಮುಂದೆಯೇ ಬಂದು ನಿಂತಿತ್ತು. ಜಾಗ ಅಷ್ಟೇನೂ ಸ್ವಚ್ಛ ವಾಗಿರಲಿಲ್ಲ. ಇಡ್ಲಿ ಮಾರುತ್ತಿದ್ದ ಹುಡುಗನ ತಪ್ಪಲೆಯಲ್ಲಿದ್ದ ಅಷ್ಟೂ ಇಡ್ಲಿ ಚಟ್ನಿಯನ್ನು ವ್ಯಾಪಾರ ಮಾಡಿ ತಿಂದು ಸುಖಿಸಿದ್ದು... ತುಂಬು ಹರಿಯುತ್ತಿದ್ದ ನದಿಯಲ್ಲಿ ಈಜಾಡಿದ್ದು... ದೇವರ ದರ್ಶನ, ಪುಷ್ಕಳವಾದ ಊಟ ಮುಗಿಸಿ ಸುತ್ತಾಡಲು ಹೊರಟಾಗ ಕಂಡಿದ್ದು. .. ಕಾಮಣ್ಣನ ಹಬ್ಬವನ್ನು ಆಚರಿಸುತ್ತಿದ್ದ ಪಡ್ಡೆ ಹುಡುಗರ ಗುಂಪು. ಕಾಮಣ್ಣನ ಹಬ್ಬ ಆದಕಾರಣ ಅಶ್ಲೀಲ ಮಾತುಗಳಿಗೆ ಅಪ್ಪಣೆ ಇದ್ದಂತೆಯೇ.. ಅವು ಓತಪ್ರೋತವಾಗಿ ಹರಿಯುತ್ತಿತ್ತು. ನಾವುಗಳು ಅದನ್ನು ಕೇಳಿ ಸಂತೋಷಪಟ್ಟಿದ್ದು ಸತ್ಯ.
ದೇವರ ಸನ್ನಿಧಿಗೆ ಬಂದರೂ ಕಾಮನೆಗಳಿಂದ ಹೊರತಾಗುವುದು ಅಷ್ಟು ಸುಲಭವಲ್ಲ. ಕಾಮನನ್ನು ಸುಟ್ಟರೆ ಕಾಮನೆಗಳು ಸುಟ್ಟು ಬೂದಿಯಾಗುತ್ತವೆ ಎಂದು ನಂಬಿದರೂ, ಕಾಮನೆಗಳು ಫೀನಿಕ್ಸ್ ಪಕ್ಷಿಯಂತೆ ಬೂದಿಯಿಂದಲೇ ಎದ್ದು ಬರುತ್ತವೆ, ರೆಕ್ಕೆಪುಕ್ಕ ಬಿಚ್ಚಿ ಹಾರುತ್ತವೆ, ಕಾಡುತ್ತವೆ ಸಹ. ಅದು ಪ್ರಕೃತಿ ನಿಯಮ. ಬಹುಶಃ ಯಾರೂ ಹೊರತಲ್ಲ.
ಮಗಳಿಗೆ ಹಿಂದಿನ ಪರಿಸ್ಥಿತಿಯನ್ನು ವಿವರಿಸುತ್ತಾ ಹೊರಟಿದ್ದು ನದಿಯ ಕಡೆಗೆ. ತುಂಗಭದ್ರೆಯು ಸೊರಗಿದ್ದಳು. ನೀರಿನ ಹರಿವು ತಲುಪಲು ಸಾಕಷ್ಟು ದೂರ ನಡೆಯಬೇಕಾಯಿತು. ನೀರಿನಲ್ಲಿ ಕಾಲಿಡುವ ಮೊಮ್ಮಗಳ ಆಸೆಯಂತೆ.. ಅವಳನ್ನು ನೀರಿನಲ್ಲಿ ಆಡಿಸಿ ಖುಷಿಪಡಿಸಿದ್ದಾಯಿತು.
ಅಲ್ಲಿ ಬಿದ್ದಿದ್ದ ಕೊಳಕನ್ನು ನೋಡಿ ಖೇದವಾಯಿತು. ನಾವುಗಳು ಯಾವ ಕಾಲಕ್ಕೆ ಬದಲಾಗಿ ಪರಿಸರವನ್ನು ಸ್ವಚ್ಛವಾಗಿಡಲು ಕಲಿಯುತ್ತೇವೋ? ಇದೊಂದು ನನ್ನ ಮುಂದಿರುವ ಯಕ್ಷಪ್ರಶ್ನೆ... ಉತ್ತರ ನನ್ನ ಜೀವಿತದಲ್ಲಿ ಸಿಗಲೊಲ್ಲದೇನೋ. ನಿಮಗಾಗಿ ಒಂದು ವಿಡಿಯೋ ತುಣುಕು... ನೋಡಿ.
https://drive.google.com/file/d/1IdMrFvxMJQlEHjfKOg8CZ9YrHHcHaH6q/view?usp=drivesdk
ತುಂಬು ಹರಿಯುತ್ತಿದ್ದ ತುಂಗಭದ್ರೆಯನ್ನೂ ಮಂತ್ರಾಲಯದಲ್ಲಿ ನೋಡಿದ್ದೇನೆ... ಅಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ಯುವಕನ ಕಳೇಬರದ ಮುಂದೆ ಗೋಳಾಡುತ್ತಿದ್ದ ಅಮ್ಮನ ಚಿತ್ರಣವು ಕಣ್ಣ ಮುಂದೆ ಬಂತು. ವಿಧಿಯಾಟ ತಪ್ಪಿಸಲು ಯಾರಿಂದಲೂ ಆಗದು, ಅನುಭವಿಸಲೇಬೇಕು.
ರಾಘವೇಂದ್ರ ಸ್ವಾಮಿಯ ಮಠದ ವತಿಯಿಂದ ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಾಕಿದ ಊಟದ ರುಚಿಯನ್ನು ಬಣ್ಣಿಸಲಾರೆ. ಕಾರಣ ಏನೇ ಇರಲಿ, ನನಗಂತೂ ದೇವಸ್ಥಾನದ ಊಟ ತುಂಬಾ ಇಷ್ಟ. ಬರುವ ಅಷ್ಟು ಜನಕ್ಕೆ, ಊಟ ಹಾಕುವುದು ಸಾಮಾನ್ಯ ಸಂಗತಿ ಏನಲ್ಲ. ಅನ್ನದಾನಕ್ಕಾಗಿ ಹಣ ಕೊಡುವ ದಾನಿಗಳು ಬಹಳಷ್ಟು ಇದ್ದರೂ.. ಅದನ್ನು ಅನುಚಾನವಾಗಿ ಕಾರ್ಯರೂಪಕ್ಕೆ ತಂದು, ಎಲ್ಲರಿಗೂ ಉಣ್ಣುವುದಕ್ಕಿಕ್ಕುವ ಕೆಲಸ ಅಸಾಮಾನ್ಯವಾದುದು.
ನೆಲವನ್ನು ಅಚ್ಚುಕಟ್ಟಾಗಿ ತೊಳೆದು... ಅದರ ಮೇಲೆ ಎಲ್ಲವನ್ನು ಬಡಿಸಿಕೊಂಡು ಊಟ ಮಾಡುವ ಹರಕೆಯನ್ನು ಈ ಬಾರಿ ಕಣ್ಣಾರೆ ಕಂಡೆ. ಅವರವರ ಭಾವ ಅವರವರ ಭಕುತಿ.. ಅದಕ್ಕೆ ಪೂರಕವಾದ ಕ್ರಿಯೆ.
ಈ ಬಾರಿ ನನ್ನ ಗಮನಕ್ಕೆ ಬಂದದ್ದು ಒಂದು ವಿಶೇಷ ಫಲಕ..
ಇದನ್ನು ಓದಿದಾಗ ನನಗನಿಸಿದ್ದು... ರಾಯರು ನಮ್ಮೊಡನೆ ಇದ್ದಾರೆ ಎಂದು ಭಾವಿಸಿದಾಗ ನಮ್ಮಲ್ಲಿ ಮೂಡುವ ಆತ್ಮವಿಶ್ವಾಸ... ಇದು ಜೀವನವನ್ನು ನೋಡುವ ಧನಾತ್ಮಕ ದೃಷ್ಟಿ... ಇದರಿಂದ ಕಷ್ಟಗಳನ್ನು ಪರಿಹರಿಸಲು ದೇವರ ಮೇಲೆ ಭಾರ ಹಾಕುವ ಬದಲು, ಅದನ್ನು ಎದುರಿಸುವ ಶಕ್ತಿ ನಮ್ಮೊಳಗೆ ಸ್ಫುರಿಸಿ ಬೆಳೆಸಲು ಸಾಧ್ಯ ಎನ್ನುವ ಮನೋಭಾವ.
ಗಜಾನನ ಶರ್ಮ ಎಂಬುವರು ಬರೆದ ರಾಮನ ಮೇಲಿನ ಈ ಸಾಲುಗಳು
" ಕಷ್ಟಗಳ ಕೊಡಬೇಡ ಎನಲಾರೆ ರಾಮ, ಕಷ್ಟ ಸಹಿಸುವ ಸಹನೆ ಕೊಡು ಎನಗೆ ರಾಮ... ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ, ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ "
ನನಗೆ ಅಚ್ಚುಮೆಚ್ಚು. ಈ ಭಾವವು ಧನಾತ್ಮಕ ಚಿಂತನೆಯನ್ನು ಉದ್ದೀಪನಗೊಳಿಸುತ್ತದೆ.
ಅಚ್ಚುಕಟ್ಟಾಗಿ ಜೋಡಿಸಿದ್ದ / ಪ್ರದರ್ಶಿಸಿದ್ದ ವಸ್ತು ಸಂಗ್ರಹಾಲಯವು... ವಸ್ತುಗಳಿಗೂ ಮಿಕ್ಕಿ, ಬೃಹತ್ ಗ್ರಂಥದಂತೆ ಗೋಚರಿಸಿತು. ಮಾನವ ವಿಕಾಸದಿಂದ ಮೊದಲ್ಗೊಂಡು ಓಂಕಾರ, ಅಕ್ಷರಗಳು, ಸೂರ್ಯ ಮಂಡಲ ಹೀಗೆ ಹಿಂದೂ ಧರ್ಮದ ಬಗ್ಗೆ ನಾನಾ ವಿಷಯಗಳನ್ನು ಒಳಗೊಂಡ ಲೇಖನಗಳ ಪ್ರದರ್ಶಿಕೆ... ಸಮಯಾವಕಾಶದ ಕೊರತೆಯಿಂದ ಪೂರ್ತಿ ಓದಲು ಸಾಧ್ಯವಾಗದೆ ಇರುವಂತಹದು. ಗಹನವಾದ ವಿಚಾರಗಳನ್ನು ಒಳಗೊಂಡ ಅವುಗಳನ್ನು ಓದು ಅನ್ನುವುದಕ್ಕಿಂತ ಅಧ್ಯಯನ ಮಾಡು ಎಂದು ಹೇಳುವುದು ಹೆಚ್ಚು ಸೂಕ್ತ. ಅದಕ್ಕೆ ಬೇಕಾದ ಮನಸ್ಥಿತಿ ಹಾಗೂ ಸಮಯ ಎರಡನ್ನೂ ಆ ಜಾಗದಲ್ಲಿ ಹೊಂದಿಸಿಕೊಳ್ಳುವುದು ಸಾಮಾನ್ಯ ಮನುಷ್ಯರಿಗೆ ಕಷ್ಟವೆಂದೇ ನನ್ನ ಭಾವನೆ.
ಮೊದಲಾದ ಎಲ್ಲಕ್ಕೂ ಕೊನೆಯೆಂಬುದು ಇರಲೇಬೇಕಲ್ಲವೇ... ಮಂತ್ರಾಲಯ ಪುಣ್ಯ ಕ್ಷೇತ್ರದ ನಮ್ಮ ಭೇಟಿಯು ಕೊನೆಗೊಂಡು, ಮೂರು ಘಂಟೆಯಕಾಲ ತಡವಾದ ಟ್ರೈನಿನಲ್ಲಿ ಕೂತಾಗ ಒಂದು ತರಹದ ನೆಮ್ಮದಿ.
ಈ ಎರಡು ದಿನಗಳ ಮಗಳ ಜೊತೆಯ ಓಡಾಟದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ನಾನು ಕಂಡೆ. ಇಷ್ಟು ದಿನ ಮಗಳನ್ನು, ನನ್ನ ಜವಾಬ್ದಾರಿಯಲ್ಲಿ ಕರೆದುಕೊಂಡು ಹೋಗುತ್ತಿದ್ದೆ ಎಂದೇ ಅನಿಸುತ್ತಿತ್ತು... ಆದರೆ ಈ ಬಾರಿ ಮಗಳು ನನ್ನ ಬಗ್ಗೆ ತೋರಿಸಿದ ಕಾಳಜಿ, ಕೈಜೋಡಿಸುತ್ತಿದ್ದ ರೀತಿ... ನಾನೇ ಅವಳ ಮಗುವೇನೋ ಎಂದು ಭಾಸವಾಗುತ್ತಿತ್ತು... ಹಾಗೆಯೇ ಇರುವ ಮನೋಭೂಮಿಕೆಯನ್ನು ನನಗೆ ಕೊಡು ಗುರುವೇ ಎಂದು ಕೇಳಿಕೊಂಡೆ. ಬೇಕಾದ ಅನುಕೂಲಗಳೆಲ್ಲವನ್ನೂ, ತನ್ನದೇ ರೀತಿಯಲ್ಲಿ ಏರ್ಪಾಡು ಮಾಡಿದ ಅವಳ ಚಾಕಚಕ್ಯತೆಯ ಬಗ್ಗೆಯೂ ಹೆಮ್ಮೆಯಾಯಿತು, ಎಂಬಲ್ಲಿಗೆ ಮಂತ್ರಾಲಯದ ರಾಯರ ದರ್ಶನ ಕಥನ ಮುಗಿಯಿತು.
ಗುರುಭ್ಯೋಃ ನಮಃ
ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರಿಗೂ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಇರಲಿ ಎಂದು ಬೇಡುತ್ತಾ...
ನಮಸ್ಕಾರ..
ಡಿ ಸಿ ರಂಗನಾಥ ರಾವ್
9741128413
ಮಂತ್ರಾಲಯ,ತಿರುಪತಿ,ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ....ಎಷ್ಟು ಬಾರಿ ಭೇಟಿ ಕೊಟ್ಟರೂ...ಅವ್ಯವಸ್ಥೆ, ಜನಸಾಗರ ಕಂಡು
ReplyDeleteಇದೇ ಕಡೆ ಸಲ ಅಂದುಕೊಂಡರೂ...ಕೆಲವೇ ದಿನಗಳ ನಂತರ ಮತ್ತೆ ಹೋಗುವ ತವಕ
ನಿಮ್ಮ ಹಳೆ ಮತ್ತು ಹೊಸ ಅನುಭವವನ್ನು ಸಹಜವಾಗಿ ಬರೆದಿದ್ದೀರಿ...ನಮ್ಮ ದೇಶದ ಬೆನ್ನೆಲುಬು ಈ ನಂಬಿಕೆ...ಮಂಥನ ಅಥಾವ ಯಾವುದೇ ವಿಶ್ಲೇಷಣೆಗೆ ನಿಲುಕದ ವಿಸ್ಮಯ ನಮ್ಮ ದೇಶ..
ಒಂದೆಡೆ ಮನೆಯೇ ಮಂತ್ರಾಲಯ ಎಂಬ ನುಡಿ ಮತ್ತೊಂದೆಡೆ ಇಡೀ ದೇಶದ ದೇವಾಲಯಗಳನ್ನು ವೀಕ್ಷಿಸುವ ಬಯಕೆ
ಈ ದ್ವಂದ್ವ ಗಳಿಂದ ರಸಮಯವಾಗಿರುವ
ಬದುಕು....
ಮತ್ತೊಂದು ಸಹಜ ಸರಳ ಲೇಖನಕ್ಕೆ ಧನ್ಯವಾದಗಳು
ಬಾಬು
🙏🙏🙏
ReplyDeleteGood narration sir
ReplyDeleteತಿರುಪತಿಗೆ ಹೋಲಿಸಿದಲ್ಲಿ ಮಂತ್ರಾಲಯದಲ್ಲಿ ರಾಯರ ದರ್ಶನ ಸುಲಭವಾಗಿ ಆಗುತ್ತದೆ.. ತುಂಗಾ ನದಿ ಹಾಗೂ ಮಂತ್ರಾಲಯದ ಪರಿಸರ ಇತ್ತೀಚೆಗೆ ಶುಭ್ರವಾಗಿದೆ ಆದಾಗಿಯೂ ಕೆಲವು ಅನಾಗರಿಕ ಭಕ್ತರಿಂದ ಪರಿಸರ ಸ್ವಲ್ಪ ಕಲುಷಿತವಾಗಿದೆ.
ReplyDeleteಲೇಖಕರು ಮಂತ್ರಾಲಯದ ಪ್ರವಾಸದ ವಿವರವನ್ನು ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಿಸಿದ್ದಾರೆ.
ಮಂತ್ರಾಲಯದ ಹತ್ತಿರವೇ ಇರುವ ಪಂಚಮುಖಿ ದೇವಸ್ಥಾನ,ಬಿಚ್ಚಾಲೆ ಹಾಗೂ ಅಪ್ಪಣ್ಣಾಚಾರ್ಯರ ಗೃಹದ ದರ್ಶನವನ್ನು ಸಹ ಮಾಡಿದ್ದರೆ ಚೆನ್ನಾಗಿರುತ್ತಿತ್ತು.
ಕೊನೆ ಹನಿ:
ಗುರುರಾಯರಿಗೆ ಪ್ರಿಯವಾದ ಪರಿಮಳ ಪ್ರಸಾದವನ್ನು ಏಕೋ ಲೇಖಕರು ಮರೆ ತಂತಿದೆ
ಗುರು ಪ್ರಸನ್ನ
ಚಿಂತಾಮಣಿ
**ಮಂತ್ರಾಲಯಕ್ಕೆ ಹೋಗೋಣ ಶೀರ್ಷಿಕೆಯು ಚೆನ್ನಾಗಿ ಮೂಡಿ ಬಂದಿದೆ.ಮೊದಲ ಸಲ ಮಂತ್ರಾಲಯಕ್ಕೆ ಬೇಟಿ ಕೊಟ್ಟಾಗ ತಮ್ಮ ಅನುಭವಗಳು,ಗುರು ರಾಘವೇಂದ್ರ ಸ್ವಾಮಿಗಳ ದರ್ಶನ, ಭಕ್ತಾದಿಗಳ ವಿವಿಧ ರೀತಿಯ ಹರಕೆ ತೀರಿಸುವ ಪರಿ,ಪ್ರಸಾದ(ಊಟ)ದ ರುಚಿ ಮತ್ತು ನದಿಯಲ್ಲಿನ ಕೊಳೆಯ ಬಗ್ಗೆ ವಿವರಣೆ ಚೆನ್ನಾಗಿ ಬಂದಿದೆ.ಧನ್ಯವಾದಗಳು...ಓಂ ವೆಂಕಟನಾಥಾಯ ವಿದ್ಮಹೀ! ಸಚ್ಚಿದಾನಂದಾಯ ಧೀಮಹೀ!!ತನ್ನೋ ರಾಘವೇಂದ್ರ ಪ್ರಚೋದಯಾತ್ !!!.... ದೇವೇಂದ್ರಪ್ಪ ಬೆಂಗಳೂರು*
ReplyDelete