ಏಕಾಂಗಿ ಸಂಚಾರ
ಎಲ್ಲಿ ಹೋಗಲೂ ನನಗೆ ಜೊತೆ ಬೇಕು. ಜೊತೆ ಇಲ್ಲದಾದಾಗ ಎಷ್ಟೋ ಸಲ ಹೋಗದೇ ಇದ್ದ ಸಂದರ್ಭಗಳು ಇವೆ. ಹಾಗೆ ಅನಿವಾರ್ಯವಾಗಿ ಹೋದ ಸಂದರ್ಭಗಳೂ ಇದೆ. ನಾನೇ ಇಷ್ಟ ಪಟ್ಟು ಒಂಟಿಯಾಗಿ ಹೋದದ್ದು ಲೇಪಾಕ್ಷಿಗೆ. ಆ ಅನುಭವ ಖುಷಿ ಕೊಟ್ಟಿತ್ತು. ಈಚೆಗೆ ಏಕಾಂಗಿಯಾಗಿ ಹೋಗಿದ್ದ ಮುಳುಬಾಗಿಲಿನ ಪ್ರವಾಸದ ಅನುಭವ.... ಜೊತೆಯಲ್ಲಿ ಯಾರು ಇರದಿದ್ದರೂ, ಅಪರಿಚಿತರ ಜೊತೆ ಒಂದೆರಡು ಮಾತು ಬಿಟ್ಟು, ಮೌನವೇ ಆವರಿಸಿದ್ದರೂ, ಅಲ್ಲೊಂದು ಸಂತಸವಿತ್ತು, ಅಂತರ್ಮುಖಿಯಾಗಲು ಅವಕಾಶವಿತ್ತು... ಹಾಗಾಗಿ ಅದೊಂದು ಬೇರೆಯೇ ದಾರಿ ಎನಿಸಿತು.
ಈಗ ಒಬ್ಬಂಟಿಯಾಗಿ ಹೋಗುವ ಪ್ರವಾಸದ ಅವಕಾಶಕ್ಕಾಗಿ ಎದುರು ನೋಡುತ್ತೇನೆ.
ಹೋದ ಶುಕ್ರವಾರ ಏಕಾಂಗಿಯಾಗಿ ಹೋದದ್ದು, ಕನಕಪುರ ರಸ್ತೆಯ ರವಿಶಂಕರ್ ಗುರೂಜಿಯವರ ಆಶ್ರಮಕ್ಕೆ. ನಾನು ಅಲ್ಲಿ ತಲುಪುವಾಗ 12 ಗಂಟೆ ಸಮೀಪಿಸಿತ್ತು. ಒಳಗೆ ಹೋಗಲು ಅನುಮತಿಗೆ, ಬೇಕಾದ ವಿವರಗಳನ್ನು online ಮೂಲಕ ತುಂಬಿ,ಪಡೆದು, ಅವರ ಸಲಹೆಯಂತೆ ಮುಂದೆ ನಡೆದೆ. ಪಾದಚಾರಿಗಳಿಗಾಗಿ ಹಾಸುಗಲ್ಲುಗಳ ಮಾರ್ಗ... ಎಡಬಲಗಳಲ್ಲಿ ಹಸಿರು, ಅಲ್ಲಲ್ಲಿ ಮಾರ್ಗದರ್ಶಕ ಬರವಣಿಗೆಗಳು... ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ.
ನನಗ್ಯಾವ ಗೊತ್ತು ಗುರಿಗಳು ಇರದಿದ್ದರಿಂದ ಹಾಗೆ ಮುನ್ನಡೆದೆ, ಅಲ್ಲೊಂದು ಧ್ಯಾನ ಮಂದಿರ ಎಂದು ಬರೆದ ಬಾಗಿಲನ್ನು ತೆರೆಯಲು ಪ್ರಯತ್ನ ಪಡುತ್ತಿದ್ದೆ, ಆಗ ಬಂದ ಒಬ್ಬ ಹೆಣ್ಣು ಮಗಳು, ಹತ್ತಿರದ ಮಾಹಿತಿ ಕೇಂದ್ರಕ್ಕೆ ಹೋಗಿ ವಿಚಾರಿಸಲು ದಾರಿ ತೋರಿದರು.
ಆತ್ಮೀಯವಾಗಿ ಮಾತನಾಡಿದ ಮಾಹಿತಿ ಕೇಂದ್ರದ ಸ್ವಯಂಸೇವಕರು, ನನ್ನ ಉದ್ದೇಶವನ್ನು ತಿಳಿದು, ಅಲ್ಲಿ ನಡೆಯುವ ಕಾರ್ಯಕ್ರಮಗಳೆಲ್ಲವನ್ನೂ ವಿವರಿಸಿ, " ಈಗ ಸಮಯ 12.20... ಅನ್ನಪೂರ್ಣದಲ್ಲಿ ಊಟ ಪ್ರಾರಂಭವಾಗಿದೆ... ಮೊದಲು ಊಟ ಮಾಡಿ, ನಂತರ ಎರಡು ಗಂಟೆಗೆ ಹೊರಡುವ ವಾಹನದಲ್ಲಿ, ಆಶ್ರಮದಲ್ಲಿನ ನೋಡುವ ಸ್ಥಳಗಳನ್ನು ಗೈಡ್ ಜೊತೆ ಹೋಗಿ, ನೋಡಿದ ನಂತರ ವಿಶಾಲಾಕ್ಷಿ ಮಂದಿರವನ್ನು ನೋಡಿ ಬಂದರೆ ನಿಮ್ಮ ಸಮಯ ಸರಿಯಾಗುತ್ತದೆ... ಎಲ್ಲ ಓಡಾಟಕ್ಕೂ ಜೈ ಗುರುದೇವ್ ಎಂದು ಬರೆದಿರುವ ಮಿನಿ ಬಸ್ಸುಗಳನ್ನು ಉಪಯೋಗಿಸಬಹುದು", ಎಂದು ಹೇಳಿ, ಅದಕ್ಕೆ ಬೇಕಾದ ಪಾಸ್ ಅನ್ನು ನನ್ನ ಫೋನ್ ಗೆ ಹಾಕಿ, ಅನ್ನಪೂರ್ಣ ಗೆ ದಾರಿ ತೋರಿಸಿದರು.
ಯಥಾ ಪ್ರಕಾರ, ಪಾದಚಾರಿ ಮಾರ್ಗದಲ್ಲಿ ನಡೆದು ಅನ್ನಪೂರ್ಣ ಊಟದ ಮನೆಯನ್ನು ತಲುಪಿದಾಗ ಜನ ತುಂಬಿ ತುಳುಕುತ್ತಿದ್ದರು. ಹೇಗಪ್ಪಾ ಇಷ್ಟು ಜನದ ಮಧ್ಯೆ ಎಂದು ಯೋಚಿಸುತ್ತಾ ಒಳ ನಡೆದರೆ ಅಲ್ಲಿ ಶಿಸ್ತು ಬದ್ಧ ವ್ಯವಸ್ಥೆ. ನಾಲ್ಕಾರು ಕಡೆ ಊಟ ವನ್ನು ಕೊಡುತ್ತಿದ್ದರು... ಎಲ್ಲರೂ ಸಾಲಾಗಿ ನಿಂತು ಊಟವನ್ನು ತೆಗೆದುಕೊಳ್ಳುತ್ತಿದ್ದರು. ನನ್ನ ಸರದಿ ಬಂದಾಗ, ತಟ್ಟೆಗೆ ಬಿದ್ದದ್ದು ಅನ್ನ, ಬಿಸಿ ಬಿಸಿ ಹುಳಿ. ಜೊತೆಗೆ ಒಂದು ಲೋಟ ಮಜ್ಜಿಗೆ. ರುಚಿರುಚಿಯಾದ ಊಟ, ಮಜ್ಜಿಗೆಯನ್ನು ಸವಿದು, ಹತ್ತಿರದಲ್ಲೇ ಇದ್ದ ಒಂದು ಬಸ್ಸನ್ನು ಏರಿ, ಆಶ್ರಮ ಸಂಚಾರಕ್ಕೆ ಹೊರಡುವ ವಾಹನದ ಸ್ಥಳವನ್ನು ತಲುಪಿದಾಗ ಸಮಯ 1.15. ಇನ್ನೂ ಮುಕ್ಕಾಲು ಗಂಟೆ ಕಾಯಬೇಕಿತ್ತು, ಅಲ್ಲೇ ಒಂದು ಕಲ್ಲು ಬೆಂಚಿನ ಮೇಲೆ ಕುಳಿತೆ. ಆಗ , ತೆಲುಗಿನಲ್ಲಿ ಜೋರಾಗಿ ಮಾತನಾಡುತ್ತಾ ಅಲ್ಲಿಗೆ ಬಂದವರು, ಮೂವರು ಹೆಂಗಸರು. ನನಗೆ ಅರ್ಥವಾಗಿದ್ದು... ಅವರು ಮುಂದೆ ಎಲ್ಲಿಗೆ ಹೋಗಬೇಕೆಂದು ಮಾಡುತ್ತಿದ್ದ ಚರ್ಚೆ.. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ.
