ದಸರಾ ಅಂದರೆ....

 

ಅದೊಂದು ಕಾಲವಿತ್ತು. ನನ್ನೂರು ದೊಡ್ಡಜಾಲದಲ್ಲಿ ಓದುತ್ತಿದ್ದ ಸಮಯ. ದಸರಾ ಅಂದರೆ ಮೊದಲನೆಯದು ಶಾಲೆಗೆ ರಜ. ಬೊಂಬೆ ಇಡುವ ಸಂಭ್ರಮ, ಅದಕ್ಕೂ  ಹೆಚ್ಚಿನದು, ಎಲ್ಲ ಪುಸ್ತಕಗಳನ್ನು ಸರಸ್ವತಿ ಪೂಜೆಗೆ ಇಟ್ಟು ಓದುವುದರಿಂದ ಮುಕ್ತಿ ಪಡೆಯುವುದು. ಸಂಜೆ ಬೊಂಬೆ ಇಟ್ಟವರ ಮನೆಗೆ ಹೋಗಿ, ಬೊಂಬೆ ಬಾಗಿನ ತರುವುದು, ಮನೆಯಲ್ಲಿದ್ದ ಕತ್ತರಿ, ಚಾಕು, ಮಚ್ಚು, ಈಳಿಗೆಮಣೆ, ಇನ್ನಿತರ ಆಯುಧಗಳ ಪೂಜೆ, ವಿಜಯದಶಮಿಯ ಊರಿನ ದೇವರ ಉತ್ಸವ....
ನಮ್ಮೂರಿಗೆ ಬರುತ್ತಿದ್ದ ನ್ಯಾರೋಗೇಜ್ ಇಂಜಿನ್, ನಮಗೆ ರಾಕ್ಷಸಗಾತ್ರ, ಹತ್ತಿರ ಹೋಗಲು ಭಯ. ಆದರೆ ಆಯುಧಪೂಜೆ ಅಲಂಕಾರ ನೋಡುವ ಆಸೆ. ಸಾಕಷ್ಟು ದೂರದಿಂದ ನೋಡಿ ಸಂತೋಷಪಡುತ್ತಿದ್ದದ್ದು.

ಆನೆ, ಅಂಬಾರಿ, ಅರಸ, ಅರಸನ ಮಕ್ಕಳು, ಕಥೆ ಕೇಳಿದ್ದು ಗೊತ್ತು. ಹಾಗೆ, ವಿಜಯದಶಮಿಯಂದು ಮೈಸೂರು ಮಹಾರಾಜರು ಆನೆಯ ಮೇಲಿನ ಅಂಬಾರಿಯಲ್ಲಿ ಕೂತು ಮೆರವಣಿಗೆ ಹೋಗುವುದನ್ನು ಕೇಳಿದ್ದೆ. ಪೇಟ ತೊಟ್ಟು, ಕಪ್ಪು ಕನ್ನಡಕ ಧರಿಸಿದ ಮಹಾರಾಜರು, ಆನೆಯ ಮೇಲಿನ ಅಂಬಾರಿಯಲ್ಲಿ ಕೂತಿದ್ದ ಚಿತ್ರವನ್ನು ಪೇಪರ್ ನಲ್ಲಿ ನೋಡಿದ್ದೆ.

ಮಹಾರಾಜರನ್ನು ಹೆಸರಿನಿಂದ ಕರೆಯಬಾರದು, ಹೈನೆಸ್ ಎಂದು ಸಂಬೋಧಿಸಬೇಕೆಂದು ಹೇಳಿಕೊಟ್ಟಿದ್ದರು.  ನಮ್ಮ ಶಾಲೆಯಲ್ಲಿದ್ದ ಮಹಾರಾಜರ ಫೋಟೋದ ಕೆಳಗೆ ಬರೆದಿದ್ದ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್... ಪಕ್ಕದಲ್ಲಿ ನಾಲ್ಕು ಇಂಗ್ಲೀಷ್ ಅಕ್ಷರಗಳು. ಆಗ ನನಗೆ ಇಂಗ್ಲೀಷ್ ಓದಲು ಇನ್ನೂ ಬರುತ್ತಿರಲಿಲ್ಲ.  ಕುತೂಹಲದಿಂದ ಇಂದು ಗೂಗಲ್ ಮಾಡಿದಾಗ ತಿಳಿದದ್ದು G.C.S.I. ಇದು ಬ್ರಿಟಿಷ್ ಸರ್ಕಾರ ಕೊಡಮಾಡಿದ ಬಿರುದು. Grand Commander of the order of Star of India. ಮೈಸೂರಿನ ಪ್ರಜೆಗಳಿಗೆ, ಮಹಾರಾಜರ ಬಗ್ಗೆ ವಿಶೇಷ ಗೌರವ, ಭಕ್ತಿ. ಸುಮಾರು 40 ವರ್ಷಗಳ ಹಿಂದೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಒಬ್ಬ ಹಿರಿಯ ಕ್ಯಾಶ್ಯಿಯರ್  ಜೊತೆ, ಮಾತನಾಡುತ್ತಿದ್ದಾಗ ಅವರು ಹೇಳಿದ... highness ಪ್ರಾರಂಭ ಮಾಡಿದ ಬ್ಯಾಂಕಿನಲ್ಲಿ, ಬಹಳ ಜನ ಜಮಾ ಮಾಡಿದ ಹಣ, ಹಾಗೂ ಅವರಿಟ್ಟ ನಂಬಿಕೆ ಮಹಾರಾಜರ ಜನಪ್ರಿಯತೆಯನ್ನು ಸಾರಿದ್ದು.

1974 ರಿಂದ ಸುಮಾರು ಮೂರು ವರ್ಷ ಬೆಂಗಳೂರಿನ Mantons Bangalore pvt ltd. ಎಂಬ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ವರ್ಷದ ಆಯುಧ ಪೂಜೆಗೆ ನಾನು ಹೋಗಿರಲಿಲ್ಲ... ಕಾರಣ ಮರೆತಿದ್ದೇನೆ. ಅಂದು MD ಆಗಿದ್ದ  ವೆಂಕೋಬರಾವ್ ಮಾನೆಯವರು, ನನಗೆ ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಿದ್ದು, ರಜಾ ಮುಗಿದ ನಂತರ ಹೋದಾಗ ನನಗೆ ಅದನ್ನು ಕೊಟ್ಟರು, ಆಗ ನನಗಾದ ಸಂತೋಷ ಹಸಿರಾಗಿದೆ.   Planetary gear box ಎಂಬ ಹೊಸ product ಗೆ ಕಂಪನಿಗೆ ಸಿಕ್ಕ ಒಂದು ಪ್ರಶಂಸಾ ಪತ್ರ ಕಾರಣ. ಇದರ ಮೂಲ ರೂಪುರೇಷೆಗಳನ್ನು ನಾನು ಶಹಾಭಾದಿನಲ್ಲಿ ಕೆಲಸ ಮಾಡಿದಾಗ ಕಲಿತರೂ, ಅದನ್ನು ಒಂದಷ್ಟು ವಿಶೇಷತೆಗಳೊಂದಿಗೆ, ಪ್ರತ್ಯೇಕವಾಗಿ ವಿವಿಧ machine ಗಳಿಗೆ ಅಳವಡಿಸಲು ಅನುಕೂಲ ವಾಗುವಂತೆ ವಿನ್ಯಾಸ ಮಾಡಿದ್ದು, ಅದಕ್ಕೆ ಸಾಕಷ್ಟು ಬೇಡಿಕೆ ಬಂದದ್ದು ಸಹಜವಾಗಿ ಅವರಿಗೆ ಸಂತೋಷವಾಗಿತ್ತು.

ಮುಂದೆ ಸ್ವಂತ ಕಾರ್ಖಾನೆ  ಪ್ರಾರಂಭ ಮಾಡಿದ ಹೊಸದರಲ್ಲಿ, ಆಯುಧ ಪೂಜೆ ಬಂದಾಗ, ಬಲು ಕಷ್ಟದಿಂದ ಹಣವನ್ನು ಹೊಂದಿಸಿ, ಕೆಲಸದವರಿಗೆ ಬೋನಸ್ ಕೊಟ್ಟು ಮುಗಿಸಿದಾಗ, ನಿಟ್ಟುಸಿರು ಬಿಡುವಂತಾಗುತ್ತಿತ್ತು.

ಕೆಲ ವರ್ಷಗಳ ನಂತರ, ಆಯುಧ ಪೂಜೆಯ ನಂತರ, ನಮ್ಮ ಮತ್ತು  HP ರಂಗನಾಥ್ ಕುಟುಂಬದವರು ಹೋಗುತ್ತಿದ್ದ ಸಣ್ಣ ಪ್ರವಾಸಗಳು ದಸರಾ ಹಬ್ಬದ ವಿಶೇಷವಾಗುತ್ತಿತ್ತು.

ದೇವರ ದಯದಿಂದ, ವ್ಯಾಪಾರ ವ್ಯವಹಾರಗಳು ಚೆನ್ನಾಗಿ ಕುದುರಿದಾಗ, ದಸರಾ / ಆಯುಧ ಪೂಜೆ ಎಂದರೆ ಸಂಭ್ರಮ. ಫ್ಯಾಕ್ಟರಿಯ ಶುಚಿ ಮಾಡುವಿಕೆಯಿಂದ ಪ್ರಾರಂಭಮಾಡಿ, ಕೆಲಸಗಾರರಿಗೆಲ್ಲ ಹೊಸ ಬಟ್ಟೆ ಕೊಡಿಸಿ, ಪೂಜೆಯ ದಿನ, ಎಲ್ಲರಿಗೂ ಅಪ್ಪನ ಮೂಲಕ ಹಣ್ಣು, ಸಿಹಿ, ಬೋನಸ್ ಅನ್ನು ಕೊಡಿಸುತ್ತಿದ್ದದ್ದು ಬಹುಹಿತವಾದ ಸಂಗತಿ. ಅದರಲ್ಲೂ ಸ್ನೇಹಿತರು, ಇಷ್ಟರು ಬಂದು ಜೊತೆಯಲ್ಲಿದ್ದು ಎಲ್ಲರೊಂದಿಗೆ ಊಟ ಮಾಡಿ, ಹೋಗುತ್ತಿದ್ದ ಆ ದಿನಗಳು ಈಗ ಇಲ್ಲ. ಕಾಲಾಯ ತಸ್ಮೈ ನಮಃ.

ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ಒಂದು ಬಾರಿ ನೋಡಿದ್ದು. ನನ್ನಣ್ಣ ಸತ್ತಿ ಸಾರ್ ಅವರ ಸ್ನೇಹಿತ, ಕೆಲಸ ಮಾಡುತ್ತಿದ್ದ, ಮಹಡಿಯ ಮೇಲಿದ್ದ ಸಿಂಡಿಕೇಟ್ ಬ್ಯಾಂಕ್ ನ ಕಟ್ಟಡದಿಂದ. ವೈಭವ ಹಾಗೂ ಸಡಗರದಿಂದ ಕೂಡಿದ ಮೆರವಣಿಗೆಯನ್ನು ಕಣ್ತುಂಬಿ ಕೊಂಡರೂ, ಅದರ ಭಾಗವಾದಂತೆ ಅನ್ನಿಸಲಿಲ್ಲ. 

ಮತ್ತೊಂದು ವರ್ಷ, ವಿಜಯದಶಮಿಯ ಮಾರನೆಯ ದಿನ ಸಂಜೆ, ದೀಪಾಲಂಕಾರವನ್ನು ನೋಡಲು ಹೋಗಿದ್ದು.   ನಾನೇ ಕಾರನ್ನು ಓಡಿಸುತ್ತಿದ್ದರಿಂದ, ಸ್ವಲ್ಪಮಟ್ಟಿನ ಅಡಚಣೆ ಇದ್ದರೂ, ಜನಜಂಗುಳಿಯಲ್ಲಿ drive ಮಾಡುತ್ತಾ, ಜನಗಳ ಸಡಗರಗಳನ್ನು ನೋಡುತ್ತಾ, ವಿಧವಿಧವಾದ ದೀಪಗಳ ಝಗಮಗಿಸುವಿಕೆಯನ್ನು ಆನಂದಿಸಿದ್ದು ಅವಿಸ್ಮರಣೀಯ.

ಈ ವರ್ಷದ ಮೈಸೂರು ದಸರಾ ಸಂಭ್ರಮದಲ್ಲಿ ಭಾಗವಹಿಸಿದ್ದು ವಿಶಿಷ್ಟ ರೀತಿಯಲ್ಲಿ. ಈ ಅನುಭವದ ಶ್ರೇಯಸ್ಸು ನನ್ನ ಸ್ನೇಹಿತ ವಾಸುಗೆ ಸಲ್ಲುತ್ತದೆ. ಬಸ್ ಮೂಲಕ ಮೈಸೂರು ತಲುಪಿದ ನಾವಿಬ್ಬರೂ, ಮೊದಲೇ ಆಯೋಜಿಸಿದಂತೆ, ಒಂದು ಸ್ಕೂಟರ್ ಬಾಡಿಗೆಗೆ ಪಡೆದು, ಪೆಟ್ರೋಲ್ ತುಂಬಿಸಿಕೊಂಡು, ಸುಮಾರು ನಾಲ್ಕು ಗಂಟೆಗಳ ಕಾಲ, ಮೈಸೂರಿನ ರಸ್ತೆಗಳಲ್ಲಿ ಓಡಾಡಿದ್ದು.  


ಮೈಸೂರಿನಲ್ಲೇ ಕೆಲ ಕಾಲ ಇದ್ದ ವಾಸುಗೆ, ಬಹಳ ಜಾಗಗಳು ಸುಪರಿಚಿತ. ಮೊದಲು ಹೋದದ್ದು ವಿ ಬಿ ಬೇಕರಿಗೆ. ಅಲ್ಲಿನ ವಿಶೇಷ ಸಿಹಿಯನ್ನು ತಿಂದು, ಮುಂದೆ  GTR ಎಂದು ಪ್ರಸಿದ್ಧವಾದ ಗಾಯತ್ರಿ ಟಿಫನ್ ರೂಂನಲ್ಲಿ ಉಪ್ಪಿಟ್ಟು, ಮಸಾಲೆ ದೋಸೆಯನ್ನು ತಿಂದು, ಹತ್ತಿರದಲ್ಲೇ ಇದ್ದ ಅಂಗಡಿಯ ವಿಶಿಷ್ಟ ಮೆಂತ್ಯ ಕೊಡುಬಳೆಯನ್ನು ಕೊಂಡುಕೊಂಡಿದ್ದು.

ವಾಸು ಕೆಲಸ ಮಾಡುತ್ತಿದ್ದ ಕಛೇರಿ, ವಾಸವಾಗಿದ್ದ ಮನೆ ಹೀಗೆ ಸಾಕಷ್ಟು ಕಡೆ ಸುಮ್ಮನೆ ಸುತ್ತಾಡಿದ್ದು,... ನಾನು ಸ್ಕೂಟರ್ ತೆಗೆದುಕೊಂಡ ಹೊಸದರಲ್ಲಿ, ಉತ್ಸಾಹದಿಂದ ಗೊತ್ತು ಗುರಿ ಇಲ್ಲದೆ ಸುತ್ತಾಡಿದ ದಿನಗಳನ್ನು ನೆನಪಿಸಿತು.

ನಮ್ಮ ಗುರಿ, ದೀಪಾಲಂಕಾರವನ್ನು ನೋಡುವುದಾಗಿದ್ದರಿಂದ ಅದಕ್ಕೆ ಇನ್ನೂ ಬಹಳ ಸಮಯವಿತ್ತು. 


ಹಾಗಾಗಿ ಕಾಫಿ ಕುಡಿಯಲು ಶ್ರೀರಂಗಂ ಕೆಫೆಗೆ ಹೋದೆವು. ಬಾಗಿಲ ಬಳಿ ಆಗತಾನೆ ತೊಳೆದು, ರಂಗೋಲಿ ಹಾಕಿ, ಅಲ್ಲಿದ್ದ ಶ್ರೀರಂಗಮೂರ್ತಿಗೆ ಪೂಜೆ ಮಾಡುತ್ತಿದ್ದ ಹೆಣ್ಣುಮಗಳನ್ನು ವಿಚಾರಿಸಿದಾಗ, ಇದು ದಸರಾ ಹಬ್ಬದ ವಿಶೇಷವೆಂದು ತಿಳಿಸಿದರು. ಎಲ್ಲಿ ನೋಡಿದರೂ ಹಬ್ಬದ ವಾತಾವರಣ ಸಡಗರ.

ದೊಡ್ಡ ದೊಡ್ಡ ರಸ್ತೆಗಳಲ್ಲಿ ತಿರುಗಾಡುತ್ತಾ ಇದ್ದಾಗ ಕಂಡದ್ದು 




ಇಲ್ಲಿ ಒಂದಷ್ಟು ಅಂಗಡಿಗಳಲ್ಲಿ ಸುತ್ತಾಡಿ, ತ್ರಿವೇಣಿಯವರ ಎರಡು ಕಾದಂಬರಿಗಳನ್ನು ಕೊಂಡಾಯಿತು.



ಕಲಾಮಂದಿರವನ್ನು ಹೊಕ್ಕು, ಅಲ್ಲಿ ನಡೆಯುತ್ತಿದ್ದ ನಾಟಕದ ತಾಲಿಮನ್ನು ದೂರದಿಂದಲೇ ನೋಡಿ, ಕೆಲಕ್ಷಣ ಅಲ್ಲೇ ಕುಳಿತು, 

ಕಿಂದರಿ ಜೋಗಿಯ ದೊಡ್ಡ ಮೂರ್ತಿಯನ್ನು ನೋಡಿ, 



ಪಕ್ಕದಲ್ಲೇ ಇದ್ದ ರಂಗಾಯಣ ದಲ್ಲಿ ನಡೆಯುತ್ತಿದ್ದ 



ನವರಾತ್ರಿ ರಂಗೋತ್ಸವದ ನಾಟಕ ಪ್ರದರ್ಶನದಲ್ಲಿ ( ಹೆಸರೂ ಸಹ ತಿಳಿದುಕೊಳ್ಳಲಾಗದೆ )  ಸಂತೆಯ ದೃಶ್ಯವನ್ನು ಸ್ವಲ್ಪ ಹೊತ್ತು, ನಿಂತೇ ನೋಡಿ, ಅಲ್ಲಿಂದ ಕತ್ತಲಾಯಿತು ಎಂದು ಸರಸರನೇ ಹೊರಟಿದ್ದು.

ಮೈಸೂರು ವಿಶ್ವವಿದ್ಯಾಲಯದ, ದೀಪಾಲಂಕಾರವನ್ನು ನೋಡಿಯಾದಾಗ,



ಸಮಯ 6.30 ಆಗಿತ್ತು, ಹತ್ತಿರದಲ್ಲಿದ್ದ ಪೊಲೀಸರನ್ನು ವಿಚಾರಿಸಲಾಗಿ, ದೀಪಗಳನ್ನು  ಹೊತ್ತಿಸುವುದು  ಏಳು ಗಂಟೆಗೆ ಎಂದು ತಿಳಿದು, 30 ನಿಮಿಷಗಳ ಕಾಲಹರಣ ಮಾಡುವ ಅನಿವಾರ್ಯತೆ ಇತ್ತು. 

ಘೋಡ ಹೈ ಮೈದಾನ್ ಹೈ.. ಎನ್ನುವ ಹಿಂದಿಯ ಹೇಳಿಕೆಯಂತೆ, ನಮ್ಮ ಬಳಿ ಸ್ಕೂಟರಿತ್ತು,  ದೀಪಗಳ ಸರಮಾಲೆ ಇದ್ದ ಮೈಸೂರಿನ ರಸ್ತೆಗಳಿತ್ತು, ಹೊರಟಿತು ನಮ್ಮ ಸವಾರಿ. ಅಲ್ಲಲ್ಲಿ ಕಟ್ಟಡ ಗಳನ್ನು, ದೀಪಗಳಿಂದ ಅಲಂಕರಿಸಿದ್ದನ್ನು ನೋಡುತ್ತಾ, ಸಾಧ್ಯವಾದಷ್ಟು ರಸ್ತೆಗಳಲ್ಲಿ ಓಡಾಡುತ್ತಿದ್ದಾಗ, ಜಗಮಗಿಸಿದ್ದು ರಸ್ತೆಗಳೆಲ್ಲದರ ಅಲಂಕಾರದ ದೀಪಗಳು. ಅದರ ಕೆಲ ಚಿತ್ರಗಳು ಹಾಗೂ ವೀಡಿಯೋಗಳು... ನಿಮಗಾಗಿ 







































Select link below to open video:

https://drive.google.com/file/d/1pDW-HM19ZsbP6LjkSyRZv1vdxBIAzj6N/view?usp=drivesdk


https://drive.google.com/file/d/1EOPBRTcwuLFflDxu8w6dhOiGUw6N9lUU/view?usp=drivesdk


https://drive.google.com/file/d/1F2cfdGpVyKe1__YLPgZ7Bes2lCGeMuMD/view?usp=drivesdk

ಸಾಕಷ್ಟು ರಸ್ತೆಗಳಲ್ಲಿ ಓಡಾಡಿ, ವಿವಿಧ ದೀಪಾಲಂಕಾರಗಳನ್ನು ಕಣ್ತುಂಬಿಕೊಂಡು, ಸಾಕಷ್ಟು  ಫೋಟೋಗಳು, ವೀಡಿಯೋಗಳನ್ನು ಸೆರೆಹಿಡಿದು, ಸುತ್ತಾಟವನ್ನು ಮುಕ್ತಾಯ ಮಾಡಿ, ಸ್ಕೂಟರನ್ನು ಹಿಂತಿರುಗಿಸಿ, ಕಡಲೆಕಾಯಿ ತಿನ್ನುತ್ತಾ ಬಸ್ಟ್ಯಾಂಡಿಗೆ ಬಂದು, ಬಸ್ಸು ಹತ್ತಿ ಹೊರಟಾಗ ರಾತ್ರಿ 8.45.

ಬೆಂಗಳೂರಿನ ಮನೆ ಸೇರಿದಾಗ ರಾತ್ರಿ 11.30.  ಮಧ್ಯಾಹ್ನ 1.30 ಕ್ಕೆ ಮನೆ ಬಿಟ್ಟು  10 ಘಂಟೆಗಳ ಕಾಲ ದಸರಾ ಸಂಭ್ರಮದಲ್ಲಿ ಭಾಗಿಯಾದದ್ದು, 10 ದಿನಗಳ ದಸರಾದ ಸಂಕ್ಷಿಪ್ತ ರೂಪ ಎನ್ನಲೇ?

ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು. ..

ನಮಸ್ಕಾರ....

ಡಿ ಸಿ  ರಂಗನಾಥ ರಾವ್

9741128413


    

Comments

Popular posts from this blog

ಕಣ್ಮರೆಯಾದ ಕೃಪ

ದಾಂಪತ್ಯ - ಸಾಂಗತ್ಯ

ಜೈ ಜೈ ಶ್ರೀ ರಾಮ್