ಕಗ್ಗದ ಭಟ್ಟರು
ಮೊನ್ನೆ ಶನಿವಾರ, ಅಶಕ್ತ ಪೋಷಕ ಸಭಾದಲ್ಲಿ ನಡೆದ, ವಾರದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂದಿದ್ದವರು 'ಕಗ್ಗದ ಭಟ್ಟ' ಎಂದೆ ಖ್ಯಾತರಾದ ಪ್ರೊ. ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ಟರು.
ಸಾಹಿತ್ಯದಲ್ಲಿ ಹಾಸ್ಯ ಎಂಬ ವಿಷಯವನ್ನು ಇಟ್ಟುಕೊಂಡು, ಸುಮಾರು ಒಂದು ಗಂಟೆಗೂ ಮಿಕ್ಕಿ ಮಾತನಾಡಿದ / ಹಾಡಿದ / ಹಾಡಿಸಿದ ಭಟ್ಟರು, ಹಿರಿಯ ನಾಗರಿಕರ ಪಾಲ್ಗೊಳ್ಳುವಿಕೆಯನ್ನು, ಪ್ರೋತ್ಸಾಹಿಸಿದರು, ಸಫಲರಾದರು ಸಹ.
80 ವರ್ಷದ ಲಕ್ಷ್ಮೀನಾರಾಯಣ ಭಟ್ಟರು ಹಾಡುಗಳನ್ನು ಹಾಡುವಾಗ, ಸ್ವರ ಮೇಲೆತ್ತಲು ಸ್ವಲ್ಪ ಕಷ್ಟ ಪಟ್ಟರೂ ಸಹ, ಉತ್ಸಾಹ ಮಾತ್ರ ಉತ್ತುಂಗದಲ್ಲಿತ್ತು. ಪ್ರತಿ ಹಂತದಲ್ಲೂ ಒಂದಲ್ಲ ಒಂದು ಗಾಯನ ಇದ್ದೇ ಇತ್ತು.
ಇಂಗ್ಲೀಷ್ ಮಿಶ್ರಿತ ಹಾಸ್ಯರೂಪದ ಗಣಪತಿಯ ಸ್ತೋತ್ರ, ಬೆಂಗಳೂರಾಯಿತು ಬೊಂಬಾಯಿ ಎಂದು ಶುರು ಮಾಡಿ, ಬೆಂಗಳೂರಿನ ಕೆಲವು ಅಪಸವ್ಯಗಳನ್ನು ಹಾಸ್ಯ ಭರಿತವಾಗಿ ಪ್ರಸ್ತುತ ಪಡಿಸಿದರು.
ಈಶ್ವರನ ತೊಡೆಯ ಮೇಲೆ ಕೂತ ಗೌರಿ ಹಾಗೂ ತಲೆಯ ಮೇಲೆ ಕೂತ ಗಂಗೆ ಇವರಿಬ್ಬರನ್ನು ಸಂಭಾಳಿಸುವ ಪ್ರಸಂಗವನ್ನು ವಿವರಿಸಿ, ಎಲ್ಲರೂ ಶಿವನಿಗೆ ಅಯ್ಯೋ ಪಾಪ ಅಯ್ಯೋ ಪಾಪ ಎಂದು ಹೇಳುವಂತೆ ಮಾಡಿದ್ದು ವಿಶಿಷ್ಟವಾಗಿತ್ತು. ಆಚೆ ಮನೆ ಸುಬ್ಬಮ್ಮನ ಏಕಾದಶಿ ಉಪವಾಸದ ವರ್ಣನೆ, ಸಾಕಷ್ಟು ಸಲ ಕೇಳಿದ್ದ ನಿವಾಸಿಗಳಿಗೂ, ನಗೆಯುಕ್ಕಿಸಲು ಸಾಧ್ಯವಾಯಿತು.
ಕಗ್ಗದ ಭಟ್ಟರಾಗಿ, ಕಗ್ಗವನ್ನು ಬಿಡಲಾದೀತೆ ? ನಗುವೊಂದು ರಸಪಾಕ ಅಳುವೊಂದು ರಸಪಾಕ, ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ, ಪದ್ಯಗಳನ್ನು ವಿವರಿಸಿದರು.
ನನ್ನ ಮೆಚ್ಚಿನ ಸಾಹಿತಿ ಬೀchi ಯವರ ತಿಂಮ ಹಾಗೂ ಡಿವಿಜಿಯವರ ಮಂಕುತಿಮ್ಮನಿಗೂ ಇರುವ ಹೋಲಿಕೆ, ಪುಟ್ಟ ಹಣೆತೆಗೂ, ಸೂರ್ಯನಿಗೂ ಇರುವ ಅಗಾಧ ವ್ಯತ್ಯಾಸದಂತೆ ಎಂಬುದು ಬೀchi ಯವರ ಹೇಳಿಕೆ, ಎಂದು ನೆನಪಿಸಿದ್ದು.
ಕಾಲೇಜಿನಲ್ಲಿ ಮೇಷ್ಟ್ರಾಗಿದ್ದ ಲಕ್ಷ್ಮೀನಾರಾಯಣ ಭಟ್ಟರು, ಮೇಷ್ಟ್ರುತನವನ್ನು ಇನ್ನೂ ಉಳಿಸಿಕೊಂಡು, ತಮ್ಮ ಗಮನವನ್ನು ಮುಂದಿದ್ದವರ ಮೇಲೆ ಹರಿಸಿ, ಸಹಜವಾಗಿ ನಿದ್ದೆ ಮಾಡುತ್ತಿದ್ದ ನಿವಾಸಿಗಳನ್ನು ಗುರುತಿಸಿದ ರೀತಿ ಹಾಸ್ಯಮಯವಾಗಿತ್ತು.
ಕೆಲ ನಿವಾಸಿಗಳು, ಇವರ ಪ್ರಶ್ನೆಗಳಿಗೆ, ಹೇಳಿಕೆಗಳಿಗೆ ಬಹು ಉತ್ಸಾಹದಿಂದ ಸ್ಪಂದಿಸಿದ್ದು, ಅವರಿಗೆ ಖುಷಿಯಾಯಿತು ಎಂದು ಹೇಳಿಕೊಂಡರು.
ಪಕ್ಕದ, ವಿಶ್ವೇಶ್ವರಪುರ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ದಿನಗಳಲ್ಲಿ, NSS ಕಾರ್ಯಕ್ರಮಗಳ ಅಂಗವಾಗಿ ಅಶಕ್ತ ಪೋಷಕ ಸಭಾಗೆ ಬೇಟಿ ಕೊಟ್ಟಿದ್ದನ್ನು ನೆನಪಿಸಿಕೊಂಡರು. ಈಗ ಆಗಿರುವ ಅಪೂರ್ವ ಬದಲಾವಣೆಗಳನ್ನು ಕಂಡು ಸಂತೋಷಪಟ್ಟರು.
ಬಂಧುಗಳ ಮನೆಯ ಕಾರ್ಯಕ್ರಮಕ್ಕೆ ಹೋಗಬೇಕಾಗಿದ್ದರಿಂದ, ಆತುರಾತುರವಾಗಿ ಹೊರಟರು, ಅ ಗಡಿಬಿಡಿಯಲ್ಲೇ, ಕೊಟ್ಟ ಒಂದು ಲೋಟ ಎಳನೀರನ್ನು ಕುಡಿದು, ನಮ್ಮ ಆತಿಥ್ಯಕ್ಕೂ ಮನ್ನಣೆ ನೀಡಿದರು. ಅವರಿಗೆ ವಿದಾಯ ಹೇಳಿ ಮನೆಗೆ ಹಿಂತಿರುಗುವಾಗ, ಮನಸ್ಸು ಸುಮಾರು 45 ವರ್ಷಗಳ ಹಿಂದಕ್ಕೆ ಓಡಿತು.
ಆಗೆಲ್ಲ ಸ್ನೇಹಿತರ ಮದುವೆಯಲ್ಲಿ ಪಾಲ್ಗೊಳ್ಳುವುದು ತುಂಬಾ ಸಂತೋಷಕರ ವಿಚಾರ. ನನಗೂ ಹೊಸದಾಗಿ ಮದುವೆಯಾಗಿತ್ತು. ನನ್ನ ಸ್ನೇಹಿತ ಶೇಷಗಿರಿ ಮದುವೆಯಲ್ಲಿ ಸಂಭ್ರಮಿಸುತ್ತಿದ್ದೆವು. ಗಂಡಿನ ಸ್ನೇಹಿತರಾದ್ದರಿಂದ, ಆತಿಥ್ಯದಲ್ಲಿ ನಮಗೊಂದು ತೂಕ ಹೆಚ್ಚು.
ಊಟ ಸಾಗುತ್ತಿತ್ತು... ಇದ್ದಕ್ಕಿದ್ದಂತೆ ದೇವ್ರದೆಂಥಾ...... ದೊಡ್ಡಸ್ತಿಕೆ ಬಿಡು... ಎಂದು ರಾಗವಾಗಿ ಕೇಳಿ ಬಂದ ಕಂಚಿನ ಕಂಠ. ನಮ್ಮ ಗಮನ ಅತ್ತ ಹೋಗುತ್ತಿದ್ದಂತೆ, ಹಾಡು ಮುಂದುವರೆಯಿತು. ಸುಶ್ರಾವ್ಯವಾಗಿ, ಹಾಸ್ಯ ಭರಿತವಾಗಿ ಹಾಡಿದ್ದು ಮೆಚ್ಚುಗೆಯಾಯ್ತು.
ಬಿಳಿಯ ಪಂಚೆ, ಜುಬ್ಬಾ ಧರಿಸಿದ್ದ , ತಿದ್ದಿ ತೀಡಿದ ತಲೆ ಕೂದಲು, ಎದ್ದು ಕಾಣುವ ಕಣ್ಣಿನ ನೋಟದ ನಗುಮೊಗದ ತರುಣನ ಪರಿಚಯ ಮಾಡಿಕೊಂಡೆವು. ಅವರೇ ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ಟ. ಒಂದಷ್ಟು ಹಾಸ್ಯದ ಮಾತುಕತೆಯೊಂದಿಗೆ ಆ ಭೇಟಿ ಮುಕ್ತಾಯವಾಗಿತ್ತು.
ಮುಂದೊಂದು ದಿನ, ನನ್ನ ಮಡದಿ ವಿಜಯ ಆಯೋಜಿಸಿದ್ದ, "ಗಿರಿ ಮಲ್ಲಿಗೆ" ಯ ಸಾಹಿತ್ಯಕ ಕಾರ್ಯಕ್ರಮಕ್ಕೆ ಬಂದಿದ್ದ ಲಕ್ಷ್ಮೀನಾರಾಯಣ ಭಟ್ಟರನ್ನ ನೋಡಿದ್ದು. ಅವರಾಗಲೇ ಕಗ್ಗದ ಭಟ್ಟ ಎಂದು ಖ್ಯಾತಿ ಪಡೆದಿದ್ದರು.
ಮಂಕುತಿಮ್ಮನ ಕಗ್ಗದ ಗಾಯನ / ವ್ಯಾಖ್ಯಾನದ ವಿಡಿಯೋಗಳನ್ನು ನೋಡಿದ್ದೇನೆ. ಅವರು ಮಂಕುತಿಮ್ಮನ ಕಗ್ಗದ ಬಗ್ಗೆ ಬರೆದ ಗುಂಡೋಪನಿಷತ್ ಎಂದು ಕರೆದ "ತಿಮ್ಮ ಗುರುವಿನ ದರ್ಶನ" ನಾನು ಆಗಾಗ್ಗೆ ತೆಗೆದೋದುವ ಪುಸ್ತಕ. ನನಗೆ ಬೇಕಾದ ವಿಷಯಕ್ಕೆ ಹೊಂದುವ ಕಗ್ಗದ ಪದ್ಯವನ್ನು ಹುಡುಕಲು ಇದು ಸಹಾಯಕ.
ಎಷ್ಟೋ ವರ್ಷಗಳ ನಂತರ ಭೇಟಿಯಾದ, ಜೊತೆಯಾಗಿ ಕಳೆದ ಕೆಲವು ನಿಮಿಷಗಳು ಮುಂದಿನ ದಿನಕ್ಕೆ ನೆನಪಿನ ಬುತ್ತಿ.
ಈ ಬುತ್ತಿ ಕಟ್ಟಿಕೊಳ್ಳಲು ಕಾರಣರಾದವರು,ಈ ಕಾರ್ಯಕ್ರಮವನ್ನು ಆಯೋಜಿಸಿದ ರತ್ನಪ್ರಭಾ, ಮತ್ತು ಅವರಿಗೆ ಸಹಕಾರ ಕೊಟ್ಟ ಶಕುಂತಲಾ.
ಇಬ್ಬರಿಗೂ ನನ್ನ ನಮಸ್ಕಾರ...
ಡಿ ಸಿ ರಂಗನಾಥ ರಾವ್
9741128413

ಲೇಖನ ಓದುತ್ತಿದ್ದಂತೆ ಒಂದು ನಿಮಿಷ ಹಾಸ್ಯ, ಡಿವಿಜಿ, ಮಂಕುತಿಮ್ಮನ ಕಗ್ಗ ,ಲಕ್ಷ್ಮೀನಾರಾಯಣ ಭಟ್ರು, ಅಶಕ್ತ ಪೋಷಕ ಸಭಾ, ಬೀಚಿ ಹಾಗೂ ಅವರ ತಿಂಮ, ಹೀಗೆ ಎಲ್ಲವೂ ಒಮ್ಮೆ ಮನಸ್ಫಟಲದ ಮುಂದೆ ಹಾದುಹೋಗಿ ಮನಸ್ಸಿಗೆ ಮುದ ನೀಡಿತು.
ReplyDeleteಹಾಗೂ ಲೇಖಕರ ಶ್ರೀಮತಿಯವರು ಸಹ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ವಿಷಯವೂ ತಿಳಿಯಿತು.
ಇವೆಲ್ಲ ಕಾರ್ಯಕ್ರಮಗಳು ನೊಂದ ಜೀವಗಳಾದ ಅಶಕ್ತ ಪೋಷಕ ಸಭಾ ಸದಸ್ಯರುಗಳ ಮುಂದೆ ನಡೆದಿದ್ದು ಮತ್ತಷ್ಟು ಖುಷಿ ನೀಡಿತು.
ವಂದನೆಗಳು.
ಸರಳವಾದ ಸುಂದರ ಲೇಖನ. ಅಲ್ಲೇ ಹಲವಾರು ಹಿರಿಯ ವ್ಯಕ್ತಿಗಳ ಪರಿಚಯ ಕೂಡ 👌
ReplyDeleteSooper chikkappa
ReplyDelete