ಕಾರ್.ಕಾರ್..ಕಾರ್ ಪುರಾಣ



" ಏ....ತಾತ ಸುಮ್ನೆ ಮನೇಲಿ ಇರೋಕೆ ಆಗಲ್ವಾ.... ಎಲ್ಲಾ ಬೀದಿಗಿಳೀತಾರೆ... ಕಾರ್ ಓಡಿಸಿಕೊಂಡು..." ಇದು ಇತ್ತೀಚೆಗೆ ಒಬ್ಬ angry young man ನನಗೆ ಕೊಟ್ಟ ಉಡುಗೊರೆ.... ಸಿಗ್ನಲ್ ನಲ್ಲಿ ಹಸಿರು ದೀಪ ಬರುವ ಕೆಲ ಕ್ಷಣಗಳ ಮುಂಚೆ ಹಾರ್ನ್ ಮಾಡಿ.. ಅದಕ್ಕೆ ನಾನು ಸ್ಪಂದಿಸದೆ ಇದ್ದಾಗ ದೊರೆತದ್ದು. ಇನ್ನು ಕೆಲವರು ಕೆಲ ಸಮಯದಲ್ಲಿ ನನ್ನ ಮುಖವನ್ನು ತಾತ್ಸಾರದಿಂದ ನೋಡಿರಬಹುದು ಎನ್ನುವ ಅನಿಸಿಕೆ ನನ್ನದು. ಕಾರಣ ನನಗೆ ಗೊತ್ತು... ನಾನು ಈ ದಿನಗಳಲ್ಲಿ ಕಾರ್ ಡ್ರೈವ್ ಮಾಡುವಾಗ ನನ್ನ reflexes ಕಡಿಮೆ ಯಾಗಿರುವುದು.

ಅದು ವಯೋ ಸಹಜವೂ ಆಗಿರಬಹುದು, ಸ್ವಲ್ಪ ನನ್ನ ಮನಸ್ಸಿನ ಪ್ರಭಾವವು ಇರಬಹುದು. ಈಗೀಗ ನನಗೆ ಕಾರನ್ನು ಓಡಿಸುವ ಉತ್ಸಾಹ ಸಾಕಷ್ಟು ಕಡಿಮೆಯಾಗಿದೆ.

ರಸ್ತೆಯಲ್ಲಿ ಓಡಾಡಲು ಅಥವಾ ಕಾರು ನಡೆಸಲು ಜಾಗವೇ ಇಲ್ಲವೇನೋ ಅನ್ನುವಷ್ಟು ವಾಹನಗಳ ದಟ್ಟಣೆ. ಎಲ್ಲರಿಗೂ ಅದೇನೋ ಧಾವಂತ. ತಮ್ಮ ಗುರಿ ಮುಟ್ಟಲು ಎಲ್ಲಿಲ್ಲದ ಅವಸರ. ಹಾಗಾಗಿ ಒಂದು ಸೆಕೆಂಡ್ ಸಹ ಕಾಯುವ ತಾಳ್ಮೆ ಇಲ್ಲ. ಹಾರನ್ ಬಾರಿಸುವುದು, ಸಂದಿಯಲ್ಲಿ ನುಗ್ಗಿ ಮುನ್ನಡೆಯುವುದು, ಯಾವ ಕಡೆಯಿಂದ ಬೇಕಾದರೂ ನಮ್ಮನ್ನು ಹಿಂದಕ್ಕಿ ಓಡುವ ಸಾಹಸಿಗರು, ಅದರಲ್ಲೂ ದ್ವಿಚಕ್ರವಾಹನಗಳ ಯುವ ಜನಾಂಗ ಶರವೇಗದಲ್ಲಿ ಮುನ್ನುಗುವ ಪರಿ ನನಗೆ ಗಾಬರಿ ಹುಟ್ಟಿಸುವಂತದ್ದು. ಎಷ್ಟೋ ಸಲ... ನಾನು ಬೇರೆಯವರಿಗೆ ಡಿಕ್ಕಿ ಹೊಡೆದು ಬಿಟ್ಟೆನೇನೋ ಎಂದು ಭಯ ಪಟ್ಟದ್ದಿದೆ. ಆ ಸನ್ನಿವೇಶಗಳನ್ನು ನಿಭಾಯಿಸಲು ಹೆಣಗಿ ಬೆವರನ್ನು ಹರಿಸಿದ್ದು ಇದೆ.  ಹೊಸ ಜಾಗಕ್ಕೆ ಹೋಗುವಾಗ ಗೂಗಲ್ ಅಮ್ಮನ ಸಹಾಯ ತೆಗೆದುಕೊಂಡು ಕೆಲಸಲ ಬಹಳ ಪಾಡು ಪಟ್ಟದ್ದು ಇದೆ. ಅದನ್ನು ನಂಬಿ ಮುಂದೆ ನುಗ್ಗಿ ಗಲ್ಲಿಯಲ್ಲಿ ಸಿಕ್ಕಿಕೊಂಡು ವಾಪಸ್ ಬರಲು ಹೆಣ ಗಾಡಿದ್ದು ಇದೆ. ಅಲ್ಲಿಂದ ಹೊರ ಬಂದಾಗ ಚಕ್ರವ್ಯೂಹವನ್ನೇ ಭೇದಿಸಿದಷ್ಟು ಸಂತೋಷವಾಗಿದೆ.  ಅದಕ್ಕೆ ನಮ್ಮ ಮಕ್ಕಳು ಒಂದು ಉಪಾಯ ಹೇಳಿದ್ದಾರೆ.. "ಗೂಗಲ್ ಅಮ್ಮನಿಗೆ ಶಾಂತಿ ಮಾಡಿಸಿ... ಎಲ್ಲರಿಗೂ ಊಟಕ್ಕೆ ಹಾಕಿಸಿ ಆಗ ಗೂಗಲ್ ಅಮ್ಮ ನಿಮಗೆ ಸರಿಯಾದ ದಾರಿ ತೋರಿಸುತ್ತಾಳೆ"....

ಅದೊಂದು ಕಾಲವಿತ್ತು.. ರಸ್ತೆಯಲ್ಲಿ ಒಂದು ಎರಡು ಕಾರು ಕಾಣ ಸಿಗುತ್ತಿತ್ತು. ಕಾರ್ ಇದ್ದವರು ಮೊದಲ ಸ್ತರದ ಸಾಹುಕಾರರು. ಸಾಹುಕಾರರು ತಮ್ಮಲ್ಲಿ ಹಣವಿದ್ದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ.  ನಾನು ಹಳ್ಳಿಯಲ್ಲಿದ್ದಾಗ ಕಾರನ್ನು ನೋಡುವುದೇ, ಅದನ್ನು ಕೈಯಲ್ಲಿ ಮುಟ್ಟುವುದೇ ಒಂದು ಸಂಭ್ರಮ.  ನನ್ನ ಸೋದರ ಮಾವಂದಿರ ಹತ್ತಿರ ಒಂದು ಕಾರಿತ್ತು... ಅವರು ನಮ್ಮ ಮನೆಗೆ ಬಂದಾಗ ಅದರಲ್ಲಿ ಕೂಡುವ ಅವಕಾಶ ಸಿಕ್ಕಿದರೆ ಅದೇ ಒಂದು ಸಡಗರ.

ಆಗಿನ ಕಾಲದ morris minor, morris 8, chevrolet, volkswagen rear engine ಇವುಗಳದೇ ಸಾಮ್ರಾಜ್ಯ. ನಮ್ಮಲ್ಲಿ ತಯಾರಾದ ಅಂಬಾಸಿಡರ್               ( ಮೊದಲು ಇದನ್ನು ನಾನು ಓದಿದ್ದು ಅಡ್ಮಿಸ್ನೂರ್ ಎಂದು.. ನನ್ನ ಜ್ಞಾನದ ಸಂಕೇತ) ಸಾಕಷ್ಟು ಪ್ರಚಲಿತವಾಗಿದ್ದದ್ದು. 

ಕಾರು ಬೇರೆಯವರಿಗೆ ಘನತೆಯ ಸಂಕೇತವಾಗಿತ್ತೋ ಇಲ್ಲವೋ ಗೊತ್ತಿಲ್ಲ ಆದರೆ ನನ್ನಲ್ಲಿ ಮಾತ್ರ ಆ ಭಾವನೆ ಇತ್ತು.

ನಾನು ಬೆಳೆದಂತೆ , ಜೀವನದ ಹಂತದಲ್ಲಿ ಕಾರು ಬೇಕು ಅನಿಸಿದ್ದು, ನನ್ನ status ಗಾಗಿ ಎಂದರೆ ತಪ್ಪಲ್ಲ. ನನ್ನ ಮನಸ್ಸಿನ ಆಸೆಯನ್ನು ಮೊದಲು ಹಂಚಿಕೊಂಡಿದ್ದು ನನ್ನ ಹೆಂಡತಿಯೊಂದಿಗೆ, ಅದನ್ನು ವಿರೋಧಿಸಿ ಅಲ್ಲಗೆಳೆದವಳೂ ಅವಳೇ. ಅವಳು ಕೊಟ್ಟ ಕಾರಣ, ನಮಗೆ ಸ್ವಂತ ಮನೆ ಇಲ್ಲ, ಕಾರಿಡಲು ಜಾಗವಿಲ್ಲ, ಹೀಗಿರುವಾಗ ನಮಗೆ ಕಾರಿನ ಅವಶ್ಯಕತೆ ಇದೆಯಾ? ಎಂದು... ಇದು ತಕ್ಕಮಟ್ಟಿಗೆ ಸಕಾರಣವೇ. ಅದಕ್ಕೆ ನನ್ನ ಸಮಾಧಾನ.. ಮನೆ ಮಾಡುವ ಚೈತನ್ಯ ಸದ್ಯಕ್ಕಂತೂ ಇಲ್ಲ, second hand ಕಾರನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡೋಣ, ನಿಲ್ಲಿಸಲು ಮನೆಯ ಮುಂದಿನ ರಸ್ತೆಯೇ ಜಾಗ. ಸಂಪೂರ್ಣ ಒಪ್ಪಿಗೆ ಆಯಿತೋ ಇಲ್ಲವೋ.. ಅಂತೂ ಕಾರು ಹುಡುಕಾಟ ಶುರುವಾಯಿತು. ಕಾರ್ ಇಷ್ಟವಾದರೆ ಅದಕ್ಕೆ ಕೊಡಬೇಕಾದಷ್ಟು ದುಡ್ಡು ಇಲ್ಲ... ನಮ್ಮಲ್ಲಿರುವ ಹಣಕ್ಕೆ ಸಮನಾದ ಕಾರು ನನಗೆ ಇಷ್ಟವಾಗದು... ಇದೇ ಅಲ್ಲವೇ ಜೀವನ?... ಕಡೆಗೂ ಒಂದು 'ಪದ್ಮಿನಿ' ಇಷ್ಟವಾದಳು... ಅದೇ ನನ್ನ ಮೊದಲ ಕಾರ್ premier padmini.

ಸಂಭ್ರಮ ಹೇಳತಿರದು, ಕಾರು ಓಡಿಸಲು ಉತ್ಸಾಹ, ಕೊತ್ತಂಬರಿ ಸೊಪ್ಪು ತರಲು ಕಾರು ತೆಗೆದುಕೊಂಡು ಹೋಗುವ ಉಮೇದು.... ತಿಕ್ಕಲುತನವಾ?

ನಮ್ಮ ಕುಟುಂಬದ ಮೊದಲ ಕಾರ್ ಹಾಗಾಗಿ ಸಾಕಷ್ಟು ಮದುವೆಗಳಲ್ಲಿ ಗಂಡು ಹೆಣ್ಣನ್ನು ಓಡಾಡಿಸಲು ಇದೇ ಕಾರ್( ಅದು ಹಳೆಯ ಕಾರೇ ಆದರೂ.. ನಮಗೆ ಹೊಸ ಅನುಭವ).ಈಗ ನಮ್ಮ ಕುಟುಂಬ ವರ್ಗದಲ್ಲಿ ಕಾರುಗಳ ಸಂಖ್ಯೆ. .ಅಬ್ಬಬ್ಬಾ  ಎನ್ನಿಸುವಷ್ಟು..

ಕೆಲವೊಮ್ಮೆ ಹತ್ತು ಜನ ಆ ಕಾರಿನಲ್ಲಿ ಹೋಗಿದ್ದಿದೆ.. ಈಗ ಅದು ಹೇಗಾಯಿತು ಅನ್ನುವ ಯೋಚನೆ. ಈಗೀಗ ನಾಲ್ಕು ಜನ ಹೋಗುವುದು ಮಾತ್ರ ಸಾಮಾನ್ಯ ಕಾರಿನಲ್ಲಿ ಅನುಕೂಲ, ಅನ್ನುವ ಮನಸ್ಸು. 

ಇಂದಿನ ಯುಗದಲ್ಲಿ ಕಾರುಗಳಿಗೆ ಕೊರತೆ ಇಲ್ಲ. ಸಾಮಾನ್ಯವಾಗಿ ಮಧ್ಯಮವರ್ಗದ ಮನೆಗಳಲ್ಲೂ ಸಹ ಕಾರಿದೆ. ಅಮೆರಿಕ ಅಮೆರಿಕ ಚಿತ್ರದ " ಕಾರ್ ಕಾರ್ ಕಾರ್ ಕಾರ್... ಎಲ್ನೋಡಿ ಕಾರ್" ನಿಜವಾಗಲೂ ಸೂಕ್ತವಾಗಿದೆ.

ಎಲ್ಲೆಲ್ಲೂ ಕಾರಿನ ಸಾಮ್ರಾಜ್ಯ ಮನೆಯ ಮುಂದೆ ನಾವು ನಿಲ್ಲುವಷ್ಟು ಜಾಗವೂ ಇಲ್ಲದಂತೆ ಕಾರುಗಳ ಸಂತೆ.

ಈಗೀಗ ನಾನು ಕಾರು ಹೊರತೆಗೆಯುವ ಮುಂಚೆ ಹೋಗಬೇಕಾದ ಜಾಗ ಅಲ್ಲಿ ಕಾರ್ ನಿಲ್ಲಿಸಲು ಜಾಗ ಇದೆಯೇ, ಹೋಗಬೇಕಾದ ರಸ್ತೆ ನನಗೆ ಪರಿಚಯವಿದೆಯೇ ಎಂದೆಲ್ಲಾ ಯೋಚಿಸುತ್ತೇನೆ. ಇಂತಹ ಸಂದಿಗ್ಧದಲ್ಲಿ  ಹೋಗುವುದನ್ನೇ ಬಿಡಬೇಕಾ ಎಂಬ ಯೋಚನೆ ಸಹ ಬಂದಿದೆ. 

ಕಾರ್ ಮೇಲೆ L board  ಬದಲು E board ಹಾಕುವ ಒಂದು ಸಲಹೆ whatsup ನಲ್ಲಿ ಬಂದಿದೆ... ಇದು ಸರಿಯೇನೋ.. ಹಾಗಾಗಿ ನಾನು ನನ್ನದೇ ಒಂದು ಸಲಹೆಯನ್ನು ನನ್ನ ಕಾರಿನ ಹಿಂದೆ ಬರೆಸಬೇಕೆಂದಿದ್ದೇನೆ (ಅದನ್ನು ನನ್ನ ಕಾರಿನ ಚಿತ್ರದ ಮೇಲೆ ಬರೆದಿದ್ದೇನೆ) ಸರಿಯಿದೆಯೇ?

ಈಗೀಗ ಕಾರೆಬೇಡ - ಅದನ್ನು ಕೊಟ್ಟುಬಿಡುವ ಯೋಚನೆ ಬಂದಿದೆ.. ಈ ಪ್ರಸ್ತಾಪವನ್ನು  ಖಂಡ ತುಂಡವಾಗಿ           ಅಲ್ಲ ಗಳೆದವಳು ನನ್ನ ಹೆಂಡತಿ ಹಾಗೂ ಮಗಳು. ಮನೆಯ ಮುಂದೆ ಒಂದು ಕಾರ್ ಇರಬೇಕು ಎನ್ನುವ ಸಮಜಾಯಿಷಿ.

ಇಷ್ಟೆಲ್ಲಾ ಕಷ್ಟಗಳ ಮಧ್ಯೆ ನಮ್ಮದೇ ಕಾರಿನಲ್ಲಿ ಓಡಾಡುವ ಸೌಕರ್ಯಕ್ಕೆ ಸಾಟಿ ಇಲ್ಲ......

ಓ ಕಾರೇ... ನೀನು ಕೊಡುವ ಸೌಕರ್ಯ ಬೇಕು ಆದರೆ ನಿನ್ನನ್ನು ಓಡಿಸುವ ಕಷ್ಟ ಬೇಡ ಎಂದರೆ ಆದೀತೇ..

ಗುಲಾಬಿಯ ಜೊತೆಗೆ ಮುಳ್ಳೂ ಅನಿವಾರ್ಯ ಎಂಬಲ್ಲಿಗೆ ಈ ಕಾರಿನ ಪುರಾಣ ಸಮಾಪ್ತಿ. 


Comments

  1. ಸೂಪರ್ ಆಗಿದೆ ಚಿಕ್ಕಪ್ಪ ಕಾರಿನ ಪುರಾಣ

    ReplyDelete
  2. ಬೆಂಗಳೂರಿನಲ್ಲಿ ಕಾರು ಓಡಿಸುವವರ ಪಾಡು ಇದೇ ರೀತಿ ಇರುತ್ತೆ sir

    ReplyDelete
  3. Sooper chikkappa

    ReplyDelete
  4. ತುಂಬಾ ಚೆನ್ನಗಿದೆ car ಪುರಾಣ.
    ಈಗ ನಮ್ಮದೇ car ತೆಗೆದುಕೊಂಡು ಹೋಗುವುದು ಕಷ್ಟ ಆದ್ರೆ ola ಮತ್ತು uber ಇರುವುದರಿಂದ ಕಾರ್ ಪ್ರಯಾಣ ತುಂಬಾ ಸುಲಭವಾಗಿದೆ.

    ReplyDelete
  5. Matte driver kooda sikthare..car nimdu..driving avraddu

    ReplyDelete
  6. ಕಾರಿನ ಪುರಾಣ ಸೊಗಸಾಗಿದೆ. ನಿಮ್ಮ ಅನುಭನ ಇತರರಿಗೂ ಆಗಿರುತ್ತದೆ. ಆದರೆ ಶ್ರೀಮಂತಿಕೆ ತೋರಿಸಲು ನೆಪಕ್ಕಾದರೂ ಮನೆಗೊಂದು ಕಾರು ಬೇಗಾಗಿರುವುದು ಅನಿವಾರ್ಯವಲ್ಲವೆ?

    ReplyDelete
  7. ಕಾರ್ ಬಗ್ಗೆ ಬರೆದಿರುವ ಈ ಲೇಖನ ಸರಳ ಹಾಗೂ ಮುಕ್ತ ವಾಗಿದೆ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು