ದಾಂಪತ್ಯ - ವೈಪರೀತ್ಯ
ದಾಂಪತ್ಯ - ಸಾಂಗತ್ಯ ಲೇಖನವನ್ನು ಓದಿದ ನಂತರ ಬಂದ ಅಭಿಪ್ರಾಯ...." ಯಾಕೋ ಪೂರ್ಣ ಎನಿಸಲಿಲ್ಲ.." ಎಂದು.
" ಪೂರ್ಣಮದಃ.. ಪೂರ್ಣಮಿದಂ..." ಶ್ಲೋಕದಂತೆ ಪೂರ್ಣ ಎಂಬುದು ಅನಂತತೆ. ಪೂರ್ಣಕ್ಕೆ ಪೂರ್ಣ ಸೇರಿಸಿದರೆ ಮತ್ತದು ಪೂರ್ಣವೇ, ಪೂರ್ಣದಿಂದ ಪೂರ್ಣ ತೆಗೆದರೆ ಅದೂ ಪೂರ್ಣವೇ... ಅದೇ ಇಂಗ್ಲಿಷಿನ infinity.
ದಾಂಪತ್ಯದ ಬಗೆಗಿನ ವಿಷಯಗಳು.. ಹಾಗೇ ಅಕ್ಷಯ ಪಾತ್ರೆ ಇದ್ದಂತೆ. ಮೊಗೆದಷ್ಟೂ ಕಮ್ಮಿಯಾಗದ.. ಮತ್ತೆ ತುಂಬಿಕೊಳ್ಳುವ ತರಹ. ಹಾಗಾಗಿ ನನ್ನ ಓದುಗ ಮಿತ್ರರ ಅಭಿಪ್ರಾಯವನ್ನು ಸಂಪೂರ್ಣ ಗೌರವಿಸಿ... ಪೂರ್ಣಮಾಡಲು ಯೋಚಿಸಿದೆ. ನನ್ನ ವೈಯುಕ್ತಿಕ ಅನುಭವ, ಆಪ್ತಸಮಾಲೋಚನೆಯ ಸಮಯ, ಹಾಗೂ ಒಡನಾಡಿದ ದಂಪತಿಗಳ ಅಭಿಪ್ರಾಯಗಳನ್ನು, ಮತ್ತೊಮ್ಮೆ ಮೆಲುಕು ಹಾಕಿದೆ. ಮತ್ತೆ ಲೇಖನದ ಶೀರ್ಷಿಕೆಯನ್ನು ಓದಿದಾಗ... ಸಾಂಗತ್ಯಕ್ಕೆ ಸೀಮಿತವಾದ ಬರಹವಾದ ಕಾರಣ ಕೊರತೆ ಇರಬಹುದು ಎಂದು ಗಮನಿಸಿ.. ಹೊಸ ಶೀರ್ಷಿಕೆ ಬರೆದೆ.. ದಾಂಪತ್ಯ - ವೈಪರೀತ್ಯ.. ಅದೇ ಈ ಲೇಖನ.
ಗಂಡ ಹೆಂಡತಿ ಬದುಕಿನ ಬಂಡಿಗೆ ಎರಡು ಚಕ್ರಗಳಿದ್ದಂತೆ. ಯಾವ ಚಕ್ರ ಹಾಳಾದರೂ ಬಂಡಿಯ ಓಟ ಕುಂಠಿತವಾಗುತ್ತದೆ. ಚಕ್ರ ಹಾಳಾಗಲು ನಾನಾ ಕಾರಣಗಳು...
ಅಹಮಿಕೆ, ಅನುಮಾನ, ಅಸಮಾಧಾನ, ಅತೃಪ್ತಿ, ಅಸೂಯೆ, ಅಗಲಿಕೆ, ತಾರತಮ್ಯ, ಸುಳ್ಳು, ಸ್ವತ್ವ / ಸ್ವಾಮಿತ್ವ (posessiveness)..... ಹೀಗೆ ನೂರಾರು.
ಹಣಕಾಸಿನ ವಿಚಾರದಲ್ಲಂತೂ ಗಂಡ ಹೆಂಡಿರು ಉತ್ತರ ಧ್ರುವ, ದಕ್ಷಿಣ ಧ್ರುವ. ಸಾಮಾನ್ಯವಾಗಿ ಗಂಡ, ಲೆಕ್ಕಾಚಾರಕ್ಕೆ ಒತ್ತು ಕೊಡುವವನು.. ಖರ್ಚು ಮಾಡಿದ್ದಕ್ಕೆ ಲೆಕ್ಕ ಇರಬೇಕು. ತಾನು ಕೊಟ್ಟ ಹಣಕ್ಕೆ ಲೆಕ್ಕ ಕೇಳಿದರೆ... ಬರುವ ಉತ್ತರ ಒಂದು ಸುನಾಮಿಯಂತೆ.." ಲೆಕ್ಕ ಕೇಳೋದಾದ್ರೆ ನನಗೆ ನೀವು ದುಡ್ಡೇ ಕೊಡಬೇಡಿ.. ಎಲ್ಲ ನೀವೇ ತಂದು ಹಾಕಿ ಮಾಡೋದಷ್ಟೇ ನನ್ ಕೆಲ್ಸ" ಎಂಬ ಮಾತು ಬಂದರೂ.. ಹಣಕ್ಕೆ ಬೇಡಿಕೆ ನಿಲ್ಲುವುದೇ ಇಲ್ಲ.
ಅಕಸ್ಮಾತ್ ಲೆಕ್ಕ ಕೊಟ್ಟರೂ.. ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಒಂದು ತರಕಾರಿ ಇಷ್ಟಕ್ಕೆ 500 ರೂಪಾಯಿಯ ಲೆಕ್ಕ. ಅಲ್ಲಿಗೆ ಮುಗೀತು.. ಮತ್ತೆ ಪ್ರಶ್ನೆ ಮಾಡುವ ಅಧಿಕಾರ ಇಲ್ಲವೇ ಇಲ್ಲ. ಒಂದು ಸಮಾಧಾನಕರ ಸಂಗತಿ ಎಂದರೆ ಬಹಳಷ್ಟು ಹೆಂಗಸರು, ಮನೆಯ ಮಹಾಲಕ್ಷ್ಮಿ... ಉಳಿಸಿದ್ದನ್ನು ಕಾಪಿಟ್ಟು ಆಪದ್ಧನವನ್ನಾಗಿ ಇಡುತ್ತಾರೆ.
ಇನ್ನು ಹೆಂಡತಿ ಸಂಪಾದನೆ ಮಾಡಿದರೆ / ತವರು ಮನೆಯಿಂದ ಬಂದಿದ್ದರೆ.. ಆ ದುಡ್ಡು ಅವಳದೇ ಸ್ವಂತ. ಗಂಡ ಅದರ ಬಗ್ಗೆ ಚಕಾರ ಎತ್ತುವಂತಿಲ್ಲ. ಆದರೆ ಗಂಡನ ದುಡ್ಡು ನಮ್ಮದು.. ನನ್ನ ದುಡ್ಡು ನನ್ನದು ಎನ್ನುವ ಹಕ್ಕಿನ ಪ್ರತಿಪಾದನೆ.
ತವರುಮನೆಯ ಬಗ್ಗೆ ಹೆಣ್ಣಿಗೆ ಹೆಮ್ಮೆ ಜಾಸ್ತಿ. ಕೆಲವು ಸಲ, ಈ ಹೆಮ್ಮೆಯ ಪ್ರದರ್ಶನ ಅತಿರೇಕವಾದಾಗ, ಅದರಲ್ಲೂ ಗಂಡನ ಮನೆಯ ವಿಷಯಗಳನ್ನು ಕೀಳಾಗಿ ತೋರ್ಪಡಿಸಿದಾಗ ಅಸಮಾಧಾನಗಳು ಆಗುವುದು ಉಂಟು. ಇದಕ್ಕೆ ಪ್ರತ್ಯುತ್ತರವಾಗಿ, ಹೆಣ್ಣಿನ ತವರು ಮನೆಯ ವಾಸ್ತವ ಅಥವಾ ಕಲ್ಪನೆಯ ಲೋಪದೋಷವನ್ನು ಬೊಟ್ಟು ಮಾಡಿ ತೋರಿಸಿದಾಗ ಅಸಮಾಧಾನ ಹೆಚ್ಚಾಗುವುದು ಉಂಟು.
ಹೆಣ್ಣು, ತನ್ನ ಗಂಡನಿಗೆ ಏನೂ ತಿಳಿಯಲ್ಲ, ತನ್ನಷ್ಟಕ್ಕೆ ತೋಚಿಕೊಂಡು ಏನನ್ನೂ ಮಾಡುವುದಿಲ್ಲ ಎಂಬ ಭಾವನೆ ಇಟ್ಟುಕೊಂಡಿರುತ್ತಾಳೆ. ಗಂಡ ಮಾಡಿದ ಕೆಲಸವನ್ನು ಹೆಂಡತಿ ಅಷ್ಟು ಸುಲಭವಾಗಿ ಒಪ್ಪಿಕೊಂಡಿದ್ದನ್ನು ನಾ ಕಾಣೆ. ಒಂದು ತರಕಾರಿ ತಂದರೂ ಸಹ, ಅದರ ಬಗ್ಗೆ ಮನ ಬಿಚ್ಚಿ ಮೆಚ್ಚುಗೆ ಸೂಚಿಸಿದ್ದು ಲಕ್ಷಕೊಂದು ಬಾರಿ ಇರಬಹುದೇನೋ. ಏನಾದರೂ ಕುಂದು - ಜಾಸ್ತಿ, ಕಡಿಮೆ, ಏನ್ ಮಾಡೋದು ಈ ತರಕಾರಿಲಿ, ಬಲ್ತೋಗಿದೆ, ಬಾಡಿ ಹೋಗಿದೆ, ಕೊಳಿತಾ ಇದೆ, ಏನು ತೋಚದೆ ಇದ್ರೆ.. ಇವತ್ತಿದನ್ನ ಮಾಡಲ್ಲ ಅನ್ನಕ್ಕೆ ಒಂದು ಧಾರ್ಮಿಕ ಕಾರಣ ಕೊಟ್ಟು ಮಾತು ಮುಕ್ತಾಯ.
ಈಚೆಗೆ ಯೂಟ್ಯೂಬ್ ನಲ್ಲಿ ನೋಡಿದ ಒಂದು ಘಟನೆ. ಗಂಡ ಹೆಂಡತಿ ಟೊಮ್ಯಾಟೊ ಕೊಳ್ಳುತ್ತಿರುತ್ತಾರೆ. ಗಂಡ ಕೊಟ್ಟ ಟೊಮ್ಯಾಟೊವನ್ನು ಹೆಂಡತಿ ಒಪ್ಪದೆ ಪಕ್ಕಕ್ಕಿಡುತ್ತಾಳೆ. ಆದರೆ ಹೆಂಡತಿಯೇ ಆರಿಸಿದ ಟೊಮೇಟೊವನ್ನು ಅವಳ ಬುಟ್ಟಿಯಿಂದ ತೆಗೆದುಕೊಟ್ಟಾಗ.. ಅದನ್ನೂ ಸರಿ ಇಲ್ಲವೆಂದು ಪಕ್ಕಕ್ಕಿಡುತ್ತಾಳೆ. ಇದು ಗಂಡಂದಿರ ಬಗ್ಗೆ ಇರುವ ಪೂರ್ವಾಗ್ರಹ . ಸತ್ಯ ತಾನೇ?
ಮುಂದುವರಿದ ಭಾಗವಾಗಿ ಬರುವ ಸಾಮಾನ್ಯ ದೂಷಣೆಗಳು...
ಒಂದು ಕಾಫಿ ಮಾಡಿಕೊಟ್ಟಿದ್ದು ಕಾಣೆ, ಒಂದು ಮೊಳ ಮಲ್ಲಿಗೆ ಹೂವು ತಂದಿದ್ದಿಲ್ಲ, ಒಂದು ಸೀರೆ ಅಥವಾ ಒಡವೆ ಕೊಡ್ಸಿದ್ದಿಲ್ಲ. ನನ್ನ ಹುಟ್ಟಿದ ಹಬ್ಬನಂತು ನೆನೆಸ್ಕೊಂಡಿದ್ದೇ ಇಲ್ಲ, ಅನಿರೀಕ್ಷಿತ ಉಡುಗೊರೆ ಇಲ್ಲ.. ಇಂಥ ದೂರುಗಳು ನೂರಾರು ಇರುತ್ತವೆ.
ಈ ವಿಷಯವಾಗಿ ಇನ್ನಷ್ಟು ಮಾತಾಡಿಸಿದರೆ ಬರುವ ಉತ್ತರ... ಕೊಡುತ್ತಾರೆ, ಕೇಳಬೇಕು ಕೆಲವು ಸಲ ಕಾಡಬೇಕು. ಇದೇ ವಿಚಾರನ ಗಂಡಿನ ಬಳಿ ಕೇಳಿದಾಗ " ಈ ದೂರು ಕೇಳಿ ಕೇಳಿ ಅಭ್ಯಾಸ ಆಗಿದೆ... ಅನಿರೀಕ್ಷಿತವಾಗಿ ನಾನೇ ಏನಾದರೂ ತಂದರೆ ಅದರ ಬಗ್ಗೆ ನೂರೆಂಟು ಕೊಂಕು ಮಾತಾಡಿ, ನನ್ನ ಕರ್ಕೊಂಡು ಹೋಗಿದ್ರೆ ನಾನೇ ಸೆಲೆಕ್ಟ್ ಮಾಡ್ತಿದ್ದೆ, ಅಂದಾಗ , ಅನಿರೀಕ್ಷಿತ ಅನ್ನೋ ಪದಕ್ಕೆ ಅರ್ಥ ಇದೆಯಾ?"
ಇದೇ ದಾಟಿಯಲ್ಲಿ ದೂರುವ ಗಂಡಸರು ಅಲ್ಲಲ್ಲಿ ಕಾಣುತ್ತಾರೆ.
ಬೀರುವಿನ ತುಂಬಾ ಸೀರೆ, ಬಟ್ಟೆಗಳು ತುಂಬಿದ್ದರೂ, ಎರಡು ವರ್ಷದ ಹಿಂದೆ ಹುಟ್ಟಿದ ಹಬ್ಬಕ್ಕೆ ಕೊಡಿಸಿದ್ದ ಸೀರೆ... ತಕ್ಕ ಕುಪ್ಪಸ ಹೊಲಿಸಿಲ್ಲ, ಎಂಬ ಕಾರಣಕ್ಕೆ ಉಟ್ಟಿಲ್ಲದಿದ್ದರೂ, ಆ ಸಮಯಕ್ಕೆ ಸರಿಯಾದ ಸೀರೆ ಇಲ್ಲ ಎಂದು ಗೊಣಗುವ ಅಭ್ಯಾಸ ಮಾತ್ರ ತಪ್ಪುವುದನ್ನು ಕಾಣೆ.
ಹೆಣ್ಣು ಸಾಮಾನ್ಯವಾಗಿ, ಏಳೇಳು ಜನ್ಮಕ್ಕೂ ಇದೇ ಗಂಡನೇ ಬೇಕು ಎಂದು ಹೇಳುವುದುಂಟು. ಕಾರಣ ಒಂದು ಜನ್ಮದಲ್ಲಿ ಸರಿ ದಾರಿಗೆ ತರಲಾಗದ ಗಂಡನನ್ನು ಉಳಿದ ಜನ್ಮದಲ್ಲಿ ಆದರೂ ಸರಿ ಮಾಡಬಹುದು ಎಂಬ ಆಶಾಭಾವ ಇರಬಹುದೇ?
ಯಾವ ಗಂಡೂ ಏಳು ಜನ್ಮದ ಹೆಂಡತಿಯ ಬಯಕೆಯನ್ನು ಪೂರೈಸುವ ಮಾತನಾಡಿದ್ದನ್ನು ನಾ ಕಾಣೆ. ಕರ್ಮಫಲ ಅದೇ ಇದ್ದರೆ ತಪ್ಪಿಸಿಕೊಳ್ಳಲಾಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಕೇಳಿದ್ದೇನೆ.
ಇನ್ನೊಂದು ಭಿನ್ನಾಭಿಪ್ರಾಯ ಕಂಡುಬರುವುದು... ಮನೆಗೆ ಬಂದ ನೆಂಟರಿಷ್ಟರನ್ನು ಆದರಿಸುವ ಬಗ್ಗೆ. ಗಂಡನ ಕಡೆಯವರು, ಹೆಂಡತಿಯ ಕಡೆಯವರ ಜೊತೆಯಲ್ಲಿ ವ್ಯವಹರಿಸುವಾಗ ತೋರುವ ವ್ಯತ್ಯಾಸಗಳು. ಸಮತಾಭಾವ ಹೊಂದಿರುವ ದಂಪತಿಗಳನ್ನೂ ಕಂಡಿದ್ದೇನೆ.
ಸಮಯಕ್ಕೊಂದು ಸುಳ್ಳು ಹೇಳುವುದು ವ್ಯಾವಹಾರಿಕವಾಗಿ ಜಾಣತನವಾದರೂ, ಗಂಡು ಸುಳ್ಳು ಹೇಳಿ ತುಂಬ ಸುಲಭವಾಗಿ ಸಿಕ್ಕಿಬೀಳುತ್ತಾನೆ. ಇದಕ್ಕೆ ಕಾರಣ ಗಂಡನ ದಡ್ಡತನವೋ ಅಥವಾ ಎಂಥ ಸುಳ್ಳನ್ನಾದರೂ ಭೇದಿಸುವ ವಿಶೇಷ ಪೊಲೀಸ್ ಗುಣ ಹೊಂದಿರುವ ಹೆಂಡತಿಯದೋ... ವಿಶ್ಲೇಷಣೆ ಕಷ್ಟ.
ಆದರೆ ಸುಳ್ಳನ್ನು ಲೀಲಾಜಾಲವಾಗಿ ಹೇಳುವ ಹೆಣ್ಣು, ಬಹು ಜಾಣತನದಿಂದ ಜೇಡರ ಬಲೆಯಂತೆ, ನಿಧಾನವಾಗಿ ಹೆಣೆಯುತ್ತಾಳೆ.
ಹೆಣ್ಣು ಗಂಡನನ್ನು ಎದುರಿಗೆ ಎಷ್ಟು ಹೀಯಾಳಿಸಿದರು... ಬೇರೆಯವರೊಂದಿಗೆ ಹೇಳುವಾಗ ಗಂಡನ ಬಣ್ಣನೆ ಕೊಂಚ ಅತಿರೇಕವೇ ಎನ್ನುವಷ್ಟು ಇರುತ್ತದೆ. ಅದಕ್ಕೆ ಈ ಕೆಳಗಿನ ಸಂಸ್ಕೃತ ಶ್ಲೋಕ ಒಂದು ಹಾಸ್ಯಲೇಪಿತ ಉದಾಹರಣೆ.
ಅತಿ ಚತುರೋ ಮಮ ಭರ್ತಾ
ಸ್ವಯಮೇವ ನ ವಾಚತಿಸ್ಯನ್ಯ ಲಿಖಿತಮ್
ಅಯಂ ಅಪರೋ ಅಸ್ಯ ವಿಶೇಷಃ..
ಪರಮಪಿ ಚತುರೋ ಮಮ ಭರ್ತ ಯತ್
ಸ್ವಯಮಪಿ ಲಿಖಿತಂ ಸ್ವಯಂ ನ ವಾಚಯತಿ.
