ಪ್ರತಿಭೆ - ಪ್ರದರ್ಶನ - ಪುರಸ್ಕಾರ



ಮೊನ್ನೆ ಭಾನುವಾರ, ತಿಮ್ಮೇಶ ಪ್ರಭು ಉದ್ಯಾನವನದಲ್ಲಿ, ಸ್ನೇಹ ರಂಗದ ವತಿಯಿಂದ ಈ ವರ್ಷದ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿತ್ತು. ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 



ಬೆಳಗಿನ ಸುಂದರ ವಾತಾವರಣದಲ್ಲಿ ಮಕ್ಕಳ ಉತ್ಸಾಹ, ಪೋಷಕರ ಮುಖದಲ್ಲಿದ್ದ ಹೆಮ್ಮೆ, ಸ್ನೇಹ ರಂಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿನ ಸಲುವಾಗಿ ಉತ್ಸಾಹದಿಂದ ಮಾಡುತ್ತಿದ್ದ ಕೆಲಸಗಳು  ಅಲ್ಲೊಂದು ಸಂಭ್ರಮದ, ಸಡಗರದ ದೃಶ್ಯಗಳಾಗಿ ಕಾಣುತ್ತಿದ್ದವು.



ಸುಂಕೇನಹಳ್ಳಿ ಸರ್ಕಾರಿ ಶಾಲೆಯ 34  SSLC ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದರು. ಸುಂಕೇನಹಳ್ಳಿ ಶಾಲೆ ಯೊಂದಿಗೆ ನನ್ನದು ಒಂದಷ್ಟು ಒಡನಾಟವಿದೆ, ಅಭಿಮಾನವಿದೆ.     

ಪ್ರತಿಭಾ ಪುರಸ್ಕಾರಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಗಮನಿಸಿದಾಗ, ಆ ಕಾರ್ಯಕ್ರಮಗಳು ಒಂದು ಸೀಮಿತ ಸಮುದಾಯದ ಮಕ್ಕಳನ್ನು ಮಾತ್ರ ಒಳಗೊಂಡಿರುತ್ತದೆ. ಅದು ಒಂದು ಜಾತಿ, ಪಂಗಡದ ಮಕ್ಕಳಾಗಿರಬಹುದು ಅಥವಾ ಒಂದು ಸಂಸ್ಥೆಯ ಸದಸ್ಯರ ಮಕ್ಕಳಾಗಿರಬಹುದು.  

ಆದರೆ ಸ್ನೇಹ ರಂಗದ ವೈಶಿಷ್ಟ್ಯ ... ಹತ್ತಿರದಲ್ಲೇ ಇರುವ ಸುಂಕೇನಹಳ್ಳಿ ಸರ್ಕಾರಿ ಶಾಲೆ, ಹಾಗೂ ವಿವೇಕಾನಂದ ಶಾಲೆಯ ಮಕ್ಕಳಿಗೆ ಆದ್ಯತೆ .( ಈ ಮಕ್ಕಳ ಪೋಷಕರು ಸಾಮಾನ್ಯವಾಗಿ ಆರ್ಥಿಕವಾಗಿ ಕೆಳವರ್ಗದವರಿದ್ದು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿರುವವರು) ಜೊತೆಗೆ ತಿಮ್ಮೇಶ ಪ್ರಭು ಉದ್ಯಾನವನಕ್ಕೆ ವಾಯುವಿಹಾರಕ್ಕಾಗಿ ಬರುವ ಜನಗಳ/ ಅವರ ಪರಿಚಯದ ಮಕ್ಕಳನ್ನು ಗೌರವಿಸುವುದು. ಈ ಪುರಸ್ಕಾರದ ಭಾಗವಾಗಿ, ಒಂದು ಪ್ರಶಸ್ತಿ ಪತ್ರ, ಸ್ಮರಣಿಕೆ, ನೋಟ್ ಪುಸ್ತಕ, ಪೆನ್ನು , ಪದಕ, ಹಾಗೂ ಒಂದು ಸಾವಿರ ರೂಪಾಯಿಯ ನಗದು ಕೊಡಲಾಯಿತು. ಕಾರ್ಯಕ್ರಮದ ನಂತರ ಎಲ್ಲರಿಗೂ ಉಪಹಾರವನ್ನು ಏರ್ಪಡಿಸಿತ್ತು.

ಸಣ್ಣಪುಟ್ಟ ಅಡಚಣೆಗಳ ಹೊರತಾಗಿಯೂ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂತು... ಅದರ ರೂವಾರಿ, ನನ್ನ ಸ್ನೇಹಿತ ಮಂಜುನಾಥ ಅಭಿನಂದನಾರ್ಹ.  ಜೊತೆಗೆ ಈ ಕಾರ್ಯಕ್ಕಾಗಿ ಧನಸಹಾಯ ಮಾಡಿದ, ಪುಸ್ತಕ ಹಾಗೂ ಪೆನ್ನು ಕೊಟ್ಟ, ಶಾಮಿಯಾನ ಹಾಗೂ ಕುರ್ಚಿಗಳನ್ನು ಕೊಟ್ಟ,  ಉಪಹಾರವನ್ನು ಕೊಟ್ಟ, ಸಾಕಷ್ಟು ದಾನಿಗಳ ಸಹಕಾರವಿತ್ತು. ಇದೆಲ್ಲವನ್ನು ಕಾರ್ಯರೂಪಕ್ಕೆ ತರಲು ಒಂದು ತಂಡವೇ ಕೆಲಸ ಮಾಡಿದ್ದು.. ಅವರೆಲ್ಲರೂ ಅಭಿನಂದನಾರ್ಹರು.

ಸಾರ್ವಜನಿಕವಾಗಿ ಪ್ರತಿಭಾ ಪುರಸ್ಕಾರ ಎಂಬ ಒಂದು ಕಲ್ಪನೆ ನನ್ನ ಅಂದಾಜಿನಂತೆ ಎರಡು ಮೂರು ದಶಕಗಳ ಹಿಂದಷ್ಟೇ ಶುರುವಾಗಿದೆ. ಅದಕ್ಕೆ ಮೊದಲು ಕೆಲ ಸಂಸ್ಥೆಗಳು ಮಕ್ಕಳಿಗೆ ವಿದ್ಯಾರ್ಥಿ ವೇತನದ (scholorship) ರೂಪದಲ್ಲಿ, ಕೆಲ ವ್ಯಕ್ತಿಗಳು ತಮಗೆ ಪರಿಚಯ ಇದ್ದ ಅರ್ಹ ವಿದ್ಯಾರ್ಥಿಗಳಿಗೆ ಓದಲು ಹಣ ಸಹಾಯ ಮಾಡುತ್ತಿದ್ದದ್ದು ಮಾತ್ರ. 

ಪ್ರತಿಭೆಯನ್ನು ಪುರಸ್ಕರಿಸಲು, ಅದನ್ನು ಗುರುತಿಸಬೇಕು, ಗುರುತಿಸಲು ಅದು ಹೊರಗೆ ಕಾಣಬೇಕು (ಪ್ರದರ್ಶನ), ಪ್ರದರ್ಶಿಸಲು ಅದು ಒಳಗಿರಬೇಕು ಅಲ್ಲವೇ?

ಅಂತಹ ಹುದುಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಾಮಾನ್ಯವಾಗಿ ಹತ್ತನೇ ತರಗತಿಯವರೆಗೆ ಪಾಠ ಮಾಡುವ ಉಪಾಧ್ಯಾಯ/ ಉಪಾಧ್ಯಾಯಿನಿಯರು. ಅದು ಮಕ್ಕಳು ವಿಕಸನವಾಗುವ ಕಾಲ, ಜೊತೆಗೆ ಇನ್ನೂ ದೊಡ್ಡವರು ಹೇಳಿದ್ದನ್ನು ಕೇಳಬೇಕು ಅನ್ನುವ ಮನೋಭಾವ /ಭಯ ಇರುವ ಕಾಲ.

