Camp - ಶಿಬಿರ - NCC


ಸ್ನೇಹ ಸೇವಾ ಟ್ರಸ್ಟ್ ನ ಕೆಲವು ಕಾರ್ಯಕ್ರಮಗಳ ಆಯೋಜನೆಯಲ್ಲಿ ನನ್ನ ಕಿರು ಪಾತ್ರವೂ ಇದೇ ಎಂಬುದು ಮನಸ್ಸಿಗೆ ಮುದ ಕೊಡುವ ಸಂಗತಿ . ಅಂತಹ ಒಂದು ಕಾರ್ಯಕ್ರಮವೇ ನವೆಂಬರ್ 17, 18 ಭಾನುವಾರ,  ಸೋಮವಾರ ನಡೆದ ವ್ಯಕ್ತಿತ್ವ ವಿಕಸನ ಶಿಬಿರ. ಇದರಲ್ಲಿ ಭಾಗವಹಿಸಿದವರು, ಸ್ನೇಹ ಸೇವಾ ಟ್ರಸ್ಟ್ ನ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿರುವ   ಹೈಸ್ಕೂಲ್ ಮತ್ತು ಕಾಲೇಜ್ ಮಕ್ಕಳು.     ಈ ಶಿಬಿರದಲ್ಲಿ ರಸಪ್ರಶ್ನೆಯ ಮೂಲಕ ಮಕ್ಕಳೊಂದಿಗೆ ಸಂವಹನ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟ ವಿಷಯ. ಮಕ್ಕಳ ಜ್ಞಾನದ ಮಟ್ಟ, ಭಾಗವಹಿಸುವಾಗಿನ ಉತ್ಸಾಹ ಸ್ಪೂರ್ತಿದಾಯಕವಾಗಿತ್ತು.  

ಮುಕ್ತಾಯ ಸಮಾರಂಭದಲ್ಲಿ ಮಕ್ಕಳು ಅವರ ಅನುಭವಗಳನ್ನು ಹಂಚಿ ಕೊಳ್ಳುವಾಗ .. ಇದು ನನ್ನ ಮೊದಲನೆಯ ಶಿಬಿರ, ಕ್ಯಾಂಪ್   ಫೈರ್ ಅನುಭವ.. ಆಟೋಟಗಳು... ಊಟ/ ತಿಂಡಿ ಹೀಗೆ ಅವರದೇ ಆದ ಆಲೋಚನೆಯ ಮಾತುಗಳು ಕೇಳಲು ಚೆನ್ನಾಗಿತ್ತು.

ಆ ಕಾರ್ಯಕ್ರಮದ ಸಿಂಹಾವಲೋಕನದ ವಿಡಿಯೋ ತುಣುಕು ನಿಮಗಾಗಿ. ಕೆಳಗಿನ link  select  ಮಾಡಿ  open option ನಂತರ drive icon ಒತ್ತಿ ವೀಡಿಯೋ ನೋಡಿ...

https://drive.google.com/file/d/1aYV6IGoEy-SISm1Fn92g1fo1tWv4WIRk/view?usp=drivesdk

ವಿದ್ಯಾರ್ಥಿ ಜೀವನದಲ್ಲಿ ಇಂತಹ ಒಂದೇ ಒಂದು ಅನುಭವ ನನಗಾಗಿದ್ದು... ಅದು NCC camp  ಮೂಲಕ, ಓದಿನ ಕೊನೆಯ ಘಟ್ಟದಲ್ಲಿ.

ಅದಕ್ಕೆ ಮುಂಚೆ ಕ್ಯಾಂಪ್ ಎಂದರೆ ಹೋಗುತ್ತಿದ್ದ ವಿದ್ಯಾನಗರದ ಶಾಲೆ ಮಾತ್ರ... ಕಾರಣ ಮೊದಲು ಅಲ್ಲಿ ಮಿಲಿಟರಿ ಕ್ಯಾಂಪ್ ಇದ್ದು ಅವರು ಬಿಟ್ಟು ಹೋದ ನಂತರ ಅಲ್ಲಿದ್ದ ಕಟ್ಟಡಗಳನ್ನು ಶಾಲೆಗಾಗಿ ಉಪಯೋಗಿಸಿದ್ದು.

ಮತ್ತೊಂದು ಕ್ಯಾಂಪ್  ..." ಅಮಲ್ದಾರ್ರು ಕ್ಯಾಂಪ್ ಮಾಡವ್ರೆ.. ಜಮಾ ಬಂದಿಗಾಗಿ".  ನಮ್ಮಪ್ಪ ಶಾನುಭೋಗರಾಗಿದ್ದ ಕಾರಣ, ಈ ಮಾತು ನಮ್ಮ ಮನೆಯಲ್ಲಿ ಕೇಳಿದ್ದುಂಟು.

ಆಗಿನ ಕಾಲದ ಮೈಸೂರು ಮಹಾರಾಜರು.. ಬೆಂಗಳೂರಿಗೆ ಬರುವಾಗ ಮಧ್ಯೆ  ವಿಶ್ರಾಂತಿಗಾಗಿ ಕ್ಯಾಂಪ್ ಮಾಡುತ್ತಿದ್ದರು ಎಂದು ಕೇಳಿಬಲ್ಲೆ. ಅದು ಈಗಿನ ಬಿಡದಿ.

ನೀರೊಲೆಯ ಮುಂದೆ ಬೆಂಕಿ ಕಾಯಿಸುವುದು, ಅದು ಬಿಟ್ಟರೆ ಕಾಮಣ್ಣನ ಹಬ್ಬದಲ್ಲಿ ಕಾಮನನ್ನು  ಸುಟ್ಟು, ಬಾಯಿ ಬಡಿದುಕೊಳ್ಳುತ್ತಾ..  " ಕಾಮಣ್ಣ ಮಕ್ಕಳು... ಕಳ್ಳ ---- ಮಕ್ಕಳು...ಏನೇನು ಕದ್ದರು, ಸೌದೇ ಬೆರಣಿ ಕದ್ದರು..." ಕೂಗಾಡುತ್ತಾ ಕುಣಿದದ್ದೇ ಅದುವರೆಗೆ ನಾ ಕಂಡ ಕ್ಯಾಂಪ್ ಫೈರ್ ನ ರೂಪಾಂತರ. 

ಎನ್‌ಸಿಸಿ ಕ್ಯಾಂಪ್ ನಲ್ಲಿ ಅನುಭವಿಸಿದ ಕ್ಷಣಗಳು.... ಎಲ್ಲಾ ಆಫೀಸರ್ ಗಳ ಉಪಸ್ಥಿತಿಯಲ್ಲಿ..  ಎನ್‌ಸಿಸಿ ಕೆಡೆಟ್ ಗಳಾದ ನಾವುಗಳು.. ಆಡಿ, ಹಾಡಿ, ಕುಣಿದು ಕುಪ್ಪಳಿಸಿ ನಲಿದಾಡಿದ್ದು, ನಿಜವಾದ ಕ್ಯಾಂಪ್ ಫೈರ್ ನ ಮುಖಾಮುಖಿಯಾಗಿತ್ತು. 

ನಂತರದ ಟ್ರೆಕ್ಕಿಂಗ್ ದಿನಗಳಲ್ಲಿ...camp fire ನ ಮಜಾ ಅನುಭವಿಸಿದ್ದಿದೆ.

ಆಗ ನಮಗೆ ಎನ್‌ಸಿಸಿ ಕಡ್ಡಾಯವಾಗಿತ್ತು. ನಾನು ನೌಕಾಪಡೆಯ ವಿಭಾಗಕ್ಕೆ ಸೇರಿದ್ದೆ. ಅಲ್ಲಿನ ಬಿಳಿಯ ಸಮವಸ್ತ್ರಗಳು ವಿಚಿತ್ರ ಆದರೂ ಆಕರ್ಷಕವಾಗಿತ್ತು. 



ಎನ್‌ಸಿಸಿ ಕ್ಯಾಂಪ್ ಮಂಗಳೂರಿನಲ್ಲಿ ಆಯೋಜಿತವಾಗಿತ್ತು.. ಅದಕ್ಕಾಗಿ ನಮಗೆ ವಿಶೇಷ ಕಪ್ಪು ಸಮವಸ್ತ್ರ, ಮಲಗಲು ಜಮಖಾನ, ಹೊದ್ದುಕೊಳ್ಳಲು ದರಿ (ಕಂಬಳಿ), ಊಟಕ್ಕೆ


 

ಎನಾಮಲ್ ಪ್ಲೇಟ್, ಒಂದು ಮಗ್... ಇದನ್ನೆಲ್ಲಾ ಇಡಲು ಒಂದು  ಬ್ಯಾಗ್ ಎಲ್ಲಾ ತಂದು.. ಅದನ್ನು ಒಗೆದು ತಯಾರಿಯಾಯಿತು. 

ಆಗಿನ್ನೂ ಮಂಗಳೂರಿಗೆ ನೇರ ರೈಲು ಪ್ರಯಾಣ ಇರಲಿಲ್ಲ... ಜಾಲಾರ್ ಪೇಟೆಯ ಮೂಲಕ ಹೋಗಬೇಕಿತ್ತು. ನನ್ನ ಜೀವನದ ಮೊದಲನೆಯ ರಾತ್ರಿ ವೇಳೆಯ ರೈಲು ಪ್ರಯಾಣ.. ನಮ್ಮಗಳ ಉತ್ಸಾಹ ಮೇರೆ ಇಲ್ಲದ್ದು.... ಸಮವಸ್ತ್ರದೊಡನೆ ಹೋಗಿದ್ದ ಕಾರಣ.. ನಾವೆಲ್ಲರೂ ಒಂದಷ್ಟು ಶಿಸ್ತನ್ನು ಪಾಲಿಸಲೇಬೇಕಿತ್ತು... ಏನಾದರೂ ಹದಿಹರೆಯದ ಹುಮ್ಮಸ್ಸು, ಸಾಧ್ಯವಾದಷ್ಟು ಗಲಾಟೆ ತರಲೆ ಮಾಡಿ ಹೊರಟೆವು. ರಾತ್ರಿ ನಿದ್ದೆ ಮಾಡಿ ಬೆಳಗಿನ ಜಾವ ಕಣ್ಣು ಬಿಟ್ಟಾಗ ಕಂಡಿದ್ದು, Calicut ರೈಲು ನಿಲ್ದಾಣ... ನನಗೆ ಗಾಬರಿ... ಕ್ಯಾಲಿಕಟ್ ನನ್ನ ಮನಸ್ಸಿನಲ್ಲಿ ಕಲ್ಕತ್ತಾ ಆದಕಾರಣ... ನಂತರವೇ ತಿಳಿದದ್ದು ಕ್ಯಾಲಿಕಟ್ ಕೇರಳ ರಾಜ್ಯದ ಒಂದು ಊರು ಎಂದು. ಮೀನಿನ ವಾಸನೆ ಹೇಳತೀರದು... 

ಅವರು ಕೊಟ್ಟ ಊಟವನ್ನು ಮಾಡಿ ಬಹುಶಃ ಸಂಜೆಯ ವೇಳೆಗೆ ಮಂಗಳೂರಿನ ನಮ್ಮ ಕ್ಯಾಂಪ್ ಸ್ಥಳವಾದ ಸ್ಕೂಲಿಗೆ ಬಂದು ಸೇರಿದೆವು. ನಾವು ಒಳಗೆ ಬರುವಾಗ ನಮಗೆ ವಿಶೇಷ ಸೆಲ್ಯೂಟ್ ಕೊಟ್ಟು ಆಹ್ವಾನಿಸಲಾಯಿತು. ಅನುಭವ ಹೊಸದು, ಪರಿಸರ ಹೊಸದು, ಆದರೆ ಸುತ್ತಮುತ್ತಲಿದ್ದ  ಸ್ನೇಹಿತರೆಲ್ಲ ಪರಿಚಿತರು, ಅದೊಂದು ಸಮಾಧಾನ. 

15 ದಿನಗಳ ಕಾಲ ಈ ಜಾಗದಲ್ಲಿ ಕಳೆಯ ಬೇಕಾದ ಅನಿವಾರ್ಯತೆಯನ್ನು ನೆನೆದು ಒಂದು ವಿಲಕ್ಷಣ ಭಾವ.

ಬೆಳಿಗ್ಗೆ 5 ಗಂಟೆಗೆ ಎದ್ದರೆ ರಾತ್ರಿಯ ಒಂಬತ್ತರ ತನಕ ಒಂದಿಲ್ಲ ಒಂದು ಕಾರ್ಯಕ್ರಮ.  ಬೆಳಗಿನ ಕವಾಯಿತು, ಉಪಹಾರ, ಸ್ನಾನ, ಮತ್ತೆ ಪೆರೇಡ್, ತರಗತಿಗಳು, ಊಟ, ಸ್ವಲ್ಪ ವಿಶ್ರಾಂತಿ, ಮತ್ತಷ್ಟು ತರಗತಿಗಳು, ಆಟ,   ಸಂಜೆ ವಿಚಾರ ವಿನಿಮಯ ರಾತ್ರಿಯ ಊಟ.. ಒಂಬತ್ತು ಗಂಟೆಗೆ ಸರಿಯಾಗಿ light off, pipe down ಎಂಬ ಆಜ್ಞೆ.. ( ದೀಪ ಆರಿಸಿ, ಸದ್ದು ಕಡಿಮೆ ಮಾಡುವುದು). ಎಲ್ಲಾ ಯಾಂತ್ರಿಕ ಜೀವನ. ನಮಗೊಂದಿಷ್ಟು ಬದಲಾವಣೆ ಬೇಕಿತ್ತು ಹಾಗಾಗಿ ರಾತ್ರಿಯ pipe down ಆಜ್ಞೆಯ ನಂತರ ...ತಂಡದವರು ಒಟ್ಟಾಗಿ ಮಾತನಾಡಿಕೊಂಡು.. ( ಕೆಲ ಶಿಸ್ತು ಪ್ರಿಯರು ಹಾಗೂ ಮೃದು ಸ್ವಭಾವದವರನ್ನು ಬಿಟ್ಟು) ತಾಳ ಬದ್ಧವಾಗಿ ಚಿಟಿಕೆ ಹೊಡೆಯುವುದು... ಸ್ವಲ್ಪ ಗ್ಯಾಪ್ ಕೊಟ್ಟು ಮತ್ತೆ ಹೊಡೆಯುವುದು ಎಂದು ತೀರ್ಮಾನವಾಗಿ, ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದಾಯಿತು. ರಾತ್ರಿ ಡ್ಯೂಟಿಯಲ್ಲಿದ್ದ ಆಫೀಸರ್ ಅವರ ರೂಮಿನಿಂದಲೇ ಎಚ್ಚರಿಕೆ ಕೊಟ್ಟರು. ಸಲ್ಪ ಸಮಯ ನಿಃಶಬ್ದ. ಅದೇನು ಉತ್ಸಾಹ ಬಂತೋ... ಮತ್ತೆ ಚಿಟಿಕೆಯ  ಬದಲು ಜೋರಾಗಿ ಚಪ್ಪಾಳೆ ಜೊತೆಗೆ ಹ್ ಹ್ಹ  ಹ್ಹ ಹ್ಹ್ ಹ್ಹ ಎನ್ನುವ ಕೂಗು. ನಂತರ ನಿಜವಾಗಲೂ pipe down . ಡ್ಯೂಟಿ ಆಫೀಸರ್ ಗೆ ಬಹಳ ಕೋಪ ಬಂದಿರಬೇಕು.. ನಾಲ್ಕು ಜನರೊಡನೆ ಟಾರ್ಚ್ ಸಮೇತ ಬಂದು... ನಮ್ಮ ರೂಮಿನಲ್ಲಿ ಹುಡುಕಾಡಲು ಶುರು ಮಾಡಿದರು... ನಾವೆಲ್ಲ ನಿದ್ದೆ ಬಂದವರಂತೆ ನಟನೆ... ಬಾಗಿಲ ಬಳಿಯೇ ಮಲಗಿದ್ದ ನನ್ನನ್ನು ತಟ್ಟಿ ತಟ್ಟಿ ಎಬ್ಬಿಸುವ ಪ್ರಯತ್ನ ಮಾಡಿದರು.. ನಾನು ನಿದ್ದೆ ಮಾಡುತ್ತಿರುವವನಂತೆ ನಟಿಸುತ್ತಾ ಹೇಳಿದ್ದು " ಏ ಹೋಗಲೇ ನನ್ನ ನಿದ್ದೆ ಕೆಡಿಸ್ಬೇಡ "... ಪಾಪ ಅವರು ನನ್ನನ್ನು ತಟ್ಟಿದ ಹಾಗೆ ಮಾಡಿ.."sleep..sleep" ಎಂದು ಹೇಳಿ.. ಕೊನೆಗೆ "you will all pay for it in the morning" ಎಂದು ಹೇಳಿ ಹೊರಟು ಹೋದರು. ನನಗೆ ವಿಜಯಿ ಯಾದ ಅನುಭವ... ಜೊತೆ ಜೊತೆಗೆ ಬೆಳಗ್ಗೆ ಏನಾಗುತ್ತೋ ಎಂಬ ಭಯ.

ಜಯಕ್ಕಿಂತ ಹೆಚ್ಚಿನ ಭಯವೇ ನಿಜವಾಯಿತು.. punishment  ಕಾದಿತ್ತು.  ಬೆಳಿಗ್ಗೆ ನಮ್ಮ ತಂಡದ ಎಲ್ಲರನ್ನೂ... ಮೈದಾನದ ಸುತ್ತಾ ಓಡುತ್ತಾ ಮೂರು ಪ್ರದಕ್ಷಿಣೆ... ಕೈಯಲ್ಲಿ ಡಿಪಿ ರೈಫಲ್...  ಬೀಳುವಷ್ಟು ಸುಸ್ತಾಗಿ.... ಜೊತೆಗೆ ಅಂದಿನ ಬೆಳಿಗ್ಗೆಯ ಕಾಫಿ  / ಟೀ... ಉಪಹಾರ ಸೊನ್ನೆ.

sentry duty ಎನ್ನುವುದು ಒಂದು ಕಾಲೇಜಿಗೆ 24 ಗಂಟೆಯ ಸಮಯದ ಕೆಲಸ. ಬೆಳಿಗ್ಗೆ ಎಂಟು ಗಂಟೆಗೆ ಶುರುವಾಗಿದ್ದು ಮಾರನೆಯ ಬೆಳಗ್ಗೆ ಎಂಟು ಗಂಟೆಯ ತನಕ ನಿರಂತರವಾಗಿ ಇರಬೇಕಾದದ್ದು. ನನಗೆ ಬಿದ್ದ ಡ್ಯೂಟಿ ಮಧ್ಯಾಹ್ನ ಎರಡರಿಂದ ನಾಲ್ಕು ಹಾಗೂ ರಾತ್ರಿ 2 ರಿಂದ 4.... ರೈಫಲ್ ಹಿಡಿದು ಒಂದೇ ಸಮ ಎರಡು ಗಂಟೆ ನಿಲ್ಲುವುದು ತುಂಬ ತ್ರಾಸದಾಯಕವಾಗಿತ್ತು. ನಾವಿದ್ದ ಎರಡು ವಾರಗಳ ಕಾಲದಲ್ಲಿ ಮೂರು ಸಲ ಈ ತರಹದ ಡ್ಯೂಟಿ ಮಾಡಿದ ನೆನಪು.

ನಾನಿ (ಕೊಡಗಿನ ನಾಣಯ್ಯ) ಸ್ಥೂಲಕಾಯದ, ಪೆರೇಡ್ ನಲ್ಲಿ ಸಾಮಾನ್ಯವಾಗಿ ನನ್ನ ಹಿಂದೆ ನಿಲ್ಲುತ್ತಿದ್ದವ. ಒಂದು ದಿನ ಗುಟ್ಟಾಗಿ ನಮ್ಮಿಬ್ಬರ ಮಾತುಕತೆ ನಡೆಯಿತು... ಪೆರೇಡ್ ಸಮಯದಲ್ಲಿ ನಾನು ಕುಸಿದು ಬೀಳುವುದು.. ಅವನು ನನ್ನನ್ನು ಹೊತ್ತು ತಂದು ನಮ್ಮ ರೂಮಿನಲ್ಲಿ  ಮಲಗಿಸಿ ಇಬ್ಬರು ಒಂದಷ್ಟು ಹೊತ್ತು ಆರಾಮವಾಗಿರುವುದು. ಅಂದಿನ ಪೆರೇಡ್ ನಲ್ಲಿ ಬಿಸಿಲು ಸಹ ಜೋರಿತ್ತು... ನಮ್ಮ ಯೋಜನೆಯಂತೆ, ಕುಸಿದು ಬಿದ್ದೆ... ಅದನ್ನೇ ಕಾಯುತ್ತಿದ್ದ ನಾನಿ ನನ್ನನ್ನು ಹೊತ್ತು ತಂದು ರೂಮಲ್ಲಿ ಮಲಗಿಸಿದ... ದುರ್ದೈವ.. ಅಂದಿನ ಡ್ಯೂಟಿ ಆಫೀಸರ್  ಡಾಕ್ಟರ್ ಸಮೇತ ಬಂದು...ನನ್ನ ಆರೋಗ್ಯ ಪರೀಕ್ಷಿಸಿ ಮಲಗಳು ಹೇಳಿ... ನಾನಿಗೆ ಪೆರೇಡ್ ಗೆ ಪಾಪಸ್ ಕಳಿಸಿದ್ದು.... ಪಾಪ ಅವನು ಯಥಾ ಪ್ರಕಾರ ಪೆರೇಡ್


... 


ಅದೊಂದು ಮೈ ನವಿರೇಳುವ ಅನುಭವ ....  ಸಮುದ್ರ ಮಧ್ಯದಲ್ಲಿ ಲಂಗರ್ ಹಾಕಿದ್ದ   INS Mysore ಎಂಬ ಹೆಸರಿನ ದೊಡ್ಡ ಹಡಗನ್ನು (war ship) ನೋಡಿದ್ದು. ಅದನ್ನು ತಲುಪಲು ನಾವೆಲ್ಲಾ ಹೋಗಿದ್ದು ಒಂದು ಮೋಟಾರ್ ಬೊಟ್ ನಲ್ಲಿ... ತೆಲಾಡುತ್ತಿದ್ದ ಅದರಲ್ಲಿ ಹತ್ತುವುದೇ ಒಂದು ಅನುಭವ... ಸಮುದ್ರದ ನೀರಿನ ಮೇಲೆ ಹೋಗುತ್ತಿದ್ದ... ಮುಖಕ್ಕೆ ಗಾಳಿ ರಾಚುತ್ತಿದ್ದ, ಸಂತೋಷದ ಕೇಕೆಗಳ ನಡುವೆ ಸುಮಾರು 6 ನಾಟಿಕಲ್ ಮೈಲು ದೂರ ( ಸಮುದ್ರ ಯಾನದಲ್ಲಿ ಉಪಯೋಗಿಸುವ ದೂರದ ಮಾನದಂಡ) ಸಾಗಿ... ಆ ದೊಡ್ಡ ಹಡಗನ್ನು ಬಿಟ್ಟ ಕಂಗಳಿಂದ ನೋಡಿ, ಅದರ ಒಂದು ಸುತ್ತು ಬಂದು.... ವಿಶೇಷ ಏಣಿಯಿಂದ ಹಡಗನ್ನು ಏರಿದ್ದು ( ಬೀಳುವೆನಂಬ ಆತಂಕ ಮನಸ್ಸಿನಲ್ಲಿ ಇದ್ದಿದ್ದು ಸತ್ಯ)... ಅದೇ ಒಂದು ಪ್ರಪಂಚ.... ಕಾಗದದಲ್ಲಿ ಹಡಗು ಮಾಡಿ ನೀರಿನಲ್ಲಿ ಬಿಟ್ಟ ನನಗೆ... ಅದರ ಅಗಾಧತೆ ಊಹಿಸಲೂ ಅಸಾಧ್ಯ. ಅಲ್ಲಿ ವಿಷಯ ಗ್ರಹಿಸಿದ್ದಕ್ಕಿಂತ ಆಶ್ಚರ್ಯ ಚಕಿತನಾಗಿ, ಕುತೂಹಲದಿಂದ ನೋಡಿದ್ದೇ ಹೆಚ್ಚು.

