ಎರಡು ದೋಣಿಯಲ್ಲಿ ಕಾಲು ಸಲ್ಲದು.



ಆಪ್ತಸಮಾಲೋಚಕನಾಗಿ ಕೆಲವು ಪ್ರಸಂಗಗಳನ್ನು case history ರೂಪದಲ್ಲಿ  ಬರೆದದ್ದಿದೆ. ಕಥೆಯ ರೂಪದಲ್ಲಿ ಬರೆಯುವ ನನ್ನ ಪ್ರಯತ್ನ ಇದೇ ಮೊದಲು... ನಿಮ್ಮ ಸಲಹೆ / ಪ್ರೋತ್ಸಾಹ ಅತ್ಯಮೂಲ್ಯ. 

ಗೌಪ್ಯತೆಯನ್ನು ಕಾಪಾಡಲು ಹೆಸರುಗಳನ್ನು ಬದಲಾಯಿಸಿದ್ದೇನೆ.

_________________________________________

ಎರಡು ದೋಣಿಯಲ್ಲಿ ಕಾಲು ಸಲ್ಲದು.

ಆಟೋದಲ್ಲಿ ಮನೆಗೆ ಹೋಗುತ್ತಿದ್ದ ಲಕ್ಷ್ಮಿಗೆ ವಿಪರೀತ ತಲೆನೋವು, ಮನಸ್ಸಿನಲ್ಲಿ ಗೊಂದಲ, ಏನೋ ಆತಂಕ... ಬರುತ್ತಿದ್ದ ಅಳುವನ್ನು ಹೇಗೋ ತಡೆದುಕೊಂಡು, ಮನೆ ತಲುಪಿದಾಗ ಮಗಳ ಪ್ರೀತಿಯ  ಅಪ್ಪುಗೆ ಇಷ್ಟವಾದರೂ ನೆಮ್ಮದಿ ತರಲಿಲ್ಲ. ಯಾಕೆ ಸಪ್ಪಗಿದ್ದೀಯಾ ಎಂದು ಕೇಳಿದ ಅತ್ತೆಗೆ ಹಾರಿಕೆ ಉತ್ತರ ಕೊಟ್ಟು.. ಅವರು ಕೊಟ್ಟ ಕಾಫಿಯನ್ನು ಕುಡಿದು ಲೋಟ ಕೆಳಗಿಟ್ಟಾಗ ಒಂದು ನಿಟ್ಟುಸಿರು ತಾನಾಗೆ ಹೊರಗೆ ಬಂತು. ಕಣ್ಣು ಮುಚ್ಚಿ ಕೂತವಳಿಗೆ ಹಿಂದಿನ ಘಟನೆಗಳ ಸರಮಾಲೆ ಮನಸ್ಸಿನಲ್ಲಿ ಮೂಡಿ ಬಂತು.

ಇಂಜಿನಿಯರಿಂಗ್ ಮಾಡುವ ಆಸೆಗೆ ನೀರೆರದವನು ಅಪ್ಪ...

ಅಮ್ಮ ಸಂಪ್ರದಾಯಸ್ತ ಯೋಚನೆ ಮಾಡುವವಳು... ಹಾಗಾಗಿ ಓದಿ ಏನು ಕೆಲಸ ಮಾಡಬೇಕೆ.. ಮದುವೆ ಮಾಡಿ ಗಂಡನ ಮನೆಗೆ ಕಳಿಸಿದರೆ ಸಾಕು ಎಂಬ ಮನಸ್ಸು. 

ಇಂಜಿನಿಯರಿಂಗ್ ಕಾಲೇಜಿಗೆ ಹೋದ ಮೊದಲ ದಿನ ಸಂಭ್ರಮವೋ ಸಂಭ್ರಮ. ಎಲ್ಲ ಹೊಸ ಮುಖಗಳು... ಆ ದಿನಗಳಲ್ಲಿ ಪರಿಚಯವಾಗಿದ್ದು ಅವನು. ಎರಡು ವರ್ಷಗಳ ತನಕ ಹಾಯ್ ಬಾಯ್ ಅನ್ನುವಷ್ಟಕ್ಕೆ ಸೀಮಿತವಾಗಿದ್ದ ಪರಿಚಯ, ಗೆಳೆತನಕ್ಕೆ ಹೇಗೆ ತಿರುಗಿತ್ತೋ ಗೊತ್ತೇ ಆಗಲಿಲ್ಲ. ಬಣ್ಣ ತುಸು ಕಪ್ಪಾದರೂ ಅವನ ವೇಷಭೂಷ, ಹಾಸ್ಯ ಭರಿತ ಮಾತು, ಸುಂದರವಾದ ಅಕ್ಷರ, ನಗುವ ರೀತಿಯೂ ಇಷ್ಟವಾಗ ತೊಡಗಿತು... ಮನಸ್ಸು ಮತ್ತಷ್ಟು  ಹತ್ತಿರ ಆಯಿತು. 

ಪರೀಕ್ಷೆ ಮುಗಿದು.. ಫಲಿತಾಂಶಕ್ಕೆ ಕಾಯ್ತಾ ಇದ್ದೆ... ಮನೆಯಲ್ಲಿ ಮದುವೆಯ ಮಾತು ಶುರುವಾಗಿತ್ತು... ನನ್ನ ವಿಷಯ ಹೇಳಬೇಕಿತ್ತು... ಹೇಗೆ ಏನು, ಯಾವಾಗ ಅನ್ನುವ ಗೊಂದಲ ಇತ್ತು. ಅಪ್ಪನ ಹತ್ತಿರ ಮೊದಲು ಮಾತಾಡೋಣ.. ಅವರ ಚಿಂತನೆಗಳು ವಿಶಾಲವಾಗಿದೆ ಅಂತ ನಿಶ್ಚಯ ಮಾಡಿ ಅಪ್ಪ ಆಫೀಸಿನಿಂದ ಬಂದಾದ ಮೇಲೆ ಮೆಲ್ಲಗೆ ಅವರ ರೂಮಿಗೆ ಹೋದೆ... ಏನೇ ಮಗು ಅಂದ್ರು... ಹೊಟ್ಟೆಯಲ್ಲಿ ಚಿಟ್ಟೆಹಾರಿದಂಗೆ ಆಯ್ತು... ಕಾಲು ನಡುಕ.. ಅಪ್ಪನ ಹತ್ರ ಹೋಗಿ ನಿಂತೆ... ಅಳೆದು ಸುರಿದು... ಅಪ್ಪ ಮದುವೆ ಅಂದೇ.... ಅಷ್ಟರಲ್ಲಿ ಅಮ್ಮ ಕಾಫಿ ಹಿಡುಕೊಂಡು ... ಏನೋ ಮದುವೆ ಅಂತ ಮಾತಾಡ್ತಿದ್ದೀರಿ ಅಪ್ಪ ಮಗಳು ಅನ್ಕೊಂಡು ಬಂದೇ ಬಿಟ್ಲು. 

ಅದೆಲ್ಲಿಂದ ಧೈರ್ಯ ಬಂತೋ... ಅಪ್ಪಂಗೆ ಹೇಳಿಬಿಟ್ಟೆ... ನಾನು ಒಬ್ಬ ಹುಡುಗನ್ನ ಇಷ್ಟಪಡುತ್ತಿದ್ದೇನೆ ಅಂತ.  ಶುರುವಾಯಿತು ಅಮ್ಮನ  ಮಾತು... 'ಅದಕ್ಕೇ ನಾನು ಬಡ್ಕೊಂಡಿದ್ದು... ಇಂಜಿನಿಯರಿಂಗ್ ಬೇಡ... ಯಾವುದಾದರೂ ಹೆಣ್ಣು ಮಕ್ಕಳ ಕಾಲೇಜಲ್ಲಿ ಓದಲಿ ಅಂತ... ನೀವು ಮಗಳನ್ನು ಒಪ್ಪಕ್ಕಿಟ್ಕೊಂಡ್ರಿ.. ನೋಡಿ ಈಗೇನ್ ಮಾಡಿದ್ದಾಳೆ....'  ಅಮ್ಮನ ಹಿಡಿತವಿಲ್ಲದ ಮಾತು, ಜೊತೆ ಜೊತೆಗೆ ಅಳು... ಪದ್ದು ಗಾಬರಿಯಿಂದ ರೂಮ್ ಬಾಗಿಲಲ್ಲೇ ನಿಂತಿದ್ದಳು... ಅಪ್ಪ ಆಗಲೋ ಈಗಲೋ ಒಂದು ಮಾತು.. ಅದಕ್ಕೆ ಅಮ್ಮನ ಏರು ದನಿಯ ಉತ್ತರ.. ಅಳು.. ನಡೆದೇ ಇತ್ತು ಮಧ್ಯರಾತ್ರಿ ತನಕ. 

ಮನೆಯೆಲ್ಲ ನಿಃಶಬ್ದವಾಗಿತ್ತು, ಹಾಸಿಗೆಯಲ್ಲಿ ಮಲಗಿದ್ದರೂ, ಕಣ್ಣು ಮುಚ್ಚಲಾಗಲೇ ಇಲ್ಲ... ಪದ್ದು ಬಂದು ಪಕ್ಕದಲ್ಲಿ ಕೂತು ಕೈ ಹಿಡಿದುಕೊಂಡು.. ತಲೆ ಸವರಿದಳು.. ನನಗೂ ಒಬ್ಬರು ಜೊತೆಲಿದ್ದಾರೆ ಅನ್ನಿಸ್ತು.... 'ಅಕ್ಕ ಅಳ್ಬೇಡ್ವೆ... ಸಮಾಧಾನವಾಗಿರೆ... ವಿಷಯ ಏನು ಅಂತ ನನಗೂ ಸ್ವಲ್ಪ ಹೇಳೇ.. ಏನ್ ಮಾಡೋದು ಅಂತ ಯೋಚನೆ ಮಾಡೋಣ.....'   ಪಿಸುಗುಟ್ಟಿದಳು. ನನ್ನ ಅವನ ಪರಿಚಯ,ಓದಿನಲ್ಲಿ ನನಗೆ ಸಿಗುತ್ತಿದ್ದ ಜೊತೆ, ಅಲ್ಲಿಲ್ಲಿ ಓಡಾಟ... ಪರಸ್ಪರ ಮೆಚ್ಚುಗೆ... ಹಾಗೆ ಹತ್ತಿರವಾದಂತೆ ಮದುವೆ ಮಾಡಿಕೊಳ್ಳುವ ಚಿಂತನೆ ಎಲ್ಲವನ್ನು ಹೇಳಿದೆ... ಅವನ ಜಾತಿಯೊಂದನ್ನು ಬಿಟ್ಟು.... ಸ್ವಲ್ಪ ತಣ್ಣಗಾಗಲಿ ಅಪ್ಪನತ್ರ ಮಾತಾಡೋಣ, ಏನು ಅಡ್ಡಿ ಇಲ್ವಲ್ಲ ಅಂದಾಗ... ತಡೆಯಲಾಗದೆ ಹೇಳಿದೆ... ಅವನು ಬೇರೆ ಜಾತಿಯವನು... ಮಾಂಸನೂ ತಿಂತಾರಂತೆ... ಅಯ್ಯೋ ಹೌದೇನೇ ಅಂತ ಅವಳು ಹೇಳುವಷ್ಟರಲ್ಲಿ... ಅಮ್ಮನ ರೋದನೆ ಕೇಳಿಸ್ತು... ಅಯ್ಯೋ ದೇವರೇ ಇವಳಿಗೇನು ಬಂತು ಕೇಡುಗಾಲ... ನಾನ್ ಬದುಕಿರಲ್ಲ, ಈ ಅನಾಚಾರ ನನ್ನ ಕೈಲಿ ನೋಡಕ್ಕಾಗಲ್ಲ.... ಅಪ್ಪ  ಹೇಳಿದರು... ಕೂಗಬೇಡ .. 'ಅಕ್ಕ ಪಕ್ಕದ ಮನೆಗೆಲ್ಲಾ ಗೊತ್ತಾಗುತ್ತೆ.. ಸ್ವಲ್ಪ ತಾಳ್ಮೆ ಇರ್ಲಿ.. ಯೋಚನೆ ಮಾಡೋಣ... ವಿಷಯ ನನಗೆ ಬಿಡು ನಾನು ನೋಡಿಕೋತೀನಿ.... ' ಅಮ್ಮನ ಉತ್ತರ... 'ನೀವೇ ಅವಳನ್ನು ತಲೆ ಮೇಲೆ ಕೂಡಿಸಿಕೊಂಡು ಹಾಳ್ ಮಾಡಿರೋದು.. ಏನ್ ಬೇಕಾದ್ರು ಮಾಡ್ಕೊಳ್ಳಿ.. ಮೊದಲು ನನ್ ಹೆಣ ಸಾಗಿಸಿ... ಆಮೇಲೆ ನಿಮ್ಮಿಷ್ಟ.'

ನಾಲ್ಕಾರು ದಿನ ಮನೆಯಲ್ಲಿ ಅಗ್ನಿ ಪರ್ವತದ ಮೇಲೆ ಕೂತ ಅನುಭವ... ಮನೆಯ ವಾತಾವರಣ ತುಂಬ ಗಂಭೀರ... ಯಾರದೂ ಮಾತಿಲ್ಲ... ನನಗನ್ನಿಸ್ತು ನಾನ್ಯಾಕೆ ಬದುಕಿರಬೇಕು... ಎಲ್ಲರಿಗೂ ಕಷ್ಟ ಕೊಟ್ಕೊಂಡು....

ಈ ಸಮಯದಲ್ಲಿ... ಬಂದಿದ್ದು... ನಾನು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಯಾಗಿದ್ದೇನೆ... ಕೆಲಸಕ್ಕೆ ಬಂದು ಸೇರಬೇಕು ಎನ್ನುವ ಸಂದೇಶ. 

 ಏನಾದರೂ ಅವಳು ಮನೆ ಬಿಟ್ಟು ಕಾಲು ಹೊರಗೆ ಹಾಕಬಾರದು... ಮನೇಲಿ ಬಿದ್ದಿರಲಿ ಅಂತ..ಅಮ್ಮ.... ಅಪ್ಪ ಏನೂ ಮಾತಾಡ್ದೆ ಸುಮ್ಮನೆ ಇದ್ದರು... ನಾನು ಅಸಹಾಯಕಳಾಗಿ ಏನೂ ತೋಚದೆ... ಮಂಕಾಗಿದ್ದೆ. ಅವತ್ತು ರಾತ್ರಿ ನನಗೆ ನಿದ್ದೆ ಬರಲೇ ಇಲ್ಲ... ಅಳುವೇ ಅಳು... ಏನು ಪ್ರೇರಣೆಯೋ... ಹೋಗಿ ಅಪ್ಪನ ಪಕ್ಕದಲ್ಲಿ ಮಲಗಿದೆ... ಬಿಕ್ಕಿ ಬಿಕ್ಕಿ ಅಳು.. ಅಪ್ಪ ನನ್ನ   ಕಣ್ಣೀರು ಒರೆಸಿದ... ಮೆಲ್ಲನೆ ತಟ್ಟಿದ.. ಮನಸ್ಸಿಗೆ ಒಂದಷ್ಟು ನೆಮ್ಮದಿ... ಅಪ್ಪನ ಕಣ್ಣೀರು ನನ್ನರಿವಿಗೆ ಬಂತು. ಮನಸ್ಸು ಅಪ್ಪಾ ಅಪ್ಪಾ ಎಂದು ಚೀರಿತು. ಯಾವಾಗ ನಿದ್ದೆಗೆ ಜಾರಿದೆನೋ...

ಮನೆಯಲ್ಲೇ ಬಂದಿ... ಏನೋ ಚಡಪಡಿಕೆ... ಮೌನವೇ ಜೀವನ... ಅವನ ಹತ್ರ ಮಾತಾಡಿದರೆ ಒಂದಷ್ಟು ನೆಮ್ಮದಿ ಸಿಗಬಹುದೇನೋ... ಆದರೆ ಅದು ಮರೀಚಿಕೆ... ಏನೋ ಚಡಪಡಿಕೆ. ಚಡಪಡಿಕೆ... ಅವನು ಹೇಳಿದ ಶಬ್ದ... 'ಶನಿವಾರ ಮುಗಿದು ಸೋಮವಾರ ಬರೋ ತನಕ ಏನೋ ಚಡಪಡಿಕೆ... ನಿನ್ನ ನೋಡಬೇಕು ಅನ್ಸುತ್ತೆ ಅಂತ.. ' ಹೌದು ನನಗೂ ಅದೇ ಭಾವನೆ... ಹೇಳ್ಕೊಳ್ಳಕ್ಕೆ ನಾಚಿಕೇನಾ? ಅಂತಹ ಒಂದು ಸೋಮವಾರನೇ ಅವನು ನನ್ನ ಮದುವೆ ಮಾಡಿಕೊಳ್ಳುವ ಇಷ್ಟವನ್ನ ತೊಡಿಕೊಂಡಿದ್ದು... ಒಳ ಮನಸ್ಸಿನಲ್ಲಿ ಆಸೆ ಅದೇ ಇದ್ದರೂ... ತಕ್ಷಣ ಒಪ್ಪಿಗೆ ಕೊಡುವ ಧೈರ್ಯ ಬರಲೇ ಇಲ್ಲ... ಈಗನಿಸುತ್ತೆ... ಅವನ ಜಾತಿ ಅಡ್ಡ ಬರಬಹುದೇನೋ ಅನ್ನುವ ಭಯ ನನ್ನಲ್ಲಿ ಇತ್ತು ಅಂತ... ಹಾಗೇ ಆಯ್ತಲ್ಲ.

ಅಮ್ಮ ನನ್ನನ್ನು ಕಡೆಗಣಿಸುತ್ತಿದ್ದಾಳೆ ಅನ್ನಿಸ್ತು.. ಅಪ್ಪ ಮಾತ್ರ ಮೌನಿಯಾದರೂ ನನಗೆ ನೋವಾಗುವ ಹಾಗೆ ಒಂದೂ ಮಾತಾಡಲಿಲ್ಲ. 

ಮಧ್ಯಾಹ್ನ ಅಪ್ಪ ನನ್ನ ಪಕ್ಕ ಬಂದು ಕೂತು ಹೇಳಿದ 'ನಾಲ್ಕು ಗಂಟೆಗೆ ರೆಡಿಯಾಗು ಆಚೆ ಹೋಗೋಣ...' 'ಎಲ್ಲಿಗೆ' ಅಂತ ಕೇಳಿದೆ... 'ಆಚೆ ಹೋಗೋಣ ನಡಿ...' ಅಷ್ಟೇ ಉತ್ತರ. 

ನಾಲ್ಕು ಗಂಟೆಗೆ.. ಅಮ್ಮನ ಗೊಣಗಾಟ ಶುರುವಾಗಿತ್ತು... ಅಪ್ಪನ ಜೊತೆ ಹೊರಟೆ ..ಒಂದು ಮಾತಿಲ್ಲ... ಚಿಕ್ಕಂದಿನಲ್ಲಿ ಅಪ್ಪ ಅಮ್ಮ ಕರೆತರುತ್ತಿದ್ದ ಗುಡ್ಡದ ದೇವಸ್ಥಾನಕ್ಕೆ ಬಂದು ತಲುಪಿದೆವು... ದೇವರಿಗೆ ನಮಸ್ಕಾರ ಆಯ್ತು.. ಅಪ್ಪ ದೇವರ ವಿಭೂತಿಯನ್ನು... ತಾನೇ ಕೈಯಾರ ನನ್ನ ಹಣೆಗಿಟ್ಟ.. ಚಿಕ್ಕಂದಿನಲ್ಲಿ ಇಡುತ್ತಿದ್ದಂತೆ... ದುಃಖ ಒತ್ತರಿಸಿ ಬಂತು... ಅಳುವುದನ್ನು ಹೇಗೋ ತಡೆದುಕೊಂಡೆ. ನಾವು ಕೂಡುತ್ತಿದ್ದ ಅದೇ ಹಳೆಯ ಜಾಗಕ್ಕೆ ಬಂದು ಕೂತೆವು... ಲೋಕಾ ರೂಢಿಯಾಗಿ ಮಾತು ಶುರು ಮಾಡಿದ ಅಪ್ಪ.. ನಮ್ಮ ಬಾಲ್ಯದ ದಿನಗಳು... ಅವರು ಬೆಳೆದು ಬಂದ ಪರಿ... ನಮ್ಮಲ್ಲಿಟ್ಟ ಅಶೋತ್ತರಗಳು.. ಎಲ್ಲವನ್ನು ಹೇಳುತ್ತಾ... ಅವನನ್ನು ಮದುವೆಯಾದರೆ ಜೀವನ ಶೈಲಿಯಲ್ಲಿ ಎದುರಿಸ ಬೇಕಾಗಿ ಬರಬಹುದಾದ ಕಷ್ಟಗಳನ್ನು ತಿಳಿ ಹೇಳಿದ,  ನನ್ನನ್ನು ಇಂಜಿನಿಯರಿಂಗ್ ಗೆ ಸೇರಿಸುವಾಗ ಆದ ಮಾತುಕತೆಗಳನ್ನು ನೆನಪಿಸಿದ.... ಜೊತೆಗೆ ನನ್ನ ಪರ ನಿಂತಿದ್ದಕ್ಕಾಗಿ... ಅಮ್ಮನಿಂದ ಕೇಳಬೇಕಾದ ದೂಷಣೆಯನ್ನು ಎತ್ತಿ ಹೇಳಿದ. ತಪ್ಪಿತಸ್ಥ ಭಾವನೆ ನನ್ನಲ್ಲಿ ಮೂಡಿತು. ಅಪ್ಪ ಎಷ್ಟು ಸುಲಭವಾಗಿ ಮದುವೆಯ ವಿಷಯಕ್ಕೆ ಜಾರಿದನೆಂದರೆ ಹೇಳಿದ್ದು ಒಂದೇ ಮಾತು... 'ನೋಡು ಮಗು ನಾನು ನಿನ್ನ ಮದುವೆಗೆ ಅಡ್ಡಿ ಬರಲ್ಲ.. ಹಾಗಂತ ನಿನ್ನ ಮದ್ವೇನ.. ನಾನು ನಿಂತು ಮಾಡೋದೂ ಇಲ್ಲ... ನಿನ್ನ ಇಷ್ಟ ಬಂದ ಹಾಗೆ ಮಾಡು.... ನಿನ್ನ ಜೀವನ ನೀನೇ ಕಟ್ಟಿಕೋ... ನಿನ್ನ ನಿರ್ಧಾರ ಏನಿದ್ದರೂ ನನಗೆ ಒಪ್ಪದೇ ಬೇರೆ ದಾರಿ ಇಲ್ಲ... ಅದರ ಪರಿಣಾಮ ನಮ್ಮ ಮನೆತನದ ಗೌರವ ಕೆಳಗಿಳಿಯಬಹುದು... ಪದ್ದುವಿನ ಮದುವೆಗೂ ಒಂದಷ್ಟು ಅಡಚಣೆ ಯಾಗಬಹುದು.. ದೈವೇಚ್ಛೆ ಹೇಗಿದೆಯೋ ಹಾಗಾಗಲಿ... ಯೋಚನೆ ಮಾಡಿ ನಿರ್ಧಾರ ಮಾಡು.. ಬೇಗ ಮಾಡು... ಈ ಸಂದಿಗ್ದ ಸ್ಥಿತಿಯಿಂದ ನಾವೆಲ್ಲ ಬೇಗ ಪಾರಾಗೋಣ... ಆಗಬಹುದಾ?'

