ಮಾತು- ಅರ್ಥ- ಅರ್ಥೈಸು




















" ನೀನು ಯಾರ್ ಮಾತೂ ಕೇಳಬೇಡ... ಸುಮ್ನೆ ಅದನ್ನು ಮಾರಿ ಕೈ ತೊಳ್ಕೊ..." ವಾಕಿಂಗ್ ಮಾಡುತ್ತಿದ್ದಾಗ ಕಿವಿಗೆ ಬಿದ್ದ ಮಾತು. ಮಧ್ಯ ವಯಸ್ಕ ಗಂಡಸು ತನ್ನ ಸ್ನೇಹಿತನಿಗೆ ಹೇಳುತ್ತಿದ್ದ ಮಾತು.  ನನ್ನ ತಲೆಗೆ ತಕ್ಷಣ ಹೊಳೆದದ್ದು.. ಯಾರ ಮಾತೂ ಕೇಳಬೇಡ .... ಅಂದಾಗ ಈತ ಹೇಳಿದ ಮಾತಿಗೂ ಅನ್ವಯ ಆಗುತ್ತದಲ್ಲವೇ? 
ಇಲ್ಲಿ ಯಾರ ಮಾತು ಕೇಳಬೇಡ ಎಂದಾಗ.. ನಾನು ಹೇಳುವುದನ್ನು ಕೇಳು, ನನ್ನ ಮಾತು ಕೇಳು ಎಂಬುವುದು ಅರ್ಥಮಾಡಿಕೊಳ್ಳಬೇಕಾದ್ದು.
ಆಡೋ ಮಾತಿಗೆ  ಒಂದು ಅರ್ಥ ಬೇಡ್ವೇನಯ್ಯ? ಎನ್ನುವುದು ಒಂದು ಚಿತ್ರದಲ್ಲಿನ (ಹೆಸರು ನೆನಪಿಲ್ಲ) ನನಗೆ ಇಷ್ಟವಾದ ಸಂಭಾಷಣೆ. ಸಾಮಾನ್ಯವಾಗಿ ಆಡುವ ಮಾತುಗಳು, ಅವುಗಳ ನೇರ ಭಾವ ಹಾಗೂ ಅರ್ಥವನ್ನು ಧ್ವನಿಸುತ್ತವೆ. ಕೆಲವು ಸಲ ಆಡುವ ಮಾತುಗಳಿಗೆ, ಇರುವ ಅರ್ಥ, ಭಾವ ಅದನ್ನು ಅರ್ಥೈಸುವವರ ( ವಿವರಿಸುವವರ) ದೃಷ್ಟಿಯ ನೇರಕ್ಕೆ ಇರುತ್ತದೆ. ಬರೀ ಪದಗಳ ಅರ್ಥವನ್ನು ಜೋಡಿಸಿದರೆ ಅದು ಅಪಾರ್ಥವಾಗುವ / ಅನರ್ಥವಾಗುವ ಸಂಭವವೇ ಹೆಚ್ಚು.

ಪ್ರಾಯಶಃ ಮೊದಲ ದುಭಾಷಿ, ಮಾತುಗಳನ್ನು   ಅರ್ಥೈಸಿದವಳು ಅಮ್ಮ...ತನ್ನ ಮಗುವಿನ ತೊದಲು ಮಾತುಗಳ ಅರ್ಥವನ್ನು ಬೇರೆಯವರಿಗೆ ತಿಳಿ ಹೇಳುವಾಗ.

ಇಬ್ಬರು ಬೇರೆ ಬೇರೆ ಭಾಷೆ ಮಾತನಾಡುವವರ, ಮಾತುಗಳನ್ನು  ಆಗಿಂದಾಗಲೇ ಭಾಷಾಂತರ ಮಾಡಿ ತಿಳಿಸುವವರನ್ನು ದುಭಾಷಿಗಳು / interpretors ಎಂದು ಕರೆಯುತ್ತಾರೆ. ವಿಶ್ವದ ಪ್ರಮುಖ ರಾಜಕಾರಣಿಗಳು ಮಾತನಾಡುವಾಗ ಇಂಥ ದುಭಾಷಿಗಳನ್ನು ಉಪಯೋಗಿಸುತ್ತಾರೆ. ಆ ಮಟ್ಟದ ಮಾತುಕತೆಗಳ ಯಶಸ್ಸು, ಸಂಪೂರ್ಣವಾಗಿ ಈ ದುಭಾಷಿಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ.

ಈಗಿನ ಕೃತಕ ಬುದ್ದಿಮತ್ತೆಯ ( AI) ಯುಗದಲ್ಲಿ ದುಭಾಷಿಗಳ ಕೆಲಸವನ್ನೂ ಮೆಷಿನ್ ಮಾಡುತ್ತಿವೆ. ಒಂದು ಆಶಾದಾಯಕ ಅಂಶವೆಂದರೆ, ಇವು ಪದಗಳ ಅರ್ಥವನ್ನು ಭಾಷಾಂತರಿಸ ಬಹುದೇ ವಿನಃ, ಅದರ ಹಿಂದಿನ ಭಾವವನ್ನು ಗುರುತಿಸಲಾಗದು. ಹಾಗಾಗಿ  ಭಾವನಾತ್ಮಕ ಅಂಶಗಳಿಗೆ ಮಾನವ ಬುಧ್ಧಿಮತ್ತೆ ಅನಿವಾರ್ಯ. 

ಮಾತು ಮುತ್ತು, ನುಡಿದರೆ ಮುತ್ತಿನ ಹಾರದಂತಿರಬೇಕು, ಮಾತು ಮನೆ ಕೆಡಿಸಿತು, ಮಾತಿದ್ದವ ಬರಗಾಲದಲ್ಲಿ ಬದುಕಿದ, ಮಾತು ಬಲ್ಲವನಿಗೆ ಜಗಳವಿಲ್ಲ ಹೀಗೆ ಮತ್ತೆ ಮತ್ತೆ ಮಾತನಾಡಿದ್ದು ಚರ್ವಿತ ಚರ್ವಣ. 

ಕೆಲವು ದಿನಗಳ ಹಿಂದೆ, ಒಂದು ದಂಪತಿ ಜೋಡಿ, ಯಾವುದೋ ಭಾಷೆಯಲ್ಲಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಮಧ್ಯದಲ್ಲಿ " ನಾನ್ ನಾಳೆಯಿಂದ ಬರಲ್ಲ.. ನಿಮ್ಮಿಷ್ಟ ಏನಾದ್ರೂ ಮಾಡಿ" ಅಂತ ಕನ್ನಡದಲ್ಲಿ ಹೇಳಿದರು. ಕುತೂಹಲದಿಂದ ಅವರನ್ನು ವಿಚಾರಿಸಿದೆ. ಅವರು ಮಾತಾಡುತ್ತಿದ್ದದ್ದು  ತಮಿಳಿನ ಒಂದು ರೂಪ, ತಿಗಳರು ಮಾತನಾಡುವ ಭಾಷೆ. ಕೆಲಸದವರು ಹೇಳಿದ್ದನ್ನು ಅವರು ಹೇಳಿದಂತೆ ಹೇಳಿದ್ದು.
ಚಿಕ್ಕಪಳ್ಳಾಪುರದಲ್ಲಿ, ನನ್ನ ಸೋದರ ಮಾವನ ಬಳಿ ಕೆಲಸ ಮಾಡುತ್ತಿದ್ದ, ಉರ್ದು ಭಾಷೆ ಮನೆ ಮಾತಾಗಿದ್ದ ಕೆಲವು ಹುಡುಗರು... ಬೇರೆಯವರೊಡನೆ ಮಾತನಾಡುವಾಗ ಉರ್ದು ಮಿಶ್ರಿತ ಕನ್ನಡ ಉಪಯೋಗಿಸುತ್ತಿದ್ದದ್ದು. 

" ಯಜಮಾನ್ ಬೋಲಾ ಹೈ... ಆ ಸತ್ತಾರ್ ಕೆಲಸಕ್ಕೆ ಬರ್ತಾನ ಇಲ್ವಾ ಕೇಳ್ಕೊಂಬಾ ಕರ್ಕೋ..." ಅಂತ ಹೇಳಿದೆ, ಅದಕ್ಕೆ ಅವನು "ದೋ ದಿನ್ ಚೋಡ್ಕೆ ಆತು"  ಹೇಳ್ದ ಸಾಮಿ.  ನಿಮಗೆ ಭಾವ ಅರ್ಥ ಆಯ್ತಲ್ಲ, ಅಷ್ಟು ಸಾಕು.

ಆಧುನಿಕ ನಾಟಕಗಳ ಪಿತಾಮಹ ಎಂದೇ ಪ್ರಸಿದ್ಧರಾದ ಟಿಪಿ ಕೈಲಾಸಂ ಅವರು, ಅವರ ನಾಟಕಗಳಲ್ಲಿ ಇಂಗ್ಲೀಷ್, ಉರ್ದು, ತಮಿಳು   ಮಿಶ್ರಿತ ಕನ್ನಡವನ್ನು ಧಾರಾಳವಾಗಿ ಉಪಯೋಗಿಸಿದ್ದಾರೆ. ಮಾತಿನ ಅರ್ಥ ಸುಲಭವಾಗಿ ಆಗುವ ಹಾಗೆ.
ಎಲ್ಲ ರಾಜ್ಯಗಳ ಗಡಿನಾಡುಗಳಲ್ಲಿ, ಇಂತಹ ಮಿಶ್ರ ಭಾಷೆಯ ಮಾತುಗಳನ್ನು ಕೇಳಬಹುದು.
ಇಂಗ್ಲಿಷ್ ನಲ್ಲಿ ಮಾತನಾಡಬೇಕಾದ ಅನಿವಾರ್ಯ ಬಂದಾಗ, ಕನ್ನಡದಲ್ಲಿ ಚಿಂತನೆ ಮಾಡಿ ಅದನ್ನು ಇಂಗ್ಲೀಷ್ ನಲ್ಲಿ ಹೇಳುವ ಪರಿಪಾಠ ಒಂದು ಇದೆ. ಅಂತಹ ಸಮಯದಲ್ಲಿ, ಪದ ಪ್ರಯೋಗಗಳು, ವ್ಯಾಕರಣಗಳು ಬುಡಮೇಲಾಗುವುದುಂಟು. ಇಂದಿಗೂ ನಗೆ ತರಿಸುವ,  ಅಂತಹ ಒಂದು ಪ್ರಸಂಗ, ನಾನು ಶಹಾಬಾದಿನಲ್ಲಿದ್ದಾಗ ಕೇಳಿದ್ದು.  ಇದನ್ನು ರಮೇಶ್ ಕುಮಾರ್ ಎಂಬ ನನ್ನ ಸ್ನೇಹಿತನನ್ನು ತಮಾಷೆಯಾಗಿ ಛೇಡಿಸುವ ಸಮಯದಲ್ಲಿ ಹೇಳಿದವರು ಲಕ್ಷ್ಮಣ ಶಾಸ್ತ್ರಿಗಳು.  ಇದನ್ನು ಅದೆಷ್ಟು ಬಾರಿ ನೆನೆಸಿಕೊಂಡು ನಕ್ಕಿದ್ದೇನೋ, ಇಂದಿಗೂ ನಗೆ ತರಿಸುವ ಈ ಇಂಗ್ಲಿಷ್ ವಾಕ್ಯ, ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.  

ಮೊದಲು ನಡೆದ ಸಂಭಾಷಣೆ: 
" Why are you doing this drawing,  I told you to do the other one..." ಎಂದು ರಮೇಶ್ ಕುಮಾರ್ ನನ್ನು ಕೇಳಿದವರು, ಕೆ ಪಿ ಬ್ಯಾನರ್ಜಿ  ಎಂಬ ಹಿರಿಯ ಅಧಿಕಾರಿ. ಅದಕ್ಕೆ ರಮೇಶ್ ಕುಮಾರ್ ಕೊಟ್ಟ ಉತ್ತರ..

" I told Patekar, but Patekar told that Yoneda told that Phukwathari told that you have told me to do this drawing"
ಈ ಉತ್ತರದಿಂದ ಗೊಂದಲಕ್ಕೊಳಗಾದ ಬ್ಯಾನರ್ಜಿಯವರು.....   I told, you told, what told..... ok continue ಎಂದು ಹೇಳಿ ಹೊರಟಿದ್ದು.

ಈಗ ರಮೇಶ್ ಕುಮಾರ್ ಇಂಗ್ಲಿಷಿನಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಅರ್ಥೈಸುವ ಜವಾಬ್ದಾರಿ ನನ್ನದು...
ಪಟೇಕರ್, ಯೊನೆಡಾ, ಫುಕ್ವಾತಾರಿ ಇವು ವ್ಯಕ್ತಿಗಳ ಹೆಸರುಗಳು. ಕೊನೆಯ ಇಬ್ಬರು ಜಪಾನ್ ದೇಶದಿಂದ ಬಂದವರು.
" ನಾನು ಪಟೇಕರ್ ಗೆ ಹೇಳಿದೆ (ಬ್ಯಾನರ್ಜಿಯವರು ಹೇಳಿದ ಡ್ರಾಯಿಂಗ್ ಮಾಡಬೇಕು ಎಂದು ). ಆದರೆ ಪಟೇಕರ್ ಹೇಳಿದರು... ಈ ಡ್ರಾಯಿಂಗ್ ನನ್ನಿಂದ ಮಾಡಿಸಲು ನೀವು  ಫುಕ್ವಾತಾರಿಗೆ ಹೇಳಿ, ಅವರು ಅದನ್ನು ಯೊನೆಡಾಗೆ ಹೇಳಿ,   ಯೊನೆಡಾ  ಪಟೇಕರ್ ಗೆ ಹೇಳಿದ್ದು...( ಹಾಗಾಗಿ ಇದನ್ನು ಮಾಡುತ್ತಿದ್ದೇನೆ).

ಇನ್ನೊಂದು ಕನ್ನಡದಲ್ಲಿ ಯೋಚಿಸಿ ಇಂಗ್ಲಿಷ್ ನಲ್ಲಿ ಒಬ್ಬ ಹುಡುಗ ಹೇಳಿದ ವಾಕ್ಯ. ಇದನ್ನು ನಾನು ಅರ್ಥೈಸುವುದಿಲ್ಲ. ಅರ್ಥೈಸುವ ಕೆಲವರಾದರೂ ಇರಬಹುದು ಎಂದು ನನ್ನ ನಂಬಿಕೆ...
my mother was touch... today touch water so i was late.....

ಮತ್ತೊಂದು ಇಂಗ್ಲೀಷ್ ರೂಪಾಂತರ: 
ತಾಳು = wait a minute 
ಒಂದೈದು ನಿಮಿಷ ತಾಳು = wait a minute for 5 minutes.

ಆದಿ ಶಂಕರಾಚಾರ್ಯರು ಬರೆದ ಭಜಗೋವಿಂದಂ ಸ್ತೋತ್ರಮಾಲಾದಲ್ಲಿರುವ ಒಂದು ಪದ್ಯ...

ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತಥಃ ಸುಖ ಲೇಶಃ ಸತ್ಯಂ

(ಅರ್ಥ) ಹಣವು  (ಅನರ್ಥಂ) ಅನಾಹುತ, ಭಯ ತೊಂದರೆಗೆ ಕಾರಣ,  ಅದರಿಂದ  ಸ್ವಲ್ಪವೂ ಸುಖವಿಲ್ಲ ಎಂಬ ಸತ್ಯವನ್ನು  ಎಂದಿಗೂ ತಿಳಿ.... ಎಂಬುದು ಅವರ ಅಭಿಮತ ಎಂದು ಓದಿ, ಕೇಳಿ ತಿಳಿದಿದ್ದೇನೆ.
ಅದೇ ಅರ್ಥವನ್ನು... ಕನ್ನಡದ ಪದದ ಅರ್ಥ ಎಂದು ಯೋಚಿಸಿ, ಅದಕ್ಕೆ ಅನರ್ಥ.. ಬೇರೆಯದೆ ಅರ್ಥವನ್ನು ಹೊಂದಿಸಿದಾಗ ಸಹ, ಅದು ಕಷ್ಟಕ್ಕೆ, ಮನಸ್ಸಿನ ನೋವಿಗೆ ಕಾರಣವಾಗಬಹುದು ಎಂದು ನನ್ನ ಆಲೋಚನೆ. 
ಉದಾಹರಣೆಗೆ ಜನಪದರ ಒಂದು ಆಶೀರ್ವಾದ ವಾಕ್ಯ.    ಹೊಸದಾಗಿ ಮದುವೆಯಾದ ಹೆಣ್ಣು ಮಗಳಿಗೆ, ಹಿರಿಯ ದಂಪತಿ ಮಾಡಿದ ಆಶೀರ್ವಾದ, " ನಿನ್ನ ಕುಂಕುಮ ಅಳಿಸಲಿ, ಕರಿಮಣಿ ಸರ ಬೇಗ ಕೀಳಲಿ" ಎಂದು. ಮೇಲ್ನೋಟಕ್ಕೆ ಇದು ಅಶುಭ. ಯಾವ ಹೆಣ್ಣೂ ಬಯಸದ ವಿಧವಾ ಪಟ್ಟದ ಸೂಚನೆ. ಆದರೆ ಅದರ ಹಿಂದಿನ ಅರ್ಥ .... ಆಕೆಗೆ ಮಗು ಬೇಗನೆ ಬಂದು, ಆಟವಾಡುತ್ತಾ... ಹಣೆಯ ಕುಂಕುಮ ಅಳಿಸಲಿ, ಸರ ಕೀಳಲಿ ಎಂಬುದು. ಇದನ್ನು ಅರ್ಥೈಸದ ವಿನಾ ಮನಸ್ಸಿಗೆ ನೋವು ಕೊಡುವಂತದ್ದು.

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಧರ್ಮರಾಯ ಹೇಳಿದ  ಅಶ್ವತ್ಥಾಮೋ ಹತಃ ಕುಂಜರಃ ಎಂಬ ವಾಕ್ಯ.  ಕುಂಜರಃ (ಆನೆ) ಎಂಬ ಪದ ಹೇಳುವಾಗ ಕೃಷ್ಣ ಜೋರಾಗಿ ಶಂಖವನ್ನು ಊದುತ್ತಾನೆ. ಅಶ್ವತ್ಥಾಮ ಸತ್ತ ಎಂಬ ಭಾಗವನ್ನು ಮಾತ್ರ ಕೇಳಿ ತಿಳಿದ ದ್ರೋಣಾಚಾರ್ಯರು, ದುಃಖದಿಂದ ಶಸ್ತ್ರಗಳನ್ನು ಕೆಳಗಿಡುತ್ತಾರೆ. ಅದು ಪಾಂಡವರ ಮುನ್ನಡೆಗೆ ಸಹಾಯ ಮಾಡಿದರೆ, ಕೌರವರಿಗೆ ಕೇಡಾಗುತ್ತದೆ.
ಧರ್ಮರಾಯನ ಬಾಯಲ್ಲಿ ಸತ್ಯವನ್ನೇ ನುಡಿಸಿ, ಅದಕ್ಕೆ ಬೆಲೆ ತಂದು, ಕುತಂತ್ರದಿಂದ ಬೇರೆ ಅರ್ಥವನ್ನು ಆಚಾರ್ಯರಿಗೆ ಮುಟ್ಟಿಸಿದ ಕೃಷ್ಣನ ಚಾಣಾಕ್ಷತನವನ್ನು ಮೋಸ ಎನ್ನಲೇ... ಧರ್ಮರಕ್ಷಣೆಗಾಗಿ ಮಾಡಿದ ಕೆಲಸ ಎನ್ನಲೇ?

ಡ್ಯಾಡಿ ಎಂದು ನನ್ನನ್ನು ಸಂಭೋದಿಸುವ, ನನ್ನ ಹೆಂಡತಿ ವಿಜಯಳಿಗೆ, ತುಮಕೂರಿನ ಸುಬ್ಬಣ್ಣಯ್ಯ ಚಿಕ್ಕಪ್ಪ ( ಹೆಚ್. ಸುಬ್ಬರಾಯರು)  ಹೇಳಿದ್ದು....       " ಸಂಬಂಧಗಳ ಅರ್ಥಾನೇ ಹಾಳು ಮಾಡತ್ತೆ ವಿಜಯಾ....ಹಾಗೆ ಕರೀಬೇಡ" 
ಅದಕ್ಕೇ ಇರಬೇಕು... ಇರುವಾರ  ಪತಿವ್ರತೆ, ಗಂಡನ್ನ ಅಪ್ಪ ಅಂದಳು ಅನ್ನುವ ನುಡಿಗಟ್ಟು ಬಂದಿದ್ದು. 

ಕಾಂತಾ ಸಮ್ಮಿತಿ (ಸಂಹಿತೆ), ಉಪದೇಶದ ಒಂದು ವಿಭಾಗ. ಇಲ್ಲಿ ಕಾಂತೆಯು (ಹೆಂಡತಿ) ಗಂಡನಿಗೆ ಪ್ರೀತಿಯಿಂದ, ಅನುನಯದಿಂದ ಹೇಳಿ ಒಪ್ಪಿಸುವ ಮಾತುಗಳು.   ಗಂಡು ಹೆಣ್ಣಿನ ಏಕಾಂತ ಸಮಯದ ಕಾಂತಾಸಮ್ಮಿತಿಯ ಭಾಗವಾಗಿ,   ಬೇಡ ಎಂಬ ಹೆಣ್ಣಿನ ಮಾತಿನ ಅರ್ಥ, ಅದೇ ಅಲ್ಲವೆಂದೂ, ಗಂಡು ತನ್ನ ಜಾಣ್ಮೆಯಿಂದ, ಅದನ್ನು  ಬೇಕು ಎಂದು ಬದಲಾಗುವ ಹಾಗೆ ಮಾಡಬೇಕೆಂದು, ಅದೇ ವಾಸ್ತವಕ್ಕೆ ಹತ್ತಿರ ಎಂದು, ವಾತ್ಸಾಯನನ ಕಾಮಸೂತ್ರದಲ್ಲಿ ವಿವರಿಸಿದೆ ಎಂದು ಓದಿದ ನೆನಪು. 

ಬೇರೆ ಅರ್ಥ ನೀಡುವ ಪದಗಳು....
ಕೈ ಬಿಸಿ ಮಾಡು, ಟೇಬಲ್ ಕೆಳಗೆ ಕೊಡು,
ಮಾಮೂಲು ಕೊಡು ... ಎನ್ನುವುದು ಲಂಚ ಎಂದು ಅರ್ಥ.
ಕಾದಿದೆ ಹಬ್ಬ ಎನ್ನುವುದು  ಶಿಕ್ಷೆಗೆ ತಯಾರಾಗು ಎಂದು.
ಇನ್ನು ದ್ವಂದ್ವಾರ್ಥದ ಮಾತುಗಳು, ಸೂಚ್ಯವಾಗಿ ಹೇಳುವ ಮಾತುಗಳು, ರಸಿಕತೆ / ಲೈಂಗಿಕತೆಯ ಭಾಗವಾಗಿ ಉಪಯೋಗವಾಗುತ್ತದೆ.  ಈಚಿನ ಚಲನಚಿತ್ರಗಳಲ್ಲಿ ಇದು ಸ್ವಲ್ಪ ಹೆಚ್ಚೇ.
ಅರ್ಥೈಸುವ ಮಾತುಗಳು, ಅಕ್ಷಯವಾಗುವಷ್ಟು... ಹಾಗಾಗಿ,  ನನ್ನ ಮಾತಿಗೆ...  ಅರ್ಥಾತ್ ಬರವಣಿಗೆಗೆ, ವಿರಾಮ ಹೇಳುತ್ತೇನೆ.

ಕೊನೆಯ ಮಾತು:
ನನ್ನ ಸೋದರಮಾವ ರಂಗಣ್ಣಯ್ಯನ  ಮಗ ರಾಮುವನ್ನು ( ರಾಮನಾಥ. ಆರ್), ಭೇಟಿಯಾಗುವುದು ಅಪರೂಪವಾದರೂ, ಸಂವಹನೆ ದಿನಂಪ್ರತಿ ಇರುತ್ತಿತ್ತು, ಬೆಳಗಿನ ಜಾವ ನಾಲ್ಕರ ಸುಮಾರಿಗೆ ತಪ್ಪದೇ ಕಳಿಸುತ್ತಿದ್ದ ಮೆಸೇಜ್ ಮೂಲಕ. ಆರೋಗ್ಯದ  ಸಮಸ್ಯೆ  ಇದ್ದರೂ, ಅದನ್ನು  ಮೆಟ್ಟಿ ಲವಲವಿಕೆಯಿಂದ ಇರುತ್ತಿದ್ದವ. ಕುಟುಂಬದ ಎಲ್ಲ ಹಿರಿಯರ ಪುಣ್ಯತಿಥಿಯಂದು, ತಪ್ಪದೇ ನೆನಸಿಕೊಂಡು,ಗೌರವ ಸಲ್ಲಿಸಿ..  ನಮಗೂ ನೆನಪಿಸುತ್ತಿದ್ದವ. ರಾಮು ನಮ್ಮೊಂದಿಗೆ ಇಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲಾಗಿಲ್ಲ. ಊರಲ್ಲಿಲ್ಲದ ಕಾರಣ ಅಂತಿಮ ದರ್ಶನವೂ ನನಗಾಗಲಿಲ್ಲ. ಇನ್ನು ಮುಂದೆ ರಾಮುವಿನ ಬೆಳಗಿನಜಾವದ ಶುಭ ಸಂದೇಶವೂ ಇರುವುದಿಲ್ಲ.
ರಾಮು....  ನಿನಗೆ  ಸದ್ಗತಿ ಸಿಗಲೆಂದು  ದೇವರನ್ನು ಪ್ರಾರ್ಥಿಸುತ್ತಾ.....

ನಮಸ್ಕಾರ. ..

ಡಿ ಸಿ  ರಂಗನಾಥ ರಾವ್
9741128413





    
    

Comments

  1. ನಾಗೇಂದ್ರ ಬಾಬು6 October 2026 at 17:28

    ಮಾತು ಮುತ್ತು, ಮಾಣಿಕ್ಯ, ಮಾತು ಬಲ್ಲವನಿಗೆ ಜಗಳವಿಲ್ಲ ಇದೆಲ್ಲಾ ಇಂದಿನ ಸಮಾಜದಲ್ಲಿ ಬಹುತೇಕ ಬದಲಾವಣೆ ಆಗಿದೆ, ಒಂದು ಸಣ್ಣ ಮಾತು ಅನೇಕ ಜಗಳ ದಿಂದ ಕೊಲೆ ತನಕ ಮುಂದುವರಿದ ಅನೇಕ ಘಟನೆಗಳು ಪ್ರತಿದಿನ ಕಾಣಾಸಿಗುತದೆ.... ಕೆಲವೊಮ್ಮೆ ಯೋಚಿಸಿದ್ದೇನೆ ಕೂಡ ಮನುಷ್ಯರಿಗೂ ಇತರ ಜೀವಿಗಳಂತೆ ಮಾತು ಬರದೇ ಇದ್ದರೆ!!!!
    ಮಾತು ಹಿತ ಮಿತವಾಗಿದ್ದರೆ ದೇವರು ನೀಡಿರುವ ಈ ಅದ್ಭುತ ಶಕ್ತಿ ಇಂದ ವಿವೇಕಾನಂದರಂತೆ ವಿವೇಕಿಯಾಗಿಯೂ ಅಥವಾ ಸಂಪೂರ್ಣ ಅವಿವೇಕಿಯಾಗಿಯೂ ಬದುಕಬಹುದು
    ಆಯ್ಕೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸಿ ಹೇಳಬೇಕಾದ ಜವಾಬ್ದಾರಿ ನಮ್ಮದು
    ಧನ್ಯವಾದಗಳು
    ಬಾಬು

    ReplyDelete
  2. ಗುರು ಪ್ರಸನ್ನ, ಚಿಂತಾಮಣಿ10 October 2026 at 23:03

    ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾರೆ ಪ್ರಾಜ್ಞರು. ಲೇಖಕರು ಮಾತಿನ ಆಳ ಮತ್ತು ಅಗಲವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಿದ್ದಾರೆ. ಟಚ್ ಎಂಬ ಪದವು ಅರ್ಥಗರ್ಭಿತವಾಗಿದೆ.

    ಮಾತಿನ ತರ್ಜುಮೆಯ ವಿವಿಧ ಸಂದರ್ಭಗಳು ಲೇಖನದಲ್ಲಿ ಹಾಸ್ಯಕ್ಕೆ ದಾರಿ ಮಾಡಿಕೊಟ್ಟಿವೆ. ಪತಿಯನ್ನು ಅಪ್ಪ ಎಂದು ಸಂಬೋಧಿಸುವುದು ಕೇಳಿ ಆಶ್ಚರ್ಯವಾಯಿತು. ಶಿಕ್ಷಕರು ಹಾಗೂ ರಾಜಕಾರಣಿಗಳಿಗೆ ಮಾತೇ ಆಸ್ತಿ,,ಜೀವನ.

    ಕೊನೆಯ ಮಾತು :

    ನನ್ನಂತ ಬೊಕ್ಕ ತಲೆಯವರಿಗೆ ಅಥವಾ ಬೋಡು ತಲೆಯವರಿಗೆ ತನ್ನ ಮಾತಿನ ಚಾತುರ್ಯದಿಂದ ಅರ್ಧ ಡಜನ್ ಬಾಚಣಿಗೆ ಮಾರುವವನೇ ನಿಜವಾದ ಸೇಲ್ಸ್ಮನ್.

    ವಂದನೆಗಳು





    ReplyDelete

Post a Comment

Popular posts from this blog

ಕಣ್ಮರೆಯಾದ ಕೃಪ

ಜೈ ಜೈ ಶ್ರೀ ರಾಮ್

ದಾಂಪತ್ಯ - ಸಾಂಗತ್ಯ