NCC ಯ ದಿನದ ನೆನಪುಗಳಲ್ಲಿ...     Lt. B G  Janardhan ತುಂಬಾ ಇಷ್ಟವಾದವರು. ನಂತರದ ದಿನಗಳಲ್ಲಿ ಅವರನ್ನು ಭೇಟಿಯಾಗುವ ಅವಕಾಶ ಶಹಬಾದಿನ ಸ್ನೇಹಿತ ಲಕ್ಷ್ಮಣ್ ಶಾಸ್ತ್ರಿ ಅವರ ಮನೆಯಲ್ಲಿ ಸಿಕ್ಕಿತ್ತು. ಅವರ ನಗುಮುಖ ಹಸಿರಾಗಿದೆ.

ಇನ್ನೊಬ್ಬ ಮಿಲಿಟರಿಯಿಂದ ಬರುತ್ತಿದ್ದ ಸುಬೇದಾರ್ ಮೇಜರ್ ರಾಮರಾವ್ ಎಂಬುವರು. ಡ್ರಿಲ್ ಮಾಡಿಸುತ್ತಾ ಅವರು ಹೇಳುತ್ತಿದ್ದ ತೆಲುಗು ಮಿಶ್ರಿತ  "ಚಟಕ್ಕನಿ ಕಾಲು ಝಾಡಿಸಬೇಕು" ಪದಗಳು ನೆನಪಿನಲ್ಲಿವೆ.

ಇನ್ನೂ ಹೆಚ್ಚಿನ ಖುಷಿಕೊಡುತ್ತಿದ್ದದ್ದು ಪೆರೇಡ್ ನಂತರ ಕೊಡುತ್ತಿದ್ದ 40 ಪೈಸೆಯ ಟೋಕನ್. ವಾರಕ್ಕೆ ಎರಡು ಪಿರಿಯಡ್ ಹಾಗಾಗಿ 80 ಪೈಸೆಯ ಸಂಗ್ರಹಣೆ. ಕೆಂಪೇಗೌಡ ರಸ್ತೆಯಲ್ಲಿದ್ದ ವಿಷ್ಣುಭವನದಲ್ಲಿ ಅದನ್ನು ಕೊಟ್ಟು ತಿಂಡಿ ತಿನ್ನಬಹುದಿತ್ತು.  ಅಲ್ಲಿ ತಿಂದ ಬ್ರೆಡ್ ಜಾಮ್ ನ ರುಚಿ ಬಲು ಸೊಗಸು.

ಬೆಂಗಳೂರು ಯೂನಿವರ್ಸಿಟಿಯ ಮೊದಲ ಕಾನ್ವೊಕೇಶನ್ ಗಾಗಿ ಬರಲಿದ್ದ ಅಂದಿನ ರಾಷ್ಟ್ರಪತಿ ವಿ ವಿ ಗಿರಿಯವರಿಗೆ guard of honour ಕೊಡಲು, ಲಾಲ್ ಬಾಗ್ ನಲ್ಲಿ ನಡೆದ ತಯಾರಿಯಲ್ಲಿ ಸುಮಾರು 15 ದಿನಗಳ ಕಾಲ ಭಾಗವಹಿಸಿದ್ದು ಒಂದು ವಿಶಿಷ್ಟ ಅನುಭವ. ದುರ್ದೈವವೆಂದರೆ ನಾನು ಆ ದಿನಕ್ಕೆ ಆಯ್ಕೆಯಾಗಲಿಲ್ಲ ಎನ್ನುವುದು.

ಜೀವನದ ಮೊದಲನೆಯ ಶೂ ಹಾಕಿಕೊಂಡಿದ್ದು ಎನ್ ಸಿ ಸಿ ಯ ಕೃಪೆಯಿಂದಲೇ. ಅವರು ಕೊಟ್ಟ ಬೂಟ್ ಹಾಗೂ canvass ಶೂಸ್ ಮೂಲಕ.

ಎನ್ ಸಿ ಸಿ ನನ್ನ ಜೀವನದ ಸಾಕಷ್ಟು ಮೊದಲ ಅನುಭವಕ್ಕೆ ಕಾರಣವಾಯಿತು ಎನ್ನುವುದು ಎಷ್ಟು ಸತ್ಯ ಅಲ್ಲವೇ?

ನಮಸ್ಕಾರ

DC Ranganatha Rao 

9741128413 



    


Comments

  1. Respected DCR sir. What a huge and wonderful memory. Happy to note your remarks on our camp fire during trekking days. I too have similar but little opportunity during my NCC camp days in government science college where we were taken to few places for NCC activities which included camp fire. I can just recollect but don't have the talent to text it. Nice reading your golden days experiences . All the best sir and also thanks for making me to recollect my such days. 🙏🙏🙏

    ReplyDelete
  2. 👌👌👌👌

    ReplyDelete
  3. ನಾಗೇಂದ್ರ ಬಾಬು30 November 2024 at 19:08

    NCC ಶಿಬಿರದ ನಿಮ್ಮ ಅನುಭವವನ್ನು ಸೊಗಸಾಗಿ ವಿವರಿಸಿದ್ದೀರಾ ....ಅಲ್ಲ...ನಿಮಗೆ
    ಅನುಭವ ಇಲ್ಲದ ವಿಷಯ ಯಾವುದು ಇಲ್ಲಾ ಅನಿಸುತ್ತಿದೆ....ಆದ್ದರಿಂದ ನಿಮ್ಮ ಮುಂದಿನ ಲೇಖನ...ನಿಮಗೆ ಇಚ್ಛೆ ಇದ್ದು ಅನುಭವಕ್ಕೆ ಬಾರದ ಘಟನೆ ಬಗ್ಗೆ ಬರಲಿ ಎಂದು ನನ್ನ ಅಪೇಕ್ಷೆ....
    ಬಾಬು

    ReplyDelete
  4. ಒಂದು ಮೂಲ ವಸ್ತುವನ್ನು ಇಟ್ಟುಕೊಂಡು ಅದರ ಸುತ್ತಲೂ ಸುಂದರವಾದ ಚಿತ್ತಾರವನ್ನು ಬಿಡಿಸುವುದೇ ಲೇಖಕರ ಕಲೆ.
    ಅದು ಓದುಗರಿಗೆ ಮುದ ತರುವುದಲ್ಲದೆ ಅವರವರ ನೆನಪುಗಳನ್ನು ಮೆಲುಕು ಹಾಕಿಸುತ್ತದೆ.

    ಎನ್. ಸಿ. ಸಿ. ( ಎಣ್ಣೆ ಶೀಶಿ ಅಲ್ಲ ) ಬಗ್ಗೆ ಉತ್ತಮವಾದ ನಿರೂಪಣೆ ಸೊಗಸಾಗಿದೆ.

    ಕೊನೆ ಹನಿ

    ಲೇಖನದಲ್ಲಿ ಅಮಲ್ಧಾರ ಎಂಬ ಪದ ಉಲ್ಲೇಖವಾಗಿದೆ. ಮಧ್ಯ ಸೇವಿಸಿರುವವನು ಅಮಲ್ದಾರ, ಹೆಚ್ಚಾಗಿ ಸೇವಿಸಿರುವವನು ಶೇಕ್ (Shake) ದಾರ ಹಿಂದೂ ಕೇಳಲ್ಪಟ್ಟಿದ್ದೇನೆ 😅

    ReplyDelete
  5. ಗುರುಪ್ರಸನ್ನ
    ಚಿಂತಾಮಣಿ 🖕

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