ಮುಳ್ಳಿಗೆ ಮುಳ್ಳಿಂದಲೇ ಮದ್ದೇ.. ?
78 ರ ಇಳಿ ವಯಸ್ಸಿನಲ್ಲೂ, ಪಾಠಮಾಡುವ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಹಿರಿಯರ ಮನಸ್ಸಿನ ಮಾತುಗಳನ್ನ, ಅದರಲ್ಲೂ never stop giving back ಎನ್ನುವ ಮಾತುಗಳು ಹಾಗೂ ಅದಕ್ಕೆ ಪ್ರತಿಕ್ರಯಿಸುತ್ತಾ, ಅವರ ಸ್ನೇಹಿತರು ಬರೆದ ಹೊಗಳಿಕೆಯ ಮಾತುಗಳನ್ನು face book ನಲ್ಲಿ ಓದಿದಾಗ ಹೆಮ್ಮೆ ಎನಿಸಿತು. ನಿಜಕ್ಕೂ ಇದು ಅನುಕರಣೆ ಮಾಡಬೇಕಾದ ವಿಷಯ ಎನಿಸಿತು.
ಜೊತೆ ಜೊತೆಗೆ ಮನಸ್ಸು ಹಿಂದಕ್ಕೋಡಿತು.... ನನ್ನ ವೃತ್ತಿ ಜೀವನದಲ್ಲಿ, ಸುಮಾರು 1 ವರ್ಷ ಅನುಭವಿಸಿದ ಕಹಿ ಘಟನೆಗಳ ಚಿತ್ರಗಳು ಮನಃಪಟಲದ ಮೇಲೆ ಮೂಡಿತು.
ನನ್ನ ಸಣ್ಣ ಕೈಗಾರಿಕೆಯಲ್ಲಿ ಕೆಲಸಗಳು ಸುಗಮವಾಗಿ ನಡೆಯುತ್ತಿದ್ದವು. ಹೊಸ ಹೊಸ development ಕೆಲಸಗಳನ್ನು ಮಾಡುವ ಅವಕಾಶಗಳು ದೊರೆಯುತ್ತಿದ್ದವು. ಅಂತಹ ಒಂದು test equipment ಮಾಡುವ ಪ್ರಸ್ತಾವನೆ ನನಗೆ ಬಂತು, ಸಹಜವಾಗಿ ಸಂತೋಷವಾಯಿತು. ಅದರ ಬಗ್ಗೆ ವಿಷಯ ಸಂಗ್ರಹಣೆ ಮೊದಲ ಹಂತ. ಸದರಿ ಅಧಿಕಾರಿ, ಈ ವಿಷಯದ ಬಗ್ಗೆ ಅರಿವಿರುವ ಒಬ್ಬ ವ್ಯಕ್ತಿಯ ಜೊತೆ ಟೆಲಿಫೋನ್ ಮೂಲಕ ಮಾತನಾಡಿದರು. ಅತ್ತ ಕಡೆಯಿಂದ ಸರಿಯಾದ, ಸಮಾಧಾನಕರವಾದ ಉತ್ತರ ಬರಲಿಲ್ಲವೆಂದು, ಸ್ವಲ್ಪ ಬೇಸರಪಟ್ಟರು. ವಿದೇಶದಿಂದ ಬಹಳ ಹಿಂದೆ ಬಂದಿದ್ದ ಇಂತಹದೇ equipment ನೋಡಿ, ಅದರಿಂದ ಸ್ಪೂರ್ತಿ ಪಡೆದು, ಮಾಡುವ ವಿಶ್ವಾಸವಿದ್ದರೆ ಮುಂದುವರಿಯಬಹುದು ಎಂಬ ಸಲಹೆ ಇತ್ತರು. ಅವರ ಸಲಹೆಯಂತೆ, ಅದರಿಂದ ಆಗುವ ಕೆಲಸವನ್ನು ಕೂಲಂಕುಷವಾಗಿ ಅರ್ಥ ಮಾಡಿಕೊಂಡು, ಕಷ್ಟವಾದರೂ, ಈ ಸವಾಲನ್ನು ಸ್ವೀಕರಿಸಬೇಕೆಂದು ನನ್ನ ಒಳ ಮನಸ್ಸು ಹೇಳಿತು, ಅಂತೆಯೇ ಅದಕ್ಕೆ ನನ್ನ ಒಪ್ಪಿಗೆಯನ್ನು ತಿಳಿಸಿದೆ. ಇದಕ್ಕೆ ಕಾರಣ, ನನ್ನ ಹಿಂದಿನ ಅನುಭವಗಳಲ್ಲಿ ದೊರೆತ, ಬೆಂಬಲ ಮತ್ತು ಪ್ರೋತ್ಸಾಹ.
