Air India - ಕೃತಕ ಬುದ್ದಿಮತ್ತೆ





ಜೂನ್ ಹನ್ನೆರಡರಂದು ಅಹಮದಾಬಾದ್ ನಲ್ಲಿ ನಡೆದ    Air India ದ  ನಂಬರ್  A I- 117  ವಿಮಾನದ ಅಪಘಾತದ ಸುದ್ದಿ ನಮ್ಮನ್ನೆಲ್ಲ ಬೆಚ್ಚಿಬೀಳಿಸಿತು. 250 ಕ್ಕೂ ಹೆಚ್ಚು ಜನರು ಸತ್ತಿದ್ದು ನೋವಾಯಿತು. ಅದರಲ್ಲೂ ಹಾಸ್ಟೆಲ್ ನಲ್ಲಿ ಊಟ ಮಾಡುತ್ತಿದ್ದ ಅಮಾಯಕ ವಿದ್ಯಾರ್ಥಿಗಳು ಸತ್ತದ್ದು ವಿಧಿಯಾಟವೇ ಸರಿ.  .... ವಿಶ್ವ ಕುಮಾರ್ ರಮೇಶ್ ಎಂಬ ಒಬ್ಬರೇ ವ್ಯಕ್ತಿ ಬದುಕುಳಿದದ್ದು ಸಹ ವಿಧಿಯಾಟವೇ.

ಈ ಸುದ್ದಿಯನ್ನು ಓದುವಾಗ ನನಗೆ ಎದ್ದು ಕಂಡದ್ದು A I.  ಪ್ರಸಕ್ತ ಕಾಲಮಾನದಲ್ಲಿ   A I- ಕೃತಕ ಬುದ್ದಿಮತ್ತೆ , ಮುಂಚೂಣಿಯಲ್ಲಿರುವ ವಿದ್ಯಮಾನ. ಎಲ್ಲ ಸ್ತರಗಳಲ್ಲೂ ಅದರ ಉಪಯೋಗ ಅನಿವಾರ್ಯವೋ ಎಂಬಂತೆ ಬೆಸೆದುಕೊಂಡಿದೆ.  ಜೊತೆಗೆ ಅದರಿಂದ ಆಗಬಹುದಾದ  ಅನಾಹುತಗಳ ಬಗ್ಗೆ ಚರ್ಚೆ, ಚಿಂತನೆಗಳು...  ಮನುಷ್ಯನ ಬುದ್ಧಿಮತ್ತೆಯ ಕಣ್ಗಾವಲು ತಪ್ಪಿದರೆ, ಮನುಷ್ಯನನ್ನೇ ನುಂಗುವ ಪರಿಸ್ಥಿತಿ ಬರಬಹುದು ಎನ್ನುವ ವಿಚಾರ ಚಾಲ್ತಿಯಲ್ಲಿವೆ.  

ತನ್ನ ಕೈಯನ್ನು ಬೇರೆಯವರ ತಲೆಯ ಮೇಲೆ ಇಟ್ಟು ಸುಡುವ ಶಕ್ತಿಯ ವರವನ್ನು  ಶಿವನಿಂದ  ಪಡೆದ ಭಸ್ಮಾಸುರ, ಶಿವನ ಮೇಲೆ ಪ್ರಯೋಗ ಮಾಡಲು ಹೊರಟಂತೆ, ಕೊನೆಗೆ ವಿಷ್ಣು ಮೋಹಿನಿ ರೂಪದಲ್ಲಿ ಬಂದು ಭಸ್ಮಾಸುರನನ್ನು ಕೊಂದಂತೆ... ಕೃತಕ ಬುದ್ಧಿಮತ್ತೆಯು ಮಾನವನ ಜೀವನ ಶೈಲಿಯ ಮೇಲೆ ಸವಾರಿ ಮಾಡದಂತೆ, ಕಟ್ಟುಪಾಡುಗಳನ್ನು ಮಾಡಬೇಕಾದ ಅವಶ್ಯಕತೆ ಇದೆ.

