ರಾವಣ - ಮಹಾ ಪಾಪ- ಮೋಸ

 


 ಕೆಲವು ದಿನಗಳ ಹಿಂದೆ... ಸನಾತನ ಕಥನ.. ಎನ್ನುವ ಯೂಟ್ಯೂಬ್ ಚಾನಲ್ ನ ಒಂದು ಭಾಗ ನನ್ನ ವಾಟ್ಸಪ್ ಗೆ ಬಂದಿತ್ತು... ಅದರಲ್ಲಿ ಪಾಪದ ಬಗ್ಗೆ ವಿಶ್ಲೇಷಣೆಯಿತ್ತು.

ಪಾಪ, ಅತಿಪಾಪ ಹಾಗೂ ಮಹಾ ಪಾಪ ಎಂಬ ಮೂರು ಬಗೆಯ ಪಾಪಗಳು.

ಪಾಪ... ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಮಾಡಿ ಅದಕ್ಕೆ ಪಶ್ಚಾತಾಪ ಪಡುವುದು. ಇದು ಕ್ಷಮಾರ್ಹ ಪಾಪ. 

ಅತಿಪಾಪ ... ಎಲ್ಲ ಗೊತ್ತಿದ್ದು.. ಹಿಂಸೆ, ಕೊಲೆ ಸುಲಿಗೆ ಅಪಹರಣ ಹೀಗೆ ಪರಹಿಂಸೆ ಮಾಡುವುದು... ಜೊತೆಗೆ ಯಾವುದೇ ಪಶ್ಚಾತಾಪ ಇಲ್ಲ. ಈ ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಿದ ನಂತರ ಕ್ಷಮೆಗೆ ಅರ್ಹತೆ. 

ಮಹಾ ಪಾಪ ... ನಂಬಿಸಿ ಮೋಸ ಮಾಡುವುದು.  ಮಹಾ ಪಾಪಕ್ಕೆ ಕ್ಷಮೆಯೇ ಇಲ್ಲ. ರಾವಣ ಮಹಾ ಪಾಪ ಮಾಡಿ ಮೋಕ್ಷಕ್ಕೆ ಅರ್ಹತೆಯನ್ನು ಕಳೆದುಕೊಂಡ ಎಂಬುದು ಆ ವಿಡಿಯೋದ ಸಾರಾಂಶವಾಗಿತ್ತು.

ಮೋಸ  ನನ್ನ ದೃಷ್ಟಿಯಲ್ಲಿ ನಂಬಿದವರಿಗೆ ಮಾತ್ರ ಮಾಡಲು ಸಾಧ್ಯ.. ನಂಬಿಸುವುದು ಒಂದು ಕಲೆ.

ನಮ್ಮ ಸುತ್ತ ತಿರುಗಿ ನೋಡಿದರೆ... ಎಲ್ಲೆಲ್ಲಿಯೂ ಮೋಸವೇ ಕಾಣಿಸುತ್ತದೆ.

ವ್ಯಾಪಾರಿಗಳ ತೆರಿಗೆ ವಂಚನೆ

ಚೀಟಿ ವ್ಯವಹಾರದಲ್ಲಿ ಮೋಸ. ಚೀಟಿ ವ್ಯವಹಾರದಲ್ಲಿ ಹಣ ಹೂಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಕೈ ಸುಟ್ಟು ಕೊಂಡವರು ಇದ್ದಾರೆ.

ಬ್ಯಾಂಕ್ ನಲ್ಲಿ ಸಾಲ ಪಡೆದು ಹಿಂತಿರುಗಿಸದ  ಮೋಸ.

ಸರ್ಕಾರದ ಕೆಲಸ ಮಾಡಿಕೊಡಲು ಲಂಚ ಕೇಳುವುದು...