ಇದಕ್ಕೊಂದು ಉದಾಹರಣೆ... ಮೊನ್ನೆ ಕಾರ್ಯಕ್ರಮದಲ್ಲಿ ಸುಂಕೇನಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭವ್ಯ ಅವರು ಹೇಳಿದ ಒಂದು ಘಟನೆ. B.Ed ಮಾಡುತ್ತಿರುವವರು, ಕಲಿಕೆಯ ಭಾಗವಾಗಿ, ಪ್ರೌಢಶಾಲೆಯ ಮಕ್ಕಳಿಗೆ ಪಾಠ ಮಾಡುವುದು ಕಡ್ಡಾಯ. ಅಂತಹ ಒಬ್ಬ ಹೆಣ್ಣುಮಗಳು ದೀಪಿಕಾ.   ತಾನು   ಓದಿದ್ದು ಕತ್ತರಿಗುಪ್ಪೆಯ ಸರ್ಕಾರಿ ಶಾಲೆಯಲ್ಲಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ.   ಅಲ್ಲಿ ಪಾಠ ಮಾಡುತ್ತಿದ್ದ ಶ್ರೀಮತಿ. ಯಮುನಾ  ಅವರು ಗೊತ್ತಾ ಎಂದಾಗ ಆ ವಿದ್ಯಾರ್ಥಿನಿಯ ಮುಖ ಅರಳಿದೆ.. "ಅವರೇ ನನಗೆ ಕನ್ನಡ ಹೇಳಿಕೊಟ್ಟಿದ್ದು. ನಾನು ಡಿಗ್ರಿ ಮಾಡುವುದಕ್ಕೆ B.Ed ಮಾಡುವುದಕ್ಕೆ ಅವರೇ ಸ್ಫೂರ್ತಿ. ಒಂದು ಸಂದರ್ಭದಲ್ಲಿ... ನನ್ನನ್ನು ಪ್ರೋತ್ಸಾಹಿಸಲು, ಹಿಡಿದು ಮೇಲೆತ್ತಿದ್ದು ನನ್ನ ಮನಸ್ಸಿನಲ್ಲಿ ಹಸಿರಾಗಿದೆ" ಎಂದು ಹೇಳಿ ಯಮುನಾ ಮೇಡಮ್ ಅವರನ್ನು ನೋಡಲು ತವಕಿಸಿದ್ದಾಳೆ. ಇದು ನಿಜವಾದ ಪ್ರತಿಭೆಯನ್ನು ಗುರುತಿಸಿ ಪೋಷಿಸಿ ಅದನ್ನು ಪ್ರದರ್ಶಿಸಿದಾಗ ಪುರಸ್ಕರಿಸುವುದು. ದೀಪಿಕಾ ಹಾಗೂ ಯಮುನಾ ಮೇಡಂ ಇಬ್ಬರೂ ಧನ್ಯರೇ.. ಬೇರೆ ಬೇರೆ ರೀತಿಯಲ್ಲಿ.

ನನಗೆ ಕೋಲಾಟ ಹೇಳಿಕೊಟ್ಟ ಗಂಗರಾಮಯ್ಯ ಮೇಷ್ಟ್ರು,  ನಾಟಕ ಹೇಳಿಕೊಟ್ಟ ಶ್ರೀನಿವಾಸ್ ಮೇಷ್ಟ್ರು, ಭಾಷಣ ಕಲೆ ಹೇಳಿಕೊಟ್ಟ ಸುಬ್ಬರಾವ್ ಮೇಷ್ಟ್ರು, ಹಾಡುವುದನ್ನು ಕಲಿಸಿದ ಹನುಮಂತಯ್ಯ ಮೇಷ್ಟ್ರು  ಹಾಗೂ ಕಾವೇರಿಯಪ್ಪ ಮೇಷ್ಟ್ರು...ಇವರೆಲ್ಲ ಪ್ರಾತಃಸ್ಮರಣೀಯರು.  ಚಿಕ್ಕ ವಯಸ್ಸಿನಲ್ಲೇ ನನ್ನಲ್ಲಿದ್ದ ಸುಪ್ತ ಪ್ರತಿಭೆಯನ್ನು  ಗುರುತಿಸಿ, ಅದಕ್ಕೆ ನೀರೆರೆದು ಪೋಷಿಸಿದವರು.

