ರಥೋತ್ಸವ - ಮತ್ತೊಮ್ಮೆ


ಶಿವರಾತ್ರಿ ಕಳೆದರೆ, ಛಳಿ ಶಿವ-ಶಿವಾ ಅಂತ ಓಡಿ ಹೋಗುತ್ತೆ ಅನ್ನುವುದು ಒಂದು ಮಾತು. ಬೇಸಿಗೆಯ ಕಾಲ ಪ್ರಾರಂಭವಾದಂತೆ, ಕೃಷಿಯೇ ಪ್ರಧಾನ ಕಸುಬಾಗಿದ್ದ ಕಾಲದಲ್ಲಿ, ಸುಗ್ಗಿಯ ಕಾಲ ಮುಗಿದು, ಅಳಿದುಳಿದ ಕೆಲಸಗಳನ್ನು ಮುಗಿಸಿದ ರೈತನಿಗೆ ಇದು ಸ್ವಲ್ಪ ಬಿಡುವಿನ ಸಮಯ ಆದಕಾರಣ, ಮನಸ್ಸು ಬೇರೆಯ ಕಡೆಗೆ ಹೊರಳುತ್ತದೆ. ಮಳೆ ಗಾಳಿ ಇಲ್ಲದ ಕಾಲವಾದ್ದರಿಂದ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೂಕ್ತವಾದ ಕಾಲ.  ಹಾಗಾಗಿ ಈ ತೇರು, ಜಾತ್ರೆ, ರಥೋತ್ಸವ,ಪರಿಷೆ ಎಲ್ಲವೂ ನಡೆಯುವುದು ಬೇಸಿಗೆಯ ಕಾಲದಲ್ಲಿ. 

ಹೋದ ಭಾನುವಾರ (22.02.2026), ಹೂವಿನಕಟ್ಟೆಯ ಗುಡ್ಡದ ರಂಗನಾಥ ಸ್ವಾಮಿಯ ರಥೋತ್ಸವದಲ್ಲಿ ಭಾಗಿಯಾಗಿದ್ದೆ. 1979 ರಲ್ಲಿ ಮೊದಲಾದಂದಿನಿಂದ ನಾನು ಅತಿ ಹೆಚ್ಚು ಬಾರಿ ಭಾಗಿಯಾದ ಜಾತ್ರೆ. 

ಅಂದು ಇದ್ದ ದೇವಸ್ಥಾನ, ಅದರ ಪರಿಸರಕ್ಕೂ ಇಂದಿನದಕ್ಕೂ ಅಜಗಜಾಂತರ. ಆಗಿನದು ಮುಗ್ಧ ಭಕ್ತಿಯ ಸಂಕೇತ...ಈಗಿನದು ಭಕ್ತಿಯ ಜೊತೆಗೆ ಆಡಂಬರ ಹಾಗೂ ಆಧುನೀಕತೆಯ ಮಿಶ್ರಣ.

ದೇವಸ್ಥಾನ ಹತ್ತಿರವಾಗುತ್ತಿದ್ದಂತೆ ಕಣ್ಣಿಗೆ ಬಿದ್ದದ್ದು  ಬಣ್ಣ ಬಣ್ಣದ ಬಟ್ಟೆಗಳಿಂದ,  ಹೂವಿನ ಹಾರಗಳಿಂದ ಅಲಂಕೃತವಾದ ತೇರು.  ದೇವಸ್ಥಾನದ ಹೊರಗೂ ಒಳಗೂ ವಿಶೇಷ ಹೂವಿನ ಅಲಂಕಾರ ಈ ಬಾರಿಯ ಆಕರ್ಷಣೆಯಾಗಿತ್ತು.

ದಾರಿ ಯುದ್ಧಕ್ಕೂ ಅಂಗಡಿಗಳ ಸಾಲು. ಕಡಲೆಪುರಿ, ಅದಕ್ಕೆ ಬೆರೆಸಲು ಹುರಿಗಡಲೆ, ಬೆಲ್ಲ, ಕಾರ ಸೇವು, ಜೊತೆಗೆ ಬತ್ತಾಸು, ಕಲ್ಯಾಣ ಸೇವೆ

ಆಗ ತಾನೇ ರೆಡಿಯಾಗುತ್ತಿದ್ದ ಜಿಲೇಬಿ, ಮೈಸೂರು ಪಾಕು, ಬೂಂದಿ ಕಾಳು, ಬಜ್ಜಿ, ಬೋಂಡಾ, ಪಕೋಡ... ಕುಡಿಯಲು ಬೇರೆ ಬೇರೆ ತರಹದ ಪಾನಿಯಗಳು... ಐಸ್ ಕ್ಯಾಂಡಿ, ಐಸ್ ಕ್ರೀಮ್...

