ಸಾವಿಲ್ಲದ ಮನೆಯ ಸಾಸಿವೆ

 


















ಕಿಸಾ ಗೌತಮಿ ತನ್ನ  ರೋಗಪೀಡಿತ ಮಗುವನ್ನು, ತನ್ನ ತೋಳ್ತೆಕ್ಕೆಯಲ್ಲಿ ಅಪ್ಪಿಕೊಂಡು ವೈದ್ಯರ ಬಳಿ ಬರುತ್ತಾಳೆ. ವೈದ್ಯರು ಮಗುವನ್ನು ಪರೀಕ್ಷಿಸಿ, ಅದರ ಪ್ರಾಣ ಪಕ್ಷಿ ಹಾರಿಹೋಗಿದೆಯೆಂದು ತಿಳಿಸುತ್ತಾರೆ. ಇದನ್ನು ಒಪ್ಪಲಾಗದ ಕಿಸಾಗೌತಮಿ, ರೋದಿಸುತ್ತಾ, ತನ್ನ ಮಗುವನ್ನು ಬದುಕಿಸಿಕೊಡಿರೆಂದು ಎದುರಿಗೆ ಸಿಕ್ಕಿದ ಎಲ್ಲರನ್ನೂ ಬೇಡಿಕೊಳ್ಳುತ್ತಾಳೆ. ಆಗ ಒಬ್ಬ ಹಿರಿಯರು ಗೌತಮ ಬುದ್ಧನ ಬಳಿ ಹೋಗಬೇಕೆಂದು ಸಲಹೆ ಕೊಡುತ್ತಾರೆ. 
ಬುದ್ಧನ ಬಳಿ ಬಂದ ಕಿಸಾಗೌತಮಿ, ಮಗುವನ್ನು ಬದುಕಿಸಿಕೊಡೆಂದು ಅಂಗಲಾಚುತ್ತಾಳೆ. ಮಗುವನ್ನು ಮುಂದಿದ್ದ ಮಣೆಯ ಮೇಲೆ ಮಲಗಿಸಲು ಹೇಳಿದಾಗ ಕಿಸಾಗೌತಮಿಗೆ ಅನುಮಾನ. ಹಿಂದೆ ಮುಂದೆ ನೋಡುತ್ತಾಳೆ.  ಮಗುವನ್ನು ಪರೀಕ್ಷೆ ಮಾಡಲು ಇದು ಸಹಾಯವಾಗುತ್ತದೆ ಎಂದು ಹೇಳಿದ ಗೌತಮ ಬುದ್ಧನ ಮಾತಿಗೆ ತಲೆಬಾಗಿ, ಮಗುವನ್ನು ಮಣೆಯ ಮೇಲೆ ಮಲಗಿಸುತ್ತಾಳೆ. ಮಗುವಿನ ಮೈ ಮುಟ್ಟಿ ತಣ್ಣಗಿದೆ ಎಂದು ತಿಳಿದು, ಮೂಗಿನ ಬಳಿ ಕೈಯಿಟ್ಟು ಉಸಿರಾಟವನ್ನು ಪರೀಕ್ಷಿಸಿ, ಮಗು ಸತ್ತಿದೆ ಎಂದು ಖಾತ್ರಿಪಡಿಸಿಕೊಂಡ ಗೌತಮ ಬುದ್ಧರು, ತಾಯಿಯ ಆಕ್ರಂದನವನ್ನು ಗಮನಿಸಿ, ಸತ್ಯವನ್ನು ಹೇಳಿದರೆ ಒಪ್ಪಲಾಗದ ಮನಸ್ಥಿತಿಯನ್ನು ಮನಗಂಡು, ಒಂದು ನಿಮಿಷ ಯೋಚಿಸಿ, ಕಿಸಾಗೌತಮಿಗೆ ಹೇಳುತ್ತಾರೆ...
ಇದಕ್ಕೊಂದು ದಾರಿ ಇದೆ... ಒಂದಷ್ಟು ಸಾಸಿವೆ ಕಾಳು ಬೇಕು ಅಷ್ಟೇ...
ಗೌತಮಿ ತಕ್ಷಣವೇ ಮಗುವನ್ನು ಎತ್ತಿಕೊಂಡು ಹೊರಡಲು ತಯಾರಾಗುತ್ತಾಳೆ.  ಎಲ್ಲಿಗೆ ಎಂದು ಕೇಳಿದ ಗೌತಮ ಬುದ್ಧರಿಗೆ  ಮನೆಗೆ ಹೋಗಿ ತಕ್ಷಣ ತರುತ್ತೇನೆ ಎಂಬ ಉತ್ತರ. 
ತಾಯಿ ನಿನ್ನ ಮನೆಯ ಸಾಸಿವೆ ಕಾಳು ಕೆಲಸಕ್ಕೆ ಬಾರದು, ಯಾಕೆಂದರೆ ನಿನ್ನ ಮನೆಯಲ್ಲಿ ಮಗುವಿನ ಸಾವು ಸಂಭವಿಸಿದೆ. ಸಾವಿಲ್ಲದ ಮನೆಯ ಸಾಸಿವೆ ಕಾಳು ತಂದರೆ ನಾನು ಪ್ರಯತ್ನ ಮಾಡುತ್ತೇನೆ.
ಸಮಯ ಮೀರುತ್ತಿದೆ, ಮಗುವನ್ನು ನನ್ನ ಬಳಿ ಮಲಗಿಸಿ, ಹೋಗಿ ಬಾ. ಮಗುವಿನ ಭಾರ ಹೊತ್ತು ಬೇಗ ಬರಲು ಸಾಧ್ಯವಾಗುವುದಿಲ್ಲ, ಎಂದು ಹೇಳುತ್ತಾರೆ.
ಮನಸ್ಸಿಲ್ಲದ ಮನಸ್ಸಿನಿಂದ, ಮಗುವನ್ನು ಬಿಟ್ಟು ಹೊರಟ ಕಿಸಾಗೌತಮಿ ಮೊದಲು ಸಿಕ್ಕಿದ ಮನೆಯ ಮುಂದೆ ನಿಂತಿದ್ದ ಗೃಹಿಣಿಗೆ ತನ್ನ ಕಷ್ಟವನ್ನು ಹೇಳಿಕೊಂಡು, ಸಾಸಿವೆ ಬೇಕು ಎಂದು ಕೇಳುತ್ತಾಳೆ.
ಎಷ್ಟು ಬೇಕು ಎಂದು ಗೃಹಿಣಿ ಕೇಳಿದಾಗ, ಒಂದು ಕ್ಷಣ ಯೋಚಿಸುತ್ತಾಳೆ. ತಾನು ಮನೆಯಲ್ಲಿ ಸಾಸಿವೆಯನ್ನು ಉಪಯೋಗಿಸುವುದು ನಾಲ್ಕು ಬೆರಳಲ್ಲಿ ಹಿಡಿದಷ್ಟು ಮಾತ್ರ. ಹೇಗಾದರಾಗಲಿ, ಸ್ವಲ್ಪ ಹೆಚ್ಚಿದ್ದರೂ ಒಳ್ಳೆಯದೇ ಎಂದು ಒಂದು ಹಿಡಿಯಷ್ಟು ಸಾಸಿವೆಯನ್ನು ಕೇಳುತ್ತಾಳೆ. ಗೃಹಿಣಿ ಒಳ ಹೋಗಿ ಬರುವಷ್ಟರಲ್ಲಿ, ಗೌತಮ ಬುದ್ಧ ಹೇಳಿದ ಸಾವಿಲ್ಲದ ಮನೆಯ ಸಾಸಿವೆ ಎಂದು ನೆನಪಾಗಿ, ಗೃಹಿಣಿಯನ್ನು ಅವರ ಮನೆಯಲ್ಲಿ ಆಗಿರಬಹುದಾದ ಸಾವಿನ ಬಗ್ಗೆ ಕೇಳುತ್ತಾಳೆ. ಕೆಲ ದಿನಗಳ ಹಿಂದೆ ಅವರ ಮನೆಯಲ್ಲಿ ಸಂಭವಿಸಿದ ಸಾವಿನ ಬಗ್ಗೆ ತಿಳಿದು, ಸಾಸಿವೆ ಬೇಡ ಎಂದು ಮುನ್ನಡೆಯುತ್ತಾಳೆ. ಮುಂದಿನ ಮನೆಯಲ್ಲಿ ಒಂದು ಹಿಡಿ ಸಾಸಿವೆಯನ್ನು ಕೇಳುತ್ತಾಳೆ, ಜೊತೆಗೆ ಸಾವಿನ ಬಗ್ಗೆಯೂ ವಿಚಾರಿಸುತ್ತಾಳೆ. ಅವಳಿಗೆ ಅಲ್ಲಿಯೂ ನಿರಾಸೆ. ಮುಂದಿನ ಮನೆಗಳಿಗೆ ಹೋಗುವಷ್ಟರಲ್ಲಿ, ಕಿಸಾ ಗೌತಮಿಗೆ ಅದೇನು ಕೇಳಬೇಕೆಂದು ಮನಸ್ಸು ಯೋಚಿಸಿರುತ್ತದೆ, ಅದರ ಸುತ್ತಲೇ ಚಿಂತನೆಯು ನಡೆಯುತ್ತಿರುತ್ತದೆ... ಜೊತೆ ಜೊತೆಗೆ ಎಲ್ಲ ಮನೆಗಳಲ್ಲೂ ನಿರಾಸೆಯೇ ಕಾದಿರುತ್ತದೆ.  ಎಲ್ಲ ಮನೆಯಲ್ಲಿಯೂ, ತನ್ನ ಮನೆಯೂ ಸೇರಿ,  ಸಾವುಗಳಾಗಿದ್ದ ವಿಚಾರವೂ ಮನದಟ್ಟಾಗಿರುತ್ತದೆ. 
ಈ ಪಯಣದಲ್ಲಿ, ತನ್ನ ಮನಸ್ಸು ಮಗನ ಕಡೆಯಿಂದ, ಸಂಪೂರ್ಣವಾಗಿ ಬೇರೆ ಕಡೆಗೆ ಗಮನಹರಿಸಿದ್ದನ್ನು, ಜೊತೆ ಜೊತೆಗೆ ದುಃಖ,ಅಳು ಕಡಿಮೆಯಾದದ್ದನ್ನು ಗಮನಿಸುತ್ತಾಳೆ. ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ಬಂದಿರುತ್ತಾಳೆ.
ಬರಿ ಕೈಯಲ್ಲಿ ಬಂದ ಕಿಸಾಗೌತಮಿಯನ್ನು, ಗೌತಮ ಬುದ್ಧರು ಕಾರಣವೇನೆಂದು ಕೇಳುತ್ತಾರೆ.
ಸಾವಿಲ್ಲದ ಮನೆಯೇ ಸಿಗಲಿಲ್ಲವೆಂದು ಹೇಳಿದ ಕಿಸಾ ಗೌತಮಿಗೆ, ಹುಟ್ಟಿದವರು ಸಾಯಲೇ ಬೇಕು, ಇದಕ್ಕೆ ಯಾರೂ ಹೊರತಲ್ಲ. ಇದು ಪ್ರಕೃತಿಯ ನಿಯಮ. ಹುಟ್ಟಿನಿಂದಲೇ ಸಾವು ನಿರ್ಧಾರವಾಗಿರುತ್ತದೆ. ಜೀವನ ಹುಟ್ಟಿನಿಂದ ಸಾಯುವವರೆಗಿನ ಪಯಣ ಮಾತ್ರ. ನಿನ್ನ ಮಗನನ್ನು ಪ್ರಕೃತಿಗೆ ಅರ್ಪಿಸಿ, ನಿನ್ನ ಉಳಿದ ಮಕ್ಕಳ / ಸಂಸಾರದ ಯೋಗಕ್ಷೇಮದ ಬಗ್ಗೆ ನಿನ್ನ ಗಮನವನ್ನು ಹರಿಸಿ ಜೀವನ ಮುಂದುವರಿಸಬೇಕೆಂದು ಸಲಹೆ ನೀಡುತ್ತಾರೆ.
ಜೀವನ ಸತ್ಯವನ್ನು ಅರಿತ ಕಿಸಾಗೌತಮಿ, ಮಗುವಿನ ಹೆಣವನ್ನು ಎತ್ತಿಕೊಂಡು ಅಲ್ಲಿಂದ ಹೊರಡುತ್ತಾಳೆ.

