Posts

ಜೀವನ- ಉತ್ಸಾಹ- ಉತ್ಸವ

Image
  ಜೀವನ- ಉತ್ಸಾಹ- ಉತ್ಸವ ಹೋದ   ಲೇಖನದಲ್ಲಿ ಹೇಳಿದಂತೆ... ಜೀವನದ ವಿಷಯಗಳ ಬಗ್ಗೆ ಬರೆಯಲು ಯೋಚಿಸುತ್ತಿದ್ದಾಗ ಕಣ್ಣಿಗೆ ಬಿದ್ದದ್ದೆ, ನನ್ನ ಯುವ ಸ್ನೇಹಿತ ಮಣಿಕಂಠ facebook ನಲ್ಲಿ ಬರೆದಿದ್ದ ಒಂದು ಲೇಖನ. ಮಣಿಕಂಠನಿಗೆ ಮದುವೆಯಾಗಿ ಒಂದು ವರ್ಷ ಆದ ಸಂದರ್ಭದಲ್ಲಿ ತನ್ನ ಮಡದಿಗೆ ಬರೆದ ಪತ್ರರೂಪದ ಲೇಖನ. ಅದು ತನ್ನ ಮಡದಿಗೆ ಬರೆದದ್ದಾದರೂ.. ಪತ್ರವು ಬಹಿರಂಗ ರೂಪದಲ್ಲಿ ಇತ್ತು. ಪತ್ರವೂ ಭಾವುಕತೆಯಿಂದ ಕೂಡಿತ್ತು... ಅಲ್ಲಿ ಮದುವೆಯ ಮುಂಚಿನ ಮತ್ತು ನಂತರದ ಸುಂದರ ಕ್ಷಣಗಳು, ಮದುವೆಯ ಸಂಭ್ರಮ, ಕಾರ್ಯನಿಮಿತ್ತ ದೂರವಿರಬೇಕಾದಂತ ಸಮಯದ ಅಗಲಿಕೆ (ವಿರಹ ಎನ್ನಲೇ) ಇದರ ಮಧ್ಯೆ ಮುದ್ದು ಕಂದನ ಆಗಮನದ ಮುನ್ಸೂಚನೆಯ ಸಿಹಿ ಸುದ್ದಿ.... ಅದರ ಜೊತೆ ಜೊತೆಗೆ ಮಗುವನ್ನು ಪಡೆಯಲು ತಾಯಿ ಪಡಬೇಕಾದಂತಹ ನೋವು, ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನ ಹೀಗೆ ಸಾಕಷ್ಟು ವಿಷಯಗಳ ಚಿಂತನ ಮಂಥನ. ಜೀವನವನ್ನು ಉತ್ಸಾಹದಿಂದ ನೋಡಿದ,  ಸಂಭ್ರಮದಿಂದ ಅನುಭವಿಸಿದ ಮನದಾಳದ ಮಾತುಗಳು. ಅದರಲ್ಲೂ ಮಗನ ಆಗಮನ ಸಂಭ್ರಮವನ್ನು ಇಮ್ಮಡಿಸಿತ್ತು ಎಂದು ನನ್ನ ಅನಿಸಿಕೆ. ಓದಿದ ನಂತರ... ಜೀವನವನ್ನು ಉತ್ಸಾಹದಿಂದ..ಉತ್ಸವದಂತೆ ಆಚರಿಸುವ, ಸಂಭ್ರಮಿಸುವ ಕ್ಷಣಗಳನ್ನು, ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳನ್ನು  ನೆನಪಿನಿಂದ ಹೆಕ್ಕಿ  ತೆಗೆಯುವ ಮನಸಾಯಿತು... ಇದೋ ನಿಮ್ಮ ಮುಂದೆ ಆ ಮಧುರ ನೆನಪುಗಳು. ಉತ್ಸವ ಎಂದ ಕ್ಷಣ ನನ್ನ ನೆನಪಿಗ...

ದಯಾ ಮರಣ - ಇಚ್ಛಾ ಮರಣ

Image
ದಯಾ ಮರಣ - ಇಚ್ಛಾ ಮರಣ ಜಾತಸ್ಯ ಮರಣಂ ಧ್ರುವಂ... ಹುಟ್ಟಿದವರೆಲ್ಲ ಸಾಯಲೇಬೇಕು... ಸಾವು ಖಚಿತ ... ಆದರೆ ಸಾಯಲು ಇಚ್ಚಿಸುವವರು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಎಂದು ಹೇಳಬಹುದು. "ನಾನು ಸಾಯಕ್ಕೆ ರೆಡಿ" ಎಂದು ಹೇಳುವ ಬಹಳಷ್ಟು ಮಂದಿಯನ್ನು ನೋಡಿದ್ದೇನೆ... ಆದರೆ ಅವರ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸವಾದರೂ ಡಾಕ್ಟರ್ ಬಳಿ ಓಡಿ ಹೋಗುವುದನ್ನೂ ನಾನು ನೋಡಿದ್ದೇನೆ.  ಕೆಲವರ ಆರೋಗ್ಯ ಹದಗೆಟ್ಟು... ಯಾವ ರೀತಿಯ ಸುಧಾರಣೆಯೂ ಸಾಧ್ಯವಿಲ್ಲವೆಂದು ತಿಳಿದಿದ್ದರೂ... ಅವರು ಪಡುತ್ತಿರುವ ಕಷ್ಟ, ನೋವು ಸಹಿಸಲು ಅಸಾಧ್ಯ ವಾದರೂ... ಅವರ ಕ್ಷಣ ಕ್ಷಣದ ಬೇಡಿಕೆ ಸಾವೇ ಆದರೂ... ಆ ಭಾಗ್ಯ ಅವರಿಗಿಲ್ಲ. ಇದರ ಇನ್ನೊಂದು ಮುಖ... ನರಳುವವರದು ಒಂದು ಪಾಡಾದರೆ ಅವರನ್ನು ನೋಡಿಕೊಳ್ಳುವ  ಮನೆಯ ಜನರ ಕಷ್ಟ ಹೇಳತೀರದು. ಈ ಸ್ಥಿತಿ ಬಹಳ ಕಾಲ ಎಳೆದಷ್ಟು... ಮನೆ ಮಂದಿಯ ಸಹನಾ ಶಕ್ತಿಗೆ ಸವಾಲೇ ಸರಿ. ಇದು ಮನೆಯವರ ದೈಹಿಕ ಶ್ರಮ, ಮಾನಸಿಕ ಒತ್ತಡ, ಹಣಕಾಸಿನ ತೊಂದರೆ ಎಲ್ಲವೂ ಒಟ್ಟಿಗೆ ತೊಡರಿಕೊಂಡು ಹಣ್ಣು ಮಾಡುವುದನ್ನು ಕಂಡಿದ್ದೇನೆ. "ಎಷ್ಟು ದಿನ ಈ ಜಂಜಾಟ.. ಇದಕ್ಕೆ ಕೊನೆಯೇ ಇಲ್ಲವೇ... ಸಾಕಾಗಿದೆ" ಎಂದು  ಹೇಳಿದುದನ್ನು ಕೇಳಿದ್ದೇನೆ. ಅಷ್ಟೇಕೆ, ನನ್ನಪ್ಪ 109ನೆಯ ವಯಸ್ಸಿನ ತನಕ ಇದ್ದವರು, ಆರೋಗ್ಯವಾದ ಸುಖ ಜೀವನವನ್ನು ನಡೆಸಿದವರು... ಕೊನೆಯ ದಿನಗಳ ಅವರ ಕಣ್ಣೋಟದಲ್ಲಿದ್ದ ದೈನ್ಯತೆಯನ್ನು ಕಂಡ ನಾನು ಎಷ್ಟೋ ಸಲ ದೇವರಲ್ಲ...