ಮಕ್ಕಳಿಗಾಗಿ, ಬಣ್ಣ ಬಣ್ಣದ ಕನ್ನಡಕಗಳು, ವಿಧವಿಧವಾದ ಟೋಪಿಗಳು... ಆಟದ ಸಾಮಾನುಗಳು... ಊದುವ ಪೀಪಿಗಳು, ಬಡಿಯುವ ಡೋಲುಗಳು, ಎಳೆದಾಡಲು ಬಂಡಿಗಳು, ಆಧುನಿಕ ಉಪಕರಣಗಳು.. ಏನುಂಟು ಏನಿಲ್ಲ... ಕೊನೆಗೆ ಚಪ್ಪಲಿ ಅಂಗಡಿಯೂ ಇತ್ತು.

ಧವನದ ಕಡ್ಡಿ ಸಿಕ್ಕಿಸಿದ ಬಾಳೆಹಣ್ಣಿನ ವ್ಯಾಪಾರವೂ ಬಿರುಸಾಗಿ ನಡೆದಿತ್ತು.

ಹೊತ್ತು ಏರಿದಂತೆ ಜನಸಾಗರ ಹರಿದು ಬರುತ್ತಿತ್ತು.... ಅವರದೇ ರೀತಿಯಲ್ಲಿ ಭಕ್ತಿಯ ಪ್ರದರ್ಶನ ನಡೆಯುತ್ತಿತ್ತು.  

https://drive.google.com/file/d/1-8iHWbR19QWxx9X_S1mrwdu6y8pCoftP/view?usp=drivesdk

ಸಿಂಗರಿಸಿದ ತೇರನ್ನು ಕಂಡ ಕೂಡಲೇ ಭಕ್ತಿ ಪರವಶರಾಗಿ ಕೈಮುಗಿದು ನಮಸ್ಕರಿಸುವುದು, ತೇರಿನ ಬಳಿ ಬಂದು ಮುಟ್ಟಿ ಮುಟ್ಟಿ ನಮಸ್ಕರಿಸುವುದು, ಅದರಲ್ಲೂ ಚಕ್ರಗಳನ್ನು ನಮಿಸುವುದು, ಚಕ್ರದ ಕೆಳಗೆ ತೆಂಗಿನಕಾಯಿಯನ್ನು ಇಡುವುದು, ದೇವಸ್ಥಾನಕ್ಕೆ ಪ್ರದಕ್ಷಣೆ ಹಾಕಿ ನಮಸ್ಕರಿಸುವುದು. ಕೆಲವರ ಬೇಡಿಕೆಗಳು, ಎಷ್ಟು ಭಾವನಾತ್ಮಕವಾಗಿ ಇತ್ತೆಂದರೆ, ಅವರ ಮಾತುಗಳು ಕೇಳಿಸದಿದ್ದರೂ, ತುಟಿಗಳ ಚಲನೆಗಳು ಎದ್ದು ಕಾಣಿಸುತ್ತಿದ್ದವು. 

ಅಂದಿನ ವಿಶೇಷವೆಂದರೆ, ದೇವರಿಗೆ  ಪೂಜೆ ... ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ವನ್ನು ಒಳಗೊಂಡಂತೆ, ನೈವೇದ್ಯ ಮಹಾಮಂಗಳಾರತಿ ಮಾಡುವುದು, ನನ್ನ ಮಾವನವರ ಮನೆತನದ ಜವಾಬ್ದಾರಿ. ಇದರ ನೇತೃತ್ವ ಹಿರಿಯ ತಲೆ, 97 ವರ್ಷದ ತುಮಕೂರಿನ ಶ್ರೀ ಸುಬ್ಬರಾಯರದು. 

ಮೂರು ತಲೆಮಾರಿನ ವ್ಯಕ್ತಿಗಳು ಈ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದು ನೋಡಲು ಸಂತೋಷವಾಗುತ್ತಿತ್ತು. 

ಈ ಸಮಯದಲ್ಲಿ ನಾನು ನೋಡಿದ್ದು... ಒಬ್ಬ ಅಜ್ಜಿ ಒಂದು ನೀಲಿ ಚೀಲದಲ್ಲಿ ತೆಂಗಿನಕಾಯಿಗಳು ಹಾಗೂ ಹೂವನ್ನು ತಂದು... ನನ್ನ ಕೈಗೆ ಕೊಟ್ಟು... ಒಂದು ದೇವರಿಗೆ ಒಡೆಯಕ್ಕೆ ಇನ್ನೊಂದು ತೀರ್ಥದ ಕಾಯಿಗೆ, ಎಂದು ಹೇಳಿ, ಅದಕ್ಕೆ ಮತ್ತೊಮ್ಮೆ ನಮಸ್ಕರಿಸಿ, ಪೂಜೆ ಮುಗಿದು ಅದು ಮರಳಿ ಕೊಡುವ ತನಕ ಅಜ್ಜಿಯ ಭಕ್ತಿ ಪೂರ್ವಕ ತವಕ ನನ್ನಲ್ಲಿ ಮೆಚ್ಚುಗೆ ಜೊತೆ ಜೊತೆಗೆ ಮರುಕವನ್ನು ಮೂಡಿಸುತ್ತಿತ್ತು.

ಸುಮಾರು ಐದು ಆರು ವರ್ಷದ ಮಗು ಅಮ್ಮನ ಪ್ರೇರಣೆಯಿಂದ, ಒಂದೇ ಸಮನೆ ಶ್ಲೋಕಗಳನ್ನು ಹೇಳುತ್ತಿದ್ದದ್ದು ಮತ್ತೊಂದು ದೃಶ್ಯ.

https://drive.google.com/file/d/18q1QR8eWVN_x20pzQ5EU2WkdtmksGflo/view?usp=drivesdk

ದೇವರ ವಿಗ್ರಹವನ್ನು, ರಥದ ಮೇಲೆ ಕುಳ್ಳಿರಿಸುವ ಸಮಯ ಹತ್ತಿರ ಬರುತ್ತಿದ್ದಂತೆ, ಪ್ರಾರಂಭವಾಗಿದ್ದು ವಾದ್ಯಗಳ ಮೊರೆತ. ಅಲಂಕೃತಗೊಂಡ ದೇವರ ವಿಗ್ರಹವನ್ನು, ದೇವಸ್ಥಾನದ ಸುತ್ತ ಮೂರು ಪ್ರದಕ್ಷಿಣೆ ಹಾಕುವ ಕಾರ್ಯಕ್ರಮದಲ್ಲಿ ಮುಂದೆ ಇದ್ದದ್ದು ವಾದ್ಯಗಳ ತಂಡ... ಓಲಗ, ಕೊಂಬು ಕಹಳೆ, ಡೋಲು, ತಮಟೆ, ಜೀರ್ ಜೀರ್ ಸದ್ದು ಹೊರಡಿಸುವ ಡೋಲು. ಇಲ್ಲಿ ಮನ ಸೆಳೆದದ್ದು ಸುಮಾರು ಎಂಟು ವರ್ಷದ ಹುಡುಗ ಪಂಚೆಯುಟ್ಟು, ಹೆಗಲ ಮೇಲೆ ಒಂದು ಶಲ್ಯವನ್ನು ಹಾಕಿಕೊಂಡು, ತನ್ನದೇ ಶೈಲಿಯಲ್ಲಿ ಪುಟ್ಟ ಓಲಗ ಊದುತ್ತಿದ್ದದ್ದು, ಜೊತೆಯಲ್ಲಿದ್ದವರು ಅವನನ್ನು ಹುರಿದುಂಬಿಸುತ್ತಿದ್ದದ್ದು.

