ನೀರು - ನಾಗರೀಕತೆಯ ಬೇರು


 ಕಾಮದಹನವಾಯಿತು.... ರಂಗಿನಾಟ ವಾಯಿತು... ಮೈ ಮೇಲಿನ ಹಾಗೂ ಬಟ್ಟೆಗಳ ರಂಗು ತೊಳೆಯಲು ಯಥೇಚ್ಛ ನೀರು ಬೇಕಾಯಿತು... ಕಾಕತಾಳಿಯವಾಗಿ ಈ ಸಲದ ಹಬ್ಬದ ಸಮಯಕ್ಕೆ ಎಲ್ಲೆಡೆ ನೀರಿಗೆ ಹಾಹಾಕಾರ.  ಆದರೆ ಯಾವುದೂ ನಿಲ್ಲದು... ಸ್ವಲ್ಪಮಟ್ಟಿಗಾದರೂ ಹಬ್ಬ ಹರಿದಿನಗಳನ್ನು ಆಚರಿಸಲೇಬೇಕು.

ನಮ್ಮ ಪರಿಸ್ಥಿತಿ ಮಳೆಗಾಗಿ ಕಾಯುವ ಜಾತಕ ಪಕ್ಷಿಗಳಂತೆ ಆಗಿದೆ. ಇನ್ನೂ ಕೆಲಕಾಲ ಮಳೆ ಬರದಿದ್ದರೆ.. ನೀರಿಗೆ ತತ್ವಾರವಾಗಬಹುದು. ಚಿಕ್ಕಂದಿನಲ್ಲಿಯೂ ಇಂಥ ಪರಿಸ್ಥಿತಿಯನ್ನು ದಾಟಿದ ನೆನಪಿದೆ. ಆಗ ಊರಿನಲ್ಲಿ ಒಬ್ಬ ವ್ಯಕ್ತಿ ತಲೆಯ ಮೇಲೆ ಹೂ ಮತ್ತು ಅಡಕೆ/ ತೆಂಗಿನ ಹೊಂಬಾಳೆಯಿಂದ ಅಲಂಕರಿಸಿದ ಕಳಶವನ್ನು ಹೊತ್ತು ಮನೆಮನೆಗೂ ಹೋಗುವುದು... ನಾವು ಮಕ್ಕಳೆಲ್ಲ ಒಕ್ಕೊರಲಿನಿಂದ " ಹುಯ್ಯೋ ಹುಯ್ಯೋ..ಮಳೆರಾಯ ಹೂವಿನ ತೋಟಕೆ ನೀರಿಲ್ಲ... ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ....." ಹೇಳುತ್ತಾ ಹೋದಾಗ ಪ್ರತಿ ಮನೆಯ ಮುಂದೂ ಕಳಸದ ಮೇಲೆ ...ಇರುವುದರಲ್ಲಿ ಸ್ವಲ್ಪ ....ನೀರು ಹಾಕುವುದು... ವರುಣನನ್ನು ಪ್ರಾರ್ಥಿಸುವ ಬಗೆ.  ತಕ್ಷಣ ಮಳೆ ಸುರಿಯಿತೋ ಇಲ್ಲವೋ ನೆನಪಿಲ್ಲ... ಆದರೆ ಮಳೆಯಂತೂ ಬಂತಲ್ಲ... ನಾವೆಲ್ಲ ಉಳಿದಿದ್ದೇವಲ್ಲ...ಅಂತೆಯೇ ಮಳೆಗಾಗಿ ಪರ್ಜನ್ಯ ಜಪ, ಕಪ್ಪೆಗಳಮದುವೆ..ಹೀಗೆ ವಿವಿಧ ಉಪಾಯಗಳು...ಹೇಗೋ ಮಳೆ ಬಂದರೆ ಸರಿ.