ಕೊನೆಯ ಆಸೆ - Last wish

Image
  ಕೊನೆಯ ಆಸೆ - Last wish (will) ನನ್ನ ಬ್ಲಾಗ್  ಲೇಖನ “ನನಸಾಗದ ಕನಸುಗಳು.. ಕೈಗೂಡದ ಆಸೆಗಳು” ಓದಿದ ಶ್ರೀಮಾನ್ ಗುಂಡೂರಾಯರ ಪ್ರತಿಕ್ರಿಯೆ ಕೆಳಗಿನಂತಿತ್ತು: ಕೆಲ ದಿನಗಳ ನಂತರ ಮತ್ತೊಮ್ಮೆ ನಾ ಬರೆದ ಲೇಖನವನ್ನು... ನಾನೇ ಓದಿದೆ.. ಅಮ್ಮನ ಬಗ್ಗೆ ಬರೆದದ್ದನ್ನು ಬಿಟ್ಟರೆ... ಭಾವವನ್ನು ಪ್ರಚೋದಿಸುವ ಯಾವ ಅಂಶವು ಬೇರೆಲ್ಲೂ ನನಗೆ ಕಾಣಲಿಲ್ಲ.. ಅಂದಿನ ಕಾಲಕ್ಕೆ ಕೆಲವು ವಿಚಾರದಲ್ಲಿ ನಿರಾಶೆಯಾಗಿದ್ದರೂ... ಕಾಲಕ್ರಮೇಣ ವಸ್ತು ಸ್ಥಿತಿಯನ್ನು ಒಪ್ಪಿಕೊಂಡದ್ದರಿಂದ ನಿರ್ಲಿಪ್ತ ಭಾವನೆ ಇತ್ತು. ಇನ್ನು ಕೆಲವೊಂದು ತಿಕ್ಕಲುತನಗಳು.. ಯಾವ ಭಾವ ಹೊಮ್ಮಲು ಸಾಧ್ಯ ಇತ್ತು? ಲೇಖನ ಬರೆದ ಆಗಿನ ಭಾವನೆಗಳು ಮಾತ್ರ ಅಲ್ಲಿ ಹೊರ ಹೊಮ್ಮಿದೆ.  ಗುಂಡೂರಾಯರ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಗೌರವವಿದೆ.. ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ಕೊಡಬಲ್ಲೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ನಮನಗಳು ಸರ್. ಇನ್ನು ಎರಡನೆಯ ಭಾಗಕ್ಕೆ ಬಂದಾಗ..  ಇದೇ ಶೀರ್ಷಿಕೆಯಲ್ಲಿ ಎರಡನೇ ಪ್ರಬಂಧ  ಬರೆಯುವ ಸಲಹೆ. ಇದು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತು. “once more ಎಂದರೆ ಹಾಡುವುದು ಪಾತ್ರದಾರನ ಮರ್ಜಿ" ಎಂದು ಪ್ರಕಟಿಸಿದ್ದ ನಾಟಕದ ಕರಪತ್ರ... ಶಹಾಬಾದಿನಲ್ಲಿ ಓದಿದ್ದು ನೆನಪಿಗೆ ಬಂದು.. ಆ ಸಾಲನ್ನೇ ಉಪಯೋಗಿಸಿ ಎರಡನೇ ಪ್ರಬಂಧವನ್ನು ಬರೆಯಲು ತಪ್ಪಿಸಿಕೊಳ್ಳೋಣವೇ ಎಂದು ಯೋಚಿಸಿದ್ದು ಉಂಟು. ಹಾಗೆ ಮಾಡಲು ಮನಸ...