ನಾನು ವಿದ್ಯಾರ್ಥಿಯಾಗಿದ್ದ ಕಾಲಕ್ಕೆ, first Class 60% ತೆಗೆದರೆ ಅದು ಅಭಿನಂದನಾರ್ಹ. ಪರೀಕ್ಷೆಯ ಫಲಿತಾಂಶ ಬಂದಾಗ ಎಲ್ಲ ವಿಷಯಗಳಲ್ಲೂ ತೇರ್ಗಡೆಯಾಗಿದ್ದರೆ ಭೇಷ್  ಎನ್ನುತ್ತಿದ್ದ ಕಾಲ ಅದು. ಅದೇ ಪುರಸ್ಕಾರ ಯೋಗ್ಯ.  ಈಗಿನ ಮಕ್ಕಳು 99 / 100 ಅಂಕ ತೆಗೆದುಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಪುರಸ್ಕಾರಕ್ಕೆ ಆಯ್ಕೆಮಾಡುವ ಅಂಕಗಳ ಮಟ್ಟವೂ ಅಂತೆಯೇ ಜಾಸ್ತಿಯಾಗಿದೆ, ಕಾಲಕ್ಕೆ ತಕ್ಕಂತೆ.

ಪ್ರತಿಭಾ ಪ್ರದರ್ಶನ ಮಾಡಿದ ಮೊದಲಿಗ ನಮ್ಮ ಗಣೇಶನೇ ಸರಿ.  ಪ್ರಪಂಚವನ್ನು ಮೂರು ಸುತ್ತು ಹಾಕುವ ಸ್ಪರ್ಧೆಯಲ್ಲಿ, ತನ್ನ ಅಪ್ಪ ಅಮ್ಮನನ್ನೇ ಮೂರು ಸುತ್ತು ಹಾಕಿ, ಅವರೇ ಪ್ರಪಂಚವೆಂದ ಜಾಣ ಪ್ರತಿಭೆ.  ಪುರಸ್ಕಾರ ಯಾವ ರೀತಿಯಲ್ಲಿ ಸಿಕ್ಕಿತೋ ನನ್ನರಿವಿಗಿಲ್ಲ.

ಬಾವಿಯಲ್ಲಿ ಬಿದ್ದಿದ್ದ ಚೆಂಡನ್ನು , ಹುಲ್ಲುಗರಿಗಳ ಮೂಲಕವೇ ಹೊರತೆಗೆದು ಪಾಂಡವ, ಕೌರವ ಮಕ್ಕಳಿಗೆ ಕೊಟ್ಟ ದ್ರೋಣಾಚಾರ್ಯರು,  ಮತ್ಸ್ಯ ಯಂತ್ರ ಭೇದಿಸಿದ  ಅರ್ಜುನ, ಬಾಣಪ್ರಯೋಗದಿಂದ ಬೊಗಳುವ ನಾಯಿಯ ಬಾಯಿ ತುಂಬಾ ಬಾಣಗಳನ್ನು ತುಂಬಿದ  ಏಕಲವ್ಯ, ಇವರದೆಲ್ಲಾ ಪ್ರತಿಭಾ ಪ್ರದರ್ಶನವೇ. 