ಇಬ್ಬರು ಹೆಂಗಸರು ತಮ್ಮ ಗಂಡನ ಓದುವ ಕಲೆಯ ಬಗ್ಗೆ ಮಾತನಾಡುತ್ತಾ ... ಮೊದಲನೆಯಾಕೆ " ನನ್ನ ಗಂಡ ತುಂಬಾ ಚತುರ... ಬೇರೆಯವರು ಬರೆದದ್ದನ್ನು ಓದಲಾರ" ಎಂಬ ಮಾತಿಗೆ ಎರಡನೆಯ ಹೆಣ್ಣಿನ ಉತ್ತರ " ಅದರಲ್ಲಿ ಏನಿದೆ ಅಂತ ವಿಶೇಷ.. ನನ್ನ ಗಂಡ ಇನ್ನೂ ಹೆಚ್ಚು ಚತುರ... ಅವನು ಬರೆದಿದ್ದನ್ನೇ ಅವನು ಓದಲಾರ". ಹೊಗಳಿಕೆ ಶುರುವಾದಾಗ ( ಕೊಚ್ಚಿಕೊಳ್ಳುವಾಗ ಎನ್ನಲೇ) ಅದು ವ್ಯತಿರಿಕ್ತ ಅಭಿಪ್ರಾಯವನ್ನು ಕೊಡುತ್ತಿದೆ ಎಂಬುದು ಗಮನಕ್ಕೆ ಬಾರದ ಸಂಗತಿಯಾಗುತ್ತದೆ.
ಗಂಡು ಹೊಗಳುತ್ತಾನೆ... ಆದರೆ ಬೇರೆ ಹೆಣ್ಣಿನ ರೂಪವನ್ನು, ಮಾಡಿದ ಅಡಿಗೆ ಯನ್ನು, ಬುದ್ಧಿವಂತಿಕೆಯನ್ನು, ಕೈಚಳಕವನ್ನು.. ಹೀಗೆ ಸಾಧ್ಯವಾದುದೆಲ್ಲವನ್ನು. ಇದನ್ನು ಕೇಳಿದ ಹೆಣ್ಣಿಗೆ, ಮೂಗಿನ ತುದಿಯಲ್ಲೇ ಕೋಪ. ಇದು ಅಸೂಯೆಯ ಪ್ರತೀಕ.." ನಿಮಗೆ ಎಷ್ಟು ಮಾಡಿದರೂ ಅಷ್ಟೇ.. ಬೇರೆಯವರದೇ ಇಷ್ಟ"..." ನಿಮ್ಮ ಮುಖಕ್ಕೆ ನಾನ್ ಸಿಕ್ಕಿದ್ದೇ ಹೆಚ್ಚು.. ಇಲ್ಲದೇ ಇದ್ರೆ ಯಾರು ಮೂಸುತಿದ್ರೂ.. " ಅನ್ನೋ ಮೂದಲಿಕೆ ಬೇರೆ. ಇದಕ್ಕೇ ಇರಬೇಕು
Jeolousy thy name is woman.. ಹೆಣ್ಣೇ ನೀ ಅಸೂಯೆಯ ಮೂರ್ತ ರೂಪ ಎಂಬ ನಾಣ್ಣುಡಿ ಇರುವುದು.
ಹಾಗಂತ ಗಂಡಿಗೆ ಅಸೂಯೆ ಇಲ್ಲವಾ... ಖಂಡಿತ ಇದೆ, ಆದರೆ ಅದರ ಪ್ರದರ್ಶನ ಕಡಿಮೆ ಅಷ್ಟೆ.
" ಮನೆಯಲ್ಲಿ ಇರ್ತಿಯ..ಹೇಳಿದ ಸಣ್ಣ ಕೆಲಸ ಮಾಡಕ್ಕಾಗಲ್ವಾ.. ಬೇರೆ ಏನ್ ಕೆಲಸ ಇರುತ್ತೆ" ಎಂದು ಹೇಳುವ ಗಂಡಸಿನ ಮಾತನ್ನು ನಾನು ಸುತರಾಂ ಒಪ್ಪಲಾರೆ. ಒಂದು ದಿನ ಮನೆಯ ಕೆಲಸವನ್ನು ಒಂಟಿಯಾಗಿ ಗಂಡಸು ನಿರ್ವಹಿಸಿದ್ದರೆ.. ಅದರ ಕಷ್ಟ ಗೊತ್ತಾಗಿ.. ಈ ಮಾತನ್ನು ಎಂದಿಗೂ ಆಡಲಾರ.
ಹೆಣ್ಣಿನ ಇನ್ನೊಂದು ವಿಶೇಷ ಗುಣ.. ಗಂಡನ ತಪ್ಪನ್ನು ಎತ್ತಿ ಹಿಡಿಯುವುದು. ಇಲ್ಲಿ ತಪ್ಪು ಎನ್ನುವುದು ನಿರ್ಧಾರವಾಗುವುದು ಅವಳ ಮಾನದಂಡದಂತೆ. ಯಾವುದೋ ಒಂದು ವಿಷ ಗಳಿಗೆಯಲ್ಲಿ ಗಂಡು ಹೆಣ್ಣು ಮಾಡಿದ್ದು ಸರಿ ಇಲ್ಲ (ಗಮನಿಸಿ ತಪ್ಪು ಎಂದು ಹೇಳಿಲ್ಲ) ಎಂದ ನಂತರ, ಮುಂದಿನ ಕೆಲವು ದಿನಗಳು ಗಂಡ ಮಾಡಿದ ಸಣ್ಣಪುಟ್ಟ ತಪ್ಪುಗಳನ್ನೂ ಅವನ ಮುಖಕ್ಕೆ ರಾಚುತ್ತಾಳೆ. ಜೊತೆಗೆ ಭೇಟಿಯಾದ ಮೊದಲ ದಿನದಿಂದ ಮಾಡಿದ ತಪ್ಪುಗಳನ್ನು ತನ್ನ ನೆನಪಿನ ಬುತ್ತಿಯಿಂದ ತೆಗೆದು ತೋರಿಸುತ್ತಾಳೆ. ಗಂಡ ಮಾಡಿದ ತಪ್ಪನ್ನು ಹೆಂಡತಿ ಮಾಡಿದರೆ.. ಅದಕ್ಕೆ ಅವಳದೇ ಧಾಟಿಯ ಕುತರ್ಕದ ಮೂಲಕ ತನ್ನ ತಪ್ಪನ್ನು ಸರಿ ಎಂದು ಸಮರ್ಥಿಸಿಕೊಳ್ಳಬಲ್ಲಳು. ಆಕೆ ತಪ್ಪು ಮಾಡಲು ಸಾಧ್ಯವೇ ಇಲ್ಲ. ಅವಳು ಪರಿಪೂರ್ಣಳು.
ಸ್ವತ್ವ /ಸ್ವಾಮಿತ್ವ (posessiveness) ಇದೊಂದು ಬಹುದೊಡ್ಡ ಪಿಡುಗು. ಸಾಮಾನ್ಯವಾಗಿ ಗಂಡಿಗೆ ಹೆಣ್ಣು ತನ್ನವಳು, ತನ್ನವಳೇ ಆಗಿರಬೇಕು ಎಂಬ ಅಧಿಕಾರಯುತ ಭಾವ, ಯಾವ ಅಧಿಕಾರವೂ ಇಲ್ಲದಿದ್ದರೂ. ಆದರೆ ಹೆಣ್ಣಿಗೆ ಇದಂತೂ ಭಾವನಾತ್ಮಕ ವಿಷಯ. ಆಂತರ್ಯದಲ್ಲಿ... ಅಭದ್ರತೆಯ ಭಾವ ಇರುವುದನ್ನು ಬಹಳ ಹೆಂಗಸರಲ್ಲಿ ಕಂಡಿದ್ದೇನೆ. ಗಮನವೆಲ್ಲ ತನ್ನ ಕಡೆಯೇ ಇರಬೇಕು ಎಂಬ ಆಸೆ, ಎಲ್ಲಿ ಕಳೆದು ಹೋಗುತ್ತಾನೋ.. ಅಥವಾ ನನ್ನಿಂದ ದೂರ ಆಗುತ್ತಾನೋ ಎಂದೇ ಯೋಚಿಸುವುದು ಜಾಸ್ತಿ. ಹೇಗಾದರೂ ಮಾಡಿ, ಹಿಡಿದಿಟ್ಟುಕೊಳ್ಳಬೇಕು ಎನ್ನುವ ರೀತಿಯಲ್ಲಿ ಎಲ್ಲ ಪ್ರಯತ್ನಗಳು. ಬಹುಶಃ ಇದಕ್ಕೆ ಕಾರಣ ಗಂಡು ತುಂಬ ಸುಲಭವಾಗಿ ಇನ್ನೊಂದು ಹೆಣ್ಣಿನ ಜಾಲಕ್ಕೆ ಬೀಳುತ್ತಾನೆ ಎನ್ನುವ ಪ್ರತೀತಿ.. ಹಿಂದಿನಿಂದ ಬಂದಿರುವುದು. ಹಿಂದಿಯ ಪತಿ ಪತ್ನಿ ಔರ್ ಓ ಹಾಗೂ ಕನ್ನಡದ ರಾಮ ಶಾಮ ಭಾಮ ಚಿತ್ರಗಳು ಇದಕ್ಕೆ ಪೂರಕ.
ಹೆಣ್ಣು ಗಂಡಿನ ಮಧ್ಯೆ ಬೆಸೆಯುವ / ಬೆಳೆಯುವ ಸಂಬಂಧಗಳು.. ಅದು ಯಾವುದೇ ಮಟ್ಟದ್ದಿರಲಿ... ಅದು ಪೂರ್ವ ನಿರ್ಧಾರಿತ, ಋಣಾನುಬಂಧ ಇದ್ದರೆ ಮಾತ್ರ ಎಂಬ ನಿರ್ಧಾರಕ್ಕೆ ನಾನು ಬಂದಿದ್ದೇನೆ. ಇದಕ್ಕೆ ಕಾರಣ, ನನ್ನ ಗಮನಕ್ಕೆ ಬಂದ, ನಿಷ್ಕಲ್ಮಶ ಭಾವದ ಸಂಬಂಧಗಳು, ಜೊತೆ ಜೊತೆಗೆ ಅನೈತಿಕ ಎನ್ನಬಹುದಾದ ಸಂಬಂಧಗಳು.. ಮೇಲ್ನೋಟಕ್ಕೆ ಕಾಣಿಸದ, ಸರಸ್ವತಿ ನದಿಯಂತೆ ಗುಪ್ತಗಾಮಿನಿ, ಯಾರಿಗೂ ಕಾಣದ ಹಾಗೆ ಇರುವಂತದ್ದು. ಮದುವೆಯಾದ ಗಂಡ ಹೆಂಡಿರು... ಗಂಡ ಹೆಂಡಿರಂತೆ ಬಾಳದಿರುವುದನ್ನೂ... ಮದುವೆಯಾಗದೆ ಇರುವ ಜೋಡಿ, ಗಂಡ ಹೆಂಡಿರಂತೆ ಬಾಳುತ್ತಿರುವುದನ್ನು ಕಂಡಿದ್ದೇನೆ. ಇವರುಗಳ ಜೊತೆ ಮಾತನಾಡಿದಾಗ, ಅವರಲ್ಲಿರುವ ಭಾಂದವ್ಯಗಳು ಗಟ್ಟಿಯಾಗಿ ತೋರುತ್ತವೆ... ಸಮಾಜದ ದೃಷ್ಟಿಯಲ್ಲಿ ಸರಿ ಅಲ್ಲದಿದ್ದರೂ. ಇದೊಂದು ತುಂಬಾ ಕ್ಲಿಷ್ಟವಾದ ವಿಷಯ. ಇದಮಿತ್ಥಂ ಎಂದು ಹೇಳಲಾಗದು. ಹೊರ ನೋಟಕ್ಕೆ ಸಮಾಜದ ಒಪ್ಪಿಗೆ ಇಲ್ಲದಿದ್ದರೂ... ಸಮಾಜದ ಭಾಗವಾಗಿ ಈ ಸಂಬಂಧಗಳು ಇರುವುದಂತೂ ಸೂರ್ಯ ಚಂದ್ರರಷ್ಟೇ ಸತ್ಯ.
ಹೆಂಡತಿಯ ಮೇಲೆ, ಕೈ ಮಾಡುವುದು ಗಂಡ ಮಾಡುವ ಸಾಮಾನ್ಯ ತಪ್ಪು. (ಇದು ಎಲ್ಲ ಸ್ತರದ ದಂಪತಿಗಳ ಮಧ್ಯೆ ಇರುವುದಿಲ್ಲವಾದರೂ) ಇದು ದೌರ್ಜನ್ಯ.. ಕಾನೂನಿನಂತೆ ಅಪರಾಧ. ಅದೇ ಹೆಣ್ಣು ಈ ದೌರ್ಜನ್ಯವನ್ನು ಮಾಡಿದರೆ... ಪಾಪ ಗಂಡ ಅದನ್ನು ಬಾಯಿ ಬಿಟ್ಟು ಹೇಳಲಾರ. ಸಮಾಜವು ಅವನನ್ನು ದಂ ಇಲ್ಲದ ಪತಿ ಎಂದುಬಿಡುತ್ತಾರೆ ಅನ್ನುವ ಅವಮಾನಕರ ಭಯ.
ದೈಹಿಕ ಸುಖ ದಾಂಪತ್ಯದ ಒಂದು ಬಹು ಮುಖ್ಯ ಅಂಗ. ಯಾವುದೇ ಕಾರಣದಿಂದ ಇಲ್ಲಿ ಬಿರುಕು ಮೂಡಿದರೆ... ಅದರ ನೇರ ಪರಿಣಾಮ ಒಟ್ಟು ಸಂಬಂಧದ ಮೇಲೆ ಆಗುತ್ತದೆ, ಎನ್ನುವುದು ನನ್ನ ಆಪ್ತ ಸಮಾಲೋಚನೆಯ ಸಮಯದ ಅನುಭವ.
ಈಗಿನ ಟೆಕ್ಕಿ (software ಪೀಳಿಗೆ) ದಂಪತಿಗಳಲ್ಲಂತೂ ಇದು ಬಹುದೊಡ್ಡ ಸಮಸ್ಯೆ. ಇಬ್ಬರಿಗೂ ತಮ್ಮ ಸಂಪಾದನೆ, ತಮ್ಮ ವೃತ್ತಿಯಲ್ಲಿನ ಸಾಧನೆಯ ಬಗ್ಗೆ ಹೆಮ್ಮೆ, ಜೊತೆಗೆ ವೃತ್ತಿಯಲ್ಲಿ ಮುನ್ನಡೆಯುವ ಯೋಜನೆ... ಇವುಗಳ ಪ್ರಭಾವದಿಂದ ನಾನೇನು ಕಡಿಮೆ ಇಲ್ಲ ಎಂಬ ಭಾವನೆ. ಇಂಥ ಒಂದು ಜೋಡಿಯ ಜೊತೆ ಮಾತನಾಡುವಾಗ, ಹೆಣ್ಣು ವ್ಯಕ್ತಪಡಿಸಿದ "he has no interest in sex...I am disappointed" ಎಂಬ ಮಾತು ನನಗೆ ಅರಗಿಸಿ ಕೊಳ್ಳಲು ಕಷ್ಟವಾಯಿತು. ಸಾಮಾನ್ಯವಾಗಿ ಹೆಣ್ಣು ಈ ವಿಚಾರದಲ್ಲಿ ಮುಕ್ತವಾಗಿ ಮಾತನಾಡುವುದು ವಿರಳ. ಇದಕ್ಕೆ ಗಂಡು ಕೊಟ್ಟ ಉತ್ತರ..." after a day of hectic work, i am exhausted. I am also interested, I indulge in foreplay"
ಬಾಣದಂತೆ ಬಂದ ಹೆಣ್ಣಿನ ಉತ್ತರ" just foreplay is not sex. something more to it is there" ಇದು ಅವರ ದಾಂಪತ್ಯದ ವೈಪರೀತ್ಯ.
sex is a stress buster and a best bond among couples ಎಂದು ಹೇಳಿ ಸಾಮರಸ್ಯ ಮೂಡಲು ಸಹಾಯ ಮಾಡಿದ್ದು.
