ಅಧಿಕ ಮಾಸ - Leap year

 

ತಾರೀಕು 29 ಫೆಬ್ರವರಿ ಅಂತ ದೊಡ್ಡದಾಗಿ  ಬರೆದು ,  ಬೇರೆ ದಿನಾನೇ ಈ ಲೇಖನ ಬರ್ದಿದ್ದಂಗೆ ಇದೆಯಲ್ಲ ಅನ್ಸಿದ್ರೆ ನಿಮ್ಮ ಅನಿಸಿಕೆ ಸರಿಯಾಗಿದೆ.... ಹಾಗೇ.... "29 ಫೆಬ್ರವರಿ"  ಈ ಲೇಖನದ ವಿಷಯ ಅನ್ಸಿದ್ರೆ ಅದೂ ಸರಿಯಾಗಿದೆ.... "ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ " ಎಂಬಂತೆ.

29, ಫೆಬ್ರವರಿ ಒಂದು ವಿಶೇಷ ದಿನ... ಪ್ರತಿ ವರ್ಷ ಸಿಗುವುದಲ್ಲ... ಸಿಗುವುದೇ ಅಪರೂಪಕ್ಕೆ ನಾಲ್ಕು ವರ್ಷಕ್ಕೆ ಒಂದು ಸಲ. ಆ  ವರ್ಷದ 366 ನೇ  ದಿನ.  ಆ ವರ್ಷವನ್ನು ಲೀಪ್ ಇಯರ್ (ಅಧಿಕ ವರ್ಷ) ಎಂದು ಕರೆಯುತ್ತಾರೆ....ಎಂದು ನಾನು ಕಲಿತದ್ದು ಈ ಕೆಳಗಿನ ಸಾಲುಗಳಿಂದ...

30 days in september, april, June and November, all the rest are 31, except february 28 and 29 in a leap year.

ಬಹುಶಃ ನಾನು ಐದನೆಯ ತರಗತಿಯಲ್ಲಿದ್ದಾಗ ನಮ್ಮ ಶಂಕರನಾರಾಯಣರಾವ್ ಮೇಷ್ಟ್ರು.. ಹೇಳಿ ಕೊಟ್ಟದ್ದು....  ಮುಷ್ಟಿಯನ್ನು ಉಪಯೋಗಿಸಿ 30 ಹಾಗೂ 31 ದಿನ ಇರುವ ತಿಂಗಳುಗಳನ್ನು ಗುರುತಿಸುವ ಬಗೆ. ಹಾಗೇ.... ಲೀಪ್ ಇಯರ್ ಗುರುತಿಸಲು.. ಆ ವರ್ಷದ ಸಂಖ್ಯೆಯನ್ನು ನಾಲ್ಕರಿಂದ ಭಾಗಿಸಿ... ಶೇಷ ಏನೂ ಉಳಿಯದಿದ್ದರೆ ಅದು ಲೀಪ್ ಇಯರ್ ಎಂದು... ಮುಂದೆ ಹೈಸ್ಕೂಲ್ನಲ್ಲಿ ಕಲಿತದ್ದು... ಇಸವಿ...1700, 1800 ಹೀಗೆ ಬಂದಾಗ ಅದು 400 ರಿಂದ ಸಂಪೂರ್ಣ ಭಾಗವಾಗಬೇಕೆಂದು.

ನಾನು ಇಂಗ್ಲಿಷ್ ಕಲಿಯಲು ಶುರು ಮಾಡಿದ್ದು ಐದನೇ ತರಗತಿಯಿಂದ... ಏಳಕ್ಕೆ ಬರುವಷ್ಟರಲ್ಲಿ ಪದಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಚೈತನ್ಯ ಬಂದಿತ್ತು ಹಾಗೇ ಡಿಕ್ಷ್ ನರಿ ಉಪಯೋಗಿಸುವ ಕಲೆಯೂ ತಿಳಿದಿತ್ತು... ಉಪಯೋಗಿಸುತ್ತಿದ್ದದ್ದು DK  ಭಾರದ್ವಾಜ್   ಡಿಕ್ಷನರಿ.  ಪದಗಳ ಅರ್ಥವನ್ನೆಲ್ಲ ನೋಡುವ ಕುತೂಹಲ. leap ಪದದ ಅರ್ಥ...ಹಾರು, ನೆಗೆ, ಎಗರು ... ಹೀಗೆ.  ಕಪ್ಪೆಯ ಹಾರುವಿಕೆ ವಿಶೇಷ... ಹಾಗಾಗಿ ಅದನ್ನು leap frog ಎಂದು ಕರೆದು.... ಮಕ್ಕಳಿಗಾಗಿ ಆಟವನ್ನೇ ರಚಿಸಿದ್ದಾರೆ .. ದೈಹಿಕವಾಗಿ ಹಾಗೂ ಫೋನಿನ ಪರದೆಯ ಮೇಲೆ.

ಡಿಕ್ಷನರಿಯ ಒಂದು ಪದ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದು... ತಲೆಯಲ್ಲಿ ಅಚ್ಚಳಿಯದೆ ಇಂದಿಗೂ ಉಳಿದಿರುವುದು... ಹೇಳಲು ಸ್ವಲ್ಪ ಸಂಕೋಚ... ಆದರೆ  ಅದು ಇಂಗ್ಲೀಷ್ ಪದ ಅದರ ಅರ್ಥ... ಡಿಕ್ಷನರಿಯಲ್ಲಿದ್ದಂತೆ ಯಥಾವತ್ ಬರೆಯುವೆ.... ಅಧಿಕ ಪ್ರಸಂಗತನ ಅನ್ನಿಸಿದರೆ ಕ್ಷಮಿಸಿ..

Buttocks.. ಕುಂಡೆ, ಅಂಡು, ತಿಕ, ಪುಕಳಿ, ಪೃಷ್ಟ, ನಿತಂಬ ಮತ್ತು ಪಿರ್ರೆ....

ಮತ್ತೆ ವಿಷಯಕ್ಕೆ ಬರ್ತೀನಿ... ಚಾಂದ್ರಮಾನ ಪಂಚಾಂಗದಲ್ಲೂ ಅಧಿಕಮಾಸದ ಪ್ರಯೋಗವಿದೆ... ಇದು 33 ತಿಂಗಳಿಗೊಮ್ಮೆ ಬರುತ್ತದೆ.... ಇದೂ ಸಹ ಲೀಪಿಯರ್ ನಂತೆ  ದಿನದ ಹೊಂದಾಣಿಕೆಯ ಲೆಕ್ಕಾಚಾರ.

ಅಧಿಕಮಾಸದಲ್ಲಿ ಯಾವ ಹೊಸ ಕೆಲಸವನ್ನು ಶುರು ಮಾಡದಿದ್ದರೂ... ಈ ತಿಂಗಳಲ್ಲಿ ಮಾಡುವ ದಾನ ಮಾತ್ರ... ಅದರಲ್ಲೂ ದೀಪದಾನ .... 33 ಪಟ್ಟು ಫಲ ನೀಡುತ್ತದೆ ಎಂಬ ನಂಬಿಕೆ... ಎಲ್ಲಾ 33ರ ಲೆಕ್ಕಾಚಾರ....

ಬಡತನ ಇದ್ದಾಗ... ಅಧಿಕಮಾಸದಲ್ಲಿ ಬರುವ ಶ್ರಾದ್ಧಕರ್ಮಗಳನ್ನು ಮಾಡಲೇಬೇಕೆಂದಾಗ... ಪಡುವ ಕಷ್ಟವನ್ನು.. (ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ) ಎಂದು ಹೇಳುವ ಪರಿಯುಂಟು. ಹಾಗೆಯೇ  "ಅಧಿಕಸ್ಯ ಅಧಿಕಂ ಫಲಂ" ಹೆಚ್ಚು ದಾನ ಮಾಡಿದವರಿಗೆ ಹೆಚ್ಚು ಫಲ.

ನನಗೊಂದು ತೀರದ ಅನುಮಾನ.... ಲೀಪ್ ಅಂದ್ರೆ ಹಾರು... ಆಡು ಮಾತಿನಲ್ಲಿ ಹಾರಿಸು ಅಂದಾಗ... ಅದನ್ನು ತಪ್ಪಿಸು... ಅಂತ... ಆದರೆ ಇಲ್ಲಿ ಒಂದು ದಿನವನ್ನ ಸೇರಿಸ್ತಾ ಇದ್ದೀವಿ... ಈ ಸೇರಿಸು... ಹಾರಿಸು...ಎರಡೂ ಹೊಂದಾಣಿಕೆಯಾಗಲ್ಲ.

ಪಾಪ, ಫೆಬ್ರವರಿ 29 ರಂದು ಹುಟ್ಟಿದವರು... ಹುಟ್ಟಿದ ಹಬ್ಬ ಆಚರಣೆ ಮಾಡಲು ನಾಲ್ಕು ವರ್ಷ ಕಾಯಬೇಕು.... ಹಾಗೆ.. ಒಬ್ಬ ತಾತನ ಹುಟ್ಟಿದ ಹಬ್ಬ... ಉತ್ಸಾಹಿ ತರುಣ ಎನ್ನಲೇ.... ಎಷ್ಟನೇ ಹುಟ್ಟಿದ ಹಬ್ಬ ಅಂತ ಕೇಳಿದ್ರೆ 20 ಅಂದರಂತೆ.... ಸುಳ್ಳು ಹೇಳ್ತೀರಾ ಅಂದಾಗ ಇಲ್ಲಯ್ಯ ನಾನೇನು ಮಾಡಲಿ ವಯಸ್ಸು ಎಂಭತ್ತಾದರೂ ಹುಟ್ಟಿದ ಹಬ್ಬ ಇಪ್ಪತ್ತೇ.. ಅದು ಫೆಬ್ರವರಿ 29ರ ಪ್ರಭಾವ.

Microsoft 365 software 366 ನೇ ದಿನ ಕೆಲಸ ಮಾಡಲ್ವಾ?... ಇಂಥಾ ಅನುಮಾನ ನನಗೇ ಏಕೋ....

ಈ ವರ್ಷ ಒಂದು ದಿವಸ ಜಾಸ್ತಿ ಸಿಕ್ತು ಅಂತ ಸಂತೋಷ ಕೆಲವರದು,  ಆದರೆ.... ಇನ್ ಕೆಲವರಿಗೆ ಅಯ್ಯೋ ಒಂದಿನದ ಕೆಲಸಕ್ಕೆ ಜಾಸ್ತಿ ಸಂಬಳ ಸಿಗಲ್ವೇ ಅನ್ನೋ ಬೇಜಾರು...

leap year... ನನ್ನ ಜೀವನದಲ್ಲಿ ಒಳ್ಳೆಯ ಘಟ್ಟಗಳನ್ನು ಕೊಟ್ಟಿದೆ. ನಾನ್ ಹುಟ್ಟಿದ್ದೇ leap year...1948, ಜೀವನದ ಮೊದಲ ತಿರುವು.. ನನ್ನೂರು ದೊಡ್ಡ ಜಾಲವನ್ನು  ಬಿಟ್ಟು ಬೆಂಗಳೂರಿಗೆ ಬಂದದ್ದು leap year...1960. ವಿದ್ಯಾಭ್ಯಾಸದ ಕಾಲಘಟ್ಟದ ಬಹು ಮುಖ್ಯ ತಿರುವು PUC ಮುಗಿದದ್ದು 1964..ಅದೂ leap year... ಇನ್ನು ಜೀವನದ ಅತಿ ದೊಡ್ಡ ತಿರುವು... ಫ್ಯಾಕ್ಟರಿ ಶುರು ಮಾಡಿದ್ದು 1976 ಅದು leap year...ಹೀಗೆ. ಮುಂದೆ ಏನು ಕಾದಿದೆಯೋ... ಆ ದೇವರೇ ಬಲ್ಲ... ಅವನಿಚ್ಛೆ.

ಗಣಿತದ ಅಭಿಮಾನಿಯಾಗಿ ನೋಡಿದಾಗ 29 ಒಂದು ಅವಿಭಾಜ್ಯ ಸಂಖ್ಯೆ (prime number) ಅದನ್ನು ಒಂದರಿಂದ ಅಥವಾ ತನ್ನಿಂದ ಬಿಟ್ಟರೆ... ಬೇರಾವ ಸಂಖ್ಯೆಯಿಂದಲೂ ಶೇಷ ಉಳಿಯದೆ ಭಾಗಿಸಲಾಗದು.

ಇನ್ನು ಮೊನ್ನೆ 29ರಂದು ನಾವು ಒಂದರಿಂದ ಒಂದಕ್ಕೆ ಹಾರಿಕೊಂಡು ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಯಿತು... ಒಂದು ಮದುವೆ... ಇನ್ನೆರಡು ಮಕ್ಕಳ ಕಾರ್ಯಕ್ರಮ.

ವಾರಿಗೆಯಲ್ಲಿ ನನ್ನ ಸೋದರ ಸೊಸೆ ಸ್ನೇಹ ಹಾಗೂ ಮಂಜುನಾಥ್ ಅವರ ಮಗ ಅಭಿನವ ಶಂಕರನ ಚೌಲ (ಹುಟ್ಟುಕೂದಲು ತೆಗೆಯುವ ಕಾರ್ಯಕ್ರಮ)... ಮಗು ಚಿಕ್ಕದು, ಅಪ್ಪನ ತೊಡೆಯ ಮೇಲೆ ಕೂತು ತಯಾರಾಯ್ತು... ಕೂದಲು ತೆಗೆಯುವಾಗ ಮಗು ತುಂಬಾ ಕಡಿಮೆ ಗಲಾಟೆ ಮಾಡಿದ್ದು.. ವಿಶೇಷ... ಆದರೂ ಮಗು ಅತ್ತಾಗ.. ಅದರ ಅಮ್ಮನ ಮುಖದಲ್ಲಿದ್ದ ಆತಂಕವನ್ನು ನೋಡಿಯೇ ತಿಳಿಯಬೇಕು...( ಮತ್ತೆ ಸಿಕ್ಕಾಗ ಕೇಳಿ ತಿಳಿಯಬಹುದು)



ಇನ್ನೊಂದು ನನ್ನ ಅಕ್ಕನ ಮರಿ ಮಗನ ಉಪನಯನ ಕಾರ್ಯಕ್ರಮ.... ಅಲ್ಲಿಯೂ ಚೌಲದ ಶಾಸ್ತ್ರವೇ... ವ್ಯತ್ಯಾಸವೆಂದರೆ ಅವನು ಉತ್ಸಾಹ ಹಾಗೂ ಖುಷಿಯಿಂದ ಇದ್ದ. ಅವನಿಗೆ ಉಟ್ಟ ಬಟ್ಟೆಯಲ್ಲಿ ಸ್ನಾನ  ಮಾಡಿಸಿ.... ಬಟ್ಟೆ ಒದ್ದೆಯಾಗಿದ್ದನ್ನು ನೋಡಿ ಅವನ ತಮ್ಮ... ಚಡ್ಡಿ ಒದ್ದೆ..... ಚಡ್ಡೀ ಒದ್ದೆ ..ಅಂತ ಹಾಡಿ ಕುಣಿದ ದೃಶ್ಯ ಸುಂದರವಾಗಿತ್ತು.

ನಮಗೂ ಖುಷಿ ಅಧಿಕವಾಗಿತ್ತು.... ಬಹಳಷ್ಟು ಜನಗಳನ್ನು ಬಹಳ ದಿನಗಳ ನಂತರ ಭೇಟಿ ಮಾಡಿ , ಹರಟೆ ಹೊಡೆದು ..ವಿಧ ವಿಧವಾದ  ಊಟ ತಿಂಡಿಗಳನ್ನು ತಿಂದೂ...ತಿಂದೂ....

ಈ ಅಧಿಕ ವರ್ಷ ಎಲ್ಲರ ಕಷ್ಟಗಳು ಹಾರಿ ಹೋಗಿ... ಸುಖ ಸಂತೋಷದಿಂದ ಹಾರಿ ಹಾರಿ ಕುಣಿಯುವ ಅವಕಾಶ ಆ ದೇವರು ಅಧಿಕವಾಗಿ ಕರುಣಿಸಲಿ ಎಂದು ಆಶಿಸುತ್ತಾ.... ಅಧಿಕ ನಮಸ್ಕಾರಗಳು.


    

Comments

  1. ಶುಭೋದಯ

    ಒಂದು ವಿಷಯದ ಬಗ್ಗೆ ಮೆಲುಕು ಹಾಕುವಾಗ ಇಷ್ಟೊಂದು ವಿಷಯಗಳು ದೊರೆಯುವುದು ನಿಮಗೆ ದೇವರು ಕೊಟ್ಟ ವರವೇ ಸರಿ.

    ಇನ್ನು ಮಾಜಿ ಪ್ರಧಾನಿ ದಿ: ಮೊರಾರ್ಜಿ ದೇಸಾಯಿಯವರು ಜನಿಸಿದ್ದು ಫೆಬ್ರವರಿ ೨೯ ರಂದು. ಮೈಕ್ರೋಸಾಫ್ಟ್ ೩೬೫ ನ ಉಲ್ಲೇಖ ಸೊಗಸಾಗಿದೆ.

    ನಿಮ್ಮ‌ ಜೀವನದ ಪ್ರಮುಖ ಘಟ್ಟಗಳು ಲೀಪಿಯರ್ ನಲ್ಲೇ ನಡೆದಿರುವುದು ಸ್ವಾರಸ್ಯಕರ. ಹೀಗೆಯೇ ನೀವು ಇನ್ನು ಹಲವಾರು ವರ್ಷಗಳ ಕಾಲ ಸುಖಸಂತೋಷದಿಂದ ಬಾಳುವಂತೆ ಆ ಶಿವನು ಅನುಗ್ರಹಿಸಲಿ.

    ಫೆಬ್ರವರಿ ೨೯ರಂದು ಹಾರಿಕೊಂಡೇ ಮೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಹೇಳಿರುವುದು ತಮಾಷೆಯಾಗಿದೆ.

    ಮುಗಿಸುವ ಮುನ್ನ:

    ಲೇಖನಕ್ಕೆ ಯಾವುದೇ ಕೋನದಲ್ಲೂ ಸಂಬಂಧಪಡದ ಆಂಗ್ಲಪದದ ಅರ್ಥದ ಬಳಕೆಯಾಗಿರುವುದು ಹಲವು ಓದುಗರ ಮುಜುಗರಕ್ಕೆ ಕಾರಣವಾಗಿರಲಿಕ್ಕು ಸಾಕು..... ಇದನ್ನು ಹಾರಿಸಬಿಡಬಹುದಿತ್ತೇನೋ?

    ವಂದನಾಪೂರ್ವಕವಾಗಿ,

    ಗುರುಪ್ರಸನ್ನ
    ಚಿಂತಾಮಣಿ

    ReplyDelete
  2. ನಿಮ್ಮ ವಸ್ತುನಿಷ್ಟ ವಿಮರ್ಶೆಗೆ ನನ್ನ ನಮನಗಳು....

    ReplyDelete
  3. ಅಧಿಕ ಮಾಸ-Leap year FEB 29 ಶೀರ್ಷಿಕೆ ಉತ್ತಮವಾಗಿ ಮೂಡಿ ಬಂದಿದೆ.ಧನ್ಯವಾದಗಳು.FEB29 ಪ್ರತಿ 4 ವರ್ಷಕೊಮ್ಮೆ ಬರುವುದು ಹಾಗೂ ಆ ದಿನ ಹುಟ್ಟಿದವರಿಗೆ 4 ವರ್ಷಕೊಮ್ಮೆ ಹುಟ್ಟಿದ ಹಬ್ಬ ಆಚರಣೆ ಅನಿವಾರ್ಯ.ಅಧಿಕ ಮಾಸ -Leap year ತಮ್ಮ ಜೀವನದಲ್ಲಿ ಉತ್ತಮ ತಿರುವುಗಳನ್ನು ನೀಡಿರುವುದು ಸಂತೋಷದ ಸಂಗತಿ.ಅಧಿಕ ಮಾಸ -Leapyear ತಮ್ಮ ಜೀವನದಲ್ಲಿ ಇನ್ನೂ ಉತ್ತಮ ಹಾಗೂ ಒಳ್ಳೆಯ ತಿರುವುಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ ತಮಗೆ ಮತ್ತೊಮ್ಮೆ ಧನ್ಯವಾದಗಳು. ದೇವೇಂದ್ರಪ್ಪ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು