ಜೈ ಜೈ ಶ್ರೀ ರಾಮ್
ಜೈ ಶ್ರೀ ರಾಮ್.... ಜೈ ಜೈ ಶ್ರೀ ರಾಮ್ ಎಂದು ನಾನು ಉತ್ಸಾಹದಿಂದ ಏರು ಧ್ವನಿಯಲ್ಲಿ ಹೇಳುತ್ತಿದ್ದೆ.... ಅದು ದೇವಸ್ಥಾನದ ಬೇರೆ ಬೇರೆ ದಿಕ್ಕುಗಳಿಂದ, ಒಂದಷ್ಟು ಜನರ ಬಾಯಲ್ಲಿ ಪ್ರತಿಧ್ವನಿಸುತ್ತಿತ್ತು. ಮನಸ್ಸಿನಲ್ಲಿ ವರ್ಣಿಸಲಾಗದ ಸಂತೋಷ, ಮೈ ಪುಳಕ ರೋಮಾಂಚನ. ಪ್ರಾಯಶಃ ಗಾಲಿಕುರ್ಚಿಯಲ್ಲಿ ಕುಳಿತಿರದಿದ್ದರೆ ಒಂದೆರಡು ಸಲವಾದರೂ ಹನುಮಂತನಂತೆ ಮೇಲಕ್ಕೆ ಎಗರುತ್ತಿದ್ದೆನೇನೋ... ಗಾಬರಿ ಬೇಡ... ನನ್ನ ಕೈಕಾಲುಗಳೆಲ್ಲ ಸರಿಯಾಗಿವೆ. ಅಯೋಧ್ಯೆಯ ಶ್ರೀ ರಾಮನ ದರ್ಶನಕ್ಕೆ ಸಮಯವಾಗುತ್ತಿದ್ದರಿಂದ.. ಹಿರಿಯ ನಾಗರಿಕರಿಗಾಗಿ ಇರುವ ಖಾಲಿ ಕುರ್ಚಿಯ ಅನುಕೂಲವನ್ನು ಉಪಯೋಗಿಸಿಕೊಂಡು ಶೀಘ್ರ ದರ್ಶನ ಪಡೆಯುವ ಸಲುವಾಗಿ, ನನ್ನ ಇಚ್ಛೆಗೆ ವಿರುದ್ಧ ಗಾಲಿ ಕುರ್ಚಿಯಲ್ಲಿ ಹೋಗಬೇಕಾಗಿ ಬಂದಿದ್ದು.
ಸುಮಾರು ಎಂಟು ವರ್ಷಗಳ ಹಿಂದೆ ಅಯೋಧ್ಯೆಗೆ ಬಂದಾಗ, ರಾಮಲಲ್ಲ ಇನ್ನೂ ತಾತ್ಕಾಲಿಕ ವ್ಯವಸ್ಥೆಯಾದ ಒಂದು ಗುಡಾರದಲ್ಲಿ ಇದ್ದಿದ್ದು... ಇಂದು ಭವ್ಯ ಮಂದಿರ. ದೇವಸ್ಥಾನದ ಒಳಗಡೆ ಗರ್ಭಗುಡಿಯನ್ನು ಸಮೀಪಿಸುತ್ತಿದ್ದಂತೆ, ತಲೆ ಎತ್ತಿ ನೋಡಿದಾಗ, ಕಂಡದ್ದೊಂದು ದಿವ್ಯ ವೈಭವಯುತ, ದೀಪಗಳ ಬೆಳಕಿನಿಂದ ಝಗಮಗಿಸುತ್ತಿದ್ದ ದೃಶ್ಯ.... ವರ್ಣಿಸಲಸದಳ. ಗಾಲಿ ಕುರ್ಚಿಯನ್ನು ತಳ್ಳುತ್ತಿದ್ದ ಆ ವ್ಯಕ್ತಿ, ನಿಜಕ್ಕೂ ಕರುಣಾಮಯಿ. ತನಗೆ ತಿಳಿದಿದ್ದೆಲ್ಲ ಹೇಳುತ್ತಾ, ತೋರಿಸುತ್ತಾ.. ಆ ವೈಭವದ ಮಧ್ಯೆ... ನನ್ನ ಗಮನವನ್ನು ಸೆಳೆದು ತೋರಿಸಿದ್ದು, ಅಂದು ತಾತ್ಕಾಲಿಕ ವ್ಯವಸ್ಥೆಯ ಗುಡಾರದಲ್ಲಿದ್ದ ಪುಟ್ಟ ರಾಮಲಲ್ಲನ ವಿಗ್ರಹವನ್ನು... ಇಂದಿನ ವೈಭವಯುತ ವಿಗ್ರಹದ ಕೆಳಭಾಗದಲ್ಲಿ ಮುದ್ದು ರಾಮನಂತೆ ಬೆಳಗುತ್ತಿದ್ದದ್ದನ್ನು.
ಸುಮಾರು 2 ಘಂಟೆಗಳ ಹಿಂದೆ, ದರ್ಶನದ ಸಾಧ್ಯಾ ಸಾಧ್ಯತೆಯ ಬಗ್ಗೆ ಪರಸ್ಪರ ಚರ್ಚೆ ಮಾಡುತ್ತಿದ್ದ ನಮ್ಮ ಗುಂಪಿನವರು, ದರ್ಶನವನ್ನು ಮುಗಿಸಿ ಹೊರಬಂದಾಗ, ಎಲ್ಲರ ಮುಖದಲ್ಲೂ ತೃಪ್ತಿ ಸಂತೋಷ ಗಳು ತುಂಬಿ ತುಳುಕುತ್ತಿತ್ತು. ಧನ್ಯೋಸ್ಮಿ.
ಹೇಗಿದ್ದರೂ, ನಾಳೆ ಹಗಲಿನಲ್ಲಿ ಇನ್ನೊಮ್ಮೆ ದರ್ಶನದ ವ್ಯವಸ್ಥೆ ಇದ್ದುದರಿಂದ, ನಿಧಾನವಾಗಿ ಪ್ರಾಂಗಣದಲ್ಲಿ ಸುತ್ತಲು ಸಾಧ್ಯವಾದೀತೇ ಎಂದು ಯೊಚಿಸಿದೆ. ಕೆಲವೇ ಘಂಟೆಗಳ ಹಿಂದೆ ದರ್ಶನವಾದೀತೇ ಎಂಬ ಅನುಮಾನವಿದ್ದ ಮನಸ್ಸು ಆಗಲೇ ನಾಳೆಯ ಬಗ್ಗೆ ಆಶಾ ಭಾವನೆ ವ್ಯಕ್ತಪಡಿಸುತ್ತಿತ್ತು. ಇದೇ ಅಲ್ಲವೇ ಸಾಮಾನ್ಯ ಮನುಷ್ಯನ ಮನಸ್ಥಿತಿ.
ಹೋಟೆಲ್ಲಿಗೆ ಬಂದು, ಬಿಸಿ ಬಿಸಿ ಊಟಮಾಡಿ, ನಿದ್ರೆಗೆ ಜಾರಿದ್ದು. ಎಚ್ಚರವಾಗುತ್ತಿದ್ದಂತೆ ಮನಸ್ಸು ಮೆಲುಕು ಹಾಕಿದ್ದು... ಈ ಪ್ರವಾಸದ ಬಗ್ಗೆ.
ನಮ್ಮ ಕುಟುಂಬದ 12 ಜನರ ತಂಡ ಅಯೋಧ್ಯೆ ಕಾಶಿ ಹಾಗೂ ಪ್ರಯಾಗದ ಪ್ರವಾಸಕ್ಕೆ ನಿರ್ಧರಿಸಿ.. ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಾಗಿತ್ತು, ಮಧ್ಯ ಬಂದಿದ್ದು ನೇಪಾಳದಲ್ಲಿನ ಪ್ರವಾಹ ಹಾಗೂ ಅದರ ಪರಿಣಾಮ ಗಂಗೆಯ ಮೇಲೆ ಹಾಗೂ ಕಾಶಿಯ ಪರಿಸರದ ಮೇಲೆ, ಸ್ವಲ್ಪ ತೂಗುಯ್ಯಾಲೆ, ಕೆಲವರ ಹಿಂಜರಿಕೆ.. ಕೊನೆಗೂ ಎಲ್ಲರೂ 17.09.2026 ಬೆಳಿಗ್ಗೆ ಏಳು ಗಂಟೆಗೆ ನನ್ನ ಭಾವ ಮೈದುನ ರಮೇಶ ಹಾಗೂ ನಾಗರತ್ನ ಅವರ ಮನೆಯಲ್ಲಿ ಒಟ್ಟು ಸೇರಿ, ತಿಂಡಿಯನ್ನು ತಿಂದು, ಹೊರಟೇ ಬಿಟ್ಟೆವು... ಅಲ್ಲಿ ಮೊದಲಾಗಿದ್ದು ಜೈ ಶ್ರೀ ರಾಮ್ ಎನ್ನುವ ಘೋಷಣೆ.
ಸುಖವಾಗಿ ಬಂದು, ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿದೆವು, ನಮಗಾಗಿ ಕಾದಿದ್ದ ಗಾಡಿಯ ಚಾಲಕ ನಮಗೆಲ್ಲ ಹೂವಿನ ಹಾರ ಹಾಕಿ ಸ್ವಾಗತಿಸಿದ್ದು, ಮದುವೆಯ ದಿಬ್ಬಣದ ಭಾಗದಂತಿತ್ತು. ಕುಳಿತುಕೊಳ್ಳಲು ತಯಾರಿ ನಡೆಯುತ್ತಿದ್ದಾಗ, ಗೊತ್ತಾದದ್ದು ನಮ್ಮ ಬ್ಯಾಗೊಂದು ಬದಲಾವಣೆಯಾಗಿದ್ದು. ಆ ಸಮಸ್ಯೆಯನ್ನು ಮೆಟ್ಟಿ ಹೊರಡುವಲ್ಲಿ ಸ್ವಲ್ಪ ತಡವಾಯಿತು. ಲಕ್ನೋ ಸಿಟಿಯಲ್ಲಿನ ವಾಹನದ ಸಾಲುಗಳ ಕಾರಣ, ನಮ್ಮ ಪ್ರಯಾಣ ಕುಂಟುತ್ತಾ ಸಾಗಿತ್ತು. ಸಮಯ ಮೀರುತ್ತಿದ್ದಂತೆ, ನಮ್ಮ ತಲ್ಲಣವೂ ಜಾಸ್ತಿಯಾಗುತ್ತಿತ್ತು..
ಅಯೋಧ್ಯಾ ನಗರಿಯೊಳಗೆ ಪ್ರವೇಶಿಸುತ್ತಿದ್ದಂತೆ, ನಮ್ಮ ಗಾಡಿಯ driver ಜೈ ಶ್ರೀರಾಮ್ ಹೇಳಿ, ರಾಮ, ಆಂಜನೇಯನಿಗೆ ಜೈಕಾರ ಹೇಳಿಸಿದ್ದು, ಚೇತೋಹಾರಿಯಾಗಿತ್ತು.
ಶ್ರೀರಾಮನ ದರ್ಶನದಿಂದ ಎಲ್ಲವೂ ಸುಖಾಂತವಾಗಿತ್ತು.
ಎಂದಿನಂತೆ ಬೆಳಿಗ್ಗೆ ವಾಕಿಂಗ್ ಮಾಡಲು ಹೊರಬಂದೆ, ಎದುರು ಕಂಡ ಜನ ಕೈಜೋಡಿಸಿ, ರಾಮ್ ರಾಮ್, ಜೈ ಶ್ರೀ ರಾಮ್ ಎಂದು ನಮಸ್ಕರಿಸಿದ್ದು, ನನಗೆ ಅಪರೂಪದ ಅನುಭವ. ವಿಶಾಲವಾದ ಮೈದಾನ, ಪಾರ್ಕ್ ನಂತಹ ಜಾಗ, ಸುತ್ತುಹಾಕತ್ತಿದ್ದಾಗ ಕಂಡದ್ದು, ಎರಡು ಪಕ್ಷಿಗಳ ಸರಸಸಲ್ಲಾಪ... ಕ್ರೌಂಚ ಮಿಥುನ ಎನ್ನಲೇ..
ಕ್ರೌಂಚಕ್ಕೆ ಬಾಣ ಹೊಡೆದು ಕೊಂದ ಬೇಡನ ಕೃತ್ಯದಿಂದ ನೊಂದ ವಾಲ್ಮೀಕಿ ಮಹರ್ಷಿಗಳ ಬಾಯಿಂದ ಬಂದ ಶಾಪರೂಪದ ಶ್ಲೋಕ
ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತಿ ಸಮಾಃ ಯತ್ಕ್ರೌಂಚ ಮಿಥುನಾದೇಕಮವಧಿಃ ಕಾಮ ಮೋಹಿತಂ
ರಾಮಾಯಣ ಬರೆಯಲು ಪ್ರೇರಕವಾಯಿತೆನ್ನುವ ಪ್ರಸಂಗ ಅಯೋಧ್ಯೆಯಲ್ಲಿ ಈ ಮೂಲಕ ನೆನಪಿಗೆ ಬಂದದ್ದು ಕಾಕತಾಳೀಯವೋ, ದೈವ ಪ್ರೇರಣೆಯೋ... ರಾಮನೇ ಬಲ್ಲ .. ರಾಮ್ ಜಾನೆ...
