ಕಣ್ಮರೆಯಾದ ಕೃಪ

 

ನಾರಾಯಣ ನಿನ್ನ ನಾಮದ ಸ್ಮರಣೆಯ

ಸಾರಾಮೃತವು ನನ್ನ ನಾಲಿಗೆಗೆ ಬರಲಿ...

ಕಷ್ಟದಲ್ಲಿರಲಿ... ಉತ್ಕೃಷ್ಟದಲ್ಲಿರಲಿ...

...

...

ಎಂತೋ ಶ್ರೀ ಪುರಂದರ ವಿಠಲನ ನಾಮವ ಅಂತ್ಯಕಾಲದಲ್ಲಿ ಚಿಂತಿಸೋ ಹಾಗೆ....

ಹೋಗಿ ಬಾ... ಕೃಪಾ... ಹೋಗಿ ಬಾ... ಎಂದು ಹಾಡಿ, ನಾದಾಕ್ಷತೆಯನ್ನು ಕೊಟ್ಟು ವಿದಾಯ ಹೇಳಿದವರು ಸಂಗೀತ ವಿದ್ವಾನ್ ಆರ್ ಕೆ ಪದ್ಮನಾಭ ಅವರು, ತಮ್ಮ ಪ್ರೀತಿಯ ಗೆಳೆಯ /  ನೆಂಟ ಕೃಪಾ ಅವರ ಪಾರ್ಥಿವ ಶರೀರದ ಮುಂದೆ ನಿಂತು. ಈ ಸಮಯದಲ್ಲಿ ನೆರೆದಿದ್ದ ಬಹು ಜನರ ಕಣ್ಣಲ್ಲಿ ನೀರು ತುಂಬಿದ್ದನ್ನು ಗಮನಿಸಿದೆ, ಅದರಲ್ಲೂ ಕೃಪಾ ಅವರ ಮಗನ ದುಃಖದ ಕಣ್ಣೀರು ಮನಸ್ಸು ಕಲಕುವಂತಿತ್ತು.

ಅಲ್ಲಿಂದ ಹೊರಟ ಪಾರ್ಥಿವ ಶರೀರ ಬನಶಂಕರಿಯ ವಿದ್ಯುತ್ ಚಿತಾಗಾರವನ್ನು ಮುಟ್ಟಿದ ನಂತರ, ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಮುಗಿಸಿ  ಚಿತಾಗಾರದೊಳಗೆ ದೇಹವನ್ನು ಕಳಿಸಿದಾಗ.... ಧಗ್ಗನೆ ಬೆಂಕಿ ಹತ್ತಿ ದೇಹವನ್ನು ಆವರಿಸಿದಾಗ.. ಮನಸ್ಸು ಮೂಕವಾಗಿ ರೋದಿಸಿತು. ಆತ್ಮೀಯ ಗೆಳೆಯ ಕೃಪ ಅಗ್ನಿಯಲ್ಲಿ ಲೀನವಾಗಿ ಹೋದರು. ಕಣ್ಣಿಂದ ಮರೆಯಾದರೂ ಬಹುಕಾಲ ಮನಸ್ಸಿನಲ್ಲಿ ಇರುವ ವ್ಯಕ್ತಿತ್ವ ಕೃಪಾ.

ಏನಾದರೂ ಜೀವನ ನಿಲ್ಲದು. ಬಂದು ಸ್ನಾನ ಮಾಡಿ, ಊಟ ಮಾಡಿ, ಸಣ್ಣ ನಿದ್ದೆ ಮಾಡಿ ಎದ್ದು, ನೆನಪುಗಳನ್ನು ಮೆಲುಕು ಹಾಕುತ್ತಾ ಕೂತಾಗ... ಬಹಳ ದಿನಗಳಿಂದ ಬರೆಯದೆ ಇದ್ದದ್ದನ್ನು ಮನಗಂಡು, ಕೃಪ ಅವರಿಗೆ ಅಕ್ಷರದ ಮೂಲಕ ಅಶ್ರುತರ್ಪಣ ಕೊಡುವ ಪ್ರಯತ್ನವೇ ಈ ಲೇಖನ...