ಒಮ್ಮೆ ಹಿಂದಕ್ಕೆ ನೋಡಿದರೆ... ಮನುಷ್ಯನ ವಸತಿ.... ನಾಗರಿಕತೆ ಪ್ರಾರಂಭವಾದದ್ದು ನೀರಿನ ತಟದಲ್ಲಿ... ನದಿಯ ಪಾತ್ರದಲ್ಲಿ. ಆಗ ಜನವೂ ಕಡಿಮೆ... ನೀರಿನ ಉಪಯೋಗವೂ ಸೀಮಿತವಾಗಿತ್ತು... ಪಾತ್ರೆ ತೊಳೆಯಲು ಬೂದಿ, ಸಾಮಾನ್ಯ ಬಟ್ಟೆಗೆ ಚೌಳುಪ್ಪು, ಮೃದುವಾದ ಬಟ್ಟೆಗೆ ಅಂಟುವಾಳದಕಾಯಿ / ಕುಬಟೆಕಾಯಿಯನ್ನು ಉಪಯೋಗಿಸಿ ಒಗೆಯುತ್ತಿದ್ದದ್ದು... ಎಲ್ಲವೂ ನೈಸರ್ಗಿಕ ವಸ್ತುಗಳು.... ಪರಿಸರದಲ್ಲಿ ಸುಲಭವಾಗಿ ಬೆರೆತು ಸಂಯೋಗ ಗೊಳ್ಳುತ್ತಿದ್ದವು... ಹೊಲಗದ್ದೆಗಳಿಗೆ ಹಾಕುತ್ತಿದ್ದ ಗೊಬ್ಬರವೂ ನೈಸರ್ಗಿಕ ಮೂಲವೇ....  ಬಟ್ಟೆಗಳಿಗೆ ಹಾಕುತ್ತಿದ್ದ ಬಣ್ಣಗಳು ನೈಸರ್ಗಿಕವೇ ...ಕಡೆಗೆ ಗಣೇಶನ ಮಣ್ಣಿನ ವಿಗ್ರಹಕ್ಕೆ ಸಹ ನೈಸರ್ಗಿಕ ಬಣ್ಣ...... ನಾಗರೀಕತೆ ಬೆಳೆದಂತೆ ಪ್ರದರ್ಶನಪ್ರಿಯತೆ ಹೆಚ್ಚಾದಂತೆ... ಎಲ್ಲವೂ ರಸಾಯಿನಿಕ ವಸ್ತುಗಳಾಗಿ ಮಾರ್ಪಟ್ಟಿವೆ.. ಅವು ತಮ್ಮ ಕೆಲಸವನ್ನು ಚೆನ್ನಾಗಿ ಮಾಡಿದರೂ ಇವುಗಳ ಅಡ್ಡ ಪರಿಣಾಮ ಪ್ರಕೃತಿಯ ಮೇಲೆ ಹೆಚ್ಚಿದೆ. ನೀರಿನ ಉಪಯೋಗ ಜಾಸ್ತಿಯಾಗಿದೆ.

ಮೊದಲೆಲ್ಲ ಬಯಲೇ ಪಾಯಿಖಾನೆ/ ಕಕ್ಕಸು ಮನೆ ಆಗಿತ್ತು.... ಕಾಲ ಕಳೆದಂತೆ ಅದು ಮನೆಯಾಚೆಯ ಸುಮಾರು ದೂರದ ಒಂದು ಮೂಲೆಯಲ್ಲಿ ಇರುತ್ತಿತ್ತು... ಹಾಗೇ ಮನೆಯೊಳಗೆ ಬಂತು... ಮತ್ತು ಮುಂದುವರಿದು ನಮ್ಮ ರೂಮಿನೊಳಗೇ ಬಂತು... "ಹತ್ತಿರ ಇದ್ದರೆ ಹಡಕನಾತ" ಎನ್ನುವ ನಾಣ್ಣುಡಿಯಂತೆ... ನಾತ ಜಾಸ್ತಿ ಆಯಿತು.. ಅದನ್ನು ಸ್ವಚ್ಛಗೊಳಿಸಲು ನೀರು ಜೊತೆಗೆ ರಾಸಾಯನಿಕ ವಸ್ತುಗಳು ಜಾಸ್ತಿ ಬೇಕಾಯಿತು.

ಮೊದಲೆಲ್ಲ ಮನೆಯನ್ನು ವಾರಕ್ಕೊಮ್ಮೆ ಸಗಣಿಯಿಂದ ಸಾರಿಸಿ ರಂಗೋಲಿ ಇಟ್ಟು ಅಂದಗೊಳಿಸುತ್ತಿದ್ದರು... ಬೇಕಾದರೆ ಮಾತ್ರ ಅದರ ಮೇಲೆ ನೀರು ಚುಮುಕಿಸುತ್ತಿದ್ದರು... ಎಲ್ಲ ಊರುಗಳು ಕಾಂಕ್ರೀಟಿನ ಕಾಡುಗಳಾಗುತ್ತಿದ್ದು ಅದನ್ನು ಸ್ವಚ್ಛಗೊಳಿಸಲು ನೀರಿನ ಉಪಯೋಗ ಜಾಸ್ತಿ ಆಯ್ತು... ಇನ್ನು ಕಾರು ದ್ವಿಚಕ್ರ ವಾಹನಗಳು ...ಇವುಗಳನ್ನು ತೊಳೆಯಲು ಪೈಪ್ ಮೂಲಕ ನೀರನ್ನು ಬಿಡುವುದು... ಕೆಲವರಂತೂ ನೆಲವನ್ನು ಗುಡಿಸದೆ... ಕಸವನ್ನು ಸಹ ನೀರಿನ ಮೂಲಕವೇ ಗುಡಿಸಿ ನೀರನ್ನು ದುರುಪಯೋಗ ಮಾಡುತ್ತಿದ್ದಾರೆ... 

ಈಗೀಗ ಸಮಾರಂಭಗಳ ಊಟದ ಸಮಯದಲ್ಲಿ...ನೀರನ್ನು plastic ಬಾಟಲ್ ಗಳಲ್ಲಿ ಕೊಡುವ ಪರಿಪಾಠ ಇದೆ...ಕೆಲ ಜನ ನೀರನ್ನು ಪೂರ್ತ ಕುಡಿಯಲ್ಲ....ಹಾಗೇ ಬಿಡುವ ಬದಲು...ಕೈ ತೊಳೆಯಲಾದರೂ ಉಪಯೋಗಿಸ ಬಹುದಲ್ಲಾ.... ನೀರಿನ ಅಭಾವಕ್ಕೆ ಇದೆಲ್ಲಾ ಕಾರಣಗಳು. ನಗರಗಳಲ್ಲಿ ನೀರು ಇಂಗಲು ಜಾಗ ಇಲ್ಲದ ಕಾರಣ ಮಳೆ ನೀರೆಲ್ಲ ವ್ಯರ್ಥವಾಗಿ ಹರಿದು ಹೋಗಿ.... ಅಂತರ್ಜಲ ಮಟ್ಟ ಕುಸಿಯುತ್ತಿದೆ.

ನನ್ನ ಚಿಕ್ಕಂದಿನ ದೊಡ್ಡಜಾಲದ ಜೀವನದಲ್ಲಿ...15 ರಿಂದ 20 ಅಡಿ ಆಳದಲ್ಲಿ ನೀರು ಸುಲಭವಾಗಿ ಸಿಗುತ್ತಿತ್ತು... ಊರಿನಲ್ಲಿ ಎಲ್ಲ ಮನೆಗಳಲ್ಲೂ ಬಾವಿಗಳೇ ಇದ್ದರೂ... ಒಂದು 'ಸೀನೀರಿನ' ಭಾವಿ ಇತ್ತು... ಕುಡಿಯುವ ನೀರಿಗಾಗಿ ನಾವು ಅಲ್ಲಿಂದಲೇ ನೀರು ತರುತ್ತಿದ್ದದ್ದು. 

ಬೇಸಿಗೆಯಲ್ಲಿ ನಮ್ಮ ಬಹು ಸಮಯ ಕಳೆಯುತ್ತಿದ್ದದ್ದು  ಊರ ಮುಂದಿನ ತೋಪಿನಲ್ಲಿ... ಆಟವಾಡುತ್ತಾ... ಅಲ್ಲಿ ಹರಿಯುತ್ತಿದ್ದ ನೀರನ್ನು... ಕೈಯಿಂದ ಎರಡು ಸಲ.. ಮೇಲೆ ತೇಲುವ ಎಲೆಯನ್ನು ಪಕ್ಕಕ್ಕೆ ಸರಿಸಿ ಬೊಗಸೆಯಲ್ಲಿ  ಕುಡಿಯುತ್ತಿದ್ದದ್ದು... ನೀರಿನ ಮಾಲಿನ್ಯ ಎಂದರೆ ಏನು ಎಂದು ತಿಳಿಯದೆ ಇದ್ದ ಕಾಲ... ಎಲ್ಲವೂ ತನ್ನಿಂತಾನೆ  ಸ್ವಚ್ಛ.

ಏತದ ಭಾವಿ, ಮೆಟ್ಟಿಲು ಭಾವಿ, ರಾಟೆಭಾವಿ ಹೀಗೆ ವಿವಿಧ ಭಾವಿಗಳು. ಈಗ ಎಲ್ಲವೂ ಕೊಳವೆಭಾವಿಗಳೇ... ಅದರಲ್ಲೂ ನೀರು ಸಿಗಲು ಸಾವಿರಾರು ಅಡಿಗಳು ಹೋಗಬೇಕಾಗಿದೆ... ಅಲ್ಲೂ ಸಿಗುವುದು ಲವಣಯುಕ್ತ ನೀರು... ಇದು ನಾವು ಪ್ರಕೃತಿಯ ಮೇಲೆ ಮಾಡಿದ ಆಘಾತದ ಪರಿಣಾಮ

ನೀರನ್ನು ಪೋಲು ಮಾಡದಿರುವ ನಿಟ್ಟಿನಲ್ಲಿ ಹಳ್ಳಿಗರು ಅನುಸರಿಸುತ್ತಿದ್ದ "ಕಲಗಚ್ಚು" ಪದ್ಧತಿ... ಅಕ್ಕಿ ಬೇಳೆ ತರಕಾರಿ ಮುಂತಾದ ಅಡಿಗೆ ಸಾಮಾನುಗಳನ್ನು ತೊಳೆಯುತ್ತಿದ್ದ ನೀರು, ಮೊದಲ ಹಂತದಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದ ನೀರು... ಅಳಿದುಳಿದ ಅನ್ನ ಹುಳಿ ಇತ್ಯಾದಿ ಎಲ್ಲವನ್ನೂ ಕಲಗಚ್ಚಿನ ಬಾನೆಗೆ ಹಾಕುತ್ತಿದ್ದದ್ದು... ಅದನ್ನು ದನಗಳು ಸಂತೋಷದಿಂದ ಶಬ್ದ ಮಾಡಿಕೊಂಡು ಹೀರುತ್ತಿದ್ದದ್ದು....( ಶಬ್ದ ಮಾಡಿಕೊಂಡು ಕಾಫಿ ಕುಡಿದವರನ್ನು... ಕಲಗಚ್ಚು ಹೀರುತ್ತಿದ್ದೀಯಾ ಎಂದು ಛೇಡಿಸುವುದಿತ್ತು)

ಬೇಸಿಗೆಯಲ್ಲಿ ಕೆರೆ ಒಣಗಿದಾಗ... ಅಲ್ಲಿಂದ ಗೋಡು ಮಣ್ಣು (ನೀರು ಹರಿಯುವಾಗ ಬಂದು ಸೇರಿದ ಮೇಲ್ಪದರದ ಮಣ್ಣು... ಇದರಲ್ಲಿ ಬೆಳೆಗೆ ಬೇಕಾದ ಪೋಷಕಾಂಶಗಳು ಇರುತ್ತವೆ) ಗಾಡಿಯಲ್ಲಿ ತುಂಬಿ ತಮ್ಮ ಹೊಲಗದ್ದೆಗಳಿಗೆ ಹಾಕುತ್ತಿದ್ದ ರೈತರ ಈ ಕಾಯಕ... (ಈ ಗಾಡಿಗಳಲ್ಲಿ ಸವಾರಿ ಮಾಡಲು ನಮಗೆ ಅನುಮತಿ ಇತ್ತು.... ಗೊಬ್ಬರದ ಗಾಡಿಗಳಲ್ಲಲ್ಲ)  ಕೆರೆಯಲ್ಲಿ ಹೂಳು ತುಂಬುವುದನ್ನು ತಪ್ಪಿಸಿ ನೀರು ನಿಲ್ಲಲು ಜಾಗಮಾಡುವ ಹಾಗೂ ಹೊಲಕ್ಕೆ ಒಳ್ಳೆಯ ಮಣ್ಣನ್ನು ಸೇರಿಸುವ ಎರಡು ಮುಖದ ಅನುಕೂಲ ಇತ್ತು... ಈಗ ಕೆರೆಗಳನ್ನು ಒತ್ತುವರಿ ಮಾಡಿ ಅಲ್ಲಿ ಸೈಟುಗಳನ್ನು ಮಾಡಿ ಮಾರುವ ಧಂಧೆ.... ಕೆರೆಗಳು ಉಳಿಯುವುದೆಲ್ಲಿ.... ಹರಿಯುವ ನೀರಿಗೆ ಜಾಗವಿಲ್ಲದೆ ಮನೆಗಳೊಳಗೆ ಹರಿದು ಬರುತ್ತಿದೆ. 

ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ಕಾಲದಲ್ಲಿ ಶುರುವಾಗಿದ್ದು " ಪಾರ್ಟಿ" ಎಂದು ಕರೆದ ಹಳ್ಳಿಯ ಗುಂಪುಗಾರಿಕೆ... ಬೇಸಿಗೆಯಲ್ಲಿ ನೀರು ಕಡಿಮೆ.. ಹಾಗಾಗಿ ನೀರು ಬಳಸಲು ಪೈಪೋಟಿ.... ಇದು ಎರಡು ಗುಂಪುಗಳ ಮಧ್ಯೆ ಹೊಡೆದಾಟ ಬಡಿದಾಟಕ್ಕೆ ಕಾರಣವಾಗಿ ರಕ್ತಪಾತವಾದದ್ದನ್ನು ನೋಡಿ ಭಯಭೀತನಾಗಿದ್ದೇನೆ. ಇನ್ನು ನೀರಿಗಾಗಿ ಬೀದಿ ನಲ್ಲಿಯ ಬಳಿ ಜಗಳ  ಬೆಂಗಳೂರಿನಲ್ಲಿ ಸಾಮಾನ್ಯ ದೃಶ್ಯವಾಗಿತ್ತು.  ರಾಜ್ಯ ರಾಜ್ಯಗಳ ಮಧ್ಯೆ ನೀರಿಗಾಗಿ ಜಗಳ.... ನ್ಯಾಯಾಲಯಗಳಲ್ಲಿ ಹೋರಾಟ, ರಾಜಕಾರಣಿಗಳ ಪುಂಡಾಟ ಎಲ್ಲವೂ ರಾಜಕೀಯದ ಭಾಗವಾಗಿದೆ.... ಇದು ವಿಪರ್ಯಾಸ.

ಬರಗಾಲದ ಭವಣೆಯನ್ನು ನಾನು ಸ್ವತಃ ಅನುಭವಿಸಿದ್ದು ಶಹಾಬಾದಿನಲ್ಲಿದ್ದಾಗ.... ಮಳೆಯೇ ಇಲ್ಲದೆ.. ಕಾಗಿನಾ ನದಿಯ ನೀರಿನ ಹರಿವು ತುಂಬ ಕಡಿಮೆಯಾಗಿ... ಅದೇ ನಮಗೆ ನೀರಿನ ಮೂಲವಾದ್ದರಿಂದ... ಒಂದಷ್ಟು ಕಷ್ಟ ಅನುಭವಿಸಿದ್ದು... ಇದು ರೈತರು ಅನುಭವಿಸುವ ಕಷ್ಟಕ್ಕೆ ಹೋಲಿಕೆಯೇ ಮಾಡುವಂತಿಲ್ಲ... ಮಳೆ ರೈತರ ಕೆಲಸ ಕಾರ್ಯಗಳಿಗೆ ಮೂಲಸ್ರೋತ.

ಮಳೆ.... ಚಿಕ್ಕಂದಿನ ಆಟಗಳಿಗೆ ಒಂದು ದೊಡ್ಡ ಅವಕಾಶ.... ಮಳೆಯಲ್ಲಿ ನೆನೆಯುವುದು... ನಂತರ ಬೈಸಿಕೊಳ್ಳುವುದೇ ಒಂದು ಸುಖಮಯ ಅನುಭವ.... ಮಳೆಯ ನೀರನ್ನು ಕೈಯಲ್ಲಿ ಹಿಡಿದು.... ಆಟವಾಡುವ  ಸುಖ.... ಮನೆಯ ಮುಂದೆ ಹರಿಯುವ ನೀರಿನಲ್ಲಿ ಕಾಗದದ ದೋಣಿಗಳನ್ನು ಮಾಡಿ ಹರಿಯಬಿಟ್ಟು.... ಸಂಭ್ರಮಿಸುವ ಆ  ಕ್ಷಣಗಳು... ನೀರಗುಳ್ಳೆಗಳು ಓಡುವಾಗ... ಅದರ ಹಿಂದೆ ಓಡುವ... ಕೆರೆಯ ನೀರಿನಲ್ಲಿ ಹೊರಳಾಡುವ... ಬಾವಿಯಲ್ಲಿ ಈಜಾಡುವ .... ಆಲಿಕಲ್ಲು ಮಳೆ ಬಿದ್ದಾಗ ಅದನ್ನು ಆರಿಸಿ ತರುವ ಸಾಹಸ... ಒಂದೊಂದು ಅನುಭವಗಳೂ ಮೆಲುಕು ಹಾಕುವಂತಹವು.   

ಹಾಗೆ ಮೊದಲ ಮಳೆಗಾಗಿ ಕಾದ  ಇಳೆ, ತಂಪು ಮಳೆಯ ಸಿಂಚನದಿಂದ ಹೊರ ಸೂಸುವ  ಒಂದು ಘಮ.... ಮಣ್ಣಿನ ವಾಸನೆ.... ಆಸೆಪಟ್ಟು ಆಸ್ವಾದಿಸುತ್ತಿದ್ದೆ.

ನೀರು...ಜೀವಜಲ...ಗಿಡ, ಮರ, ಪ್ರಾಣಿ ಪಕ್ಷಿಗಳು, ಮನುಜಕುಲ ಎಲ್ಲರಿಗೂ ಅತೀವ ಅವಶ್ಯಕವಾದದ್ದು.  ದೇವರ ಪೂಜೆಯ ಪ್ರತಿ ಹಂತದಲ್ಲಿ, ಸೂರ್ಯನಿಗೆ ಅರ್ಘ್ಯ, ಪಿತೃ ತರ್ಪಣ ಎಲ್ಲಕ್ಕೂ ನೀರು ಆತ್ಯವಶ್ಯಕ.

Water water every where not a drop to drink....  ಇದು ಸಮುದ್ರದ ಮೇಲೆ ತಮ್ಮ ಜೀವನವನ್ನು ಕಳೆಯುವ ನಾವಿಕರ ಮಾತು..

ನೀರಿನಂಥ ಹೊಂದಿಕೊಳ್ಳುವ ಗುಣ.... (ಯಾವ ಪಾತ್ರೆಗೆ ಹಾಕಿದರೂ ಅದರ ಆಕಾರಕ್ಕೆ ಹೊಂದಿಕೊಳ್ಳುವ ಸಹಜ ಗುಣ)  ಇದು ಬೇರೆ ಎಲ್ಲರಲ್ಲೂ ಇರಬೇಕೆಂದು ಬಯಸುವುದು ಮನುಷ್ಯನ ಸಹಜ ಗುಣ.

ಘಟ್ಟದ ನಾಡಿನಲ್ಲಿ ಕುಡಿಯುವ ನೀರಿನ ಜೊತೆಗೆ ಬೆಲ್ಲವನ್ನು ಕೊಡುವ " ಆಸರೆ" ಸಂಪ್ರದಾಯ ವಿಶಿಷ್ಟ. 

water level.... ಇದು ಇಂಜಿನಿಯರಿಂಗ್ ಭಾಷೆಯಲ್ಲಿ ಬಹು ಮುಖ್ಯ ಪದ.... ಎಲ್ಲ ಎತ್ತರದ ಅಳತೆಗಳು... ಸಮತಟ್ಟುವಿನ ಅಧಿಕೃತತೆಗೆ ಉಪಯೋಗಿಸುವ ಮಾನಕ. ಯಾವುದೇ ಪ್ರದೇಶದ ಎತ್ತರವನ್ನು ಹೇಳುವಾಗ....  mean sea level  ಅನ್ನು ಆಧಾರವಾಗಿ ಉಪಯೋಗಿಸುತ್ತೇವೆ.

ನೀರಿಗೆ ಅಗಾಧ ಶಕ್ತಿ ಇದೆ.... ವಿದ್ಯುತ್ ಶಕ್ತಿಯ  ಉತ್ಪಾದನೆ, ಗಟ್ಟಿ ವಸ್ತುಗಳನ್ನು ಕತ್ತರಿಸಲು ಉಪಯೋಗ, ಪ್ರವಾಹ ಬಂದಾಗ ಎಲ್ಲವನ್ನೂ ಕೊಚ್ಚಿ ಹಾಕುವ ಶಕ್ತಿ... ಜೊತೆಗೆ ಮಳೆಯೇ ಇಲ್ಲದಾಗ ಎಲ್ಲ ಜೀವರಾಶಿಗಳನ್ನು ತತ್ತರಿಸುವಂತೆ ಮಾಡುವ ಶಕ್ತಿಯೂ ನೀರಿಗಿದೆ.

ಹಿಂದೆ ಅಗಸ್ತ್ಯಮುನಿ, ರಾಕ್ಷಸರನ್ನು ಕಂಡುಹಿಡಿಯಲು ಸಮುದ್ರವನ್ನೇ ಆಪೋಷನ ತೆಗೆದುಕೊಂಡಂತೆ ನಾವುಗಳು ನಮಗಿರುವ ಎಲ್ಲಾ ನೀರಿನ ಮೂಲಗಳನ್ನು ಬರಿದು ಮಾಡುತ್ತಿದ್ದೇವೆ.... ಹಾಗೇ ಭಗೀರಥ ಗಂಗೆಯನ್ನು ಭೂಮಿಗೆ ತಂದಂತೆ ಆಧುನಿಕ ಭಗೀರಥರು.. ಕಾವೇರಿ ನದಿಯನ್ನು ಅಷ್ಟು ದೂರದಿಂದ ಬೆಂಗಳೂರಿಗೆ ತಂದಿದ್ದಾರೆ ಎನ್ನಲೇ..

ಭಾರತದ ನೀರಿನ ಅಸಮತೋಲನವನ್ನು ಸರಿದೂಗಿಸಲು, ನದಿಗಳ ಜೋಡಣೆಯ ಯೋಜನೆ...1919 ರಲ್ಲಿ ರೂಪುಗೊಂಡರೂ... ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.... ಎನ್ನುವುದು ವಿಷಾದದ ಸಂಗತಿ.

ಗಾಳಿಯಿಂದ ನೀರನ್ನು ಬೇರ್ಪಡಿಸಿ ಪರಿಷ್ಕರಿಸಿ ಉಪಯೋಗಿಸುವ ತಂತ್ರಜ್ಞಾನ ಚಾಲ್ತಿಗೆ ಬಂದಿದ್ದು...ನಮ್ಮ ಮನೆಗಳಿಗೂ ತಲುಪಬೇಕಿದೆ.

ಮಳೆ ನೀರನ್ನು ಸಂಗ್ರಹಿಸುವ ಕೆಲಸ ಎಲ್ಲರೂ ಮಾಡಬೇಕು....ಅದನ್ನು ಇಂಗಲು ಗುಂಡಿಗಳ ಮೂಲಕ ಭೂಮಿಗೆ ಹರಿಯುವ ವ್ಯವಸ್ಥೆ ಯನ್ನು ಎಲ್ಲ ಚರಂಡಿಗಳಲ್ಲಿ ಸರ್ಕಾರ / ನಗರಪಾಲಿಕೆಗಳು ಮಾಡಬೇಕು.  ನಮ್ಮ ಮುಂದಿನ ಪೀಳಿಗೆಗೆ ನೀರು ಉಳಿಸುವುದು ನಮ್ಮ ಕರ್ತವ್ಯ.