ಜೀವನದ ಸಹ ಪ್ರಯಾಣಿಕರು

Image
ಸಾವಿನ ಚಿಂತನೆಯ ಬಳಿಕ ಜೀವನದ ಬಗ್ಗೆ ಮುಖ ಮಾಡುವುದು ಅನಿವಾರ್ಯ... ಅಪೇಕ್ಷಣೀಯ  ಸಹ. ಆ ಗುಂಗಿನಲ್ಲಿ.. ಸತ್ತ ಹಿರಿಯರು ಹಾಗೂ ಸಮಕಾಲೀನರ ನೆನಪುಗಳೇ ಒಂದರ ಹಿಂದೆ ಒಂದು ಓಡುತ್ತಿದ್ದವು.. ಅದನ್ನು ಹತೋಟಿಗೆ ತರಲು ಹೆಣಗಾಡುತ್ತಿದ್ದಾಗ, ಪ್ರಯತ್ನಪೂರ್ವಕವಾಗಿ ನೆನೆಸಿಕೊಂಡದ್ದು ಬದುಕಿರುವ ವ್ಯಕ್ತಿಗಳನ್ನು... ಜೊತೆ ಜೊತೆಗೆ ಬಂದದ್ದು ನನ್ನ ಜೀವನದ ಪಯಣದಲ್ಲಿ ಇಣುಕಿ ಹೋದ ಕೆಲ ವ್ಯಕ್ತಿಗಳ ನೆನಪು. ಅವರ ಜೊತೆ ಕಳೆದ ಕ್ಷಣಗಳು ಕೆಲವೇ ಆದರೂ.. ನನ್ನ ಮನಸಿನಲ್ಲಿ  ಅಚ್ಚಳಿಯದೆ ಉಳಿದಿರುವ  ಅವರುಗಳ ನೆನಪು ಬಂತು. ಇಲ್ಲಿದೆ ಅಪರೂಪದ ವ್ಯಕ್ತಿಗಳ ಪರಿಚಯ... . ಚನ್ನಬಸಪ್ಪ: ನನ್ನೂರು ದೊಡ್ಡಜಾಲ ಬಿಟ್ಟು ಬೆಂಗಳೂರಿಗೆ ಬಂದು... ರಾಷ್ಟ್ರೀಯ ವಿದ್ಯಾಲಯ ಹೈಸ್ಕೂಲಿಗೆ ಸೇರಿದ ಹೊಸದು. ವಾತಾವರಣವೂ ಹೊಸದು, ಜನಗಳೂ ಹೊಸಬರು.  "ಢಣ ಢಣ ಢಣಾ" ಎಂದು ಶಬ್ದ ಬರುತ್ತಿದ್ದ ಶಾಲೆಯ ಗಂಟೆಯ ಪರಿಚಯವಿದ್ದ ನನಗೆ  "ಡುಂಟ ಢಾಂಠು ಢಾಣ್  ಢಾಣ್...ಡುಂಟ ಢಾಂಠು ಢಾಣ್  ಢಾಣ್" ಎಂದು ಲಯಬದ್ಧವಾಗಿ ಹೊಡೆಯುವ ಗಂಟೆಯ ಸದ್ದು ಸಹ ಹೊಸದೇ. ಈ ಘಂಟೆಯ ಬಗ್ಗೆ ನನಗೆ ಕುತೂಹಲ... ಇನ್ನೂ ಸರಿಯಾಗಿ ಪರಿಚಯವಾಗದವರನ್ನು ಕೇಳಲು ಮಖೇಡಿತನ. ಒಂದು ದಿನ ಇದ್ದಕ್ಕಿದ್ದಂತೆ ಕಣ್ಣಿಗೆ ಬಿದ್ದದ್ದು ....ಹಿಡಿ ಇರುವ ಗಂಟೆಯನ್ನು ಕೈಯಲ್ಲಿ ಹಿಡಿದು, ಕೈಯನ್ನು ಮೇಲೆ ಕೆಳಗೆ ಆಡಿಸುತ್ತಾ, ಸ್ವಲ್ಪ ಮುಂಗೈಯನ್ನು ತಿರುಗಿಸುತ್ತಾ... ಲಯಬದ್ಧವಾಗಿ... ...

ಅಪಘಾತ- ಸಾವು- ನೋವು

Image
  ಬೀchi ಯವರ ಮಾತುಗಳು.. ಅವರದೇ ಪದಗಳಲ್ಲಿ ಅಲ್ಲವಾದರೂ ಭಾವ ಮಾತ್ರ  ಬರೆಯುತ್ತೇನೆ... ಬೆಳಿಗ್ಗೆ ಪತ್ರಿಕೆ ಓದುವಾಗ ತಲೆಬರಹ ದಲ್ಲಿ ಇದ್ದದ್ದು... ಚೀನಾದಲ್ಲಿ ಭಾರಿ ಭೂಕಂಪ... ಅಪಾರ ಮಂದಿಯ ಸಾವು.. ತ್ಚ್..ತ್ಚ್..ತ್ಚು.... ಎಂದು ಮುಂದಿನ ಸುದ್ದಿಗೆ ಹೋಗುತ್ತೇವೆ.. ಅದೇ ಭೂಕಂಪ ಭಾರತದ ಉತ್ತರದಲ್ಲಿ ಆದರೆ... ನಮ್ಮ ಬಾಯಿಂದ 'ಅಯ್ಯೋ ಪಾಪ.. ಎಷ್ಟು ಕಷ್ಟ ಆಗಿರುತ್ತೋ' ಅನ್ನುವ ಮಾತು ಬರಬಹುದು. ಅದೇ ಒಂದು ಅಪಘಾತ ನಮ್ಮ ರಾಜ್ಯದಲ್ಲಾದರೆ... ನಮ್ಮೂರಿನವರು/ ನಮ್ಮ ಹತ್ತಿರದವರು ಯಾರಾದರೂ ಇದ್ದಾರಾ ಎಂದು ಹುಡುಕುತ್ತೇವೆ, ಅವರಿಗೆ ಫೋನ್ ಮಾಡಿ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತೇವೆ. ಅಕ್ಕ ಪಕ್ಕದ ಮನೆಯವರಿಗೆ ಈ ತರಹ ಕಷ್ಟ ಬಂದಾಗ ಅವರಲ್ಲಿ ಹೋಗಿ, ಸಮಾಧಾನ ಮಾಡಿ, ಕೈಲಾದ ಸಹಾಯ ಮಾಡುತ್ತೇವೆ... ಈ ಎಲ್ಲ ಹಂತದಲ್ಲಿ ನಮಗಾಗುವ ನೋವು /ದುಃಖ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯೇ. ಅದೇ ಆ ಕೆಟ್ಟ ಘಟನೆ ನಮ್ಮ ಮನೆಯಲ್ಲಿ ನಡೆದರೆ ಆಗುವ ನೋವು,ದುಃಖ, ಅನುಭವಿಸಬೇಕಾದ ಸಂದಿಂಗ್ಧ, ಮತ್ತು  ತುಮುಲ ಹೇಳತೀರದು.   ಈ ಮಾತಿನ ಸತ್ಯ ಅರಿವಾದದ್ದು 25-12-2024 ರ ಸಂಜೆ. ನನ್ನಣ್ಣನ ಮಗ ರವಿ ಕಲ್ಬುರ್ಗಿಯಿಂದ ಫೋನ್ ಮಾಡಿ ತಿಳಿಸಿದ ಸುದ್ದಿ. ....ಒಂದು ಅಪಘಾತದಲ್ಲಿ ಆದ ಅವನ ಹೆಂಡತಿ ವಿನುತಳ ಸಾವು. ಸುದ್ದಿಯನ್ನು ಅರಗಿಸಿಕೊಳ್ಳಲು ಕೆಲ ನಿಮಿಷಗಳೇ ಬೇಕಾಯಿತು. ಮೈಸೂರಿನ ವಿನುತಾ... ದೂರದ ಘಾಣಗಾಪುರದ ದೇವರ ದರ್ಶನ ಮಾಡಿಕ...

ರಾವಣ - ಮಹಾ ಪಾಪ- ಮೋಸ

Image
   ಕೆಲವು ದಿನಗಳ ಹಿಂದೆ... ಸನಾತನ ಕಥನ.. ಎನ್ನುವ ಯೂಟ್ಯೂಬ್ ಚಾನಲ್ ನ ಒಂದು ಭಾಗ ನನ್ನ ವಾಟ್ಸಪ್ ಗೆ ಬಂದಿತ್ತು... ಅದರಲ್ಲಿ ಪಾಪದ ಬಗ್ಗೆ ವಿಶ್ಲೇಷಣೆಯಿತ್ತು. ಪಾಪ, ಅತಿಪಾಪ ಹಾಗೂ ಮಹಾ ಪಾಪ ಎಂಬ ಮೂರು ಬಗೆಯ ಪಾಪಗಳು. ಪಾಪ... ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಮಾಡಿ ಅದಕ್ಕೆ ಪಶ್ಚಾತಾಪ ಪಡುವುದು. ಇದು ಕ್ಷಮಾರ್ಹ ಪಾಪ.  ಅತಿಪಾಪ ... ಎಲ್ಲ ಗೊತ್ತಿದ್ದು.. ಹಿಂಸೆ, ಕೊಲೆ ಸುಲಿಗೆ ಅಪಹರಣ ಹೀಗೆ ಪರಹಿಂಸೆ ಮಾಡುವುದು... ಜೊತೆಗೆ ಯಾವುದೇ ಪಶ್ಚಾತಾಪ ಇಲ್ಲ. ಈ ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಿದ ನಂತರ ಕ್ಷಮೆಗೆ ಅರ್ಹತೆ.  ಮಹಾ ಪಾಪ ... ನಂಬಿಸಿ ಮೋಸ ಮಾಡುವುದು.  ಮಹಾ ಪಾಪಕ್ಕೆ ಕ್ಷಮೆಯೇ ಇಲ್ಲ. ರಾವಣ ಮಹಾ ಪಾಪ ಮಾಡಿ ಮೋಕ್ಷಕ್ಕೆ ಅರ್ಹತೆಯನ್ನು ಕಳೆದುಕೊಂಡ ಎಂಬುದು ಆ ವಿಡಿಯೋದ ಸಾರಾಂಶವಾಗಿತ್ತು. ಮೋಸ  ನನ್ನ ದೃಷ್ಟಿಯಲ್ಲಿ ನಂಬಿದವರಿಗೆ ಮಾತ್ರ ಮಾಡಲು ಸಾಧ್ಯ.. ನಂಬಿಸುವುದು ಒಂದು ಕಲೆ. ನಮ್ಮ ಸುತ್ತ ತಿರುಗಿ ನೋಡಿದರೆ... ಎಲ್ಲೆಲ್ಲಿಯೂ ಮೋಸವೇ ಕಾಣಿಸುತ್ತದೆ. ವ್ಯಾಪಾರಿಗಳ ತೆರಿಗೆ ವಂಚನೆ ಚೀಟಿ ವ್ಯವಹಾರದಲ್ಲಿ ಮೋಸ. ಚೀಟಿ ವ್ಯವಹಾರದಲ್ಲಿ ಹಣ ಹೂಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಕೈ ಸುಟ್ಟು ಕೊಂಡವರು ಇದ್ದಾರೆ. ಬ್ಯಾಂಕ್ ನಲ್ಲಿ ಸಾಲ ಪಡೆದು ಹಿಂತಿರುಗಿಸದ  ಮೋಸ. ಸರ್ಕಾರದ ಕೆಲಸ ಮಾಡಿಕೊಡಲು ಲಂಚ ಕೇಳುವುದು... ಇದಕ್ಕೊಂದು ನೈಜ  ಘಟನೆ ಸಾಕ್ಷಿ ..ಭಾವಿ ತೋಡಲು ಬ್ಯಾಂಕ್ ಸ...

ನನಸಾಗದ ಕನಸುಗಳು... ಕೈಗೂಡದ ಆಸೆಗಳು.

Image
  ನನ್ನ ಲೇಖನಕ್ಕೆ ಪ್ರತಿಕ್ರಯಿಸುತ್ತ... ಸ್ನೇಹಿತ ನಾಗೇಂದ್ರ ಬಾಬು ಬರೆದ ಒಂದು ಸಾಲು ಹೀಗಿತ್ತು...   ' ನಿಮ್ಮ ಮುಂದಿನ ಲೇಖನ...ನಿಮಗೆ ಇಚ್ಛೆ ಇದ್ದು ಅನುಭವಕ್ಕೆ ಬಾರದ ಘಟನೆ ಬಗ್ಗೆ ಬರಲಿ ಎಂದು ನನ್ನ ಅಪೇಕ್ಷೆ....'  ಎಲ್ಲೋ ಒಂದು ಎಳೆ ಮನಸ್ಸಿನಲ್ಲಿದ್ದರೂ ಬರೆಯಲು ಬೇಕಾದಷ್ಟು ಸ್ಪೂರ್ತಿ ಇರಲಿಲ್ಲ... ಮೇಲಿನ ಸಾಲು ಓದಿದ ಮೇಲೆ.. ಮನಸ್ಸು ಮಥಿಸಿತು... ಆಗ ಹೊಳೆದದ್ದೇ ಶೀರ್ಷಿಕೆ   " ನನಸಾಗದ ಕನಸುಗಳು... ಕೈಗೂಡದ ಆಸೆಗಳು." ಪರಿಣಾಮವೇ ಈ ಲೇಖನ...  Dreams that came true ಎಂಬ ಹೆಸರಿನ ಇಂಗ್ಲೀಷ್ ಪಾಠ ಹೈಸ್ಕೂಲ್ ನಲ್ಲಿ ಇತ್ತು. ವೈಜ್ಞಾನಿಕ ಆವಿಷ್ಕಾರಗಳು.. ಶುರುವಾದದ್ದು ಕನಸು/ ಕಲ್ಪನೆಗಳ ಮೂಲಕ... ಜಾನ್ ಲೋಗೀ ಬೇರ್ಡ್.. ಟೆಲಿವಿಷನ್  ಕನಸನ್ನು ನನಸಾಗಿದ್ದ ವಿಷಯ ಆ ಪಾಠದಲ್ಲಿತ್ತು.  ಎಷ್ಟೋ ಕನಸುಗಳು / ಕಲ್ಪನೆಗಳು / ಆಸೆಗಳು ನಾನಾ ಕಾರಣಗಳಿಂದ ಕೈಗೂಡದೆ ಇರುವುದು.. ಎಲ್ಲರ ಜೀವನದಲ್ಲೂ ಸಾಮಾನ್ಯ. ಅವಶ್ಯಕತೆಯೇ ಅನ್ವೇಷಣೆಗೆ ಅಮ್ಮ ( necessity is the mother of invention) ಎನ್ನುವ ಮಾತಿನಂತೆ, ಮನುಷ್ಯನಿಗೆ ಅನುಕೂಲವಾಗಲು ಬೇಕಾದ ಪರಿಕರಗಳನ್ನು ಅನ್ವೇಷಿಸುವುದೇ ಸಾಮಾನ್ಯ ಗುಣ. ದುರ್ದೈವವೆಂದರೆ ಈ ಅನ್ವೇಷಣೆಗಳ ನೈಜ ಉಪಯೋಗಕ್ಕಿಂತ ಅಡ್ಡ ಪರಿಣಾಮ ಬೀರುವ ಭಾಗವೇ ಹೆಚ್ಚು ಉಪಯೋಗವಾಗುತ್ತಿದೆ. ನಮ್ಮ ಮಾಜಿ ರಾಷ್ಟ್ರಪತಿ APJ ಅಬ್ದುಲ್ ಕಲಾಮ್ ಅವರು ಮಕ್ಕಳಿಗೆ ಕೊಡ...

ಎರಡು ದೋಣಿಯಲ್ಲಿ ಕಾಲು ಸಲ್ಲದು.

Image
ಆಪ್ತಸಮಾಲೋಚಕನಾಗಿ ಕೆಲವು ಪ್ರಸಂಗಗಳನ್ನು case history ರೂಪದಲ್ಲಿ  ಬರೆದದ್ದಿದೆ. ಕಥೆಯ ರೂಪದಲ್ಲಿ ಬರೆಯುವ ನನ್ನ ಪ್ರಯತ್ನ ಇದೇ ಮೊದಲು... ನಿಮ್ಮ ಸಲಹೆ / ಪ್ರೋತ್ಸಾಹ ಅತ್ಯಮೂಲ್ಯ.  ಗೌಪ್ಯತೆಯನ್ನು ಕಾಪಾಡಲು ಹೆಸರುಗಳನ್ನು ಬದಲಾಯಿಸಿದ್ದೇನೆ. _________________________________________ ಎರಡು ದೋಣಿಯಲ್ಲಿ ಕಾಲು ಸಲ್ಲದು. ಆಟೋದಲ್ಲಿ ಮನೆಗೆ ಹೋಗುತ್ತಿದ್ದ ಲಕ್ಷ್ಮಿಗೆ ವಿಪರೀತ ತಲೆನೋವು, ಮನಸ್ಸಿನಲ್ಲಿ ಗೊಂದಲ, ಏನೋ ಆತಂಕ... ಬರುತ್ತಿದ್ದ ಅಳುವನ್ನು ಹೇಗೋ ತಡೆದುಕೊಂಡು, ಮನೆ ತಲುಪಿದಾಗ ಮಗಳ ಪ್ರೀತಿಯ  ಅಪ್ಪುಗೆ ಇಷ್ಟವಾದರೂ ನೆಮ್ಮದಿ ತರಲಿಲ್ಲ. ಯಾಕೆ ಸಪ್ಪಗಿದ್ದೀಯಾ ಎಂದು ಕೇಳಿದ ಅತ್ತೆಗೆ ಹಾರಿಕೆ ಉತ್ತರ ಕೊಟ್ಟು.. ಅವರು ಕೊಟ್ಟ ಕಾಫಿಯನ್ನು ಕುಡಿದು ಲೋಟ ಕೆಳಗಿಟ್ಟಾಗ ಒಂದು ನಿಟ್ಟುಸಿರು ತಾನಾಗೆ ಹೊರಗೆ ಬಂತು. ಕಣ್ಣು ಮುಚ್ಚಿ ಕೂತವಳಿಗೆ ಹಿಂದಿನ ಘಟನೆಗಳ ಸರಮಾಲೆ ಮನಸ್ಸಿನಲ್ಲಿ ಮೂಡಿ ಬಂತು. ಇಂಜಿನಿಯರಿಂಗ್ ಮಾಡುವ ಆಸೆಗೆ ನೀರೆರದವನು ಅಪ್ಪ... ಅಮ್ಮ ಸಂಪ್ರದಾಯಸ್ತ ಯೋಚನೆ ಮಾಡುವವಳು... ಹಾಗಾಗಿ ಓದಿ ಏನು ಕೆಲಸ ಮಾಡಬೇಕೆ.. ಮದುವೆ ಮಾಡಿ ಗಂಡನ ಮನೆಗೆ ಕಳಿಸಿದರೆ ಸಾಕು ಎಂಬ ಮನಸ್ಸು.  ಇಂಜಿನಿಯರಿಂಗ್ ಕಾಲೇಜಿಗೆ ಹೋದ ಮೊದಲ ದಿನ ಸಂಭ್ರಮವೋ ಸಂಭ್ರಮ. ಎಲ್ಲ ಹೊಸ ಮುಖಗಳು... ಆ ದಿನಗಳಲ್ಲಿ ಪರಿಚಯವಾಗಿದ್ದು ಅವನು. ಎರಡು ವರ್ಷಗಳ ತನಕ ಹಾಯ್ ಬಾಯ್ ಅನ್ನುವಷ್ಟಕ್ಕೆ ಸೀಮಿತವಾಗಿದ್ದ ಪರಿಚಯ, ಗೆಳೆತ...

Camp - ಶಿಬಿರ - NCC

Image
ಸ್ನೇಹ ಸೇವಾ ಟ್ರಸ್ಟ್ ನ ಕೆಲವು ಕಾರ್ಯಕ್ರಮಗಳ ಆಯೋಜನೆಯಲ್ಲಿ ನನ್ನ ಕಿರು ಪಾತ್ರವೂ ಇದೇ ಎಂಬುದು ಮನಸ್ಸಿಗೆ ಮುದ ಕೊಡುವ ಸಂಗತಿ . ಅಂತಹ ಒಂದು ಕಾರ್ಯಕ್ರಮವೇ ನವೆಂಬರ್ 17, 18 ಭಾನುವಾರ,  ಸೋಮವಾರ ನಡೆದ ವ್ಯಕ್ತಿತ್ವ ವಿಕಸನ ಶಿಬಿರ. ಇದರಲ್ಲಿ ಭಾಗವಹಿಸಿದವರು, ಸ್ನೇಹ ಸೇವಾ ಟ್ರಸ್ಟ್ ನ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿರುವ   ಹೈಸ್ಕೂಲ್ ಮತ್ತು ಕಾಲೇಜ್ ಮಕ್ಕಳು.     ಈ ಶಿಬಿರದಲ್ಲಿ ರಸಪ್ರಶ್ನೆಯ ಮೂಲಕ ಮಕ್ಕಳೊಂದಿಗೆ ಸಂವಹನ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟ ವಿಷಯ. ಮಕ್ಕಳ ಜ್ಞಾನದ ಮಟ್ಟ, ಭಾಗವಹಿಸುವಾಗಿನ ಉತ್ಸಾಹ ಸ್ಪೂರ್ತಿದಾಯಕವಾಗಿತ್ತು.   ಮುಕ್ತಾಯ ಸಮಾರಂಭದಲ್ಲಿ ಮಕ್ಕಳು ಅವರ ಅನುಭವಗಳನ್ನು ಹಂಚಿ ಕೊಳ್ಳುವಾಗ .. ಇದು ನನ್ನ ಮೊದಲನೆಯ ಶಿಬಿರ, ಕ್ಯಾಂಪ್   ಫೈರ್ ಅನುಭವ.. ಆಟೋಟಗಳು... ಊಟ/ ತಿಂಡಿ ಹೀಗೆ ಅವರದೇ ಆದ ಆಲೋಚನೆಯ ಮಾತುಗಳು ಕೇಳಲು ಚೆನ್ನಾಗಿತ್ತು. ಆ ಕಾರ್ಯಕ್ರಮದ ಸಿಂಹಾವಲೋಕನದ ವಿಡಿಯೋ ತುಣುಕು ನಿಮಗಾಗಿ. ಕೆಳಗಿನ link  select  ಮಾಡಿ  open option ನಂತರ drive icon ಒತ್ತಿ ವೀಡಿಯೋ ನೋಡಿ... https://drive.google.com/file/d/1aYV6IGoEy-SISm1Fn92g1fo1tWv4WIRk/view?usp=drivesdk ವಿದ್ಯಾರ್ಥಿ ಜೀವನದಲ್ಲಿ ಇಂತಹ ಒಂದೇ ಒಂದು ಅನುಭವ ನನಗಾಗಿದ್ದು... ಅದು NCC camp  ಮೂಲಕ, ಓದಿನ ಕೊನೆಯ ಘ...