ಎತ್ತು ಏರಿಗೆ ಎಳೆದರೆ ಕೋಣ ನೀರಿಗೆಳೆಯಿತು ಎನ್ನುವ ನಾಣ್ಣುಡಿ ದಾಂಪತ್ಯಕ್ಕೆ ಸೂಕ್ತವಾಗಿ ಅನ್ವಯಿಸುತ್ತದೆ. ಆ ಕ್ಷಣಕ್ಕೆ ಶಕ್ತಿಯುತವಾದದ್ದು ನಡೆಯುತ್ತದೆ. ಅದನ್ನು ಹೊರತುಪಡಿಸಿ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡು... ಒಂದು ನಿರ್ಧಾರಕ್ಕೆ ಬಂದಾಗ ದಾಂಪತ್ಯದಲ್ಲಿನ ವೈಪರೀತ್ಯ ಕಡಿಮೆಯಾಗಿ ಸಾಂಗತ್ಯ ಮೂಡುವಲ್ಲಿ ಸಹಾಯ ಮಾಡುತ್ತದೆ..
ಇದು ಕಷ್ಟವಾದರೂ ಸಾಧ್ಯ ಅಲ್ಲವೇ?
ಅಕ್ಷಯ ಪಾತ್ರೆಯಲ್ಲಿ ನನ್ನ ಶಕ್ತಿಗೆ ನಿಲುಕಿದಷ್ಟು ಮೊಗೆದಿದ್ದೇನೆ. ಬಿಟ್ಟಿರುವುದೇ ಜಾಸ್ತಿ ಎನ್ನುವುದು ಖಾತ್ರಿ. ಇದು ಯಾರನ್ನು ಕುರಿತೂ ಬರೆದದ್ದಲ್ಲ. ಎಲ್ಗ ಗಂಡ ಹೆಂಡತಿಯರಲ್ಲಿ ವಿನಮ್ರ ಕೋರಿಕೆ....ಕ್ಷಮೆ ಇರಲಿ.
ಬರೀ ಅವರಿವರ ಬಗ್ಗೆ ಎತ್ತಿ ಆಡಿಕೊಂಡಿದ್ದು ಆಯ್ತು.. ನಿಮ್ಮ ಬಗ್ಗೆ ಸ್ವಲ್ಪ ಯೋಚಿಸಿ, (ನನ್ನಲ್ಲೂ ಸಾಕಷ್ಟು ತಿಕ್ಕಲುತನಗಳು ಇವೆ ಅನ್ನುವುದು ಕಹಿಯಾದ ಸತ್ಯ) ಅಂತ, ನನ್ನ ಹೆಂಡತಿ ದೂಷಿಸೋಕೆ ಮುಂಚೆ ಇಲ್ಲಿಗೆ ಸಾಕು ಮಾಡ್ತೀನಿ..
ನಮಸ್ಕಾರ....
ಡಿ ಸಿ ರಂಗನಾಥ ರಾವ್
9741128413

Atiamogha chikkappa
ReplyDeleteಹೇಳಬೇಕಾದುದನ್ನೆಲ್ಲ ಎಲ್ಲಾ ಕೋನಗಳಿಂದಲೂ ಹೇಳಿದ್ದೀರಿ. ಇದು ಎಲ್ಲರ ಜೀವನಕ್ಕೂ ಹಿಡಿದ ಕನ್ನಡಿಯಾಗಿದೆ. ಅವರವರ ಕನ್ನಡಿಯಲ್ಲಿ ಅವರವರ ಪ್ರತಿರೂಪ ಕಾಣುತ್ತದೆ.
ReplyDeleteದಾಂಪತ್ಯ ಜೀವನ ಒಂದು ಹೊಂದಾಣಿಕೆ ಅಷ್ಟೇ. ಅಲ್ಲಿ ನಮ್ಮ ಇಷ್ಟ ಕಷ್ಟಕ್ಕೇ ಆಸ್ಪದವಿಲ್ಲ ಉತ್ತಮ ಗಂಡ, ಹೆಂಡತಿ ಅಂತ ಯಾರೂ ಇರುವುದೇ ಇಲ್ಲ. ಇರುವುದನ್ನು ಒಪ್ಪಿಕೊಂಡು ಬಾಳಬೇಕಷ್ಟೆ.
ಇಂದಿನ ಜೀವನದಲ್ಲಿ ಸಹಬಾಳ್ವೆ ಕಷ್ಟಸಾಧ್ಯ.ಸುಮ್ಮನೆ ದಿನ ಕಳೆಯಬೇಕಷ್ಟೇ.
ಗುರುಪ್ರಸನ್ನ
ಚಿಂತಾಮಣಿ