ಹ~ರ್ ಹ~ರ್ ಮಹಾದೇವ್













ವಾರಣಾಸಿಯ ಬೆಳಗು ಆಹ್ಲಾದಕರವಾಗಿತ್ತು. ಬೆಳಿಗ್ಗೆ 6 ರಿಂದ 7 ರ ವರೆಗೆ ನಿಗದಿಪಡಿಸಿದ್ದ ನಮ್ಮ ಸುಗಮ ದರ್ಶನದ ಸಮಯವನ್ನು ಸಾಧಿಸಬೇಕಾಗಿತ್ತು. ಎಲ್ಲರಲ್ಲೂ ಉತ್ಸಾಹ ತುಂಬಿ ತುಳುಕುತ್ತಿತ್ತು.  ನಮಗೆ ನಿಗದಿಪಡಿಸಿದ್ದ ಗೇಟ್ ನಂಬರ್ 4 ತಲುಪಲು ಮೂರು ರಿಕ್ಷಾದಲ್ಲಿ ಹೊರಟು, ಒಂದಷ್ಟು  ದೂರ ನಡೆಯ ಬೇಕಾಯಿತು. ಮಧ್ಯವರ್ತಿಗಳ ಹಾವಳಿ ಅಷ್ಟಿಷ್ಟಲ್ಲ.. ದರ್ಶನಕ್ಕೆ ವಿಧವಿಧವಾದ ಆಮಿಷವನ್ನು ಒಡ್ಡುವವರು, ನಮ್ಮ ವಸ್ತುಗಳನ್ನು ಇಡಲು ಲಾಕರ್, ಹಾಗೂ ಚಪ್ಪಲಿ ಬಿಡಲು ಜಾಗವನ್ನು ಉಚಿತವಾಗಿ ಕೊಡುತ್ತೇನೆ ಎನ್ನುವವರು, ಇದರ ಮಧ್ಯೆ ಕಾಡುವ ಭಿಕ್ಷುಕರು, ಎಲ್ಲರಿಗೂ ಅವರದೇ ಆದ ಗುರಿ. ನಾವು ಒಂದು ಅಂಗಡಿಯನ್ನು ಆಯ್ಕೆ ಮಾಡಿ, ಲಾಕರ್ ನಲ್ಲಿ ವಸ್ತುಗಳು, ಅದರಲ್ಲೂ ಫೋನ್ ಗಳನ್ನು ಕಡ್ಡಾಯವಾಗಿ ಇಟ್ಟು, ಅಲ್ಲಿಂದಲೇ ಪೂಜಾ ಸಾಮಗ್ರಿಯನ್ನು ಕೊಂಡುಕೊಳ್ಳಬೇಕಾದ ಷರತ್ತನ್ನು ಅನಿವಾರ್ಯವಾಗಿ ಒಪ್ಪಿದ್ದಾಯಿತು. 
ದೇವಸ್ಥಾನದ ಪ್ರಾಕಾರದೊಳಗೆ ಕಾಲಿಡುತ್ತಿದ್ದಂತೆ ಕೇಳಿಸಿದ್ದು ಅಲೆಯಲೆಯಾಗಿ ತೇಲಿ ಬಂದ.. ಹ~ರ್ ಹ~ರ್ ಮಹಾ.....ದೇವ್  ಎಂಬ ಘೋಷ. ಇದು  ಆಗಾಗ ತೇಲಿ ಬರುತ್ತಿತ್ತು.. ನಾನೂ ಅದಕ್ಕೆ ದನಿಗೂಡಿಸುತ್ತಿದ್ದೆ. ಕೈಯಲ್ಲಿ ಪೂಜಾ ಸಾಮಗ್ರಿಯನ್ನು ಹಿಡಿದ, ಬಟ್ಟಲಲ್ಲಿ ಹಾಲನ್ನು / ನೀರನ್ನು ಹಿಡಿದ ಜನರ ಮುಖದಲ್ಲಿ ಭಕ್ತಿಯ ಭಾವ ಎದ್ದು ಕಾಣುತ್ತಿತ್ತು.  ಕಾಶಿ ವಿಶ್ವೇಶ್ವರನ ಲಿಂಗದ ಹತ್ತಿರಕ್ಕೆ ಬರುವಷ್ಟರಲ್ಲಿ ಈ ಘೋಷ ತಾರಕಕ್ಕೇರಿತ್ತು. ನಾವು ಕೊಂಡು ಹೋಗಿದ್ದ ಹಾಲಿನ ಪಾತ್ರೆಯಿಂದ ಲಿಂಗಕ್ಕೆ ಅಭಿಷೇಕ ಮಾಡಿ, ಹೂವನ್ನು ಹಾಕಿದಾಗ ಧನ್ಯತಾಭಾವ ಮೂಡಿತ್ತು... ಜೊತೆಗೆ ತಕ್ಷಣವೇ ಬೇರೆಯವರಿಗೆ ಜಾಗವನ್ನು ಬಿಡಬೇಕಿತ್ತು.
ನನ್ನ ಮಡದಿ ವಿಜಯ ಗಾಲಿ ಕುರ್ಚಿಯಲ್ಲಿ ಇದ್ದ ಕಾರಣ ನಾವಿಬ್ಬರೂ ಅನ್ನಪೂರ್ಣೇಶ್ವರಿಯ ದರ್ಶನ ಮಾಡಿ ಹೊರಕ್ಕೆ ಬಂದವು.  ನಮ್ಮ ಜೊತೆಯಲ್ಲಿದ್ದವರು ದೇವಸ್ಥಾನದ ಬೇರೆ ಭಾಗಗಳನ್ನು ನೋಡಲು ಹೊರಟರು.
ಅಂಗಡಿಯಲ್ಲಿ ನಮಗೆ ಕೂಡಲು ಅವಕಾಶ ಮಾಡಿಕೊಟ್ಟಿದ್ದು ಸಹಾಯವಾಯಿತು. ಅಂಗಡಿಯ ಮಾಲೀಕ ಕೇಸರಿ ಬಣ್ಣದಿಂದ, ಬಿಲ್ವಪತ್ರೆಯ ಮೂರು ಎಲೆಗಳ ಮೇಲೆ  राम  ಎಂದು ಬರೆದು ಇಡುತ್ತಿದ್ದರು. ಕುತೂಹಲ ತಡೆಯಲಾರದೆ ವಿಚಾರಿಸಿದಾಗ....


