ಶ್ರಾವಣ - ನಿರಾಶೆಗೆ ಕಾರಣ
ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ... ಬಂತು ಶ್ರಾವಣ... ಬೇಂದ್ರೆಯವರ ಈ ಹಾಡು ಕೇಳಲು ಪುಳಕ... ಅದರಲ್ಲೂ ಸಿ ಅಶ್ವತ್ ಅವರು ರಾಗ ಸಂಯೋಜಿಸಿ ಹಾಡಿದ್ದನ್ನು ಕೇಳುವಾಗ ಅರಿವಿಲ್ಲದಂತೆ ಕಾಲು ಹೆಜ್ಜೆ ಹಾಕುತ್ತದೆ ಕೈ ಜೊತೆಗೂಡಿಸುತ್ತದೆ.
ಶ್ರವಣ ನಕ್ಷತ್ರದ ಪ್ರಾಧಾನ್ಯತೆಯ ಕಾರಣ ಶ್ರಾವಣ ಮಾಸ ಎಂಬ ಹೆಸರು ಬಂದಿರಬಹುದೇ? ಪ್ರಶ್ನೆ ಪಕ್ಕಕ್ಕೆ ಇಟ್ಟು ಗಮನಿಸಿದರೆ, ಶ್ರಾವಣಮಾಸ, ಶುರುವಾಯಿತೆಂದರೆ, ಹಬ್ಬಗಳ ಸಾಲು ಶುರುವಾದಂತೆ. ನಾವು ಚಿಕ್ಕವರಿದ್ದಾಗ ಹಬ್ಬ ಎಂದ ಕೂಡಲೇ.. ಆಯಾ ಹಬ್ಬಗಳ ವಿಶೇಷ ಸಿಹಿ ತಿನಿಸುಗಳ ತಿನ್ನುವ ಸಂಭ್ರಮ.
ಭೀಮನ ಅಮಾವಾಸ್ಯೆಯ ದಿನ, ಹೊಸ್ತಿಲ ಮೇಲಿಟ್ಟ ಭಂಡಾರವನ್ನು, ಮೊಣ ಕೈಯಿಂದ ಗುದ್ದಿ, ಒಳಗಿಟ್ಟಿರುವ ಕಾಸನ್ನು ತೆಗೆದುಕೊಂಡು, ಸಿಹಿಯನ್ನು ತಿನ್ನುವುದು. ನಾಗರ ಪಂಚಮಿಯಂದು ಅಕ್ಕಂದಿರ ಮನೆಗೆ ಹೋಗಿ, ಬೆನ್ನು ತೊಳಿಸಿಕೊಂಡು, ನುಚ್ಚಿನುಂಡೆ, ಹೊಯ್ಗಡುಬು ತಿನ್ನುವ ಕಾರ್ಯಕ್ರಮ. ವರಮಹಾಲಕ್ಷ್ಮಿಯ ಹಬ್ಬಕ್ಕಂತು ಒಬ್ಬಟ್ಟಿನ ಸಮಾರಾಧನೆ.
ಇದೆಲ್ಲದರ ಮಧ್ಯೆ ಶ್ರಾವಣ ಶನಿವಾರದಂದು ಮಾಡಲೇಬೇಕಾದ ಪಡಿ ಬೀರುವ ಕಾಯಕ. ಶನಿವಾರ morning class. ಅಂದರೆ ಬೆಳಿಗ್ಗೆ ಬೇಗ ಪ್ರಾರಂಭ. ಸುಮಾರು 8 ಘಂಟೆ ಇರಬಹುದಾ ನೆನಪಿಲ್ಲ. ( ಬೇರೆ ದಿವಸ 10 ಗಂಟೆಗೆ ಪ್ರಾರಂಭ ಆದರೂ ಅದು ಮಾರ್ನಿಂಗ್ ಅಲ್ಲ ...ಯಾಕೋ ). ಅಷ್ಟರಲ್ಲಿ ಸ್ನಾನ ಮಾಡಿ, ಅಕ್ಕನ ಸಹಾಯದಿಂದ, ಅಪ್ಪನ ಶಲ್ಯವನ್ನು ಪಂಚೆಯಂತೆ ಉಟ್ಟು ಮೇಲೊಂದು ಹೊದ್ದು, ಹಣೆಗೆ ಕೆಂಪು ಬಿಳುಪು ನಾಮವನ್ನು ಹಾಕಿಸಿಕೊಂಡು, ಬೆಳ್ಳಿ ಲೋಟ ಕೈಯಲ್ಲಿ ಹಿಡಿದರೆ ತಯಾರಿಯಾದಂತೆ.
ನಮ್ಮ ಮನೆಯಲ್ಲಿ ಇದ್ದದ್ದು ಎರಡು ಬೆಳ್ಳಿ ಲೋಟ, ಅದರಲ್ಲಿ ಒಂದು ಕಲಾತ್ಮಕವಾಗಿ ಅಲಂಕಾರ ಮಾಡಿದ್ದ ದೊಡ್ಡ ಲೋಟ. ಅದನ್ನು ತೆಗೆದುಕೊಳ್ಳಲು ನನಗೂ ಮತ್ತು ನನ್ನಣ್ಣ ಸತ್ತಿಗೂ ಪೈಪೋಟಿ... ದೊಡ್ಡಲೋಟ ಸಿಗದಿದ್ದಾಗ ಮನಸ್ಸಿಗೆ ನಿರಾಶೆ.. ಯಾರೋ ಸಮಾಧಾನ ಮಾಡಿ... ಮುಂದಿನ ವಾರ ನನಗೆ ಕೊಡುತ್ತೇನೆಂದು ಆಶ್ವಾಸನೆ ನೀಡಿ ಕಳಿಸುತ್ತಿದ್ದದ್ದು. ಪಾಲಿಗೆ ಬಂದ ಬೆಳ್ಳಿ ನೋಟವನ್ನು ಎರಡೂ ಕೈಯಲ್ಲಿ ಹಿಡಿದು, ಊರಿನ ಬ್ರಾಹ್ಮಣರ ಮನೆ ಹಾಗೂ ಎರಡು ಆಚಾರ್ರ ಮನೆಗೆ ಹೋಗಿ ವೆಂಕಟೇಶಾಯ ಮಂಗಳಂ ಎಂದು ಮೂರು ಬಾರಿ ಹೇಳಿ, ಮೂರು ಬಾರಿ ಸ್ವಲ್ಪ ಸ್ವಲ್ಪ ಅವರು ಹಾಕಿದ ಅಕ್ಕಿಯನ್ನು ತಂದು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿದರೆ ಪಡಿ ಬೀರುವ ಕಾಯಕ ಮುಗಿದಂತೆ. ನಂತರ ಏನಾದರೂ ತಿಂದು, ಶಾಲೆಗೆ ಓಡುವುದು. ವರಮಹಾಲಕ್ಷ್ಮಿ ಹಬ್ಬದ ಮಾರನೆಯ ಶನಿವಾರ ಮಾತ್ರ.. ಒಬ್ಬಟ್ಟನ್ನು ಹಾಲಲ್ಲಿ ನೆನೆಸಿ ತಿನ್ನುವುದು ಖಾತ್ರಿ.
ಪಡಿ ಎಂದರೆ ಒಂದು ಅಳತೆ.... ಅದು ಅಚ್ಚೇರು ಅಥವಾ ಅರ್ಧ ಅಳತೆಯ ಸೇರು. ಬೀರು ಎಂದರೆ ನನಗೆ ಆಗಿನ ತಿಳುವಳಿಕೆ ಎಸೆಯುವುದು... ಮರದಲ್ಲಿನ ಹಣ್ಣು ಉದುರಿಸಲು ಕಲ್ಲು ಬೀರೋದು... ಜೊತೆಗೆ ಸಂಕ್ರಾಂತಿಯ ಹಬ್ಬದಂದು ಎಳ್ಳು ಬೀರುವುದು... ಬೇರೆಯವರಿಗೆ ಕೊಡುವುದು, ಅಲ್ಲಿ ಎಸೆಯುವುದು ಇಲ್ಲ.. ಏನೋ ಗೊಂದಲ.
ಕನ್ನಡ ನಿಘಂಟುವಿನಲ್ಲಿ ಬೀರು ಪದದ ಅರ್ಥವನ್ನು ನೋಡಿದಾಗ ಎಸೆ, ನೀಡು, ದಾನ, ಭಿಕ್ಷೆ ಎಂಬ ಅರ್ಥವೂ ಇದೆ, ಎಂದು ತಿಳಿದ ನಂತರ, ಪಡಿ ಬೀರು ಎಂದಾಗ ಭಿಕ್ಷೆ, ಎಳ್ಳು ಬೀರು ಎಂದಾಗ ದಾನ ಅಥವಾ ನೀಡು, ಕಲ್ಲು ಬೀರು ಎಂದಾಗ ಎಸೆ ಎಂಬ ಅರ್ಥದ ಸ್ಪಷ್ಟತೆ ಸಿಕ್ಕಿತು.
ಶ್ರಾವಣ ಮಾಸದ ಕೊನೆಯ ಶನಿವಾರದ ನಂತರ, ಪಡಿ ಬೀರಿ ತಂದ ಅಕ್ಕಿಯಿಂದ ಸಿಹಿ ಅನ್ನ / ಕಡಲೆ ಬೇಳೆ ಸೇರಿಸಿ ಮಾಡಿದ ಪಾಯಸವನ್ನು ಸವಿಯುತ್ತಿದ್ದ ನೆನಪಿದೆ.
ವೆಂಟ್ರೋಣ ಸ್ವಾಮಿ ಪಾದಾಲುಕು ಗೋವಿಂದಾ...ಗೋವಿಂದ, ಎಂದು ಹೇಳುತ್ತಾ ಮನೆಯ ಮುಂದೆ ಬರುತ್ತಿದ್ದವರಿಗೆ, ಅಮ್ಮ ಅಕ್ಕಿ, ರಾಗಿ, ಅಡಿಕೆ ವಿಳ್ಳೆದೆಲೆ ಹೀಗೆ ಏನಾದರೂ ಕೊಟ್ಟು ಕಳಿಸುತ್ತಿದ್ದದ್ದು ವಾಡಿಕೆ.
ಹಣೆಯ ತುಂಬಾ ದೊಡ್ಡ ನಾಮ, ಕಚ್ಚೆ ಪಂಚೆ, ಶರಟು, ತಲೆಗೆ ಪೇಟ, ಹೆಗಲ ಮೇಲೊಂದು ಜೋಳಿಗೆ, ಜೊತೆಗೊಂದು ವಿಶಿಷ್ಟ ಆಕಾರದ ಪಾತ್ರೆ, ಜಾಗಟೆಯನ್ನು ಬಡಿಯುತ್ತಾ, ಬಾಯಲ್ಲಿ ಗೋವಿಂದಾ ಗೋವಿಂದ ಎಂದು ಹೇಳುತ್ತಾ ಬರುತ್ತಿದ್ದ ದಾಸಯ್ಯನನ್ನು ಕಂಡರೆ ಇಷ್ಟ.
ಒಮ್ಮೆ ಬಂದಾಗ ನಾವು ಲೆಕ್ಕ ಮಾಡುತ್ತಿದ್ದದ್ದನ್ನು ಕೇಳಿ ತಿಳಿದುಕೊಂಡ ದಾಸಯ್ಯ.. ಇನ್ನೊಮ್ಮೆ ಬಂದಾಗಲೂ ಲೆಕ್ಕವನ್ನೇ ಮಾಡುತ್ತಿದ್ದದ್ದನ್ನು ಗಮನಿಸಿ , ಲೆಕ್ಕ ತುಂಬಾ ತಿಕ್ಕಡಿ ಬಂದೈತಾ.. ಬಾ ನಾನ್ ಹೇಳ್ಕೊಡ್ತೀನಿ ಎಂದು ತಮಾಷೆ ಮಾಡಿದ್ದು ಹಸಿರಾದ ನೆನಪಾಗಿದೆ. ಅವರನ್ನು ತಿಕ್ಕಡಿ ದಾಸಯ್ಯ ಎಂದೆ ನಾವು ಗುರುತಿಸುತ್ತಿದ್ದದ್ದು, ಆದರೆ ಅವರ ಮುಂದೆ ಹೇಳುತ್ತಿರಲಿಲ್ಲ.
ಶ್ರಾವಣ ಮಾಸದ ಇನ್ನೊಂದು ವಿಶೇಷ ಅಕ್ಕಂದಿರು ಮಾಡುತ್ತಿದ್ದ ಮಂಗಳ ಗೌರಿ ಪೂಜೆ. ತಂಬಿಟ್ಟು, ಕೋಸಂಬರಿ ಸಮಾರಾಧನೆ.
ಶ್ರಾವಣಾ ಮಾಸದ ಐದು ಮಂಗಳವಾರ.. ಎಂಬ ಹಾಡಿನೊಡನೆ ಪ್ರಾರಂಭವಾಗುತ್ತಿದ್ದ ಪೂಜೆ... ತಂಬಿಟ್ಟಿನ ದೀಪದ ಹೊಗೆಯಿಂದ, ನಂಜುಬಟ್ಟಲ ಹೂವಿನ ರಸವನ್ನು ಸವರಿದ ಮುಗುಚುವ ಕೈ ಮೇಲೆ ಕಪ್ಪು ಹಿಡಿಯುವಾಗ ಹೇಳುತ್ತಿದ್ದ..
ಪರಮ ಸಂತೋಷದಲಿ ಪತಿಯ ಪಾದಕ್ಕೆರಗಿ ವರದ ಗಣಪತಿಗೆ ವಂದನೆಯ ಮಾಡಿ, ಹರನರಸಿ ಮಂಗಳಾ ಗೌರಿ ದೇವೀ ಕಥೆಯ.... ಎಂದು ರಾಗವಾಗಿ ಹೇಳುತ್ತಿದ್ದ ಸಾಕಷ್ಟು ದೊಡ್ಡ ಹಾಡು. ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಹಾಡು ನಾವುಗಳು ಹಾಡುತ್ತಿದ್ದೆವು:
ಮಂಗಳ ಗೌರಿ ಕಥೆಯ, ಇಂಗಿನ ವಾಸನೆ ಬಡಿಯ ಅವರ ಮನೆ ಇವರ ಮನೆ ಮುಸುರೆ ತೊಳಿಯ..
ಈ ಕವಿ(ಪಿ)ತ್ವದ ಹಿಂದಿನ ಭಾವ ಅರ್ಥ ಎಲ್ಲವೂ ಆ ಮಂಗಳ ಗೌರಿಗೇ ಗೊತ್ತು.
ನನ್ನೂರು ದೊಡ್ಡ ಜಾಲದಲ್ಲಿ, ಭಯ ಭಕ್ತಿ ಗೌರವದಿಂದ ಆಚರಿಸುತ್ತಿದ್ದ ಒಂದು ಅಲಿಖಿತ ನಿಯಮ ಇತ್ತು. ಅದು ಮಾಂಸಾಹಾರಿಗಳು, ಶ್ರಾವಣ ಮಾಸದಲ್ಲಿ ಮಾಂಸಹಾರವನ್ನು ಸಂಪೂರ್ಣವಾಗಿ ತ್ಯಜಿಸುತ್ತಿದ್ದದ್ದು. ನಗರೀಕರಣದ ಕಾರಣದಿಂದ ನಾಗರೀಕರಾದ ಜನರು, ಈಗ ಈ ನಿಯಮವನ್ನು ತ್ಯಜಿಸಿದ್ದೇ ಹೆಚ್ಚು. ಇದಕ್ಕೆ ಉದಾಹರಣೆ ಹೋದ ಭಾನುವಾರವೂ, ನಮ್ಮ ಮನೆಯ ಬಳಿ ಮಾಂಸದ ಮಾರಾಟ ಅವಿರತವಾಗಿ ನಡೆದದ್ದು. ಇರಲಿ, ಅದು ಅವರವರ ಆಹಾರದ ವಿಚಾರ... ಊಟ ತನ್ನಿಷ್ಟ ಎನ್ನುವ ಮಾತು ಇದೆಯಲ್ಲ.
ಸಾಮಾನ್ಯವಾಗಿ ಶನಿವಾರ ವೆಂಕಟೇಶ್ವರನ ದಿನ. ಅದರಲ್ಲೂ ಶ್ರಾವಣ ಶನಿವಾರವಾದರೆ, ವೆಂಕಟೇಶ್ವರನ ದೇವಸ್ಥಾನದಲ್ಲಿ ವಿಶೇಷ ಪೂಜೆ ದರ್ಶನ. ಮದುವೆಯಾದ ಹೊಸದರಲ್ಲಿ, ಶ್ರಾವಣ ಶನಿವಾರಗಳು, ಬೇರೆ ಬೇರೆ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದದ್ದು. ನಂತರದ ದಿನಗಳಲ್ಲಿ ಹೆಂಡತಿಯನ್ನು ವೆಂಕಟೇಶ್ವರ ದೇವಸ್ಥಾನದ ಬಳಿ ಬಿಟ್ಟು ಬರುವ ಸೇವೆ ನಡೆಯುತ್ತಿತ್ತು. ಈಗೀಗ ಅದೂ ಕಡಿಮೆಯಾಗುವ ಲಕ್ಷಣಗಳು ಎದ್ದು ಕಾಣುತ್ತಿದೆ.
ಬೆಂಗಳೂರಿಗೆ ಬಂದಮೇಲೆ, ಪರಿಚಿತರ ಮನೆ ಇಲ್ಲದಿರುವ ಕಾರಣವೋ, ಅಥವಾ ಸಂಕೋಚವೋ, ಪಡಿ ಬೀರುವ ಕಾಯಕ ನಿಂತೇ ಹೋಯಿತು. ನನ್ನ ಸ್ನೇಹಿತ ಮುರುಳಿ, ಶ್ರಾವಣ ಶನಿವಾರ ಬೆಳಿಗ್ಗೆ ವಾಕಿಂಗ್ ಬರುವಷ್ಟರಲ್ಲಿ, ನಾಮ ಹಾಕಿಕೊಂಡು ಪಡಿ ಬೀರಿ ಬಂದೆ ಎಂದು ಹೇಳಿದಾಗ ಅವನ ಬಗ್ಗೆ ಗೌರವ ಮೂಡಿದ್ದು ಸತ್ಯ.
ತಿರುಪತಿ ವೇಂಕಟರಮಣನ ದರ್ಶನವಾಗಿ ಬಹಳ ದಿನವಾಗಿದೆ, ಹಾಗಾಗಿ ತಿರುಪತಿಗೆ ಹೋಗಬೇಕೆಂದು, ನನ್ನ ಮಡದಿ ವಿಜಯಳ ಆಸೆ. ಅದರಲ್ಲೂ ಹಿರಿಯ ನಾಗರಿಕರಿಗೆ ಇರುವ ದರ್ಶನ ವ್ಯವಸ್ಥೆಯಲ್ಲಿ ನೋಡಬೇಕು. ನಾವಿಬ್ಬರೇ ಹೋಗುವುದಕ್ಕಿಂತ ಜೊತೆಯಿದ್ದರೆ ಚೆನ್ನ ಎಂಬುದು ಇಬ್ಬರ ಅಭಿಮತ. ಇದಕ್ಕೆ ಸಹಮತ ಕೊಟ್ಟವರು, ಸ್ನೇಹಿತ / ಚಿಕ್ಕ ಮಾವ ರಂಗ ಮತ್ತು Gವಿಜಿ, ನಾದಿನಿ ಮಣಿ ಹಾಗೂ ಭಾವಮೈದುನ ರಮೇಶ್. ಮೂರು ತಿಂಗಳ ಮೊದಲೇ ಬುಕ್ ಮಾಡಬೇಕಾದ ಅವಶ್ಯಕತೆ ಇರುವುದರಿಂದ ನಾವುಗಳು ಮಾಡಿದ ಪ್ರಯತ್ನ ಫಲಿಸಲಿಲ್ಲ. ಕೊನೆಗೆ ಸ್ನೇಹಿತ ವಾಸು ಪರಿಚಯದ ಹೈದರಾಬಾದಿನ ವ್ಯಕ್ತಿಯ ಮೂಲಕ ಮಾಡಿಸುವುದೆಂದು ತೀರ್ಮಾನ ಮಾಡಿ ಅವರೊಡನೆ ಮಾತಾಡಿ ಹಣವನ್ನು ಕಳಿಸಿದ್ದಾಯಿತು. ತಿಂಗಳಿಗೊಮ್ಮೆ ಮಾತ್ರ ಬುಕ್ ಮಾಡಲು ಅವಕಾಶವಿರುವುದರಿಂದ, ಎರಡು ತಿಂಗಳ ಪ್ರಯತ್ನ ಅವರ ಕಡೆಯಿಂದಲೂ ಫಲಿಸಲಿಲ್ಲ. ಕೊನೆಗೂ ಮೇ ತಿಂಗಳಲ್ಲಿ ಖಂಡಿತ ಮಾಡಿಕೊಡುವುದಾಗಿ ಆಶ್ವಾಸನೆಯಿತ್ತ ಆ ವ್ಯಕ್ತಿ, ಪ್ರಯತ್ನ ಮಾಡಿದ್ದೇನೋ ನಿಜ, ಆದರೆ, ಆಗಸ್ಟ್ 27ರಂದು ( ಶ್ರಾವಣ ಮಾಸ ) ದರ್ಶನಕ್ಕೆ ಅವಕಾಶ ಸಿಕ್ಕಿದ್ದು ನಾಲ್ಕು ಜನಕ್ಕೆ ಮಾತ್ರ.. ನಾನು ಮತ್ತು ನನ್ನ ಹೆಂಡತಿ ವಿಜಯಳಿಗೆ ಈ ಅವಕಾಶ ಸಿಗಲಿಲ್ಲ. ಹೊರಡಬೇಕೆಂದು ಮೊದಲು ಯೋಚನೆ ಮಾಡಿದವರು ನಾವಿಬ್ಬರು, ದುರ್ದೈವ ನಮಗೇ ಅವಕಾಶ ಸಿಗಲಿಲ್ಲ. ಸದ್ಯದಲ್ಲಿ ಆ ಭಾಗ್ಯವಿಲ್ಲ ಎಂದು ಮನಸ್ಸಿಗೆ ಸಮಾಧಾನ ಮಾಡಿಕೊಂಡು ಸುಮ್ಮನಾಗಿದ್ದೆವು.
ಆಗಸ್ಟ್ ಶುರುವಾದಂತೆ, ಸ್ನೇಹಿತ ರಂಗ ಪರಿಚಯದವರ ಕಡೆಯಿಂದ ನಮಗಿಬ್ಬರಿಗೂ ದರ್ಶನಕ್ಕೆ ವ್ಯವಸ್ಥೆ ಮಾಡುವ ಪ್ರಯತ್ನ ಮಾಡಿರುವುದಾಗಿಯೂ, ಅದು ಖಂಡಿತ ಆಗುತ್ತದೆ ಎಂದಾಗ ಒಂದು ಆಶಾಕಿರಣ ಕಣ್ಣಿಗೆ ಬೀಳುವಂತೆ ಆಯಿತು. ಅವರು ಕೇಳಿದ ನಮ್ಮಿಬ್ಬರ ಆಧಾರ್ ಕಾರ್ಡ್ ಪ್ರತಿಯನ್ನು ಅವರಿಗೆ ಕಳಿಸಿದ್ದು, ಆಶಾ ಭಾವನೆ ಇನ್ನಷ್ಟು ಗಟ್ಟಿಯಾಗಲು ಕಾರಣವಾಯಿತು. ಕೇವಲ ಮೂರು ದಿನ ಇರುವಾಗ, ಭಾನುವಾರ ನಮಗೆ ತಲುಪಿದ ಸುದ್ದಿ 95% ಕೆಲಸ ಆಗಿದೆ, ಮೆಸೇಜ್ ಬರುವುದು ಮಾತ್ರ ಬಾಕಿ ಇದೆ ಎಂದು. ತಿರುಪತಿಯಲ್ಲಿ ಇರಲು ಜಾಗ ಕಾದಿರಿಸಿದ್ದಾಯ್ತು, ಪ್ರಯಾಣಕ್ಕೆ ಕಾರು ನಿಗದಿಯಾಯ್ತು, ಕಾಳಹಸ್ತಿಗೆ ಹೋಗುವ ನಿರ್ಧಾರವಾಯಿತು, ಬೇಕಾದ ಬಟ್ಟೆ ತಯಾರಾಯ್ತು, ದಾರಿಯಲ್ಲಿ ತಿನ್ನಲು ಕುರುಕಲು ತಿಂಡಿಯ ಚಿಂತನೆಯಾಯ್ತು. ಬುಧವಾರ ಒಂದು ನಿಶ್ಚಿತಾರ್ಥಕ್ಕೆ ಹೋಗಬೇಕಾಗಿದ್ದರಿಂದ , ಅಲ್ಲಿ ಬೇಗ ಊಟ ಮಾಡಿ ಹೊರಡುವ ಠರಾವು ಆಯ್ತು. ಮಂಗಳವಾರ ಸಂಜೆಯ ವೇಳೆಗೆ ಬಂದ ಸುದ್ದಿ, ನಮ್ಮಿಬ್ಬರ ದರ್ಶನದ ವ್ಯವಸ್ಥೆ ಆಗಲಿಲ್ಲವೆಂದು.
ಉತ್ಸಾಹಕ್ಕೆ ತಣ್ಣೀರು ಎರಚಿದಂತೆ ಆಯ್ತು. ಶ್ರಾವಣ ಮಾಸದಲ್ಲಿ ತಿರುಪತಿಯ ತಿಮ್ಮಪ್ಪನನ್ನು ನೋಡುವ ಅವಕಾಶ ತಪ್ಪಿದ ಕಾರಣ ಕೆಲ ಹೊತ್ತು ಮೌನ, ಅದನ್ನು ಹಿಂಬಾಲಿಸಿದ ನಿರಾಶೆ. ಇದ್ದಕ್ಕಿದ್ದಂತೆ ಚಿಗುರಿದ ಆಸೆ, ಅಷ್ಟೇ ಬೇಗ ಸುರುಟಿ ಹೋಗಿದ್ದು ನಿರಾಶೆಯ ತೀವ್ರತೆಯನ್ನು ಹೆಚ್ಚಿಸಿತು. ನಂತರ ವಸ್ತು ಸ್ಥಿತಿಯನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ.
ಪ್ರಾಯಶಃ ಸದ್ಯದಲ್ಲಿ ವೆಂಕಟೇಶ್ವರನ ದರ್ಶನ ಭಾಗ್ಯ ಇಲ್ಲ ಎನ್ನುವುದು ಖಾತ್ರಿ ಆಯ್ತು. ಯಾವ ಸಮಯದಲ್ಲಿ ಅದು ನಡೆಯಬೇಕೋ ಅಲ್ಲಿಯ ತನಕ ಕಾಯಲೇಬೇಕು ಎನ್ನುವ ತತ್ವದ ಮೊರೆ ಹೋಗಿದ್ದಾಯ್ತು.
ಇದುವೇ ಜೀವನ.... ಅಲ್ಲವೇ?
ನಮಸ್ಕಾರ....
ಡಿ ಸಿ ರಂಗನಾಥ ರಾವ್
9741128413


Comments
Post a Comment