ಇದು ನಾವೆಲ್ಲ ಕೇಳಿರುವ / ಓದಿರುವ ಕಿಸಾ ಗೌತಮಿಯ ಕಥೆ. ಸಾವಿಲ್ಲದ ಮನೆಯೇ ಇಲ್ಲವೆಂದು, ಕಿಸಾ ಗೌತಮಿಗೆ ಮನದಟ್ಟು ಮಾಡಿಕೊಟ್ಟ ಗೌತಮ ಬುದ್ಧರ ಜಾಣ್ಮೆ. 

ದುಃಖ / ಕಷ್ಟ / ನೋವು ಉತ್ತುಂಗದಲ್ಲಿದ್ದಾಗ, ಮನಸ್ಸು ಯೋಚಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಹಾಗಾಗಿ ಏನಾದರೂ ಗಹನವಾದ  ವಿಷಯವನ್ನು ಕೇಳಲು, ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. 

ಮಗು ತೋಳಲ್ಲಿ ಇರುವ ತನಕ, ಅದರ ಸ್ಪರ್ಶ ಮಾತೃ ಹೃದಯಕ್ಕೆ ಸತ್ಯವನ್ನು ಒಪ್ಪಿಕೊಳ್ಳಲಾಗದೆ,  ದುಃಖದ ಸುತ್ತಲೂ ಸುತ್ತುವಂತಾಗಿರುತ್ತದೆ. ಮಗುವನ್ನು ಪರೀಕ್ಷಿಸಲು ಮಣೆಯ ಮೇಲೆ ಮಲಗಿಸಿದ ಕ್ಷಣ, ಕಿಸಾ ಗೌತಮಿಯ ಮನಸ್ಸು ಮಗುವನ್ನು ಪರೀಕ್ಷಿಸುತ್ತಿರುವ ಗೌತಮ ಬುದ್ಧರನ್ನು ಗಮನಿಸುತ್ತದೆ, ಹಾಗಾಗಿ ಅಳುವಿಗೆ ಒಂದಷ್ಟು ತಡೆ. ಮಗುವನ್ನು ಬದುಕಿಸಿಕೊಳ್ಳುವ ದಾರಿಯೊಂದಿದೆ ಎಂದು ತಿಳಿದಾಗ, ಅದನ್ನು ಮಾಡುವ ಆತುರ  ಮನಸ್ಸು ತಕ್ಷಣ ಆ ಕೆಲಸದ ಬಗ್ಗೆ ಕಾರ್ಯನಿರತವಾಗುತ್ತದೆ, ಹಾಗಾಗಿ ದುಃಖದ ಮಟ್ಟ ಮತ್ತೊಂದಿಷ್ಟು ಕಡಿಮೆಯಾಗುತ್ತದೆ. 
ಸಾಸಿವೆ ತರಲು ಮಗುವನ್ನು ಹೊತ್ತು ಹೋಗುತ್ತಿದ್ದ, ಕಿಸಾ ಗೌತಮಿಗೆ ಸಮಯದ ಅಭಾವ ಹಾಗೂ ಮಗುವಿನ ಭಾರವನ್ನು ಹೊತ್ತು ಆಗುವ ತೊಂದರೆಯನ್ನು ನಿವಾರಿಸಲು ಮಗುವನ್ನು ಅಲ್ಲಿಯೇ ಬಿಟ್ಟು ಹೋಗಲು ಪ್ರೇರೇಪಿಸಿದ್ದು, ಮಗುವಿನ ಮೇಲಿದ್ದ ವ್ಯಾಮೋಹ ಕಡಿಮೆಯಾಗಲು ಕಾರಣವಾಯಿತು. out of sight is out of mind - ಕಣ್ಣಿಗೆ ಕಾಣದ್ದು ಮನಸ್ಸಿಗೆ ದೂರ,  ಎನ್ನುವ ಮಾತಿನಂತೆ, ಕಿಸಾ ಗೌತಮಿಯ ಮನಸ್ಸು ಸಾವಿಲ್ಲದ ಮನೆಯ ಸಾಸಿವೆಯನ್ನು ತರುವ ಕಡೆಗೆ ಸಂಪೂರ್ಣ ಹೊರಳಿತು.    ಸಾವಿಲ್ಲದ ಮನೆ ಇಲ್ಲ ಎನ್ನುವ ಸತ್ಯವು ತನ್ನ ಅನುಭವದಿಂದಲೇ ತಿಳಿಯುತ್ತದೆ. ಇದು ಸಾವಿರ ಪದಗಳ ಮಾತುಗಳಿಗಿಂತ ಹೆಚ್ಚು ಫಲಕಾರಿ.
ಆಪ್ತ ಸಮಾಲೋಚಕನಾಗಿ ಈ ಕಥೆ ನನಗೆ ಪ್ರೇರಣಾದಾಯಕ. ಇದನ್ನು ಕೊಂಚಮಟ್ಟಿಗಾದರೂ, ಅನುಸರಿಸಿ / ಅಳವಡಿಸಿಕೊಂಡಿದ್ದೇನೆ ಎಂಬ ವಿಶ್ವಾಸ ನನ್ನದು.

ಈ ಕಥೆ ನನಗೊಂದು ಜಿಜ್ಞಾಸೆ ಮೂಡಿಸಿದೆ. ಗೌತಮ ಬುದ್ಧರು ಸಾವಿಲ್ಲದ ಮನೆಯ ಸಾಸಿವೆಯನ್ನೇ ತರಲು ಏಕೆ ಹೇಳಿರಬಹುದು?  ಅಕ್ಕಿ, ರಾಗಿ, ಬೇಳೆ ಹೀಗೆ ಬೇರೆ ಯಾವ ವಸ್ತುವನ್ನೂ ಯಾಕೆ ಹೇಳಲಿಲ್ಲ?
ಸಾಸಿವೆಯ ಮಹತ್ವವೇನು?
ಅಕ್ಕಿ ರಾಗಿ ಹೊಟ್ಟೆಯನ್ನು ತುಂಬಿಸುತ್ತದೆ, ಸಾಸಿವೆಗೆ ಆ ಶಕ್ತಿ ಯಿಲ್ಲ. ಆದರೆ ಸಾಸಿವೆಯ ಒಗ್ಗರಣೆ ಇಲ್ಲದೆ, ಬಹುಪಾಲು ಖಾರದ ಅಡುಗೆಗಳು ಪೂರ್ಣವಲ್ಲ.  ಸಾಸಿವೆಯ ಜೊತೆಗೆ ಸೇರಿಸುವ ವ್ಯಂಜನಗಳು, ಒಗ್ಗರಣೆಯ ವೈವಿಧ್ಯತೆಯನ್ನು, ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಇದರರ್ಥ ಸಾಸಿವೆ ಹೊಟ್ಟೆ ತುಂಬುವ ಭಾಗವಲ್ಲ,  ರುಚಿಯನ್ನು ನಾಲಗೆಗೆ ಮೂಡಿಸಿ, ಲೊಟ್ಟೆ ಹೊಡಿಸಿ, ಮನಸ್ಸಿಗೆ ಮುದ ಕೊಡುವ ವಸ್ತು ಅಲ್ಲವೇ? ಹಾಗಾಗಿ ಸಾಸಿವೆಗೂ ಮನಸ್ಸಿಗೂ ಸಂಬಂಧವಿದೆಯೇ? ಇದೆ ಎಂದು ಕರಾರುವಾಕ್ಕಾಗಿ ಹೇಳಿದರೆ ನಗೆಪಾಟಲಾದೀತು ಎಂಬ ಅನುಮಾನ.

ಸಾವಿಲ್ಲದ ಮನೆ ಎಂದಾಗ ನನಗಿನ್ನೊಂದು ಯೋಚನೆ.. ಅಂದಿನ ಕಾಲದಲ್ಲಿ ಮನೆ ಎಂದಾಕ್ಷಣ, ಕೂಡು ಕುಟುಂಬ. ಅಲ್ಲಿ ಅಜ್ಜಿ ತಾತ, ಅಪ್ಪ ಅಮ್ಮ, ಚಿಕ್ಕಪ್ಪ  ಚಿಕ್ಕಮ್ಮ,  ದೊಡ್ಡಪ್ಪ, ದೊಡ್ಡಮ್ಮ, ಅತ್ತೆ, ಮಾವ, ಅಣ್ಣ ತಮ್ಮಂದಿರು, ಅಕ್ಕತಂಗಿಯರು, ಮೊಮ್ಮಕ್ಕಳು, ಮರಿ ಮಕ್ಕಳು ಹೀಗೆ ಅದರ ವೈಶಾಲ್ಯ ಬಹುದೊಡ್ಡದಿತ್ತು. ಹಾಗಾಗಿ ಸಾವು ನೋವುಗಳ ವಿಷಯಗಳು ಸಾಮಾನ್ಯವಾಗಿತ್ತು. ಇತ್ತೀಚೆಗಿನ ಕುಟುಂಬದ ಕಲ್ಪನೆ ಬಹು ಚಿಕ್ಕದು. ಗಂಡ ಹೆಂಡತಿ ಮಕ್ಕಳು ಒಟ್ಟಿಗಿದ್ದರೆ ಅದೇ  ಕುಟುಂಬ, ಅದಕ್ಕೊಂದು ಮನೆ. ಹಾಗಾಗಿ ಈಗಿನ ಎಲ್ಲಾ ಮನೆಗಳಲ್ಲೂ ಸಾವಿನ ಸಂಭವ ಕಡಿಮೆಯೇ.  ವರ್ತಮಾನ ಕಾಲದಲ್ಲಿ, ಗೌತಮ ಬುದ್ಧರು ಇದ್ದರೆ, ಕಿಸಾ ಗೌತಮಿಗೆ ಸಾಸಿವೆ ತರಲು ಯಾವ ನಿಯಮ ಹೇಳುತ್ತಿದ್ದರೋ... ಊಹಿಸಲಾರೆ. 
ಅಕ್ಕಿಯೊಳಗನ್ನವನು ಕಂಡವರು ಮೊದಲಾರು ಅಕ್ಕರದ ಬರಹಕ್ಕೆ ಮೊದಲಿಗನದಾರು... ಎಂದವರು ನಮ್ಮ ಡಿವಿಜಿಯವರು.. ಮಂಕುತಿಮ್ಮನ ಕಗ್ಗದಲ್ಲಿ.  ಇಂಗು ಕರಿಬೇವಿನ ಸೊಪ್ಪಿನಂತಹ ವ್ಯಂಜನಗಳನ್ನು ಸೇರಿಸಿ,  ಸಾಸಿವೆಯ ಒಗ್ಗರಣೆ, ಹಾಕಿ, ಅಡುಗೆಯ ರುಚಿಯನ್ನು ಹೆಚ್ಚಿಸಿದ, ಆ ಮಹಿಳೆಯೋ ಅಥವಾ ಮಹನೀಯನೋ ಯಾರು ಎಂಬುದನ್ನು ಈ ಜಗತ್ತು ನೆನಪಿನಲ್ಲೇ ಇಟ್ಟಿಲ್ಲ, ಆದರೆ ಅದನ್ನು ಸವಿಯುವುದನ್ನು ಮಾತ್ರ ತಪ್ಪಿಸಿಲ್ಲ.

ಅಡಿಗೆ ತಯಾರಾಗಿದೆಯಾ ಎಂದು ಕೇಳಿದಾಗ, ಒಗ್ಗರಣೆ ಚುಯ್ ಎನಿಸಿದರೆ ಮುಗಿಯಿತು ಎಂದು ಹೇಳುವ ಮಾತನ್ನು ಕೇಳಿದ್ದೇನೆ. ಮನೆಯಲ್ಲಿ ಎಣ್ಣೆಯೋ, ಸಾಸಿವೆಯೋ ಇಲ್ಲದಿದ್ದ ಗೃಹಿಣಿ, ಸೌಟನ್ನು ಕಾಯಿಸಿ, ಸಾರಿನಲ್ಲಿ ಅದ್ದಿ ಬಂದ ಶಬ್ದವನ್ನು ಒಗ್ಗರಣೆ ಎಂದು ಬಣ್ಣಿಸಿದ್ದಿದೆ.

ಅತಿ ಚಿಕ್ಕದನ್ನು ಬಣ್ಣಿಸುವಾಗ ಸಾಸಿವೆ ಕಾಳಿನಷ್ಟು ಎಂದು ಹೇಳುವುದುಂಟು. ಸಾಸಿವೆ ಕಾಳಿನಷ್ಟು ಕರುಣೆ, ಕಕ್ಕುಲತೆ ಇಲ್ಲದ ಮನುಷ್ಯ ಎಂದು ಕಟುಕ ಮನಸ್ಸಿನ ವ್ಯಕ್ತಿಗೆ ಹೇಳುವುದುಂಟು.  ಆದರೆ ಹಂಪಿಯಲ್ಲಿರುವ ಅಷ್ಟು ದೊಡ್ಡ ಗಣಪತಿಯನ್ನು, ಸಾಸಿವೆ ಕಾಳಿನ ಗಣಪ ಎಂದು ಹೆಸರಿಸಿದರೆ, ಗಲಿಬಿಲಿ ಆಗುವುದಿಲ್ಲವೇ?

ಅಡಿಗೆ ಮನೆಯಿಂದ,  ಕಾಯಿ ಸಾಸಿವೆ ಚಿತ್ರಾನ್ನದ ಘಮ ಸೆಳೀತಾ ಇದೆ... ತಿನ್ಬೇಕು... ಬರ್ಲಾ

ನಮಸ್ಕಾರ.

ಡಿ ಸಿ  ರಂಗನಾಥ ರಾವ್
9741128413






    

Comments

Popular posts from this blog

ಕಣ್ಮರೆಯಾದ ಕೃಪ

ಜೈ ಜೈ ಶ್ರೀ ರಾಮ್

ದಾಂಪತ್ಯ - ಸಾಂಗತ್ಯ