ಈ ಮಾತು ಕೇಳಿ ಎಷ್ಟು ಅತ್ತೆನೋ ಅದರ ಪರಿವೆಯೇ ಇಲ್ಲ. ಯಾರೋ ಬಂದು.. ಏನಾಯ್ತು ಎಂದು ಕೇಳಿದ ನೆನಪು... ಉತ್ತರ ಕೊಟ್ಟಿದ್ದು ಅಪ್ಪ... ಏನಿಲ್ಲ ಎಂದು.

ಮನೆಗೆ ಬಂದೊಡನೆ ಅಮ್ಮನ ಗುಡುಗು... ಆಯ್ತಾ ಅಪ್ಪ ಮಗಳ ರಾಯಭಾರ... ಇನ್ನೂ ನಾನು ಏನೇನು ನೋಡಬೇಕೋ....

ಎಷ್ಟು ಯೋಚನೆ ಮಾಡಿದರೂ ಏನು ಮಾಡಬೇಕು ಅಂತ ತೋಚಲೇ ಇಲ್ಲ.. ಅಪ್ಪ ಹೇಳಿದ್ದನ್ನೆಲ್ಲ ಪದ್ದುಗೆ ಹೇಳಿ ಅವಳ ಅಭಿಪ್ರಾಯ ಕೇಳಿದೆ..  ಏನೇ ಮಾಡ್ಲಿ ಅಂತ..  ಅಕ್ಕ ನನ್ನ ಬಗ್ಗೆ ಯೋಚನೆ ಮಾಡಬೇಡ, ನಿನ್ನ ಜೀವನದ ನಿರ್ಧಾರ ನೀನು ಮಾಡು ಅಂತ ಒಂದು ಮಾತು ಹೇಳಿ ಸುಮ್ನೆ ಆದಳು. 

ಅಪ್ಪ ಹೇಳಿದ್ಮೇಲೆ ಒಂದಷ್ಟು ಯೋಚನೆ ಮಾಡಿ, ಕಾಲೇಜಿಗೆ ಎಡತಾಕಿ ಅವನನ್ನು ಭೇಟಿ ಮಾಡಿ... ಸ್ಪಷ್ಟವಾಗಿ ಹೇಳಿಬಿಟ್ನಲ್ಲ... 'ನಮ್ಮಪ್ಪ ಅಮ್ಮನನ್ನು ದೂರ ಮಾಡಿಕೊಂಡು ಜೀವನ ಸಾಗಿಸುವ ಧೈರ್ಯ ನನಗಿಲ್ಲ... ನಮ್ಮ ಮದುವೆ ಸಾಧ್ಯ ಇಲ್ಲ.. ದಯವಿಟ್ಟು ಕ್ಷಮಿಸು... ಇನ್ ಮೇಲೆ ನಾವಿಬ್ರೂ ದೂರ ಇರೋಣ ಅಂತ.' ಅವನ ಒಪ್ಪಿಗೆಗೆ ನಾನು ಕಾಯಲೇ ಇಲ್ಲ. ನನ್ನ ನಿರ್ಧಾರ ತಿಳಿಸಿ ಬಂದೆನಲ್ಲ.  

ಅಪ್ಪಂಗೆ ಈ ವಿಷಯ  ತಿಳಿಸಿದಾಗ ನನ್ನ ಎರಡೂ ಕೈಹಿಡಿದುಕೊಂಡ... ಅದರಲ್ಲಿ ಆತ್ಮೀಯ ಹಿಡಿತ ಇತ್ತು... ಕಣ್ಣಿಗೆ ಒತ್ತುಕೊಂಡ... ಕಣ್ಣೀರು ನನ್ನ ಕೈಯನ್ನ... ಹಾಗೆ ನನ್ನ ಮನಸ್ಸನ್ನು ತಾಕಿತು... ತೊಳೀತು ಸಹ. ಮುಂದಿನ ಜೀವನ ನೀವು ತೋರಿಸಿದ ದಾರಿಯಲ್ಲಿ ಅಂತ ಹೇಳಿದ್ದು ಅಮ್ಮಂಗೆ ತಿಳಿದಾಗ.. ದೇವರ ಮುಂದೆ ತುಪ್ಪದ ದೀಪ ಹಚ್ಚಿದ್ಲು... ಸುಮ್ಮನೆ ನನ್ ಪಕ್ಕ ಕೂತಿದ್ದಷ್ಟೇ... ಒಂದೂ ಮಾತಿಲ್ಲ.

ಕೆಲಸಕ್ಕೆ ಸೇರಿದ್ದು... ಮನಸ್ಸು ಬೇರೆ ಕಡೆ ತೊಡಗಿಸಿಕೊಳ್ಳುವಂತೆ ಮಾಡಿತು... ಅಪ್ಪ ಅಮ್ಮ ನೋಡಿದ ಹುಡುಗ ಭಾಸ್ಕರ್ ಅವರನ್ನು ಮದುವೆಯಾಗಿ ಜೀವನ ಹೊಸತಿರುವನ್ನು ಪಡೆದು... ವರ್ಷದಲ್ಲಿಯೇ ಮಗಳ ಆಗಮನ.. ಇನ್ನೂ ಹರ್ಷ ತಂದಿತ್ತು... ಅಪ್ಪ ಅಮ್ಮ ಇಬ್ಬರಿಗೂ ಖುಷಿಯೋ ಖುಷಿ. 

ಈ ಸಮಯದಲ್ಲೇ ಭಾಸ್ಕರ್ ಗೆ  ಆಫೀಸ್ ಕೆಲಸದ ಮೇಲೆ ಚೆನ್ನೈಗೆ ವರ್ಗ. ಹೇಗಪ್ಪಾ ಅವರಿಲ್ಲದೆ ಜೀವನ ಸಾಗ್ಸೋದು ಅಂತ ಯೋಚನೆಯಾಗಿದ್ದು ಸಹಜವೇ.

ನಿಜಕ್ಕೂ ನಾನು ಅದೃಷ್ಟವಂತಳು... ಅಮ್ಮನಂತೆ ಪ್ರೀತಿ ತೋರಿಸುವ ಅತ್ತೆ.. ಜೊತೆಗೆ ಮಗಳು,  ಹಾಗಾಗಿ ಭಾಸ್ಕರ ದೂರ ಇದ್ದಾಗಲೂ ಜೀವನ ದುಸ್ತರ ಎನಿಸಿಲ್ಲ.

ಮಗಳು ತೊಡೆ ಮೇಲೆ ಬಂದು ಕೂತದ್ದಕ್ಕೆ ವಾಸ್ತವಕ್ಕೆ ಬಂದೆ... ನಾಳೆ ಶನಿವಾರ, ಭಾಸ್ಕರ್ ಬರ್ತಾರೆ...

ಅತ್ತೆಗೆ ಮಗ ಬರ್ತಾನೆ ಎನ್ನುವ ಸಂಭ್ರಮ... ಅವರಿಗೆ ಇಷ್ಟವಾದ ಊಟ ತಿಂಡಿ ಮಾಡಕ್ಕೆ ತಯಾರಿ. 

ಮಗಳಿಗೆ ಊಟ ಮಾಡಿಸಿ, ಅತ್ತೆಯ ಬಲವಂತಕ್ಕೆ ಊಟದ ಶಾಸ್ತ್ರ ಮಾಡಿ... ಮಗಳಿಗೆ ಕಥೆ ಹೇಳುವಾಗಲೂ ಉತ್ಸಾಹ ಇರಲಿಲ್ಲ.

ಮಗು ನಿದ್ದೆಗೆ ಜಾರಿತು...

ಬೆಳಗಿನ ಜಾವ ಭಾಸ್ಕರ್ ಬಂದಾಗ ಮಗು ಇನ್ನೂ ಮಲಗಿತ್ತು..   ಎರಡು ದಿನ ಹೋಗಿದ್ದೇ ಗೊತ್ತಾಗಲಿಲ್ಲ..  ಭಾನುವಾರ ರಾತ್ರಿ ಯಾವಾಗಿನಂತೆ ಭಾಸ್ಕರ್ ಪ್ರಯಾಣ ಚೆನ್ನೈಗೆ... ಇನ್ನು ಸೋಮವಾರದಿಂದ ಯಾಂತ್ರಿಕ ಜೀವನ.. ಆಫೀಸು ಮನೆ, ಆಫೀಸು ಮನೆ. ಆಫೀಸಿನಲ್ಲಿ ಸ್ಮಿತಾ ಒಳ್ಳೆಯ ಜೊತೆಗಾತಿ. ನಾವಿಬ್ಬರೂ  ಮಧ್ಯಾಹ್ನ.. ಹೋಟೆಲ್ ಗೆ ಹೋಗಿ ಕಾಫಿ ಕುಡಿದು ಬರುವುದು ಒಂದು ವಾಡಿಕೆ.

ಅವತ್ತು ಹೋಟೆಲ್ ನಲ್ಲಿ ಅವನನ್ನ ನೋಡ್ದಂಗಾಯ್ತು... ದೂರದಲ್ಲಿದ್ದ... ಅವನೇನಾ ಅಂತ ಮತ್ತೊಮ್ಮೆ ನೋಡಿದೆ ...ಹೌದು ಅವನೇ... ಇಲ್ಲಿಗ್ ಯಾಕೆ ಬಂದ... ಅಮೆರಿಕದಲ್ಲಿ ಇದ್ದಾನೆ ಅಂತಿದ್ರಲ್ಲ... ಸ್ವಲ್ಪ ಕುತೂಹಲ... ಸ್ವಲ್ಪ ಹಿಂಜರಿಕೆ.. ಸದ್ಯ ಹೊರಟೋದ.

ನಾಲ್ಕು ದಿನ ಆದ್ಮೇಲೆ, ನಾನು ಸ್ಮಿತಾ ಹೋಟೆಲ್ ನಲ್ಲಿ ಕೂತಿದ್ದಾಗ, ದಿಡೀರ್ ಅಂತ ಬಂದು ಹಲೋ ಅಂತ ಕೈ ಚಾಚಿದ.... ನಾನು ಕೈ ಕೊಟ್ಟೆ... ಸ್ಮಿತಂಗೆ ಪರಿಚಯ ಮಾಡಿಕೊಟ್ಟೆ... ನನ್ ಕ್ಲಾಸ್ ಮೇಟ್ ಅಂತ. ಯಾವ ಭಾವನೇನೂ ತೋರಿಸದೆ, ಅದು-ಇದು ತಮಾಷೆಯಾಗಿ ಮಾತಾಡಿ... ಅವನ ಕಾರ್ಡ್ ಕೊಟ್ಟು... ನನ್ ಕಾರ್ಡು ಇಸ್ಕೊಂಡು ಮಾಯ ಆದ. ಸ್ಮಿತ ಅವನನ್ನ ಹೊಗಳಿದ್ಳು ಜಾಣ ಅಂತ. ಖುಷಿಯಾಗಿದ್ದು ಸತ್ಯ. 

ನಾಲ್ಕಾರು ಸಲ ಫೋನ್ ಮಾಡಿದ ಅದು ಇದು ಮಾತಾಡ್ತಾ... ಇನ್ನು ಮದುವೇನೇ ಆಗಿಲ್ಲ ಅಂತ ತಿಳಿಸಿದ... ಅಯ್ಯೋ ಅನ್ನಿಸ್ತು.... ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದ್ದೇನೆ ಅಂದ...ಹಿಂದೆ ಮಾತಾಡುತ್ತಾ ಇದ್ದ ಪ್ರೀತಿಯ ಮಾತುಗಳನ್ನ ಒಂದೆರಡು ಮಧ್ಯೆ ತೂರಿಸಿದ... ಅವು ಕಚಗುಳಿ ಇಟ್ಟವು... ತಕ್ಷಣ ಮಗಳು ಗಂಡನ ನೆನಪಾಗಿ... ಥೂ ನನ್ ಮನಸೇ ಅಂತ ಬೈದುಕೊಂಡೆನಲ್ಲ.... ಭೇಟಿಯಾಗೋಣ ಅಂತ ಒಂದು ಪ್ರಸ್ತಾಪ ಇಟ್ಟ... ಮತ್ತೆ ಮತ್ತೆ ಕೇಳಿದ... ಗೋಗರೆದ,  ಮನಸ್ಸಿಲ್ಲದ ಮನಸ್ಸಿನಿಂದ.. ಅಳೆದು ಸುರಿದೂ...ಒಂದ್ಸಲ ಭೇಟಿ ಮಾಡೋಣ ಅಂತ ನಿರ್ಧಾರ ಮಾಡಿ ಆಫೀಸಿಗೆ ರಜ ಹಾಕಿ ಭೇಟಿ ಮಾಡ್ದೆ... ಅದೇ ತಪ್ಪಾಯ್ತಾ... ಎಂಥಾ ಮಾತು ಹೇಳಿದ... ನೀನು ಮನಸ್ಸು ಮಾಡಿದರೆ ಈಗಲೂ ನಾನು ನೀನು ಜೊತೆಯಾಗಿ ಇರಬಹುದಲ್ವಾ ಅಂದ... ಹೊಟ್ಟೆಯಲ್ಲಿ ತಳಮಳ, ಬಾಯಿ ಒಣಗ್ತು... ಕಪಾಳಕ್ಕೆ ಹೊಡೆಯೋ ಅಷ್ಟು ಕೋಪ... ಅಸಹಾಯಕತೆ, ಆಟೋ ಹತ್ತಿ ಮನೆಗೆ ಓಡಿ ಬಂದೆನಲ್ಲ...

ಮಾರನೆಯ ದಿನ ಮಧ್ಯಾಹ್ನ ಆಫೀಸಲ್ಲಿ ಸ್ಮಿತಾ ನನ್ನಲ್ಲಾದ ಬದಲಾವಣೆಯನ್ನು ಗಮನಿಸಿ, 'ಯಾಕೇ.. ಒಂತರ ಇದ್ದೀಯಾ' ಅಂತ ಕೇಳಿದಾಗ.. ಏನು ಹೇಳಬೇಕು ಅಂತ ತೋಚಲಿಲ್ಲ... ಮಧ್ಯಾಹ್ನ ಕಾಫಿಗೆ ಸ್ಮಿತಾ ಕರೆದಾಗ, ಹೋಗಲು ಇಷ್ಟವಾಗಲಿಲ್ಲ... ಅವನು ಬರ್ತಾನೆ ಅನ್ನೋ ಭಯದಿಂದ.  

'ಯಾಕೇ..ಕಾಫಿ ಮೇಲು ಬೇಜಾರು?  ಗಂಡ ಜೊತೆಯಲ್ಲಿ ಇಲ್ಲ ಅಂತ ಬೇಸರನಾ?.. ತಿಂಗಳಿಗೆ ಒಂದ್ ಸಾರಿನಾದ್ರೂ ಬರ್ತಾನಲ್ಲ.. ಸಂತೋಷ ಪಡು... ಅಲ್ಲ ಕಣೇ ನನ್ ಪರಿಸ್ಥಿತಿ ನೆನೆಸಿಕೊ... ನಿಂದು ಸಾವಿರ ಪಾಲು ಮೇಲು ಅಲ್ವಾ.. ' ಅಂದಾಗ ಕಣ್ಣಲ್ಲಿ ನೀರು ತುಂಬಿತು... ಹೌದು ಅಂತ ಗೋಣು ಹಾಕಿದೆ... ಅವಳ ಗಂಡ ಅವಳಿಂದ ದೂರಾಗಿ ವರ್ಷಗಳೇ ಕಳೆದಿವೆ ಪಾಪ. 

ಅವಳಿಗೇನು ಗೊತ್ತು ನನ್ನ ಮನಸ್ಸಿನ ತುಮುಲ... ಹೇಳಲಾರೆ, ಅನುಭವಿಸಲಾರೆ, ಸುಮ್ಮನೆಯೂ ಇರಲಾರೆ... ಒಂತರಾ ಧರ್ಮ ಸಂಕಟ.

ಎರಡು ದಿನ ನನ್ನ ಅನ್ಯಮನಸ್ಕತೆ ಗಮನಿಸಿದ ಸ್ಮಿತಾ 'ಯಾರಾದ್ರೂ ಕೌನ್ಸಲರ್ ಹತ್ರ ಮಾತಾಡು... ಒಂದಷ್ಟು ಪರಿಹಾರ ಸಿಗಬಹುದು' ಅಂತ ಹೇಳಿದವಳು ಇವತ್ತು ಅಡ್ರೆಸ್ ತಂದು ಕೊಟ್ಟು, ಬೇಕಾದರೆ ನಾನು ಜೊತೆಯಲ್ಲಿ ಬರ್ತೀನಿ ಅಂತ ಹೇಳಿ, ಹೋಗಲೇಬೇಕು ಅಂತ ಆರ್ಡರ್ ಮಾಡಿದ್ಲಲ್ಲ... ನಿಜಕ್ಕೂ ಅವಳ ಪ್ರೀತಿ ಕಾಳಜಿ ಮೆಚ್ಚಬೇಕು.

ಕೌನ್ಸಲರ್ ಹತ್ರ ಹೋಗೋದೇನೋ ಸರಿ.. ಆದರೆ ಅವರಿಗೇನು ಅಂತ ಹೇಳಲಿ... ಅವರು ನನ್ನ ಬಗ್ಗೆ ಏನ್ ಅನ್ಕೊಳಲ್ಲ.... ತಲೆ ಧಿಮ್ ಅಂತ ಇದೆ.

ಕೌನ್ಸಲರ್ ಹತ್ತಿರ ಹೋಗಲು ಒಂದಷ್ಟು ಹಿಂಜರಿಕೆ ಇತ್ತು... ಆದರೆ ಹೋಗೋದು ಅನಿವಾರ್ಯವಾಗಿತ್ತು.... ಅವರ ಪರಿಚಯ ಮಾಡ್ಕೊಂಡ್ರು.... ನನ್ ಬಗ್ಗೆ ಮಾತಾಡು ಅಂದ್ರು.... ಹೇಗ್ ಶುರು ಮಾಡಬೇಕು ಅಂತ ಯೋಚನೆ ಮಾಡ್ತಿದ್ದಾಗ... ಅವರು ನಮ್ಮನೆಯ ಬಗ್ಗೆ,  ಕೆಲಸ,  ಅಪ್ಪನ ಮನೆ ಹೀಗೆ ಎಲ್ಲ ವಿಚಾರಿಸಿ... ನನ್ನ ಆತಂಕಕ್ಕೆ ಕಾರಣ ಕೇಳಿದರು... ಸುತ್ತಿ ಬಳಸಿ ಪ್ರಶ್ನೆ ಕೇಳಿ... ಅವನ ವಿಚಾರನ ನನ್ನ ಬಾಯಿಂದ ಬಿಡಿಸಿದರು. 

'ನೋಡಮ್ಮ..  ಜೀವನದ ಇಂಥ ತಿರುವುಗಳಲ್ಲಿ... ನಮ್ಮ ಮನಸ್ಸು ತೂಗುಯ್ಯಾಲೆ ಆಡೋದು ಸಹಜ. ಹಿಂದೆ ಆಗಿ ಹೋಗಿದ್ದನ್ನು ಮತ್ತೆ ಮತ್ತೆ ಯೋಚಿಸಬಾರದು... ಕೆಟ್ಟ ಕನಸು ಅಂತ ಪಕ್ಕಕ್ಕೆ  ತಳ್ಳಬೇಕು... ನೀನು ಎಂಥ ಅದೃಷ್ಟವಂತೆ.... ಪ್ರೀತಿಸುವ ಅತ್ತೆ, ಗಂಡ, ಮುದ್ದಾದ ಮಗು... ಇದಕ್ಕಿನ್ನ ಇನ್ನೇನ್ ಬೇಕು?'

ಅಪರಾಧಿ ಭಾವ ಕಾಡ್ತಾ ಇದೆ ಅಂದೆ..ತಪ್ಪು ಮಾಡಿದ್ರೆ ಅಪರಾಧಿ ಭಾವ...ಏನು ತಪ್ಪು  ಮಾಡಿದೀಯ...?

ಮನ ಬಿಚ್ಚಿ ಮಾತಾಡು... ತಪ್ಪಾಗಿದ್ದರೂ ಅದರಿಂದ ಹೊರಗೆ ಬಂದು, ಮತ್ತೆ ಆ ತಪ್ಪು ಮಾಡದೆ ಇದ್ರೆ ಸಾಕು.

'physically ನೀವಿಬ್ಬರೂ ಎಷ್ಟು ಹತ್ತಿರವಾಗಿದ್ರಿ' ಅಂತ ಕೇಳಿದಾಗ.. ಒಂದು ಕ್ಷಣ ಏನು ಹೇಳಬೇಕು ಅಂತ ಗೊತ್ತಾಗದೆ ಮಂಕು ಕವೀತು... ತಲೆ ತಗ್ಗಿಸಿ ಕೂತಿದ್ದಾಗ.. ಅವರು  'ಹೋಗ್ಲಿ ಬಿಡಮ್ಮ ಕಷ್ಟ ಆದರೆ ಹೇಳ್ಬೇಡ.. ' ಅಂದಾಗ ನನಗೆ ನಿರಾಳ ಆಯ್ತು.. ಹೇಗೆ ಹೇಳಲಿ ಅವರಿಗೆ, ಅವತ್ತು ಅವನು ಇದ್ದಕ್ಕಿದ್ದಂತೆ ಅಪ್ಪಿ, ಕೊಟ್ಟ ಆ ಮುತ್ತಿನ ವಿಷಯಾನ. ಅವತ್ತೇ ನನಗೆ ಅವನ ಮೇಲೆ ಮೊದಲ ಕೋಪ ಬಂದಿದ್ದು... ಅವನು ಮಾಂಸ ತಿಂತಾನೆ ಅಂತ ಗೊತ್ತಾಗಿದ್ದು ಸಹ.

'ನೋಡಮ್ಮ... ಎಷ್ಟೋ ಸಲ, ಕೆಲವು ತಪ್ಪುಗಳು ಆಗಿರುತ್ತೆ... ನಾವೇ ಕಾರಣರೂ ಅಲ್ಲದಿರಬಹುದು... ಅಥವಾ ಸಂದರ್ಭ ಹಾಗೆ ಮಾಡಿಸಿರಬಹುದು...

ಅದು ಮುಗಿದ ಅಧ್ಯಾಯ... ಮನಸ್ಸಿನಿಂದ ದೂರ ಮಾಡಿ.... ಈಗಿನ ಜೀವನ ಸುಖಮಯ ಮಾಡಿಕೊಳ್ಳೋದೆ ಜಾಣತನ... ಯೋಚನೆ ಮಾಡು. ಗೊಂದಲ ಆದರೆ ಮತ್ತೆ ಬಾ ಮಾತಾಡೋಣ'

ಯೋಚನೆ..ಯೋಚನೆ...ಪರಿಹಾರ ಕಾಣದ ಯೋಚನೆ...ಆಗ ಹೊಳೆದದ್ದು ದೇವರ ಪರಿಹಾರ. ಚಿಕ್ಕಂದಿನಲ್ಲಿ ಮಾಡುತ್ತಿದ್ದ ದೇವರ ಮುಂದೆ ಚೀಟಿ ಹಾಕುವುದು. 

ಹೇಗಿದ್ದರೂ ಕೌನ್ಸಲರ್ ಭೇಟಿ ಆಗಬೇಕು , ಅವರನ್ನೇ ಕೇಳಿಬಿಡ್ತೀನಿ ಅನ್ಕೊಂಡೆ..ಮನಸ್ಸಿಗೆ ಕೊಂಚ ನಿರಾಳ. ಗಾಢವಾದ ನಿದ್ದೆ  ಬಂತು.

ಕೌನ್ಸಲರ್ ಭೇಟಿಗೆ ಹೋದೆ...ಬಾ ಬಾ ಲಕ್ಷ್ಮಿ ...ಆತ್ಮೀಯತೆಯಿಂದ ಕರೆದು..ಏನಮ್ಮ..ನಿರ್ಧಾರ ಮಾಡಿದೆ...ಅಂತ ಕೇಳ್ದಾಗ...ನನ್ನ ದೇವರ ಯೋಚನೆ ಹೇಳಿದೆ...ಗುಡ್....ಯಾಕೆ ಇನ್ನೂ ತಡ..ಅಂತಾ ಮುಖನೋಡಿದರು.... ನೀವು ಏನು ಹೇಳ್ತೀರ ಕೇಳೋಣ ಅನ್ನಿಸ್ತು ...ಅಂದೆ... ' ನೋಡಮ್ಮ... ನಿನ್ನ ಜೀವನದ ನಿರ್ಧಾರ ಮಾಡಬೇಕಾದ್ದು ನೀನು... ನಾನು ಸಾಧಕ ಭಾದಕಗಳನ್ನು ಹೇಳಬಲ್ಲೆ... ಅಲ್ವಾ... ಈಗಾಗಲೇ ಸಾಕಷ್ಟು ವಿಷಯಗಳನ್ನು ಹೇಳಿದ್ದೇನೆ...  ಯಾವತ್ತೂ ಎರಡು ದೋಣಿಯಲ್ಲಿ ಕಾಲಿಟ್ಟು ಪ್ರಯಾಣ ಮಾಡಬಾರದು... ಎಂದಿದ್ದರೂ ಅದು ಅನಾಹುತಕ್ಕೆ ಕಾರಣ ಆಗುತ್ತೆ...   ದೇವರ ಮುಂದೆ ಚೀಟಿ ಹಾಕಿದಾಗ... ನಿನಗಿಷ್ಟವಾಗಿದ್ದು ಬಂದರೆ ಸರಿ ಇಲ್ದಿದ್ರೆ ಮತ್ತೆ ಸಂಧಿಗ್ಧ .... ನಮ್ಮಲ್ಲಿರುವ ದೇವರು... ಅದೇ ಮನಸ್ಸಾಕ್ಷಿ.. ಅದು ಹೇಳಿದಂಗೆ ಕೇಳಿದರೆ ಯಾವಾಗ್ಲೂ ಉತ್ತಮ. ನೀ ಹೇಳಿದ್ದನ್ನೆಲ್ಲ ಕೇಳಿದಮೇಲೆ ನನಗನಿಸಿದ್ದು.... ಅವನನ್ನ ನೋಡಿದಾಗಿನಿಂದ ಸಂತೋಷಕ್ಕಿನ್ನ ಆತಂಕವೇ ಜಾಸ್ತಿ ಇದೆ... ಯಾಕೆ ಬೇಕು ಆತಂಕಕ್ಕೆ ಆಹ್ವಾನ. ಜಾಣತನ ಅಂದ್ರೆ ಇರುವುದರಲ್ಲಿ ತೃಪ್ತಿಯಾಗಿರೋದು... ಹಾಗಂತ ದೇವರು ನಿನಗೇನು ಕಡಿಮೆ ಮಾಡಿಲ್ಲ ಅಲ್ವಾ? ಎಂಥಾ ಅಪ್ಪ, ಅಮ್ಮ,  ಪ್ರೀತಿಸೋ ಅತ್ತೆ, ಗಂಡ, ಮುದ್ದಾದ ಮಗು.. ಕೈ ತುಂಬಾ ಸಂಬಳ ಬರೋ ಕೆಲಸ ಎಲ್ಲ ಕೊಟ್ಟಿದಾನೆ.

ಮದುವೆಗೆ ಮುಂಚೆನೇ ನಿರ್ಧಾರ ಮಾಡಿ ಅವನಿಂದ ದೂರಾದೆ... ಈಗಂತೂ ಅವನನ್ನು ದೂರ ಇಡೋದು ಎಲ್ಲಾ ದೃಷ್ಟಿಯಿಂದಲೂ ಸರಿ ಅಂತ ನನ್ನ ಸ್ಪಷ್ಟ ಅನಿಸಿಕೆ. ಹೋಗು ಒಳ್ಳೆ ನಿರ್ಧಾರ ಮಾಡು... ನಿನ್ನ ಜೀವನ ಚೆನ್ನಾಗಿರಲಿ... ಅತ್ತೆ ಗಂಡ ಮಗಳ ಜೊತೆ ಸುಖವಾಗಿರು ಅಂತ ನನ್ನ ಆಶಯ. ಒಳ್ಳೆದಾಗಲಿ.' ಮಾತು ಮುಗಿಸಿದರು

ಕೌನ್ಸಲರ್ ಹೇಳಿದ ಮಾತುಗಳನ್ನು ಕೇಳಿದ್ದು ಆದ್ಮೇಲೆ ನಿರ್ಧಾರ ಮಾಡಬೇಕು ಅನ್ನೋದು ಏನೂ ಉಳಿದಿರಲಿಲ್ಲ... ನನ್ನ ಸಂಸಾರನೇ ನನ್ನ ಲೋಕ ಅಂತ ನಿಶ್ಚಯಿಸಿದೆ. ಅವನಿಗೆ ಸ್ಪಷ್ಟವಾಗಿ ಹೇಳ್ಬೇಕು....ಎದುರು ಬದರು ಹೇಳುವುದು ಕಷ್ಟ ಅನಿಸಿತು.. ಅವನನ್ನ ಭೇಟಿ ಮಾಡಕ್ಕೂ ಇಷ್ಟ ಇಲ್ಲ. ಅವನು ಕೊಟ್ಟ ಕಾರ್ಡ್ ಜ್ಞಾಪಕ ಬಂತು... ಅವನ ಫೋನ್ ನಂಬರಿಗೆ ಸ್ಪಷ್ಟವಾಗಿ ಮೆಸೇಜ್ ಕಳಿಸಿದೆ.... “ಯಾವ ಕಾರಣಕ್ಕೂ ನಿನ್ನ ಸಹವಾಸ ಬೇಡವೇ ಬೇಡ... ಮುಂದೆಂದೂ ನೋಡುವ ಮಾತಾಡುವ ಆಸೆ ಬೇಡ. ನಮ್ಮ ಜೀವನದ ದಾರಿಯಲ್ಲಿ ಮುಂದೆಂದೂ ಭೇಟಿಯಾಗದಂತೆ ಆಶೀರ್ವದಿಸು ಎಂದು ಆ ದೇವರಲ್ಲಿ ಪ್ರಾರ್ಥಿಸುವೆ.”  ಅವನ ನಂಬರ್ ಬ್ಲಾಕ್ ಮಾಡಿದೆ. ಕಾರ್ಡು ಹರಿದು ಹಾಕಿದೆ.

ಮನಸ್ಸು ತಹಬಂದಿಗೆ ಬಂದಂತಾಯಿತು...  ಮನಸ್ಸಿನಲ್ಲಿ ಆ ದೇವರಿಗೆ ವಂದಿಸಿದೆ.... 

ಆದಷ್ಟು ಬೇಗ ಹೋಗಿ ಕೌನ್ಸಲರ್ ನ ಭೇಟಿ ಮಾಡಿ ನಾ ಮಾಡಿದ್ದನ್ನು ತಿಳಿಸಬೇಕು...    

ಬೇಗ ಬೇಗ ತಯಾರಾಗಿ ಮಗಳೊಂದಿಗೆ ಆಟೋ ಹತ್ತಿದೆ... ಮನಸ್ಸು ಹಗುರಾಗಿತ್ತು.

________________________________________


ನಿಮ್ಮ ಹೆಸರಿನೊಡನೆ ಅನಿಸಿಕೆ ತಪ್ಪದೇ ತಿಳಿಸಿ. ಅದೇ ನನಗೆ ಸ್ಫೂರ್ತಿ. 

ನಮಸ್ಕಾರ. 

D C Ranganatha Rao

9741128413

    

Comments

  1. Very nice sir💐👌🙏

    ReplyDelete
  2. ಬದುಕಿನ ಪಗಡೆಯಾಟ. ನಿಮ್ಮ ಭಾಷೆ, ಕಥೆ ಹೇಳುವಾಗ ಸರಳ ಹಾಗೂ ಸುಲಭ ವಾಗಿ ಅರ್ಥ ವಾಗುವಂತೆ ಇದೆ. ಉತ್ತಮ ತೀರ್ಮಾನ ಲಕ್ಷ್ಮಿಯ ದು.

    ReplyDelete
  3. ನಾಗೇಂದ್ರ ಬಾಬು8 December 2024 at 23:33

    ಆಪ್ತ ಸಲಹೆಗಾರರಾಗಿ ಲಕ್ಷ್ಮಿಯಂತಹ ಹೆಣ್ಣು ಮಕ್ಕಳಿಗೆ ಸೂಕ್ತ ಸಲಹೆ ನೀಡಿ ಅವಳ ಚಂಚಲ ಮನಸ್ಸಿಗೆ ಕಡಿವಾಣ ಹಾಕಿ ನೆಮ್ಮದಿಯ ಜೀವನ ನಡೆಸಲು ಸಹಾಯ ಮಾಡಿ ಅದನ್ನು ಹೆಸರಿನ ಬದಲಾವಣೆಗಳೊಂದಿಗೆ ಸರಳವಾಗಿ ಓದುಗರಿಗೆ ಅರ್ಥವಾಗುವಂತೆ ಬರೆದಿರುವ ನೈಜ ಘಟನೆ ಒಂದು ಕಥೆಯಂತೆ ಭಾಸವಾಗುತ್ತದೆ (ಹೆಚ್ಚು ಕಮ್ಮಿ ಎಲ್ಲಾ ಕಥೆಗಳು ಕಾಲ್ಪನಿಕ)..
    ಧನ್ಯವಾದಗಳು
    ಬಾಬು

    ReplyDelete
  4. ಈ ಬಾರಿ ಒಂದು ರೀತಿಯ ಬದಲಾವಣೆ. ಜೀವನದ ಸ್ವ ಅನುಭವಕ್ಕಿಂತ ಆಪ್ತ ಸಲಹೆಯ ಉದಾಹರಣೆಯೊಂದಿಗೆ ಕಥೆಯನ್ನು ಹೇಳಲಾಗಿದೆ.
    ಕಥೆ ಕುತೂಹಲವಾಗಿ ಓದಿಸಿಕೊಂಡು ಹೋಗುತ್ತದೆ. ಕಥಾನಾಯಕಿಯ ತಂದೆ ಹಾಗೂ ಆಪ್ತ ಸಮಾಲೋಚಕರು ಇಷ್ಟವಾಗುತ್ತಾರೆ. ಎಲ್ಲರದು ಉತ್ತಮ ನಿರ್ಧಾರ ಸುಖಾಂತ್ಯ. ಯುವ ಜನತೆಗೊಂದು ಜೀವನದ ನೈಜಪಾಠ.

    ಕೇವಲ ಯೌವನವೇ ಜೀವನವಲ್ಲ ಎಂಬ ಸಾರ.

    ಉತ್ತಮ ಪ್ರಯತ್ನ ಸುಂದರ ನಿರೂಪಣೆ

    ವಂದನೆಗಳು,

    ಗುರು ಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