ಈ ತಂಡದ ಹಿಂದೆ ಬಂದದ್ದು ದೇವರ ಜೊತೆಗಾತಿ ದೇವತೆಗಳು, ವಿವಿಧ ಆಯುಧಗಳು, ಪರಿಕರಗಳು. ಅಂತಹ ಒಂದು ದೇವತೆಯನ್ನು ಹೊತ್ತದ್ದು ಒಂದು ಸಣ್ಣ ಹುಡುಗಿ. ಮೂರು ಸುತ್ತಿನ ನಂತರ, ಆಕೆ ಬಳಲಿದ್ದಂತೆ ಕಂಡಳು. ತಲೆಯ ಮೇಲಿಂದ ಭಾರ ಇಳಿದಾಗ, ಸ್ವಲ್ಪ ಹಗುರಾದರೂ, ಮುಖ ಬಾಡಿತ್ತು. ಹೆಸರು ಹೇಳಿ ಸುಮ್ಮನಾದ  ಹುಡುಗಿಯ ತಂದೆಯ ಬಳಿ ವಿಚಾರಿಸಿದೆ. ಅದೇ ಊರಿನ ಒಂದು ಸಮುದಾಯದ ಕುವರಿ ( ಋತುಮತಿಯಾಗದ ಹೆಣ್ಣು ಮಗಳು) ಅದನ್ನು ಹೊರುವ ಸಂಪ್ರದಾಯವಿದ್ದು, ಈ ವರ್ಷ ಈ ಮಗು ನಿಭಾಯಿಸುತ್ತಿದೆ. ಎಂತಹ ಅಚಲ ನಂಬಿಕೆ ಹಾಗೂ ಅದನ್ನು ಜವಾಬ್ದಾರಿಯಿಂದ ನಿರ್ವಹಿಸುವ ಮನಸ್ಥಿತಿ ಅಲ್ಲವೇ?.

ನಂತರ ಬಂದದ್ದೇ.. ಅಂದಿನ ಮೆರುಗು... ಅಲಂಕೃತ ದೇವರ ಮೆರವಣಿಗೆಯ ವಿಗ್ರಹ.

ಅದನ್ನು ಹೊರಲು ಜನಗಳ ಉತ್ಸಾಹ, ಜೊತೆಗೆ ತಾಮುಂದು ನಾ ಮುಂದು ಎನ್ನುವ ಪೈಪೋಟಿ,  ಬೇರೆಯವರಿಗೂ ಆಸ್ಪದ ಕೊಡಲು ಸಹಕರಿಸುವ ಜನ, ಜಾಗ ಬಿಡದೆ ಮೊಂಡಾಟ ಮಾಡುವ ಕೆಲವರು... ಎಲ್ಲ ರೀತಿಯ ಜನ.. ಎಲ್ಲರಲ್ಲೂ ಸಾಮಾನ್ಯ ಅಂಶವೆಂದರೆ ಭಕ್ತಿ, ದೇವರಿಗೆ ಹೆಗಲು ಕೊಟ್ಟೆನೆಂಬ ಧನ್ಯತಾಭಾವ.

ಈ ಸಂದರ್ಭದಲ್ಲಿ ಕಂಡದ್ದು ಒಬ್ಬ ಯುವತಿಯ ಮೇಲೆ ದೇವರು ಬಂದ ದೃಶ್ಯ. ಆ ಯುವತಿಯ ಆರ್ಭಟವನ್ನು ತಡೆಯಲು ಹರಸಾಹಸ ಪಟ್ಟ ನಾಲ್ಕು ಜನ, ಮುಖಕ್ಕೆ ನೀರನ್ನು ಚುಮುಕಿಸಿ, ಆಕೆಯನ್ನು ನೆರಳಿಗೆ ಹೊತ್ತೊಯ್ಯಲು ಕಡೆಗೂ ಯಶಸ್ವಿಯಾದರು. ಮನಃಶಾಸ್ತ್ರದಲ್ಲಿ ಇದನ್ನು ಭಾವೋದ್ವೇಗ ಎಂದು ಕರೆದರೂ.. ದೇವರು ಹಾಗೂ ಭಕ್ತಿಯ ಸಂದರ್ಭದಲ್ಲಿ ಇದನ್ನು ಒಪ್ಪಲು ನಮ್ಮ ಜನ ಇನ್ನೂ ತಯಾರಿಲ್ಲ ಎನ್ನುವುದೇ ವಸ್ತು ಸ್ಥಿತಿ.

ವಿವಿಧ ಸಮುದಾಯಗಳ ಪೂಜೆಯ ನಂತರ, ದೇವರು ತೇರಿನ ಬಳಿ ಬಂದಾಗ, ವಾದ್ಯಗಳ ಮೊರೆತ ಮುಗಿಲನ್ನು ಮುಟ್ಟಿತ್ತು. ಬಿಲ್ಲು ಬಾಣವನ್ನು ಹೊತ್ತಿದ್ದ ಒಬ್ಬ ಹಿರಿಯರು, ವಾದ್ಯಗಳ ಲಯಕ್ಕೆ ತಕ್ಕಂತೆ ಉತ್ಸಾಹದಿಂದ ಕುಣಿಯುತ್ತಿದ್ದದ್ದು ಗಮನ ಸೆಳೆಯಿತು. ತೇರಿನ ಸುತ್ತ ಪ್ರದಕ್ಷಣೆ ಬಂದು, ಹೋಮಕುಂಡದ ಮುಂದಿನ ಪೂಜೆ ಮುಗಿಸಿ ದೇವರನ್ನು ರಥದ ಮೇಲೆ ಇರಿಸುವಷ್ಟರಲ್ಲಿ ಶುರುವಾಗಿದ್ದು ಧವನ ಸಿಕ್ಕಿಸಿದ ಬಾಳೆಹಣ್ಣನ್ನು ತೇರಿನ ಮೇಲೆ ಎಸೆಯುವ ಸಂಭ್ರಮ. ಲೆಕ್ಕವಿಲ್ಲದಷ್ಟು ಬಾಳೆಹಣ್ಣು ತೇರಿಗೆ ಬಡಿದು, ಹೂವಿನ ಹಾರವನ್ನು ಬೀಳಿಸಿದ್ದು, ಅದನ್ನು ಸಂಭ್ರಮದಿಂದ ಹಿಡಿದು ದೇವರ ಪ್ರಸಾದವೆಂದು ಸಂಭ್ರಮಿಸುತ್ತಿದ್ದದ್ದು ಒಂದು ನೋಟ.

ತನಗೆ ಬೇಕಾದುದನ್ನು ಬಾಳೆಹಣ್ಣಿನ ಮೇಲೆ ಬರೆದು ತೇರಿನೆಡೆಗೆ ತೂರಿದ ಯುವಕನ ಜಾಣತನ ಮೆಚ್ಚುಗೆಯಾಯ್ತು.

ತೇರನ್ನು ಎಳೆಯಲು ಬೇಕಾದ ದಪ್ಪ ಕಬ್ಬಿಣದ ಸರಪಳಿಯನ್ನು ಅಣಿ ಮಾಡುತ್ತಿದ್ದಂತೆ, ಜನರು ಅದನ್ನು ಹಿಡಿದು ಎಳೆಯುವ ಸಡಗರಕ್ಕೆ ಸಜ್ಜಾದರು. ಉತ್ಸಾಹ ಯಾವ ಮಟ್ಟದಲ್ಲಿ ಇತ್ತೆಂದರೆ ಸರಪಳಿಯನ್ನು ತೇರಿಗೆ ಸಿಕ್ಕಿಸಲು ಕಷ್ಟ ಪಡಬೇಕಾಯಿತು. ಮಂಗಳಾರತಿ ಘಂಟೆಯನಾದ, ವಾದ್ಯಗಳ ಉತ್ತುಂಗದಲ್ಲಿದ್ದ ರವ, ಗುಡ್ಡದ ರಂಗನಾಥ ಸ್ವಾಮಿ.. ಗೋವಿಂದಾ.. ಗೋವಿಂದಾ... ಜೈಕಾರ ಇವುಗಳ ಮಧ್ಯೆ ರಥ ಹೋಮಕುಂಡವನ್ನು ಹಾದು ಕೆಲ ಹೆಜ್ಜೆ ಮುಂದೆ ಹೋಗಿ ನಿಂತಲ್ಲಿಗೆ ರಥ ಎಳೆಯುವ ಕೈಂಕರ್ಯ ಒಂದು ಹಂತ ಮುಟ್ಟಿತ್ತು. 

ಈ ಜನಜಂಗುಳಿಯಲ್ಲಿ ಕೆಳಗೆ ಬಿದ್ದ ಬಾಳೆಹಣ್ಣನ್ನು ತುಳಿದ ನನ್ನ ಕಾಲುಗಳು, ಮಣ್ಣಿನೊಂದಿಗೆ ಬೆರೆತ ಬಾಳೆಹಣ್ಣಿನ ರಸಾಯನದ ಪಟ್ಟನ್ನು  ಹಾಕಿಸಿಕೊಂಡಂತಿತ್ತು.

ಇಷ್ಟು ಹೊತ್ತು ಸಂಭ್ರಮದಲ್ಲಿ ಭಾಗಿಯಾಗಿದ್ದ ನನ್ನ ಗಮನವೆಲ್ಲ ರಥೋತ್ಸವದ ಕಡೆಗಿತ್ತು. ಮುಗಿದ ನಂತರ ಬಿಸಿಲಿನ ಝಳದ ಅನುಭವ ಆಗತೊಡಗಿತು, ಆಗ ಓಡಿದ್ದು ನೆರಳಿನೆಡೆಗೆ.

ರಥ ಎಳೆದ ನಂತರದ ತಕ್ಷಣದ ಕಾರ್ಯಕ್ರಮವೇ ಊಟ. ಜನ ಅಲ್ಲಲ್ಲೇ ಸೂಕ್ತವಾಗಿ ಜಾಗ ಮಾಡಿಕೊಂಡು ಊಟಕ್ಕೆ ಕೂಡುವ ಜಾಣತನವೇ ಒಂದು ನೋಟ. 

ಇಂತಹ ಕಾರ್ಯಕ್ರಮಗಳಲ್ಲಿ, ಊಟಕ್ಕೆ ಬಡಿಸಿ ನಂತರ ಊಟ ಮಾಡುವುದು, ನಾನು ಪಾಲಿಸಿಕೊಂಡು ಬಂದ ಒಂದು ಸಣ್ಣ ಪದ್ಧತಿ. ಯಾವಾಗಿನಂತೆ, ಒಂದಷ್ಟು ಪದಾರ್ಥಗಳನ್ನು ಪಡಿಸಿ ಸಂತೋಷಪಟ್ಟಿದ್ದು.

ಊಟದ ನಂತರ, ಜಾತ್ರೆಯಲ್ಲಿ ಒಂದು ಸುತ್ತು ಹಾಕುವ ಇಚ್ಛೆ ಸಾಮಾನ್ಯ. ಈಗ ಅಂಗಡಿಗಳ ಸಂಖ್ಯೆಯು ಜಾಸ್ತಿಯಾಗಿತ್ತು, ಜನಸಂಖ್ಯೆಯು ಬಹಳ ಜಾಸ್ತಿಯಾಗಿತ್ತು. 

ಈ ಜನಜಂಗುಳಿಯ ಮಧ್ಯೆ, ಕಂಡದ್ದು ತನ್ನ ಮಗನನ್ನು ಕಳೆದುಕೊಂಡ ತಾಯಿಯ ಅಳಲು, ಆಕೆ ಎಲ್ಲರನ್ನೂ ವಿಚಾರಿಸುತ್ತಿದ್ದ ಪರಿ... "ಬುದ್ಧಿಮಾಂದ್ಯ ಸುಮಾರು 25 / 26 ವರ್ಷದ ಮಗ, ಊರು ತಿಪ್ಪೇನಹಳ್ಳಿ, ಜೊತೆಯಲ್ಲೇ ಇದ್ದವ, ಎಲ್ಲೋ ಹೋಗಿದ್ದಾನೆ, ಸ್ವಲ್ಪ ನೋಡಪ್ಪಾ" ಎಂಬ ಮಾತು ನನ್ನ ಮನ ಕಲಕಿತು. ಮೈಕಲ್ಲಿ ಸಾರಿ ಹೇಳಲು ದುರದೃಷ್ಟವಶಾತ್ ವಿದ್ಯುತ್ ಇರಲಿಲ್ಲ... ಪೋಲಿಸಿನವರಿಗೆ ಹೇಳಿದಾಗ, ಅವರ ಅಸಹಾಯಕತೆಯೂ ಅರ್ಥವಾಗುತ್ತಿತ್ತು. ನನಗೂ ಅದೇ ಅಸಹಾಯಕತೆ ಕಾಡಿ, ಶುಷ್ಕವೆನಿಸಿದರೂ, ಒಂದೆರಡು ಸಮಾಧಾನದ ಮಾತನ್ನು ಹೇಳಿ ಮುನ್ನಡೆದದ್ದು.

ರಾತ್ರಿಯ ನಾಟಕಕ್ಕೆ  ರಂಗ ಸಜ್ಜಿಕೆ ತಯಾರಾಗುತ್ತಿತ್ತು. ನನ್ನ ಮನಸ್ಸು ನನ್ನ ಹಳ್ಳಿಯ ದಿನಗಳ ರಂಗ ಸಜ್ಜಿಕೆಯನ್ನು, ಅದು ರೂಪಗೊಳ್ಳುತ್ತಿದ್ದ ಶೈಲಿಯನ್ನು ನೋಡಿ ಬೆರಗಾಗಿದ್ದು, ರಾತ್ರಿಯ ಬೆಳಕಿನಲ್ಲಿ ಅದು ಝಗಮಗಿಸಿದ್ದು ಎಲ್ಲವನ್ನು ಮೆಲುಕು ಹಾಕಿತು.

ಹಿಂದೆ ನೋಡಿದ, ಜಾತ್ರೆಯ ರಾತ್ರಿಯ ಹೊತ್ತಿನ ದೀಪಗಳ ಬೆಳಕಿನ ಸೌಂದರ್ಯವನ್ನು ನೆನೆಯುತ್ತಾ ಮರಳಿ ಮನೆಗೆ ಬರಲು ತಯಾರಿ.

ಅದೇ ಗುಂಗಿನಲ್ಲಿ, ಪ್ರಯಾಣ ಮಾಡುತ್ತಾ ಮನಸ್ಸಿಗೆ ಬಂದದ್ದು, ಒರಿಸ್ಸಾದ ಜಗನ್ನಾಥ ಪುರಿಯ ರಥಯಾತ್ರೆ. ಅಲ್ಲಿನ ವಿಶಾಲವಾದ ಬೀದಿಗಳು. ನಾವು ಹೋದಾಗ ಇನ್ನೂ ನಡೆದಿದ್ದ ರಥದ ನಿರ್ಮಾಣ.

ಕೆಲವೆಡೆ, ರಥ ಎಳೆಯುವ ಮೊದಲು ಗರುಡ ಪಕ್ಷಿ ಬಂದು ಸುತ್ತು ಹಾಕಿ ಹೋಗುತ್ತದೆ, ನಂತರವೇ ರಥ ಎಳೆಯುವುದು ಎನ್ನುವ ಮಾತನ್ನು ಕೇಳಿದ್ದೇನೆ, ಓದಿದ್ದೇನೆ. ಇದು ಕಾಕತಾಳಿಯ ಇರಬಹುದಾ, ಅಥವಾ ಸಾಮಾನ್ಯವಾಗಿ ಹದ್ದು ತನ್ನ ಆಹಾರವನ್ನು ಹುಡುಕುತ್ತಾ ಆಕಾಶದಲ್ಲಿ ಹಾರಾಡುವಾಗ ಜನಸಂದಣಿಯನ್ನು ಕಂಡು ಸುತ್ತು ಹಾಕಿರಬಹುದು, ಹದ್ದಿನ ಕಣ್ಣು ಎಂದು ಹೇಳುವ ಅದರ ಸೂಕ್ಷ್ಮ ದೃಷ್ಟಿಯ ಶಕ್ತಿಯಿಂದ, ನೋಡಿ ತನಗೆ ಬೇಕಾದ ಆಹಾರ ಇಲ್ಲದೆ ಹೋಗಿರಬಹುದಾ?... ಇದು ನಂಬಿಕೆ ಮತ್ತು ಭಕ್ತಿಗೆ ಸಂಬಂಧಪಟ್ಟ ವಿಚಾರವಾದ್ದರಿಂದ ಮುಂದಿನ ತಾರ್ಕಿಕ ಚಿಂತನೆ ಅನಾವಶ್ಯಕ ಎಂದು ನನ್ನ ಅನಿಸಿಕೆ.

ಪ್ರಕೃತಿಯಲ್ಲಿ ಸಂಭವಿಸುವ ರಥೋತ್ಸವವೇ, ಸೂರ್ಯ ಉತ್ತರ ದಿಕ್ಕಿಗೆ  ಏಳು ಬಣ್ಣವನ್ನು ಪ್ರತಿನಿಧಿಸುವ ಏಳು ಕುದುರೆಗಳನ್ನು ಕಟ್ಟಿದ ತನ್ನ ರಥದ ಪ್ರಯಾಣ ಶುರು ಮಾಡುವ ರಥಸಪ್ತಮಿಯ ದಿನ. 

ತೇರಾನೇರಿ ಅಂಬರದಾಗೆ ನೇಸರ ನಗುತಾನೆ ಇದು ಸೂರ್ಯನ ತೇರಿನ ವರ್ಣನೆ.

ಕನ್ನಡ ಅಭಿಮಾನಿ ಆಟೋ ಚಾಲಕ ತನ್ನ ಆಟೋದ ಮೇಲೆ ಬರೆದ ಬರಹ “ಕೈ ಮುಗಿದು ಏರು ಇದು ಕನ್ನಡದ ತೇರು” ಸುಂದರ ಕಲ್ಪನೆ.

ಅಯೋಧ್ಯೆಯಲ್ಲಿನ ರಾಮ ಮಂದಿರದ ನಿರ್ಮಾಣಕ್ಕೆ ಸಾಮೂಹಿಕ  ಭಾಗವಹಿಸುವಿಕೆಯ ಆಯಾಮ ರೂಪಿಸಿದ್ದು  L K ಅಡ್ವಾಣಿ ಅವರ ರಥಯಾತ್ರೆ.

ಹೊನ್ನ ತೇರಿ ಏರಿ ನಮ್ಮ ಕನ್ನಡಮ್ಮ ಬರ್ತಿದ್ದಾಳೆ ಹಣ್ಣು ಧವನ ಹೂವ ತೂರಿರೋ... ಎನ್ನುವುದು ಕನ್ನಡ ಮಾತೆಯ ತೇರಿನ ವರ್ಣನೆ.

ಇನ್ನು ಶಿಶುನಾಳ ಶರೀಫ್ ಸಾಹೇಬರು ಬರೆದ ತೇರಾನೆಳೆಯುತ್ತಾರೆ ತಂಗಿ ತೇರಾನೆಳೆಯುತ್ತಾರೆ ಪದ್ಯದ .... 

ನಾಲ್ಕು ಗಾಲಿ ಒಂದೇ ಜೋಡಿ  ಆಶಾ ಎಂಬ ಹಗ್ಗ ಮಾಡಿ ತೇರಾನೆಳೆಯುತ್ತಾರೆ        ಎನ್ನುವುದು ದಾಂಪತ್ಯದ ಹೊಂದಾಣಿಕೆಯ ಭಾವವನ್ನು ನೆನಸುತ್ತದೆ.

ಜೀವನವೂ ಒಂದು ರಥಯಾತ್ರೆಯೇ... ರಥ / ತೇರನ್ನು ಸಮರ್ಪಣಾ ಭಾವದಿಂದ ಎಳೆದರೆ ಅದು ಸಾರ್ಥಕಯಾತ್ರೆ ಇಲ್ಲದಿರೆ ಯಾತನಾ ಯಾತ್ರೆ.

ಆಶಾ ಎಂಬ ಹಗ್ಗ ನಮ್ಮ ಜೀವನ ಯಾತ್ರೆಯ ಭಾಗವಾಗಿರಲಿ ಎಂದು ಆಶಿಸುತ್ತಾ..

ನಮಸ್ಕಾರ...

ಬಾಲಂಗೋಚಿ: ರಥೋತ್ಸವದ ಬಗ್ಗೆ ಬರೆದ ಹಳೆಯ ಲೇಖನದ ಲಿಂಕನ್ನು ಕೆಳಗೆ ಕೊಟ್ಟಿದೆ.

https://sihikahinenapugalu.blogspot.com/2024/04/blog-post_19.html

ದಯಮಾಡಿ ಓದಿ ಎಂದು ಪ್ರಾರ್ಥನೆ.


ಡಿ ಸಿ  ರಂಗನಾಥ ರಾವ್

9741128413

    

Comments

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು