ಹದಿ ವಯಸು - ಕುತೂಹಲ
ಅವತ್ತು ಬುಧವಾರ ಸಂಜೆ ಯಾವಾಗಿನಂತೆ ಆಪ್ತ ಸಲಹಾ ಕೇಂದ್ರಕ್ಕೆ ಬಂದೆ... ಹಿರಿಯ ಶ್ರೀನಿವಾಸ್ ಅವರು .. ರಂಗನಾಥ್ ನಿಮಗಾಗಿ ಒಂದು ಕೇಸ್ ಕಾಯ್ತಾ ಇದೆ.. ಬೇರೆ ಊರಿಂದ ಬಂದಿದ್ದಾರೆ... ಕಳಿಸ್ತೀನಿ ಅಂದ್ರು.
ಗಂಡ ಹೆಂಡತಿ ಒಂದು ಹೆಣ್ಣು ಮಗುವನ್ನು ಕರ್ಕೊಂಡು ರೂಮಿನ ಒಳಗೆ ಬಂದರು..
'ನನ್ನ ಸ್ನೇಹಿತ ನಿಮ್ಮನ್ನ ಭೇಟಿ ಮಾಡಕ್ಕೆ ಹೇಳಿದ...'
' ಕೂತ್ಕೊಳ್ಳಿ... ನಿಮ್ಮ ಹೆಸರು?'
' ನಾನು ರಮೇಶ್... ನನ್ ಹೆಂಡ್ತಿ ಸುಮತಿ'...
ಏನ್ ಮಗು ನಿನ್ನ ಹೆಸರು ಅಂತ ಕೇಳಿದೆ... "ಸುಮಾ” ಅಂತ ಅಮ್ಮ ಹೇಳಿದ್ದು.
' ಬಂದ ವಿಷಯ?'
'ಏನ್ ಹೇಳ್ಬೇಕು ಎಲ್ಲಿಂದ ಶುರು ಮಾಡಬೇಕು ಗೊತ್ತಾಗ್ತಾ ಇಲ್ಲ' ಅಂದಾಗ... ನಿಮಗೆ ಏನು ಹೇಳಬೇಕು ಅನ್ಸುತ್ತೆ ಮನಸ್ಸು ಬಿಚ್ಚಿ ಹೇಳಿ, ಎಲ್ಲಿಂದ ಬೇಕಾದರೂ ಶುರು ಮಾಡಿ ಎಂದೆ..
ಗಂಡ ಹೆಂಡತಿಯ ಮಧ್ಯೆ ಒಂದೆರಡು ಪಿಸುಮಾತು.. ನಂತರ ಗಂಡ ಹೇಳಿದ್ದು... ಅವಳೇ ಮಾತಾಡ್ತಾಳೆ ನಾನು ಮಗುನ ಕರ್ಕೊಂಡು ಆಚೆ ಕಡೆ ಇರ್ತೀನಿ.. ಅಂತ ಹೊರಗೆ ಹೋದರು.
ಮಾತು ಮುಂದುವರಿತು
'ನಂಗೆ ತುಂಬಾ ಭಯ ಆಗುತ್ತೆ ಸರ್.. ನನ್ ಮಗಳದೇ ನನಗೆ ಚಿಂತೆಯಾಗಿದೆ'
' ಮಗು ಆರೋಗ್ಯದಲ್ಲಿ ಏನಾದ್ರೂ ತೊಂದರೆ ಇದೆಯೇನಮ್ಮ?'
'ಹಾಗೇನಿಲ್ಲ'
' ಮಗು ಯಾವ ಕ್ಲಾಸು'
' ಒಂದನೇ ಕ್ಲಾಸು'
' ಮಗು ಬೆಳವಣಿಗೆಯಲ್ಲಿ ಏನಾದ್ರೂ ತೊಂದರೆ ಇದೆಯಾ'
' ಹಾಗೇನಿಲ್ಲ ಸರ್'
' ಮತ್ಯಾಕಮ್ಮ ಭಯ'
'......'
' ಮನಸಲ್ಲಿರೋದು ಹೇಳಿ'
ಮಾತಿನ ಬದಲು ಅಳುವುದಕ್ಕೆ ಶುರು. ಅಳು ಆ ಸಮಯದ ದುಃಖದ ತುತ್ತ ತುದಿ... ನಂತರ ಅದು ಬೇಗ ಶಮನವಾಗುತ್ತದೆ. ಇಲ್ಲಿ ಆದದ್ದು ಅದೇ...
' ನನ್ನ ಮಗಳಿಗೆ ಏನಾಗುತ್ತೋ ಅನ್ನೋ ಭಯ... ಹೆಣ್ಣು ಮಗು ಅಲ್ವಾ?'
ವಿಷಯ ಬದಲಾವಣೆ ಮಾಡೋಣ ಅನ್ನುಸ್ತು...
' ಮನೇಲಿ ಯಾರ್ಯಾರು ಇರ್ತೀರಾ'
' ನಾನು, ನಮ್ಮನೆಯವರು, ಮಗಳು, ಮತ್ತೆ ಶಿವು'
' ಶಿವು ಯಾವ ಕ್ಲಾಸು'
' ಏಳನೇ ಕ್ಲಾಸ್'
' ತುಂಬಾ ದಿವಸ ಆದ್ಮೇಲೆ ಮಗಳು ಹುಟ್ಟಿದ್ದಾಳೆ ಹಾಗಾಗಿ ಕಾಳಜಿ ಜಾಸ್ತಿ ಇರಬೇಕು ಅಲ್ವಾ?'
' ಅಯ್ಯೋ... ಶಿವು ನನ್ ಮಗ ಅಲ್ಲ'
' ಮತ್ತೆ'
' ನಮ್ಮೆಜಮಾನ್ರ ಅಕ್ಕನ ಮಗ... ನಮ್ಮನೇಲಿ ಇದ್ದು ಓದ್ತಾ ಇದ್ದಾನೆ'
ಆರಂಭದ ಹಿಂಜರಿಕೆ ಕಡಿಮೆ ಆಯಿತು....ಮಾತು ಸರಾಗವಾಯಿತು.
'ನಾನು ಸರ್ಕಾರಿ ಶಾಲೆಯಲ್ಲಿ ಪಾಠ ಮಾಡ್ತೀನಿ, ನಮ್ಮನೆಯವರು ಖಾಸಗಿ ಕಂಪನೀಲಿ ಕೆಲಸ ಮಾಡ್ತಾರೆ. ಬಾಡಿಗೆ ಮನೆಯಲ್ಲಿ ಇದ್ದೇವೆ. ಶಿವು, ಸುಮಾ ಇಬ್ಬರೂ ನಮ್ಮ ಶಾಲೆಯಲ್ಲಿ ಓದುತ್ತಾ ಇದ್ದಾರೆ. ಹಳ್ಳಿಯ ವಾತಾವರಣ ಸರಿಯಾಗಿಲ್ಲ ಅಂತ, ಶಿವುನ ನಮ್ಮನೆಯಲ್ಲಿ ಬಿಟ್ಟಿದ್ದಾರೆ. ಜೀವನ ಹಾಯಾಗಿ ನಡಿತಾ ಇತ್ತು.. ಇದ್ದಕ್ಕಿದ್ದಂತೆ ಎಲ್ಲಾ ಅಲ್ಲೋಲ ಕಲ್ಲೋಲ, ಏನೋ ಭಯ, ಆತಂಕ, ಏನ್ ಮಾಡೋಕು ತೋಚ್ತಾ ಇಲ್ಲ.....'
ಮತ್ತೆ ಮೌನ... ಸುಮತಿ ಅಂತರ್ಮುಖಿಯಾದರು, ಕಣ್ಣಲ್ಲಿ ನೀರು ತುಂಬಿತು.
' ಸುಮತೀ.... ಏನಾಯ್ತು? ಅಲ್ಲೋಲ ಕಲ್ಲೋಲ ಅಂದ್ರಿ... ಅಂಥದ್ದೇನಾಯ್ತು... ಎಂತಹ ವಿಷಯವಾದರೂ ಪರ್ವಾಗಿಲ್ಲ ಹೇಳಿ.. ಅದನ್ನ ಗೋಪ್ಯವಾಗಿ ಇಟ್ಟುಕೊಳ್ಳುವುದು ನಮ್ಮ ಧರ್ಮ.. ಸಂಕೋಚಬೇಡ'
ಕಣ್ಣೊರೆಸಿಕೊಂಡು, ಶುಷ್ಕ ನಗೆ ಬೀರಿ, ಮಾತು ಮುಂದುವರೆಸಿದರು ಸುಮತಿ.
' ಸರ್... ಶಿವು ಮೇಲೆ ನನಗೆ ತುಂಬಾ ಕೋಪ ಬಂದಿದೆ... ಇಷ್ಟು ದಿನ ಅತ್ತೆ... ಅತ್ತೆ ಅಂತ ನನ್ನ ಹಿಂದೆ ಸುತ್ತಾಡಿಕೊಂಡು, ಎಲ್ಲ ಕೆಲಸಕ್ಕೆ ಸಹಾಯ ಮಾಡ್ತಾ, ಸುಮನ್ನ ಸ್ಕೂಲಿಂದ ಕರ್ಕೊಂಡು ಬರುತ್ತಾ ಮುಚ್ಚಟೆಯಾಗಿ ಇದ್ದವನು.. ಯಾಕೆ ಹೀಗಾದ ಅನ್ನೋದೇ ಚಿಂತೆ.
ತುಂಬಾ ಕಷ್ಟ ಆಗ್ತಾ ಇದೆ... ಹೇಳಕ್ಕೆ... ಪ್ರಯತ್ನ ಮಾಡ್ತೀನಿ..
ಬೆಳಿಗ್ಗೆ ಸ್ಕೂಲಿಗೆ ಹೋಗುವ ಗಡಿಬಿಡಿ ಇರುತ್ತೆ.. ಮನೆಯವ್ರು ತಿಂಡಿ ತಿಂದು.. ಊಟ ತಗೊಂಡು ಕೆಲಸಕ್ಕೆ ಹೋಗ್ತಾರೆ.. ಮಗಳಿಗೆ ಸ್ನಾನ ಮಾಡಿಸಿ, ತಯಾರು ಮಾಡಿ, ಮಕ್ಕಳಿಬ್ಬರಿಗೂ ತಿನ್ನಕ್ಕೆ ಕೊಟ್ಟು.. ನಾನು ಸ್ನಾನಕ್ಕೆ ಓಡ್ತೀನಿ.
ಅಂತಹ ಒಂದು ದಿನ... ಬಚ್ಚಲು ಮನೆಯ ಕಿಟಕಿಯ ಹತ್ತಿರ.. ಯಾರೋ ಓಡಾಡಿದಂಗೆ ಅನ್ನಿಸ್ತು. ನಾಯಿ ಇರಬಹುದೇನೋ ಅಂತ ಸುಮ್ಮನಾದೆ. ಮತ್ತೆರಡು ದಿನದ ನಂತರ... ಅದೇ ಅನುಭವ ಆಯ್ತು... ಕಿಟಕಿಯ ಹತ್ತಿರ ನಿಂತಂತೆ... ಯಾರದು ಅಂತ ಅರಚಿದೆ, ನಿಃಶಬ್ಧ. ಮನಸ್ಸಿಗೆ ಮುಜುಗರ ಆಯ್ತು, ಕಿಟಕಿ ಬಾಗಿಲು ಸರಿಯಾಗಿ ಹಾಕಿದೆಯಾ ಅಂತ ನೋಡಿದೆ... ಸರಿಯಾಗೇ ಇತ್ತು. ರಮೇಶ್ ಅವರಿಗೆ ಈ ವಿಚಾರ ಹೇಳ್ದೆ... ನೀನು ಅಂದುಕೊಂಡಂತೆ ನಾಯಿ ಇರಬಹುದು.. ಯಾಕೆ ಆತಂಕ ಮಾಡ್ಕೋತಿಯ... ನಾಲ್ಕು ದಿನ ಗಮನಿಸೋಣ.. ಅಂತ ಸಮಾಧಾನ ಮಾಡಿದರು. ನನಗೆ ಸ್ನಾನ ಮಾಡಕ್ಕೆ ಹಿಂಜರಿಕೆ, ಅನುಮಾನ, ಭಯ, ಆತಂಕ ಎಲ್ಲಾ ಒಟ್ಟಿಗೆ ಅನುಭವ ಆಗ್ತಿತ್ತು. ಮನಸ್ಸಿಗೆ ತುಂಬಾ ಹಿಂಸೆ ಆಗ್ತಿತ್ತು..
ವಿಧಿ ಇಲ್ಲ... ಮಾಡಲೇಬೇಕು.. ಹೇಗೋ ಕಾಟಾಚಾರಕ್ಕೆ ಮುಗಿಸಿ ಆಗುತ್ತಿತ್ತು.
ಒಂದು ಭಾನುವಾರ, ಸ್ನಾನಕ್ಕೆ ಇಳಿಯದೆ, ಬಕೆಟ್ಟಿಗೆ ನೀರು ಬಿಟ್ಟು, ತಕ್ಷಣ ತೆಗೆಯಲು ಅನುವಾಗುವಂತೆ ಕಿಟಕಿ ಬಾಗಿಲಿನ ಬಿರಟೆ ತಿರುಗಿಸಿಟ್ಟೆ. ಸ್ವಲ್ಪ ಸಮಯದ ನಂತರ ಯಾರೋ ನಡೆದು ಬಂದ ಶಬ್ದ... ಕಿಟಕಿಯ ಬಳಿ ನಿಂತಿತು. ಧೈರ್ಯ ಮಾಡಿ ಕಿಟಕಿಯ ಬಾಗಿಲನ್ನು ತೆಗೆದೆ, ತಿರುಗಿದ ಹುಡುಗನ ಬೆನ್ನು ಕಾಣಿಸಿತು... ಸ್ನಾನ ಮಾಡಲಾಗದೆ ಹೊರ ಬಂದೆ.
ಶಿವು ಹೊರಗಡೆಯಿಂದ ಬಂದ, ಅವನು ಹಾಕಿದ್ದ ಶರಟು ನನ್ನ ಕಣ್ಣಿಗೆ ಬಿತ್ತು, ಯಾವ ಅನುಮಾನವೂ ಉಳಿಯಲಿಲ್ಲ, ಅವನೇ ಕಿಟಕಿ ಬಳಿ ಬಂದಿದ್ದು.
ಕೋಪ ಮಿತಿ ಮೀರಿತು.... ಕೈಗೆ ಸಿಕ್ಕಿದ ಕಡಗೋಲು ಆಯುಧವಾಯಿತು... ಎಷ್ಟು ಹೊಡೆದೆನೊ... ಏನು ಮಾತಾಡಿದೆನೋ... ಅತ್ತೆ ಅತ್ತೆ ಇನ್ ಮಾಡಲ್ಲ ಅತ್ತೆ ..ಕ್ಷಮಿಸಿ ಅತ್ತೆ ...ಅನ್ನುವ ಯಾವ ಮಾತು ನನ್ನ ಕೋಪಾನ ಕರಗಿಸಲಿಲ್ಲ.... ಮಾವಂಗೆ ಹೇಳಬೇಡಿ ಅತ್ತೆ ಅನ್ನುವ ಮಾತು ಇನ್ನೂ ಕೋಪ ಹೆಚ್ಚು ಮಾಡಿತು... ಸುಮಾ ಜೋರಾಗಿ ಅಳುತ್ತಾ.. ಅಮ್ಮ ಶಿವನ್ನ ಹೊಡಿಬೇಡಮ್ಮ ಅಂತ ಕೈ ಹಿಡಿದಾಗ.. ಕೈಯಲ್ಲಿದ್ದ ಕಡಗೋಲನ್ನ ಅವನ ಮೇಲೆ ಎಸೆದು ಮಗಳನ್ನು ತಬ್ಬಿಕೊಂಡು ಅಳಕ್ಕೆ ಶುರು ಮಾಡಿದೆ.
ಸುಮಾರು 12 ಗಂಟೆಯಾಗಿತ್ತು... ಮನೆಯಲ್ಲಿ ಸ್ಮಶಾನ ಮೌನ. ಮಗಳು ಹಸಿವು ಎಂದಾಗ.. ವಾಸ್ತವಕ್ಕೆ ಬಂದೆ.. ಶಿವು ಒಂದು ಮೂಲೆಯಲ್ಲಿ ತಲೆತಗ್ಗಿಸಿ ಗುಬ್ಬಚ್ಚಿಯಂತೆ ಕೂತಿದ್ದ... ಕಣ್ಣೀರು ಹರಿಯುತ್ತಿತ್ತು . "ಆಷಾಢ ಭೂತಿ" ಅಂತ ಮನಸ್ಸಿನಲ್ಲಿ ಬೈಕೊಂಡೆ. ಜೊತೆಗೆ ಎಷ್ಟು ವಿಧೇಯನಾಗಿದ್ದ, ಗೌರವದಿಂದ ನಡೆದುಕೊಳ್ಳುತ್ತಿದ್ದ, ಜಾಣ ಹುಡುಗ ಯಾಕೆ ಹೀಗಾದ ಅನ್ನುವ ಪ್ರಶ್ನೆ ಮನಸ್ಸಿಗೆ ಬಂತು..
ಮನಸ್ಸಿಲ್ಲದ ಮನಸ್ಸಿನಿಂದ... ಏನೋ ಅಡಿಗೆ ಮಾಡಿ ಎರಡು ಮಕ್ಕಳಿಗೂ ಊಟ ಕೊಟ್ಟೆ.
ರಮೇಶ್ ಹೊರಗೆ ಹೋಗಿದ್ದವರು ಸಂಜೆಗೆ ಬಂದರು. ಎಲ್ಲ ವಿಷಯ ಅವರಿಗೆ ಹೇಳಿದೆ... ಅವರಿಗೂ ಅದನ್ನು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗಲಿಲ್ಲ. ಈ ವಿಷಯ ಶಿವು ಜೊತೆಯಲ್ಲಿ ಮಾತಾಡುವುದು ಸದ್ಯ ಬೇಡ ಎಂದು ನಾನೇ ತಡೆದೆ. ಇನ್ನೂ ಒದೆಗಳು ಬಿದ್ದಾವೆಂಬ ಭಯ ನನಗೆ.
ಮುಂದೇನು ಮಾಡಬೇಕೆಂಬ ಸಂದಿಂಗ್ಧತೆಯಲ್ಲೇ ಎರಡು ಮೂರು ದಿನ ಕಳೆಯಿತು. ಅವರ ಸ್ನೇಹಿತರ ಜೊತೆಯಲ್ಲಿ ಸೂಕ್ಷ್ಮವಾಗಿ ಈ ವಿಷಯ ಮಾತಾಡಿದಾಗ ನಿಮ್ಮನ್ನು ನೋಡಲು ಸಲಹೆ ಕೊಟ್ಟ ಕಾರಣ, ನಾವೀಗ ಬಂದಿದ್ದು. ಏನಾದ್ರೂ ದಾರಿ ತೋರಿಸಿ, ಮನಸ್ಸಿಗೆ ನೆಮ್ಮದಿ ಸಿಗೋ ಹಾಗೆ ಮಾಡಿ' ಮಾತು ನಿಲ್ಲಿಸಿದರು.
' ಸುಮತೀ..ನಿಮ್ಮ ಆತಂಕ ಅರ್ಥ ಆಗುತ್ತೆ.. ಈಗ ನಿಮ್ಮನ್ನ ಕಾಡುತ್ತಿರುವ ಭಯ ಯಾವುದು?'
' ಮೊದಲನೇದಾಗಿ ಅವನ ಕೆಟ್ಟ ದೃಷ್ಟಿ ಮಗಳ ಮೇಲೆ ಬೀಳುತ್ತೆ ಅನ್ನೋದು... ನನಗೇನಾದರೂ ಕೆಡುಕು ಮಾಡ್ತಾನ ಅನ್ನೋ ಅನುಮಾನ... ಇಷ್ಟು ದಿನ ನನ್ನ ಮಗಳನ್ನ ಅವನ ಜೊತೇಲೆ ಇರಕ್ಕೆ ಬಿಡ್ತಾ ಇದ್ದೆ... ಈಗ ಆ ನಂಬಿಕೆನೇ ಇಲ್ಲ... ಯಾವಾಗಲೂ ನಂಜೊತೆಲೆ ಇಟ್ಕೊಂಡಿರ್ತೀನಿ.. ಎಷ್ಟು ದಿನ ಸಾಧ್ಯ... ಇದಕ್ಕೆ ಪರಿಹಾರ ನೀವೇ ಹೇಳ್ಬೇಕು'
ಹೆಣ್ಣಾಗಿ, ತಾಯಿಯಾಗಿ ಸುಮತಿಯ ಯೋಚನಾ ಲಹರಿ ಒಪ್ಪತಕ್ಕದ್ದೆ. ಆದರೆ ಹುಡುಗನ ಬಗ್ಗೆ ಯೋಚಿಸಿದಾಗ... ಅವನು ಮಾಡಿರುವುದು ತಪ್ಪೇ ಆದರೂ , ಅದು ಹದಿ ವಯಸ್ಸಿನ ಕುತೂಹಲದಿಂದ ಅಗಿರಬಹುದೇ, ಇದಕ್ಕೆ ಪ್ರೇರೇಪಣೆ ಎಲ್ಲಿಂದ ಬಂದಿರಬಹುದು... ಈ ತಪ್ಪನ್ನು ಕ್ಷಮಿಸಿ, ಅವನನ್ನು ಸರಿ ದಾರಿಗೆ ತರದಿದ್ದರೆ.. ಒಂದು ಜೀವದ ಭವಿಷ್ಯವನ್ನು ಹಾಳು ಮಾಡಿದಂತೆ ಅಲ್ಲವೇ?
ರಮೇಶ್ ನನ್ನು ಒಳಗೆ ಕರೆದು ಇಬ್ಬರೊಡನೆಯೂ ಈ ಬಗ್ಗೆ ಮಾತಾಡಲು ನಿರ್ಧರಿಸಿದೆ...
' ನಿಮ್ಮ ಆತಂಕದಿಂದ ಹೊರಬರಲು ತುಂಬಾ ಸುಲಭದ ದಾರಿ ಎಂದರೆ... ಶಿವುನನ್ನು ಅವರ ಅಪ್ಪ ಅಮ್ಮಂದಿರ ಬಳಿ ಕಳಿಸುವುದು... ಮಾಡಬಹುದಲ್ಲ?'
ನನ್ನ ಈ ಸಲಹೆಗೆ ತಕ್ಷಣ ಉತ್ತರ ಬರಲಿಲ್ಲ. ಇಬ್ಬರೂ ಯೋಚಿಸುತ್ತಿದ್ದರು. ಮೊದಲು ಉತ್ತರ ಕೊಟ್ಟಿದ್ದು ಸುಮತಿ
' ಸರ್ ಅದು ಮಾಡಕ್ಕಾಗಲ್ಲ ಯಾಕಂದ್ರೆ.. ಇದು ರಮೇಶ್ ಅವರಿಗೆ ಕೃತಜ್ಞತೆಯ ಪ್ರಶ್ನೆ... ಅವರ ಅಕ್ಕ ಭಾವ, ಇವರು ಓದುವ ಸಮಯದಲ್ಲಿ ತುಂಬಾ ಸಹಾಯ ಮಾಡಿದ್ದಾರೆ... ಅದು ತೀರಿಸಲಾಗದ ಋಣ ಅಂತ ಆಗಾಗ ಹೇಳುತ್ತಿರುತ್ತಾರೆ'
ರಮೇಶ್ ಈ ಮಾತನ್ನು ಅನುಮೋದಿಸಿ..
' ಶಿವುನ ಓದಿಗೆ ಅಡಚಣೆ ಆಗುತ್ತೆ, ಅವನನ್ನು ವಾಪಸ್ ಕಳಿಸಲು ಏನು ಕಾರಣ ಕೊಡುವುದು, ನಿಜವಾದ ಕಾರಣ ಹೇಳಿದರೆ ಅಕ್ಕ ಭಾವನಿಗೆ ಎಷ್ಟು ನೋವಾಗಬಹುದು?.. ಅದಾಗದ ಮಾತು.. ಅದನ್ನು ಬಿಟ್ಟು ಬೇರೆ ದಾರಿ ಹೇಳಿ'
ಆ ದಂಪತಿಗಳ ಮಧ್ಯೆಯಿದ್ದ ಒಮ್ಮತ ನನಗೆ ಮೆಚ್ಚುಗೆಯಾಯಿತು. ನನ್ನ ದೃಷ್ಟಿಯಲ್ಲಿ, ಹುಡುಗನನ್ನು ಸರಿದಾರಿಯಲ್ಲಿ ಹಚ್ಚುವ ಆಯ್ಕೆ ಸರಿ ಎನಿಸಿದ್ದು... ಅದನ್ನು ಅವರ ಮುಂದೆ ಇಟ್ಟೆ...
ಸುಮತಿಯವರು ದೊಡ್ಡ ಮನಸ್ಸು ಮಾಡಿ, ನಮ್ಮ ಮಕ್ಕಳು ಮಾಡಿದ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಂಡು ಸರಿಪಡಿಸುವಂತೆ... ಶಿವುನನ್ನು ಕ್ಷಮಿಸಲು ಸಾಧ್ಯವಾದರೆ ಅದರ ಪರಿಣಾಮ ಎಲ್ಲರಿಗೂ ಅನುಕೂಲವಾಗುತ್ತದೆ. ಯೋಚಿಸಿ ನಿರ್ಧಾರ ಮಾಡಿ... ಸಾಧ್ಯ ಅನಿಸಿದರೆ ಮುಂದಿನ ವಾರ ಬನ್ನಿ... ಎಂದು ಹೇಳಿ ಕಳಿಸಿದೆ.
ಮುಂದೆ ಬಂದ ಇನ್ನೊಬ್ಬರೊಡನೆ ಮಾತು ಮುಗಿಸಿ ಕಳಿಸಿದೊಡನೆ, ಮತ್ತೆ ಬಂದರು ರಮೇಶ್ ಸುಮತಿ ದಂಪತಿ.
' ಸರ್, ನಾವು ಶಿವೂನ ನಮ್ಮಲ್ಲೇ ಇಟ್ಕೋತೀವಿ... ನಾವೇನ್ ಮಾಡಬೇಕು ಅಂತ ನಮಗೆ ತಿಳಿಸಿ.. ದೇವರ ಮೇಲೆ ಭಾರ ಹಾಕಿ ಪ್ರಯತ್ನ ಮಾಡ್ತೀವಿ' ಅಂತ ಹೇಳಿದ್ದು ರಮೇಶ್.
' ಮೊದಲು ಈ ಘಟನೆ ನಡೆದೇ ಇಲ್ಲವೇನೋ ಅನ್ನುವಂತೆ... ಸುಮತಿಯವರು ಶಿವೂ ಜೊತೆ ವ್ಯವಹರಿಸಬೇಕು. ಇದು ಕಷ್ಟ ಆಗುತ್ತೆ ಆದರೆ ಪ್ರಯತ್ನ ಮುಂದುವರಿಸಿ. ರಮೇಶ್ ಗೆ ಈ ವಿಷಯ ಗೊತ್ತೇ ಇಲ್ಲ ಅನ್ನುವಂತೆ ಇರಲಿ.
ಇನ್ನು ಕೆಲವು ದಿನ ಮಗಳನ್ನು ನಿಮ್ಮ ಜೊತೆಯಲ್ಲೇ ಇಟ್ಟುಕೊಳ್ಳಿ.
ಅವನಿಗೂ ತುಂಬಾ ಭಯ ಇರುತ್ತೆ... ನೀವಂದುಕೊಂಡಂತೆ ಯಾವ ಅನಾಹುತವೂ ಆಗಲು ಸಾಧ್ಯ ಇಲ್ಲ. ಹಾಗೇನಾದರೂ ಆದರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಲ್ಲಿರಿ.... ಚಿಂತೆ ಬೇಡ.
ಶಿವುನ ನನ್ನ ಬಳಿ ಕರೆ ತನ್ನಿ, ಅವನ ಮನಸ್ಸಿನಲ್ಲಿರುವ ಭಾವನೆಗಳನ್ನು ತಿಳಿಯಲು ಪ್ರಯತ್ನ ಮಾಡೋಣ.'
ಮುಂದಿನ ವಾರ ರಮೇಶ್ ಶಿವೂನ ಜೊತೆ ಬಂದರು... ಶಿವೂನ ಪರಿಚಯ ಮಾಡಿಕೊಟ್ಟು... ಕೆಲ ಸಮಯದ ನಂತರ...ಮೊದಲೇ ಯೋಜಿಸಿದ್ದಂತೆ, ಫೋನ್ ಕರೆ ಬಂದಂತೆ ಮಾತನಾಡಲು ಹೊರಗಡೆ ಹೋದರು. ಏನು ಗೊತ್ತಿಲ್ಲದಂತೆ ಶಿವೂನ ಮಾತನಾಡಿಸುತ್ತಾ, ಅವನ ಸ್ನೇಹಿತರ ಬಗ್ಗೆ, ಇಷ್ಟವಾದ ಆಟ, ಪಾಠದ ಬಗ್ಗೆ, ಪ್ರಭಂದ ಬರೆಯುವ ಆಸಕ್ತಿ ಹಾಗೂ ಗಳಿಸಿದ ಬಹುಮಾನದ ಬಗ್ಗೆ ತಿಳಿದಾಯ್ತು. ಮುಂದೆ ಪೊಲೀಸ್ ಆಫೀಸರ್ ಆಗಬೇಕೆಂಬ ಅವನ ಆಸೆಯನ್ನು ತಿಳಿದು ಬೆನ್ನು ತಟ್ಟಿ ಒಳ್ಳೆಯದಾಗಲೆಂದು ಹಾರೈಸಿದೆ...
' ಅತ್ತೆ ಮಾವನ ಮನೆಯಲ್ಲಿ ಇದ್ದು ಓದಕ್ಕೆ ನಿಂಗೆ ಇಷ್ಟಾನಾ?' ಅನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಬರಲಿಲ್ಲ.
' ಇಲ್ಲಿಗೆ ಯಾಕೆ ಕರ್ಕೊಂಡು ಬಂದಿದ್ದಾರೆ ನಿಮ್ಮಾವ ಅಂತ ಗೊತ್ತಾ?' ಅಂತ ಕೇಳಿದಾಗ ಅವ ಪೆಚ್ಚಾದ.... ಗೊತ್ತಿಲ್ಲ ಅಂತ ಉತ್ತರ ಹೇಳಿದ.
ಹೋದ ವಾರ ನಿಮ್ಮ ಅತ್ತೆ ಮಾವ ಇಬ್ಬರೂ ಬಂದಿದ್ದರು... ನಿಮ್ಮತ್ತೆ ತುಂಬಾ ಬೇಜಾರು ಮಾಡ್ಕೊಂಡಿದ್ರು.. ಅತ್ತರು.... ಯಾಕೆ ಅಂತ ನಿಂಗೆ ಗೊತ್ತಾ? ಎಂಬ ಪ್ರಶ್ನೆಗೆ ತಲೆತಗ್ಗಿಸಿ ಕೂತವನ ಕಣ್ಣಲ್ಲಿ ನೀರು ಹರಿಯುತ್ತಿತ್ತು....
ಆಗಿದ್ದಾಯ್ತು, ಹೋಗಲಿ ಬಿಡು, ಅಳಬೇಡ, ನಿನಗೆ ಏನೂ ತೊಂದರೆ ಆಗದಂಗೆ ನಾನು ನೋಡಿಕೊಳ್ತೀನಿ ಅಂತ ಹೇಳಿದಾಗ ತಲೆ ಎತ್ತಿ ನೋಡಿದ.
' ನಾನ್ ತಪ್ಪು ಮಾಡಿದೆ... ಕ್ಷಮಿಸಿಬಿಡಿ, ಇನ್ ಮೇಲೆ ಈ ತರಹ ಮಾಡಲ್ಲ... ನಮ್ಮತ್ತೆ ಮಾವಂಗೆ ಹೇಳಿ.. ಮಾವಂಗೆ ಗೊತ್ತಿಲ್ಲ ಅನ್ಕೊಂಡಿದ್ದೆ... ನಂಗೆ ತುಂಬಾ ಭಯ ಆಗ್ತಿದೆ... ಇನ್ಮೇಲೆ ಹೀಗೆಲ್ಲ ಮಾಡಲ್ಲ....' ಇಷ್ಟನ್ನೇ ಬೇರೆ ಬೇರೆ ರೀತಿಯಲ್ಲಿ ಹೇಳಿದವನ ಕಣ್ಣೀರು ಹರಿಯುತ್ತಲೇ ಇತ್ತು.
ಹಾಗೆ ಮಾಡಲು ಕಾರಣ ಏನೆಂದು ಕೇಳಿದಾಗ, ತನ್ನ ಸ್ನೇಹಿತರ ಗುಂಪಿನಲ್ಲಿ ಮಾತನಾಡುವಾಗ ಬಂದ.. ಒಂದು ಚಲನಚಿತ್ರದ ದೃಶ್ಯದಲ್ಲಿ ಸ್ನಾನ ಮಾಡುವುದನ್ನು ಕದ್ದು ನೋಡಿದ ಹುಡುಗನ ಮುಖಭಾವ, ಜೊತೆಗೆ ಲೈಂಗಿಕ ವಿಷಯಗಳ ಅರೆಬರೆ ಜ್ಞಾನ, ಕುತೂಹಲ, ಜೊತೆಗಾರನ " ನಾನು ನೋಡಿದೆ ನೀನೂ ನೋಡು ಗೊತ್ತಾಗುತ್ತೆ" ಎನ್ನುವ ಪ್ರೇರೇಪಣೆ... ಈ ಸಾಹಸಕ್ಕೆ ತೊಡಗಲು ಧೈರ್ಯ ತುಂಬಿತ್ತು.
ತಪ್ಪು ಮಾಡಿ ನಿಮ್ಮ ಅತ್ತೆಗೆ ನೋವು ಮಾಡಿದ ನೀನು.. ಕ್ಷಮೆ ಯಾರ ಬಳಿ ಕೇಳಬೇಕು... ಅತ್ತೆಯ ಹತ್ತಿರ ಕೇಳು ಎಂದಾಗ...
'ಅವರ ಮುಖವನ್ನು ನೋಡಲು ಭಯ ಅವಮಾನ ಆಗುತ್ತಿದೆ ಹೇಗೆ ಹೇಳಲಿ?'
' ಹೇಗೂ ನಿನಗೆ ಬರೆಯಕ್ಕೆ ಬರುತ್ತೆ.. ನಿನ್ನ ಮನಸ್ಸಲ್ಲಿರುವುದನ್ನೆಲ್ಲ ಬರೆದು ಅತ್ತೆಗೆ ಕೊಟ್ಟು, ನಮಸ್ಕಾರ ಮಾಡಿ ಕ್ಷಮೆ ಕೇಳು .. ಮುಂದೆ ಓದನ್ನು ಬಿಟ್ಟು ಬೇರೆ ಯಾವ ಬೇಡವಾದ ಕೆಲಸಗಳನ್ನು ಮಾಡುವುದಿಲ್ಲ ಎಂದು ಅವರಿಗೆ ತಿಳಿಸಿಕೊಡು... ನಾನು ಅವರನ್ನು "ಕ್ಷಮಿಸಿ ಬಿಡಿ" ಎಂದು ಕೇಳಿಕೊಳ್ಳುತ್ತೇನೆ' ಹೀಗೆ ಒಂದಷ್ಟು ಧೈರ್ಯದ ಮಾತು, ಇರಬೇಕಾದ ರೀತಿ ಎಲ್ಲವನ್ನು ತಿಳಿಸಿ, ಹುರಿದುಂಬಿಸಿ ಕಳಿಸಿದೆ.
ಮುಂದಿನ ವಾರ ಬಂದ ರಮೇಶ್ ಸುಮತಿ ದಂಪತಿ ಸ್ವಲ್ಪ ನೆಮ್ಮದಿ ಯಾಗಿದ್ದೇವೆ ಎಂದು ಹೇಳಿ, ಶಿವು ಬರೆದು ಕೊಟ್ಟಿದ್ದ ಪತ್ರವನ್ನು ತೋರಿಸಿದರು.
ಅದರಲ್ಲಿ ಪಾಪಪ್ರಜ್ಞೆ ಇತ್ತು, ಕ್ಷಮೆ ಯಾಚನೆಯಿತ್ತು, ಕೃತಜ್ಞತೆ ಇತ್ತು, ಸರಿಯಾದ ದಾರಿಯಲ್ಲಿ ಇರುವೆನೆಂಬ ಆಶ್ವಾಸನೆ ಇತ್ತು ... ನೊಂದ ಮನದ ಪ್ರತೀಕವಾಗಿ, ನಾಲ್ಕಾರು ಕಣ್ಣ ಹನಿಯ ಗುರುತುಗಳೂ ಇತ್ತು.
ಅದನ್ನು ಓದಿದಾಗ ಅವನ ಬರವಣಿಗೆಯ ಶೈಲಿ ಮೆಚ್ಚುಗೆ ಆಯ್ತು, ಬದಲಾವಣೆಯ ದಾರಿಯಲ್ಲಿದ್ದಾನೆ ಎಂಬ ನೆಮ್ಮದಿಯೂ ಆಯ್ತು.
'ಶಿವುನ ಮೇಲೆ ನಿಮ್ಮ ಕಣ್ಗಾವಲು ಇನ್ನೂ ಕೆಲ ಕಾಲ ಗಾಢವಾಗಿ ಇರಲಿ... ಮನಸ್ಸನ್ನು ನೆಮ್ಮದಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ, ನಿಮ್ಮ ಈ ನಿರ್ಧಾರ ನನಗೆ ತುಂಬಾ ಮೆಚ್ಚುಗೆಯಾಯ್ತು.. ಒಳ್ಳೆಯದಾಗಲಿ.. ಹೋಗಿ ಬನ್ನಿ' ಎಂದು ಹೇಳಿ ಬೀಳ್ಕೊಟ್ಟೆ.
ಕೊನೆ ಹನಿ:
" ಮುನಿತಾಯಿ" ಎಂಬ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರದಿಂದ ಹದಿಹರೆಯದ ಕುತೂಹಲದ ಮಕ್ಕಳಿಗೆ ಪ್ರೇರೇಪಣೆ ಸಿಕ್ಕಿದ್ದು.
ಚಲನಚಿತ್ರ, ಟಿವಿ ಮಾಧ್ಯಮ, ಈಗಂತೂ ಎಲ್ಲ ಮಕ್ಕಳ ಕೈಯಲ್ಲಿ ಸೆಲ್ ಫೋನ್... ಅಡ್ಡ ಪರಿಣಾಮ ಬೀರಲು ಬೇಕಾದ ಎಲ್ಲ ಅವಕಾಶಗಳು ಅವರಿಗೆ ಮುಕ್ತವಾಗಿ ದೊರೆಯುತ್ತವೆ.
ಈ ಪಿಡುಗನ್ನು ನಿವಾರಿಸಲು ತಂದೆ ತಾಯಿಗಳ, ಉಪಾಧ್ಯಾಯರುಗಳ ಹಾಗೂ ಮಾಧ್ಯಮಗಳಲ್ಲಿ ತೊಡಗಿರುವ ಜನಗಳ ಜವಾಬ್ದಾರಿ ತುಂಬಾ ಇದೆ.. ಅದನ್ನು ಮನಗಾಣ ಬೇಕಷ್ಟೇ.
ನಮಸ್ಕಾರ....
ಡಿ ಸಿ ರಂಗನಾಥ ರಾವ್
9741128413
ಇದು ಒಂದು ನಿಜ ಜೀವನದ ಕಥನ. ಕಥೆಯ ಸಾರಕ್ಕಿಂತ ಅದ್ಭುತ ನಿಮ್ಮ ಬರವಣಿಗೆಯ ನಿರೂಪಣೆ. ಬಹುಷಃ ವಿದ್ಯಾಥಿಗಳ ಜೀವನದಲ್ಲಿ ಇಂದಿನ ಸಡಾಭಿರುಚಿಇಲ್ಲದ ಚಲನ ಚಿತ್ರಗಳು, ಕೆಟ್ಟ ಟಿವಿ ಧಾರವಾಹಿಗಳು, ವಿಶೇಷವಾಗಿ ಇಂಟರ್ನೆಟ್ ಇರುವ ಮೊಬೈಲ್ ಗಳು, ಅವರ ಜೀವನ ಮತ್ತು ಭವಿಷ್ಯ ವನ್ನು ಹಾಳುಮಾಡುತಿದೆ. ಈ ಕಥಾ ಹಂದರದಲ್ಲಿ ಇರುವ ವಿದ್ಯಾರ್ಥಿ ಅದೃಷ್ಟ ವಂತ ಏಕೆಂದರೆ ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ತಿಳುವಳಿಕೆ ಸಿಕ್ಕಿದೆ ನಿಮ್ಮಂಥವರಿಂದ ಮತ್ತು ನಿಮ್ಮ ಸಂಸ್ಥೆ ಇಂದ. ದಾರಿ ತಪುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಮಾರ್ಗದರ್ಶನ ಮಾಡುತಿರುವ ನಿಮಗೂ ನಿಮ್ಮ ಸಂಸ್ಥೆಗೂ ನನ್ನದೊಂದು ದೊಡ್ಡ ಸಲಾಂ. ಹೀಗೇ ನಡೆಯುತಿರಲ್ಲಿ ನಿಮ್ಮ ಸಮಾಜಮುಖಿಯ ಸೇವೆ. ಧನ್ಯವಾದಗಳು ---ಮಂಜುನಾಥ್
ReplyDeleteಮುನಿತಾಯಿ ಚಲನಚಿತ್ರದ ತಿಮ್ಮರಾಯಿ ಪಾತ್ರದಂತೆಯೇ ( ನಟ ಉಮೇಶ್)ಆ ಹುಡು ಗನ ನಡವಳಿಕೆ ಇದೆ ನಿಜ.
ReplyDeleteಆ ಮನೆಯಲ್ಲಿರುವ ಮೂರೂ ವ್ಯಕ್ತಿಗಳ ಮನಸ್ಸಿನ ತುಮುಲ, ಮುಜುಗರ, ಅಸಹಾಯಕತೆ ಉತ್ತಮವಾಗಿ ಲೇಖಕರು ಚಿತ್ರಿಸಿದ್ದಾರೆ. ಸಮಾಧಾನ ಚಿತ್ತದಿಂದ ಸಮಸ್ಯೆಗೆ ಪರಿಹಾರ ಹುಡುಕಿದ ಅವರ ಆಪ್ತಸಮಾಲೋಚನೆಗೆ ಅವರ ಅನುಭವವೇ ಕಾರಣ.
ಈ ತರಹದ ಅದೆಷ್ಟೋ ಮಾನಸಿಕ ಸಮಸ್ಯೆಗಳಿಗೆ (ನನ್ನನ್ನು ಸೇರಿದಂತೆ )ಪರಿಹಾರ ನೀಡುತ್ತಿರುವ ಶ್ರೀಯುತರಿಗೆ ವಂದನೆಗಳು.
ಮುಗಿಸುವ ಮುನ್ನ
ಇದೇ ರೀತಿಯಲ್ಲಿ ನಮ್ಮ ಮನೆಯಲ್ಲಿ ನಮ್ಮ ಸೋದರಮಾವನ ಮಗ ಪೆಟ್ಟಿಗೆಯಿಂದ ನಮ್ಮ ಮನೆಯಲ್ಲಿ ಹಣ ಕದ್ದು, ವಿಚಾರಣೆಯಾದ ನಂತರ ಒಪ್ಪಿಕೊಳ್ಳದೆ ಮತ್ತೆ ಹಣ ಅದೇ ಜಾಗದಲ್ಲಿಟ್ಟು ಸುಮ್ಮನಾಗಿಬಿಟ್ಟಿದ್ದು ನೆನಪಿಗೆ ಬರುತ್ತಿದೆ.
ಗುರುಪ್ರಸನ್ನ
ಚಿಂತಾಮಣಿ