ಅಪ್ಪಂದಿರ ದಿನ
ಒಂದು ಕಾರ್ಯಕ್ರಮದ ನಿಮಿತ್ತ ನನ್ನ ಹೆಂಡತಿ ಬೆಳಿಗ್ಗೆ 9:00 ಗಂಟೆಗೆ ಮನೆಯಿಂದ ಹೊರಟಳು. ಒಂಟಿಯಾಗಿದ್ದೆ... ಏನು ತೋಚದೆ.. ಹಾಗೆ ಮಲಗಿದೆ... ಯಾವಾಗಿನಂತೆ ಸುಖ ನಿದ್ರೆಗೆ ಜಾರಿದೆ. ಟೆಲಿಫೋನ್ ಕರೆಯ ಶಬ್ದ ಎಲ್ಲೋ ಕೇಳಿಸಿದಂತಾಗಿ, ಅರೆ ನಿದ್ರೆಯಲ್ಲಿಯೇ ಕಿವಿಯ ಬಳಿ ಇಟ್ಟೆ...
" ಏನ್ ಮಾಡ್ತಾ ಇದ್ದೀಯಾ?" ಆ ಕಡೆಯಿಂದ ಧ್ವನಿ... ಇಷ್ಟು ಗತ್ತಿನಿಂದ ಕೇಳುವ ಒಂದೇ ವ್ಯಕ್ತಿ ಅದು ನನ್ನ ಮಗಳು ಚೈತ್ರ
" ನಿದ್ದೆ..."
" ಸೋಮಾರಿ ಕಟ್ಟೆ" ನನ್ನ ಬೈಗುಳವೇ ನನಗೆ ತಿರುಗುಬಾಣವಾಯಿತು
"thank you..."
" ತಿಂಡಿ ಏನ್ ತಿಂದೆ"
" ಇನ್ನೂ ಸ್ನಾನನೂ ಮಾಡಿಲ್ಲ, ಯೋಚನೇನು ಮಾಡಿಲ್ಲ"
" ಇಲ್ ಕೇಳಿಸ್ಕೋ... ನೀನು ಏನೂ ಮಾಡಕ್ಕೆ ಹೋಗ್ಬೇಡ, ನಾನು, ನೀನು, ವಿಸ್ಮಯ ಊಟಕ್ಕೆ ಹೋಗೋಣ... ಬಾಳೆ ಎಲೆ ಊಟ... ನಾನ್ ಬುಕ್ ಮಾಡ್ತೀನಿ..ಹನ್ನೆರಡೂವರೇಗೆ ಬರ್ತೀನಿ.. ನೀನ್ ರೆಡಿಯಾಗಿರು.. ನನ್ ಗಾಡಿಲ್ಲೇ ಕರ್ಕೊಂಡು ಹೋಗ್ತೀನಿ"
" ಅಯ್ಯೋ.. ಬೇಡ ಕಣೆ ಆಟೋದಲ್ಲಿ ಹೋಗೋಣ"
" ಸುಮ್ನೆ ಆಟೋ ಯಾಕೆ..."
" ಹಾಗಾದ್ರೆ ನನ್ ಗಾಡಿಯಲ್ಲಿ ನಾನು.. ನಿನ್ ಗಾಡೀಲಿ ನೀನು ನಿನ್ ಮಗಳು ಹೋಗೋಣ"
" ಎರಡೆರಡು ಗಾಡಿ ಯಾಕೆ.. ಒಂದೇ ಸಾಕು..."
" ಹಾಗಾದ್ರೆ ನನ್ ಗಾಡಿಲಿ ಹೋಗೋಣ..."
" ಆಯ್ತು... ಬೇಗ ರೆಡಿಯಾಗು..."
ಫೋನ್ ಕಟ್ ಆಯ್ತು.
ಸಮಯ ನೋಡಿದೆ.. 10 ಗಂಟೆ. ಯಾವುದೋ ಹೋಟೆಲ್ ಹೆಸರು ಹೇಳಿದ್ಲು.. ನನ್ ತಲೆಗೆ ಹೋಗಿರ್ಲಿಲ್ಲ. ಸ್ವಲ್ಪ ಹೊತ್ತು ಹಾಗೆ ಮಲಗಿ ಎದ್ದೆ.. ಸಣ್ಣಪುಟ್ಟ ಕೆಲಸ ಮಾಡಿ... ಸ್ನಾನ ಮಾಡಿ... ದೇವರ ದೀಪ ಹಚ್ಚಿ, ನಮಸ್ಕಾರ ಮಾಡಿ.. ಬಟ್ಟೆ ಹಾಕ್ಕೊಳೋ ಅಷ್ಟರೊಳಗೆ... ಮನೆಯ ಕಾಲಿಂಗ್ ಬೆಲ್... 11.50 ಅಷ್ಟೇ. ಮಗಳು ಮೊಮ್ಮಗಳು ಹಾಜರ್. ಅವಳು ಯಾವಾಗಲೂ ಹಾಗೇ.. ಕುದುರೆ ಮೇಲೆ ಇರ್ತಾಳೆ... ಮೂರು ಜನವೂ ನನ್ನ ಗಾಡಿಲೇ ಹೊರಟೆವು... ಅವಳು ಹೇಳಿದಂತೆ ಬನಶಂಕರಿ ಎರಡನೇ ಹಂತದ ದಾರಿ ಹಿಡಿದೆ... ಸೇರಿದ್ದು ಬ್ರಾಹ್ಮಣ ಪ್ರಸಾದಂ ಎಂಬ ಹೋಟೆಲ್ ಬಳಿ.