ಇದಕ್ಕೊಂದು ನೈಜ  ಘಟನೆ ಸಾಕ್ಷಿ ..ಭಾವಿ ತೋಡಲು ಬ್ಯಾಂಕ್ ಸಾಲ ಬೇಕಿತ್ತು..ಅದಕ್ಕಾಗಿ ಬೇಕಾದ ಕಾಗದ ಪತ್ರಗಳನ್ನು ಲಂಚ ಕೊಡದೆ ಪಡೆಯಲುಸಾಧ್ಯವಾಗದ ಒಬ್ಬ ವ್ಯಕ್ತಿ.... ಸಂಭಂದಿತ ವ್ಯಕ್ತಿಗಳಿಗೆ ಸೇಡು ತೀರಿಸಲೋ ಎಂಬಂತೆ ಒಂದು ಉಪಾಯ  ಮಾಡಿದ. ಎಲ್ಲರಿಗೂ ಲಂಚ ಕೊಟ್ಟು.. ಏನೂ ಕೆಲಸ ಮಾಡದೆ,  ಭಾವಿ ತೋಡಿಸಿದಂತೆ , ನೀರು ಬಂದಂತೆ, ಪಂಪ್ ಅಳವಡಿಸಿದಂತೆ  inspection report ಗಳನ್ನು ತಯಾರಿ ಮಾಡಿಕೊಂಡು, ಸಾಲವನ್ನು ಪೂರ್ಣ ವಾಗಿ ಬಳಸಿಕೊಂಡಾಯಿತು.

ಕೆಲ ದಿನಗಳ ನಂತರ ಭಾವಿ ಕಳ್ಳತನವಾಗಿದೆ  ಹುಡುಕಿಸಿ ಕೊಡಬೇಕೆಂದು ಪೊಲೀಸ್ ಠಾಣೆಗೆ ದೂರು ಕೊಟ್ಟ... ಕೆಲವರನ್ನಾದರೂ ಮುಜುಗರಕ್ಕೆ ಸಿಕ್ಕಿಸಿದ  ಪ್ರಹಸನವಾಯಿತು. 

ಈಗಂತೂ ಇ - ಖಾತೆ ಮಾಡಿಸುವುದು ಅನಿವಾರ್ಯ ...online ಮೂಲಕ ಮಾಡಿಸಬಹುದು ಎಂದು ಪ್ರಚಾರಪಡಿಸಿದರೂ ಸಹ... ಯಾವುದೋ ಒಂದು ಕಾರಣದಿಂದ ಆಫೀಸಿಗೆ ಹೋಗಲೇಬೇಕಾದಂತ ಪರಿಸ್ಥಿತಿಗೆ ದೂಡುವುದರಿಂದ... ಲಂಚದ ವ್ಯವಹಾರ ರಾಜಾರೋಷವಾಗಿ ನಡೆಯುತ್ತಿದೆ.

ಪರೀಕ್ಷೆಗಳಲ್ಲಿ ತರ ತರಹದ ಅವ್ಯವಹಾರಗಳು. ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದೂ ಒಂದು... ಅದರಲ್ಲೂ  ಉಪಾಧ್ಯಾಯರುಗಳ ಆಯ್ಕೆಗಾಗಿ ನಡೆಯುವ ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವುದು ಎಂಥ ವಿಪರ್ಯಾಸ.. ವಿದ್ಯಾರ್ಥಿ ವೃಂದಕ್ಕೆ ಮಾರ್ಗದರ್ಶಕರಾಗ ಬೇಕಾದ, ಮಾದರಿಯಾಗ ಬೇಕಾದವರೇ ಈ ದಾರಿ ತುಳಿದಾಗ ಸಮಾಜದ ಗತಿ? 

ಪೊಲೀಸ್ ಇದ್ದಾಗ traffic rules  ಅನುಸರಿಸುವುದು, ಇಲ್ಲದಾಗ ಮೀರುವುದೂ ಒಂದು ಮೋಸವೇ, ನಮಗೆ ನಾವು ಮಾಡಿಕೊಳ್ಳುವುದು.

ವ್ಯಾಪಾರಂ ದ್ರೋಹ ಚಿಂತನಂ ಎನ್ನುವುದು ಒಂದು ಹೇಳಿಕೆ. ಕಲಬೆರಕೆ, ತೂಕದಲ್ಲಿ ಮೋಸ, ಇವು ಸಾಮಾನ್ಯ ಮೋಸಗಳು.

ಗೋದಾಮಿಗೆ ಬೆಂಕಿ ಇಟ್ಟು ಹಣ ಮಾಡುವುದು, ದೊಡ್ಡ ಮಟ್ಟದ ಮೋಸ.

ಅನೇಕ ವಸ್ತುಗಳನ್ನು ವೈಭವೀಕರಿಸುವ ಜಾಹಿರಾತುಗಳೂ ಮೋಸದ ಬಲೆಗಳೇ.      ಚಿಕ್ಕಂದಿನಲ್ಲಿ ಓದಿದ / ಕೇಳಿದ ಒಂದು ಪ್ರಸಂಗ... 

ಒಂದು ಜಾಹೀರಾತು.. "ತಿಗಣೆ ಸಾಯಿಸಲು ತುಂಬ ಸುಲಭದ ಮಾರ್ಗ... ವಿಶೇಷ ಉಪಕರಣ. ಬೆಲೆ ಕೇವಲ 20 ರೂಪಾಯಿ... ವಿ.ಪಿ. ಪಿ (value payable post) ಮೂಲಕ ಕಳಿಸಲಾಗುವುದು. ಸ್ಟಾಕ್ ಇರುವವರೆಗೆ ಮಾತ್ರ". ಹಣಕೊಟ್ಟು ಪಾರ್ಸಲ್ ಬಿಡಿಸಿಕೊಂಡ ನಂತರ ಅದರಲ್ಲಿದ್ದದ್ದು ಎರಡು ಚಪ್ಪಟೆಯಾದ ಕಲ್ಲುಗಳು. ತಿಗಣೆಯನ್ನು ಹಿಡಿದು ಒಂದು ಕಲ್ಲಿನ ಮೇಲಿಟ್ಟು ಮತ್ತೊಂದು ಕಲ್ಲಿನಿಂದ ಜಜ್ಜಿದರೆ ತಿಗಣೆ ಸಾಯುತ್ತದೆ ಎಂಬ ವಿವರಣೆಯೊಂದಿಗೆ.

ಈಗಂತೂ ಸೈಬರ್ ಮೋಸ ವಿಪರೀತವಾಗಿದೆ. ಅಮಾಯಕರು ಹಣ ಕಳೆದು ಕೊಳ್ಳುತ್ತಿದ್ದಾರೆ.

ನಮ್ಮ ಹುಂಬತನದಿಂದ/ ದುರಾಸೆಯಿಂದ ನಂಬಿ ಮೋಸ ಹೋಗಿ ಆ ಪಾಪವನ್ನು ಬೇರೆಯವರ ತಲೆಗೆ ಕಟ್ಟುವುದು ಎಷ್ಟು ಸರಿ. ಉದಾಹರಣೆಗೆ ಹಣವನ್ನು ಎರಡು ಪಟ್ಟು ಮಾಡಿಕೊಡುವುದು... ಈ ದಿಕ್ಕಿನಲ್ಲಿ ಆಮಿಷ ತೋರಿಸಿ ಮೋಸ ಮಾಡುವವರು ತುಂಬಾ ಜನರಿದ್ದರೂ.. ಮೋಸ ಹೋಗುವವರು... ಅವರಿಗಿಂತ ಜಾಸ್ತಿ. 

ಅದರಲ್ಲೂ ಈಗಿನ ರಾಜಕಾರಣಿಗಳು ದೇಶಭಕ್ತರ / ಜನಸೇವಕರ ಮುಖವಾಡ ಧರಿಸಿ... ಕೊಡುವ ಆಶ್ವಾಸನೆಗಳನ್ನು ನಂಬಿ.... ತಕ್ಷಣಕ್ಕೆ ಕೊಡುವ ಪುಡಿ ಕಾಸಿನ ಆಸೆಯಿಂದ ಅವರಿಗೆ ಮತವನ್ನು ಹಾಕಿ ಚುನಾಯಿಸುವ ನಮ್ಮ  ಜನರೇ ನಿಜವಾಗಲೂ ಮಹಾ ಪಾಪಿಗಳಾ? 

ಕಾವಿಯ ಬಟ್ಟೆಯನ್ನು ಧರಿಸಿದ ಸನ್ಯಾಸಿಗಳು... ಮಠದ ಹೆಸರಿನಲ್ಲಿ ಅಧಿಕಾರ, ಹೆಣ್ಣು ಹೊನ್ನು ಮಣ್ಣಿಗಾಗಿ ಮಾಡುವ  ಅನಾಚಾರ , ಹಾಗೂ ಹೋರಾಟಗಳು  ಮಹಾ ಪಾಪವಾದರೂ.. ಅಂತಹ ಮಹಾ ಪಾಪಿಗಳನ್ನು ಆರಾಧಿಸುವ ನಾವೇನು?