ನನ್ನ , ಕೃಪಾ ಅವರ ಪರಿಚಯ ಸುಮಾರು ಹತ್ತು ವರ್ಷಗಳದ್ದು. ಆದರೆ ಬಾಂಧವ್ಯ... ಬಾಲ್ಯದಿಂದಲೇ ಇತ್ತೇನೋ ಎನ್ನುವಷ್ಟು   ಗಾಢವಾಗಿತ್ತು. ಪ್ರಾಯಶಃ ನಮ್ಮಿಬ್ಬರ ಬಾಲ್ಯದ ಜೀವನ, ಹತ್ತನೇ ತರಗತಿಯ ಮರು ಪರೀಕ್ಷೆ, ಓದು, ವೃತ್ತಿ ಜೀವನ ಎಲ್ಲದರಲ್ಲಿದ್ದ ತಕ್ಕಮಟ್ಟಿನ ಸಾಮ್ಯ.

Slim ಆಗಿದ್ದ ಕೃಪಾ ಯಾವಾಗಲೂ Trim ಆಗಿ ಇರುತ್ತಿದ್ದವರು. ನನ್ನ ಸ್ನೇಹಿತ ಮುರಳಿಯ ಕಡೆಯಿಂದ ಪರಿಚಯವಾದ ಕೃಪ, ತನ್ನೂರು ರುದ್ರಪಟ್ಟಣ ಎಂದು ಹೇಳಿಕೊಂಡಾಗ, ನನಗಿದ್ದ ನೆಪಮಾತ್ರದ ರುದ್ರಪಟ್ಟಣದ ಸಂಭಂದ, ಶಹಾಬಾದಿನ ನನ್ನ ಸ್ನೇಹಿತ ಶ್ರೀನಿವಾಸನ ಬಗ್ಗೆ ಹೇಳಿದೆ, ಅಲ್ಲಿಂದ ಶುರುವಾಯಿತು ನಮ್ಮ ನಿರಂತರ ಮಾತುಕತೆ. ಸಂಕೇತಿ ಸಮುದಾಯದ ಬಹಳಷ್ಟು ಜನ ನಮ್ಮಿಬ್ಬರ ಪರಸ್ಪರ ಪರಿಚಯದವರು, ಮತ್ತಷ್ಟು ಜನ ಇವರ ಮೂಲಕ ಪರಿಚಯವಾದವರು. ಆಗೆಲ್ಲ ಕೃಪ ತಮ್ಮ ಭಾಷೆಯಲ್ಲಿ ನನ್ನ ಪರಿಚಯವನ್ನು ಶ್ರೀನಿವಾಸನ ಮೂಲಕ ಮಾಡಿಕೊಡುತ್ತಿದ್ದದ್ದು.

ರುದ್ರ ಪಟ್ಟಣದ ಬಗ್ಗೆ, ಕೃಪನಿಗೆ ಅಪಾರ ಅಭಿಮಾನ ಹಾಗೂ ಹೆಮ್ಮೆ. ತಮ್ಮ ಚಿಕ್ಕಂದಿನ ದಿನದ ಸಾಹಸಗಳನ್ನು ಅದರಲ್ಲೂ ನದಿಯ ಹರಿವು, ಅದರಲ್ಲಿಯ ಈಜಾಟವನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು. ನಮ್ಮನ್ನೆಲ್ಲ ಹುರಿದುಂಬಿಸಿ, ಕೆಲವು ಸಲ ಬಲವಂತ ಮಾಡಿ ರುದ್ರಪಟ್ಟಣಕ್ಕೆ, ಸುತ್ತಮುತ್ತಲಿನ ತಾಣಗಳಿಗೆ ಕರೆದೊಯ್ದವರು. 

ನಾನು ಬೆಂಗಳೂರಿಗೆ ಬಂದು ಶಾಲೆಗೆ ಸೇರಿ ಭೇಟಿ ಮಾಡಿದ ಮೊದಲ  ಉಪಾಧ್ಯಾಯರು, RN ಗುಂಡುರಾಮಯ್ಯನವರು.. ಇವರು  ರುದ್ರಪಟ್ಟಣದವರು ಎಂದು ತಿಳಿದದ್ದು, ರಾಮಮಂದಿರದಲ್ಲಿ ಹಾಕಿದ್ದ ಅವರ ಫೋಟೋ ಒಂದು ನೋಡಿ. ಇದನ್ನು ಕೃಪನೊಡನೆ ಹಂಚಿಕೊಂಡಾಗ ಅವರ ಖುಷಿ ಎಷ್ಟಿತ್ತೆಂದರೆ.... ಗುಂಡೂರಾಮಯ್ಯನವರ ಮನೆಯನ್ನು ತೋರಿಸಿ ಅವರ ಬಗ್ಗೆ ತಮಗೆ ತಿಳಿದಿದ್ದನ್ನೆಲ್ಲ ಹೇಳಿದ್ದು.