ಕೊನೆ ಹನಿ: ವರ್ಷಕ್ಕೊಮ್ಮೆ ನೀರಿನ ದಿನ ಆಚರಿಸೋಣ....ಜೊತೆ ಜೊತೆಗೆ.. ನೀರನ್ನು ಸಾಧ್ಯವಾದಷ್ಟೂ ಕಡಿಮೆ ಉಪಯೋಗಿಸುವ ಅಭ್ಯಾಸವನ್ನು ದಿನ ದಿನವೂ ನಮ್ಮ ಜೀವನ ಶೈಲಿಯಾಗಿ ಮಾರ್ಪಡಿಸಿಳ್ಳೋಣ...

ನಮಸ್ಕಾರ 

DC Ranganatha Rao

9741128413





    

Comments

  1. ಜಯಸಿಂಹ ರಾವ್29 March 2024 at 09:22

    ಸಂದರ್ಭಕ್ಕೆ ಸೂಕ್ತ ಲೇಖನ. ಸಧ್ಯದ ಜಲಕ್ಷಾಮ ಮುಗಿದ ತಕ್ಷಣ ನೀರನ್ನು ಪೋಲು ಮಾಡುವ ಕೆಲಸ ಶುರು .ಜೈ ಜವಾನ್,ಜೈಕಿಸಾನ್, ಜೈವಿಗ್ನಾನ್ ಜೊತೆಗೆ ಜೈ ಜಲಗ್ನಾನ್ ಎನ್ನುವ ಘೋಷಣೆ ಎಲ್ಲ ಹಂತದಲ್ಲೂ ಅನುಸರಿಸಬೇಕಾಗಿದೆ

    ReplyDelete
  2. Sooperb chikkappa

    ReplyDelete
  3. ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ,ಹೀಗಾಗಿದೆ ಈಗಿನ ಪರಿಸ್ಥಿತಿ, ಮನುಷ್ಯರಾಗಿ ನಾವುಗಳು ಈಗಾದರು ಮಳೆಕೊಯ್ಲು ಮಾಡುವುದನ್ನು ಶಿಸ್ತಾಗಿ ಪಾಲಿಸಿದರೆ, ಮುಂದಿನ ಪೀಳಿಗೆಯವರಿಗೆ ಸ್ವಲ್ಪವಾದರು ಉಪಯೋಗವಾಗಬಹುದೇನೋ

    ReplyDelete
  4. ನಾಗರೀಕತೆಯ ಪರಮಾವಧಿ.
    ಒಳ್ಳೆಯ ಲೇಖನ. ಒಳ್ಳೊಳ್ಳೆ ಸಲಹೆ.

    ReplyDelete
  5. World Water Day, wonderful idea

    ReplyDelete
  6. ಬೆಂಗಳೂರು, ಮಂಗಳೂರು,ಮೈಸೂರು ಮುಂತಾದ ದೊಡ್ಡ ನಗರಗಳಲ್ಲಿ ನೀರಿನ ಅನುಕೂಲತೆ ಇದೆ. ಇನ್ನುಳಿದ ಜಿಲ್ಲೆ, ತಾಲ್ಲೂಕುಗಳಲ್ಲಿ ನೀರಿನ ಬವಣೆ ನಿರಂತರ. ಜನರು ಹೊಂದಿಕೊಂಡುಬಿಟ್ಟಿದ್ದಾರೆ.

    ಇನ್ನು ವಿಷಯದ ೩೬೦° ನಿರೂಪಣೆಯಲ್ಲಿ ನೀವು ಸಿದ್ಧಹಸ್ತರು.ಲೇಖನ ಸೊಗಸಾಗಿ ಮೂಡಿಬಂದಿದೆ.

    ಕೊನೆಯದಾಗಿ:

    ಕನ್ನಡ ಮಾಧ್ಯಮದ ಮಕ್ಕಳೇ ಸರಿ...ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ.....ಎನ್ನುತ್ತಾರೆ. ಆದರೆ ಆಂಗ್ಲ ಮಾಧ್ಯಮದ ಮಕ್ಕಳು Rain Rain go away This is mother's washing day ಎನ್ನುತ್ತಾರೆ.

    ಮಳೆಯಿಂದ ಇಳೆ ತೊಯ್ದು ಬೆಳೆ ಚೆನ್ನಾಗಿ ಬರಲೆಂದು ಆಶಿಸೋಣ.

    ವಂದನೆಗಳೊಂದಿಗೆ,

    ಗುರುಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು