ಪರಿಸಮಾಪ್ತಿಯಾದ 'ಪರ್ವ'
ನಾನು ಗೌರವ ಭಕ್ತಿಯಿಂದ ನೋಡಿದ ಲೇಖಕರಲ್ಲಿ ಎಸ್ ಎಲ್ ಭೈರಪ್ಪನವರು ಅಗ್ರಗಣ್ಯರು. ಅವರು ನಮ್ಮನ್ನಗಲಿದ ಸುದ್ದಿಯನ್ನು ಕೇಳಿದಾಗ ಕೆಲ ಕ್ಷಣಗಳು ವಿಚಲಿತನಾದೆ.
ವಯೋ ಸಹಜವಾದ ಸಾವು ಆದ್ದರಿಂದ, ಯಾವ ನೋವೂ ಇಲ್ಲದೆ, ಒಪ್ಪಿಕೊಳ್ಳಬೇಕೆಂಬುದು ನನ್ನ ನಿಲುವು. ಆದರೂ ಒಂದರೆಕ್ಷಣ ಸಂಕಟವಾದದ್ದು ಸತ್ಯ. " ದೇವರ ತಾವುಕ್ಕೆ ಹೋದದ್ದು, ಇನ್ನೇನು ಮಾತಾಡಿ ಸುಖವಿಲ್ಲ.. ಮುಂದಿನ ಕೆಲಸ ನೋಡೋಣ" ಎಂಬ ಗೃಹಭಂಗದ ಅಯ್ಯನವರ ಮೂಲಕ ಭೈರಪ್ಪನವರು ಹೇಳಿದ ಮಾತು ಕಟು ಸತ್ಯ.
ಎಸ್ ಎಲ್ ಭೈರಪ್ಪನವರ ಬಗ್ಗೆ ಮೊದಲು ಕೇಳಿದ್ದು, ನಾನು ಶಹಾಬಾದಿನಲ್ಲಿದ್ದಾಗ. ನಾನಿನ್ನೂ ನನ್ನ ಓದಿನ ಗುಂಗಿನಲ್ಲೇ ಇದ್ದ ಕಾರಣ, ಕಾದಂಬರಿಗಳ ಬಗ್ಗೆ ಗಮನವಿರಲಿಲ್ಲ. ಆದರೆ ಸ್ನೇಹಿತರ ಗುಂಪಿನಲ್ಲಿ ನಡೆಯುತ್ತಿದ್ದ, ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣಾತ್ಮಕ ಚರ್ಚೆಯ ಮೂಲಕ. ಗೃಹಭಂಗದ ಗಂಗಮ್ಮನ ಬೈಗುಳ, "ಅನ್ನೆಲ್ಡಾಳುದ್ದ ಬಾವಿಗೆ ಆರಾಳುದ್ದ ಹಗ್ಗ ಬುಟ್ರೆ ಎಟುಕುತೈತಾ" ಎಂಬ ವಿಷಯದ ಬಗ್ಗೆ ನಡೆದ ಚರ್ಚೆ, ನನ್ನ ಗಮನ ಸೆಳೆದದ್ದು. ಆಗ ಬಂದಿದ್ದೆ ಗೃಹಭಂಗ ಕಾದಂಬರಿಯನ್ನು ಓದಬೇಕೆಂಬುವ ಕುತೂಹಲ.
ಜೀವನದ ಒಂದು ಘಟ್ಟದಲ್ಲಿ, ಗೃಹಭಂಗ ಕಾದಂಬರಿಯನ್ನು, ಗಂಗಮ್ಮನ ಬೈಗುಳದ ವೈಶಿಷ್ಟ್ಯವನ್ನು ಸವಿಯಲು ಆರಂಭ ಮಾಡಿದರೂ, ಮನಸ್ಸಿಗೆ ತಾಕಿದ್ದು ನಂಜಮ್ಮನ ಪಾತ್ರ. ನಂಜಮ್ಮನ ಪಾತ್ರದಲ್ಲಿ ಕಂಡದ್ದು ನನ್ನಮ್ಮನನ್ನು.
ಈ ವಿಷಯವನ್ನು ನಾನು ಭೈರಪ್ಪನವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೇಳಿಕೊಂಡೆ. ಅವರನ್ನು ಭೇಟಿ ಮಾಡಿದ್ದೇ ಒಂದು ವಿಶೇಷ ಅನುಭವ. ನನ್ನ ನಾದಿನಿ, ಜಯಶ್ರೀ ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಶನ್ ನಲ್ಲಿ ಓದುತ್ತಿದ್ದ ಸಮಯ. ನಾನು ನನ್ನ ಹೆಂಡತಿ ವಿಜಯ ಮೈಸೂರಿಗೆ ಹೋಗಿದ್ದಾಗ ಜಯಶ್ರೀಯನ್ನು ನೋಡಲು ಹೋಗಿ, ಅದೇ ಸಮಯದಲ್ಲಿ ನಾವು ಭೈರಪ್ಪನವರನ್ನು ಅವರ ಕೊಠಡಿಯಲ್ಲೇ ಭೇಟಿ ಮಾಡಿದ್ದು.
ಇಂದು ಜಯಶ್ರೀ, ಭೈರಪ್ಪನವರ ಬಗ್ಗೆ ತನ್ನ ಅನಿಸಿಕೆಗಳನ್ನು ನನ್ನೊಡನೆ ಹಂಚಿಕೊಂಡಾಗ, ಅದರಲ್ಲಿ ನಮ್ಮ ಭೈರಪ್ಪನವರ ಭೇಟಿಯ ಸಂದರ್ಭವನ್ನು ಬರೆದಿದ್ದಳು. ಮಧುರ ನೆನಪುಗಳು.
ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಅಂತಹ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಭೈರಪ್ಪನವರಿಗೆ ಸಂದಿದ್ದವು.
ನನಗೊಂದು ಪ್ರಶ್ನಾರ್ಥಕ ಕೊರಗು.. ಬೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಯಾಕೆ ಬರಲಿಲ್ಲ? ಎಂದು. ಜೊತೆ ಜೊತೆಗೆ ಒಂದು ಸಮಾಧಾನ, ಅವರು ಗಳಿಸಿದ ಲಕ್ಷಾಂತರ ಓದುಗ ವೃಂದ ಎಂಬ ಪ್ರಶಸ್ತಿ.
ಭೈರಪ್ಪನವರು ಭೌತಿಕವಾಗಿ ನಮ್ಮೊಂದಿಗೆ ಇರದಿದ್ದರೂ, ಅವರ ಕಾದಂಬರಿಗಳ ಮೂಲಕ ಬಹುಕಾಲ ಜೀವಂತವಾಗಿರುತ್ತಾರೆ ಎಂಬ ಮಾತು ಕ್ಲೀಷೆ ಎನಿಸಿದರೂ... ಸತ್ಯವೇ ಅಲ್ಲವೇ?
ಭೈರಪ್ಪನವರಿಗೆ ಇದೋ... ನನ್ನ ಅಂತಿಮ ನಮನ...
ಡಿ ಸಿ ರಂಗನಾಥ ರಾವ್
9741128413




ಅವರ ಅಭಿಮಾನಿಗಳಲ್ಲದವರೂ ಮೆಚ್ಚಿಕೊಳ್ಳುವಂತೆ ಬದುಕಿ ತುಂಬು ಜೀವನ ನಡೆಸಿದ ಕನ್ನಡ ಸಾರಸ್ವತ ಲೋಕದ ದೃವ ತಾರೆ .ನನಗೂ ಸಹ ಅವರ ಸಾಹಿತ್ಯದ ಹುಚ್ಚು. ಇತ್ತೀಚೆಗೆ ಸಾಕ್ಷಿ ಮತ್ತೆ ಓದಿದೆ ..ನಿಮ್ಮ.ಸಾಂದರ್ಭಿಕ ಲೇಖನ ಮನಸ್ಸನ್ನು ಸಾಂತ್ವನಗೊಳಿಸಿತು .
ReplyDeleteಕನ್ನಡ ಸಾಹಿತ್ಯ ಲೋಕದ ಧೀಮಂತ ಡಾ. ಎಸ್ಎಲ್ ಬೈರಪ್ಪ ಇಹ ಲೋಕದಿಂದ ಮರೆಯಾದರೂ ಅವರ ಕೃತಿಗಳಿಂದ ಎಂದೆಂದೂ ಅಮರ... ಬಹುಶಃ ಜ್ಞಾನ ಪೀಠ ಪ್ರಶಸ್ತಿ ಸಲ್ಲಬಹುದಾಗಿದ್ದ ಶ್ರೇಷ್ಠ ಕೃತಿ ಗಳಿಂದ ಕನ್ನಡ ನಾಡಿಗೆ, ಭಾಷೆಗೆ ಹೆಮ್ಮೆ ಹಾಗೂ ಗೌರವ ತಂದಿದ್ದಾರೆ 13ಕ್ಕೂ ಹೆಚ್ಚಿನ ಭಾಷೆಗಳಿಗೆ ಅವರ ಕಾದಂಬರಿಗಳು ತರ್ಜುಮೆ ಗೊಂಡಿರುವುದು ಸಾಧನೆಯೇ ಸರಿ... ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾಥಿಸುತ್ತ... ಸಂರ್ಬೋಚಿತ ಲೇಖನಕ್ಕೆ ಧನ್ಯವಾದಗಳು
ReplyDeleteಬಾಬು
ಎಷ್ಟು ಬರೆದರೂ ಇಷ್ಟು ಸಾಕು ಅನ್ನಿಸದ ಶಕ್ತಿಯ ವ್ಯಕ್ತಿ ಯ ಬಗ್ಗೆ ನೀವು ಸರಳ ಹಾಗೂ ಹೃದಯಕ್ಕೆ ತಲುಪುವ ಹಾಗೆ ಒಕ್ಕಣಿಸಿದ್ದೀರಿ. ಸಾವು ಸಹಜವಾದದ್ದೇ ಆದರೂ ಸಹನೀಯವಾಗುತ್ತಿಲ್ಲ.
ReplyDelete೯೪ ವರ್ಷಗಳ ತುಂಬು ಜೀವನ ನಡೆಸಿ ಮರೆಯಾದ ಶ್ರೀಯುತ ಭೈರಪ್ಪನವರಿಗೆ ಅಶ್ರುತರ್ಪಣ.
ReplyDeleteಅವರ ಕೃತಿಗಳು, ಸಮಾಜಮುಖಿ ಕಾರ್ಯಗಳು ಸದಾ ನೆನಪಿನಲ್ಲಿರುತ್ತದೆ.
ಲಾಬಿ ಮಾಡಿದ್ದರೆ ಜ್ಞಾನಪೀಠ ಸಿಗುತ್ತಿತ್ತೇನೋ? ಆದರೆ ಅವರು ಆ ರೀತಿಯ ವ್ಯಕ್ತಿಯಲ್ಲವೆಂದು ಓದಿದ್ದೇನೆ.
ಪದ್ಮಭೂಷಣ, ಸರಸ್ವತಿ ಸಮ್ಮಾನ ಪ್ರಶಸ್ತಿ ಏನು ಕಡಿಮೆಯೇ?
ಹಿರಿಯ ಜೀವ ಮರೆಯಾಯಿತು...ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ನಾವು ಪ್ರಾರ್ಥಿಸಬಹುದು ಅಷ್ಟೇ.
ಮುಗಿಸುವ ಮುನ್ನ
ತಮ್ಮ ೯೦ ರ ವಯಸ್ಸಿನಲ್ಲಿ ಸಂತೇಶಿವಿರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಕೆರೆಗಳಿಗೆ ಹಣ ಬಿಡುಗಡೆ ಮಾಡಿಸಿ, ಬಹಳಷ್ಟು ಓಡಾಡಿ ನೀರಿನ ವ್ಯವಸ್ಥೆ ಮಾಡಿಸಿದ ಭಗೀರಥ ಈ ಶ್ರೀಯುತರು.
ಗುರುಪ್ರಸನ್ನ
ಚಿಂತಾಮಣಿ
ಸಂದರ್ಭೋಚಿತ ಲೇಖನ ..🤘👌ಶ್ರೀಯುತ ರನ್ನ ಭೇಟಿ ಮಾಡುವ ಸದವಕಾಶ ದೊರೆತದ್ದು ನಿಮ್ಮ ಭಾಗ್ಯ..ಪರ್ವದ ವಿದುರ ಪಾತ್ರ ನನ್ನನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ .
ReplyDelete