ರುದ್ರಪಟ್ಟಣದಲ್ಲಿ ನಡೆದ ಸಂಗೀತೋತ್ಸವಗಳಿಗೆ, ತ್ಯಾಗರಾಜರ ಆರಾಧನೆಗೆ, ಧಾತ್ರಿ ಹವನಕ್ಕೆ ಹೀಗೆ ಎಲ್ಲ ಕಾರ್ಯಕ್ರಮದಲ್ಲೂ ನಮ್ಮನ್ನು ಭಾಗಿಯಾಗಿಸುತ್ತಿದ್ದ ಉತ್ಸಾಹಿ.

ಊಟಕ್ಕೆ ಕೂತರಂತೂ, ಅವರ ಸಮುದಾಯದ ವಿಶೇಷ ಅಡಿಗೆಗಳನ್ನು, ಚೋಮ, ಊರ್ವಟ್ಲು ಹೀಗೆ ಹೇಳಿ, ನಮಗೆಲ್ಲ ಪರಿಚಯಿಸಿ ಉಣಬಡಿಸುತ್ತಿದ್ದ ಅತಿಥೇಯ. 

ಆದರೆ ತನಗೆ sugar ಇದೇ ಎಂಬ ಕಾರಣಕ್ಕೆ ಸಿಹಿ ತಿಂಡಿಯನ್ನು ವರ್ಜ್ಯ ಮಾಡುತ್ತಿದ್ದ ಆಹಾರ ಪ್ರೇಮಿ. sugar level ಅನ್ನು ಹತೋಟಿಯಲ್ಲಿಟ್ಟುಕೊಳ್ಳಲು, ಸದಾ ಜಾಗೃತರಾಗುತ್ತಿದ್ದ ಅವರು, ತಾನೇ ಇಂಜೆಕ್ಷನ್ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುತ್ತಿದ್ದದ್ದನ್ನು ಗಮನಿಸಿದ್ದೇನೆ.

ಈಚೀಚೆಗಂತೂ, ಶನಿವಾರದ ದಿನ ವಾಕಿಂಗ್ ಸ್ನೇಹಿತರಿಗೆ ಕಾಫಿ ಕೊಡಿಸುವುದು ತನ್ನೊಬ್ಬನದೇ ಹಕ್ಕು ಎನ್ನುವಂತೆ ಅದನ್ನು ಬೇರೆಯವರಿಗೆ ಬಿಡದೆ ಚಲಾಯಿಸುತ್ತಿದ್ದರು.

ವಾಕಿಂಗ್ ಸಮಯದ ಟೈಮ್ ಕೀಪರ್ ಆಗಿದ್ದವರು ಕೃಪಾ. 6:45ಕ್ಕೆ ವಾಕಿಂಗ್ ಮುಗಿಸಿ ಕೂಡಬೇಕು, ಸರಿಯಾಗಿ 7:00ಕ್ಕೆ ಅಲ್ಲಿಂದ ಹೊರಡಬೇಕು. ಕ್ಷಣಗಣನೆ ಶುರುವಾಗುತ್ತಿತ್ತು... ಎರಡು ನಿಮಿಷ ಲೇಟಾದರೆ ಆಗುವುದೇನು  ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ.. ಹಾಗಾಗಿ ಈ ವಿಚಾರವಾಗಿ ವಾದ ವಿವಾದಗಳು ನಡೆದದ್ದುಂಟು. ಆದರೂ ಅವರು ತಮ್ಮ ನಿಲುವನ್ನು ಪ್ರತಿಪಾದಿಸುತ್ತಿದ್ದರು.

ತಮಾಷೆಯ ಮಾತುಗಳನ್ನಾಡುತ್ತಾ ನಗುನಗುತ್ತಾ ಇರುತ್ತಿದ್ದ ಕೃಪಾ, ಕೆಲವು ಸಲ ಇದ್ದಕ್ಕಿದ್ದಂತೆ ಕೋಪಮಾಡಿಕೊಳ್ಳುತ್ತಿದ್ದದ್ದು ಉಂಟು. ಅದು ಬೇಗನೆ ಶಮನವಾಗುತ್ತಿದ್ದದ್ದೇ ಜಾಸ್ತಿ. ಇದು ಅವರ ಸೂಕ್ಷ್ಮ ಮನಸ್ಸಿನ ದ್ಯೋತಕ.

ಕ್ರಿಕೆಟ್ ಎಂದರೆ ಪ್ರಾಣ. ಪ್ರಪಂಚದ ಯಾವುದೇ ಮೂಲೆಯಲ್ಲಿ ಕ್ರಿಕೆಟ್ ಮ್ಯಾಚ್ ಇದ್ದರೂ, ಅದರ ಪ್ರಸಾರವನ್ನು ತಡ ರಾತ್ರಿಯಾದರೂ ಸರಿ ತಪ್ಪದೇ ನೋಡುತ್ತಿದ್ದ ವ್ಯಕ್ತಿ. ವಾಕಿಂಗ್ ನಲ್ಲಿ ಅದರ ವಿಶ್ಲೇಷಣೆ... ಅಭಿಪ್ರಾಯ ಮಂಡನೆ... ಈ ಸಮಯದಲ್ಲಿ ಬಿಸಿ ಬಿಸಿ ಮಾತುಗಳು ಸಹ ಸಾಮಾನ್ಯ. ಎಲ್ಲಿದ್ದರೂ, ಯಾವುದೇ ಮ್ಯಾಚ್ ಆದರೂ ಸ್ಕೋರ್ ಗಳನ್ನು ಆಗಾಗ್ಗೆ ನೋಡುವ ಅಭ್ಯಾಸ.

IPL ಮ್ಯಾಚ್  ಗಳ ವೇಳಾಪಟ್ಟಿ ಹಾಗೂ ಎಲ್ಲಾ ಟೀಮುಗಳು ಗಳಿಸಿದ ಪಾಯಿಂಟ್ ಗಳ ಪಟ್ಟಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ ಭೂಪ. IPL ಒಬ್ಬ ಕಟ್ಟಾ ಅಭಿಮಾನಿಯನ್ನು ಕಳೆದುಕೊಂಡು ಬಡವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಕೃಪ ಇಸ್ಪೀಟ್ ಆಟದ ಆರಾಧಕ ಎಂದರೂ ತಪ್ಪಾಗಲಾರದು, ಎಂದು ನನ್ನ ಅನಿಸಿಕೆ.

ಭಾನುವಾರದ ಇಸ್ಪೀಟ್ ಕಾರ್ಯಕ್ರಮಕ್ಕೆ ಅದೆಷ್ಟು ಪ್ರಾಮುಖ್ಯತೆ ಇತ್ತು ಅಂದರೆ, ವಾಕಿಂಗ್ ಸಹ ಬರುತ್ತಿರಲಿಲ್ಲ. ಅದಕ್ಕೆ ಮೊದಲಿನ ಆದ್ಯತೆ. ಸಾಯುವ ಮುನ್ನಿನ ದಿನದ ಕೊನೆಯ ಕಾರ್ಯಕ್ರಮ ಇಸ್ಪೀಟ್ ಆಟ.. ಅಂದು ಸಾಮಾನ್ಯಕ್ಕಿಂತ ಒಂದೆರಡು ವಿಶೇಷ ಆಟ, ಕೃಪನ ಇಚ್ಚೆಗೆ ಆಡಿದ್ದೆಂದು ತಿಳಿಯಿತು.

ಕೃಪ ಸ್ನೇಹಮಯಿ. ಸಹಾಯ ಹಸ್ತ ಚಾಚಲು ಸದಾ ಸಿದ್ಧ.  ಸ್ನೇಹ ರಂಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಹಣ ಸಂಗ್ರಹಿಸಿ ಕೊಡುತ್ತಿದ್ದ ಉತ್ಸಾಹಿ.

ದಸರಾ ಹತ್ತಿರ ಬಂತೆಂದರೆ, ಕೃಪನ ಸಂಭ್ರಮ ಉತ್ತುಂಗದಲ್ಲಿ ಇರುತ್ತಿತ್ತು. ನಾಲ್ಕಾರು ದಿನ ಮೊದಲೇ ಬೊಂಬೆಗಳನ್ನು ಜೋಡಿಸಿ, ನವರಾತ್ರಿ ಪಾಡ್ಯದಿಂದ ಪ್ರಾರಂಭವಾಗಿ ವಿಜಯದಶಮಿಯ ತನಕ ಪ್ರತಿದಿನ ಪೂಜೆ ಮಾಡುತ್ತಿದ್ದ ಅಭಿಮಾನಿ. ಹೆಣ್ಣು ಮಕ್ಕಳನ್ನು ನಾಚಿಸುವಂತೆ, ಬೊಂಬೆಗಳ ಜೋಡಣೆಯನ್ನು ಏಕಾಂಗಿಯಾಗಿ ಮಾಡುತ್ತಿದ್ದವರು. ಆ ಸಮಯದಲ್ಲಿ ತನ್ನ ವಿವಿಧ ಗುಂಪಿನ ಜನರನ್ನು ಮನೆಗೆ ಆಹ್ವಾನಿಸಿ, ಸಂಭ್ರಮಿಸಿ, ತಿನ್ನಲು ಕೊಟ್ಟು ಕಳಿಸುತ್ತಿದ್ದವರು. ಬೊಂಬೆಗಳ ಬಗ್ಗೆ ವಿಷಯಗಳನ್ನು ತಿಳಿಸುವಾಗ, ಅದನ್ನು ತಂದ ಸಮಯ ಜಾಗ ಎಲ್ಲವನ್ನು ಉತ್ಸಾಹದಿಂದ ವಿವರಿಸುತ್ತಿದ್ದವರು.

ಸಂಗೀತ ಪ್ರಿಯ ಕೃಪ. ರುದ್ರಪಟ್ಟಣದ ಎಲ್ಲಾ ಸಂಗೀತ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದವರು. 

ರುದ್ರಪಟ್ಟಣದಲ್ಲಿ ತಾವು ವಾಸವಾಗಿದ್ದ ಮನೆಯ ಜಾಗವನ್ನು ರುದ್ರಪಟ್ಟಣ ಸಂಗೀತೋತ್ಸವ ಟ್ರಸ್ಟ್  ಗೆ ಕೊಡುಗೆಯಾಗಿ ನೀಡಿ, ಆ ಮೂಲಕ ಸಂಗೀತ ಸೇವೆ ಮಾಡಿದವರು.

ವೈಯುಕ್ತಿಕವಾಗಿ ನನ್ನ ಜೊತೆ ತುಂಬಾ ಆತ್ಮೀಯವಾಗಿದ್ದವರು, ನನ್ನಲ್ಲಿರುವ ಆಪ್ತ ಸಮಾಲೋಚಕನ ಜೊತೆ ಮನಸ್ಸನ್ನು ಹಂಚಿಕೊಂಡವರು. 

ಇನ್ನು ಕೃಪ ನೆನಪಿನ ಭಾಗವಷ್ಟೇ.... ಹೋಗಿ ಬಾ ಎನ್ನಲೇ... ಬಂದರೂ  ಕೃಪನ ರೂಪದಲ್ಲಿ ನಮಗೆ ಅಲಭ್ಯ ಅಲ್ಲವೇ?

ಆತ್ಮೀಯ ವಿದಾಯ ... ಕೃಪಾ... ನಮಸ್ಕಾರ.

ಡಿ ಸಿ  ರಂಗನಾಥ ರಾವ್

9741128413


    

Comments

  1. ಯಾಕೋ ಈ ಲೇಖನ ತುಂಬಾ ಕಾಡುತ್ತಾ ಇದೆ ..ಶ್ರೀಯುತರಿಗೆ ಆತ್ಮೀಯ ವಿಧಾಯ

    ReplyDelete
  2. ಜಯಸಿಂಹ16 April 2026 at 11:23

    ನಿನ್ನಿಂದ ಪರಿಚಯವಾದ ಕೃಪಾ ಅವರದ್ದು ಮರೆಯಲಾಗದ ವ್ಯಕ್ತಿತ್ವ. ನಿಮ್ಮ ಎಲ್ಲರ ಜೊತೆ ರುದ್ರ ಪಟ್ಟಣಕ್ಕೆ ಹೋದ ನೆನಪು ಇನ್ನೂ ಹಸಿಯಾಗಿರುವಾಗಲೆ ಅವರು ನಿಧನವಾಗಿದ್ದು ಬಹಳ ಬೇಸರ ತಂದಿದೆ .ತಾವು ದಾನ ಮಾಡಿದ ತಮ್ಮ ಪೂರ್ವಜರ ಮನೆಯನ್ನು ಅದಕ್ಕೆ ಅವರ ತಂದೆಯವರ ಹೆಸರು ಕೊಟ್ಟಿದ್ದನ್ನು ತೋರಿಸುವಾಗ ಕಣ್ಣುಗಳಲ್ಲಿ ಅದೆಂತಹ ಹೊಳಪು .ಅವರ ಊರಿನಲ್ಲಿ ಹರಿಯುವ ಕಾವೇರಿ ನದಿಯನ್ನು ವರ್ಣಿಸುವಾಗ ಅದೆಂತಹ ಉತ್ಸಾಹ .ಕೇವಲ ಒಂದು ದಿನಕ್ಕೇಬಹಳ ಹಳೆಯ ಸ್ನೇಹಿತರು ಎನ್ನುವಂತೆ ಭಾಸವಾಗಿಬಿಟ್ಟಿತಲ್ಲ!ಅವರ ಮನೆಗೆ ಹುಳಿ ಅನ್ನ ತಿನ್ನಲು ನನಗೆ ಆಹ್ವಾನವಿತ್ತು ಅದರೆ ವಿಧಿ ನನ್ನ ಹಣೆಯಲ್ಲಿ ಆ ಭಾಗ್ಯ ಬರೆಯಲಿಲ್ಲ
    ಸಹೃದಯಿ ಸ್ನೇಹಮಯಿ ಗೆಳೆಯನಿಗೆ ಭಾವಪುರ್ಣ ವಿದಾಯ

    ReplyDelete
  3. ನಮಗೆ ಕೃಪಾ ಸರ್ ‌ರವರ ಪರಿಚಯ ಮೊದಮೊದಲು ಬರೀ
    ನಮಸ್ಕಾರ ಅಷ್ಟಕ್ಕೇ ಸೀಮಿತವಾಗಿತ್ತು ಅನಂತರ ಆಗಾಗ ಯಾರದರೂ ನಮ್ಮ ಸ್ನೇಹಿತರು ಬರದೇ ಇದ್ದಾಗ ಅವರ ಕುರಿತು ವಿಚಾರಿಸುವ ಹಂತಕ್ಕೆ ಬಂತು ನಾವು ಅವರೊಂದಿಗೆ ಹೆಚ್ಚು ಸಂವಹನ ನಡೆಸದೇ ಇದ್ದರೂ ವಾಕೀಂಗ್ ಸಮಯದಲ್ಲ ಅವರಿಲ್ಲದಿದ್ದರೆ ವಿಚಾರಿಸುತಿದ್ಗೆವು ನಮ್ಮ ಆತ್ಮೀಯ ರೊಬ್ಬರನ್ನು ಕಳೆದುಕೊಂಡ ಅನುಭವ

    ReplyDelete
  4. ಕೃಪಾ ಅವರು ಇನ್ನೂ ಕೇವಲ ನೆನಪು. ಬಹುಷಃ ನಮ್ಮ ಸ್ನೇಹ ರಂಗದ ಪ್ರತಿಭಾ ಪುರಸ್ಕಾರದ ಮುಖ್ಯ ಪ್ರಯೋಜಕರಾಗಿದ್ದರು. ಅವರ ಸಹಕಾರದಿಂದ 100+ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಭಾಗ್ಯ ನನ್ನದಾಗಿತ್ತು. ಇತ್ತೀಚಿನ ದಿನಗಳಲ್ಲಿ ಗುಂಪಿನಲ್ಲಿ ನನ್ನನ್ನು ಗುರುತಿಸಾಡೆಯಿದ್ದರು ಒಬ್ಬನೇ ಸಿಕ್ಕಿದಾಗ ಒಲವು, ಪ್ರೀತಿ, ಸ್ನೇಹ ಇರುತ್ತಿತ್ತು. ಇವೆಲ್ಲವೂ ನಮ್ಮ ಜೀವನದಲ್ಲಿ ತುಂಬಾ ಸಹಜ. ಇನ್ನು ನನ್ನ ಮುಂದಿನ ಪ್ರತಿಭಾ ಪುರಸ್ಕಾರ ಕೃಪಾ ಇಲ್ಲದೆ ಬದವಾಗುವುದಲ್ಲಿ ಸಂದೇಹ ಇಲ್ಲ. ಎಲ್ಲದಕ್ಕೂ ಅಂತ್ಯ ಇರುವುದು ಸತ್ಯ. ಕೃಪಾ ಅವರ ಅತ್ಮಕ್ಕೆ ಶಾಂತಿ ಸಿಗಲಿ. 🙏🙏🙏🙏

    ReplyDelete
  5. Very touching Tribute from you Sir!

