ಯೋಗ - ಯೋಗಾ ಯೋಗ



ಹೋದ ಶನಿವಾರ ಅಶಕ್ತ ಪೋಷಕ ಸಭಾ ನಿವಾಸಿಗಳಿಂದ ಪ್ರತಿವರ್ಷದಂತೆ ಯೋಗ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕಾರಣಗಳಿಂದ ಮನೆಯವರಿಂದ ದೂರವಾಗಿ ವೃದ್ಧಾಶ್ರಮದಲ್ಲಿ ಇರಬೇಕಾಗಿ ಬಂದಿರುವ ಮನಸ್ಥಿತಿಯ ಹಾಗೂ ವಯೋ ಸಹಜ ಇತಿಮಿತಿಗಳನ್ನು ಹೊಂದಿರುವ ವ್ಯಕ್ತಿಗಳು ಯೋಗ ಪ್ರದರ್ಶನ, ಹಾಡು, ನೃತ್ಯ, ಏಕ ಪಾತ್ರಾಭಿನಯ, ಕಿರು ನಾಟಕ ಹೀಗೆ ವಿವಿಧ ಕಲೆಗಳನ್ನು ಪ್ರದರ್ಶಿಸಲು ತೋರಿಸಿದ  ಉತ್ಸಾಹವನ್ನು ನೋಡಲು, ಅವರೊಡನೆ ಒಡನಾಡಲು ಬಲು ಛಂದ. ಇದು ಸಾಧ್ಯವಾಗಲು ನಮ್ಮ   ತಂಡದ ಎಲ್ಲ ಸದಸ್ಯರ ಅವಿರತ ಶ್ರಮ ಬಹು ಮುಖ್ಯವಾದದ್ದು. ಕಾರ್ಯಕ್ರಮದ ನಂತರ ಅವರು ಹಂಚಿಕೊಂಡ ಅನಿಸಿಕೆಗಳಲ್ಲಿ ತೃಪ್ತಿ ಕಾಣುತ್ತಿತ್ತು. ಇದು ನಮ್ಮ ಯೋಗಾಯೋಗವೇ ಸರಿ. ಭಗವದ್ಗೀತೆಯಲ್ಲಿ ಕೃಷ್ಣನು ಹೇಳಿದ ಕರ್ಮ ಯೋಗ- ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಕೆಲಸವನ್ನು ಸ್ವಲ್ಪ ಭಾಗವಾದರೂ ಪಾಲಿಸಿದ ತೃಪ್ತಿ ನಮ್ಮೆಲ್ಲರದು.

ಯೋಗಾಯೋಗವನ್ನು ಆಡು ಮಾತಿನಲ್ಲಿ ಯೋಗ ಎಂದೇ ಉಪಯೋಗಿಸುತ್ತಾರೆ.



ಯೋಗ ಎಂಬುದು ಜನಮಾನಸದ ದೃಷ್ಟಿಯಲ್ಲಿ ಯೋಗಾಸನದ ವಿವಿಧ ಭಂಗಿಗಳನ್ನು ಮಾಡುವುದು. ಯೋಗ ಪದ ರೂಪುಗೊಂಡಿರುವುದು... ಯುಜ್ಯತೆ ಇತಿ ಯೋಗಃ... ಅಂದರೆ ಒಂದುಗೂಡಿಸುವುದು. ನಿಜ ಅರ್ಥದಲ್ಲಿ ದೇಹ ಮತ್ತು ಮನಸ್ಸನ್ನು ಒಂದುಗೂಡಿಸುವುದು... ಅದು ಬೇರೆಯೇ ಸ್ತರ.

ಯೋಗಾಯೋಗದ ಪ್ರಯೋಗವು ಅದೃಷ್ಟ ಕೂಡಿ ಬರುವುದು, ದೈವ ಕೃಪೆ, ದೈವಬಲ, ದೈವ ಯೋಗ ಎಂಬ ಭಾವದಿಂದ, ಎಲ್ಲಾ ಒಳ್ಳೆಯ ಪ್ರತಿಫಲಗಳಿಗೆ ಹಾಗೂ ಮನಸ್ಸಿಗೆ ಮುದ ನೀಡುವ ವಿಷಯಗಳಿಗೆ. ಅದೇ ಮನಸ್ಸಿಗೆ ನೋವು ಕೊಡುವ ವಿಷಯಗಳಿಗೆ ಹಾಗೂ ಕೆಟ್ಟ ಪ್ರತಿಫಲಗಳಿಗೆ ಕರ್ಮ ಎನ್ನುವ ಹೆಸರು ಕೊಡುತ್ತೇವೆ. ಪೂರ್ವಜನ್ಮ ಕೃತೇ ಪಾಪಂ ಬಂಧು ರೂಪೇಣ ಪೀಡತೇ ಎನ್ನುವುದೊಂದು ನುಡಿಗಟ್ಟು. ಇಲ್ಲಿ ಬಂಧು ಎಂದರೆ ಮಕ್ಕಳು, ಅಳಿಯ, ಗಂಡ, ಹೆಂಡತಿ ಹೀಗೆ ಯಾವ ಬಂಧು ಬೇಕಾದರೂ ಆಗಬಹುದು. 

ವಿಧಿ ಲಿಖಿತ, ಹಣೆ ಬರಹ ಇವು ಎಲ್ಲ ಪ್ರತಿಫಲಗಳಿಗೂ ಸಮಾನವಾಗಿ ಉಪಯೋಗಿಸುತ್ತೇವೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ... ಜಾತಕದಲ್ಲಿನ ಗ್ರಹಗಳ ವಿಶೇಷ ಸಂಯೋಜನೆ ಹಾಗೂ ಸ್ಥಾನಗಳ ಮೇಲಿನ ಅವಲಂಬಿತ ಫಲಾಫಲಗಳಿಗೆ ಯೋಗಗಳು ಎಂಬ ಅಭಿದಾನ.. ಅದರಲ್ಲಿ ರಾಜಯೋಗ, ಧನಯೋಗ, ದರಿದ್ರ ಯೋಗ, ಗಜಕೇಸರಿ ಯೋಗ ಹೀಗೆ ಬೇರೆ ಬೇರೆ ಫಲ ಕೊಡುವ ಯೋಗಗಳು.

ರಾಜಯೋಗ ಇದ್ದವರಿಗೆ ಆಳುವ ಅವಕಾಶ... ಅದು ಮಾಂಡಲಿಕ, ಚಿಕ್ಕ ದೇಶದ ಸಾಮಂತ ರಾಜ, ಮಹಾರಾಜ, ಸಾಮ್ರಾಟ, ಚಕ್ರವರ್ತಿ ಹೀಗೆ ವಿವಿಧ ಸ್ಥರದಲ್ಲಿ. ಎಲ್ಲ ರಾಜರು ಒಳ್ಳೆಯವರಾಗಿರಬೇಕಿಲ್ಲ, ಜನಹಿತ ಕಾಪಾಡುವವರು ಆಗಿರಬೇಕಿಲ್ಲ.

ನನ್ನ ಚಿಕ್ಕಂದಿನಲ್ಲಿ ಚರಿತ್ರೆಯನ್ನು ಓದುವಾಗ ಬರುವ ರಾಜರುಗಳನ್ನು ಕೆಟ್ಟ ರಾಜ, ಒಳ್ಳೆಯ ರಾಜ ಎಂದು ವಿಂಗಡಿಸಿಕೊಂಡು... ಪರೀಕ್ಷೆಯಲ್ಲಿ ಉತ್ತರ ಬರೆಯುವಾಗ ಕೆಟ್ಟ ರಾಜನು ಪ್ರಜೆಗಳನ್ನು ಪೀಡಿಸುತ್ತಿದ್ದನು, ತೆರಿಗೆಯನ್ನು ಹಾಕುತ್ತಿದ್ದನು, ಕ್ರೂರ ಶಿಕ್ಷೆಯನ್ನು ಕೊಡುತ್ತಿದ್ದನು ಹಾಗೂ ಸ್ತ್ರೀಲೋಲನಾಗಿರುತ್ತಿದ್ದನು ಹೀಗೆ....

ಒಳ್ಳೆಯ ರಾಜನಾದರೆ ಸಾಲುಮರಗಳನ್ನು ನೆಡಿಸಿದನು, ದನ ಕರುಗಳಿಗೆ ನೀರಿನ ವ್ಯವಸ್ಥೆಯನ್ನು ಮಾಡುತ್ತಿದ್ದನು, ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದನು... ಹೀಗೆ.

ಅದು ಪ್ರಜಾ ರಾಜ್ಯದ ಈಗಿನ ಕಾಲಕ್ಕೂ ಪ್ರಸ್ತುತವೇ. ನರೆಂದ್ರ ಮೋದಿ ಅವರಂತಹ ಸಜ್ಜನ, ದೇಶಪ್ರೇಮಿ ರಾಜನೀತಿಜ್ಞ, ದೇಶದ ಚುಕ್ಕಾಣಿ ಹಿಡಿದಿರುವ ಒಳ್ಳೆಯ ರಾಜನಂತೆಯೇ... ಬಿಟ್ಟಿ ಭಾಗ್ಯವನ್ನು ಒಂದು ಕೈಯಲ್ಲಿ ಕೊಟ್ಟು.. ಪ್ರಜೆಗಳನ್ನು ಬಿಕ್ಷುಕರನ್ನಾಗಿ / ಸೋಮಾರಿಗಳನ್ನಾಗಿ ಮಾಡುತ್ತಾ ಇನ್ನೊಂದು ಕೈಯಲ್ಲಿ ತೆರಿಗೆಗಳನ್ನು ಜಾಸ್ತಿ ಮಾಡಿ ಪ್ರಜೆಗಳನ್ನು ಕಷ್ಟಕ್ಕೆ ಈಡು ಮಾಡಿರುವ, ಸ್ವಾರ್ಥ ರಾಜಕಾರಣವೇ ಧ್ಯೇಯವಾಗಿರುವ ಕೆಟ್ಟ ರಾಜನನ್ನೂ ನೋಡುತ್ತಿದ್ದೇವೆ.... ಇದು ನಾವು ಮತದಾನ ಮಾಡಿ ಆರಿಸಿ ಕಳಿಸಿದ ಕರ್ಮಫಲ ಎನ್ನಲೇ?

ಇದಕ್ಕೆ ಮತ್ತೊಂದು ಉದಾಹರಣೆಯೇ ತುಘಲಕ್ಕನ ದರ್ಬಾರು ಹಾಗೂ ಅಂಧೇರಿ ನಗರಿ ಚೌಪಟ್ ರಾಜ ಎಂಬ ಪಾಠದಲ್ಲಿ ಓದಿದ ತಿಕ್ಕಲು ರಾಜ.

ನನ್ನಮ್ಮನಿಗೆ ಅವಳ ಕುಟುಂಬ.. ಹಾಗೂ ಸುತ್ತಮುತ್ತಲಿನ ಸಂಬಂಧಿಕರು ಹಾಗೂ ನಮ್ಮ ಹಳ್ಳಿಯ ಜನಗಳ ದೃಷ್ಟಿಯಲ್ಲಿ ವಿಶೇಷ ಸ್ಥಾನಮಾನ ಇತ್ತು. ಬಹಳಷ್ಟು ಕೆಲಸಗಳನ್ನು ಅವಳ ಮಾರ್ಗದರ್ಶನದಲ್ಲಿ / ಮುಂದಿಟ್ಟುಕೊಂಡು ಮಾಡುತ್ತಿದ್ದದ್ದು ನನಗೆ ನೆನಪಿದೆ. ಇಷ್ಟಾದರೂ ಅಮ್ಮ ಬಡತನದ ಬೇಗೆಯಲ್ಲಿ ಬಳಲುತ್ತಿದ್ದದ್ದು ಕಟು ಸತ್ಯ. ಹಾಗಾಗಿ ಅವಳು ಹೇಳುತ್ತಿದ್ದ " ನನ್ನದು ರಾಜಯೋಗ ದರಿದ್ರ ರಾಶಿ" ಎಂಬ ಮಾತು ನೆನಪಿಗೆ ಬರುತ್ತಿದೆ... ಎಂಥ ವಿಪರ್ಯಾಸ ಅಲ್ಲವೇ?

ಯೋಗದಲ್ಲಿದ್ದರೆ ಆಗಿಯೇ ತೀರುತ್ತೆ ಎನ್ನುವುದು ಒಂದು ನುಡಿಗಟ್ಟು. ಇದು ಹಣೆಬರಹದಲ್ಲಿ ಇದ್ದಂಗೆ ಆಗುತ್ತೆ ಎನ್ನುವುದಕ್ಕೂ ಸಾಮ್ಯ ಇದೆ.

ಈ ಸಂಧರ್ಭದಲ್ಲಿ ನನಗೆ ಜ್ಞಾಪಕ ಬರುವುದು ಚಿಕ್ಕಂದಿನಲ್ಲಿ ನಾನು ಓದಿದ ಚಂದ್ರಹಾಸನ ಕಥೆಯ ಪಾಠ. ಆರು ಬೆರಳಿದ್ದ ಚಂದ್ರಹಾಸನನ್ನು ಕೊಂದು, ರಾಜ್ಯವನ್ನು ತನ್ನದಾಗಿಸಿಕೊಳ್ಳಬೇಕು ಎನ್ನುವ ರಾಜ್ಯದ ಮಂತ್ರಿ ದುಷ್ಟಬುದ್ಧಿಯ ಕುತಂತ್ರ ವನ್ನು, ದೈವ ಬಲದಿಂದ.. ಕೊಲ್ಲಬೇಕಾದ ಭಟರ ಕರುಣೆಯಿಂದ, ತನ್ನ ಒಂದು ಬೆರಳನ್ನು ಕೊಟ್ಟು ಜೀವ ಉಳಿಸಿಕೊಂಡಿದ್ದು... ಮುಂದೆ ಇನ್ನೊಬ್ಬ ರಾಜನ ಆಶ್ರಯ ದೊರೆತು ಬೆಳೆದು ದೊಡ್ಡವನಾಗಿ ಯುವರಾಜನಾದದ್ದು.... ಈ ವಿಷಯ ತಿಳಿದು ಮುಂದೆ ತನ್ನ ರಾಜ್ಯಕ್ಕೆ ಇವನಿಂದ ಕಂಟಕ ಬರಬಹುದೆಂದು ಭಾವಿಸಿದ ದುಷ್ಟಬುದ್ಧಿಯು.... ಉಪಾಯವಾಗಿ ಚಂದ್ರಹಾಸನನ್ನು ತನ್ನ ರಾಜ್ಯಕ್ಕೆ ಕಳುಹಿಸಿ ಮಗನ ಮೂಲಕ ಕೊಲ್ಲಲು ಪ್ರಯತ್ನಿಸುತ್ತಾನೆ. ಅದರ ಭಾಗವಾಗಿ ಚಂದ್ರಹಾಸನ ಕೈಗೆ ಒಂದು ಪತ್ರವನ್ನು ಕೊಟ್ಟು ಅದನ್ನು ತನ್ನ ಮಗನಿಗೆ ತಲುಪಿಸಲು ಹೇಳುತ್ತಾನೆ. ಪ್ರಯಾಣದ ಆಯಾಸವನ್ನು ನೀಗಲು ಚಂದ್ರಹಾಸನು ಒಂದು ಮರದ ಕೆಳಗೆ ಮಲಗಿರುತ್ತಾನೆ... ಆಗ ಅಲ್ಲಿಗೆ ಬಂದ ದುಷ್ಟಬುದ್ಧಿಯ ಮಗಳು ವಿಷಯೆ.. ಚಂದ್ರಹಾಸನ ಬಳಿಯಿದ್ದ ಪತ್ರವನ್ನು ಓದುತ್ತಾಳೆ. ತನ್ನ ಅಣ್ಣನಿಗೆ ಅಪ್ಪ ಬರೆದ ಪತ್ರದಲ್ಲಿನ " ಈ ಪತ್ರ ತರುವ ತರುಣನಿಗೆ ವಿಷವನ್ನು ಕೊಡುವುದು" ಎಂಬ ವಾಕ್ಯವನ್ನು ಓದಿ, ಅಪ್ಪ ಬರೆಯುವಾಗ ತಪ್ಪು ಆಗಿರಬಹುದು ಎಂದು ಭಾವಿಸಿ  "ವಿಷ" ಎಂಬುದನ್ನು " ವಿಷಯೆ" ಎಂದು ತನ್ನ ಕಾಡಿಗೆಯಿಂದ ತಿದ್ದುತ್ತಾಳೆ. ದುಷ್ಟ ಬುದ್ಧಿ ಹಿಂತಿರುಗಿ ಬರುವಷ್ಟರಲ್ಲಿ ಚಂದ್ರಹಾಸ ಮತ್ತು ವಿಷಯೆಯ ಮದುವೆಯನ್ನು ಮಗ ಮಾಡಿ ಮುಗಿಸಿರುತ್ತಾನೆ.  ಇದೇ ಅಲ್ಲವೇ ಯೋಗ?

ಬಿ ಆರ್ ಚೋಪ್ರಾ ಅವರ ಮಹಾಭಾರತದ ಭೀಷ್ಮನ ಪಾತ್ರಧಾರಿ " ಭಾಗ್ಯರೇಖೆ" ಎನ್ನುವ ಪದವನ್ನು ಸಾಕಷ್ಟು ಸಲ ಉಪಯೋಗಿಸಿದ್ದನ್ನು ನೋಡಿದ್ದೇನೆ... ಇದು ಯೋಗದ ಇನ್ನೊಂದು ಮುಖವೇ.

ಯೋಗದಲ್ಲಿ ಇದ್ದಂಗೆ ಯೇಗ ಬೇಕು ( ಏಗು ಅಂದರೆ ನಿಭಾಯಿಸು, ಅನುಭವಿಸು ಅನ್ನುವ ಅರ್ಥ) ಎನ್ನುವುದು ಜೀವನದ ಕಟ್ಟಿಟ್ಟ ವಿಧಿ, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ಕರ್ಮ ಸಿದ್ದಾಂತ. ಹಣವಿದ್ದ ಗಂಡನನ್ನು ಪಡೆದರೂ ಋಣವಿದ್ದಷ್ಟೇ ಎನ್ನುವ ಗಾದೆ ಯೋಗದ ಇನ್ನೊಂದು ಮುಖ ಎಂದೇ ನನ್ನ ಭಾವನೆ.

ಹಣೆಬರಹದಲ್ಲಿದೆ / ಯೋಗದಲ್ಲಿದೆ ಅದು ಬಂದೇ ಬರುತ್ತೆ / ಆಗೇ ಆಗುತ್ತೆ ಅಂದು ಕೊಂಡು ಸುಮ್ಮನೆ ಕೂರುವಂತಿಲ್ಲ. ಅದಕ್ಕೆ ಬೇಕಾದ ಪ್ರಯತ್ನ ಮಾಡಬೇಕು ಎಂದು ಹಣೆಬರಹದಲ್ಲಿದ್ದರೆ.. ಆ ಪ್ರಯತ್ನ ಮಾಡಲೇಬೇಕು. 

ಈ ವಿಷಯಕ್ಕೆ ಸಂಸ್ಕೃತ ಸುಭಾಷಿತ

ಉದ್ಯಮೇ ನಹಿ ಸಿಧ್ಯಂತಿ ಕಾರ್ಯಾಣಿ ನ ಮನೋರಥೈಃ ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶ್ಯಂತಿ ಮುಖೇ ಮೃಗಾಃ   ಸೂಕ್ತ ಉದಾಹರಣೆ. ಹೇಗೆ ಬೇಟೆಯಾಡದೆ ಮಲಗಿರುವ ಸಿಂಹದ ಬಾಯಿಯಲ್ಲಿ ಬಂದು ಜಿಂಕೆಯು ಬೀಳುವುದಿಲ್ಲವೋ ಹಾಗೆ ನಮ್ಮ ಕೆಲಸಗಳು / ಮನ ದಾಸೆಗಳು ಪೂರೈಸಲು ಬೇಕಾದ ಪ್ರಯತ್ನಗಳನ್ನು ಮಾಡಲೇಬೇಕು. 

ಯೋಗ ತಾನೇ ತಾನಾಗಿ ಬರುವುದಿಲ್ಲ ಅದಕ್ಕೂ ಬೇಕಾದ ಯೋಗ್ಯತೆ (ಅದೃಷ್ಟ)  ಇರಬೇಕು ಎನ್ನುವುದು ನನ್ನ ದೃಢ ನಂಬಿಕೆ.

ನಮ್ಮಪ್ಪನಿಗೆ ನೂರು ವರ್ಷ ತುಂಬಿದಾಗ " ಶಾಮಣ್ಣನ ಶತಾಬ್ದಿ ಸಂಭ್ರಮ" ಎನ್ನುವ ಕಾರ್ಯಕ್ರಮವನ್ನು ಮಾಡಿದಾಗ, ಬಂದಿದ್ದ ಕೆಲ ಹಿರಿಯರು ಹೇಳಿದ ಮಾತು ಈ ವಿಷಯಕ್ಕೆ ಹೆಚ್ಚು ಸೂಕ್ತ ಎನಿಸುತ್ತದೆ...

' ಅಚ್ಚಕ್ಕ (ನನ್ನ ಅಮ್ಮ) ಮಕ್ಕಳನ್ನು ಮುಂದೆ ತರಲು ತುಂಬಾ  ಕಷ್ಟಪಟ್ಟಳು ಆದರೆ ಸುಖಪಡುವ ಕಾಲಕ್ಕೆ ಅವಳೇ ಇಲ್ಲ... ಆದರೆ ಶಾಮಣ್ಣನ (ನನ್ನ ಅಪ್ಪ) ಯೋಗ ನೋಡಿ, ಎಲ್ಲಾ ಮಕ್ಕಳು, ಸೊಸೆಯರು, ಅಳಿಯಂದ್ರು, ಮೊಮ್ಮಕ್ಕಳು, ಮರಿಮಕ್ಕಳು ಜೊತೆಗೆ ಐದನೇ ತಲೆಮಾರಿನ ಮರಿ ಮರಿ ಮಗಳು ಎಲ್ಲಾ ಸೇರಿ ಹೇಗೆ ಸಂಭ್ರಮಿಸುತಿದ್ದಾರೆ. ಶಾಮಣ್ಣಂದೇ ಅದೃಷ್ಟ.' ಎಲ್ಲರಿಗೂ ಆ ಯೋಗ ಇರಲ್ಲ ಅಲ್ಲವೇ?

ಇದಕ್ಕೆ ಇನ್ನೊಂದು ದೃಷ್ಟಾಂತ ಸೇರಿಸಿದರೆ ಸಮಂಜಸ ಎನಿಸುತ್ತದೆ.

ನಾನಿನ್ನೂ ಹಳ್ಳಿಯಲ್ಲಿದ್ದ ಕಾಲ.. ಸರ್ ಎಂ. ವಿಶ್ವೇಶ್ವರಯ್ಯನವರಿಗೆ 100 ವರ್ಷ ತುಂಬಿದ ಸಂದರ್ಭ. ನಮ್ಮ ಪಕ್ಕದ ಊರು ಹುತ್ತನಹಳ್ಳಿಯ ಒಬ್ಬ ಹಿರಿಯ ಗೌಡರಿಗೂ ( ಹೆಸರು ಜ್ಞಾಪಕಕ್ಕೆ ಬರವಲ್ಲದು) ನೂರು ವರ್ಷ ಆಗಿದೆ ಎಂದು ಅವರ ಅನಿಸಿಕೆ. ಅದಕ್ಕೆ ಕಾರಣ ಅವರಮ್ಮ ಹಾಗೂ ಸರ್ ಎಂ ವಿ  ಅವರ ಅಮ್ಮ ಇಬ್ಬರು ಒಂದೇ ಊರಿನವರು, ಒಂದೇ ಸಮಯದಲ್ಲಿ ಹೆತ್ತವರು ಎಂದು. ಹಾಗಾಗಿ ಅವರನ್ನು ಸಿಂಗರಿಸಿದ ಎತ್ತಿನಗಾಡಿಯಲ್ಲಿ ಕೂಡಿಸಿ ಮೆರವಣಿಗೆ ಮಾಡಿದರೆಂದು ತಿಳಿಯಿತು.. ಇದು ಯೋಗವೇ.

'ಯೇಗ್ದಾಗೆಲ್ಲ ಐತೆ' ಇದು ಬೆಳಗೆರೆ ಕೃಷ್ಣ ಶಾಸ್ತ್ರಿಗಳು  ಮುಕುಂದೂರು ಸ್ವಾಮಿಗಳ ಬಗ್ಗೆ ಬರೆದ ಪುಸ್ತಕದ ಹೆಸರು. ಅದನ್ನು ಓದಿದ್ದು  ಯೋಗವೇ ಸರಿ. ಅದೊಂದು ಜೀವನ ದರ್ಶನ.

ನನ್ನ ಜೀವನದ ಸಿಂಹಾವಲೋಕನ ಮಾಡಿದಾಗ ಕಂಡದ್ದು... ಕಷ್ಟದ ದಿನಗಳು, ಅದರಿಂದ ಹೊರಕ್ಕೆ ಬರಲು ಬೇಕಾದ ಶಕ್ತಿಯನ್ನು ಕೊಟ್ಟದ್ದು,  ಸುಖ ಸಂತೋಷಗಳು, ಏಳುಬೀಳುಗಳು ಇವೆಲ್ಲ ಯೋಗಾ ಯೋಗವೇ. ಎಷ್ಟೋ ಸಲ  ನಾನು ಪಟ್ಟ ಪ್ರಯತ್ನಕ್ಕೆ ನಾನು ಅಂದುಕೊಂಡಂತೆ ಫಲ ಸಿಕ್ಕಿಲ್ಲ ಎಂದು ಅನಿಸಿದ್ದಿದೆ... ಅಂತೆಯೇ ನನ್ನ ಪ್ರಯತ್ನಕ್ಕೂ ಮೀರಿದ ಫಲ ಸಿಕ್ಕಿದೆ ಅನ್ನುವುದು ಅಷ್ಟೇ ಸತ್ಯ. ನಮ್ಮನ್ನು ಮೀರಿದ ಅಗೋಚರ ಶಕ್ತಿಯೊಂದು ಇದ್ದು ಅದು ನಮ್ಮನ್ನು ನಿರ್ದೇಶಸುತ್ತದೆ... ಎನ್ನುವುದು ನಾನು ನಂಬಲೇ ಬೇಕಾದ ಸತ್ಯ ಎಂಬ ಅನುಭವವನ್ನು ಪಡೆದಿದ್ದೇನೆ. ಹಣೆ ಬರಹಕ್ಕೆ ಹೊಣೆ ಯಾರು... ಎಂಬ ಮಾತಿದ್ದರೂ ಮಾನವ ಪ್ರಯತ್ನವಂತು ಇರಲೇಬೇಕಲ್ಲ... ಆ ಪ್ರಯತ್ನವನ್ನು ಮನಃಪೂರ್ವಕವಾಗಿ ಶ್ರದ್ಧೆಯಿಂದ ನಿರ್ವಹಿಸುವುದು ಅಷ್ಟೇ ನಮ್ಮ ಹೊಣೆಗಾರಿಕೆ... ಫಲಾ ಫಲ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ನಮ್ಮ ಹೊಣೆಗಾರಿಕೆಯಲ್ಲ. ಅದನ್ನೇ ನಮ್ಮ ಪಾಲಿನ ಭಾಗ್ಯ (ಯೋಗಾ ಯೋಗ) ಎಂದು ಒಪ್ಪಿ ಅಪ್ಪಿಕೊಂಡರೆ.... ಮನಸ್ಸು ಹಗುರಾಗಿ ಮುದವಾಗಿ, ನೆಮ್ಮದಿಯಿಂದ ಇರಲು ಸಾಧ್ಯ ಅಲ್ಲವೇ?

ಬಾಲಂಗೋಚಿ:

ಹೆಸರಲ್ಲೇನಿದೆ... ಕರೆಯಲು ಒಂದು ಪದ ಬೇಕು ಎನ್ನುವುದು ಮಾತಾದರೂ, ರಾಮ, ಕೃಷ್ಣ, ವೆಂಕಟೇಶ... ಹೀಗೆ ದೇವರ ಹೆಸರನ್ನು ಇಟ್ಟರೆ ಆ ಮೂಲಕವಾದರೂ ದೇವರ ನಾಮ ಸ್ಮರಣೆ ಆದೀತೆನ್ನುವುದು ಒಂದು ಚಿಂತನೆ. ಗುಂಡಪ್ಪ, ತಿಪ್ಪೇಸ್ವಾಮಿ ಎನ್ನುವ ಹೆಸರುಗಳು ಸಾರ್ಥಕ ನಾಮವಾಗಿ ಉಳಿಯಲಿ ಎನ್ನುವ ಆಶಯ. 
ಸಾಕಮ್ಮ ಎನ್ನುವ ಹೆಸರು, ಮಕ್ಕಳ ಇನ್ನು ಸಾಕು ಎನ್ನುವ ದೃಷ್ಟಿ ಇರಬಹುದೇ?
ಈಗಿನ ಕಾಲಘಟ್ಟದಲ್ಲಿ ಹೆಸರುಗಳು ವಿಶಿಷ್ಟ ಆಗಿರುತ್ತವೆ. ಅದನ್ನು ಹುಡುಕಲು ಅಪ್ಪ ಅಮ್ಮ ಸಾಕಷ್ಟು ಚಿಂತನೆ ಮಾಡಿರುತ್ತಾರೆ.
ಈಚೆಗೆ ನಾನು ಹೋಗಿದ್ದ ನಾಮಕರಣದಲ್ಲಿ ಅನಾವರಣ ಮಾಡಿದ ಮಗುವಿನ ಹೆಸರಿನ ಚಿತ್ರ ನಿಮಗಾಗಿ. ಹೆಸರಿನ ಜೊತೆಗೆ ಅದರ ಅರ್ಥಗಳು ಸಹ. ಲೋಕೋ ವಿಭಿನ್ನ ರುಚಿಃ.




ಯೋಗ ನಮಸ್ಕಾರಗಳು....

ಡಿ ಸಿ  ರಂಗನಾಥ ರಾವ್

9741128413

    

Comments

  1. ವೃದ್ಧಾಶ್ರಮದಲ್ಲಿ ನಡೆದ ಸಂಭ್ರಮ ಇನ್ನಷ್ಟು ಮುಂದುವರೆದಿದೆ, ಅಂದುಕೊಂಡಿದ್ದೆ, ಆದರೆ ಪೀಠಿಕೆ ಮಾತ್ರ ಅಷ್ಟೇ ಅಂತ ಗೊತ್ತಾಗಿ ನಿರಾಶೆ ಆಯ್ತು. ಇನ್ನುಳಿದ ವಿಷಯಗಳೆಲ್ಲಾ ಯೋಗಾಯೋಗದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಾ.
    ರತ್ನಪ್ರಭಾ

    ReplyDelete
    Replies
    1. ನನಗೂ ನಿರಾಸೆ ಆಯಿತು
      Lakshmi Harish old

      Delete
  2. ಡಿಸಿರ್ ಸರ್, ಆಸಕ್ತ ಪೋಷಕ ಸಭಾ ದಲ್ಲಿ ಶ್ರೀಮತಿ ಲಕ್ಷ್ಮಿ ಹರೀಶ್ ಅವರು ನಡೆಸಿದ ಯೋಗ ಕಾರ್ಯಕ್ರಮ ಚಿತ್ರ ಮತ್ತು ಕೆಲ ವಿಷಯ ವನ್ನು ಹಂಚಿಕೊಂಡಿದ್ದರು. ಆದರೆ ನಿಮ್ಮ ಅದ್ಬುತ ಸಂಪೂರ್ಣ ಲೇಖನ ಬಹಳ ಅರ್ಥಪೂರ್ಣ ವಾಗಿದೆ. ನೀವು ಬರಹದಲ್ಲಿ ಕವಿ ಸಾರ್ವಭೌಮ. ನಿಮ್ಮ ಬರಹಕ್ಕೆ ನನ್ನ ಸಲಾಂ 🙏🙏🙏 ಮಂಜುನಾಥ್, ನಿಮ್ಮ ಹಳೆಯ ಮಿತ್ರ.

    ReplyDelete
  3. thanks for reminding so many things

    ReplyDelete
  4. ಜೀವನದ ವಿಷಯಗಳನ್ನು ತುಂಬಾ ಚೆನ್ನಾಗಿ ಬರೆದಿದ್ದೀರ. ಧನ್ಯವಾದಗಳು.
    ರಾಮಕೃಷ್ಣ

    ReplyDelete
  5. ಯೋಗಾಯೋಗದ ಬರೆದದ್ದನ್ನು ಓದಲು ನಮ್ಮ ಯೋಗವೇ ಸರಿ🙏🙏🙏

    ReplyDelete
  6. ಮೇಲೆ ಹೇಳಿದ ಹೇಳಿಕೆಯಲ್ಲಿ ಆರ್ಥವಿದೆ

    ReplyDelete
  7. Guru Prasanna K12 July 2025 at 10:46

    ಅಶಕ್ತ ಪೋಷಕ ಸಭಾದ ಕಾರ್ಯಕ್ರಮದ ವಿವರ ಚೆನ್ನಾಗಿತ್ತು.
    ಕೃಷ್ಣನ ಕರ್ಮ ಯೋಗದ ವಿವರಣೆಯು ಸಹ ಅರ್ಥಗರ್ಭಿತವಾಗಿದೆ.
    ಒಳ್ಳೆಯ ರಾಜ ಹಾಗೂ ಕೆಟ್ಟ ರಾಜರ ವಿವರಣೆಯು ಸೊಗಸಾಗಿದೆ.
    ಚಂದ್ರಹಾಸನ ಕಥೆ ಸಮಯೋಚಿತವಾಗಿದೆ.
    ಸರ್ ಎಂ ವಿ ಹಾಗೂ ಊರ ಗೌಡರ 100 ವರ್ಷದ ಸಮಾರಂಭದ ಅಂಶವನ್ನು ಗಮನಿಸಿದಾಗ ಹೂವಿನಿಂದ ನಾರು ಸ್ವರ್ಗ ಸೇರಿದಂತಾಯಿತು ಎಂಬುದು ನೆನಪಿಗೆ ಬರುತ್ತದೆ.

    ಕೊನೆ ಹನಿ

    ಜಾತಕ ಹಾಗೂ ಹಣೆಬರಹದಲ್ಲಿ ರಾಜಯೋಗ, ಗಜಕೇಸರಿ ಯೋಗವಿದ್ದು ಅಂಗೈನಲ್ಲಿ ಅಷ್ಟಮ ಶನಿ ಇದ್ದರೆ ಪ್ರಯೋಜನವಿಲ್ಲ

    ಗುರು ಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