18 Sep 2026 06:42:17
2ನೇ ದಿನದ ಮತ್ತೊಮ್ಮೆ ಶ್ರೀರಾಮನ ವಿಶೇಷ ದರ್ಶನ, ಸೂರ್ಯನ ಬೆಳಕಿನಲ್ಲಿ ದೇವಸ್ಥಾನದ ನೋಟದ ಸುಖ ಅನುಭವಿಸಿ, ಟೋಟೋದಲ್ಲಿ ಕುಳಿತು, ( ವಿದ್ಯುತ್ ಶಕ್ತಿಯಿಂದ ನಡೆಯುವ ವಿಶೇಷ ವಿನ್ಯಾಸದ, ನಾಲ್ಕು ಜನ ಆರಾಮವಾಗಿ ಕೂಡ ಬಲ್ಲ , ಸಮಯದಲ್ಲಿ 6 ಜನರನ್ನೂ ತುಂಬ ಬಲ್ಲ ವಾಹನ...) ಕೆಲವೆಡೆ ನಡೆದು - ಕೈಲಾಗದವರು ಗಾಲಿಕುರ್ಚಿಯ ಸಹಾಯಪಡೆದು ನೋಡಿದ್ದು .. ದಶರಥ ಮಹಾರಾಜನ ದರ್ಬಾರ್, ರಾಮ ದರ್ಬಾರ್, ಸೀತಾಕಿ ರಸೋಯಿ, ಹನುಮಾನ್ ಘರೀ ದೇವಸ್ಥಾನ, ಸರಯೂ ನದಿ, ರಾಮನ ಭಂಟ ಹನುಮಂತನ ಪ್ರತಿರೂಪಗಳು.
12 ಜನ ಒಟ್ಟಾಗಿರುವುದೇ ಒಂದು ಸವಾಲಾಗಿತ್ತು.
ಈ ಮಧ್ಯೆ ಗುಂಪಿನಿಂದ ತಪ್ಪಿಸಿಕೊಂಡು, ದೂರಾದ ಎರಡು ಪ್ರಸಂಗಗಳು, ಅವರನ್ನು ಹುಡುಕಲು ಪಟ್ಟ ಪ್ರಯಾಸ, ಆ ಸಂದರ್ಭದ ಆತಂಕ, ತಲ್ಲಣ, ಅದರಿಂದ ಬಂದ ಕೋಪವನ್ನು ಶಾಂತವಾಗಿಸಲು ಪಟ್ಟ ಶ್ರಮ, ಎಲ್ಲವೂ ಅಯೋಧ್ಯೆಯಲ್ಲಿ ನಡೆದ ನಮ್ಮ ನೋವು ನಲಿವಿನ ರಾಮಾಯಣದ ಭಾಗವಾಗಿತ್ತು.
ರಾಮಾಯಣ ಹೋಟೆಲ್ ನಲ್ಲಿ, ಪುಷ್ಕಳವಾದ ಊಟ ಮುಗಿಸಿ, ವಾರಾಣಾಸಿಯ ಕಡೆಗೆ ಹೊರಟೆವು, ಜೈ ಶ್ರೀರಾಮ್ ಹೇಳಿ, ಹರ ಹರ ಮಹಾದೇವ ಹೇಳಿ, ಅಂಡರ್ ಪಾಸು ದಾಟುವ ಸಮಯದಲ್ಲಿ, ನಮ್ಮ ವಾಹನಕ್ಕೂ ಇನ್ನೊಂದು ವಾಹನಕ್ಕೂ ಡಿಕ್ಕಿಯಾಗಿ, ವಾದ ವಿವಾದಗಳು ನಡೆದು, ಪೋಲೀಸ್ ಬಂದು ವಿಚಾರಣೆ ನಡೆಯುತ್ತಾ...... ನಾವು ಕಾಯುತ್ತಾ.. 18 Sep 2026 16:36:44
ಅಂತೂ ಇಂತೂ ರಾಜಿಯಾಗಿ ವಾರಾಣಾಸಿ ಕಡೆ ಪ್ರಯಾಣ ಶುರು. . 18 Sep 2026 17:25:57
ರಾತ್ರಿ 11 ಘಂಟೆಯ ಸುಮಾರಿಗೆ ಕಾಶಿ ವಿಶ್ವೇಶ್ವರನ ನೆಲೆಗೆ ಬಂದು ಮುಟ್ಟಿದಾಗ.. ಅಯೋಧ್ಯೆಯ ಪ್ರವಾಸದ ಎರಡನೆಯ ದಿನದ ಮುಕ್ತಾಯ.
ಶಿವನ ದರ್ಶನಕ್ಕೆ ಹೊರಡುವ ತರಾತುರಿಯಲ್ಲಿದ್ದೇನೆ.....
ನಮಸ್ಕಾರ....
ಡಿ ಸಿ ರಂಗನಾಥ ರಾವ್
9741128413




ಪ್ರಯಾಣ ಸುಖಕರವಾಗಿರಲೆಂದು ಹಾರೈಕೆ.
ReplyDeleteವಿಘ್ನೇಶ್ವರನನ್ನು ಒಮ್ಮೆ ನೆನೆಯಿರಿ....ಎಲ್ಲವೂ ಒಳಿತಾಗುತ್ತದೆ.