    ReplyDelete
  6. RKP ಸರ್ ಪ್ರೀತಿಯ ಬಾಲ್ಯ ಸ್ನೇಹಿತ.. ಸ್ನೇಹ ಜೀವಿ ಕೃಪಾsir ಬಗ್ಗೆ ನೀವು ಬರೆದಿರುವ ಈ ಲೇಖನ ಮನಕಲ ಕುವಂತಿತ್ತು.. ಧನ್ಯವಾದಗಳು sir🙏ಕೃಪಾ ಸರ್ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತೇನೆ.. 🙏
    ಓಂ ಶಾಂತಿ 🙏

    ReplyDelete
  7. ಮೊದಲಿಗೆ ಕೃಪಾ ಅವರ ಆತ್ ಶಾಂತಿ ಕೋರುತ್ತೇನೆ 🙏
    ಹಾಗೇ ತಾವು ತಮ್ಮ ಆತ್ಮೀಯ ಗೆಳೆಯ ಕೃಪಾ ಅವರ ಬಗ್ಗೆ ಸಮಾಯೋಚಿತ ಬರಹ ಅತ್ಯುತ್ತಮವಾಗಿದೆ ಅದರಲ್ಲಿ ಕೃಪಾ ಅವರ ಕಿರು ಪರಿಚಯ ಆಯಿತು ಧನ್ಯವಾದಗಳು 🙏ತಮಗೆ
    ನಮಗೆ ಗೊತ್ತಿರುವವರು (ರೇಷ್ಮೆ ಇಲಾಖೆಯಲ್ಲಿ ಅತುತ್ತಮ ಹುದ್ದೆಯಲ್ಲಿ ಇದ್ದವರು) ಅವರ ಪತ್ನಿ ಶ್ರೀಮತಿ ಲಲಿತಾ ವಿಶ್ವೇಶ್ವರಯ್ಯ ಅವರು ರುದ್ರಪಟ್ಟಣದವರೇ RK ಶ್ರೀಕಂಠನ್, Rk ಸೂರ್ಯನಾರಾಯಣ ಅವರ ಸಂಬಂಧಿಗಳು.

    ReplyDelete
  8. ಗೆಳೆಯನಿಗೆ ನೀಡಿರುವ ಅಕ್ಷರ ವಿದಾಯ ಅರ್ಥಪೂರ್ಣವಾಗಿದೆ.

    ReplyDelete
  9. ಗುರುಪ್ರಸನ್ನ, ಚಿಂತಾಮಣಿ16 April 2026 at 16:18

    ದಿವಂಗತ ಕೃಪಾರವರ ಪರಿಚಯ ಇಲ್ಲದವರಿಗೂ ಪರಿಚಯ ಇರುವಂತೆ ಮಾಡಿಸುತ್ತದೆ ಈ ಲೇಖನ.

    ಸಾಮಾನ್ಯವಾಗಿ ಇಂತಹ ವ್ಯಕ್ತಿಗಳು ಮಹಾನ್ ಸಾಧನೆ ಮಾಡದಿದ್ದರೂ ಸಹ ತಮ್ಮ ಸ್ನೇಹಿತ ಬಂಧು ಬಳಗ ಇವರ ಮನಸ್ಸಿನಲ್ಲಿ ವಿಶೇಷ ಛಾಪು ಮೂಡಿಸಿರುತ್ತಾರೆ.

    ಇನ್ನು ಮುಂದೆ ಅವರ ಗೆಳೆಯರಿಗೆ hagoo ಬಂದು ವರ್ಗಕ್ಕೆ ದಿವಂಗತರ ಅಭಾವ ಎದ್ದು ಕಾಣುತ್ತದೆ ಇಂದು ನನ್ನ ಅನಿಸಿಕೆ.

    ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥನೆ.

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ದಾಂಪತ್ಯ - ಸಾಂಗತ್ಯ