ಚಿಕ್ಕಂದಿನಲ್ಲಿ ಸಣ್ಣಪುಟ್ಟ ಜಾಣತನ  ತೋರಿದ ಮಕ್ಕಳಿಗೆ  ಪ್ರೋತ್ಸಾಹಿಸುತ್ತಾ ಬಂದರೆ... ಆ ಪ್ರೋತ್ಸಾಹವು ಅವರಲ್ಲಿ ಮತ್ತಷ್ಟು ಹುರುಪನ್ನು ತುಂಬಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.  ಸಾಮಾನ್ಯವಾಗಿ ಶಾಲೆಗಳಲ್ಲಿ ಚೂಟಿಯಾದ ಮಕ್ಕಳನ್ನು ಗುರುತಿಸಿ ಅವರನ್ನು ಸ್ಪರ್ಧೆಗಳಿಗೆ ಕಳಿಸಿ , ತಮ್ಮ ಶಾಲೆಗೆ ಬಹುಮಾನ ಬರಲು ಬೇಕಾದ ಪ್ರಯತ್ನವನ್ನು ಮಾಡುತ್ತಾರೆ.  ವಿಪರ್ಯಾಸ ವೆಂದರೆ ಚೂಟಿಯಲ್ಲದ ಹಿಂದುಳಿದ ಮಕ್ಕಳಿಗೆ, ಈ ಅದೃಷ್ಟ ಇರುವುದಿಲ್ಲ. ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿ ನೀಡಿ  ಮುಂದೆ ತಂದರೂ, ಇನ್ನುಳಿದ ವಿಭಾಗಗಳಲ್ಲಿ ಅವರು ಪರಿತ್ಯಕ್ತರೆ ಎಂದು ನನ್ನ ಬಲವಾದ ನಂಬಿಕೆ.

ಸರ್ಕಾರಿ ಶಾಲೆಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿ ಎಂಬ ಅಂತರ ಶಾಲಾ ಸ್ಪರ್ಧೆ..  ನಿಜಕ್ಕೂ ಮಕ್ಕಳಲ್ಲಿ ಹುದುಗಿರುವ ಓದಿನ ಹೊರತಾದ ಪ್ರತಿಭೆಯನ್ನು ಹೊರಹಾಕಲು ಅವಕಾಶ. ಬಹಳ ಮಕ್ಕಳು ಇದನ್ನು ಉಪಯೋಗಿಸಿಕೊಂಡಿದ್ದಾರೆ... ಅವರಿಗೆ ಶಾಲೆಯಿಂದಲೂ ಸಾಕಷ್ಟು ಮಾರ್ಗದರ್ಶನ ಸಿಗುತ್ತಿದೆ ಎಂಬುದು ಸಂತೋಷದ ಸಂಗತಿ.

ಜಾಲತಾಣದಲ್ಲಂತೂ.. ಚಿಕ್ಕ ಮಕ್ಕಳ ವಿವಿಧ ಪ್ರತಿಭೆಯನ್ನು ತೋರಿಸುವ ರೀಲ್ಸ್ / ವಿಡಿಯೋಗಳು ಹರಿದಾಡುತ್ತಿವೆ. ಅವರ ಪ್ರತಿಭೆಗಳನ್ನು ನೋಡಿ ಮೂಕ ವಿಸ್ಮಯನಾಗಿದ್ದೇನೆ.

ನೋವಿನ ಸಂಗತಿ ಎಂದರೆ.. ಅತಿಯಾಗಿ ಉತ್ತೇಜನ ಸಿಕ್ಕಿದ ಮಕ್ಕಳು, ಕಾರಣ ಏನೇ ಇರಲಿ... ಮುಂದಿನ ಬೆಳವಣಿಗೆಯಿಂದ ವಂಚಿತರಾಗುವುದನ್ನು ಕಂಡಿದ್ದೇನೆ, ಇದು ಪುರಸ್ಕರಿಸುವುದರಲ್ಲಿ / ಉತ್ತೇಜಿಸುವುದರಲ್ಲಿ ಮಿತಿ ಇರಬೇಕೆಂಬುದರ ಸೂಚನೆ.

ಹಳ್ಳಿಯಲ್ಲಿ ನಾಟಕ ನಡೆಯುತ್ತಿರುವಾಗ ತಮ್ಮ ಇಷ್ಟವಾದ ನಟನ ಉಡುಗೆಗೆ  ರೂಪಾಯಿಯ ನೋಟನ್ನು ಸಿಕ್ಕಿಸುವುದು ಬಹುಮಾನ / ಪುರಸ್ಕಾರದ ದ್ಯೋತಕ. ನಾನು ಹೀಗೆ ಬಹುಮಾನ ಪಡೆದದ್ದು ನೆನೆಸಿದರೆ ಖುಷಿಯಾಗುತ್ತೆ.

ಸಂಗೀತಗಾರರಿಗೆ ಅವರ ವಿದ್ವತ್ತನ್ನು ಗೌರವಿಸಲು ಕೈಗೆ ಕಡಗ, ಕಾಲಿಗೆ ಕಡಗ ಹಾಕುವ ಸಂಪ್ರದಾಯವು ಉಂಟು.

ಅರ್ಜುನ ಪ್ರಶಸ್ತಿ, ದ್ರೋಣ ಪ್ರಶಸ್ತಿ, ಪದ್ಮ ಪುರಸ್ಕಾರಗಳು ಜೊತೆಗೆ ರಾಜ್ಯೋತ್ಸವ ಪ್ರಶಸ್ತಿಗಳು, ವ್ಯಕ್ತಿಗಳು ಸಾಧನೆ ಮಾಡಿದ್ದಕ್ಕೆ ಸಂದ ಪುರಸ್ಕಾರಗಳು. (ಕೆಲವರಿಗೆ ಅವರ ರಾಜಕೀಯ ನಂಟಿನ ಪ್ರಭಾವದ ಕಾರಣದಿಂದ ಸಿಕ್ಕಿರಬಹುದು)

ಘಾಟಿ ಸುಬ್ರಹ್ಮಣ್ಯದ  ಜಾತ್ರೆಯಲ್ಲಿ, ಸುಂದರವಾದ, ಸದೃಢವಾದ, ಜೋಡೆತ್ತಿನ ಒಡೆಯನನ್ನು ಗೌರವಿಸುವುದು ಒಂದು ಪದ್ಧತಿ, ಇದು ಪುರಸ್ಕಾರವೇ.

 ಬಹುಮಾನಗಳನ್ನು ಪಡೆದ ಎಲ್ಲರೂ ಅವರ ಮಟ್ಟಿಗೆ ಪ್ರತಿಭಾವಂತರೆ. ಬಹುಮಾನಗಳು ಪುರಸ್ಕಾರಗಳೇ.

ನರ್ಸರಿ ಶಾಲೆಯಲ್ಲಿ ಮಕ್ಕಳನ್ನು ಹುರಿದುಂಬಿಸಲು, ಭಾಗವಹಿಸಿದ ಎಲ್ಲ ಮಕ್ಕಳಿಗೂ ಒಂದು ಬಹುಮಾನವನ್ನು ಕೊಡುವ, ಹಾಗೂ ಸಾಧ್ಯವಾದಷ್ಟು ಎಲ್ಲ ಮಕ್ಕಳನ್ನು ಭಾಗವಹಿಸಲು ಪ್ರೇರೇಪಿಸುವ ರೀತಿ ಅನುಕರಣನೀಯ.

ಅಶಕ್ತ ಪೋಷಕ ಸಭಾದಲ್ಲಿ, ವಾರ್ಷಿಕ ಯೋಗ ದಿನಾಚರಣೆಯ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳಿಗೆ, ಆಟಗಳನ್ನು ಆಡಿಸಿ ಬಹುಮಾನವನ್ನು ಕೊಡುವಾಗ, ಮೇಲೆ ಹೇಳಿದ ನರ್ಸರಿ ಶಾಲೆಯ ರೀತಿಯನ್ನು ನಾವುಗಳು ಪಾಲಿಸುತ್ತೇವೆ.

ಜ್ಯೋತಿಷ್ಯ ಶಾಸ್ತ್ರ ಹೇಳುವವರು ಪಂಜರದಲ್ಲಿದ್ದ ಗಿಳಿ ಹೊರಗೆ ಬಂದು ಭವಿಷ್ಯದ ಚೀಟಿಯನ್ನು  ಆಯ್ಕೆ ಮಾಡಿ ಕೊಟ್ಟ ನಂತರ ಅದಕ್ಕೆ ಹಾಕುವ ಕಾಳು, ಕೋತಿ ಆಟ ಆಡಿಸುವವನು, ಆಟದ ನಂತರ ಅದಕ್ಕೆ ಕೊಡುವ ತಿನಿಸು ಇವೆಲ್ಲ ಪುರಸ್ಕಾರಗಳಾ? ಅಥವಾ ಮಾಡಿದ ಕೆಲಸಕ್ಕೆ ಪ್ರತಿಫಲವಾ? ಎಂದು ನನಗೆ ನಾನೇ ಪ್ರಶ್ನಿಸಿಕೊಂಡಿದ್ದೇನೆ.

ಮಾಡಿದ ಕೆಲಸಕ್ಕೆ ಕೊಡುವ ಕೂಲಿ / ಸಂಬಳ ಪುರಸ್ಕಾರಗಳಾ? ಅಲ್ಲ ಅನಿಸುತ್ತದೆ. ಅದೇ ...ಸಮಯಕ್ಕೆ ಮುಂಚೆ ಕೊಟ್ಟ ಬಡ್ತಿ, ಅದರೊಂದಿಗೆ ಬರುವ ಹಣ ಪುರಸ್ಕಾರಗಳು ಎನಿಸುತ್ತದೆ.

ಕೊನೆಯದಾಗಿ... ನನ್ನ ಜೀವನದಲ್ಲಿ ಸಿಕ್ಕ ವಿಶೇಷ ಪುರಸ್ಕಾರ...

ನಮ್ಮ ಹನುಮಂತನಗರ ಮನೆಯ ಪಕ್ಕದಲ್ಲಿ ವಾಸವಾಗಿದ್ದವರು ಹೆಚ್ ವಿ ಸುಬ್ಬರಾಯರು. ಇವರು ಬಂಧನ, ಅಂತ, ನಾಗರಹೊಳೆ, ಪುಟಾಣಿ ಏಜೆಂಟ್ 123, ಏಟು ಎದಿರೇಟು, ಹೀಗೆ ಸಾಕಷ್ಟು ಕನ್ನಡ ಚಿತ್ರಗಳಿಗೆ ಕಥೆ, ಚಿತ್ರಕಥೆ, ಹಾಗೂ ಸಂಭಾಷಣೆಯನ್ನು ಬರೆಯುತ್ತಿದ್ದವರು. ಅವರು ನಿರ್ಮಾಪಕರಾಗಿ ತಯಾರಿಸಿದ ಛ" ಮಳೆ ಬಂತು ಮಳೆ" ಎಂಬ ಕನ್ನಡ ಚಿತ್ರಕ್ಕೆ ಬೇಕಾಗಿದ್ದ 16 ಅಡಿ ಉದ್ದದ ಯಾಂತ್ರಿಕ ಮೊಸಳೆಯನ್ನು ತಯಾರು ಮಾಡಲು ನನ್ನನ್ನು ಆರಿಸಿ, ನನ್ನಲ್ಲಿದ್ದ ಹಿಂಜರಿಕೆಯನ್ನು ತೊಡೆದು ಹಾಕಿ " ನೀವು ಮಾಡಬಹುದು ಮಾಡಿ ರಂಗಣ್ಣ" ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು.  "commercial street ಗೆ ಹೋಗಿ, ನಾಲ್ಕಾರು ಆಡುವ ಗೊಂಬೆಗಳನ್ನು ಕೊಂಡುಕೊಳ್ಳಿ, ಅದನ್ನು ಒಡೆದು ನೋಡಿ ನಿಮಗೆ ಒಂದಷ್ಟು ಸುಳಿವು ಸಿಕ್ಕಬಹುದು" ಎಂದು ತಳಹದಿಯನ್ನು ಹಾಕಿ ಕೊಟ್ಟು, ಅದನ್ನು ತಯಾರು ಮಾಡುವಷ್ಟು ದಿನವೂ ಆಗಾಗ್ಗೆ ಬಂದು ನೋಡಿ ಬೆನ್ನು ತಟ್ಟಿ ಹುರಿದುಂಬಿಸಿದವರು.



ಚಿತ್ರದಲ್ಲಿ ಕೆಲಸ ಮಾಡಿದವರ  ಹೆಸರುಗಳನ್ನು ತೋರಿಸುವ Casting credits ನಲ್ಲಿ ನನ್ನ ಹೆಸರನ್ನು ಹಾಕಿದ್ದು, ಅದು ಚಲನಚಿತ್ರದ ಭಾಗವಾಗಿರುವುದು ನನಗೆ ಸಿಕ್ಕ ದೊಡ್ಡ ಪುರಸ್ಕಾರ ಎಂದು ಇಂದಿಗೂ ಅನಿಸುತ್ತದೆ.  ಈಗ ನಮ್ಮೊಂದಿಗಿಲ್ಲದ ಸುಬ್ಬರಾಯರಿಗೆ ನನ್ನ ನಮಸ್ಕಾರ.

ಎಲ್ಲ ವ್ಯಕ್ತಿಗಳಲ್ಲೂ, ಅವರದೇ ಆದ ವಿಶಿಷ್ಟ ಪ್ರತಿಭೆಗಳು ಹುದುಗಿರುತ್ತವೆ. ಎಷ್ಟೋ ಸಲ ಹಿಂಜರಿಕೆಯಿಂದ, ಆತ್ಮವಿಶ್ವಾಸದ ಕೊರತೆಯಿಂದ ಅವು ಸುರುಟಿ ಹೋಗಿರುತ್ತವೆ. ಸೂಕ್ತ ವಾತಾವರಣ ಹಾಗೂ ಪ್ರೋತ್ಸಾಹ ಸಿಕ್ಕರೆ ಅವು ಅರಳುತ್ತವೆ, ಹೊರಹೊಮ್ಮುತ್ತವೆ.

ಅಂತಹ ಪ್ರೋತ್ಸಾಹವನ್ನು ನಮ್ಮ ಸುತ್ತು ಮುತ್ತಲಿನ ಜನಕ್ಕೆ ವಿಶೇಷವಾಗಿ ಮಕ್ಕಳಿಗೆ ಕೊಡುವುದು ನಮ್ಮೆಲ್ಲರ ಜವಾಬ್ದಾರಿ ಆದರೆ ಬಲು ಚೆನ್ನ. ಆ ಮನಸ್ಸು ಎಲ್ಲರಿಗೂ ಬರಲೆಂದು ಪ್ರಾರ್ಥಿಸುತ್ತಾ

ನಮಸ್ಕಾರ...

ಡಿ ಸಿ  ರಂಗನಾಥ ರಾವ್

9741128413




    

Comments

  1. ಜಯಸಿಂಹ16 July 2025 at 12:15

    ಸಾರ್ಥಕವಾದ ಕೆಲಸ..ಇವರ ಸಾಧನೆಗೆ ಉಪಾಧ್ಯಾಯರ ಕೊಡುಗೆ ಅಪಾರ .ಅವರನ್ನೂ ಗುರುತಿಸಿ ಗೌರವಿಸಿದರೆ ಕಾರ್ಯಕ್ರಮ ಇನ್ನೂ ಕಳೆಗಟ್ಟೀತು

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