ಪ್ರತಿದಿನ ಮೊದಲ ಗ್ರಾಹಕರಿಗೆ ಇಂತಹ ಒಂದು ಬಿಲ್ವಪತ್ರೆಯನ್ನು ಕೊಡುವುದು ಅವರು ತಲೆತಲಾಂತರದಿಂದ ರೂಢಿಸಿಕೊಂಡು ಬಂದ ನಿಯಮ. ಅಂದು ನಾವೇ ಮೊದಲ ಗ್ರಾಹಕರಾದರೂ, ಅವರು ಬರುವುದು ತಡವಾದ್ದರಿಂದ, ಆ ಅವಕಾಶ ನಮಗೆ ಸಿಗಲಿಲ್ಲ. ನನಗೂ ಬರೆಯುವ ಆಸೆಯಾಯಿತು, ಕೇಳಿದಾಗ ಒಪ್ಪಿ, ಕೊಟ್ಟ ಬಿಲ್ವಪತ್ರೆಯ ಮೇಲೆ  ಶ್ರೀರಾಮ ಎಂದು ಬರೆದು ಕೊಟ್ಟಿದ್ದನ್ನು ಅವರ ದಿನದ ಪೂಜೆಯ ಸಮಯದಲ್ಲಿ ಈಶ್ವರನಿಗೆ ಅರ್ಪಿಸುವುದಾಗಿ ಹೇಳಿದಾಗ ನನಗೆ ತುಂಬಾ ಸಂತೋಷವಾಯಿತು. 
ಗಂಗೆ ತಾಲಿ ಇದೆಯಾ ಎಂದು ವಿಚಾರಿಸಿದಾಗ ಆತನ  ಉತ್ತರದ ಕನ್ನಡದ ಅನುವಾದ..
ನಾವು ಮಾರುವುದಿಲ್ಲ. ನಮ್ಮ ಹಿರಿಯರ ಕಾಲದಿಂದ ಗಂಗೆಯನ್ನು ಅಮ್ಮ ಎಂದು ಪೂಜಿಸುತ್ತೇವೆ.. ಅಮ್ಮನನ್ನು ಮಾರಲು ಸಾಧ್ಯವೇ?
ಎಂಬ ಮಾತು ನನಗೆ ಮೆಚ್ಚುಗೆಯಾಯಿತು.
ಟೀ ಕುಡಿದ ನಂತರ, ಕೈ ತೊಳೆದು ಪೂಜಾ ಸಾಮಗ್ರಿಗಳನ್ನು ಮುಟ್ಟಿದ್ದು ಇಷ್ಟವಾಯಿತು, ಆದರೆ  ತಂಬಾಕು ಸಮೇತ ಅಡಿಕೆ ಎಲೆ ಬಾಯಲ್ಲಿ ಜಿಗಿಯುತ್ತ ಮಾತನಾಡುತ್ತಿದ್ದದ್ದು ಕಷ್ಟವಾಗುತ್ತಿತ್ತು. 

