ಹರಕೆ - ಅರಿಕೆಯೋ, ಆಮಿಷವೋ?

 


ಬಸವನಗುಡಿಯ ದೊಡ್ಡ ಬಸವಣ್ಣನ ಹಾಗೂ ದೊಡ್ಡ ಗಣೇಶನ ದೇವಸ್ಥಾನ ಎಲ್ಲ ಯಾತ್ರಿಗಳು ಬಂದು ನೋಡುವ ತಾಣ. ಅವುಗಳಿರುವ ಗುಡ್ಡ, ಕಹಳೆ ಬಂಡೆ, ಒಂದಷ್ಟು ಹಸಿರು, ಜೊತೆಗೆ ನಾಗರಿಕತೆಯ ಕುರುಹಾಗಿ ನೀರಿನ ಟ್ಯಾಂಕ್, ಮಂಕುತಿಮ್ಮನ ಕಗ್ಗದ ಕರ್ತೃ ಡಿವಿಜಿ ಯವರ ಪುತ್ಥಳಿ... ಎಲ್ಲವೂ ಅಂದವನ್ನು ಹೆಚ್ಚಿಸಿದೆ. ದೈನಂದಿನ ಓಡಾಟದಲ್ಲಿ,  ಈ ಜಾಗದ ಪಕ್ಕದಲ್ಲಿ ಬಹಳ ಸಲ ಓಡಾಡಿದರೂ, ಒಳ ಹೋಗಿ ಬರುವುದು ಕಡಿಮೆಯೇ. 

ಹೋದ ಸೋಮವಾರ ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರ ಹಾಗೂ ಪೂಜೆ. ಇದನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ನನಗಾಯಿತು. ಅದಕ್ಕೆ ಕಾರಣ ನನ್ನ ಹೆಂಡತಿ ವಿಜಯ ಹೊತ್ತಿದ್ದ ಹರಕೆ. ಹರಕೆಗೆ 12 ವರ್ಷ ಎನ್ನುವ ಮಾತಿದೆ... ಆದರೆ ಈ ಹರಕೆ ಸಲ್ಲಿಸಲು ಸುಮಾರು ಮೂರು 12 ವರ್ಷಗಳು ಕಳೆದದ್ದು ಸತ್ಯ. ನನ್ನ ಮಗಳು ಚಿಕ್ಕವಳಿದ್ದಾಗ ಹರಸಿಕೊಂಡಿದ್ದಂತೆ, ಈಗ ಕಾಲ ಕೂಡಿ ಬಂದಿದ್ದು. ಅದರ ಫಲವೇ ಮೊದಲ ಬಾರಿ ದೊಡ್ಡ ಗಣೇಶನ ಮುಂದೆ ಕೂತಿದ್ದು, ಪೂಜೆ ಮಂಗಳಾರತಿಯಲ್ಲಿ ಭಾಗಿಯಾಗಿದ್ದು. ಸಾಮಾನ್ಯವಾಗಿ ಅಲ್ಲಿಗೆ ಹೋದಾಗ, ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ, ಬರುವುದು ವಾಡಿಕೆ.

ಬೆಣ್ಣೆಯ ಅಲಂಕಾರ ನಿಜಕ್ಕೂ ಒಂದು ಕಲೆ. ಅಷ್ಟು ದೊಡ್ಡ ವಿಗ್ರಹಕ್ಕೆ ಬೆಣ್ಣೆಯನ್ನು ಹಚ್ಚಿ, ಬಣ್ಣದ ಕಾಗದಗಳಿಂದ ಅಲಂಕರಿಸಿ, ವಿಗ್ರಹಕ್ಕೆ ಸುಂದರ ರೂಪವನ್ನು ಕೊಡುವುದು. ಜೊತೆಗೆ ವಿದ್ಯುತ್ ದೀಪದ ಬೆಳಕಿನ ಅಲಂಕಾರ. ಎಂಥವರ ಮನಸ್ಸನ್ನೂ ಸೆಳೆಯುವ ದೃಶ್ಯ. ಇನ್ನು ಭಕ್ತ ಸಮುದಾಯಕ್ಕೆ ಕೇಳಬೇಕೆ...?

ಮಂಗಳಾರತಿಯ ಸಮಯದಲ್ಲಿ ಎಲ್ಲ ದೀಪಗಳನ್ನು ಆರಿಸಿ, ಆರತಿಯ ಬೆಳಕಿನಲ್ಲಿ ದೇವರನ್ನು ಕಾಣುವ ನೋಟ ಅತಿ ಸುಂದರ.  ನೋಡುವ ಭಕ್ತರ ಸಂತೋಷದ ಉದ್ಗಾರ... ಜೊತೆ ಜೊತೆಗೆ ಅವರವರದೇ ರೀತಿಯ ಭಕ್ತಿ ಪ್ರದರ್ಶನ. ನನ್ನ ಬಳಿ ಕೂತಿದ್ದ ಎರಡನೇ ತರಗತಿ ಓದುವ ಹುಡುಗ ಹಾಗೂ ಅವನ ತಂಗಿ ಹೇಳುತ್ತಿದ್ದ ಶ್ಲೋಕಗಳು, ನನ್ನ ಭಕ್ತಿ ಭಾವವನ್ನು ಉತ್ತೇಜಿಸಿದವು ಎಂದರೆ ಅತಿಶಯೋಕ್ತಿಯಲ್ಲ. 

ಒಂದು ದೊಡ್ಡ ಹರಕೆಯನ್ನು ತೀರಿಸಿದ ತೃಪ್ತಿ ನನ್ನ ಮಡದಿಯದು. 

ಗಣೇಶ ಬೆಣ್ಣೆ ಅಲಂಕಾರಪ್ರಿಯನಂತೆ.  ಬೆಣ್ಣೆ ಅಲಂಕಾರ ಮಾಡಿರುವುದು ಬಹಳ ಸಲ ನೋಡಿದ್ದು, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಪ್ರಾಕಾರದಲ್ಲಿರುವ ಗಣಪತಿಗೆ, ಹಾಗೂ ನಮ್ಮ  ಆವಲ ಹಳ್ಳಿ BDA ಪಾರ್ಕ್ ಗಣಪತಿಗೆ.  ಚನ್ನಪಟ್ಟಣದ ಸಮೀಪ  ದೊಡ್ಡ ಮಳೂರಿನಲ್ಲಿರುವ ಬಾಲಕೃಷ್ಣನ ವಿಗ್ರಹಕ್ಕೆ ಬೆಣ್ಣೆ ಅಲಂಕಾರ ಮಾಡಿದ್ದನ್ನು ನೋಡಿದ್ದೇನೆ.

“ಹರಕೆ ಹೊರುವುದು” ಎಂದಾಗ ಅದೊಂದು ಭಾರವೇನೋ ಅನಿಸುತ್ತದೆ. ಒಂದು ರೀತಿಯ ಋಣ ಭಾರವಾ? ಇಲ್ಲದಿದ್ದರೆ ವಚನಭ್ರಷ್ಟವಾಗುವುದು ಅಲ್ಲವೇ? ಹರಕೆ ಹೊರುವುದು / ಹರಕೆ ಕಟ್ಟುವುದು/ ಮುಡಿಪು ಕಟ್ಟುವುದು... ನನಗೆ ತಿಳಿದಂತೆ, ಸಾಮಾನ್ಯವಾಗಿ ಯಾವುದಾದರೂ ನಮ್ಮ ಕೆಲಸ ಆಗಬೇಕಾದಾಗ, ದೇವರಲ್ಲಿ ಪ್ರಾರ್ಥನೆ ಮಾಡುವುದು, ಆ ಕೆಲಸ ಸಲೀಸಾಗಿ ಆದರೆ ದೇವರಿಗೆ ಇಂಥ ಸೇವೆಯನ್ನು ಮಾಡುತ್ತೇನೆ ಎಂದು ಮನಸ್ಸಿನಲ್ಲಿ ಸಂಕಲ್ಪ ಮಾಡುವುದು. ಕೆಲವು ಸಲ ಕಾಸನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ( ಮುಡುಪು ಕಟ್ಟುವುದು) ಇಟ್ಟಿರುವುದನ್ನು ನಾನು ನೋಡಿದ್ದೇನೆ.

ಪ್ರಾರ್ಥನೆ ಮಾಡಿದ್ದು ದೇವರಲ್ಲಿ ಅರಿಕೇಯೇ.. ಅದರಲ್ಲಿ ಯಾವ ಸಂಧಿಗ್ದವೂ ಇಲ್ಲ. ಆದರೆ ಇಂಥ ಸೇವೆಯನ್ನು ಮಾಡುತ್ತೇನೆ, ಇಷ್ಟು ಕಾಸನ್ನು ಮುಡಿಪಾಗಿ ಇಟ್ಟಿದ್ದೇನೆ ಎನ್ನುವುದು... ನಮ್ಮ ಕೆಲಸ ಸರಿಯಾಗಿ ಮಾಡಿಕೊಟ್ಟಾಗ,  ದೇವರಿಗೆ ಕೊಡುವ ಕಾಣಿಕೆಯು ಅವನಿಗೆ ತೋರಿಸುವ ಆಮಿಷವೇ ಎನ್ನುವ ಯೋಚನೆ ನನ್ನದು.( ನಿಮಗೆ ಇದು ತಲೆ ಹರಟೆ ಎನ್ನಿಸಿದರೆ... ನಿಮ್ಮ ತಪ್ಪಲ್ಲ) 



ಹರಕೆಗಳು ತರಹೇವಾರಿ. ತುಂಬಾ ಸಾಮಾನ್ಯವಾಗಿ ಮಾಡಿಕೊಳ್ಳುವ ಹರಕೆ, ದೇವರಿಗೆ ತಲೆ ಕೂದಲು ಕೊಡುವುದು... ಅಂದರೆ ಬೋಡು ಮಾಡಿಸಿಕೊಳ್ಳುವುದು. ಇದು ತಿರುಪತಿ ತಿಮ್ಮಪ್ಪನಿಗಂತೂ ಬಹಳ ವಿಶೇಷ. ತಿರುಪತಿಗೆ ಹೋದಾಗ ಎಲ್ಲಿ ನೋಡಿದರೂ ಕಾಣುವುದು ಬೋಡು ತಲೆಗಳೆ, ಹೆಣ್ಣಾಗಲಿ ಗಂಡಾಗಲಿ. ಈ ತಲೆ ಕೂದಲಿಂದ ಹಣ ಮಾಡುವ ಏಕೈಕ ದೇವರು ತಿರುಪತಿ ತಿಮ್ಮಪ್ಪನೇ ಇರಬೇಕು. ಗಂಡನ ತಲೆ ಕೂದಲನ್ನು  ಕಾಣಿಕೆಯಾಗಿ ಕೊಡುತ್ತೇನೆ ಎಂದು ಹರಸಿಕೊಳ್ಳುವ ಪತಿವ್ರತೆ ಪತ್ನಿಯರು ಇರುತ್ತಾರೆಂದು ಕೇಳಿದ್ದೇನೆ. ಪಾಪ ಗಂಡನ ಪಾಡು ತಿಮ್ಮಪ್ಪನಿಗೆ ಗೊತ್ತು.





 





ನಾನು ಚಿಕ್ಕಂದಿನಲ್ಲಿ ಕಂಡ ಹರಕೆಗಳಲ್ಲಿ, ಸ್ವಲ್ಪ ಹಿಂಸೆಯೇ ಎನಿಸಬಹುದಾದ ಬಾಯಿ ಬೀಗದ ಹರಕೆ... ಇದರಲ್ಲಿ ಕಬ್ಬಿಣದ ತಂತಿಯನ್ನು ಕೆನ್ನೆಗಳ ಮೂಲಕ ಚುಚ್ಚಿ, ಅದನ್ನು ಬೀಗದ ತರಹ ಗಟ್ಟಿ ಮಾಡುವುದು..

ಕೊಂಡ ಹಾಯುವ ಹರಕೆ... ನಿಗಿ ನಿಗಿ ಕಾಯುವ ಕೆಂಡದ ಮೇಲೆ ಬರಿಗಾಲಲ್ಲಿ ದೇವರನ್ನು ಹೊತ್ತು ನಡೆಯುವುದು, ಕೆಲಸಲ ಹಾಗೆಯೇ ನಡೆಯುವುದು... 



ಸಿಡಿ ಏರುವ ಹರಕೆ... ಏತದ ತರ ಇರುವ ಮರದ ತುದಿಗೆ ನೇತುಹಾಕಿಕೊಂಡು, ಕೆಲ ಸಮಯ ಇರುವುದು.

ಚಿಕ್ಕ ರಥವನ್ನು ಬೆನ್ನಿನ ಚರ್ಮಕ್ಕೆ ಸಿಕ್ಕಿಸಿ ಎಳೆದುಕೊಂಡು ಹೋಗುವುದು. 

ನನ್ನ ಮಡದಿ ಹೊತ್ತ ತುಲಾಭಾರದ ಹರಕೆಯನ್ನು  ನಂಜನಗೂಡಿನಲ್ಲಿ ನನ್ನ ಮಗಳು ಹಾಗೂ  ಮೊಮ್ಮಗಳಿಗೆ ಬೆಲ್ಲದಲ್ಲಿ ತೂಗಿಸುವ ಮೂಲಕ ಸಲ್ಲಿಸಿದ್ದಾಯಿತು. ಇದಕ್ಕೆ ಯಾವುದೇ ವಸ್ತುವನ್ನು ಬೇಕಾದರೂ ನಾವು ಹರಕೆಯ ಸಮಯದಲ್ಲಿ ಆಯ್ದುಕೊಳ್ಳಬಹುದು. 

ಶ್ರೀ ಕೃಷ್ಣ ತುಲಾಭಾರದ ಕಥೆ ಜನಜನಿತ. ಸತ್ಯಭಾಮೆಯು ತನ್ನಲ್ಲಿದ್ದ ಎಲ್ಲಾ ಚಿನ್ನದ ನಗ ನಾಣ್ಯಗಳನ್ನು ಹಾಕಿದಾಗಲೂ ಶ್ರೀ ಕೃಷ್ಣನ ತೂಕಕ್ಕೆ ಸಮನಾಗದಿದ್ದಾಗ, ರುಕ್ಮಿಣಿಯು ಭಕ್ತಿಯಿಂದ ಇಟ್ಟ ಒಂದು ತುಳಸಿ ದಳ, ತಕ್ಕಡಿಯನ್ನು ಮೇಲೆತ್ತಿತು ಎನ್ನುವಾಗ.. ಆಡಂಬರಕ್ಕಿಂತ ಭಕ್ತಿಗೆ ಪ್ರಾಧಾನ್ಯತೆ ಎನ್ನುವುದು ಸರಿ ಎನ್ನಿಸುತ್ತದೆ.

ದೇವರ ಗುಡಿಯ ಸುತ್ತ, ಉರುಳುತ್ತಾ ಸುತ್ತು ಬರುವುದು ಉರುಳು ಸೇವೆ. ದೇವಸ್ಥಾನ ಚಿಕ್ಕದಿದ್ದರೆ ಪರವಾಗಿಲ್ಲ. ನನ್ನ ಹೆಂಡತಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಸ್ಥಾನದ ಹೊರಾಂಗಣದಲ್ಲಿ ಉರುಳು ಸೇವೆ ಮಾಡಿದ್ದು, ಅದು ತುಂಬಾ ದೊಡ್ಡ ಸುತ್ತು... ಮರಳಿನ ಮೇಲೆ ಬಹುಬಾಗ ಉರುಳಿದ್ದರಿಂದ ಮೈಕೈ ನೋವು ಸ್ವಲ್ಪ ಕಡಿಮೆಯಾಗಿರಬಹುದು. ಬೆಳಗಿನ ಮರಳಿನ ತಣುವು / ಬಿಸಿಲೇರಿದ ನಂತರದ ಶಾಖ ವಿಭಿನ್ನ ಅನುಭವ.  



ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆಸ್ನಾನ ಎಂಬ ಹೆಸರಿನ ಉರುಳು ಸೇವೆ... ಬ್ರಾಹ್ಮಣರು ಊಟ ಮಾಡಿದ ನಂತರ, ಆ ಎಂಜಲ ಎಲೆಯ ಮೇಲೆ, ಉರುಳುವುದು... ಅವರ ಭಾವ... ಅವರವರ ಭಕುತಿ... ಅದು ಅವರಿಷ್ಟ.

ಆದರೆ ಬೆತ್ತಲೆ ಸೇವೆ, ದೇವದಾಸಿ ಬಿಡುವುದು ಇವು ಸಮಾಜದ ಅನಿಷ್ಟಮುಖ. ದೇವರು, ಭಕ್ತಿಯ ಹೆಸರಿನಲ್ಲಿ ಹೆಣ್ಣಿನ ಮೇಲೆ ಬಲವಂತವಾಗಿ ಹೇರುವ ಪದ್ಧತಿ ಮಾತ್ರ ಅಮಾನವೀಯ.

ಹರಕೆಯ ಇನ್ನೊಂದು ಮುಖವು ಇದೆಯೆಂದು ನಾನು ಕಂಡುಕೊಂಡಿದ್ದೇನೆ. ಅದು ಸೆರೆ ಹಾಕುವುದು.... ಇಲ್ಲಿ ಗಣೇಶನ ಸಣ್ಣ ವಿಗ್ರಹವನ್ನು ಒಂದು ಡಬ್ಬಿಯಲ್ಲಿ  ಇಟ್ಟು ಪೂಜೆ ಮಾಡಿ ಅದನ್ನು ಮುಚ್ಚುವುದು... ಕೆಲಸ ಆದ ನಂತರ ದೇವರಿಗೆ ಸೆರೆಯಿಂದ ಮುಕ್ತಿ. ಇದರ ಇನ್ನೊಂದು ವಿಧ ವಿಗ್ರಹವನ್ನು ಹಾಲಿನಲ್ಲಿ ಮುಳುಗಿಸುವುದು, ಸಧ್ಯ ಪ್ರತಿ ದಿನ ಹಾಲನ್ನು ಬದಲಾಯಿಸುವುದರಿಂದ, ಅಷ್ಟರಮಟ್ಟಿಗೆ ದೇವರಿಗೆ ವಾಸನೆಯಿಂದ ಮುಕ್ತಿ. ಇದು ಅರಿಕೆಯೂ ಅಲ್ಲ, ಆಮಿಷವೂ ಅಲ್ಲ... ಎಚ್ಚರಿಕೆ ಇರಬಹುದೇ? (ದೇವರೇ ಕ್ಷಮಿಸು ತಂದೆ)



ಹರೋಹರ ಜಾತ್ರೆಯಲ್ಲಿ, ಕಾವಡಿ ಹೊರುವುದು ಎನ್ನುವ ಹರಕೆ, ಬಸವನಗುಡಿ ಕ್ಷೇತ್ರದ ನರಹರಿರಾಯನ ಗುಡ್ಡದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಗೆ ಬಹಳ ಪ್ರಿಯವಾದದ್ದು ಎನಿಸುತ್ತದೆ.

ಈಚೆಗೆ ತರಂಗದಲ್ಲಿ ಬಂದಿದ್ದ ಕಾಂವಡ್ ಯಾತ್ರೆಯ ಭಾಗವಾಗಿ ಗಂಗೆಯಿಂದ ಕೊಡಗಳಲ್ಲಿ ಹೊತ್ತು ತಂದ ನೀರನ್ನು ... ಸಾಕಷ್ಟು ದೂರದಲ್ಲಿರುವ ತಮ್ಮ ಇಷ್ಟದ ಮಹಾದೇವನ ದೇವಸ್ಥಾನಕ್ಕೆ ಹೋಗಿ ಗಂಗಾಭಿಷೇಕ ಮಾಡುವ ಹರಕೆ.

ವಿದ್ಯಾಪೀಠದ ಬಳಿ ಇರುವ ಹರಕೆ ಹನುಮನ ದೇವಸ್ಥಾನದಲ್ಲಿ ಹರಸಿಕೊಂಡರೆ , ಅದು ಪೂರೈಸಿತೆಂದೇ ನಂಬಿಕೆ.

ಹರಕೆ ಸಾವಿರಾರು ತರಹ ಇರಬಹುದೇನೋ... ಬರಿಗಾಲಲ್ಲಿ ಬೆಟ್ಟ ಏರೋದು, ಕಲ್ಲುಹಾಸಿನ ಮೇಲೆ ಊಟ ಮಾಡೋದು, ದೇವರಿಗೆ ಅಭಿಷೇಕ, ಅರ್ಚನೆ, ಉತ್ಸವ, ಹೀಗೆ ನಾನಾ ರೀತಿಯ ಸೇವೆ, ಅನ್ನದಾನ, ಹೆಜ್ಜೆ ನಮಸ್ಕಾರ, ಪ್ರದಕ್ಷಿಣೆ ನಮಸ್ಕಾರ, ಬಗ್ಗಿ ನಮಸ್ಕಾರ, ಮೆಟ್ಟಿಲು ಸೇವೆ, ಹೀಗೆ ಗಣನೆಗೆ ಸಿಗದಷ್ಟು, ಅವರವರ ಮನಸ್ಸಿಗೆ  ಬಂದಂತಹುದು.

ಎಷ್ಟು ತರಹ ಹರಕೆ ಇದೆ ಅನ್ನೋದನ್ನ ನಿನಗೆ ತಿಳಿಸುತ್ತೇನೆ ದೇವರೇ ಅಂತ ಏನಾದರೂ ನಾನು ಹರಕೆ ಹೊತ್ತರೆ, ಆ ಪಟ್ಟೀನ ತಯಾರು ಮಾಡಕ್ಕೆ ಎಷ್ಟು ವರ್ಷ ಬೇಕಾಗುತ್ತೋ, ಹರಕೆ ತೀರತ್ತೋ ಇಲ್ಲವೋ... ಹಾಗಾಗಿ ಬೇಡಪ್ಪ ಆ ಹರಕೆ .

ಪ್ರತಿದಿನ ಸ್ನಾನ ಮಾಡಿ ದೇವರಿಗೆ ಒಂದು ನಮಸ್ಕಾರ ಹಾಕ್ತೀನಿ ಅನ್ನುವುದೇ ಹರಕೆ ಆದರೆ, ಆ ಹರಕೇನ ತೀರ್ಸೋದು, ನಮಗೆ ಒಂದು ಶಿಸ್ತು ಕಲಿಸುತ್ತೆ ಅನ್ನೋ ನಂಬಿಕೆ ನನ್ನದು.

ಹರಕೆ ಹೊತ್ತು ಹಣೆ ಬರಹ ಬದಲಾಯಿಸಕ್ಕೆ ಸಾಧ್ಯನಾ? ಅನ್ನುವ ಒಂದು ಪ್ರಶ್ನೆ ನನ್ನ ಮುಂದೆ ಇದೆ. ಆ ಪ್ರಶ್ನೆಗೆ ಉತ್ತರ ಆಶಾದಾಯಕವಾಗಿಲ್ಲ. ತೇನ ತ್ಯಕ್ತೇನ ಭುಂಜಿತಾಃ ಎನ್ನುವುದು ಸಾರ್ವಕಾಲಿಕ ಸತ್ಯ. ಅವನು ಕೊಟ್ಟದ್ದನ್ನು... ಅದು ಸಂತೋಷವಾಗಲಿ ದುಃಖವಾಗಲಿ ಆದಷ್ಟು ಸಮಚಿತ್ತದಿಂದ ಅನುಭವಿಸುವುದೇ ಸರಿಯಾದ ಮಾರ್ಗ. ಸುಖೇ-ದುಃಖೇ ಸಮೇ ಕೃತ್ವಾ ಲಾಭಾ ಲಾಭೌ ಜಯಾ ಜಯೌ.. ಎಂಬ ಭಗವದ್ಗೀತೆಯ ಸಾಲಿನಂತೆ.

ನಿನ್ನ ನಾನೇನ ಬೇಡಲಿ ದೇವ, ಕೊಡಲೆನೆಗೆ ನಿನ್ನಲೇನುಂಟು ಅದೆಲ್ಲವ ಎನ್ನುವ ಕವನದ ಸಾಲಿನಂತೆ... ಭಾಗ್ಯದಲ್ಲಿ ಇರುವುದನ್ನು ಪಾಲಿಗೆ ಬಂದದ್ದು ಪಂಚಾಮೃತ ಎಂದು ಒಪ್ಪಿಕೊಂಡು ಸವಿದರೆ ಆ ಜೀವನ ಎಂದಿಗೂ ಕಹಿಯಾಗದು.

ಮೇಲಿನ ಹೇಳಿಕೆ, ಹರಕೆ ಹೊತ್ತಷ್ಟು ಸುಲಭವಾದರೂ, ಜೀವನದಲ್ಲಿ ಅಳವಡಿಸಿಕೊಳ್ಳಲು ಅಷ್ಟು ಸುಲಭವಲ್ಲ , ಹರಕೆ ತೀರಿಸುವಂತೆ . ಹರಕೆ ತೀರಿಸುವ ಮನಸ್ಸಿದ್ದರೂ, ಅದು ಆಗುವ ಸಮಯಕ್ಕೆ ಕಾಯಲೇ ಬೇಕಾದ ಅನಿವಾರ್ಯತೆ... ಆಗುವುದು ದೈವೇಚ್ಛೆಯಂತೆಯೇ.

ಇದಕ್ಕೆ ಪೂರಕವಾಗಿ ನಾನು ಚಿಕ್ಕಂದಿನಲ್ಲಿ ಕೇಳಿದ ಒಂದು ದಂತಕಥೆ.

ನನ್ನೂರು ದೊಡ್ಡಜಾಲದ ಹತ್ತಿರ ಇರುವ ಅಕ್ಕಯ್ಯಮ್ಮನ ಬೆಟ್ಟ... ನಾವು ಶಾಲೆಗೆ ಹೋಗುತ್ತಿದ್ದದ್ದು ಅದರ ತಪ್ಪಲಿನಲ್ಲೇ. ನಮಗೆ ಒಂದು ಪ್ರವಾಸಿ ತಾಣ ಸಹ. ಮೇಲೆ ನಾಲ್ಕಾರು ದೇವಸ್ಥಾನಗಳು, ಅದರಲ್ಲಿ ಅಕ್ಕಯ್ಯಮ್ಮನ ದೇವಸ್ಥಾನ ಮುಖ್ಯವಾದುದು. ಶುಕ್ರವಾರ ಹಾಗೂ ಮಂಗಳವಾರ ಮಾತ್ರ ಅಲ್ಲಿ ಪೂಜೆ. ಆ ಕಾಲಕ್ಕೆ ಬಾಗಿಲೇ ಇಲ್ಲದ ಒಂದು ತಾಣ. ಮೆಟ್ಟಿಲು ಮೆಟ್ಟಿಲಾಗಿದ್ದ ಒಂದು ಪೀಠ. ಪೂಜೆ ಮಾಡುವ ಅರ್ಚಕರು... ಕುದುರೆಗೆರೆ ಶಾಸ್ತ್ರಿಗಳು... ಬರುವಾಗ ತಂದು ಪೀಠದ ಮೇಲೆ ದೇವರುಗಳನ್ನು ಇಟ್ಟು ಪೂಜೆ ಮಾಡಿ ಸಂಜೆ ಮರಳಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದದ್ದು. ದೇವಸ್ಥಾನದ ಮುಂದೆ ಒಂದು ಎಲ್ಲ ಕಾಲದಲ್ಲೂ ನೀರು ಇರುತ್ತಿದ್ದ ದೊಣೆ (ಕೊಳ). ದೊಣೆಯಲ್ಲಿ ಸ್ನಾನ ಮಾಡಿ ದೇವರ ಪೂಜೆ ಮಾಡಿಸಿ ಹರಕೆ ಹೊತ್ತರೆ, ಮಕ್ಕಳಾಗುವುದು ಶತಃಸಿದ್ಧ ಎನ್ನುವ ನಂಬಿಕೆ. ಆಗಿರುವ ಬೇಕಾದಷ್ಟು  ನಿದರ್ಶನಗಳೂ ಉಂಟು. ಒಬ್ಬ ಹೆಣ್ಣು ಮಗಳು ತನಗೆ ಮಗುವಾದರೆ ಅದನ್ನು ದೇವಿಯ ದೊಣೆಗೆ ಅರ್ಪಿಸುತ್ತೇನೆಂದು ಹರಕೆ ಹೊತ್ತಳು.  ದೈವ ನಿಯಾಮಕ, ಆಕೆ ಗರ್ಭಿಣಿಯಾಗಿ ಆರೋಗ್ಯವಾದ ಗಂಡು ಮಗುವನ್ನು ಹೆತ್ತಳು. ಸಂತೋಷ ಸಂಭ್ರಮದಲ್ಲಿ ಹರಕೆಯ ನೆನಪು ಆಗಲಿಲ್ಲ. ಎರಡು ಮೂರು ತಿಂಗಳ ನಂತರ ಮಗುವಿನ ಆರೋಗ್ಯ ಕೆಟ್ಟಿತು. ಶಾಸ್ತ್ರ ಕೇಳಿದಾಗ, ಯಾವುದೋ ಹರಕೆಯು ತೀರಿಲ್ಲ ಅದಕ್ಕಾಗಿ ಮಗು ಕಷ್ಟ ಅನುಭವಿಸುತ್ತಿದೆ ಎಂದು ತಿಳಿಯಿತು. ತಾಯಿಗೆ ಮಗುವಿನ ಮೇಲಿನ ಮಮತೆ ಹಾಗೂ ದೇವಿಯ ಮೇಲಿನ ಭಯ ಭಕ್ತಿಯ ಮಧ್ಯೆ ಆಯ್ಕೆ ಮಾಡುವುದು ತುಂಬಾ ಕಷ್ಟವಾಯಿತು.  ಎಚ್ಚೆತ್ತ ಹೆಣ್ಣು  ಮಗಳು ಹರಕೆಯನ್ನು ತೀರಿಸಲು ನಿರ್ಧಾರ ಮಾಡಿದಾಗ ಮನೆಯವರೆಲ್ಲರಿಗೂ ತುಂಬಾ ನೋವಾಯಿತು, ಆದರೆ ಒಪ್ಪಲೇ ಬೇಕಾಯಿತು.

ಮಗುವನ್ನು ಬಟ್ಟೆಯಲ್ಲಿ ಸುತ್ತಿ, ಬಾಳೆ ಎಲೆಯ ಮೇಲೆ ಇಟ್ಟು, ಅಕ್ಕಯ್ಯಮ್ಮನಿಗೆ ಪೂಜೆ ಸಲ್ಲಿಸಿ, ದುಃಖವನ್ನು ಅದುಮಿಕೊಂಡು, ಗಟ್ಟಿ ಮನಸ್ಸು ಮಾಡಿ ದೊಣೆಯ ನೀರಿಗೆ ಬಿಟ್ಟು, ಭಾರವಾದ ಮನಸ್ಸಿನಿಂದ ಮನೆಗೆ ಹೊರಟಳು.

ಮಧ್ಯ ದಾರಿಯಲ್ಲಿ, ಬಾಯಾರಿಕೆಯಾಗಿ, ಸಿಕ್ಕ ಬಾವಿಯಲ್ಲಿ ನೀರು ಕುಡಿಯಲು ಇಳಿದಾಗ, ಅವಳು ಕಂಡ ದೃಶ್ಯ.... ತಾನು ಬಾಳೆ ಎಲೆಯಲ್ಲಿ ಮಲಗಿಸಿ ಬಿಟ್ಟ ಮಗುವು ತೊಟ್ಟಿಲಲ್ಲಿ ತೇಲುತ್ತಿದೆ. ಮಗು ಸುಖವಾಗಿ ನಿದ್ರಿಸುತ್ತಿದೆ. ಮಗು ಸಿಕ್ಕ ಖುಷಿ ಮೇರೆ ಮೀರಿದ ತಾಯಿ, ಮಗುವನ್ನು ಬಾಚಿತಬ್ಬಿ, ಅಕ್ಕಯ್ಯಮ್ಮನ ಬಳಿ ಓಡಿ ಅವಳ ಪಾದದಲ್ಲಿ ಮಗುವನ್ನು ಇಟ್ಟು... ಮುಂದೆ ಬೆಳೆಸಿದಳು ಎಂಬುದೇ ಕಥೆ. ಆ ಬಾವಿಯನ್ನು ತೊಟ್ಟಿಲಬಾವಿ ಎಂದೇ ಕರೆಯುತ್ತಿದ್ದದ್ದು. ಕೆಲವು ಸಲ ದೇವರ ಮೇಲಿನ ಜನರ ನಂಬಿಕೆಗೆ ಯಾವ ತರ್ಕವೂ ಅನ್ವಯಿಸದಿರಬಹುದು, ಆದರೆ ಅದನ್ನು ಅಲ್ಲಾಡಿಸಲೂ ಆಗದು. ನಂಬಿಕೆಯೇ ಜೀವನದಿಯ ಮೂಲವಲ್ಲವೇ?

ನಮಸ್ಕಾರ ...

ಡಿ ಸಿ  ರಂಗನಾಥ ರಾವ್

9741128413


  

Comments

  1. ತುಂಬಾ ಅದ್ಭುತವಾದ ಲೇಖನ 🙏🌹

    ReplyDelete
  2. ನಾಗೇಂದ್ರ ಬಾಬು29 July 2025 at 10:27

    ಬಹುಶಃ ಸಣ್ಣ ಒಂದು ಹರಕೆಯು ಇಲ್ಲದ ಹಿಂದೂ ಇಲ್ಲವೆಂದೆ ನನ್ನ ಭಾವನೆ ಹುಟ್ಟಿನಿಂದ ಅಂತ್ಯದವರೆಗೂ ಒಂದಿಲೊಂದು ನಮ್ಮ ಅವಶ್ಯಕತೆಗಾಗಿ ಹರಕೆಗೆ ಮೊರೆ ಹೋಗುವುದು
    ತೀರಾ ಸಾಮಾನ್ಯ ಇಂಥಾ ಹರಕೆಯ ಬಗ್ಗೆ ನಿಮ್ಮ ಸ್ವಂತ ಅನುಭವದ ಮೂಲಕ ಸುಂದರವಾದ ಲೇಖನ ಮೂಡಿ ಬಂದಿದೆ
    ಧನ್ಯವಾದಗಳು
    ಬಾಬು

    ReplyDelete
  3. ವಿವಿಧ ಬಗೆಯ ಹರಕೆಗಳನ್ನು ಲೇಖನದಲ್ಲಿ ಸಂಪೂರ್ಣವಾಗಿ ಹಾಗೂ ಅರ್ಥವತ್ತಾಗಿ ಚಿತ್ರಿಸಿದ್ದೀರಿ. ಧನ್ಯವಾದಗಳು.

    ನಮ್ಮ ಮನದ ಬಯಕೆ ಅಥವಾ ಕೋರಿಕೆಯನ್ನು ಭಕ್ತಿ ಪೂರ್ವಕವಾಗಿ ದೇವರಲ್ಲಿ ಕೇಳಿಕೊಳ್ಳುವುದರ ಜೊತೆಗೆ ಈ ಹರಕೆ ಎಂಬುದು ನಮಗೆ ನಾವೇ ಮಾಡಿಕೊಳ್ಳುವ ಹೆಚ್ಚುವರಿ ಭಕ್ತಿ. ಇದನ್ನು ತಪ್ಪು ಎನ್ನಲಾಗುವುದಿಲ್ಲ ಇದು ನಮಗೆ ಸ್ವಲ್ಪ ಹೆಚ್ಚಿನ ಭರವಸೆಯನ್ನು ಒದಗಿಸುತ್ತದೆ.

    ನಮ್ಮ ಕುಟುಂಬವಂತು ಪ್ರತಿ ವರ್ಷ ತಿರುಪತಿ ಸನ್ನಿಧಾನಕ್ಕೆ ಮೆಟ್ಟಿಲುಗಳನ್ನು ಹತ್ತಿಕೊಂಡೆ ಹೋಗುವ ಹರಕೆ ಕಳೆದ ಸುಮಾರು 20 ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ.

    ದೇಹವನ್ನು ಹಿಂಸಿಸಿಕೊಂಡು ಹರಕೆಯನ್ನು ಪೂರೈಸುವುದು ನನಗೇನು ಸಮ್ಮತಿ ಇಲ್ಲ. ಆದರೂ ಅವರವರ ಭಕ್ತಿಯ ಪರಾಕಾಷ್ಟೆ ಎನ್ನಲು ಅಡ್ಡಿ ಇಲ್ಲ.

    ಗುರು ಪ್ರಸನ್ನ
    ಚಿಂತಾಮಣಿ

    ReplyDelete
  4. ಡಿಸಿರ್ ಸರ್, ನಿಮ್ಮ ಈ ಲೇಖನ ಒಂದು ನಂಬಿಕೆಯ ಬಗ್ಗೆ ಬರೆದಂತ ಅದ್ಬುತ ಲೇಖನ. ಈ ಲೇಖನ ನನ್ನ ಹಿಂದಿನ ಬಾಲ್ಯದ ಸಿಹಿ ನೆನಪುಗಳು ಮಾರುಕಲಿಸಿದವು. ನನ್ನ 8,9,10ನೇ ವಿದ್ಯಾರ್ಥಿಯ ಜೀವನ APS ಶಾಲೆ ಯಲ್ಲಿ. ಹಾಗಾಗಿ ಶಾಲೆಗೆ ಹೋಗುವಾಗ ದೊಡ್ಡಗಣಪತಿ ಗುಡಿ, ಬಸವಣ್ಣ ಗುಡಿ ಮೂಲಕ ಹೋಗುತ್ತಿದೆವು. ಬಹುಷಃ ಆ ನೀರಿನ ಟ್ಯಾಂಕ್ ಕಟ್ಟುವುದಕ್ಕೆ ಶುರುವಾದಂತ ಕಾಲ. ಇಲ್ಲಿ ಹತ್ತು ಅಡಿ ಎತರದಿಂದ ಕೆಳಗೆ ಹಾರುವುದು, ಕಹಳೆ ಬಂಡೆಯ ಹತಿರ ಜಾರುಬಬಂಡೆ ಆಟ, ಮರಕೊತಿ ಆಟ, ಕತ್ತಿ ಕಾಯಿ ಇಂದ ಬಾಲು ಮಾಡಿ ಆಟ. ಆಟ ಆಡುವುದಕ್ಕ ಈಗೀನತರ ಯ್ಯಾವುದು ಇಲ್ಲದಿದ್ದರೂ ಎಲ್ಲಾ ಇದೆ ಎನ್ನುವ ಮನೋಭಾವ ಮತ್ತು ಉತ್ತಮ ಸ್ನೇಹಿತರ ಒಡನಾಟ, ಇವೆಲ್ಲ ಇಂದು ಮಧುರ ನೆನಪುಗಳು. ಇವೆಲ್ಲ ಮರುಕಳಿಸಿದ್ದು ನಿಮ್ಮ ಈ ಲೇಖನದಿಂದ. ಧನ್ಯವಾದಗಳು ಸರ್, ಯಾವಾಗಲು ನೆನಪುಗಳು ಮಧುರ, ಸುಮಧುರ ಮತ್ತು ಅಮರ. ನಮಸ್ಕಾರಗಳು --ಮಂಜುನಾಥ್ ತಾಳಗುಂದ.

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು