ಅಂಕಿ - ಸಂಖ್ಯೆ - ಲೆಕ್ಕ

 








ಅಂಕಿ ಸಂಖ್ಯೆಗಳು ಜೀವನದ ಅವಿಭಾಜ್ಯ ಅಂಗ. ಅದರ ಒಡನಾಟವಿಲ್ಲದ ದಿನಗಳೇ ಇಲ್ಲವೇನೋ.

ನನ್ನ ಜೀವಿತದಲ್ಲಿ, ಅಂಕಿಯೊಂದಿಗೆ ಗೆಳೆತನ ಬೆಸೆದದ್ದು, ಬಾಯಿ ಪಾಠದ ಪ್ರಾರಂಭದಿಂದ... ನನಗೆ ಸುಮಾರು 3-4 ವರ್ಷ ಇರಬಹುದು. ಬಾಲ ಭಾಷೆಯಲ್ಲಿ ಹೇಳುತ್ತಿದ್ದ ಬಾಯಿ ಪಾಠ...  ಶುಕ್ಲಾಂಭರದರಂ ವಿಷ್ಣುಂ...  ಗುರು ಬ್ರಹ್ಮ ಗುರು ವಿಷ್ಣು..  ಸರಸ್ವತಿ ನಮಸ್ತುಭ್ಯಂ... ಇಂದ ಪ್ರಾರಂಭಗೊಂಡು.. ಸೋಮವಾರ ಮಂಗಳವಾರ,... ಪಾಡ್ಯ, ಬಿದಿಗೆ, ತದಿಗೆ,    ಚೈತ್ರ ವೈಶಾಖ... ವಸಂತ ಋತು, ಗ್ರೀಷ್ಮ ಋತು ಮುಗಿಸಿ  ಒಂದು ಎರಡು 3 4 ಐದು ಆರು 7 8 ಒಂಭತ್ತು ಹತ್ತು ಹೇಳಿ ಮುಗಿಸುತ್ತಿದ್ದದ್ದು.

ಅದನ್ನು ಮೊದಲು ಅಳವಡಿಸಿಕೊಂಡಿದ್ದು.. ಶಾಲೆಯಲ್ಲಿ ಉಪಾಧ್ಯಾಯರಿಗೆ ಕಿರುಬೆರಳು ತೋರಿಸಿ (ಒಂದಕ್ಕೆ)  ತೋರು ಬೆರಳು ಮಧ್ಯಬೆರಳು ತೋರಿಸಿ ( ಎರಡಕ್ಕೆ) ಆಚೆ ಹೋಗವುದು.

ಕೂಡಿ ಕಳೆಯುವಾಗ ಕೈಬೆರಳುಗಳ ಸಹಾಯದಿಂದ ಎಣಿಸುತ್ತಿದ್ದದ್ದು.  ಎಲ್ಲಾ ಆಟಗಳಲ್ಲೂ ಒಂದಲ್ಲ ಒಂದು ತರಹ ಎಣಿಕೆ -  ಲೆಕ್ಕ ಇದ್ದದ್ದೆ. 

ಈಜಾಟದ ಸಮಯದಲ್ಲಿ, ಯಾರು ಹೆಚ್ಚು ಸಮಯ ನೀರಲ್ಲಿ ಮುಳುಗಿರುತ್ತಾರೆ ಎನ್ನುವುದು ಎಣಿಕೆಯ ರೂಪದಲ್ಲಿ ಇರುತ್ತಿತ್ತು. ನಾವು ಯಾರನ್ನು ಗೆಲ್ಲಿಸಬೇಕೋ, ಅವರು ಮುಳುಗಿದಾಗ ಒಂದು, ಎರಡು, ಮೂರು, ನಾಲ್ಕು... ಇದು ಎಣಿಕೆಯ ಓಟ, ಬೇರೆಯವರು ಮುಳುಗಿದಾಗ, ಒಂದು......... ಎರಡು........ ಮೂರು....... ನಾಲ್ಕು.. ನಿಧಾನವಾಗಿ ಎಣಿಸುವುದು. ಮೋಸವಾದರೂ, ಎಲ್ಲರೂ ಸಂತೋಷಪಡುತ್ತಿದ್ದದ್ದು, ಸೋತವರು, ಸರಿಯಾಗಿ ಎಣಿಸಿಲ್ಲ ಎಂದು ಜಗಳವಾಡುತ್ತಿದ್ದದ್ದು ಸಾಮಾನ್ಯ ಸಂಗತಿಯಾಗಿತ್ತು.

ಮಗ್ಗಿ ಕಲಿಕೆ, ಬಹು ಮುಖ್ಯ ಅಂಗವಾಗಿತ್ತು. ಒಂದರಿಂದ 20ರ ತನಕ ಮಗ್ಗಿ ಕಲಿಯಲೇಬೇಕಿತ್ತು. ಮಧ್ಯದಲ್ಲಿ  ಕೇಳಿದರೂ ಸರಿಯಾದ ಉತ್ತರ ಹೇಳುವಷ್ಟು .. ಉದಾಹರಣೆಗೆ 16 x6, 9x9 ಕ್ಕೆ ಉತ್ತರ ಹೇಳುವಷ್ಟು ಚಾಕ ಚಕ್ಯತೆ ಇರಬೇಕಿತ್ತು. ಈ ದಿಕ್ಕಿನಲ್ಲಿ ಕಲಿತದ್ದು, ಮಗ್ಗಿಯನ್ನು ಕೆಳಗಿಂದ ಮೇಲೆ ಹೇಳುವ... 2x10, 2x9, 2x8 ....2x1 ವಿಧಾನ. ಇಂದಿಗೂ ಒಂದರಿಂದ 12ರ ತನಕ ಹಾಗೂ 16ರ ಮಗ್ಗಿಯನ್ನು  ಕೆಳಗಿಂದ ಮೇಲೆ ಹೇಳಬಲ್ಲೆ ಅಂದರೆ, ಅಂದಿನ ಶಿಕ್ಷಣದ ಮಟ್ಟದ ಅರಿವಾಗುತ್ತದೆ.

ಸಾಮಾನ್ಯವಾಗಿ ಲೆಕ್ಕವನ್ನು ಕಷ್ಟ ಎನ್ನುವವರೇ ಜಾಸ್ತಿ. ದೇವರ ದಯೆಯೋ, ಚಿಕ್ಕ ವಯಸ್ಸಿನ ಸಮಯದ ಉಪಾಧ್ಯಾಯರ ಕೊಡುಗೆಯೋ, ನನಗಂತೂ ಲೆಕ್ಕ / ಗಣಿತ ಬಹು ಇಷ್ಟ.

ಕೂಡು, ಕಳೆ, ಗುಣಿಸು, ಭಾಗಿಸು, ಸರಾಸರಿ, ಶೇಕಡ ಲಸಾಅ, ಮಸಾಅ... ವಿವಿಧ ರೀತಿಯ ಲೆಕ್ಕಗಳನ್ನು... ಅಂಕಿಗಳ ಜೊತೆ ಆಡುವುದನ್ನು ಅರೆದು ಕುಡಿಸಿದ್ದು ಎಂಟನೇ ತರಗತಿಯ ತನಕ. 

ಆಗ ಕಲಿತದ್ದೆ ಒಂದು ಜಾಣ್ಮೆಯ ಕೂಡುವ ಲೆಕ್ಕ. 999, 888, 777 ಈ ಅಂಕಿಗಳನ್ನು ಕೂಡಿದಾಗ ಬರುವ ಉತ್ತರ 999 ಆಗಬೇಕು. ಎಲ್ಲ ಅಂಕಿಗಳನ್ನು ಹೇಗಾದರೂ ಕೂಡಬಹುದು. ಎಷ್ಟು ತಿಣಕಿದರೂ ಉತ್ತರ ಬರದಿದ್ದಾಗ, ಉಪಾಧ್ಯಾಯರನ್ನು ಕಾಡಿಬೇಡಿ ಕಲಿತಾಗ ಆದ ಸಂತೋಷ ಬೆಟ್ಟದಷ್ಟು. ಹೊಸಬರು ಸಿಕ್ಕಿದಾಗ ಲೆಕ್ಕವನ್ನು ಕೊಟ್ಟು, ಜಾಣ್ಮೆ ಮೆರೆಯುವುದು ನನಗೆ ಹೆಮ್ಮೆಯೆನಿಸುತ್ತಿತ್ತು.

ನಿಮಗಾಗಿ ಅದರ ಪ್ರಯೋಗ. ಕೊಂಡಿಯನ್ನು ಒತ್ತಿ.. ನೋಡಿ...

https://docs.google.com/presentation/d/195BEk3KHiqxDoNcVNlFPfocq0yrQYwqy/edit?usp=drivesdk&ouid=115149669490230814668&rtpof=true&sd=true

ನನ್ನಮ್ಮ ದೇವರಿಗೆ ನಮಸ್ಕಾರ ಮಾಡುತ್ತಾ... ಒಂದು ನಮಸ್ಕಾರವು ಚಂದ್ರಶೇಖರ ನಿನಗೆ ಎರಡು ನಮಸ್ಕಾರವು ಭಕ್ತ ರೊಡೆಯ.... ಅಂಕಿಗಳೊಂದಿಗೆ ಹೇಳುತ್ತಿದ್ದ ಹಾಡು ಸ್ವಲ್ಪ ನೆನಪಿದೆ.

ಕಥೆಗಳು ಶುರುವಾಗುತ್ತಿದ್ದದ್ದು.. ಒಂದಾನೊಂದು ಕಾಲದಲ್ಲಿ ಎಂದೇ.

ನನ್ನಿಷ್ಟ .... ನಾನ್ಯಾರಿಗೂ ಲೆಕ್ಕಕ್ಕೆ ತಗೊಳಲ್ಲ..  ಇದು. ಯೌವ್ವನದ ಸೊಕ್ಕಿನ ಮಾತು.

ಲೆಕ್ಕವೇ ಇಡಲಾಗದ್ದು... ಆಕಾಶದಲ್ಲಿನ ನಕ್ಷತ್ರಗಳ ಎಣಿಕೆ. ತುಂಬಾ ಕಡಿಮೆ ಇದ್ದರೆ.. ಅದು ಬೆರಳೆಣಿಕೆಯಷ್ಟು.

ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದಂತೆ.. ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ ,  ಎಂತೆಂಥ ಮಹನೀಯರ ಕೊಡುಗೆಯನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಈ ಜಗತ್ತಿಗೆ, ಸಾಮಾನ್ಯ ಮನುಷ್ಯರು ನಗಣ್ಯರು.

ಅಗಣಿತ ಗುಣಗಣ  ಭೂಷಿತ ರಾಮ... ಲೆಕ್ಕ ಮಾಡಲಾಗದ ಶ್ರೀರಾಮನ ಗುಣಗಳು.

ಶಿಶುಪಾಲನ 100 ತಪ್ಪುಗಳನ್ನು ಮನ್ನಿಸಿ ನಂತರ ಅವನ ವಧೆಯನ್ನು ಮಾಡಿದ್ದು ಕೃಷ್ಣನ ಚಾತುರ್ಯ.

ಮಹಾಭಾರತದ ಯುದ್ಧದಲ್ಲಿ ಸತ್ತ ವೀರ ಯೋಧರ ಪತ್ನಿಯರಿಗೆ, ಹಾಗೂ ಮಕ್ಕಳಿಗೆ ನಾಥನಾಗಿ, 16,000 ಕುಟುಂಬಗಳ ಯೋಗ ಕ್ಷೇಮವನ್ನು ನೋಡಿದ ಕಾರಣ, ಕೃಷ್ಣನಿಗೆ ಅಷ್ಟು ಸಂಸಾರವಿತ್ತು... ಅದನ್ನು ಹೆಂಡಿರು ಎಂದು ಕರೆದರು ಎಂದು ನನ್ನ ಗ್ರಹಿಕೆ.

ತಿರುಪತಿಯ ತಿಮ್ಮಪ್ಪ ಏಡುಕೊಂಡಲ ಸಾಮಿ, ಏಳು ಬೆಟ್ಟಗಳ ಒಡೆಯ.

ಏಕಂ ಸತ್ , ವಿಪ್ರಾಃ ಬಹುದಾಃ ವದಂತಿ, ಉಪನಿಷತ್ತಿನ ಈ ಸಾಲು ವಿಶಿಷ್ಟ. ಮೇಲ್ನೋಟಕ್ಕೆ ಸತ್ಯ ಒಂದೇ ಆದರೂ.. ತಿಳಿದವರು ಅದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುತ್ತಾರೆ ಹಾಗೇ ದೇವನೊಬ್ಬ ನಾಮ ಹಲವು ಎನ್ನುವುದು ಇನ್ನೊಂದು ಚಿಂತನೆ. ಯಾವುದೇ ವಿಷಯಕ್ಕೆ ಬಹುಮುಖ ಚಿಂತನೆ ಇರುತ್ತದೆ.

ಆಪ್ತಸಮಾಲೋಚಕನಾಗಿ, ನನ್ನ ಅನುಭವ.. ಸಮಸ್ಯೆ ಒಂದೇ ಆದರೂ ಬೇರೆ ಬೇರೆ  ವ್ಯಕ್ತಿಗಳಿಗೆ ಪರಿಹಾರದ ದಾರಿ ಬೇರೆಯೇ ಆಗಿರುತ್ತದೆ. ಅವರವರ ಶಕ್ತಿ ಸಾಮರ್ಥ್ಯ, ಸುತ್ತಲಿನ ಪರಿಸರ ಹೀಗೆ ಪ್ರಭಾವ ಬೀರುವ ಬೇರೆ ಬೇರೆ ವಿಷಯಗಳು. ಇದಕ್ಕೊಂದು ಉದಾಹರಣೆ- ನಮ್ಮಲ್ಲಿ 1,2,3 ಅಂಕಿಗಳಿವೆ ಇದನ್ನೇ ಉಪಯೋಗಿಸಿಕೊಂಡು ಉತ್ತರ ನಾಲ್ಕು ಬರಬೇಕು.... 1+1+1+1=4, 2+2=4, 1+3=4, 2x2=4, 2^2=4,1+1+2=4. 

ಮೂರಕ್ಕೆ ಮುಕ್ತಾಯ, 100 ದಾಟಿದರೆ ಶತಾಯ. ನವಗ್ರಹಗಳು, ವಿಷ್ಣುವಿನ ಹತ್ತು ಅವತಾರಗಳು.. ದಶಾವತಾರ, ಎಲ್ಲವೂ ಲೆಕ್ಕವೇ.

ಗಡಿಯಾರ, ಅದರಲ್ಲಿನ ಅಂಕಿಗಳು ಸಮಯದ ಲೆಕ್ಕವನ್ನು ಹೇಳುತ್ತವೆ.

ಕ್ಷಣಗಣನೆ- countdown, ಸಾಧಿಸಬೇಕಾದ ಸಮಯದ ಇಳಿಜಾರು ಲೆಕ್ಕ.

108 ಸಂಖ್ಯೆಗೆ ನಮ್ಮ ಧರ್ಮದಲ್ಲಿ ವಿಶೇಷ ಸ್ಥಾನ. ದೇವರ ಪೂಜೆಗೆ ಅಷ್ಟೋತ್ತರ ಶತನಾಮಾವಳಿ, ಜಪಮಾಲೆಯಲ್ಲಿ ಇರುವುದು ನೂರೆಂಟು ಮಣಿಗಳು.

Ambulance ಗಾಗಿ ಸಹಾಯವಾಣಿಯ ಫೋನ್ ನಂಬರ್ ಸಹ 108.

ನಮ್ಮ ಹೆಸರನ್ನೂ ಅಂಕಿಗಳು ಆವರಿಸಿಕೊಂಡು ಬಿಟ್ಟಿದೆ. ಬ್ಯಾಂಕ್ ನಲ್ಲಿನ ಅಕೌಂಟಿನದು ನಂಬರು, ಆಸ್ಪತ್ರೆಯ ಹಾಸಿಗೆಯದು ನಂಬರು.

ಯಾವುದೇ ವಿಳಾಸದಲ್ಲಿ  ಮನೆಯದು ನಂಬರು, ರಸ್ತೆ , ಅಡ್ಡರಸ್ತೆ, ಮಹಡಿ ಇದ್ದರೆ, ಕೊನೆಗೆ pincode ಎಲ್ಲವೂ ಅಂಕಿಗಳೆ.

ಸಂಗೀತದಲ್ಲಿ,  ಸ್ವರಗಳು ಏಳು, ಶೃತಿಯ ಗುರುತು ಬಿಳಿ ಒಂದು, ಕರಿ2... ಎಂದು, ರಾಗವನ್ನು ಗುರ್ತಿಸುವಾಗ ... ಎಷ್ಟು ಸ್ವರಗಳಿವೆ, ಎಷ್ಟನೇ ಮೇಳಕರ್ತರಾಗ ಎಂದು, ತಾಳವಂತೂ ಸರಿಯೇ ಸರಿ... ಅಂಕಿಗಳೆ.

ಗಣಕ ಯಂತ್ರದ ( computer ) ಮೂಲ ಭಾಷೆ 0 ಮತ್ತು 1, binary ಭಾಷೆ.

ಈ ಭಾಷೆಗೆ ರೂಪ ಕೊಟ್ಟವಳು, ನಾನು ಚಿಕ್ಕಂದಿನಲ್ಲಿ ಕಂಡ ಮೊಸರಮ್ಮ ಎಂದೆ ನನ್ನ ನಂಬಿಕೆ. ಆಗಿನ ಕಾಲಕ್ಕೆ ಮೊಸರು ಕೊಟ್ಟ ನಂತರ, ಗೋಡೆಯ ಮೇಲೆ ಒಂದು ಗೆರೆ ಎಳೆದು ಲೆಕ್ಕ ಮಾಡುತ್ತಿದ್ದ ರೀತಿಗೆ, ಸೊನ್ನೆಯನ್ನು ಸೇರಿಸಿಕೊಂಡು ಮಾಡಿದ ಭಾಷೆಯೇ ಕಂಪ್ಯೂಟರ್ ಭಾಷೆ.

ಸೊನ್ನೆಯಂತೂ, ಗಣಿತಕ್ಕೆ ಭಾರತದ ಕೊಡುಗೆ. ಸೊನ್ನೆಯ ಅವಿಷ್ಕಾರದ ಕಾರಣದಿಂದ 10, 100, ಸಾವಿರ, ಲಕ್ಷ, ಕೋಟಿ ಎಣಿಸಲು ಸಾಧ್ಯವಾಗಿದ್ದು.

ಮಹಾಭಾರತದ ಯುದ್ಧದಲ್ಲಿ 18 ಅಕ್ಷೋಹಿಣಿ ಸೈನ್ಯ ಭಾಗವಹಿಸಿತೆಂದು ಲೆಕ್ಕ. ಒಂದು ಅಕ್ಷೋಹಿಣಿ ಸೈನ್ಯದಲ್ಲಿ ಇರುವ ರಥಗಳು,ಆನೆ,ಕುದುರೆ ಕಾಲಾಳುಗಳ ಸಂಖ್ಯೆ... ಅಯ್ಯೋ.. ಅದರ ಲೆಕ್ಕ ಈಗ ಬೇಡ ಬಿಡಿ.

ಆಕಾಶಕಾಯಗಳ ಚಲನೆ, ಗ್ರಹಣಗಳು ಸಂಭವಿಸುವ ಸಮಯ ಇವುಗಳ ಕರಾರುವಾಕ್ ಲೆಕ್ಕಾಚಾರ ಮಾಡುವಲ್ಲಿ ನಮ್ಮ ಪೂರ್ವಜರು ಪರಿಣಿತರು. ದೃಗ್ಗಣಿತ ಎಂಬ ಹೆಸರಿನ ಈ ಲೆಕ್ಕಾಚಾರ ಇಂದಿಗೂ ಪಂಚಾಂಗ ತಯಾರಿಸಲು ಮಾರ್ಗದರ್ಶಿ.

ನಾವು ಮಾಡುವ ಎಲ್ಲ ಕೆಲಸಗಳ ಲೆಕ್ಕವನ್ನು ಚಿತ್ರಗುಪ್ತ ಬರೆದಿಟ್ಟಿರುತ್ತಾನೆ ಎಂದು... ಸತ್ತ ನಂತರ ಆ ಲೆಕ್ಕದ ಆಧಾರದ ಮೇಲೆ ಯಮಧರ್ಮ ನಮ್ಮ ಮುಂದಿನ ದಾರಿಯನ್ನು ನಿರ್ಧಾರ ಮಾಡುತ್ತಾನೆ ಎಂಬುದು ಒಂದು ನಂಬಿಕೆ.

ಪರೀಕ್ಷೆಯಲ್ಲಿ ಅಂಕಗಳೇ ಮಾನದಂಡ. 100 ಕ್ಕೆ 100 ತೆಗೆಯುವ ಭೂಪರು ಈಗೀಗ ಬಹಳವೇ ಆಗಿದ್ದಾರೆ.

ಸರ್ಕಾರದಲ್ಲಿ ಅಂಕಿ ಅಂಶಗಳ ಒಂದು ಇಲಾಖೆ ಇದೆ. ಇಲ್ಲಿನ ಜನ ಎಂಥ ಪರಿಣತರು ಎಂದರೆ... ಯಾವುದೇ ಅಂಕಿ ಅಂಶವನ್ನು ಸಮಯೋಚಿತವಾಗಿ ನಿರ್ವಹಿಸಬಲ್ಲರು. ಆ ಸಂದರ್ಭದ ಅನುಕೂಲಕ್ಕೆ ತಕ್ಕಂತೆ ನಿರ್ಧಾರಕ್ಕೆ ಪೂರಕವಾಗಿ, ಅಥವಾ ಮಾರಕವಾಗಿ ತೋರಿಸಬಲ್ಲರು.

ನನ್ನ ದೊಡ್ಡ ಮಾವ ಹೆಚ್ ಪಿ ನರಸಿಂಹಮೂರ್ತಿ ಯವರು ವಿದ್ಯಾರ್ಥಿ ಭವನ್ ಮಸಾಲೆ ದೋಸೆಯ ಪ್ರಿಯರಾಗಿದ್ದವರು. ನಾನು ತಿಂದಿರುವ ಮಸಾಲೆ ದೋಸೆ ಹಾಗೂ ವಡೆಗಳ ಲೆಕ್ಕವೇ ಇಲ್ಲವೆಂದು.. ತಮಾಷೆಯಿಂದ ಹೇಳುತ್ತಿದ್ದರು.

ಖರ್ಚು ಮಾಡಿದ ಹಣದ ಲೆಕ್ಕ ಇರ ಬೇಕೆಂಬುದು ಒಂದು ನಿಯಮ. ಮೋರಿಗೆ ಎಸೆದರೂ ( ಅನಾವಶ್ಯಕ ಖರ್ಚು) ಅದರ ಲೆಕ್ಕ ಇರಲೇಬೇಕು.

ಒಂದು ಕಾಲಕ್ಕೆ ನಾಲ್ಕು ಅಂಕಿ ಸಂಬಳ - ಸಾವಿರ ರೂಪಾಯಿ ದಾಟಿದ್ದು - ಎಂದರೆ ಅದು ಅತಿಶಯ. ಈಗ ಬಿಡಿ ಆ ಅಂಕಿಗಳಿಗೆ ಯಾವ ಮಿತಿಯೂ ಇಲ್ಲ.

ನನ್ನ ಮಗಳು ಹಾಗೂ ನನ್ನ ನಾದಿನಿಯ ಎರಡು ಗಂಡು ಮಕ್ಕಳನ್ನು ಶಾಲೆಗೆ ಬಿಡುವಾಗ, ದಾರಿಯಲ್ಲಿ ಹೋಗುತ್ತಿದ್ದ ವಾಹನಗಳ ಸಂಖ್ಯೆಯಲ್ಲಿ ಕಂಡ ಒಂದು ಜೊತೆ ಅಂಕಿಯನ್ನು ಗುರುತಿಸಿ ... 2,2 cancel..... 8,8 cancel ಎಂದು  ಆಡುತ್ತಿದ್ದ ಆಟ, ಪೈಪೋಟಿಗೆ ಬಿದ್ದು, ಜಗಳದಲ್ಲಿ ಕೊನೆಗೊಂಡ ಸಂದರ್ಭಗಳು ಇತ್ತು.

ವಾಹನಗಳ ಸಂಖ್ಯೆಯು 11 ರಿಂದ ಭಾಗವಾಗುತ್ತಾ? ಎಂದು ಕಂಡುಹಿಡಿಯುವ ಒಂದು ಅಭ್ಯಾಸ ನನಗೆ ಹೇಗೆ ಶುರುವಾಯಿತೋ ತಿಳಿಯದು.... ಈಗಲೂ ಅದು ನನಗೆ ಅರಿವಿಲ್ಲದಂತೆ ಮುಂದುವರೆದಿದೆ.... ಅಭ್ಯಾಸ ಬಲ.

ಒಂದು ಎರಡು ಬಾಳೆಲೆ ಹರಡು, 3, 4 ಅನ್ನ ಹಾಕು, ಐದು ಆರು ಬೇಳೆ ಸಾರು, 7, 8 ಪಲ್ಯಕ್ಕೆ ದಂಟು, 9 10 ಎಲೆಮುದುರೆತ್ತು ... ಎನ್ನುವ ಶಿಶು ಗೀತೆ ಎಷ್ಟು ಚೆನ್ನ ಅಲ್ಲವೇ?

ಮೂರು ದಳದ ಕಮಲದಲ್ಲಿ ಮೂಡಿ ಬರುವ ಲಿಂಗವೇ... ಎಂದು ಪ್ರಾರಂಭ ಮಾಡಿದ ಹಾಡು ಎಣಿಕೆಯೊಂದಿಗೆ ಮುಂದುವರೆಯುತ್ತಲೇ ಇರುತ್ತಿತ್ತು.

ನಾಲ್ಕೊಂದ್ಲ ನಾಲ್ಕು ನಾಲ್ಕೆರಡಳ ಎಂಟು ಇದೇ ಲೆಕ್ಕದ ನಂಟು....

ಒಂದು ಎರಡು ಮೂರು ನಾಲ್ಕು ಆಮೇಲಿನ್ನೇನು...

ಎಂಟು ಗೇಣಿನ ದೇಹ ರೋಮಗಳೆಂಟು ಕೋಟಿ..

ಏಸು ಕಾಯಂಗಳ ಕಳೆದು 84 ಲಕ್ಷ ಜೀವ ರಾಶಿಯನ್ನು ದಾಟಿ ಬಂದ ಈ ದೇಹ... 

ಹೀಗೆ ಅಸಂಖ್ಯ ಹಾಡುಗಳು ಉಂಟು.

ಈ ವಿಷಯದ ವ್ಯಾಪ್ತಿ ಎಷ್ಟು ವಿಶಾಲವೆಂದರೆ, ಉದ್ದ ಆಳ ಅಳೆಯಲಾಗದಷ್ಟು.   ನನ್ನ ಸೀಮಿತ ಜ್ಞಾನಕ್ಕೆ  ನಿಲುಕಿದಷ್ಟು, ಸಮುದ್ರದಿಂದ ತೆಗೆದ ಒಂದು ಬೊಗಸೆ ನೀರಿನಷ್ಟು,    ನಿಮ್ಮ ಮುಂದೆ ಇಟ್ಟಿದ್ದೇನೆ.. ಓದಿ...  ಪಾಸಾಗಲು ಬೇಕಾಗುವ 35 ಅಂಕಗಳನ್ನು ಕೊಡುತ್ತೀರಾ ಎಂಬ ಅಭಿಲಾಷೆಯೊಂದಿಗೆ...

ಶತಕೋಟಿ ನಮಸ್ಕಾರಗಳು...

ಡಿ ಸಿ  ರಂಗನಾಥ ರಾವ್

9741128413







    





Comments

Popular posts from this blog

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ

ದಾಂಪತ್ಯ - ಸಾಂಗತ್ಯ