ಮೊದಲೇ ಹೇಳಿಟ್ಟ ಹಾಗೆ ಕೇಕ್ ಇಡಲು ಒಂದು ಸಣ್ಣ ಜಾಗ ನಿರ್ಧಾರವಾಗಿತ್ತು. ಅವಳ ಇಚ್ಛೆಯಂತೆ ಕೇಕನ್ನು ಕತ್ತರಿಸಿ, ಮೊಮ್ಮಗಳು ಮಗಳಿಗೆ ತಿನ್ನಿಸಿ.. ನಾನು ತಿಂದಂತೆ ಮಾಡಿದ ಫೋಟೋವನ್ನು ತೆಗೆದಾದ ಮೇಲೆ.. ಕೇಕನ್ನು ಹೋಟೆಲ್ ನವರಿಗೆ ಹಸ್ತಾಂತರಿಸಿದಳು.
ವೀಡಿಯೋ ನೋಡಲು ಕೆಳಗಿನ ಲಿಂಕ್ ಒತ್ತಿ
https://drive.google.com/file/d/1Upqpzf0oZ8GDsBOlGPa19_uI_KP960Et/view?usp=drivesdk
ಮುಂದಿನದು ಊಟದ ಸಂಭ್ರಮ.
ಸಾಂಪ್ರದಾಯಿಕ ಬ್ರಾಹ್ಮಣರ ಅಡುಗೆ... ಎಲ್ಲಾ ರುಚಿಯಾಗಿತ್ತು. ನಮ್ಮ ಕೊಠಡಿಯಲ್ಲಿ ಕೂತ ಜೊತೆಯವರು... ತುಂಬಾ ಗೆಲುವಾಗಿ ಮಾತನಾಡಿ.. ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಅವರ ಅಭಿನಂದನೆಗಳನ್ನು ಪಡೆದಾಯಿತು. ಪುಷ್ಕಳ ಭೋಜನವಾಯಿತು.
ಮನೆಯ ಹತ್ತಿರ ಬಂದಾಗ " ಹಾಯಾಗಿ ತಾಚೀ ಮಾಡು" ಎಂದು ಹೇಳಿ ಹೊರಟ ಮಗಳು.. ನನಗೆ ಮಗಳಾ ? ಅಥವಾ ತಯಾರಾಗಿರುವಂತೆ ಆಜ್ಞೆ ಮಾಡಿ, " ಅಪ್ಪನ ದಿನಾಚರಣೆ" ಯ ಸಂಭ್ರಮವನ್ನು ನನಗಾಗಿ ಆಯೋಜಿಸಿದ್ದು ನನ್ನಪ್ಪನಾ...? ಎರಡು ಪಾತ್ರವೂ ಇತ್ತು ಎನ್ನಲೇ?
ಮನಸ್ಸು ಸಾರ್ಥಕ ಭಾವದಿಂದ ತುಂಬಿದೆ.
ನಾನೆಂದೂ ಅಪ್ಪಂದಿರ ದಿನಾಚರಣೆಯನ್ನು ಆಚರಿಸಿದ್ದೇ ಇಲ್ಲ... ನಮ್ಮ ಪಾಲಿಗೆ ಅಪ್ಪಂದಿರ ದಿನ ಎಂದರೆ... ವರ್ಷಕ್ಕೊಮ್ಮೆ ನಮ್ಮಪ್ಪನನ್ನು ನೆನೆಸಿಕೊಳ್ಳುವ ದಿನ ಮಾತ್ರ.
ಇಷ್ಟು ಅದ್ದೂರಿಯಾಗಿ ಇಂದಿನ ದಿನವನ್ನು... ಆಚರಿಸಿದ ಮಗಳಿಗೆ ಧನ್ಯವಾದ ಬಲು ಚಿಕ್ಕ ಪದ. ನಿನಗೆ ಋಣಿ ಮಗಳೇ..
ದೇವರು ನಿನಗೆ... ನಿನ್ನ ಸಂಸಾರಕ್ಕೆ ಒಳ್ಳೆಯದು ಮಾಡಲಿ... ಚೆನ್ನಾಗಿ ಬಾಳು.
ಎಲ್ಲಾ ಅಪ್ಪಂದಿರಿಗೂ... ಇಂದಿನ ದಿನದ ಶುಭಾಶಯಗಳನ್ನು ಹೇಳುತ್ತಾ..
ನಮಸ್ಕಾರಗಳು..
ಡಿ ಸಿ ರಂಗನಾಥ ರಾವ್
9741128413


👏👏
ReplyDeleteಇಷ್ಟು ಬೇಗ ಅಪ್ಪನ ದಿನಾಚರಣೆಯ ಲೇಖನವೂ ಬರೆದು ಬಿಟ್ಟಿದ್ದೀರಾ ಶ್ಲಾಘನೀಯ..ಮಗಳು ಮೊಮ್ಮಗಳ ಜೊತೆಗೆ ಕಳೆದ ಕ್ಷಣಗಳು ಎಂದಿಗೂ ಅದ್ಬುತ ಕ್ಷಣಗಳು
ReplyDeleteಹೆಣ್ಣು ಮಗಳ ಪಡೆದ ಪುಣ್ಯವಂತ ನೀನು ಕಣಯ್ಯಾ, ತುಂಬ ಸಂತೋಷದ ಸಂಗತಿ ತಿಳಿಸಿದ್ದೆಯಾ ಇಂದು.
ReplyDeleteಇಂತಿ ನಿನ್ನವ
ಪ್ರೇಮ