ಮರೆತು ಮನ್ನಿಸು/ ಕ್ಷಮಿಸು

ಮರೆತು ಬಿಡು, ಕ್ಷಮಿಸಿ ಬಿಡು ಅಂತ ನೀವೇನೋ ಹೇಳ್ತೀರಾ.... ಯಾವುದನ್ನು ಮರೆಯಲಿ ಹೇಗೆ ಮರೆಯಲಿ... ಬೆಳಿಗ್ಗೆ ಎದ್ದು ಮುಖ ತೊಳೆದು ಹಣೆಗೆ  ಬೊಟ್ಟು  ಇಡುವಾಗ ಇದು (ಹಣೆಯ ಮೇಲಿನ ಗಾಯಕ್ಕೆ ಹಾಕಿದ ಹೊಲಿಗೆಯ ಗುರುತನ್ನು ತೋರಿಸುತ್ತಾ) ನೆನಪಿಸುತ್ತೆ, ಆ ಮನುಷ್ಯ ನನ್ನ ಜುಟ್ಟು ಹಿಡಿದು ತಲೆಯನ್ನು ಕಂಬಕ್ಕೆ ಘಟ್ಟಿಸಿದ  ದೃಶ್ಯ.  ನುಗ್ಗು ಬಿದ್ದ ಪಾತ್ರೆಗಳನ್ನು ಮುಟ್ಟಿದಾಗ, ನನಗಿಟ್ಟ ಗುರಿ ತಪ್ಪಿ, ಕೆಳಗೆ ಬಿದ್ದ ಘಟನೆಯನ್ನು ಮರೆಯಲೇ, ಮೊದಲ ಬಾರಿ ನಮ್ಮಪ್ಪನ ಮನೆಗೆ ಹೋದಾಗ, ಯಾವುದೋ ಸಣ್ಣ ಕಾರಣಕ್ಕೆ ಜಗಳ ಶುರು ಮಾಡಿ, ಕೆಟ್ಟದಾಗಿ ಮಾತನಾಡಿದ್ದನ್ನು ಮರೆಯಲೇ, ನಂತರ ನಮ್ಮಪ್ಪ ನಮ್ಮ ಮನೆಗೆ ಬಂದೇ ಇಲ್ಲ ಎನ್ನುವ ನೋವನ್ನು ಮರೆಯಲೇ, ಮಳೆ ಹನಿ ಬಿದ್ದಾಗ... ಪುಟ್ಟ ಮಗಳ ಸಮೇತ ಜೋರು ಮಳೆಯಲ್ಲಿ ನನ್ನನ್ನು ಮನೆಯಿಂದ ಹೊರಗಟ್ಟಿದ್ದನ್ನು ಮರೆಯಲೇ, ತವರು ಮನೆಯಲ್ಲಿ ಕೊಟ್ಟಿದ್ದ ಅಷ್ಟಿಷ್ಟು ಚಿನ್ನವನ್ನು, ಯಾಮಾರಿಸಿ, ಮಾರಿಬಂದ ಹಣವನ್ನು ಹಾಳು ಮಾಡಿದ್ದನ್ನು ಮರೆಯಲೇ, ಕುಡಿದು ಬೀದಿಯಲ್ಲಿ ಬಿದ್ದು ನಮ್ಮಗಳ ಮಾನ ಹರಾಜು ಹಾಕಿದ್ದನ್ನು ಮರೆಯಲೇ, ಮೊದಲ ರಾತ್ರಿಯ ಕ್ರೌರ್ಯವನ್ನು ಮರೆಯಲೇ, ದಿನದಿನವೂ ಕೊಟ್ಟ ಮಾನಸಿಕ ಹಿಂಸೆಯನ್ನು ಮರೆಯಲೇ... ಮರೆಯೋದು ಆಗದ ಮಾತು... ಇನ್ನು ಕ್ಷಮಿಸೋದು.. ಆ ಮನುಷ್ಯ ಕ್ಷಮೆಗೆ ಅರ್ಹನೇ ಅಲ್ಲ... ಮಾಡಿದ ಕರ್ಮ ಕಾಲಿಗ್ ಸುತ್ಕೊಂಡು ನರಳ್ತಾ ಇದ್ದಾನೆ... ನಂಗೂ ವಿಧಿ ಇಲ್ಲ...  ಮನಸ್ಸಿಲ್ಲದ ಮನಸ್ಸಿನಿಂದ ಎರಡು ಹೊತ್ತು ಬೇಯಿಸಿ ಹಾಕ್ತಾ ಇದ್ದೀನಿ..  ಅದೂ ನಿಮ್ಮಂತವರು ಹೇಳಿದ ಮಾನವೀಯತೆಯ ಕಾರಣಕ್ಕೆ ಬೆಲೆ ಕೊಟ್ಟು , ಇಲ್ದೆ ಇದ್ರೆ ಎಂದೋ ವಿಷ ಹಾಕಿ ಸಾಯಿಸಿ ಬಿಡುತ್ತಿದ್ದ್ನೆನೋ...

ಜಲಪಾತದಂತೆ ಭೋರ್ಗರೆತ, ಒಂದೇ ಸಮನೆ ಆಡುತ್ತಿದ್ದ ಮಾತುಗಳು... ನಿಂತಿತು. ನೀರವ ಮೌನ. ಮಾತನಾಡಲು ನನಗೆ ಬಾಯೇ ಬರದು. ಆಪ್ತ ಸಮಾಲೋಚನೆಯ ಸಮಯದಲ್ಲಿ ಹೇಳುವ  ಹಳೆಯದನ್ನು ಮರೆತು, ಸಾಧ್ಯವಾದರೆ ಕ್ಷಮಿಸಿ, ಮುಂದೆ ಹೆಜ್ಜೆ ಇಡಬೇಕು... forget and forgive ಎಂಬ ಭಾವದಿಂದ ಹೇಳಿದ ನನ್ನ ಮಾತುಗಳಿಗೆ ಬಂದ ಪ್ರತಿಕ್ರಿಯೆ, ನನ್ನನ್ನು ಮೂಕನನ್ನಾಗಿ ಮಾಡಿತ್ತು. ಆಕೆ ಹೇಳಿದ ಮಾತುಗಳು ಏಕಮುಖವಾದರೂ, ಕಟುವಾದ ಸತ್ಯವಾಗಿತ್ತು.  ಏನೂ ಹೇಳಲು ತೋಚದಾಗಿ, ಒಂದೆರಡು ಮಾತುಗಳನ್ನು ಅವರ ಪರವಾಗಿ ಮಾತನಾಡಿ, ಕಳಿಸಿದ್ದು ಮಾತ್ರ, ನಾನು  ಆಪ್ತ ಸಮಾಲೋಚಕನಾಗಿ ಅಂದು ಮಾಡಲಾಗಿದ್ದು. 

ನಿಜ, ಆ ಹೆಣ್ಣು ಮಗಳು ಹೇಳಿದಂತೆ, ಮರೆಯುವುದು ಅಷ್ಟು ಸುಲಭವಲ್ಲ. ಅದರಲ್ಲೂ ನೋವುಗಳು ದುಃಖದ ಸಂಗತಿಗಳು, ಮತ್ತೆ ಮತ್ತೆ ಕಾಡುತ್ತವೆ.

ಮರೆತೇನೆಂದರೂ ಮರೆಯಲು ಬಿಡದು                     ಬಿಟ್ಟೂ ಬಿಡದೇ  ಕಾಡುವ  ನೆನಪು

ಮರೆಯುವುದು ಸಾಧ್ಯವೇ ಇಲ್ಲವೇನೋ ಎಂದು ನನ್ನ ಅನಿಸಿಕೆ. ಯಾವುದನ್ನು ಮರೆಯಬೇಕು ಎಂದು ಯೋಚಿಸಿದಾಗ, ಮರೆಯಬೇಕಾದ ವಿಷಯವೇ ನಮ್ಮ ಯೋಚನೆಯ ಮೂಲವಸ್ತು ಅಲ್ಲವೇ? ಹಾಗಾಗಿ ಮರೆಯೋದು  ಅನ್ನುವುದಕ್ಕಿಂತ,  ನೆನಪುಗಳು ಬಂದು ಕಾಡಲು ಬಿಡದೆ, ಅವನ್ನು ನಿರ್ಲಕ್ಷಿಸುವುದೇ ಸೂಕ್ತ. ನೆನಪುಗಳು ಪಕ್ಷಿಗಳಂತೆ ಬಂದು ಕೂತು ಹೋಗಬೇಕೆ ಹೊರತು, ಅಲ್ಲಿಯೇ ಗೂಡು ಕಟ್ಟಿ ವಾಸ ಮಾಡಲು ಬಿಡಬಾರದು.

ಕಹಿ ನೆನಪುಗಳು ಕಂಪ್ಯೂಟರ್ ನ ಯಾವುದೋ ಮೂಲೆಯಲ್ಲಿ ಅಡಗಿ ಕುಳಿತಿರುವ ವೈರಸ್ ನಂತೆ. ಯಾವಾಗ ಅನಿರೀಕ್ಷಿತವಾಗಿ ಹೊರಗೆ ಬಂದು ಕಾಟ ಕೊಡುವುದೋ ತಿಳಿಯದು, ಅದನ್ನು ಬಂಧಿಸಿ ಹಿಂದಕ್ಕೆ ತಳ್ಳುವ ಛಾತಿ ಕಲಿಯಬೇಕಷ್ಟೇ.

ಇನ್ನು ಕ್ಷಮೆಯ ವಿಚಾರಕ್ಕೆ ಬಂದರೆ, ತಪ್ಪಾದಾಗ ಕ್ಷಮೆ...  ಆದರೆ
ತಪ್ಪೂ ಮಾಡದವ್ರು ಯಾರವ್ರೇ, ತಪ್ಪೇ ಮಾಡದವರು ಎಲ್ಲವ್ರೇ ಎಂಬ ಹಾಡು ...
ತಪ್ಪು ಒಂದಿಲ್ಲೊಂದು ಸಮಯದಲ್ಲಿ ಎಲ್ಲರಿಂದಲೂ ಆಗುವಂತದ್ದು, ಎಂಬುದನ್ನು ಧೃಢೀಕರಿಸುತ್ತದೆ. ಕೆಲವನ್ನು ಸುಲಭವಾಗಿ ಕ್ಷಮಿಸಬಹುದು ಅಷ್ಟೇ.

ಒಂದು ತಪ್ಪಿಗೆ ಒಂದು ಶಿಕ್ಷೆ / ಕ್ಷಮೆ ಎನ್ನುವುದು ಲೋಕಾರೂಢಿ. ಚಿಕ್ಕಂದಿನಲ್ಲಿ, ಹಿರಿಯರ ದೃಷ್ಟಿಯಿಂದ ತಪ್ಪುಗಳು ಎಂದು ಬಿಂಬಿಸುತ್ತಿದ್ದ, ಸಾಕಷ್ಟು ಚಟುವಟಿಕೆಗಳನ್ನು / ಕೆಲಸಗಳನ್ನು ನಾವು ದಿನೇ ದಿನೇ ಮಾಡುತ್ತಿದ್ದದ್ದು ನೆನಪಿದೆ. ಅದಕ್ಕೆ ಬೈಗುಳಗಳು / ಶಿಕ್ಷೆಗಳು ಆಗಿಂದಾಗಲೇ ನಡೆಯುತ್ತಿದ್ದವು. ಶಿಕ್ಷೆಯಾದ ನಂತರ, ಮುಂದಿನ ತಪ್ಪನ್ನು ಮಾಡಲು ನಮಗೆ ರಹದಾರಿ ಸಿಕ್ಕಂತೆಯೇ.
ಎಷ್ಟು ಬೈದರೂ, ಅವನಿಗೆ ಲೆಕ್ಕಕ್ಕೆ ಇಲ್ಲ, ನನಗಲ್ಲ ಅಂತಹ ಒದರಿಕೊಂಡು ಹೋಗ್ತಾನೆ ಎನ್ನುವುದು ಒಂದು ಬೈಗುಳ.
ತಪ್ಪು ಮಾಡಿ, ಅಪರಾಧಿ ಭಾವ ಕಾಡಿದಾಗ, ದೇವರಿಗೆ ತಪ್ಪು ಕಾಣಿಕೆ ಹಾಕಿ, ಕ್ಷಮಿಸು ದೇವರೇ ಎಂದು ಕೇಳುವ ಜನರು ಉಂಟು.

ಆಕಸ್ಮಿಕವಾಗಿ ನಮ್ಮ ಕಾಲು, ಸರಸ್ವತಿ ಎಂದು ಪೂಜಿಸುವ ಪುಸ್ತಕ ಇನ್ನಿತರ ವಸ್ತುಗಳಿಗೆ ತಗುಲಿದಾಗ, ಅದನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವುದು, ಹಾಗೆಯೇ ಯಾರಿಗಾದರೂ ನಮ್ಮ ಕಾಲು ತಗಲಿದಾಗ, ಅವರನ್ನು ಮುಟ್ಟಿ, ಕ್ಷಮಿಸಿ / ಸಾರಿ ಎಂದು ಹೇಳಿ ನಮಸ್ಕಾರ ಮಾಡುವುದು ನಮ್ಮ ಬಹಳ ಜನರಿಗೆ ಮೈಗೂಡಿರುವ ಒಂದು ಶಿಸ್ತು. ಸಹಜವಾಗಿ ಅಂತಹ ಸಮಯದಲ್ಲಿ ಬರುವ ಉತ್ತರ ಪರವಾಗಿಲ್ಲ ಎಂದು ಅಥವಾ ಅವರನ್ನು ಮುಟ್ಟಿ ನಮಸ್ಕರಿಸುವ ಒಂದು ಶಿಷ್ಟಾಚಾರ. ಕ್ಷಮಿಸುತ್ತಾರೆ ಎಂದು ಖಚಿತ ನಂಬಿಕೆ. 
ಇಂಥಹುದೇ ಒಂದು ಸಂದರ್ಭದಲ್ಲಿ ನನ್ನ ಪುಟ್ಟ ಮೊಮ್ಮಗಳು ಹೊಸದಾಗಿ ಕಲಿತ ಈ ಸಂಸ್ಕಾರವನ್ನು, ನನ್ನ ಮೇಲೆ ಪ್ರಯೋಗಿಸಿದಾಗ, ಆದ ಸಂತೋಷ ಹೇಳತೀರದು. ಅವಳನ್ನು ಅಪ್ಪಿ ಮುದ್ದಾಡಿ ಹಿಗ್ಗಿದ್ದು ಸವಿ ನೆನಪು. 

ತಪ್ಪ ಮನ್ನಿಸೌ ತಾಯೇ ಮಹಾ ಮಾಯೇ...

ಕ್ಷಂತವ್ಯೋಮೇಪರಾಧ ಶಿವ ಶಿವ ಶಂಭೋ ಶ್ರೀ ಮಹಾದೇವ ಶಂಭೋ...  
ಇವು ದೇವರುಗಳನ್ನು ಕ್ಷಮಿಸೆಂದು ಕೇಳುವ ಪರಿ.   ಪ್ರತಿದಿನ ದೇವರ ಮುಂದೆ ನಮ್ಮಪ್ಪ ಗಟ್ಟಿಯಾಗಿ ಹೇಳುತ್ತಿದ್ದ ಕ್ಷಮಾಪಣಾ ಸ್ತೋತ್ರದ ಒಂದು ಭಾಗ.. ಈಗಲೂ ಕಿವಿಯಲ್ಲಿ ರಿಂಗಣಿಸುತ್ತದೆ.
ಇದರ ಇನ್ನೊಂದು ಮುಖವೇ, 
ಕಾಯೇನ ವಾಚಾ ಮನಸೇಂದ್ರಿಯೈ ವಾ ಬುಧ್ಯಾತ್ಮನಾ ವಾ ಪ್ರಕೃತೀ ಸ್ವಭಾವಾತ್  ಕರೋಮಿಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿ ಸಮರ್ಪಯಾಮಿ..   

ಶರೀರ, ಮಾತು, ಮನಸ್ಸು, ಬುದ್ಧಿ ಹಾಗೂ ಪ್ರಕೃತಿಯ ಸ್ವಭಾವದಿಂದ ಮಾಡಿದ ಎಲ್ಲವನ್ನು, ತಪ್ಪೇ ಇರಲಿ, ಒಪ್ಪೇ ಇರಲಿ, ದೇವರಿಗೆ ಅರ್ಪಿಸಿ ನೆಮ್ಮದಿಯಾಗುವುದು, ನಮ್ಮ ಪೂರ್ವಜರು ಕಂಡುಕೊಂಡ ಸುಲಭದ ಹಾದಿ.
  
ಕ್ಷಮಿಸುವುದು ಬಹು ದೊಡ್ಡ ಗುಣ. ಅದು ವಿಶಾಲ ಹೃದಯ ಇರುವವರ, ಶೂರರ, ಕರುಣಾಮಯಿಗಳಿಂದ ಮಾತ್ರ ಸಾಧ್ಯ. ಆ ಗುಣ ಇಲ್ಲದಿದ್ದರೆ, ಅದು ದ್ವೇಷ,  ಮುಯ್ಯಿಗೆ ಮುಯ್ಯಿ, ಹಿಂಸಾಚಾರಕ್ಕೆ  ಎಡೆ ಮಾಡಿಕೊಡುತ್ತದೆ.

ಕ್ಷಮಾದಾನ ಎನ್ನುವುದು ಭಾರತದ ರಾಷ್ಟ್ರಪತಿಗಳಿಗೆ ಇರುವ ಒಂದು ವಿಶೇಷ ಅಧಿಕಾರ.  ಸರ್ವೋಚ್ಚ ನ್ಯಾಯಾಲಯದ ಗಲ್ಲು ಶಿಕ್ಷೆಯ ಆದೇಶದ ನಂತರವೂ, ಶಿಕ್ಷೆಗೆ ಒಳಗಾದ ವ್ಯಕ್ತಿ ರಾಷ್ಟ್ರಪತಿಗಳಿಗೆ ಕ್ಷಮಾದಾನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು. 
ಶಿಶುಪಾಲನ 100 ತಪ್ಪುಗಳನ್ನು ಕ್ಷಮಿಸುವುದಾಗಿ ಮಾತು ಕೊಟ್ಟಿದ್ದ ಕೃಷ್ಣ, 101 ನೇ ತಪ್ಪಿಗೆ ಅವನಿಗೆ ಶಿಕ್ಷೆ ಕೊಟ್ಟಿದ್ದು ಮಹಾಭಾರತದ ಕಥೆಯ ಭಾಗ
ಹಿಂದಿಯಲ್ಲಿ ಬಾರಾ ಖೂನ್ ಮಾಫ್ ( ಹನ್ನೆರಡು ಕೋಲೆಗಳಿಗೆ ಕ್ಷಮೆ) ಎಂಬ ನುಡಿಗಟ್ಟನ್ನು, ಬಹಳ ತಪ್ಪುಗಳನ್ನು ಕ್ಷಮಿಸುವಾಗ ಉಪಯೋಗಿಸಲಾಗುತ್ತದೆ.

ಇಂಥ ತಪ್ಪು ಇನ್ನು ಎಂದೆಂದಿಗೂ ಮಾಡಲ್ಲ ಅಂತ ನನ್ನಕ್ಕ ಗಿರಿಜಾಂಬಂಗೆ ಹೇಳುತ್ತಾ ಕ್ಷಮೆ ಯಾಚಿಸುತ್ತಿದ್ದವನು ನಾನು. ಅದು ನಾನು ಹೈಸ್ಕೂಲ್ನಲ್ಲಿ ಓದುತ್ತಿದ್ದ ಕಾಲ. ವಯೋ ಸಹಜ ಚೇಷ್ಟೆ / ತೀಟೆಗಳ ಮೂಲಕ ನಾನು ಕೊಡುತ್ತಿದ್ದ ಕಾಟವನ್ನು ತಾಳಲಾರದೆ ನನಗೆ ಹೊಡೆಯಲು ಬಂದಾಗ, ಸಾಧ್ಯವಾದರೆ ಎರಡು ಕೈಯನ್ನು ಭದ್ರವಾಗಿ ಹಿಡಿದುಕೊಂಡು ಹೊಡೆಯಲಾಗದಂತೆ ಮಾಡುತ್ತಿದ್ದೆ. ಇಲ್ಲವಾದರೆ ಮನೆಯಿಂದ ಹೊರಗೆ ಓಡುತ್ತಿದ್ದೆ. ರಾತ್ರಿ ಮನೆಗೆ ಬರ್ತೀಯಲ್ಲ ಬಾ ಅವಾಗಿದೆ ನಿಂಗೆ... ಅಂತ ಬೈದಾಗ ನನಗೆ ಭಯ ಆಗುತ್ತಿತ್ತು. ಅದರಲ್ಲೂ ಅವಳೇ ಊಟ ಕೊಡುತ್ತಿದ್ದ ಕಾರಣ, ಎಲ್ಲಿ ಊಟ ಸಿಗದೇ ಹೋದಿತೋ ಎಂಬ ಭಯ. ಹೇಗೋ ಪೂಸಿ ಮಾಡಿ, ಅಕ್ಕನ ಎರಡು ಕಾಲು ಭದ್ರವಾಗಿ ಹಿಡಿದು, ಅವಳು ಅಲ್ಲಾಡದ ಹಾಗೆ ಮಾಡಿ ಹೇಳುವುದೇ ಇಂಥ ತಪ್ಪು ಇನ್ನು ಎಂದೆಂದಿಗೂ ಮಾಡಲ್ಲ ಅಂತ. ಆದರೆ ಅದೇ ಚೇಷ್ಟೆಗಳು / ತೀಟೆಗಳು ನಿಂತೇನು ಹೋಗಲಿಲ್ಲ.  ಪಾಪ ಅವಳು ತಾನೇ ಇನ್ನೆಷ್ಟು ಸಲ ಕ್ಷಮಿಸಿಯಾಳು.

ಇಂಥ ತಪ್ಪು ಅಂದರೆ... ಆ ತಾರೀಕು ಮತ್ತು ಆ ಸಮಯದಲ್ಲಿ ಮಾಡಿದ ತಪ್ಪನ್ನು, ಮತ್ತೆ ಆ ಸಮಯದಲ್ಲಿ ಮಾಡುವುದಿಲ್ಲ ಎಂಬ ಸಮಜಾಯಿಷಿ ಕೊಟ್ಟಿದ್ದನ್ನು ನೆನೆಸಿಕೊಂಡು ಈಗಲೂ ನಗುವುದುಂಟು. 
ಕ್ಷಮೆಯಾ ಧರಿತ್ರಿ ... ಭೂಮಿತಾಯಿಗೆ (ಪ್ರಕೃತಿ) ಅತಿ ಹೆಚ್ಚು ತಾಳ್ಮೆ ಮತ್ತು ಕ್ಷಮಿಸುವ ಗುಣ ಇದೆ ಎಂಬುದು ಪ್ರತೀತಿ.  ಮನುಷ್ಯನ ಎಲ್ಲ ತರಹದ ದೌರ್ಜನ್ಯವನ್ನು ತಾಳ್ಮೆಯಿಂದ ಸಹಿಸಿದವಳು, ಹಾಗೇ ತನ್ನ ಕೊಡುಗೆಯನ್ನು ಸತತವಾಗಿ ಕೊಟ್ಟವಳು. ಇಷ್ಟಿದ್ದರೂ ತನ್ನ ಅಟಾಟೋಪವನ್ನು ನಿಲ್ಲಿಸದ ಮಾನವ ಕುಲದ ಮೇಲೆ, ಕ್ಷಣಿಕ ಕೋಪ ಬಂದಾಗ ಆಗುವ ದುಷ್ಪರಿಣಾಮವೇ ಅನಾವೃಷ್ಟಿ, ಅತಿವೃಷ್ಟಿ, ಭೂಕಂಪ, ಪ್ರವಾಹ ಇತ್ಯಾದಿ ಘಟನೆಗಳು. 

ಹಿಂದೆ  ಅಪಾರ ತಪಸ್ಸುಗಳನ್ನು ಮಾಡಿ, ಜ್ಞಾನ ಪಡೆದ ಋಷಿ ಮುನಿಗಳು, ತಮಗಾದ ಅನಾದರ ಅಥವಾ ತಪ್ಪು ಮಾಡಿದವರಿಗೆ ಶಾಪ ಕೊಟ್ಟು ಶಿಕ್ಷಿಸುತ್ತಿದ್ದನ್ನು ನಾವು ಓದಿದ್ದೇವೆ. ಯಾವಾಗಲೂ ನನಗೊಂದು ಪ್ರಶ್ನೆ ಕಾಡುತ್ತದೆ.. ಅಷ್ಟು ಜ್ಞಾನ ಪಡೆದವರಿಗೆ ಸಹನೆ ಏಕೆ ಅಷ್ಟು ಕಮ್ಮಿ. ಕೋಪ ಮೂಗಿನ ಮೇಲೆ ಇದ್ದು, ಶಾಪ ಕೊಡುವಷ್ಟು ಕಟುಕತನವೇ?  
ದೂರ್ವಾಸ ಮುನಿಗಳು, ಕೋಪಕ್ಕೆ ಹೆಸರುವಾಸಿ. ಇವರು ಶಕುಂತಲೆಗೆ ಕೊಟ್ಟ ಶಾಪ ಒಂದು ದೊಡ್ಡ ಉದಾಹರಣೆ.
ದೇವರು ದಯಾಮಯ.. ಶಾಪ ವಿಮೋಚನೆ ಎಂಬ ಕ್ಷಮೆಯ ದಾರಿಯನ್ನು ತೋರಿಸಿದ್ದಾನೆ, ಹಾಗಾಗಿ ಎಲ್ಲವೂ ಸುಖಾಂತ್ಯ ವಾಗುವ ಸಂದರ್ಭಗಳು ಹೆಚ್ಚು.
ಕ್ರಿಶ್ಚಿಯನ್ ಸಮುದಾಯದಲ್ಲಿ confession ಎಂಬ ಒಂದು ಪ್ರಕ್ರಿಯೆ ಉಂಟು. ಇಲ್ಲಿ ತಪ್ಪು ಮಾಡಿದ ವ್ಯಕ್ತಿ, ಪಶ್ಚಾತಾಪ ಪಟ್ಟು ಪಾದ್ರಿಯಲ್ಲಿ ತನ್ನ ತಪ್ಪನ್ನು ಹೇಳಿಕೊಂಡು ಕ್ಷಮೆ ಯಾಚಿಸುವುದು. ವಿಶೇಷ ಎಂದರೆ, ತಪ್ಪಿತಸ್ಥನ ಗುರುತೂ ಸಹ ಪಾದ್ರಿಗೆ ಸಿಗದಂತೆ ಇರುವ ವ್ಯವಸ್ಥೆ.

ಒಂದಿಷ್ಟು ಕೊಸರು...




ರಾಮಣ್ಣನವರು ಇತ್ತೀಚೆಗೆ ಪರಿಚಯವಾದ ಹಿರಿಯರು. ಗಿರಿನಗರದ Auden public ಶಾಲೆಗಳ ಸಂಸ್ಥಾಪಕರು. ನೆನ್ನೆ ಅವರ ಶಾಲೆಯ ಆವರಣದಲ್ಲಿ ಅವರ ಸಹಸ್ರ ಚಂದ್ರದರ್ಶನ (81 ವರ್ಷವನ್ನು ಪೂರೈಸಿದ ಸಂದರ್ಭ) ಕಾರ್ಯಕ್ರಮದ ಪ್ರಯುಕ್ತ ನಡೆದ ರುದ್ರಾಭಿಷೇಕ, ಹೋಮಹವನದಲ್ಲಿ ಭಾಗವಹಿಸಿದೆ. ಅವರ ಶಾಲೆಯನ್ನು ಗಮನಿಸಿದಾಗ ಅದನ್ನು ಬೆಳೆಸಲು ಅವರು ಹಾಕಿರಬಹುದಾದ ಶ್ರಮದ ಅಂದಾಜಾಯಿತು. 
ಬೆಳಗಿನ ವಾಕಿಂಗ್ ಸಮಯದಲ್ಲಿ ಲೋಕಾರೂಢಿಯಾಗಿ ಮಾತನಾಡುವಾಗ, ಅವರ ಚಿಕ್ಕಂದಿನ ಕಷ್ಟದ ದಿನಗಳ ಬಗ್ಗೆ ತಿಳಿಯಿತು. ಊಟಕ್ಕೂ ಕಷ್ಟ ಇದ್ದ ಕಾಲ, ಓದು ಮುಂದುವರಿಸಲು, ಬೇರೆ ಬೇರೆ ಕೆಲಸಗಳನ್ನು ಮಾಡಿ, ಜೀವನದ ಸವಾಲುಗಳನ್ನು ಮೆಟ್ಟಿ, ಕುಲವೃತ್ತಿಯಾದ ಪೌರೋಹಿತ್ಯವನ್ನು ಬಿಟ್ಟು,  ಹೊಸದೇ ದಾರಿಯನ್ನು ಕಂಡು, ಶಾಲೆಯನ್ನು ಕಟ್ಟುವ ತಮ್ಮ ಗುರಿಯನ್ನು ಸಾಧಿಸಿದ ಧೀರ ಎನ್ನಲೇ ?  ರಾಮಣ್ಣ ದಂಪತಿಗಳ ಮುಂದಿನ ಜೀವನ ಸುಖ ಸಂತೋಷ ನೆಮ್ಮದಿಯಿಂದ ಕೂಡಿರಲೆಂದು ದೇವರಲ್ಲಿ ಪ್ರಾರ್ಥನೆ.

ಇನ್ನೂ ಬರಹ ಮುಂದುವರಿಸಿದರೆ, ನಿಮಗೆ ಕೋಪ ಬಂದು ಶಾಪಕೊಟ್ಟರೆ ಎಂಬ ಭಯ... 
ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಂಡು, ಕ್ಷಮಿಸಿಬಿಡಿ ಎಂದು ಅರಿಕೆ ಮಾಡುತ್ತಾ...  ನಮಸ್ಕಾರ.


ಡಿ ಸಿ  ರಂಗನಾಥ ರಾವ್
9741128413




    




















Comments

Popular posts from this blog

ಕಣ್ಮರೆಯಾದ ಕೃಪ

ದಾಂಪತ್ಯ - ಸಾಂಗತ್ಯ

ಜೈ ಜೈ ಶ್ರೀ ರಾಮ್