ಉದರ ನಿಮಿತ್ತಂ ಬಹುಕೃತ ವೇಷಃ ಎನ್ನುವ ಸಾಲನ್ನು ನಮ್ಮ ಕೈಲಾಸಮ್ ಅವರು ಉದರ ನಿಮಿತ್ತಂ ಬಹುಕೃತ ಮೋಸಃ ಎಂದು ವಿಶ್ಲೇಷಿಸಿದ್ದು ಎಷ್ಟು ಸರಿ ಅಲ್ಲವೇ?

ಇದಕ್ಕೊಂದು ಉದಾಹರಣೆ... ಮೂರ್ನಾಲ್ಕು ಜನ ಸದೃಢ ಯುವಕರು.. ಆಧುನಿಕ ಬಟ್ಟೆ ಬರೆಗಳಲ್ಲಿ ಬಂದವರು... ಮರೆಯಲ್ಲಿ ಕೂತು ಹಣೆಗೆ ಢಾಳಾಗಿ ವಿಭೂತಿ ಇಟ್ಟು.. ಕಾವಿಯ ಬಟ್ಟೆ ಹಾಗೂ ತಲೆಗೆ ಕಾವಿಯ ಪೇಟ,ರುದ್ರಾಕ್ಷಿ ಮಾಲೆ, ಜೊತೆಗೆ ಕಾವಿಯ ಒಂದು ಜೋಳಿಗೆ... ಹೀಗೆ ತಮ್ಮ ವೇಷವನ್ನು ಬದಲಾಯಿಸಿಕೊಂಡು ಹೊರಟದ್ದು... ಸಂತರಂತೆ ನಟಿಸಿ... ಭಿಕ್ಷೆ ಬೇಡಲು. ಅಮಾಯಕ ಮನಸ್ಸಿನ ಜನ ಈ ವೇಷವನ್ನು ನೋಡಿ ತಮ್ಮ ಕೈಲಾದಷ್ಟು ದುಡ್ಡು ಕೊಟ್ಟು ಕಳಿಸಿದ್ದನ್ನು ನಾನು ನೋಡಿದ್ದೇನೆ. 

ಇನ್ನೊಂದು ಗುಂಪಿದೆ... ಇದು ಕನ್ನಡದ ಸೇವಕರ ಗುಂಪು. ಕನ್ನಡದ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಇವರ ಗುರಿ. ಅದರಲ್ಲೂ ನವಂಬರ್ ಬಂತೆಂದರೆ ಇವರ ಹಾವಳಿ ಅತಿ ಹೆಚ್ಚು.

ಈಚೆಗೆ ಒಬ್ಬ ರಾಜಕಾರಣಿ ತಾನು ಹಿಂದೂ ಧರ್ಮದವನು ಎಂದು ಘೋಷಿಸಿಕೊಂಡು.. ಬಟ್ಟೆಯ ಮೇಲೆ ಜನಿವಾರವನ್ನು ಎಲ್ಲರಿಗೂ ಕಾಣಿಸುವಂತೆ ಹಾಕಿಕೊಂಡು... ದೇವಸ್ಥಾನಗಳನ್ನು ಸುತ್ತಿ....ವೋಟು ಗಳಿಸುವ ಪ್ರಯತ್ನ ಮಾಡಿದ್ದು ನಾವೆಲ್ಲ ನೋಡಿದ್ದೇವೆ... ಮೇಲ್ನೋಟಕ್ಕೆ ಹಿಂದುವಂತೆ ಕಾಣಿಸಿಕೊಂಡು ಆಂತರ್ಯದಲ್ಲಿ ಹಿಂದೂ ಸಮಾಜವನ್ನೇ ದ್ವೇಷಿಸುವ ಒಂದು ಹುನ್ನಾರ.  ನಂತರದ ದಿನಗಳಲ್ಲಿ ಹಿಂದೂ ಧರ್ಮವನ್ನು ಹಿಂಸೆಯ ಧರ್ಮ ಎಂದು ಹೇಳಿದ ಮಾತೂ ಕೇಳಿದ್ದಾಯಿತು. ಇದು ಈ ಕಾಲದ ರಾವಣರ ಮಾತಾಯಿತು.

ರಾಮಾಯಣ ಕಾಲದ ರಾವಣ ಎಂದಾಗ ಮೊದಲು ಬರುವ ಅಭಿಪ್ರಾಯವೇ ಅವನೊಬ್ಬ ರಾಕ್ಷಸ ಹಾಗೂ ಕೆಟ್ಟವನು ಎಂದು.

ಆದರೆ ರಾವಣನ ಇನ್ನೊಂದು ಮುಖವನ್ನು ಗಮನಿಸಿದಾಗ... ಅವನು ವೇದ ಉಪನಿಷತ್ತುಗಳ ಆಳ ಅಧ್ಯಯನ ಮಾಡಿ ಜ್ಞಾನ ಪಡೆದ ಕಾರಣದಿಂದ ಬ್ರಾಹ್ಮಣ ಎನಿಸಿಕೊಂಡವನು. ಅವನೊಬ್ಬ ಅಪ್ರತಿಮ ಶಿವ ಭಕ್ತ. ಭಕ್ತಿಯಿಂದ ಶಿವನನ್ನು ಒಲಿಸಿಕೊಂಡು ಅವನ ಆತ್ಮಲಿಂಗವನ್ನೇ ಪಡೆದುಕೊಂಡಂತಹ ಶ್ರೇಷ್ಠ ಭಕ್ತ.  ತ್ರಿಕಾಲ ಸಂಧ್ಯಾವಂದನೆಯನ್ನು ತಪ್ಪದೇ ಮಾಡುತ್ತಿದ್ದ ಕರ್ಮಠ. 

ಅಷ್ಟೇಕೆ ಸ್ವತಃ ಶ್ರೀರಾಮನೇ ಯುದ್ಧದ ಸಮಯದಲ್ಲಿ... ಯುದ್ಧ ಕಂಕಣವನ್ನು ರಾವಣನ ಕೈಯಿಂದ ಕಟ್ಟಿಸಿಕೊಂಡು, ಅವನ ಆಶೀರ್ವಾದ ಪಡೆದುಕೊಳ್ಳುತ್ತಾನೆ.

ಇನ್ನು ಶೌರ್ಯಕ್ಕೆ ಬಂದರೆ ಅವನೊಬ್ಬ ಅಪ್ರತಿಮ ಶೂರ, ತನ್ನ ಪ್ರಜೆ ಗಳನ್ನು ಚೆನ್ನಾಗಿ ನೋಡಿಕೊಂಡು ರಾಜ್ಯವಾಳುತ್ತಿದ್ದ ಜನಾನುರಾಗಿ ರಾಜ.

ಅಶೋಕವನದಲ್ಲಿದ್ದ ಸೀತೆಯನ್ನು ಒಲಿಸಿಕೊಳ್ಳಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಪಟ್ಟವನಿಗೆ.. ಬಂದ ಸಲಹೆ ರಾಮನ ರೂಪದಲ್ಲಿ ಹೋಗಿ ಪ್ರಯತ್ನಿಸು ಎಂದು... ಅದಕ್ಕೆ ರಾವಣನ ಉತ್ತರ.. ಅದೂ ಪ್ರಯತ್ನಪಟ್ಟೆ... ರಾಮನ ವೇಷ ಹಾಕಿ, ರಾಮನಂತೆ ಇರಲು ಪ್ರಯತ್ನಿಸಿದಾಗ... ಪರನಾರಿಯನ್ನು ಕಣ್ಣೆತ್ತಿ ನೋಡಲೂ ಮನಸ್ಸು ಬರಲಿಲ್ಲ ಎಂದ ಮಾತು ಹೊರನೋಟಕ್ಕೆ ರಾಮನ  ಗುಣಗಾನವಾದರೂ, ರಾವಣನಲ್ಲಿದ್ದ  ಧರ್ಮಚಿಂತನೆಯ ಎಳೆಯು ಗೋಚರವಾಗುತ್ತದೆಂದು ನನ್ನ ಭಾವನೆ.

ಇಷ್ಟೆಲ್ಲಾ ಒಳ್ಳೆಯ ಗುಣಗಳಿದ್ದ, ತನ್ನ ಪರಮ ಭಕ್ತನಾದ ರಾವಣನಿಗೆ ಯುದ್ಧದಲ್ಲಿ ಸತ್ತ ನಂತರ, ಮೋಕ್ಷವನ್ನು ಕೊಡಲು ಶಿವನು ಒಪ್ಪುವುದಿಲ್ಲವಂತೆ. ಕಾರಣ ಅವನು ಮಹಾಪಾಪಿ. ಸೀತೆಯನ್ನು ಅಪಹರಿಸಲು  ಅವನು ಬಂದದ್ದು ಒಬ್ಬ ಸನ್ಯಾಸಿಯ ರೂಪದಲ್ಲಿ. ಸನ್ಯಾಸಿ ಎಂದು ನಂಬಿ ಹೊರಬಂದ ಸೀತೆಯನ್ನು ಮೋಸದಿಂದ ಅಪಹರಿಸಿದ್ದು ಮಹಾ ಪಾಪ. ಅವನಲ್ಲಿದ್ದ ಸ್ತ್ರೀಲಂಪಟತನ ಎಂಬ ದೋಷ ಎಲ್ಲ ಒಳ್ಳೆಯ ವ್ಯಕ್ತಿತ್ವವನ್ನು ನುಂಗಿ ಹಾಕಿತು.

ಬಿಳಿಯ ಬಟ್ಟೆಯ ಮೇಲಿನ ಕಪ್ಪು ಚುಕ್ಕೆ  ಬಿಳಿಯ ಬಣ್ಣವನ್ನೇ ನುಂಗಿದಂತೆ, ಗುಲಗಂಜಿಯ ಮೇಲಿನ ಕಪ್ಪು ಬಣ್ಣ ಅದರ ಕೆಂಪು ಬಣ್ಣವನ್ನೇ ಅಂದಗೆಡಿಸಿದಂತೆ, ಎಷ್ಟು ಒಳ್ಳೆಯತನಗಳು ಇದ್ದರೂ ಒಂದು ಕೆಟ್ಟತನ ಅವನ್ನೆಲ್ಲಾ ನುಂಗಿ ಹಾಕುತ್ತದೆ.



ಗುಲಗಂಜಿಯ ತೂಕದಷ್ಟಾದರೂ ಒಳ್ಳೆಯತನ ಇರಬೇಕು ಎಂಬುದು ಒಂದು ಮಾತು. ಗುಲಗಂಜಿ ಒಂದು ಕಾಲಕ್ಕೆ ತೂಕದ ಮಾನಕ... ಆದರೆ ವಿಪರ್ಯಾಸ... ಗುಲಗಂಜಿಯ ಸುಂದರವಾದ ಬಣ್ಣವು ಅದರ ಮೇಲಿರುವ ಕಪ್ಪು ಚುಕ್ಕೆಯಿಂದ ಮುಕ್ಕಾಗುತ್ತದೆ. ಹಾಗಾಗಿ  ಗುಲಗಂಜಿಗೂ ರಾವಣನಿಗೂ ಸಾಮ್ಯ ಇದೆ ಎಂಬ ಭಾವ ನನ್ನದು.

ಇದನ್ನೆಲ್ಲಾ ಮೆಲುಕು ಹಾಕಿದಾಗ... ಈ ಘಟನೆಗಳಿಗೆಲ್ಲ ಕಾರಣ ಸಂಬಂಧಪಟ್ಟ ವ್ಯಕ್ತಿಗಳ ದುರಾಸೆ, ಹಣ ದಾಹಿತನ, ಅಧಿಕಾರ ಲಾಲಸೆ ...ಹೀಗೆ ಎಲ್ಲವೂ ಸ್ವಾರ್ಥ ಸಾಧನಗಳೇ. 

