ವಸಂತವನ್ನೇ ಕಾಣದ ವಸಂತಲಕ್ಷ್ಮಿ


ನನ್ನ ಕಛೇರಿಯಲ್ಲಿ ಯಾವುದೋ Technical discussion  ನ್ನಲ್ಲಿದ್ದೆ. ಫೋನ್ ರಿಂಗಣಿಸಿತು.. ಉತ್ತರಿಸದೆ ನಿರಾಕರಿಸಿದೆ.  ಮತ್ತೆರಡು ಸಲ 
ಅದೇ ಫೋನ್  ಕರೆ... ಅಪರಿಚಿತ ನಂಬರ್ ನಿಂದ. ಪ್ರಾಯಶಃ ಯಾವುದೋ ಗಹನವಾದ ವಿಷಯವೇ ಇರಬಹುದೆಂದು ಕರೆಯನ್ನು ಸ್ವೀಕರಿಸಿದೆ.
' ಸರ್ ಕ್ಷಮಿಸಿ, ಮತ್ತೆ ಮತ್ತೆ ಫೋನ್ ಮಾಡಿದ್ದಕ್ಕೆ. ನಾನು ವಸಂತ ಲಕ್ಷ್ಮಿಯ ತಂಗಿ, ಅಕ್ಕನ ಆರೋಗ್ಯ ತುಂಬಾ ಹದಗೆಟ್ಟಿದೆ, ಪದೇ ಪದೇ ನಿಮ್ಮ ಹೆಸರು ಹೇಳ್ತಾಳೆ, ನೀವು ಒಂದು ನಿಮಿಷ ಬಂದು ಅಕ್ಕನನ್ನು ಮಾತಾಡಿಸಲು ಸಾಧ್ಯವಾ ಎಂದು ಅಪ್ಪ ಕೇಳಿದ್ದಾರೆ, ಬರ್ತೀರ ಅಲ್ವಾ?'
ಮನೆಯ ವಿಳಾಸ ಕೇಳಿ ತಿಳಿದುಕೊಂಡೆ, ನಡೆಯುತ್ತಿದ್ದ ಮಾತುಕತೆಯನ್ನು ಬೇಗ ಮುಗಿಸಿ, ಹೊರಡಲನುವಾದೆ.
ಮನೆ ಸಮೀಪಿಸಿದಾಗ, ಅಳು ಕೇಳಿ ಬಂತು, ಅನುಮಾನವಾಯಿತು, ನನ್ನ ಕಂಡೊಡನೆ ಅವರ ಅಪ್ಪ ಹೇಳಿದ್ದು "ನೋಡಿ ಸರ್ ಹೆಂಗ್ ಮಲಗವಳೆ, ನನ್ ಮೇಲೆ ಕೋಪ ಬಂದಾಗ ರಂಗನಾಥ್ ರಾವ್ ಸರ್ ಗೆ ಹೇಳ್ತೀನಿ ಅಂತ ಹೆದರಿಸುತ್ತಿದ್ದೋಳು ಈಗ ತೆಪ್ಪಗೆ ಮಲಗವಳೆ.. ನಮ್ಮನ್ನ ಬಿಟ್ಟು ಹೋಗ್ಬಿಟ್ಲು' . ನನಗೆ ಆಘಾತವಾಯಿತು, ಇಷ್ಟು ಬೇಗ ಹೀಗಾಗುತ್ತದೆ ಎಂದು ನಾನು ಎಣಿಸಿರಲಿಲ್ಲ.