ಬಹುತೇಕ ವಿಮಾನ ಚಾಲನೆಯ ವಿಧಿ ವಿಧಾನಗಳು ಕೃತಕ ಬುದ್ಧಿಮತ್ತೆಯಿಂದಲೇ (AI) ನಡೆಯುತ್ತದೆ. ಎಲ್ಲ ರೀತಿಯ ಸುರಕ್ಷತೆ ಸಂಬಂಧಿ ಪರೀಕ್ಷೆಗಳೆಲ್ಲ ನಡೆಯುವುದು ಕೃತಕ ಬುದ್ಧಿಮತ್ತೆಯಿಂದಲೇ. ಹೀಗಿದ್ದಾಗ, ಅಪಘಾತದ ಮುನ್ಸೂಚನೆಯನ್ನು ಕೊಡಲು ಕೃತಕ ಬುದ್ಧಿಮತ್ತೆಗೆ ಆಗಲಿಲ್ಲವೇ? ಅಥವಾ ಕೆಲ ತಜ್ಞರು ಊಹಿಸುತ್ತಿರುವಂತೆ  ವಿಧ್ವಂಸಕ ಕೃತ್ಯ ಇರಬಹುದೇ?  (ಕೃತ್ರಿಮ ಬುದ್ಧಿಮತ್ತೆ   Atrocious  Intelligence ಏನಾದರೂ ಕೆಲಸ ಮಾಡಿತೇ...) ಇದು ಎಲ್ಲ ರೀತಿಯ ತನಿಖೆಯ ನಂತರ ತಿಳಿಯಬಹುದು ... ಅದರಲ್ಲೂ ಸ್ವಹಿತ ಕಾಪಾಡಿಕೊಳ್ಳುವ ಜನರ ಒತ್ತಾಸೆಯಿಂದ ತನಿಖೆಯ ವರದಿಯೂ ದಾರಿ ತಪ್ಪಬಹುದು. ಇದು ಇಂದಿನ ಪರಿಸ್ಥಿತಿ.

ಕೃತಕ ಬುದ್ಧಿಮತ್ತೆಯನ್ನು (AI)  ರೂಪಿಸಿದ್ದು ಮನುಷ್ಯನ ಬುದ್ಧಿವಂತಿಕೆಯಿಂದಲೇ.. ಹಾಗಾಗಿ ಅದನ್ನು ಪಾಲಿಸುವ , ಧಿಕ್ಕರಿಸುವ ಅಥವಾ ತಿರುಚುವ ಕೆಲಸವನ್ನು ಮನುಷ್ಯನು ಮಾಡಬಲ್ಲ. ಉಪಯೋಗಿಸುವ ಪರಿ ವೈಯುಕ್ತಿಕ ನೆಲೆಯ ಚಿಂತನೆಗೆ ಬಿಟ್ಟಿದ್ದು.

ಈ ತಿರುಚುವ ಕೆಲಸವನ್ನು ವಿನಾಶಕ್ಕಾಗಿ ಉಪಯೋಗಿಸಿದಾಗ ಅದನ್ನು Atrocious Intelligence ಅಥವಾ ಕೃತ್ರಿಮ ಬುದ್ದಿಮತ್ತೆ ಎಂದು ಕರೆಯಬಹುದು ಎನ್ನುವ ಸಲಹೆ ನನ್ನದು. 

ಕೃತಕ ಬುದ್ಧಿಮತ್ತೆಯಿಂದ , ಬಹಳಷ್ಟು ಕೆಲಸಗಳು ಮಾಡಲು ತುಂಬಾ ಸುಲಭ ಹಾಗೂ ಅನುಕೂಲವಾಗಿರುವುದು ನಿಜವಾದರೂ, ಅದು ನಿರ್ಲಿಪ್ತ. ಭಾವನೆಗಳಿಗೆ ಅಲ್ಲಿ ಜಾಗವಿಲ್ಲ. ಭಾವನೆಗಳಿಗೆ ಸ್ಪಂದಿಸಬೇಕಾದರೆ ಭಾವನಾತ್ಮಕವಾಗಿ ಯೋಚಿಸುವ ಶಕ್ತಿ ಬೇಕು. ಹಾಗಾಗಿ ಭಾವನಾತ್ಮಕವಾಗಿ ಸ್ಪಂದಿಸಬೇಕಾದ ವಿಷಯಗಳಿಗೆ ಕೃತಕ ಬುದ್ಧಿಮತ್ತೆಯು ಉಪಯೋಗಕ್ಕೆ ಬಾರದು. ಆ ಶಕ್ತಿಯನ್ನು ಕೃತಕ ಬುದ್ಧಿಮತ್ತೆಗೆ ಕೊಡಲು ಅಸಾಧ್ಯವೇನೋ? ಕಾಲವೇ ಉತ್ತರ ಹೇಳಬೇಕು.

ಆಪರೇಷನ್ ಸಿಂಧೂರವನ್ನೇ ಉದಾಹರಣೆಗೆ ತೆಗೆದುಕೊಂಡರೆ... ಕೃತಕ ಬುದ್ಧಿಮತ್ತೆಯ ಉಪಯೋಗದಿಂದ ಗಳಿಸಿಕೊಂಡ ಶಕ್ತಿಯೇ... ಪಾಕಿಸ್ತಾನದ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು. ಅದೇ ಕೃತಕ ಬುದ್ಧಿಮತ್ತೆಯ ಮೂಲಕ ಗಳಿಸಿಕೊಂಡ ಶಕ್ತಿಯನ್ನು ಉಪಯೋಗಿಸಿ ಶತೃ ದೇಶದ ಆಯ್ದ ಸ್ಥಳಗಳನ್ನು ಕರಾರುವಕ್ಕಾಗಿ ಗುರುತಿಸಿ ನಾಶ ಮಾಡಲು ಸಾಧ್ಯವಾಯಿತು.

ಮಾನವ ಬುದ್ಧಿಶಕ್ತಿಯಿಂದ ಹೊಂದಿಸಿಟ್ಟ ಅಸಂಖ್ಯ ದತ್ತಾಂಶವನ್ನು (data), ಬಳಸಿಕೊಂಡು , ಅದನ್ನು ಬಹುಮುಖ ಉಪಯೋಗಿ ಕೆಲಸಗಳಿಗೆ ಅನುವು ಮಾಡಿಕೊಡುವುದು ಕೃತಕ ಬುದ್ಧಿಮತ್ತೆಯ ಕೆಲಸ. ಈ ದತ್ತಾಂಶಗಳು ಕಿಡಿಗೇಡಿಗಳ ಕೈಗೆ ಸಿಗದಂತೆ ಕಾಪಾಡುವುದು ಒಂದು ಸವಾಲಿನ ಕೆಲಸವೇ ಸರಿ.  ಅದಕ್ಕೊಂದು ಭದ್ರಕೋಟೆ ಕಟ್ಟುವ, ಜೊತೆಗೆ ಎಲ್ಲಿಯೂ ಸಣ್ಣ ಬಿರುಕು ಮೂಡದ ಹಾಗೆ ಸತತವಾಗಿ ನೋಡಿಕೊಳ್ಳುವುದು ದೊಡ್ಡ  ಜವಾಬ್ದಾರಿ.

ಪರೀಕ್ಷಿತ ರಾಜ, ಹಾವು ಕಚ್ಚಿ ಸಾಯುವ ಶಾಪದಿಂದ ತನ್ನನ್ನು ಕಾಪಾಡಿಕೊಳ್ಳಲು, ಭದ್ರವಾದ ಕೋಟೆಯನ್ನು ಕಟ್ಟಿ, ಕಾವಲು ಪಡೆಯನ್ನು ಹಾಕಿ, ಯಾವ ಹಾವೂ ಒಳ ಬರದಂತೆ ನೋಡುವ ವ್ಯವಸ್ಥೆ ಇದ್ದರೂ ಸಹ, ರಾಜನಿಗೆ ತಿನ್ನಲು ಕೊಡುವ ಹಣ್ಣಿನ ಮೂಲಕ, ಸಣ್ಣ ಹುಳುವಿನ ರೂಪದಲ್ಲಿ ಬಂದ ತಕ್ಷಕ ಎಂಬ ನಾಗರಾಜ ಪರೀಕ್ಷಿತ ರಾಜನನ್ನು ಕಚ್ಚಿ ಕೊಂದಂತೆ.... ಎಷ್ಟು ಎಚ್ಚರಿಕೆಯಿದ್ದರೂ ಸಾಲದು... ದತ್ತಾಂಶಗಳನ್ನು ಕಾಪಾಡಲು.

ಈ ದತ್ತಾಂಶಗಳನ್ನು ಕದಿಯುವ ಪರಿಣತಿ ಹೊಂದಿರುವ hackers ಎಂಬ ಒಂದು ಸಂತತಿಯೇ ಇದೆ. ಇವರು ಎಂಥ ಅಭೇದ್ಯ ಕೋಟೆಯನ್ನೂ, ಚಕ್ರವ್ಯೂಹದಂತಹ ಬಹುಸ್ತರದ ರಕ್ಷಣಾ ಕವಚವನ್ನೂ ಭೇದಿಸಿ ನುಸುಳ ಬಲ್ಲಂತಹ ಕ್ಷಮತೆ ಇರುವ ಕೃತ್ರಿಮ ಬುದ್ಧಿವಂತರು.  

ವಿಪರ್ಯಾಸ ಎಂದರೆ ಕೃತ್ರಿಮ ಬುದ್ಧಿವಂತರ ಹಾವಳಿಯನ್ನು ತಪ್ಪಿಸಲು ನಾವು ಸತತ ಪ್ರಯತ್ನ ಮಾಡುತ್ತೇವೆ... ಹಾಗೆಯೇ ಶತ್ರು ದೇಶದ / ನಮಗಾಗದವರ ದತ್ತಾಂಶಗಳನ್ನು ಕದಿಯಲು ನಮ್ಮದೇ ಆದ ಈ ಕೃತ್ರಿಮ ಬುದ್ದಿವಂತರ ಪಡೆಯನ್ನು ಬೆಳೆಸುತ್ತೇವೆ. ಇದು ಎರಡು ಅಲಗಿನ ಕತ್ತಿ.(double edged sword).

ದೈನಂದಿನ ಜೀವನದ ವಿಷಯಕ್ಕೆ ಬಂದಾಗ ಕೃತಕ ಬುದ್ಧಿಮತ್ತೆ, ಡಿಜಿಟಲ್ ಜಗತ್ತಿನ ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಆವರಿಸಿಕೊಂಡಿದೆ. ತರಕಾರಿಯಿಂದ ಹಿಡಿದು ಯಾವುದೇ ವಸ್ತುಗಳನ್ನು ಖರೀದಿಸುವಾಗ ಬಿಲ್ ಮಾಡುವ ವ್ಯವಸ್ಥೆ... ಹಾಗೆ ಅದರ ಖರೀದಿಯ ಹಣವನ್ನು ಫೋನ್ ಮೂಲಕ ಪಾವತಿ ಮಾಡುವಾಗಲೆಲ್ಲಾ ಕೃತಕ ಬುದ್ಧಿಮತ್ತೆಯದೇ ಕಾರುಬಾರು.

ಈ ಲೇಖನವನ್ನು ತಯಾರು ಮಾಡುವಾಗ ಮಾತುಗಳನ್ನು ಗುರುತಿಸಿ ಬರಹದ ರೂಪಕ್ಕೆ ತರುವ app ಉಪಯೋಗಿಸಿದ್ದರಿಂದ... ಬರಹದ ವೇಗ, ವೃದ್ಧಿಯಾಗಿ, ಮನಸ್ಸಿನ ಓಟ ಹಾಗೂ ಅಕ್ಷರ ರೂಪುಗೊಳ್ಳುವ ಕಾರ್ಯದೊಂದಿಗೆ ಮಿಳಿತಗೊಂಡಿದೆ. ಇದು ಕೃತಕ ಬುದ್ಧಿಮತ್ತೆಯ ಕೊಡುಗೆ.

ಪ್ರಯಾಣಕ್ಕೆ ಆಟೋ, ಕಾರು ಒದಗಿಸುವ ಓಲಾ, ಉಬರ್, ನಮ್ಮಯಾತ್ರಿ ಇಂತಹ ಸಂಸ್ಥೆಗಳ ಆಪ್ ಮೂಲಕ ನಾವು ಹೊರಡುವ ಜಾಗ ಹಾಗೂ ತಲುಪಬೇಕಾದ ಜಾಗಗಳನ್ನು ನಮೂದಿಸಿದ ತಕ್ಷಣ... ಜಾಗಗಳ ಮಧ್ಯೆ ಇರುವ ದೂರ, ಮಾರ್ಗ ಸೂಚಿ, ತಗಲುವ ವೆಚ್ಚ, ಬರುವ ವಾಹನದ ಹಾಗೂ ಚಾಲಕನ ವಿವರಗಳು ನಮಗೆ ಬರುತ್ತವೆ. 

ಜಾಲ ತಾಣ ದಲ್ಲಿ ಯಾವುದೇ ವಿಷಯದ ಬಗ್ಗೆ ಹುಡುಕುವಾಗ, ಸಂಬಂಧಿತ ವಿಷಯಗಳ ಸೂಚನೆಗಳು ತಾನೇ ತಾನಾಗಿ ನಮ್ಮ ಮುಂದೆ ಬರುತ್ತವೆ (pop up). ನಮ್ಮ ಆಸಕ್ತಿಯನ್ನು ಗುರುತಿಸಿ ಅದಕ್ಕೆ ಸಂಬಂಧಪಟ್ಟ ವಿಷಯಗಳ ಪಟ್ಟಿಯನ್ನು ಸಹ ನಮ್ಮ ಮುಂದೆ ಇಡುತ್ತವೆ.

ಯಾವುದಾದರೂ ವಿಷಯವಾಗಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನು (FAQ) ಮುಂದಾಗಿ ಗುರುತಿಸಿ, ಅದಕ್ಕೆ ಉತ್ತರಗಳನ್ನು ತಯಾರಿಸಿಟ್ಟಿರುವುದು ಕೃತಕ ಬುದ್ಧಿಮತ್ತೆಯ ಸಹಾಯದಿಂದಲೇ.



ಆಯಕಟ್ಟಿನ ಜಾಗಗಳಲ್ಲಿ ಸಂಚಾರ ನಿಯಮಗಳನ್ನು ಪಾಲಿಸದ ವ್ಯಕ್ತಿಗಳನ್ನು , ಗುರುತಿಸಿ, ವಾಹನದ ನಂಬರ್ ಗಳ ಛಾಯಾಚಿತ್ರಗಳನ್ನು....  ಜಾಗ, ದಿನಾಂಕ ಹಾಗೂ ಸಮಯದ ಸಮೇತ ತೆಗೆದು, ಅದಕ್ಕೆ ತೆರಬೇಕಾದ ದಂಡವನ್ನು ನಮೂದಿಸಿ, ವಾಹನದ ಮಾಲೀಕನ ಫೋನ್ ನಂಬರಿಗೆ ಕಳಿಸುವಷ್ಟು ಚಾಕಚಕ್ಯತೆಯನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಲಾಗುತ್ತಿದೆ.

ಕೃತಕ ಬುದ್ಧಿಮತ್ತೆಯ ಸಹಾಯದಿಂದ ಯಂತ್ರಗಳ ಕಾರ್ಯ ವಿಧಾನವನ್ನು ದಾಖಲಿಸಿದಾಗ, ಯಂತ್ರದ ಕಾರ್ಯಕ್ಷಮತೆ ಹೆಚ್ಚಾಗಿ, ಹೊರಬರುವ ಉತ್ಪನ್ನಗಳು ಒಂದೇ ತೆರನಾಗಿ ಇರಲು ಸಾಧ್ಯವಾಗುತ್ತಿದೆ. ಯಾವುದೇ ಹಸ್ತ ಕೌಶಲ್ಯವಿಲ್ಲದ ವ್ಯಕ್ತಿಯು ಇಂಥ ಯಂತ್ರಗಳನ್ನು ನಿರ್ವಹಿಸಬಹುದು.

ಕೃತಕ ಬುದ್ಧಿ ಮತ್ತೆಯನ್ನು ಉಪಯೋಗಿಸುವಾಗ ನಮ್ಮ ಸಂವಹನೆಯು (communication) ಸ್ಪಷ್ಟವಾಗಿರಬೇಕು. ಸಣ್ಣ ಕಾಗುಣಿತದ ತಪ್ಪು (spelling mistake)... ದೊಡ್ಡ ವಿಷಯಾಂತರಕ್ಕೆ ಕಾರಣವಾಗಿ, ನಮ್ಮ ದಾರಿ ತಪ್ಪಿ ಗುರಿಯನ್ನು ಮುಟ್ಟದೆ ಇರಬಹುದು. ಉದಾಹರಣೆಗೆ SEA ಬದಲು SEE  ಬರೆದಾಗ ನಮಗೆ ಸಿಗುವ ವಿವರಣೆಗಳು... ಅಜಗಜಾಂತರ. 

ನಾವು type ಮಾಡುವಾಗ ಒಂದೆರಡು ಅಕ್ಷರ ಮಾಡಿದ ನಂತರ ಅದಕ್ಕೆ ಸಂಬಂಧಪಟ್ಟ ಬೇರೆ ಪದಗಳನ್ನು ತೋರಿಸುವುದರಿಂದ ಆಯ್ಕೆಯು ಸುಲಭವಾಗಿ, type ಮಾಡುವ ಶ್ರಮವೂ ಕಡಿಮೆಯಾಗುತ್ತದೆ.

ರಾಮಾಯಣ ಕಾಲದ ಪುಷ್ಪಕ ವಿಮಾನದ ಕಲ್ಪನೆ, ಅದರ ಕಾರ್ಯಕ್ಷಮತೆ ಎಲ್ಲ ಗಮನಿಸಿದರೆ ಅದು ಕೃತಕ ಬುದ್ಧಿಮತ್ತೆಯ ಮೊದಲ ಪ್ರಯೋಗಗಳು ಎಂದೆನಿಸುವುದಿಲ್ಲವೇ?  ಈಗಿನ ಕಾಲದ ವಿಜ್ಞಾನಿಗಳು, ಪುಷ್ಪಕ ವಿಮಾನದ ವಿವರಣೆಗಳನ್ನು ವಿಶ್ಲೇಷಿಸುತ್ತಿದ್ದಾರೆ... ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಪುಷ್ಪಕ ವಿಮಾನದ ಚಿತ್ರಣವನ್ನು ಮಾಡಿದ್ದಾರೆ... ಇದೋ ನಿಮಗಾಗಿ.



ರಾಮಾಯಣ ಮಹಾಭಾರತದಲ್ಲಿ ಉಲ್ಲೇಖಿಸಿರುವ, ಅತಿ ವಿನಾಶಕಾರಿ.



ಬ್ರಹ್ಮಾಸ್ತ್ರದ ( ಈಗಿನ ಬ್ರಹ್ಮೋಸ್ ಕ್ಷಿಪಣಿಯ ಹೆಸರಿಗೆ ಪ್ರೇರಣೆ) ಪ್ರಯೋಗವು... ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ತಿಳಿದಿತ್ತು...  ಅದನ್ನು ಹಣಿಯಲು ಮತ್ತೊಂದು   ಬ್ರಹ್ಮಾಸ್ತ್ರವೇ ಬೇಕಿತ್ತು. ಇವು ಕೃತಕ ಬುದ್ಧಿಮತ್ತೆಯ ಮೊದಲ ಪ್ರಯೋಗಗಳು ಎಂದೆನಿಸುತ್ತದೆ.

ವಿಷಕನ್ಯೆ ಎನ್ನುವ ಒಂದು ವಿಶೇಷ ಅಸ್ತ್ರ ಪ್ರಯೋಗದಲ್ಲಿತ್ತು ಎಂದು ಪುರಾಣದ ಕಥೆಗಳಲ್ಲಿ  ಉಲ್ಲೇಖವಾಗಿದೆ.  ಒಂದು ಸುಂದರ ಹೆಣ್ಣು ಮಗುವಿಗೆ ಚಿಕ್ಕಂದಿನಿಂದಲೇ ನಿಯಮಿತ ಪ್ರಮಾಣದ ವಿಷವನ್ನು ಕೊಟ್ಟು  ವಿಷಕನ್ಯೆಯಾಗಿ ರೂಪಿಸಿ, ಶತ್ರುವನ್ನು ಕೊಲ್ಲಲು ಉಪಯೋಗಿಸುತ್ತಿದ್ದರಂತೆ. ಶತ್ರುವು,  ವಿಷಕನ್ಯೆಯ ಮೋಹ ಪಾಶಕ್ಕೆ ಬಿದ್ದು, ಆಕೆಯೊಂದಿಗೆ ಸುಖಿಸಿದರೆ ಸಾವು ಖಚಿತವಾಗುತ್ತಿತ್ತು, ಎಂಬುದು ಓದಿದ ವಿಷಯ. ಹೆಣ್ಣಿನ ಮೋಹ ಪಾಶಕ್ಕೆ ಬೀಳದ ಗಂಡಸರು ಅಪರೂಪ.  ಇದು ಸಹ ಕೃತಕ ಬುದ್ಧಿಮತ್ತೆಯ ಮೊದಲ ಹಂತದ ಪ್ರಯೋಗ ಎಂದು ನನ್ನ ಅನಿಸಿಕೆ... ಅಹುದಾದರಹುದೆನ್ನಿ.

ಮಾನವ ತನ್ನ ಅನುಕೂಲಕ್ಕಾಗಿ ಮಾಡಿದ ಎಷ್ಟೋ ಆವಿಷ್ಕಾರಗಳು, ವಾಸ್ತವವಾಗಿ ಉಪಯೋಗಕ್ಕೆ ಬರುತ್ತಿರುವುದು ವಿಧ್ವಂಸಕ ಕೃತ್ಯಕ್ಕಾಗಿ... ಇದಕ್ಕೆ ಅಣುಶಕ್ತಿಯ (nuclear power)  ಉಪಯೋಗವೇ ದೊಡ್ಡ ಉದಾಹರಣೆ.

ಕೃತಕ ಬುದ್ಧಿಮತ್ತೆಯನ್ನು.... ಕೃತ್ರಿಮ  ಬುದ್ಧಿಮತ್ತೆಯಾಗಿ ಉಪಯೋಗಿಸದೆ ಇರುವ ಮನಸ್ಸು ಹಾಗೂ ಶಕ್ತಿಯು ಎಲ್ಲ ದೇಶಗಳ ಆಡಳಿತದ ಚುಕ್ಕಾಣಿ ಹಿಡಿದಿರುವ ನಾಯಕರಲ್ಲಿ ಮೂಡಲಿ ಎಂದು ಆಶಿಸುತ್ತಾ...


ನಮಸ್ಕಾರ.


ಡಿ ಸಿ  ರಂಗನಾಥ ರಾವ್

9741128413



 








    

Comments

  1. Atrocious intelligence is apt word A I like other modern inventions if used properly is really a boon, otherwise it' becomes fatal.
    Nice write up Sir🙏

    ReplyDelete
  2. ನಾಗೇಂದ್ರ ಬಾಬು21 June 2025 at 22:05

    ಕೃತಕ ಬುದ್ದಿಮತ್ತೆ ಹಾಗೂ ಕೃತಿಮ ಬುದ್ದಿಮತ್ತೆ
    ವಿಶ್ಲೇಷಣೆಯನ್ನು ಪುರಾತನ ಕಥನದಿಂದ ಇಂದಿನ ನಿಮ್ಮ ಬರಹಕ್ಕೆ ಉಪಯೋಗಿಸುವ ತಂತ್ರಜ್ಞಾನದ ತನಕ ಬಹಳ ಸುಂದರವಾಗಿ ನಿರೂಪಿಸಿದ್ದೀರಿ ನಿಮ್ಮ ಸೂಕ್ಷ್ಮ ಹಾಗೂ ತೀಕ್ಷಣ ಬುದ್ದಿ ಮತ್ತೆಗೆ ನನ್ನ ಸಲಾಂ..... ಬುದ್ಧಿ
    ಬಾಬು

    ReplyDelete
  3. Excellent article sir🙏

    ReplyDelete
  4. Guru Prasanna K24 June 2025 at 12:43

    ಕೃತಕ ಬುದ್ಧಿಮತ್ತೆಯ ಬಗೆಗೆ ಅದರ ಉಪಯೋಗಗಳನ್ನು ಪರಿಚಯಿಸಿದ ಲೇಖಕರಿಗೆ ಧನ್ಯವಾದಗಳು.

    ಪುಷ್ಪಕ ವಿಮಾನ ಹಾಗೂ ವಿಷಕನ್ಯೆಯನ್ನು ಸಹ ಈ ಗುಂಪಿಗೆ ಸೇರಿಸಿರುವುದು ಸ್ವಾರಸ್ಯಕರ.
    ನಮ್ಮ ಭಾರತದಂತಹ ಅಗಾಧ ಮಾನವ ಶಕ್ತಿಯನ್ನು ಒಳಗೊಂಡಿರುವ ದೇಶಕ್ಕೆ ಈ ಕೃತಕ ಬುದ್ಧಿಮತ್ತೆಯು ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುವ ಭೀತಿ ಅಂತೂ ಇದ್ದೆ ಇದೆ.

    ವಂದನೆಗಳೊಂದಿಗೆ

    ಗುರು ಪ್ರಸನ್ನ
    ಚಿಂತಾಮಣಿ

    ReplyDelete
  5. Vivarane tumba chennagi de

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