ಈ ಕೆಲಸವನ್ನು ಮಾಡಲು, ನಮ್ಮ ಕಾರ್ಖಾನೆಯಲ್ಲಿರುವ ಉಪಕರಣಗಳು, ಅನುಕೂಲಗಳು ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಪರಾಮರ್ಶಿಸಲು, ಆರು ಜನ ಅಧಿಕಾರಿಗಳ ತಂಡ ಬಂದರು. ಅದೊಂದು ವಿಶಿಷ್ಟ ಅನುಭವ.
ನನ್ನ ಯೋಚನೆ / ಯೋಜನೆಗಳನ್ನು ಅವರೊಂದಿಗೆ ಹಂಚಿಕೊಂಡೆ, ಕೆಲವರು ಕೇಳಿದ ಪೂರಕ ಪ್ರಶ್ನೆಗಳಿಗೆ, ಸಾಧ್ಯವಾದಷ್ಟು ಸಮಾಧಾನವಾಗುವಂತೆ ಉತ್ತರವನ್ನು ಕೊಟ್ಟೆ. ಇಷ್ಟು ಹೊತ್ತು ಸುಮ್ಮನಿದ್ದ ಒಬ್ಬ ಅಧಿಕಾರಿ... ವಿದ್ಯಾರ್ಥಿಯನ್ನು ಪರೀಕ್ಷೆಯಲ್ಲಿ ಕೇಳುವಂತಹ ರೀತಿಯಲ್ಲಿ.. ಕೆಲವು ಪ್ರಶ್ನೆಗಳನ್ನು ಕೇಳಿದರು. ಮೊದಲೆರಡು ಪ್ರಶ್ನೆಗಳನ್ನು ಉತ್ತರಿಸಲು ಕಿರಿಕಿರಿ ಎನಿಸಿದರೂ ತೋರಿಸಿಕೊಳ್ಳದೆ ಉತ್ತರಿಸಿದೆ.. ಅದೇ ಮುಂದುವರಿದಾಗ ನನ್ನ ಸಹನೆ ಕಟ್ಟೆಯೊಡೆದು.. are you interviewing me for a job ಎಂದು ಮರು ಪ್ರಶ್ನೆ ಮಾಡಿದಾಗ ಅವರು ಆವಾಕ್ಕಾದರು, ವಾತಾವರಣ ಗಂಭೀರವಾಯಿತು. ತಂಡದ ಮುಖ್ಯಸ್ಥರು.. ok ok.. come on let us move and take a decision ಎಂದು ಹೇಳಿ, ಎಲ್ಲರೂ ಹೊರಟರು. ಅಲ್ಲಿಗೆ ಈ ವಿಷಯ ಮುಗಿದ ಅಧ್ಯಾಯ ಎಂದು ನನ್ನ ಒಳ ಮನಸ್ಸು ಹೇಳಿತು.
ಕೆಲ ತಿಂಗಳ ನಂತರ, ಆಶ್ಚರ್ಯವೆನಿಸುವಂತೆ ಬಂತು ಅದೇ test equipment ಗಾಗಿ purchase enquiry. ಯಾವುದೇ ಆಸೆಯನ್ನು ಇಟ್ಟುಕೊಳ್ಳದೆ, ನಿರ್ಲಿಪ್ತವಾಗಿ ಉತ್ತರಿಸಿದೆ. ಕೆಲವೇ ದಿನಗಳಲ್ಲಿ ಆರ್ಡರ್ ಸಹ ಬಂತು, ಕೆಲವು ಷರತ್ತುಗಳೊಂದಿಗೆ.
ಮೊದಲನೆಯ ಷರತ್ತಾದ drawing ಗಳನ್ನು ಸಲ್ಲಿಸಿದ ತಕ್ಷಣವೇ ಒಪ್ಪಿಗೆ ಸಿಕ್ಕಿತು.
ಉತ್ಸಾಹದಿಂದ, ಕೆಲಸವನ್ನು ಮಾಡಿ, ನಮಗೆ ತೃಪ್ತಿಯಾಗುವಂತೆ ಎಲ್ಲವನ್ನು ಪರಿಶೀಲಿಸಿ, ಎರಡನೆಯ ಷರತ್ತಾದ, inspection and testing ಮಾಡಲು ವಿನಂತಿಯನ್ನು ಕೊಟ್ಟಿದ್ದು. ಪರಿಶೀಲಿಸಲು ಬಂದ ಯುವ ಇಂಜಿನಿಯರ್ಸ್, ಸುಮಾರು ಟೆಸ್ಟ್ ಗಳನ್ನು ಮಾಡಿ, ಅಲ್ಲಿ ಈಗಿರುವ equipment ತರವೇ ಕೆಲಸ ಮಾಡುತ್ತಿದೆ ಎಂಬ ಅಭಿಪ್ರಾಯ ಹೇಳಿ ಹೊರಟರು.
ಮೂರನೆಯ ಷರತ್ತು, ಅಪ್ರೂವಲ್ ನಂತರವೇ, ಅದನ್ನು ಕಳುಹಿಸುವುದು. ಅದಕ್ಕಾಗಿ ಕೆಲವು ದಿನ ಕಾದು, ಏನೂ ಉತ್ತರ ಬರದಿದ್ದಾಗ, ವಿಷಯ ತಿಳಿಯಲು ಮುಂದಾದಾಗ, ಹೋಗಿ ಭೇಟಿಯಾಗಬೇಕಾಗಿದ್ದು ಅದೇ ಪ್ರಶ್ನೆಗಳ ಅಧಿಕಾರಿಯನ್ನು. ನನ್ನನ್ನು ನೋಡಿದ ಕೂಡಲೇ ಸಿಡಿಮಿಡಿ ಗೊಂಡ ಆ ಅಧಿಕಾರಿ, you dont come to us, go and meet the purchase department, we will send the report to them, ಎಂದು ಕಟುವಾಗಿ ಹೇಳಿದರು. ಇಲ್ಲಿಂದ ಶುರುವಾಯಿತು ನನ್ನ ಪರದಾಟ.
ಕಡೆಗೂ ಸಿಕ್ಕಿದ್ದು ಒಂದು ರಿಪೋರ್ಟ್..
set value. measured value. error
20. 0 20.1 +/- 0.1
.......
ಇನ್ನೂ ಒಂದಷ್ಟು ಸಾಲುಗಳು, ಬೇರೆ ಬೇರೆ ಅಂಕಿಗಳು. ನೋಡಿದ ತಕ್ಷಣ ನನಗೆ ನಗು ಬಂತು. ಇದು ಯಾವ ರೀತಿಯ ಲೆಕ್ಕ ಎಂದು. ಒಂದು ಜೊತೆ ಅಂಕಿಗಳ ಹೋಲಿಕೆಯಲ್ಲಿ, ಪ್ಲಸ್ ಮತ್ತು ಮೈನಸ್ ಎರಡೂ ಬರುವುದು, ಸಂಖ್ಯಾ ಶಾಸ್ತ್ರದ ಅಸಂಬದ್ಧತೆ.
ಈ ಅಂಕಿಗಳನ್ನು ಬಿಟ್ಟು, ಬೇರೆ ಯಾವ ಟಿಪ್ಪಣಿಗಳೂ ಇರಲಿಲ್ಲ. ಈ ರಿಪೋರ್ಟ್ ಬರೆದವರು, ವಿಷಯವನ್ನು ಸರಿಯಾಗಿ ಗ್ರಹಿಸಿಲ್ಲ ಅಥವಾ ಉದ್ದೇಶಪೂರ್ವಕವಾಗಿಯೇ ಹೀಗೆ ಬರೆದಿದ್ದಾರೆ ಎಂದು ನನ್ನ ಅಭಿಪ್ರಾಯವನ್ನು ತಿಳಿಸಿದೆ. ವಿಚಾರಿಸಿ ಹೇಳುವುದಾಗಿ ತಿಳಿಸಿದರು.
ಮುಂದಿನ ವಿಷಯಗಳು ಮಾತುಗಳ ರೂಪದಲ್ಲಿ ಇದ್ದವೇ ಹೊರತು, ಬರವಣಿಗೆಯಲ್ಲಿ ಯಾವುದೂ ಬರಲಿಲ್ಲ. ಎತ್ತಿದ ಪ್ರಶ್ನೆಗಳು ಅದಕ್ಕೆ ನಮ್ಮ ಕಡೆಯಿಂದ ಉತ್ತರ ಹೀಗಿತ್ತು.
" error ಜಾಸ್ತಿ ಇದೆ, ನಮ್ಮ ಉಪಯೋಗಕ್ಕೆ ಬರುವುದಿಲ್ಲ....
ಇಷ್ಟೇ error ಒಳಗೆ ಇರಬೇಕೆಂದು ಯಾವ ಹಂತದಲ್ಲೂ ನಮಗೆ ತಿಳಿಸಿಲ್ಲ"
" ನಮ್ಮ ಉಪಯೋಗಕ್ಕೆ ಬರದಿದ್ದರೆ, ಅದನ್ನು ತಗೊಳ್ಳುವುದರಲ್ಲಿ ಅರ್ಥವಿಲ್ಲ...
ನಿಮ್ಮ ನಿರ್ದಿಷ್ಟ ಮಟ್ಟವನ್ನು ತಿಳಿಸಿ, ಅದನ್ನು ಸರಿಗಟ್ಟುವ ಪ್ರಯತ್ನ ಮಾಡುತ್ತೇವೆ. ಹೆಚ್ಚಿನ ಖರ್ಚನ್ನು ಕೊಡಬೇಕಾಗಬಹುದು"
" ಹೆಚ್ಚಿನ ಖರ್ಚನ್ನು ಈ ಹಂತದಲ್ಲಿ ಕೊಡಲಾಗುವುದಿಲ್ಲ...
ಬೆಳ್ಳಿಯ ಬೆಲೆಯನ್ನು ಕೊಟ್ಟು.. ಚಿನ್ನವನ್ನು ಖರೀದಿಸಲು ಸಾಧ್ಯವಿಲ್ಲ"
ಎಲ್ಲ ಮಾತುಗಳನ್ನು ಪರ್ಚೆಸ್ ಡಿಪಾರ್ಟ್ಮೆಂಟ್ ನಲ್ಲೇ ಮಾಡಬೇಕಾದ್ದರಿಂದ, ಅವರಲ್ಲಿ ಎಡತಾಕುವುದು, ಏನಾಯಿತು, ಎಂದು ಕೇಳುವ ನಕ್ಷತ್ರಿಕನ ಕೆಲಸ ನಡೆದೇ ಇತ್ತು. ಅಂತಹ ಒಂದು ದಿನ...
" ಏನು ಮಾಡೋಣ ಹೇಳಿ...." ಎಂದು ಕೇಳಿದಾಗ "inspection call letter ಗೆ ಉತ್ತರ ಕೊಡಿ" ಎಂದೆ. ಸ್ವಲ್ಪ ಯೋಚನೆ ಮಾಡಿದ ಅವರು, ಕಾಯಲು ಹೇಳಿ, ಅವರ ಹಿರಿಯ ಅಧಿಕಾರಿಯನ್ನು ನೋಡಲು ಹೋದರು. ಸ್ವಲ್ಪ ಸಮಯದ ನಂತರ ನನಗೂ ಕರೆ ಬಂತು, ಅವರಲ್ಲಿ ಹೋದಾಗ ನಡೆದ ಮಾತುಕತೆಯ ಸಾರಾಂಶ:
" ಏನಪ್ಪಾ ನಿಮ್ ಪ್ರಾಬ್ಲಮ್" ಕೇಳಿದ್ದು ಹಿರಿಯ ಅಧಿಕಾರಿ. ನನ್ನದು ಒಣ ನಗೆಯ ಉತ್ತರ.
" despatch ಮಾಡಕ್ಕೆ letter ಬೇಕಂತೆ" ಜೊತೆಯಲ್ಲಿದ್ದ ಅಧಿಕಾರಿಯ ಮಾತು..
" ಏನಿದೆ ಅಡ್ಡಿ... ಕೊಡಿ"
" ಸಮಾಧಾನಕರ ರಿಪೋರ್ಟ್ ಇಲ್ಲ"
" ಮತ್ತೆ ರಿಜೆಕ್ಟ್ ಮಾಡಿ" ಎಂದು ಹೇಳಿ ನನ್ನ ಕಡೆ ನೋಡಿದರು.
" ಸರ್ ದಯವಿಟ್ಟು ಒಂದು ಸಲ ರಿಪೋರ್ಟ್ ನೋಡಿ, ನೀವು ರಿಪೋರ್ಟ್ ಒಪ್ಪಿದರೆ ನಾನು ನಿಮ್ಮ ನಿರ್ಧಾರವನ್ನು ಒಂದು ಮಾತಿಲ್ಲದೆ ಗೌರವಿಸುತ್ತೇನೆ." ಎಂದು ಆ ರಿಪೋರ್ಟಿನ ಬಗ್ಗೆ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದೆ.
ರಿಪೋರ್ಟ್ ನೋಡಿದ ಹಿರಿಯ ಅಧಿಕಾರಿ.. "ಇದೇನ್ರೀ ಇದು" ಎಂದು ಗೊಣಗಿಕೊಂಡು.. ಆಯ್ತು ನನಗೆ ಸ್ವಲ್ಪ ಸಮಯ ಕೊಡಿ, ಏನ್ ಮಾಡೋದು ನೋಡೋಣ ಎಂದು ಸಮಾಧಾನ ಹೇಳಿ ಕಳುಹಿಸಿದರು.
ನನ್ನದೊಂದೇ ಕೆಲಸವೇ... ಅವರಿಗೆ. ಅವರದೇ ಆದ ಒತ್ತಡಗಳು.. ಹಾಗಾಗಿ ಸಮಯ ಜಾರುತ್ತಿತ್ತು, ನನ್ನ ಪ್ರಯತ್ನ ಎಂದಿನಂತೆ ಮುಂದುವರಿದೇ ಇತ್ತು.
" ನೋಡಿ, ನಮ್ಮ ಕಂಪನಿಗೆ ಎಷ್ಟು ಕೆಲಸ ಮಾಡಿದ್ದೀರ, ನಂಬಿಕೆ ಗಳಿಸಿದ್ದೀರ... ಅವರಿಗೆ ಬೇಕಾದ್ದನ್ನ ಮಾಡಿಕೊಡಿ, ಹಣ ಮಾಡುವ ಅವಕಾಶ ಮುಂದೆ ಸಿಕ್ಕೇ ಸಿಗತ್ತೆ. ಕೆಲವು ಸಲ,ಕೆಲವರ ego ತಣಿಸಕ್ಕೆ, ಸಣ್ಣ ತ್ಯಾಗ ತುಂಬಾ ಸಹಾಯ ಮಾಡತ್ತೆ. ನೀವು business ನವರಿಗೆ ಇದು ಮುಖ್ಯ. ಯೋಚನೆ ಮಾಡಿ . ಮುಂದಿನ ಜವಾಬ್ದಾರಿ ನನಗೆ ಬಿಡಿ " ಎಂದು ಹೇಳಿದವರು ಹಿರಿಯ ಅಧಿಕಾರಿ.
ಎರಡು ದಿನ ಸತತವಾಗಿ ಯೋಚನೆ ಮಾಡಿದೆ, ಎಲ್ಲವನ್ನೂ ಕಳೆದುಕೊಳ್ಳುವುದಕ್ಕಿಂತ, ನಷ್ಟವನ್ನು ಕಡಿಮೆ ಮಾಡಿಕೊಳ್ಳುವುದು, ಸರಿಯಾದ ಮಾರ್ಗ ಎನಿಸಿ ಒಪ್ಪಿಗೆ ಸೂಚಿಸಿದೆ.
ಈ ಘಟ್ಟ ಮುಟ್ಟುವಲ್ಲಿ ಸುಮಾರು 10 ತಿಂಗಳು ಕಳೆದಿತ್ತು. ಇದ್ದ ಸಣ್ಣ ಜಾಗದಲ್ಲೇ ಆ equipment ಜಾಗಮಾಡಿಕೊಂಡು ಕಣ್ಣಿಗೆ ಕಿಸರಾಗಿ ಕುಳಿತಿತ್ತು. ಆಗಾಗ ಬರುತ್ತಿದ್ದ ನಮ್ಮಪ್ಪನ ಗಮನವನ್ನು ಸೆಳೆದು, ಸಮಸ್ಯೆ ಅವರ ತನಕ ಮುಟ್ಟಿತ್ತು.
ಈ ಮಧ್ಯೆ ಮಹಾರಾಷ್ಟ್ರ ಮೂಲದಿಂದ, ಇದೇ ತರಹದ ನಾಲ್ಕು ಎಕ್ವಿಪ್ಮೆಂಟ್ ಬಂದಿದ್ದವು. ನನ್ನ ಕುತೂಹಲಕ್ಕಾಗಿ ಅದರ reading ಗಳನ್ನು ಗಮನಿಸಿದೆ. ನನಗೆ ಕೊಟ್ಟ report ಗೆ ಹೋಲಿಸಿದರೆ, ಸಣ್ಣ ವ್ಯತ್ಯಾಸವಿತ್ತು, ಆದರೆ ಅವರ documentation ಚೆನ್ನಾಗಿತ್ತು.
ಬದಲಾವಣೆ ಮಾಡಬೇಕಾದ ಒಂದು ಬಿಡಿ ಭಾಗವನ್ನು (transformer), ಬಹಳ ಪ್ರಯತ್ನಪಟ್ಟು, ವಿಶೇಷ ಮುತುವರ್ಜಿ ವಹಿಸಿ, ಮಾಡಿಸಿ ತಂದು, ಅದನ್ನು ಅಳವಡಿಸಿದಾಗ, ಸುಧಾರಣೆ ಕಂಡುಬಂದಿತು. ಅದರ approved test certificate ಅನ್ನು ಬೆಲೆ ತೆತ್ತು ಪಡೆದದ್ದು.
ಈ ಬಾರಿ ಎಲ್ಲ ಬಿಡಿ ಭಾಗಗಳ ಟೆಸ್ಟ್ ರಿಪೋರ್ಟ್, ನಾವೇ ಪಡೆದ ರೀಡಿಂಗ್ ನೊಂದಿಗೆ, ಮತ್ತೊಮ್ಮೆ inspection call ಕೊಟ್ಟು, ಹಿರಿಯ ಅಧಿಕಾರಿಗೆ ವೈಯುಕ್ತಿಕವಾಗಿ ತಿಳಿಸಿ ಬಂದೆ.
ಈ ಬಾರಿ ಬಂದವರು, ಈ ಎಕ್ವಿಪ್ಮೆಂಟ್ ಅನ್ನು ಉಪಯೋಗಿಸುವ ವಿಭಾಗದ ಸೂಪರ್ವೈಸರ್.
ಯಾವುದೇ ಅಡ್ಡಿ ಆತಂಕಗಳಿಲ್ಲದೆ, equipment ಅನ್ನು ಕಳಿಸಿದಾಗ, ಮನಸ್ಸಿಗೆ ನಿರಾಳವಾಯಿತು.
ಸಮಯ ಸರಿಯಿತು. ಹೀಗೊಂದು ದಿನ ಬಂದದ್ದು ಅಂಥದೇ equipment ನ recondition ಮಾಡಲು enquiry, maintenance department ನಿಂದ. ನನಗೆ ನೆನಪಿಗೆ ಬಂದದ್ದು once bitten twice shy ... ಬಿಸಿ ಹಾಲು ಕುಡಿದು ಸುಟ್ಟ ಬಾಯಿಗೆ, ಮಜ್ಜಿಗೆಯನ್ನು ಆರಿಸಿ ಕುಡಿಯುವಂತೆ... ಎಂಬ ನಾಣ್ಣುಡಿ. ಮನಸ್ಸು ಕಹಿ ನೆನಪನ್ನು ಜಾಗೃತ ಗೊಳಿಸಿತು. ಅದನ್ನು ಪಕ್ಕಕ್ಕೆ ಸರಿಸಿ, quotation ಕೊಡಲು ನಿರ್ಧರಿಸಿದೆ. ಈ ಬಾರಿ accuracy ಎಷ್ಟಿರಬೇಕೆಂದು ನಿಖರವಾಗಿ ಸೂಚಿಸಲಾಗಿತ್ತು. ಆರ್ಡರ್ ಬರದಿದ್ದರೂ ಪರವಾಗಿಲ್ಲ, ಹುಷಾರಾಗಿರೋಣ ಎಂದು ಯೋಚಿಸಿ, ನಾನು ಅಂದಾಜು ಮಾಡಿದ್ದಕ್ಕಿಂತ ಬಹು ಹೆಚ್ಚಾಗಿ ಬೆಲೆಯನ್ನು ನಮೂದಿಸಿ ಕಳಿಸಿದೆ.
ಆರ್ಡರ್ ಬಂದು, ಆ equipment ಅನ್ನು ನಮ್ಮಲ್ಲಿಗೆ ತಂದು, ಕೆಲಸ ಮಾಡುವಾಗ, ಅದರಲ್ಲಿನ transformer ಅನ್ನು ಟೆಸ್ಟ್ ಮಾಡಿಸುವುದು ಕೆಲಸದ ಭಾಗವಾಗಿದ್ದು, ಮಾಡಿಸಿದಾಗ, ನಿಗದಿಪಡಿಸಿದ ಗುಣಮಟ್ಟಕ್ಕಿಂತ ಸ್ವಲ್ಪ ವ್ಯತ್ಯಾಸವಿತ್ತು. report ಕಳಿಸಿ, ಇದರ ಬಗ್ಗೆ ಅಭಿಪ್ರಾಯ ಕೇಳಿದೆ. REJECTED ಎಂಬ ಉತ್ತರ ಬಂತು. ಅದನ್ನು ಬರೆದವರು ಅದೇ ಪ್ರಶ್ನೆಯ ಅಧಿಕಾರಿ. ಬಹುಶಃ ನನ್ನ ಹೆಸರು ಕಂಡ ತಕ್ಷಣ ಈ ಭಾವನೆ ಬಂದಿರಬೇಕೆನೋ. ಇದರಿಂದ ನನಗೆ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಅದನ್ನು ಸರಿ ಮಾಡಿಸಲು ನನಗೆ ಹೆಚ್ಚಿನ ಹಣ ಬರುವುದಿತ್ತು.
ಆದರೂ ನನ್ನಲ್ಲಿದ್ದ ಒಂದು ದುಷ್ಟ ಶಕ್ತಿ ತಲೆಯೆತ್ತಿತು. ನನಗಾಗಿದ್ದ ಮಾನಸಿಕ, ದೈಹಿಕ ಹಾಗೂ ಆರ್ಥಿಕ ನಷ್ಟಗಳನ್ನು ಸರಿದೂಗಿಸಲು, ಈ ರಿಪೋರ್ಟನ್ನು ಉಪಯೋಗಿಸಿ, ಅದೇ ಅಧಿಕಾರಿಯ, ನಿರ್ದೇಶನದಂತೆ ಎಲ್ಲವನ್ನೂ ಮಾಡಿದಂತೆ, ನನಗಾಗಿದ್ದ ನೋವಿನ ಮುಯ್ಯಿಗೆ, ಮುಯ್ಯಿ ತೀರಿಸುವ ಮನಸ್ಸು ಬಂತು. ಒಂದಷ್ಟು ಮಾನಸಿಕ ತೊಳಲಾಟದ ನಂತರ, ನನ್ನಲ್ಲಿದ್ದ ರಾಕ್ಷಷೀ ಶಕ್ತಿಯೇ ಮೇಲುಗೈ ಪಡೆಯಿತು. ಏನೂ ಕೆಲಸವನ್ನು ಮಾಡದೆ, ಅದಕ್ಕೆ ಬೇಕಾದಂತ ರಿಪೋರ್ಟನ್ನು ತಯಾರು ಮಾಡಿಸಿ ( ಅಪ್ರಾಮಾಣಿಕತನ/ ಮೋಸ ಎಂದು ತಿಳಿದಿದ್ದರೂ) ಆ ಹಣವನ್ನು ಪಡೆದದ್ದು. ಸಾಧುವಲ್ಲದ ಕಾರಣದಿಂದ ನಾನು ಅನುಭವಿಸಿದ ಮುಳ್ಳಿನ ನೋವಿಗೆ, ಅಂತಹುದೇ ಮುಳ್ಳಿನಿಂದ ಸೇಡು(ಯಾರ ಮೇಲೆ ?) ತೀರಿಸಿಕೊಂಡೆ ಎಂಬ ಕೆಟ್ಟ ಸಂತೋಷ ಪಟ್ಟೆ.
ವ್ಯಾಪಾರಂ ದ್ರೋಹ ಚಿಂತನಂ , ಎಂದು ಆಗ ನನ್ನನ್ನು ಸಮರ್ಥಿಸಿಕೊಂಡರೂ, ಹಿಂತಿರುಗಿ ನೋಡಿದಾಗ ನನ್ನ ಚಿಂತನೆಯ ಬಗ್ಗೆ ತಿರಸ್ಕಾರ ಭಾವದ ಜೊತೆಗೆ ಪಶ್ಚಾತ್ತಾಪವಾಯಿತು.
ವಯಸ್ಸಾದಂತೆ, ಜೀವನದ ಅನುಭವಗಳಿಂದ ಮನುಷ್ಯ ಮಾಗಿದಾಗ, ಆಲೋಚನೆಗಳು ಸಹ ಬದಲಾಗುತ್ತದೆ, ನೀತಿ ನಿಯಮಗಳ ಅರ್ಥವೂ ಬದಲಾಗುತ್ತದೆ ಎಂಬುದು ನನ್ನ ಅನಿಸಿಕೆ. ದಶಕಗಳ ಕಾಲ, ನನ್ನಲ್ಲಿಯೇ ಇದ್ದ ಈ ವಿಚಾರ, ಹೊರ ಹಾಕಿ ಮನಸ್ಸು ನಿರಾಳ ಗೊಂಡಿದೆ.
ಕೊನೆ ಹನಿ:
ನಿನ್ನೆ ಗೌರಿ ಗಣೇಶನ ಹಬ್ಬ. ಯಾವಾಗಿನಂತೆ ಪೂಜೆ ಊಟ. ಈ ವರ್ಷದ ವಿಶೇಷ .... ನನ್ನ ಮೊಮ್ಮಗಳು ವಿಸ್ಮಯ ಮಾಡಿದ, ಗಣಪನ ಮೂರ್ತಿಗೆ ಪೂಜೆಯನ್ನು ಮಾಡಿದ್ದು. ನಾನು ಚಿಕ್ಕವನಿದ್ದಾಗ ಮಾಡಲು ಪ್ರಯತ್ನಿಸಿದ ಗಣಪನ ಮೂರ್ತಿ, ಅವನ ಅಪ್ಪನ ಲಿಂಗರೂಪ ಆಗಿತ್ತೆಂದು ಛೇಡಿಸಿಕೊಂಡ ನೆನಪು ಮರುಕಳಿಸಿತು. ಏನಾದರೇನು...ಅದಕ್ಕೂ ಪೂಜೆಮಾಡಿ ಸಂತೋಷಪಟ್ಟಿದ್ದು ಸತ್ಯ. ಅಮ್ಮ ಮಗನ ಕೃಪೆ ಎಲ್ಲರಿಗೂ ಲಭಿಸಲಿ ಎಂದು ಆಶಿಸುತ್ತಾ.....
ನಮಸ್ಕಾರ....
ಡಿ ಸಿ ರಂಗನಾಥ ರಾವ್
9741128413


Comments
Post a Comment