ಸ್ವಲ್ಪ ಹೊತ್ತು ಇದ್ದು ಸಮಾಧಾನದ ಮಾತಾಡಿ, ಅಲ್ಲಿಂದ ಹೊರಟೆ... ಮನಸ್ಸು ಹಿಂದಕ್ಕೆ ಓಡಿತು.
ಆಗಿನ್ನು ಆಪ್ತ ಸಮಾಲೋಚಕನಾದ ಹೊಸತು, ಬುಧವಾರ ಸಂಜೆ ಹೋದೊಡನೆ, ಪ್ರಸನ್ನ ಆಪ್ತ ಸಲಹಾ ಕೇಂದ್ರದ ಬಾಗಿಲು ತೆಗೆದು,  ಬಂದಿರುವ ಎಲ್ಲರ ಹೆಸರನ್ನು ಅವರು ಬಂದ ಸಮಯದಂತೆ  ಬರೆದುಕೊಂಡು, ಮುಂದುವರೆಯುವುದು ಪದ್ಧತಿ. ಅಂದು ಮೊದಲ ಹೆಸರು ವಸಂತ ಲಕ್ಷ್ಮಿ. ಅವರನ್ನು ಕರೆದಾಗ ' ನಾನು ಡಾಕ್ಟರ್ ಹತ್ತಿರ ಮಾತಾಡಬೇಕು' ಅಂದರು ... ಮೊದಲು ಆಪ್ತ ಸಮಾಲೋಚಕರ ಹತ್ತಿರ ಮಾತನಾಡಬೇಕು ನಂತರ ಡಾಕ್ಟರನ್ನು ನೋಡಬಹುದು ಎನ್ನುವ ಉತ್ತರಕ್ಕೆ 'ನಾನು ಡಾಕ್ಟರ್ ಹತ್ತಿರವೇ ಮಾತನಾಡೋದು, ಬೇರೆ ಯಾರ ಹತ್ತಿರವೂ ಮಾತಾಡಲ್ಲ' ಎಂದು ಖಡಾ ಖಂಡಿತವಾಗಿ ಉತ್ತರಿಸಿದ್ದು ನನಗೂ ಹೊಸ ಅನುಭವ.
ಅಂದಿನ ದಿನದ ಕೊನೆಯ ಘಟ್ಟದಲ್ಲಿದ್ದೆ... ಆಗ ಬಂದವರು ಅದೇ ವಸಂತ ಲಕ್ಷ್ಮಿ, ಡಾಕ್ಟರ್ ( ಪದ್ಮಶ್ರೀ ಡಾ. ಸಿ ಆರ್ ಚಂದ್ರಶೇಖರ್)  ಕೊಟ್ಟ ಚೀಟಿಯನ್ನು ಹಿಡಿದು... ಅವರು ಹೇಳಿದಂತೆ ನನ್ನ ಬಳಿ ಮಾತಾಡಲು. ನನ್ನ ಬಳಿ ಮಾತಾಡಲು ಇಷ್ಟಪಡದಿದ್ದ ವ್ಯಕ್ತಿಯನ್ನು, ನನ್ನ ಬಳಿಯೇ ಕಳಿಸಿದ್ದು ಕಾಕತಾಳಿಯವೇನೋ.

ಮುಂದಿನ ದಿನಗಳಲ್ಲಿ ಫೋನ್ ಮಾಡಿ 'ಸರ್ ನಿಮ್ಮತ್ರ ಮಾತಾಡಬೇಕು ಸ್ವಲ್ಪ' ಅಂದಾಗ ನಾನು ' ನನ್ನತ್ರ ಮಾತಾಡಲ್ಲ ಅಂದಿದ್ರಲ್ಲಪ್ಪ ಈಗೇನು' ಅಂತ ತಮಾಷೆ ಮಾಡಿದಾಗ ' ಹೋಗಿ ಸರ್ ನೀವು.. ಅವತ್ತಿಂದೇ ಇಟ್ಕೊಂಡಿದ್ದೀರಾ' ಅಂತ ಹುಸಿಗೋಪ ತೋರಿಸಿ ಹೇಳಿದವರು ವಸಂತ ಲಕ್ಷ್ಮಿ.
ಪೊಲೀಸ್ ಇಲಾಖೆಯಿಂದ ನಿವೃತ್ತರಾದ, ಮನೆಯ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದ ಅಪ್ಪ, ಚರ್ಮದ ಕಾಯಿಲೆಯಿಂದ ನರಳುತ್ತಿದ್ದ ಅಮ್ಮ, ಬೇಜವಾಬ್ದಾರಿ ತಮ್ಮ, ಮದುವೆಯಾಗದ ಮೂರು ಹೆಣ್ಣು ಮಕ್ಕಳಲ್ಲಿ ದೊಡ್ಡವರು ವಸಂತ ಲಕ್ಷ್ಮಿ. ಪದವೀಧರಳಾದರೂ ಇನ್ನೂ ಸರಿಯಾದ ಕೆಲಸ ಸಿಕ್ಕದೆ ಒಂದು NGO ನಲ್ಲಿ ಕೆಲಸ ಮಾಡುತ್ತಿದ್ದವರು.
ಸ್ವಭಾವತಃ ಸ್ವಾಭಿಮಾನಿ, ಸ್ವಲ್ಪ ಕ್ರಾಂತಿಕಾರಿ ಚಿಂತನೆಗಳು (ಕೆಲವು ಅಸಹಜ ಎನ್ನಿಸಿದ್ದುಂಟು) , ತಪ್ಪು ಎನಿಸಿದ ಸಂದರ್ಭಗಳನ್ನು ಖಂಡಿಸುವ, ಅದನ್ನು ಸರಿಪಡಿಸಬೇಕೆಂಬುವ ಪ್ರಯತ್ನ ಮಾಡುವವರು. ಲೋಕದ ಡೊಂಕನ್ನು ತಿದ್ದುವ ಪ್ರಯತ್ನದಲ್ಲಿ ಸಹಜವಾಗಿಯೇ ಬಹಳ ಸಲ ಸೋಲುಂಡವರು. ತಾವು ಕೆಲಸ ಮಾಡುತ್ತಿದ್ದ NGO ನಲ್ಲಿ ಆಗುತ್ತಿದ್ದ ಕೆಲವು ವ್ಯವಹಾರಗಳನ್ನು ಪ್ರಶ್ನಿಸಿ, ಅದರಲ್ಲೆಲ್ಲ ತಲೆ ತೂರಿಸಬಾರದೆಂದು ಹೇಳಿಸಿಕೊಂಡವರು... ಅದಕ್ಕಾಗಿ ಬೇಸರ, ಕೋಪಗೊಂಡವರು. ಜೀವನೋಪಾಯಕ್ಕಾಗಿ ಕೆಲಸ ಬೇಕಾಗಿ,  ಏನೂ ಮಾಡಲಾಗದೆ ಅಸಹಾಯಕರಾದವರು.
ತಾನು ಒಂದು NGO ಶುರು ಮಾಡಿ ಸಮಾಜ ಸೇವೆ ಮಾಡಬೇಕೆಂಬ ಆಸೆಯುಳ್ಳವರು.. ಜೊತೆ ಜೊತೆಗೆ ಸರ್ಕಾರಿ ಕೆಲಸ ಸಿಕ್ಕರೆ ಸೇರಬೇಕೆಂದು ಪ್ರಯತ್ನ ಮಾಡುತ್ತಿದ್ದವರು. ಇದೆಲ್ಲಾ ಒಂದೆರಡು ಸುತ್ತು ಮಾತಿನ ನಂತರ ತಿಳಿದ ವಿಷಯ. 

ಮೊದಲು ಕಂಡದ್ದು  ತನ್ನ ವೇಷಭೂಷದ ಬಗ್ಗೆಯೂ ಆಸಕ್ತಿ ಇಲ್ಲದ, ತಲೆ ಕೂದಲನ್ನೂ ಸರಿಯಾಗಿ ಬಾಚದ ವ್ಯಕ್ತಿಯಾಗಿ.
ಸಮಸ್ಯೆಯ ಮೂಲವನ್ನು ತಿಳಿಯುವ ಪ್ರಯತ್ನದಲ್ಲಿ ತಿಳಿದ ವಿಷಯಗಳು:

ತನ್ನ ಕೆಲಸಕ್ಕೆ ಸಂಬಂಧಿಸಿದ ವಿಷಯವಾಗಿ ಪೊಲೀಸ್ ಇಲಾಖೆಗೆ ಎಡತಾಕುತ್ತಿದ್ದಾಗ ಪರಿಚಯವಾಗಿದ್ದು ಆ ವ್ಯಕ್ತಿ. ತನ್ನ ಕೆಲಸಕ್ಕೆ
ಪೂರಕವಾಗಿ ಸ್ಪಂದಿಸುತ್ತಿದ್ದ ಆ ವ್ಯಕ್ತಿಯ ಬಗ್ಗೆ ಸ್ವಲ್ಪ ಅಭಿಮಾನ. ಪೊಲೀಸ್ ಇಲಾಖೆಯಲ್ಲಿ ಒಳ್ಳೆಯವರೂ ಇದ್ದಾರೆ... ಎಂದು ಅಪ್ಪನೊಡನೆ ಹಂಚಿಕೊಂಡಿದ್ದಾರೆ. ಆಗಾಗ ಕೆಲಸದ ವಿಷಯವಾಗಿ ಫೋನ್ ಮಾಡಿ ಮಾತಾಡುವಾಗ, ಮುಖತಃ ಭೇಟಿಯಾದಾಗ ಒಂದಷ್ಟು ವೈಯಕ್ತಿಕ ವಿಚಾರಗಳನ್ನು ಮಾತಾಡಿ ಆತ್ಮೀಯರಾಗಿದ್ದಾರೆ.  ಸಮಯ ಕಳೆದಂತೆ ಆತ್ಮೀಯತೆ ಅನುರಾಗವಾಗಿದೆ. ಹೋಟೆಲ್, ಸಿನಿಮಾ ಹೀಗೆ ಜೊತೆಯಲ್ಲಿ ಓಡಾಟ ಸಾಗಿದೆ.  ಮುಂದಿನ ಹೆಜ್ಜೆ.. ಮದುವೆ ತಾನೇ..
ಮನೆಯಲ್ಲಿರುವ ಜವಾಬ್ದಾರಿಗಳು, ಹಾಗೂ ಕೆಲವು ಅಡೆತಡೆಗಳನ್ನು ನಿವಾರಿಸಿಕೊಂಡ ನಂತರ ಮದುವೆಯಾಗುವುದಾಗಿ ಆಶ್ವಾಸನೆ ಆ ವ್ಯಕ್ತಿಯಿಂದ ಸಿಕ್ಕಿದೆ. 
ಹೀಗಿರುವಾಗ ಒಮ್ಮೆ ಆಕಸ್ಮಿಕವಾಗಿ ಆ ವ್ಯಕ್ತಿಯ ಆಫೀಸಿಗೆ ಹೋದಾಗ, ಆತ ರಜೆಯ ಮೇಲಿರುತ್ತಾರೆ. ಅದಕ್ಕೆ ಕಾರಣ ಅವರ ಮಗುವಿನ ಅನಾರೋಗ್ಯ... ಆಸ್ಪತ್ರೆಗೆ ಓಡಾಟ ಎಂದು ತಿಳಿದಾಗ ಆಘಾತವಾಗುತ್ತದೆ. ನಂತರದ ಘಟ್ಟದಲ್ಲಿ ಏನೆಲ್ಲ ಮಾತುಕತೆಗಳು ನಡೆದು, ತಾನು ಮೋಸ ಹೋಗಿರುವುದು ಖಚಿತವಾಗಿದೆ... ಹಾಗಾಗಿ ನಿರಾಸೆ, ಕೋಪ, ಅವಮಾನ ತನ್ನ ಬಗ್ಗೆ ಬೇಜಾರು... ಎಲ್ಲ ಭಾವಗಳು ಒಂದಾಗಿ ಕಾಡಿ ಖಿನ್ನತೆಗೆ ಒಳಗಾಗಿದ್ದಾರೆ.
ಆ ವ್ಯಕ್ತಿಯನ್ನು ಭೇಟಿ ಮಾಡಲು ಇಚ್ಚಿಸದ ಕಾರಣ.. ತಾನು ಮಾಡುವ ಕೆಲಸವನ್ನೇ ಬಿಟ್ಟಿದ್ದಾರೆ.
ಡಾಕ್ಟರ್ ಕೊಟ್ಟ ಔಷಧಗಳು ಹಾಗೂ ಹಲವಾರು ಸುತ್ತಿನ ಮಾತುಕತೆಗಳ ನಂತರ ಜೀವನದ ಸೋಲು ಗೆಲುವುಗಳನ್ನು ವ್ಯಾವಹಾರಿಕವಾಗಿ ಎದುರಿಸಬೇಕು, ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂಬ ವಿಷಯವನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದ ವಸಂತ ಲಕ್ಷ್ಮಿಗೆ, ಅವರಲ್ಲಿರುವ ಸಾಮರ್ಥ್ಯವನ್ನು ಎತ್ತಿ ಹೇಳಿ, ಕೆಲಸ ಹುಡುಕುವ ಅದರಲ್ಲೂ ಸರ್ಕಾರಿ ಕೆಲಸ ಹುಡುಕುವ ಪ್ರಯತ್ನಗಳನ್ನು ಮುಂದುವರಿಸಲು ಸೂಚಿಸಿದ್ದು. ಸರ್ಕಾರಿ ಕೆಲಸಕ್ಕೆ ಸೇರಲು ವಯಸ್ಸಿನ ಮಿತಿ ಮುಟ್ಟಲು ಎರಡು ವರ್ಷಕ್ಕೂ ಕಡಿಮೆ ಅಂತರವಿತ್ತು. ಅದೃಷ್ಟವಶಾತ್   ಭೂಮಾಪನ ಇಲಾಖೆಯ surveyor ಹುದ್ದೆಗೆ ಎಂದೋ ಹಾಕಿದ್ದ application ಆಧರಿಸಿ ಸಂದರ್ಶನಕ್ಕೆ ಕರೆ ಬಂದು, ಒಂದು ವರ್ಷದ ಕಾಲ ತರಬೇತಿ ಪಡೆದ ನಂತರ ಕೆಲಸ ಕೊಡುವುದಾಗಿ order ಬಂತು. ವಯಸ್ಸಿನ ಮಿತಿಯ ಕಾರಣ ಯಾವುದೇ ಯೋಚನೆ ಮಾಡದೆ, ಅದಕ್ಕೆ ಒಪ್ಪಿ ತರಬೇತಿಯನ್ನು ಪೂರೈಸಿ ಕೆಲಸಕ್ಕೆ ಸೇರಿದ ವಸಂತ ಲಕ್ಷ್ಮಿ, ಜೀವನದ ಒಂದು ಘಟ್ಟವನ್ನು ದಾಟಿ.. ಹೊಸ ಕೆಲಸದಲ್ಲಿ, ಹೊಸ ಜೀವನವನ್ನು ಕಂಡುಕೊಂಡರು. 
ಯಾವುದೋ ಒಬ್ಬ ಬಡ ರೈತನ ಜಮೀನಿನ survey ಮಾಡಿ ಅವನ ಸಮಸ್ಯೆಯನ್ನು ಪರಿಹರಿಸಿ ಅವನಿಂದ ಸಿಕ್ಕ ಮೆಚ್ಚುಗೆಯನ್ನು ನನ್ನೊಡನೆ ಹಂಚಿಕೊಂಡರು.
ಮನೆಯ ಜವಾಬ್ದಾರಿಯನ್ನು ತಾನೆ ಹೊತ್ತು, ತಂಗಿಯು ಇಷ್ಟಪಟ್ಟ ಹುಡುಗನ ಜೊತೆ ಮದುವೆಯಾಗಲು ಅಪ್ಪ ಅಮ್ಮನನ್ನು ಒಪ್ಪಿಸಿ... ಮದುವೆ ಮಾಡಿಸಿದರು. ಈ ಸಮಯದಲ್ಲಿ ಅಪ್ಪ ಅಮ್ಮನನ್ನು ನನ್ನ ಬಳಿ ಕರೆ ತಂದಿದ್ದರು. 
ಜೀವನ ಸಾಗುತ್ತಿತ್ತು, ಆಗಾಗ ಫೋನ್ ಮಾಡಿ, ವಿಷಯಗಳನ್ನು ತಿಳಿಸುತ್ತಿದ್ದರು, ಕೆಲ ವಿಚಾರಗಳಿಗೆ ಸಲಹೆಯನ್ನು ಕೇಳುತ್ತಿದ್ದರು. ಅಪ್ಪನನ್ನು ನಾಲ್ಕಾರು ಸಲ ಕರೆತಂದು ಕೆಲ ವಿಚಾರಗಳನ್ನು ಚರ್ಚಿಸಿ, ಅಪ್ಪ, ಮನೆಯ ವಿಷಯವಾಗಿ ಜವಾಬ್ದಾರಿಯಿಂದ ವರ್ತಿಸಲಿ ಎಂದು ಪ್ರಯತ್ನ ಮಾಡುತ್ತಿದ್ದರು.  
ವಿಧಿಯಾಟ ಬೇರೆಯೇ ಇತ್ತು. ವಿಪರೀತ ತಲೆನೋವು ಶುರುವಾಗಿ, ಯಾವ ಔಷದ ಗಳಿಂದಲೂ ಪ್ರಯೋಜನವಾಗದೆ... ಡಾಕ್ಟರ್ ಸಿಆರ್ ಚಂದ್ರಶೇಖರ್ ಅವರ ಸಲಹೆಯಂತೆ NIMHANS ಗೆ ಹೋದಾಗ, ತಲೆಯಲ್ಲಿ tumor ಎಂದು ಗುರುತಿಸಿ .. ಅದಕ್ಕೆ ಆಪರೇಷನ್ ಸಹ ಆಯ್ತು. ನಾನೂ ಹೋಗಿ ಸಮಾಧಾನ ಮಾಡಿ ಬಂದೆ. ತಲೆನೋವು ವಾಸಿ ಆದಂತೆ ಕಂಡರೂ.. ವಸಂತ ಲಕ್ಷ್ಮಿಯ ಉತ್ಸಾಹ ಕಡಿಮೆಯಾಯಿತು. ಕಷ್ಟಪಟ್ಟು ಕೆಲಸಕ್ಕೆ ಹೋದರೂ...field work ಮಾಡಲಾಗದೆ... ಆಫೀಸಿನಲ್ಲಿ ಕೂತು ಮಾಡುವ ಕೆಲಸಕ್ಕೆ ಅನುಮತಿ ಪಡೆದರು.
ಒಂದು ದಿನ ನನ್ನ ಆಫೀಸಿಗೆ ಬಂದ ವಸಂತ ಲಕ್ಷ್ಮಿಯನ್ನು ನೋಡಿದಾಗ '"ಅಯ್ಯೋ " ಅನ್ನಿಸಿದ್ದು ಸತ್ಯ. " ಸರ್, ಇವತ್ತು ನಾನೇ ಇಷ್ಟಪಟ್ಟು ನಿಮ್ಮತ್ರ ಮಾತಾಡಕ್ಕೆ ಬಂದಿದೀನಿ, ಹಳೆದನ್ನ ನೆನೆಸಿ ತಮಾಷೆ ಮಾಡಬೇಡಿ... ಮಾತಾಡಲ ಸರ್" ಎಂದು ಆರಂಭಿಸಿದ ವಸಂತ ಲಕ್ಷ್ಮಿ... ಸುಮಾರು ಎರಡು ಗಂಟೆಗಳ ಕಾಲ ತಮ್ಮ ಜೀವನದ ಪುಟಗಳನ್ನು ತಿರುವಿ ಹಾಕಿದರು. " ಆ ಗೋಮುಖ ವ್ಯಾಘ್ರನ ... ಅಂತಹವರನ್ನು ಕೊಲ್ಬೇಕು ಸರ್.. ಯಾವ ಹೆಣ್ಣು ಮಕ್ಕಳಿಗೂ ಅನ್ಯಾಯ ಆಗಬಾರದು " ಎಂದು ಕೋಪ ತೋಡಿಕೊಂಡರು. ನನಗೆ ಡಾಕ್ಟರ್ ಗೆ ಧನ್ಯವಾದ ಹೇಳಿದರು. 
" ಶಕ್ತಿ ಉಡುಗಿ ಹೋಗಿದೆ ಸರ್.. ಇನ್ನು ತುಂಬಾ ಕಷ್ಟ... ಜೀವನ ಸಾಕು ಅನಿಸಿದೆ" ಎಂದು ಒತ್ತಿ ಹೇಳಿದರು. 
ಮಾತಿನ ಮಧ್ಯೆ ನೀರು ಕೇಳಿದರು, " ಸರ್ ಕಾಫಿ ಕೊಡ್ಸಕ್ಕಾಗುತ್ತಾ"  ಎಂದಾಗ  ತರಿಸಿ ಕೊಟ್ಟೆ..ಕಾಫಿಯನ್ನು ಕುಡಿದ ವಸಂತ ಲಕ್ಷ್ಮಿ " ಇನ್ ಯಾವಾಗ ಭೇಟಿ ಮಾಡ್ತೀನಿ ಗೊತ್ತಿಲ್ಲ ಸರ್" ಎಂದು ಹೇಳಿ ಹೊರಟರು. ಅದೇ ಕೊನೆಯ ಭೇಟಿಯಾಯಿತು.
ದಿಟ್ಟವಾಗಿ ಹೋರಾಡಿದ ವಸಂತ ಲಕ್ಷ್ಮಿಗೆ ವಿಜಯಗಳು ಅಲ್ಲಲ್ಲಿ ಸಿಕ್ಕರೂ... ಕಾಲನ ಮುಂದೆ ಸೋಲಲೇ ಬೇಕಾಯಿತು.
ಹೆಸರಿನಲ್ಲೇ ವಸಂತವಿದ್ದರೂ.... ಜೀವನದಲ್ಲಿ ವಸಂತ ಮಾಸದ ಕ್ಷಣಗಳನ್ನು ಕಾಣದ , ಅನುಭವಿಸಲು ಆಸ್ಪದ ಸಿಗದ ವ್ಯಕ್ತಿಯಾಗಿ ಕಣ್ಮರೆಯಾದರು.
ಆಪ್ತ ಸಮಾಲೋಚಕನಾಗಿ ನನ್ನ ಪಾತ್ರವನ್ನು ನಿಭಾಯಿಸಿದೆನಾದರೂ... ಕೊನೆಯ ಫಲಿತಾಂಶ ಸರಿ ಹೋಗಲಿಲ್ಲ... ಅನ್ನಿಸ್ತು.  ಮನಸ್ಸು ಭಾರವಾಯಿತು. ವಸಂತ ಲಕ್ಷ್ಮಿಗೆ ಮುಕ್ತಿ ಕೊಡು ದೇವರೇ ಎಂದು ಮನಸ್ಸಿನಲ್ಲಿ ಹೇಳಿಕೊಂಡೆ.. ನಿಟ್ಟುಸಿರು ಬಂತು. 
ಏನಾದರೂ ಜೀವನ ಎಂದಿನಂತೆ ಮುಂದುವರೆಯುತ್ತದೆ.... ಸಾಗಲೇಬೇಕು, ಅದೇ ಜೀವನದ ತಿರುಳು ಅಲ್ಲವೇ?

ನಮಸ್ಕಾರ..


ಡಿ ಸಿ  ರಂಗನಾಥ ರಾವ್
9741128413




   

Comments

  1. Heart wrenching...

    ReplyDelete
  2. ಮನ ಕಲಕುವ ವ್ಯಥೆಯ ಕತೆ.‌ ನಿಮ್ಮ ಬರಹದ ಶೈಲಿ ಚೆನ್ನಾಗಿದೆ ಸರ್...

    ReplyDelete
  3. ವತ್ಸಲಕುಮಾರಿ26 June 2025 at 11:14

    ಮನ ಕಲಕುವ ವ್ಯಥೆಯ ಕತೆ. ನಿಮ್ಮ ಬರಹದ ಶೈಲಿ ಚೆನ್ನಾಗಿದೆ ಸರ್...

    ReplyDelete
  4. Guru Prasanna K26 June 2025 at 15:39

    ತನ್ನದೇನು ತಪ್ಪಿಲ್ಲದಿದ್ದರೂ ಜೀವನದಲ್ಲಿ ನೋವು ನಿರಾಸೆ ಹತಾಶೆ ಅನುಭವಿಸುವ ಜನರು ಸಮಾಜದಲ್ಲಿ ಬಹಳಷ್ಟ ಇದ್ದಾರೆ. ಅವರುಗಳ ಒಂದು ಉದಾಹರಣೆಯಂತೆ ಈ ಲಕ್ಷ್ಮಿ ಗೋಚರಿಸುತ್ತಾರೆ.

    ಅದೇಕೋ ವಿಧಿ ಇಂತಹವರಿಗೆ ಮತ್ತಷ್ಟು ಕಷ್ಟ ನಷ್ಟಗಳನ್ನೇ ಉಂಟುಮಾಡುತ್ತದೆ. ಆಕೆಯ ನೋವು ದುಃಖವನ್ನು ನಮ್ಮ ಕಣ್ಣಮುಂದೆಯೇ ನೋಡುತ್ತಿರುವಂತೆ ಚಿತ್ರದಿದ್ದಾರೆ ಲೇಖಕರು.

    ಲೇಖನ ಓದಿ ಬಹಳ ನಿರಾಸೆ, ಬೇಸರ ಮನ ಕ್ಕೆ ಉಂಟಾಗುತ್ತಿದೆ. ನನ್ನ ಅಕ್ಕ ಅಂದರೆ ದೊಡ್ಡಪ್ಪನ ಮಗಳು ಶ್ರೀಮತಿ ಮಂಜುಳಾ ಇದೇ ರೀತಿಯ ಜೀವನವನ್ನು ಅನುಭವಿಸಿ ಕನ್ಯೆಯಾಗಿಯೇ ಮೃತರಾದದ್ದು ಮನದ ಮುಂದೆ ಬರುತ್ತಿದೆ.

    ಗುರು ಪ್ರಸನ್ನ
    ಚಿಂತಾಮಣಿ


    ReplyDelete
  5. Struggles are anonymous and life challenges are unstoppable for many of them.!

    ReplyDelete
  6. ನಮಸ್ಕಾರ ಸರ್..... ವಸಂತ ಲಕ್ಷ್ಮಿ ಬಗ್ಗೆ ತುಂಬಾ ಸರ್ತಿ ನನ್ನ ಬಳಿ ಮಾತಾಡಿದ್ರಿ, ನೆನಪಿಗೆ ಬಂತು. ಕಾಲನ ಮುಂದೆ ನಾವು ತಲೆ ಬಾಗಲೇ ಬೇಕಲ್ವಾ, ಕೆಲವರಿಗೆ ಜೀವನದಲ್ಲಿ ಚೇತರಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ವಸಂತ ಲಕ್ಷ್ಮಿ ಜೀವನವೂ ಹಾಗೆ ಮುರುಟಿ ಹೋಯ್ತು. ಬರವಣಿಗೆ ಶೈಲಿ ತುಂಬಾ ಚೆನ್ನಾಗಿದೆ ಸಾರ್
    ರತ್ನಪ್ರಭಾ

    ReplyDelete
  7. hodhi manassu bara hayithu nicely explained..

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