ಆಸೆ ಇಲ್ಲದೇ ಇದ್ದರೆ.. ಜೀವನಕ್ಕೆ ಗುರಿಯೇ ಇಲ್ಲದಂತೆ...  ಏನೇ ಕೆಲಸ ಮಾಡಬೇಕಾದರೂ ಅದರ ಮೂಲ ಸ್ರೋತ ಆಸೆ.  'ಆಸೆಯೇ ದುಃಖಕ್ಕೆ ಕಾರಣ' ಎಂಬ ಬುದ್ಧೋಕ್ತಿಯನ್ನು 'ದುರಾಸೆಯೇ ದುಃಖಕ್ಕೆ ಕಾರಣ' ಎಂದು ಬದಲಾಯಿಸುವುದು ಸಮಂಜಸ ವೇನೋ. 

ಹಣ... ಜೀವನ ನಿರ್ವಹಣೆಗೆ  ಮೂಲಭೂತವಾಗಿ ಬೇಕು. ಅದು ದಾಹವಾಗಿ ಪರಿವರ್ತಿತ ಗೊಂಡಾಗ... ಅಡ್ಡ ದಾರಿ ಹಿಡಿದು ಸಂಪಾದನೆ ಮಾಡುವ ಸ್ಥಿತಿಗೆ ದೂಡುತ್ತದೆ. 

ಅಧಿಕಾರ ಎನ್ನುವುದು ಒಂದು ಅಮಲು. ಅಮಲು ಹೆಚ್ಚಾದಂತೆ... ಜನರ ಸೇವೆಗಾಗಿ ಉಪಯೋಗಿಸುವ ಅಧಿಕಾರವನ್ನು.. ಸ್ವಾರ್ಥ ಸಾಧನೆಗಾಗಿ ಉಪಯೋಗಿಸುವುದು ಸಾಮಾನ್ಯವಾಗಿದೆ. 

ಲಂಚ ತೆಗೆದುಕೊಳ್ಳುವುದು ಅವಮಾನ ಎಂಬ ಭಾವವು ಇದ್ದ ಕಾಲವಿತ್ತು. ಅದು ಮೇಜಿನ ಕೆಳಗಿನ ವ್ಯವಹಾರವಾಗಿ ನಡೆಯುತ್ತಿತ್ತು. ಈಗ ಅದು ರಾಜಾರೋಷವಾಗಿ.... ಅಧಿಕಾರಯುತವಾಗಿ ಕೇಳುವ ಮಟ್ಟಕ್ಕೆ ಬಂದು ನಿಂತಿದೆ.... 

ಲಂಚ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷದ ರಾಜಕಾರಣಿಗಳು ಮಾಡಿದ್ದು ಮಾತ್ರ ಲಂಚ ಪೋಷಣೆ. ಕೆಲ ಆಯಕಟ್ಟಿನ ಸ್ಥಳಗಳಿಗೆ (ಅಲ್ಲಿ ಸಂಪಾದನೆ ಜಾಸ್ತಿ)  ಹೋಗಬೇಕಾದ ಅಧಿಕಾರಿಗಳು, ಅದಕ್ಕಾಗಿ ಅಪಾರ ಹಣವನ್ನು ತೆತ್ತು ಹೋದಾಗ... ಸಹಜವಾಗಿ ಅದನ್ನು ಹಿಂಪಡೆಯಲು ಲಂಚವೇ ಮಾರ್ಗ. ಇದು ರಕ್ತ ಬೀಜಾಸುರನಂತೆ ವೇಗವಾಗಿ ಪಸರಿಸುತ್ತಿದೆ. 

ಮಾಸ್ಟರ್ ಹಿರಣ್ಣಯ್ಯನವರು ಹೇಳಿದಂತೆ ಲಂಚವೆಂಬ ರಾಕ್ಷಸನ ತಲೆಯನ್ನು ಕತ್ತರಿಸಿದರೆ ಮಾತ್ರ ಅದು ಕೊನೆಗೊಳ್ಳುತ್ತದೆ .. ಆದರೆ ಈಗಿರುವ ಪ್ರಶ್ನೆ 'ಬೆಕ್ಕಿಗೆ ಗಂಟೆ ಕಟ್ಟುವವರು ಯಾರು' ಎಂದು. 

ಇದನ್ನು ಮಾಡಲು 'ಯದಾ ಯದಾಹಿ ಧರ್ಮಸ್ಯ  ಗ್ಲಾನಿರ್ಭವತಿ ಭಾರತ... ...........                        .....ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ' ಎಂದು ಹೇಳಿದ ಆ ಕೃಷ್ಣಪರಮಾತ್ಮನೇ ಬರಬೇಕೆನೋ?

ಅವನ ಬರುವನ್ನು ಕಾಯುತ್ತಾ ಇರುವುದೇ ನಮಗಿರುವ ದಾರಿ ಎಂದು ನನ್ನ ಅನಿಸಿಕೆ.

ಬೇಗ ಬಾರೋ ಕೃಷ್ಣಯ್ಯ.... ಎಂದು ಕೇಳಿ ಕೊಳ್ಳುತ್ತಾ...

ನಮಸ್ಕಾರ.


D C Ranganatha Rao

9741128413



    

    

   



 

Comments

  1. ಚೆನ್ನಾಗಿದೆ ಬರಹ ಸರ್

    ReplyDelete
  2. Nicely written.

    ReplyDelete
  3. ಪಾಪ ಪುಣ್ಯಗಳ ಸಂಘರ್ಷ ಅನಾದಿಕಾಲದಿಂದಲೂ ನಡೆದು ಬಂದೇ ಇದೆ.
    ಇವೆರಡು ಒಂದೇ ನಾಣ್ಯದ ಎರಡು ಮುಖಗಳು.

    ಬಾಲ್ಯವನ್ನು ಕಳೆದು ಮುಪ್ಪು ಆವರಿಸುವವರೆಗೂ ತಿಳಿದೋ ತಿಳಿಯದೆಯೋ ನಾವು ಒಂದಲ್ಲ ಒಂದು ಪಾಪಗಳನ್ನು ಮಾಡುತ್ತಲೇ ಇರುತ್ತೇವೆ.
    ಲೇಖನದಲ್ಲಿ ಪಾಪದ ಸಮಗ್ರ ಚಿತ್ರಣವನ್ನು ನೀಡಲಾಗಿದೆ. ಪಾಪಕ್ಕೆ ಶಿಕ್ಷೆಗಿಂತ ಪ್ರಾಯಶ್ಚಿತ್ತವೇ ಸರಿಯಾದ ಮಾರ್ಗವೆಂದು ನನ್ನ ಭಾವನೆ

    ಮನುಜ ಆದಷ್ಟು ಒಳ್ಳೆಯ ಮಾರ್ಗದಲ್ಲಿಯೇ ಸಾಗಬೇಕು ಪಾಪಗಳು ಅನಿವಾರ್ಯವೆನಿಸಿದಾಗ ಮಾತ್ರ ವಿನಾಯತಿಗೆ ಒಳಪಡುತ್ತದೆ. ಆದರೂ ಅದು ತಪ್ಪು

    ಶಾಂತಂ ಪಾಪಂ 😅

    ವಂದನೆಗಳೊಂದಿಗೆ

    ಗುರುಪ್ರಸನ್ನ
    ಚಿಂತಾಮಣಿ

    ReplyDelete
  4. ನಾಗೇಂದ್ರ ಬಾಬು26 December 2024 at 09:13

    ದೇವರಿಗೆ ಹರಕೆ ಎಂಬ ಲಂಚದ ಆಮಿಷ ಒಡ್ಡುವ ನಮ್ಮಿಂದ ಲಂಚ ನಿರ್ಮೂಲನೆ ಮಾತು ಹಾಸ್ಯಾಸ್ಪದ...ಒಂದು ದೊಡ್ಡ ಕಾದಂಬರಿ ಬರೆಯ ಬಹುದಾದ ವಿಷಯ ಕುರಿತು ಸರಳವಾಗಿ ವಿವರಿಸಿದ್ದೀರಾ...
    ಕೇವಲ ಬೆರಳೆಣಿಕೆಯಷ್ಟು ಪರದೇಶಿಗರು ನಮ್ಮನ್ನು ನೂರಾರು ವರ್ಷಗಳ ಕಾಲ ಆಳ್ವಿಕೆ ಮಾಡಿದ್ದು ಕೂಡ ಲಂಚದ ಆಮಿಷದಿಂದ ಹಾಗಾಗಿ ಹೊಂದಿಕೊಂಡು ಹೋಗುವುದು ಸೂಕ್ತ ಎಂದು ನನ್ನ ಅನಿಸಿಕೆ
    ಬಾಬು

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