ನಾನು ಒಂಟಿಯಾಗಿ ಇರುವುದರಿಂದ, ಈ ಭಿನ್ನಾಭಿಪ್ರಾಯಗಳಿಗೆ ಅವಕಾಶವೇ ಇಲ್ಲ ಅನ್ನಿಸಿತು. ಆಗ ನೆನಪಿಗೆ ಬಂದದ್ದು ಆದಿ ಶಂಕರಾಚಾರ್ಯರ ಭಜಗೋವಿಂದಂ ನ ಈ ಭಾಗ..
ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ , ನಿರ್ಮೋಹತ್ವೇ ನಿಶ್ಚಲ ತತ್ವಂ...
ಒಳ್ಳೆಯ ಸಹವಾಸದಿಂದ... ಸಹವಾಸವೇ ಇಲ್ಲದ ಒಂಟಿತನ - ತನ್ನೊಂದಿಗೆ ತನ್ನ ಒಡನಾಟ, ಆ ಒಂಟಿತನದಿಂದ.... ವ್ಯಾಮೋಹವಿಲ್ಲದ ಸ್ಥಿತಿ.... ಇದು ಜೀವನ್ಮುಕ್ತಿಗೆ ದಾರಿ.
ಕೈವಾರ ನಾರಾಯಣ ತಾತ ಹೇಳಿದ, ಶ್ರೀರಾಮ ನೀ ನಾಮ.... ಹಾಡಿನ ಚರಣದ " ಮೋಹಾ ಪಾಶಮನ್ನಿ ಮೊಲಕಾ ಚರಚಮನ್ನಾದಿ" ಎಂಬ ಸಾಲು ಸಹ ಮೋಹವನ್ನು ಮೊಳಕೆಯಲ್ಲೇ ಚಿವುಟ ಬೇಕು ಎಂದು ಹೇಳುತ್ತದೆ....
ಸಂಸಾರದಲ್ಲಿದ್ದೂ ವ್ಯಾಮೋಹವನ್ನು ಬಿಟ್ಟು, ತಾವರೆ ಎಲೆಯ ಮೇಲಿನ ನೀರಿನಂತೆ, ಯಾವುದಕ್ಕೂ ಅಂಟದಂತೆ ಇರಬೇಕು...
ಈ ಚಿಂತನೆಗಳು ಕೇಳಲು/ ಹೇಳಲು ಚೆನ್ನ, ಆದರೆ ಜೀವನದಲ್ಲಿ ಅಳವಡಿಸಿಕೊಳ್ಳಲು ಭಗೀರಥ ಪ್ರಯತ್ನ ಮಾಡಬೇಕು. ಎಲ್ಲೋ ಬೆರಳೆಣಿಕೆಯಷ್ಟು ಮಂದಿ, ಇದನ್ನು ಸಾಧಿಸಿರಬಹುದು.
ಈ ಚಿಂತನೆಯಲ್ಲಿ ಹೊತ್ತು ಹೋದದ್ದೆ ಗೊತ್ತಾಗಲಿಲ್ಲ... ಹತ್ತಿರದಲ್ಲೇ ಬಂದು ನಿಂತ buggy - ವಿದ್ಯುತ್ ಚಾಲಿತ ವಾಹನಗಳು ನನ್ನ ಗಮನ ಸೆಳೆದವು. ಪಾಸ್ ತೋರಿಸಿ ಹೋಗಿ ಕುಳಿತೆ.
ನೇಪಾಳ ಮೂಲದ ಹುಡುಗಿ, ನಮಗೆ ಮಾರ್ಗದರ್ಶಿಯಾಗಿ, ಅಲ್ಲಿನ ವಿಶೇಷತೆಗಳನ್ನು ತೋರಿಸುತ್ತಾ, ವಿವರಿಸುತ್ತಾ... ಕಂಡದ್ದು...
ಸುಂದರ ಪರಿಸರ, ದೊಡ್ಡ ಕೆರೆ, ಅದರಲ್ಲಿ ನೀರು ಚಿಮ್ಮುವ ಕಾರಂಜಿ, ಸಾವಯವ ಗೊಬ್ಬರವನ್ನೇ ಉಪಯೋಗಿಸಿ ಹಣ್ಣು ತರಕಾರಿ ಬೆಳೆಯುವ ತೋಟಗಳು, ಗೋಬರ್ ಗ್ಯಾಸ್ ಸ್ಥಾವರ, ದೊಡ್ಡ ತಿಪ್ಪೆ ಎನ್ನಬಹುದಾದ ಸೆಗಣಿಯ ಸಂಗ್ರಹ... ಇದು ನನಗೆ ನಮ್ಮೂರಿನಲ್ಲಿ ಕಂಡ, ಹರಳು ಗಿಡಗಳು ಹಾಗೂ ಗೂದೆ ಹಣ್ಣು ಗಿಡಗಳು ಬೆಳೆದ ತಿಪ್ಪೆಯನ್ನು ನೆನಪಿಸಿತು.
ವೇದ ಪಾಠಶಾಲೆಯ ಪ್ರಶಾಂತ ಅಂಗಳವನ್ನು ಪ್ರವೇಶಿಸುತ್ತಿದ್ದಂತೆ, ಸಂಸ್ಕೃತ ಶ್ಲೋಕಗಳ/ ಮಂತ್ರಗಳ ಪಠನ ಕಿವಿಗೆ ಬಿತ್ತು. ಇಲ್ಲಿ ನಾಲ್ಕು ವೇದಗಳ ಪಾಠ ಹಾಗೂ ಪೂಜಾ ವಿಧಿ ವಿಧಾನಗಳ ಶಾಸ್ತ್ರ ಕಲಿಯುವ ವಿದ್ಯಾರ್ಥಿಗಳು ಕಣ್ಣಿಗೆ ಬಿದ್ದರು. ಎಲ್ಲರೂ ಶುಭ್ರವಾದ ಬಿಳಿಯ ಪಂಚೆ, ಶಲ್ಯ, ಜುಟ್ಟು ಸಮೇತ ಕಂಗೊಳಿಸುತ್ತಿದ್ದರು. ಈ ವೇದ ಪಾಠಶಾಲೆಯು ಸಂಸ್ಕೃತ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುತ್ತದೆ.
ಗುಜರಾತಿನ ಸೋಮನಾಥ ಮಂದಿರವನ್ನು ಲೂಟಿ ಮಾಡಿದ ಗಜನಿ ಮಹಮ್ಮದ್, ಕಲ್ಲಿನ ಲಿಂಗವನ್ನು ಒಡೆದು ಹಾಕಿದಾಗ, ಅಲ್ಲಿ ಸಿಕ್ಕ ಒಂದಷ್ಟು ಚೂರುಗಳನ್ನು, ಪುಟ್ಟ ಪುಟ್ಟ ಲಿಂಗದ ರೂಪದಲ್ಲಿ ಕಾಪಾಡಿಕೊಂಡು, ಪೂಜಿಸಿಕೊಂಡು ಬರುತ್ತಿದ್ದ ಅಗ್ನಿ ಹೋತ್ರಿ ಸಂತತಿಯವರು, ಅವುಗಳನ್ನುಆಶ್ರಮಕ್ಕೆ ಹಸ್ತಾಂತರಿಸಿದ್ದಾರೆ. ಅದರ ನಿತ್ಯ ಪೂಜೆಯನ್ನು ಆಶ್ರಮ ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿದೆ. ಕಣ್ಣಿಗೆ ಕಂಡದ್ದು ಐದು ಲಿಂಗಗಳು ಆದರೂ, ಇನ್ನೂ ಇದೆ ಎಂದು ತಿಳಿಯಿತು.
ಸೋಮನಾಥ ಲಿಂಗ ಅಯಸ್ಕಾಂತ ಶಕ್ತಿಯುಳ್ಳದ್ದಾಗಿತ್ತು, ಅದು ನೆಲದ ಮೇಲಿರದೆ ಗಾಳಿಯಲ್ಲಿ ತೇಲುತ್ತಿತ್ತು ಎನ್ನುವುದು ವಿಶೇಷ. ಅದರ ರಾಸಾಯನಿಕ ವಿಶ್ಲೇಷಣೆ ಮಾಡಿದಾಗ ಕಂಡುಬಂದದ್ದು, 2.18% ಕಬ್ಬಿಣದ ಅಂಶ. ಅಯಸ್ಕಾಂತ ಶಕ್ತಿಗೆ ಕಬ್ಬಿಣವೆ ಮೂಲ, ಹಾಗಾಗಿ ಈ ಲಿಂಗದಲ್ಲಿ ಅಯಸ್ಕಾಂತ ಶಕ್ತಿಯನ್ನು ತುಂಬಿದ ವಸ್ತು ಯಾವುದೆನ್ನುವುದು ಇನ್ನೂ ಗೂಢ.
1600 ಕ್ಕೂ ಮಿಕ್ಕಿ ಇರುವ ವಿವಿಧ ದೇಸಿ ತಳಿಗಳ ಗೋಶಾಲೆಯನ್ನು ನೋಡಿದ್ದು. ಬೆನ್ನಿನ ಮೇಲಿರುವ ಡುಬ್ಬ ಹಾಗೂ ಕುತ್ತಿಗೆಯ ಕೆಳಗಿರುವ ಗಂಗೆದೊಗಲು ಎನ್ನುವ ನೇತಾಡುವ ಚರ್ಮ ದೇಸಿ ತಳಿಯ ಹೆಗ್ಗುರ್ತು ಎನ್ನುವ ತಿಳುವಳಿಕೆ ಸಿಕ್ಕಿತು. ಗೋವುಗಳ ಹಾಗೂ ಕೊಟ್ಟಿಗೆಯ ಸ್ವಚ್ಛತೆ ಎದ್ದು ಕಾಣುತ್ತಿತ್ತು.
ಕೊನೆಯ ಘಟ್ಟದಲ್ಲಿ, ನಾನು ಕುತೂಹಲದಿಂದ ನೋಡಿದ್ದ ಧ್ಯಾನ ಮಂದಿರಕ್ಕೆ ಬಂದಿದ್ದು. ಶಾಂತ ಪರಿಸರದಲ್ಲಿ ನಮ್ಮನ್ನೆಲ್ಲ ಕೂಡಿಸಿ, ಧ್ಯಾನದ ಬಗ್ಗೆ ಒಂದಷ್ಟು ವಿಷಯಗಳನ್ನು ತಿಳಿಸಿ, ಗುರೂಜಿಯವರ ಧ್ವನಿ ಮುದ್ರಿತ ಮಾತುಗಳ ಮೂಲಕ, ನಮಗೆ ಧ್ಯಾನದ ಸ್ವರೂಪವನ್ನು ಪರಿಚಯ ಮಾಡಿಕೊಡುವುದರೊಂದಿಗೆ ಪ್ರವಾಸ ಮುಕ್ತಾಯ.
ವಿಶಾಲಾಕ್ಷಿ ಮಂಟಪವನ್ನು ನೋಡಿಕೊಂಡು, ಕೆಲಕಾಲ ಅಲ್ಲಿನ ವಿಶಾಲ ಧ್ಯಾನ ಮಂಟಪದಲ್ಲಿ ಕೂತು ಹೊರ ಬಂದೆ.
ಕುಡಿಯುವ ನೀರು, ಶೌಚಾಲಯ, ಮಕ್ಕಳಿಗೆ ಆಡಲು ಜಾಗ, ಕುಳಿತುಕೊಳ್ಳಲು ಕಲ್ಲಿನ ಜಗಲಿಗಳು , ದಾರಿ ತೋರಿಸಲು, ವಿವರ ಕೊಡಲು ಅಲ್ಲಲ್ಲಿ ಸ್ವಯಂಸೇವಕರು.. ಎಲ್ಲರೂ/ ಎಲ್ಲವೂ ಸ್ವಚ್ಛ ಹಾಗೂ ಶಿಸ್ತು ಬದ್ದ.
ಎಲ್ಲ ಮುಗಿಸಿ ಹೊರಬಂದೆ, ಹೆಬ್ಬಾಗಿಲಿನ ಪಕ್ಕದಲ್ಲಿ ಒಂದು ವೇದಿಕೆ ಕಲ್ಪಿಸಿ, ಸಮತಾ ಸೈನಿಕ ದಳ ಹೆಸರಿನಲ್ಲಿ ಧರಣಿಗೆ ಕೂತಿದ್ದವರು ಮೂರ್ನಾಲ್ಕು ಜನ. ಅವರ ಮೇಲುನೋಟದ ಉದ್ದೇಶ, ಆಶ್ರಮ ಆಕ್ರಮಿಸಿಕೊಂಡಿರುವ ಸರ್ಕಾರಿ ಜಾಗವನ್ನು ಬಿಡುಗಡೆ ಮಾಡಿಸುವುದು. ಇದರ ಹಿಂದೆ ಇರುವುದು ಬೇರೇನೋ ಹುನ್ನಾರ ಎಂದು ತಿಳಿಯಲು ಕಷ್ಟಪಡಬೇಕಾಗಿಲ್ಲ. ಅಂತಹ ತ್ರೇತಾಯುಗದ ಶ್ರೀರಾಮಚಂದ್ರನಿಗೇ ಅಪವಾದ ತಪ್ಪಲಿಲ್ಲ... ಇನ್ನು ಕಲಿಯುಗದಲ್ಲಿ ಕೇಳಬೇಕೇ...
ಮನಸ್ಸು ಮನೆಯ ಕಡೆ ಓಡಿತು.... ಮತ್ತದೇ ವ್ಯಾಮೋಹ. ಮತ್ತದೇ ಭಜಗೋವಿಂದದ ಇನ್ನೊಂದು ಚರಣ ನೆನಪಿಗೆ ಬಂತು:
ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ... ಇಹ ಸಂಸಾರೇ ಬಹು ದುಸ್ತಾರೆ .... ಮತ್ತೆ ಮತ್ತೆ ಜನನ, ಮರಣ , ಅಮ್ಮನ ಗರ್ಭದಲ್ಲಿ ಶಯನ ,ಲೌಕಿಕ ಸಂಸಾರ ಬಂಧನದಿಂದ ಹೊರಬರುವುದು ಕಷ್ಟವೇ.... ಇದುವೇ ಜೀವನಚಕ್ರ. ವ್ಯಾಮೋಹ ಬಿಡುವುದು ಅಷ್ಟು ಸುಲಭವೇ?
ನನ್ನೂರು ದೊಡ್ಡಜಾಲದ ನಾಗಣ್ಣ ( SN ರಾಜನ್) ಹೇಳಿಕೊಟ್ಟ " ರೈ ರೈ ತನಕ ಊಟದ ಕೆಲಸ ಉಂಡ ಮೇಲೆ ಶಯನ, ಮಲಗೋಣ ಮಲಗೋಣ ಮತ್ತೇಳೋಣ, ತರೋಣ ತರೋಣ ತಿಂಬಾಕೋಣ" ಎಂಬುದು ನಮ್ಮ ದೈನಂದಿನ ಜೀವನದ ಮೂಲ ಉದ್ದೇಶ ಎಂದು ಚಿಂತಿಸುತ್ತಾ ಮನೆಯ ದಾರಿ ಹಿಡಿದೆ. ಇದೇ ನನ್ನಂತಹ ಸಾಮಾನ್ಯ ಜನರ ಸಹಜ ಜೀವನ ಎನ್ನುವುದು ಸತ್ಯ ಅಲ್ಲವೇ?
ನಮಸ್ಕಾರ...
ಡಿ ಸಿ ರಂಗನಾಥ ರಾವ್ಭ
9741128413





Comments
Post a Comment