ನಂತರದ ನಮ್ಮ ಪಯಣ, ನಮಗಾಗಿ ಕಾದಿದ್ದ ವಾಹನ ಮತ್ತು ಗೈಡ್ ಜೊತೆಯಲ್ಲಿ.... ಪೆಹಲಿ ಮೇರೆ ಬಾತ್ ಸುನಿಯೇ... ಎಂದು ಪ್ರಾರಂಭ ಮಾಡಿದ ಆತ, ವಾರುಣಿ ಮತ್ತು ಅಸ್ಸಿ  ನದಿಗಳು ಸೇರುವ ಕಾರಣದಿಂದ ಈ ಜಾಗಕ್ಕೆ ವಾರಣಾಸಿ ಎಂದು ಹೆಸರು. ಇಲ್ಲಿನ ಕೈಮಗ್ಗದಿಂದ ನೇಯ್ದ ರೇಷ್ಮೆ ಸೀರೆಗಳು ಪ್ರಸಿದ್ಧಿ. ಕೈಯ್ಯಲ್ಲಿ ಮಾಡಿದ (ಬನಾ) ನೂಲಿನ (ರಸ್ಸಿ) ಕಾರಣದಿಂದ ಬನಾರಸಿಯಾಗಿ, ಬನಾರಸ್  ಎಂಬ ಹೆಸರು ಬಂತು ಎಂದು ಹೇಳಿದ್ದು ತಾರ್ಕಿಕವಾಗಿ ಸರಿ ಎನಿಸಿತು.
ನನ್ನ ಸ್ನೇಹಿತ ವಾಸು ಸೂಚಿಸಿದ್ದ, ಕರ್ನಾಟಕ ಮೂಲದ ಪುರೋಹಿತರ ಮನೆಯಲ್ಲಿ, ಅವರ ಆತ್ಮೀಯ ಮಾತುಕತೆಗಳು, ಪ್ರೀತಿಪೂರ್ವಕ ಆತಿಥ್ಯದೊಡನೆ, ಅಚ್ಚುಕಟ್ಟಾದ ಊಟವನ್ನು ಮಾಡಿ, ಮುಂದಿನ ಕಾರ್ಯಕ್ರಮವಾದ ಬನಾರಸ್  ಹಿಂದು ವಿಶ್ವವಿದ್ಯಾಲಯದ ಶಿವಲಿಂಗಕ್ಕೆ ಅಭಿಷೇಕ, ಸಂಕಟಮೋಚನ ಆಂಜನೇಯನ ದರ್ಶನಮಾಡಿ, ಕೌಡಿ ಮಾತಾಗೆ ನಮಿಸಿ, ದಾರಿಯಲ್ಲಿ ಪ್ರಸಿದ್ಧವಾದ ಅಂಗಡಿಯ ಲಸ್ಸಿಯನ್ನು ತಿಂದು (ಕುಡಿಯಲಿಲ್ಲ), ಗೈಡ್ ಹೇಳಿದ ಕಡೆಯಲ್ಲಿ, ಸೀರೆಗಳನ್ನು ನೋಡುವ ಒತ್ತಾಯಕ್ಕೆ ಮಣಿಯದೆ, ಹಿಂತಿರುಗಿದ್ದು.



ಗಂಗಾರತಿ ವೀಡಿಯೋ click open to view



ಶ್ರೀ ಕೃಷ್ಣ ಮಧ್ವ ಮಠದ ಆಶ್ರಯದಲ್ಲಿ ನಡೆದ ಗಂಗಾರತಿಯನ್ನು, ದಡದಲ್ಲಿ ಕುಳಿತು ನೋಡಿದಾಗ, 9 ವರ್ಷದ ಹಿಂದೆ ಬಂದಾಗ ದೋಣಿಯಲ್ಲಿ ಕುಳಿತು ದಡದಲ್ಲಿ ನಡೆದ ಆರತಿಯನ್ನು ನೋಡಿದ ಅನುಭವಕ್ಕೆ ತುಲನೆ ಮಾಡಿದಾಗ ಸಪ್ಪೆ ಎನಿಸಿತು. ಜೊತೆಗೆ ನೋಡಲು ಕೊಡಲೇಬೇಕಾದ ಹಣ, ವ್ಯಾಪಾರದ ಛಾಯೆಯನ್ನು ಹೊಂದಿತ್ತು.
ನೇಪಾಳದಲ್ಲಿನ ಪ್ರವಾಹದ ಕಾರಣ, ದೋಣಿಗಳ ಓಡಾಟವನ್ನು ನಿಲ್ಲಿಸಲಾಗಿತ್ತು. ಚಿಕ್ಕ ಹಡಗುಗಳ ಓಡಾಟವಿತ್ತು.












ಮಾರನೆಯ ಸಂಜೆ,    ಗಾಂಭೀರ್ಯದಿಂದ ನದಿಯ ಮೇಲೆ ತೇಲುತ್ತಿದ್ದ ಹಡಗಿನಲ್ಲಿ ಕುಳಿತು ಗಂಗಾ ನದಿಯಲ್ಲಿ ಸುಮಾರು 90 ನಿಮಿಷಗಳ ಕಾಲ, ಪಯಣಿಸಿ, ನದಿಯ ದಡದ ಘಟ್ಟಗಳನ್ನು ಪರಿಚಯ ಮಾಡಿಕೊಳ್ಳುತ್ತಾ  ಹೆಣಗಳನ್ನು  ಸುಡುತ್ತಿದ್ದ ಘಟ್ಟ ಹಾಗೂ ಗಂಗಾರತಿಯನ್ನು ಮಾಡುತ್ತಿದ್ದ ಘಟ್ಟಗಳನ್ನು  ನೋಡಿದ್ದು,ಕಣ್ಣಿಗೆ ಹಬ್ಬ. ಹೊಸದಾಗಿ ನಿರ್ಮಿತವಾದ ನಮೋ ಘಾಟ್.. ನಾವು ಮುಟ್ಟಿದ ಕೊನೆಯ ಘಟ್ಟ.

ಮುಂದಿನ ಹೆಜ್ಜೆ, ಪ್ರಯಾಗ್ ರಾಜ್ ಕಡೆಗೆ. ತ್ರಿವೇಣಿ ಸಂಗಮ ಮುಟ್ಟುವಷ್ಟರಲ್ಲಿ, ಬಿಸಿಲು ಏರಿತ್ತು. ನದಿಯ ದಡದ ಉದ್ದಕ್ಕೂ ದೋಣಿಗಳ ದಟ್ಟಣೆ. ಮಧ್ಯದಲ್ಲಿ ಎಲ್ಲೋ ನಿಂತಿದ್ದ ದೋಣಿಯನ್ನು ನಾವು ಹತ್ತುವ ಜಾಗಕ್ಕೆ ತಂದು, ನಮ್ಮನ್ನು ಹತ್ತಿಸಿಕೊಂಡು, ನದಿಯ ಮಧ್ಯಕ್ಕೆ ಹೋಗಲು, ಸುತ್ತುವರಿದಿದ್ದ ದೋಣಿಗಳನ್ನು ಸರಿಸಲು ಪಟ್ಟ ಶ್ರಮ, ಜೊತೆಗಿನ ಚಾಕಚಕ್ಯತೆ ಮೆಚ್ಚುವಂತದ್ದು. ದೋಣಿಯನ್ನು ನಡೆಸಲು ಹುಟ್ಟು ಹಾಕುತ್ತಾ, ತಾನು ರಾಮಾಯಣದ ಕಾಲದ ಗುಹನ ವಂಶದವನೆಂದು ಅಂಬಿಗ ಹೆಮ್ಮೆಯಿಂದ ಹೇಳಿಕೊಂಡ.
ಗಂಗೆ, ಯಮುನೆ ಮತ್ತು ಸರಸ್ವತಿ (ಗುಪ್ತಗಾಮಿನಿ) ನದಿಗಳು ಸೇರುವ ಸ್ಥಳದಲ್ಲಿ, ದೋಣಿಗಳಿಂದಲೇ ಮಾಡಿರುವ ಅಟ್ಟಣಿಗೆಗೆ ಏರಿ, ಅಲ್ಲೇ ಸ್ನಾನ ಮಾಡಲು ನಿಗದಿಯಾಗಿದ್ದ ಸ್ಥಳದಲ್ಲಿ  ಮುಳುಗು ಹಾಕಿದ್ದು, ಹೆಂಡತಿ ವಿಜಯಗಳನ್ನು ಮುಳುಗು ಹಾಕಿಸಿದ್ದು ಒಂದು ಸಾಹಸ.


ಅವರವರ ಭಾವಕ್ಕೆ ತಕ್ಕಂತೆ ಗಂಗೆಯನ್ನು ಪೂಜಿಸಿ, ಗಂಗೆಗೆ ಮಂಗಳಾರತಿಯನ್ನು ಮಾಡಿದ್ದನ್ನು ನೋಡಿದಾಗ ನೆನಪಿಗೆ ಬಂದದ್ದು, ಅಮ್ಮ ಹೇಳುತ್ತಿದ್ದ ಗಂಗೆ ಭಾಗಿರತಿ ಯಮುನೆ ಸರಸ್ವತಿ ಸಂಗಮಕೆತ್ತುವೆನಾರತಿ.... ಎಂಬ ಹಾಡು.

ಕಾಲಭೈರವ ದೇವಸ್ಥಾನದ ದರ್ಶನ ನನಗೊಂದು ರೀತಿಯ ಕಷ್ಟದ ಅನುಭವ. ಸಣ್ಣ ಗಲ್ಲಿಯಲ್ಲಿ ಇರುವ ದೇವಸ್ಥಾನ. ಜನಜಾತ್ರೆ. ಯಾವುದೇ ರೀತಿಯ  ನಿಯಂತ್ರಣ ಇಲ್ಲದ ಕಾರಣ, ಮನಸೋ ಇಚ್ಛೆ ನುಗ್ಗುವ ಜನ. ವಯಸ್ಸು, ಲಿಂಗ ಭೇದವಿಲ್ಲದೆ ತಮ್ಮ ಶಕ್ತಿಗೆ ಅನುಗುಣವಾಗಿ ನುಗ್ಗುವ ಜನದ ಮಧ್ಯೆ, ಆ ಸೆಖೆಯಲ್ಲಿ, ಎಲ್ಲರೂ ಬೆವರಿದ, ಉಸಿರು ಗಟ್ಟುವ ವಾತಾವರಣದಲ್ಲಿ, ದೇವರನ್ನು ನೋಡಿ ನಮಿಸುವ ಮನಸ್ಸೇ ಇರಲಿಲ್ಲ. ಹೇಗೋ ಅಲ್ಲಿಂದ ಹೊರಕ್ಕೆ ಬಂದದ್ದು ನಿರಾಳ ಎನಿಸಿತು.
ಈ ಮಧ್ಯೆ  ನಮಗೆ ಪರಿಚಯವಾದ ಒಬ್ಬ ಆಟೋ ಚಾಲಕನನ್ನು ನೆನೆಯಲೇ ಬೇಕು. ನಮ್ಮೆಲ್ಲಾ ಓಡಾಟಗಳಿಗೂ ಸಹಾಯಕವಾಗಿ, ಬೇಕಾದ ಅನುಕೂಲಗಳನ್ನು ಕಲ್ಪಿಸುತ್ತಾ, ನಮಗಾಗಿ ಕಾದು ನಮ್ಮ ಜೊತೆಯಲ್ಲೇ ಸತತವಾಗಿ ಓಡಾಡಿದ ವ್ಯಕ್ತಿ.  ನಮ ಗುಂಪು ಅವನಿಗೆ ರವಿ ಅಣ್ಣ ಎಂಬ ಬಿರುದನ್ನು ಕೊಟ್ಟಿತು. (ಸು ಫ್ರಂ ಸೋ ಚಿತ್ರದ ಪಾತ್ರದ ಹೆಸರು. ಆಗು ಹೋಗುವ ಎಲ್ಲಾ ವಿಷಯಗಳಲ್ಲೂ ತಲೆ ಹಾಕುವ ವ್ಯಕ್ತಿ). 

 ಆಟೋ, ಟಾಂಗಾ ಹತ್ತಿ ಇಳಿಯಲು ಕಷ್ಟಪಡುತ್ತಿದ್ದ ನನ್ನ ಹೆಂಡತಿಗಂತೂ ಅವನು ಅಚ್ಚು ಮೆಚ್ಚು. 

ಅಮ್ಮ ಅಮ್ಮ ಎಂದು ಕರೆಯುತ್ತಾ, ಕೈಹಿಡಿದು ಇಳಿಸಿ ಹತ್ತಿಸಿ ಮಾಡುತ್ತಾ ಅಷ್ಟು ದಿನವೂ ಸಹಾಯ ಮಾಡಿದವನು. 
ಕಾಶಿ ವಿಶ್ವೇಶ್ವರನ ಲಿಂಗವನ್ನು ಕೈಯ್ಯಾರೆ ಮುಟ್ಟಿ ನಮಸ್ಕರಿಸುವ   ಸ್ಪರ್ಶ ದರ್ಶನ  ಮಾಡುವ  ಆಸೆ ನಮಗೆಲ್ಲಾ ಮೂಡಿತು. ಈ ಬಗ್ಗೆ ಕೆಲವರನ್ನು  ವಿಚಾರಿಸಿದಾಗ ಪ್ರತಿಯೊಬ್ಬರಿಗೂ 1000 ದಿಂದ 1500 ರೂಪಾಯಿ ಎಂದು ತಿಳಿಯಿತು. 300 ರೂಪಾಯಿ ಟಿಕೆಟ್ ಪಡೆದು ಸಾಲಿನಲ್ಲಿ ನಿಂತು ದರ್ಶನ ಮಾಡುವ ಅವಕಾಶ ಉಂಟೆಂದು, ಆದರೆ, ಸಮಯ ಮೀರಿದರೆ, ಸ್ಪರ್ಶ ದರ್ಶನ ಸಾಧ್ಯವಾಗದು... ಒಂದು ಅದೃಷ್ಟ ಪರೀಕ್ಷೆಯನ್ನು ಮಾಡೋಣ ಎಂದು ನಿರ್ಧರಿಸಿದವು. ರಾತ್ರಿ ಒಂದು ಗಂಟೆಗೆ ಎದ್ದು ಸ್ನಾನ ಮಾಡಿ, ರವಿ ಅಣ್ಣನ ಸಹಾಯದಿಂದ ದೇವಸ್ಥಾನವನ್ನು ಮುಟ್ಟಿದೆವು. ಯಥಾಪ್ರಕಾರ ದರ್ಶನ ಮಾಡಿಸಲು ದುಂಬಾಲು ಬಿದ್ದ ಮಧ್ಯವರ್ತಿಗಳು. 300 ರೂಪಾಯಿನ ದರ್ಶನಕ್ಕೆ 400 ಕೊಟ್ಟರೆ ಮಾಡಿಸುತ್ತೇವೆಂದು, ಸ್ಪರ್ಶ ದರ್ಶನ ಆಗದಿದ್ದರೆ ಹಣ ಕೊಡುವ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದರಿಂದ, ನಾವು ಒಪ್ಪಿ ಅವರ ಜೊತೆ ನಡೆದವು. ನಿಜಕ್ಕೂ ಅವರದೊಂದು ಮಾಫಿಯಾ ಎಂದೇ ಹೇಳಬಹುದು. ವ್ಯವಹಾರಗಳು ಸ್ವಲ್ಪ ಗುಟ್ಟು ಎನಿಸಿತು. ನಮ್ಮ ಕೈಗೆ ಕೊಟ್ಟ ಟಿಕೆಟ್ ನಲ್ಲಿ ಯಾವುದೋ ಒಂದು ಹೆಸರಿತ್ತು. ನಾವು ಹೋಗಿದ್ದು ಎರಡು ಗುಂಪಿನಲ್ಲಿ. ಗಲ್ಲಿ ಗಲ್ಲಿಗಳನ್ನು ಸುತ್ತಿ, ಒಂದು ಅಂಗಡಿಯ ಅಟ್ಟದ ಮೇಲೆ ತುಂಬಿದ್ದ ಸಾಮಾನುಗಳ ಮಧ್ಯೆ ಕೂತು... ಹರಟುತ್ತಾ, ಓಡಾಡುತ್ತಿದ್ದ ಸುಂಡಿಲಿಯನ್ನು ಗಮನಿಸುತ್ತಾ.. ನಮ್ಮ ಸರದಿಗಾಗಿ ಕಾದೆವು. 
 ನಮ್ಮ ಗುಂಪು ಹರಿದು ಹಂಚಿ ಹೋಗಿತ್ತು. ಅಂತೂ ಇಂತೂ ಆ ಸಮಯ ಬಂತು.  ಸರತಿಯ ಸಾಲಿನಲ್ಲಿದ್ದಷ್ಟು ಸಮಯ, ದೊಡ್ಡ ಪರದೆಯ ಮೇಲೆ ಮೂಡುತ್ತಿದ್ದ ಗರ್ಭಗುಡಿಯ  ದರ್ಶನದ ಚಿತ್ರಗಳನ್ನು ನೋಡುತ್ತಾ,  ದೊಡ್ಡ ಗುಂಪುಮಾಡುತ್ತಿದ್ದ ಶಿವಸ್ತುತಿಯನ್ನು ಕೇಳುತ್ತಾ.... ಅಷ್ಟೂ ಹೊತ್ತು ಇಬ್ಬರು ಮೂವರು ವ್ಯಕ್ತಿಗಳು ನಮ್ಮನ್ನು ಗಮನಿಸುತ್ತಲೇ ಇದ್ದರು. ಮೇಲ್ನೋಟಕ್ಕೆ, ನಮ್ಮ ಸಹಾಯಕ್ಕಾಗಿ ನಿಂತವರಂತೆ ಕಂಡರೂ, ಹಣ ಕೊಡದೆ ನಾವೆಲ್ಲಿ ತಪ್ಪಿಸಿಕೊಂಡು ಹೋಗುವೆವೋ ಎಂದು ಕಾವಲು ಕಾಯುವವರಂತೆ ನನಗೆ ಕಂಡರು. 
ಸ್ಪರ್ಶ ದರ್ಶನ ಮುಗಿಸಿ ಬಂದವರನ್ನು, ಅವರು ಒಂದು ಕಡೆ ಎಲ್ಲರೂ ಇರಲು ಸೂಚಿಸಿದರು. ಅವರವರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾಗ, ವಿಜಯಳಿಗೆ, ಲಿಂಗವನ್ನು ಮುಟ್ಟಲು ಸಾಧ್ಯವಾಗಲಿಲ್ಲವೆಂದು, ತಿಳಿಯಿತು. ಸಹಜವಾಗಿ ಅವಳಿಗೆ ಬೇಜಾರು, ಜೊತೆಗೆ ಅದನ್ನು ಸಾಧ್ಯವಾಗಿಸದ ಶಿವನ ಮೇಲೆ ಹುಸಿ ಮುನಿಸೂ ಸಹ. ಆಗ ನೆನಪಿಗೆ ಬಂದದ್ದು ನಮ್ಮ ಅಜ್ಜಿ ಹೇಳುತ್ತಿದ್ದ ಹಾಡಿನ ಈ ಸಾಲುಗಳು..
ಇಕ್ಕಿ ಹುಟ್ಟಲಿಲ್ಲ ಶಂಭುವೇ ಬಾಯಿ ಬಿಟ್ಟರೆ ಬರುವುದೇ ಲಿಂಗವೇ, ಸೃಷ್ಟಿಗೀಶ್ವರನ ಬೈದರೆ ಪಾಪದ ಕಷ್ಟಕ್ ಗುರಿಯಾದೆನೋ ಲಿಂಗವೇ....
ಭಾಗ್ಯದಲ್ಲಿದ್ದಷ್ಟು ಮಾತ್ರ ನಮಗೆ ದಕ್ಕುವುದು, ಯಾರನ್ನೂ ದೂಶಿಸಿ ಪ್ರಯೋಜನವಿಲ್ಲ ಅಲ್ಲವೇ?

 ಎಲ್ಲಿ ಹೋದರೂ, ಆ ಜಾಗದಲ್ಲಿನ  ವಿಶೇಷ  ವಸ್ತುಗಳು, ಬಟ್ಟೆ ಬರೆ ಕೊಳ್ಳುವುದು, ಪ್ರವಾಸದ ಒಂದು ಮುಖ್ಯ ಅಂಗ, ಅದನ್ನು ಮಾಡದೆ ಇರಲಾದೀತೇ.. ಅದು ಸಾಕಷ್ಟು ಸಾಂಗವಾಗಿ ಎಲ್ಲ ಕಡೆಯೂ ನಡೆಯಿತು.

ಪ್ರವಾಸದ ಕೊನೆಯ ಹಂತ, ನಮ್ಮೂರಿಗೆ ಮರಳುವುದು. ವಿಮಾನ ಏರಿ ಕುಳಿತಿದ್ದೆವು, ಆರು ದಿನಗಳ ಸತತ ಓಡಾಟದಿಂದಾಗಿ  ದಣಿವಾದ ಕಾರಣ ಇರಬಹುದು, ಮಾತು ಕಡಿಮೆಯಾಗಿತ್ತು. ಮನಸ್ಸು ಮೆಲುಕು ಹಾಕಲು ಪ್ರಾರಂಭಿಸಿತು....
1966 ನೇ ಇಸವಿಯಲ್ಲಿ educational tour ನ ಭಾಗವಾಗಿ, ಮೊದಲ ಬಾರಿ ಕಾಶಿಗೆ ಭೇಟಿ ಕೊಟ್ಟಿದ್ದು. ಬೆಳಿಗ್ಗೆ ಬೇಗ ಎದ್ದು  ಕಾವೇರಿಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ, ನಾನು ಮತ್ತು ನನ್ನ ಗೆಳೆಯ HP ರಂಗನಾಥ್ ಗುಂಪಿನಿಂದ ಬೇರೆಯಾದೆವು, ದಾರಿ ತಪ್ಪಿತು. ನಮಗೆ ಗೊತ್ತಿದ್ದಷ್ಟು ಹಿಂದಿಯಲ್ಲಿ ವಿಶ್ವನಾಥ್ ಕ ಮಂದಿರ್ ಕಹಾ ಹೈ ಎಂದು ಕೇಳುವುದು ಅವರು ತೋರಿಸಿದ ದಾರಿಯಲ್ಲಿ ಗಲ್ಲಿಗಳನ್ನು ಸುತ್ತಿ, ಕೊನೆಗೆ ಮುಟ್ಟುವುದು ಗಂಗಾ ನದಿಯ ಸ್ನಾನಘಟ್ಟವನ್ನು. ಒಂದಷ್ಟು ಆತಂಕವಾಗಿದ್ದು ಸಹಜ. ಕೈಯಲ್ಲಿ ಕೈಗಡಿಯಾರವಿತ್ತು.. ಅದನ್ನು ಮಾರಿ ಹೇಗೋ ನಮ್ಮವರನ್ನು ಸೇರಿಕೊಳ್ಳುವ ಯೋಚನೆಯು ಬಂತು. ವಿಶ್ವನಾಥನ ದಯೆ ನಮ್ಮ ಗುಂಪಿನವರು ಸಿಕ್ಕಿ ಎಲ್ಲಾ ಸುಖಾಂತವಾಯಿತು.
ಹಿಂದಿನ ಕಾಲದಲ್ಲಿ, ಕಾಶಿಗೆ ಹೋದವರು ಮರಳಿ ಬರುತ್ತಿದ್ದದ್ದು ಅಪರೂಪವೆಂದು ನಂಬಿಕೆ. ಅಂದಿನ ಕಾಲದ ಪ್ರಯಾಣ, ಕಷ್ಟಕರವಾಗಿರುತ್ತಿತ್ತು. ಬೆಟ್ಟಗುಡ್ಡಗಳನ್ನು ದಾಟುವಾಗ ದರೋಡೆಕೋರರ ಕಾಟವಿತ್ತು.. ಹಾಗಾಗಿ ಮರಳಿ ಬಂದಾಗ ಸಂಭ್ರಮಿಸಲು ಕಾಶಿ ಸಮಾರಾಧನೆ ಮಾಡುತ್ತಿದ್ದರೇನೋ....  ಈಗಂತೂ ಪ್ರವಾಸಗಳು ಅಡಿಗೆ ಮನೆಯನ್ನು ಹೊಕ್ಕುಬಂದಷ್ಟು ಸುಲಭ.

ನಿತ್ಯಾನಂದಕರಿ ವರದಾಭಯಕರಿ ಸೌಂದರ್ಯ ರತ್ನಾಕರಿ... ಶ್ಲೋಕದಲ್ಲಿ ಅನ್ನಪೂರ್ಣೆಯನ್ನು ಕಾಶೀಪುರಾಧೀಶ್ವರಿ ಎಂದು ಹೇಳುವಾಗ, ನನಗೆ ಕಾಶಿಯ ಹೆಸರು ಕಿವಿಗೆ ಬಿದ್ದದ್ದು, ನನ್ನೂರು ದೊಡ್ಡಜಾಲದಲ್ಲಿದ್ದ ಸಮಯದಲ್ಲಿ. ಸಕಲಕಲಾ ವಲ್ಲಭ ಎಂದು  ಹೆಮ್ಮೆಯಿಂದ ನೆನೆಯುವ ಸುಬ್ಬರಾಯಾಚಾರ್ ಮನೆಯವರು, ಪ್ರತಿ ಸಂಜೆ ಹೇಳುತ್ತಿದ್ದ ಶ್ಲೋಕಗಳ ಮೂಲಕ.

ಕಾಶಿಗೋದ ನಮ್ ಭಾವ ಕಬ್ಬಿಣದ್ ದೋಣೀಲಿ ರಾಶಿ ರಾಶಿ ಗಂಗೆ ತರಕ್ ಸೊಳ್ಳೇ ಪರದೇಲೀ... 
ಇದು ಕೈಲಾಸಂ ರವರ ಹಾಡು.k

ಕೈಗೆ ಕಪ್ಪುಬಣ್ಣದ ಕಾಶಿ ದಾರವನ್ನು ಕಟ್ಟಿಕೊಂಡು ಸಂಭ್ರಮಿಸಿದ್ದು ನೆನಪಿದೆ. 
ಸಾಯುವ ಗಳಿಗೆಯಲ್ಲಿ ಗಂಗೆಯ ನೀರನ್ನು ಬಾಯಿಗೆ ಬಿಡುವುದು ಒಂದು ವಿಧಿ. ಅದಕ್ಕಾಗಿ ಕಾಶಿಗೆ ಹೋದವರು ಗಂಗೆ ತಾಲಿಯನ್ನು ಕಡ್ಡಾಯವಾಗಿ ತಂದು.. ಬೇರೆಯವರಿಗೂ ಕೊಡುವ ಪದ್ಧತಿ ನಮ್ಮಲ್ಲುಂಟು.
ಬೆಂಗಳೂರಿಗೆ ಬಂದು ಮನೆಯನ್ನು ಸೇರುವಾಗ ರಾತ್ರಿ ಒಂದು ಗಂಟೆ... ಎಂಬಲ್ಲಿಗೆ.... ಕಾಶಿ, ಅಯೋಧ್ಯಾ  ಪ್ರವಾಸ ಸಂಪನ್ನ.

ಹ~ರ್ ಹ~ರ್ ಮಹಾ.....ದೇವ್
ಜೈ ಶ್ರೀರಾಮ್...  ಜೈ ಜೈ ಶ್ರೀರಾಮ್ 

ನಮಸ್ಕಾರ....
ಡಿ ಸಿ  ರಂಗನಾಥ ರಾವ್
9741128413
    









Comments

Popular posts from this blog

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ

ದಾಂಪತ್ಯ - ಸಾಂಗತ್ಯ