Toilet ನ ಸುತ್ತ





ಹೋದ ಶನಿವಾರ ಬೆಳಿಗ್ಗೆಯಿಂದ ಸೋಮವಾರ ಮಧ್ಯಾಹ್ನದ ತನಕ, ಮನೆಯ ಮುಂದೆ ಹರಿಯುತ್ತಿದ್ದ ಕೊಳಚೆಯ ನೀರು ಮೂಗು ಮುಚ್ಚಿಕೊಂಡು ಹೋಗುವಂತೆ ಮಾಡಿತ್ತು. ಸರಿ ಹೋಯಿತು ಎಂದು ಸಂತೋಷಪಟ್ಟು ರಾತ್ರಿ ನಿದ್ದೆ ಮಾಡಿ ಬೆಳಿಗ್ಗೆ ಏಳುವಷ್ಟರಲ್ಲಿ ಮತ್ತೆ ಕೊಳಚೆನೀರಿನ ಹರಿವು ಪ್ರಾರಂಭವಾಗಿತ್ತು. ಅಂತೂ BWSSB ಯವರು ಮಧ್ಯಾಹ್ನದ ಹೊತ್ತಿಗೆ ಸರಿ ಮಾಡಿದ್ದಾರೆ...

ಅದಕ್ಕೆ ಇರಬೇಕು ಕಕ್ಕಸು ಎಂದಾಕ್ಷಣ, ಗಲೀಜು, ಕೊಳಕು ಎಂದು ಮೂಗು ಮುಚ್ಚಿಕೊಳ್ಳುವುದು / ಮೂಗು ಮುರಿಯುವುದು ಸಾಮಾನ್ಯ. 

ಮಕ್ಕಳ ಒಂದು ಸಾಮಾನ್ಯ ಚಟುವಟಿಕೆಯನ್ನು ಗಮನಿಸಿ.. ಅವರು ಮಾಡಿದ ಕಕ್ಕದೊಡನೆ ಆಟವಾಡುವಾಗ ಅವರಿಗೆ ಏನೋ ಸಂತೋಷ. ಅದಕ್ಕೆ ಆ ವಯಸ್ಸಿನಲ್ಲಿ ಕಕ್ಕ.. ಗಲೀಜು ಎಂದು ತಲೆಯಲ್ಲಿ ತುಂಬಿದ ಕಾರಣವೋ ಏನೋ, ಈ ಭಾವ ಎಲ್ಲಾ ಮನುಷ್ಯರಲ್ಲೂ ಕಂಡುಬರುತ್ತದೆ

ಯಾಕೋ ವಿಷಯ ವಾಸನಾಯುಕ್ತವಾಗಿದೆ ಎಂದನಿಸುತ್ತದೆಯೇ?

 ವಾಸನೆ ಎಂಬ ಪದಕ್ಕೆ ಹಿಂದಿನ ನೆನಪುಗಳು, ಜನ್ಮಾಂತರದ ಘಟನೆಗಳ ನೆನಪುಗಳು ಎಂಬ ಅರ್ಥವೂ ಉಂಟು. ಹಾಗಾಗಿ ಇದು ನೀವಂದುಕೊಂಡಂಥ ಬರೀ ವಾಸನೆಯ ವಿಷಯವಲ್ಲ.. ಹಳೆಯ ನೆನಪುಗಳ ಜೊತೆ ಥಳುಕು ಹಾಕಿಕೊಂಡ ಹೊಸ ವಿಷಯಗಳೂ ಉಂಟು.  

ನನ್ನ ನೆನಪಿನಲ್ಲಿರುವಂತೆ, ನಮ್ಮ ಹಳ್ಳಿ ಮನೆಯ  ಹಿತ್ತಿಲ  ಬಯಲು ಮೊದಲ ಕಕ್ಕಸು.   ಮನೆಯಲ್ಲಿ ಅದಕ್ಕಾಗಿ ಜಾಗವಿದ್ದರೂ, ಆ ಗುಂಡಿಯಲ್ಲಿ ಬೀಳುವ ಭಯದಿಂದ ಅಲ್ಲಿಗೆ ಹೋಗುತ್ತಿರಲಿಲ್ಲ. ಆದರೆ ವರ್ಷಕ್ಕೊಮ್ಮೆ, ಗುಂಡಿಯನ್ನು ಖಾಲಿ ಮಾಡುವ ಸಮಯ, ಅಲ್ಲಿ ನಿಂತು ನೋಡುವ ಕುತೂಹಲ ಮಾತ್ರ ಇರುತ್ತಿತ್ತು. ಅದು ಹೊಲಕ್ಕೆ ಗೊಬ್ಬರ.

ಬೆಳೆದಂತೆ, ಆಚೆಯ ಓಡಾಟ ಪ್ರಾರಂಭವಾಯಿತು, ಹಾಗೆ ಬಯಲು ಶೌಚದ ಅಭ್ಯಾಸವಾಯಿತು. ಹೊಲ, ತೋಟ, ತೋಪು ಎಲ್ಲಿದ್ದರೆ ಅಲ್ಲೇ ಒಂದು ಮರದ ಮರೆಯಲ್ಲಿ ಮುಗಿಸಿ, ಸಾಮಾನ್ಯವಾಗಿ, ಇರುತ್ತಿದ್ದ ನೀರಿನ ಕಾಲುವೆಯಲ್ಲಿ ತೊಳೆದರೆ ಮುಗಿಯಿತು.

ಕೆಲವು ಸಲ ಇಬ್ಬಿಬ್ಬರು ಜೊತೆಯಲ್ಲಿ ಹೋಗುವ ಅಭ್ಯಾಸವೂ ಇತ್ತು. ಆ ಸಮಯದಲ್ಲಿ ಮಾತು ಮಾತು ಮಾತು... ಏನೆಲ್ಲ ವಿಷಯಗಳೋ ಆ ದೇವರಿಗೆ ಗೊತ್ತು.  ಇಬ್ಬರೂ ತುಂಬಾ ಹತ್ತಿರ ಕುಳಿತುಕೊಳ್ಳುವಂತಿಲ್ಲ. ಮಾರು ದೂರವಾದರೂ ಇರಬೇಕೆಂಬುದು ನಿಯಮ. ಹಾಗಾಗಿ ಕೂರುವಾಗ ಕೈನೀಡಿ ಅವರ ಕೈ ಮತ್ತೊಬ್ಬರಿಗೆ ತಾಕದಂತೆ ದೂರವಾಗಿ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದೆವು. ಹತ್ತಿರ ಕೂತರೆ ಆಗುವ ಪರಿಣಾಮ ಭಯಂಕರ... " ನಮ್ಮಮ್ಮನ ಹೊಟ್ಟೆಯಲ್ಲಿ ಅಥವಾ ನಿಮ್ಮಮ್ಮನ ಹೊಟ್ಟೆಯಲ್ಲಿ ಕಾಗೆ ಹುಟ್ಟುತ್ತೆ" ಎಂಬ ಎಚ್ಚರಿಕೆಯ ಮಾತು, ನಮ್ಮ ಮೇಲೆ ಬಹಳ ಪರಿಣಾಮ ಬೀರಿತ್ತು.

ಹಳ್ಳಿಯ ಕಿರು ಪ್ರಪಂಚದಿಂದ ಹೊರಬಂದು ನೋಡಿದಾಗ ತಿಳಿದ ಹೊಸ ಹೆಸರುಗಳು Toilet, ಪಾಯಿಖಾನೆ, ಸಂಡಾಸು, latrine, lavatory, ಶೌಚಾಲಯ. ಈ ದಿನಗಳಲ್ಲಿ ಅದು restroom, washroom ಎಂಬ ಹೊಸ ನಾಗರಿಕತೆ ಸೂಚಕ ಹೆಸರುಗಳಾಗಿವೆ. 

ತಿರುಪತಿಯಲ್ಲಿ ಮರುಗದೊಡ್ಲು  ಹೆಸರಿನಲ್ಲಿ, ಸಾಕಷ್ಟು ಕಡೆ ರಾರಾಜಿಸುತ್ತಿದೆ.

Toilet ಅನ್ನು To-let ಆಗಿ ಬದಲಾಯಿಸಿದ ಕಿಡಿಗೇಡಿತನವನ್ನು ನೋಡಿದ್ದೇನೆ.



ಲಿಂಗ ಭೇದವನ್ನು ಸೂಚಿಸಲು ಗಂಡಸರು, ಹೆಂಗಸರು, ಪುರುಷರು, ಸ್ತ್ರೀಯರು, Men, Women ಬರಹಗಳು ಇದ್ದು,  ಈಗೀಗ ಅದನ್ನು ಸೂಚಕವಾಗಿಸುವ ಚಿತ್ರಗಳು ಅಲಂಕರಿಸಿವೆ. ಅಂಗವಿಕಲರಿಗಾಗಿ ಸೂಕ್ತ ಜಾಗಗಳು ಉಂಟು.

ಹಾಗೆ western and indian  ಎಂದು ವರ್ಗೀಕರಿಸುವ ಫಲಕಗಳು/ ಚಿತ್ರಗಳನ್ನು ಕಾಣಬಹುದು.

ಹಣ ಕೊಟ್ಟು ಉಪಯೋಗಿಸುವ pay & use toilet ಸುಲಭ್ ಶೌಚಾಲಯ ಎಂಬ ಹೆಸರಿನಲ್ಲಿ ಸಾಕಷ್ಟು ರಸ್ತೆಗಳಲ್ಲಿ ಇವೆ. ಇವು ಎಲ್ಲ ಇದ್ದರೂ ರಸ್ತೆಯ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಗಂಡಸರು ಇನ್ನೂ ಕಾಣ ಸಿಗುತ್ತಾರೆ.

ಹೊರಗಿನಿಂದ ನೀರನ್ನು ತಂದು ಇಟ್ಟುಕೊಳ್ಳುವುದರಿಂದ ಪ್ರಾರಂಭವಾದದ್ದು, ಅಲ್ಲಿಯೇ ನಲ್ಲಿಯ ಮೂಲಕ ನೀರು ಬರುವ ಅನುಕೂಲವಾಗಿ, ಅಲ್ಲಿಯೇ ಇಟ್ಟಿದ್ದ ಬಕೇಟು,  ಕಾಣೆಯಾಗಲು ಶುರುವಾದಾಗ ಅದಕ್ಕೊಂದು ಸಂಕೋಲೆ, ಈಗ ಫಾಸೆಟ್, ಟಿಶ್ಯೂ ಗೆ ಬದಲಾಗಿದೆ.

ಶುಚಿತ್ವದ ವಿಚಾರಕ್ಕೆ ಬಂದರೆ ಅಜಗಜಾಂತರ ವ್ಯತ್ಯಾಸವಾಗಿ, ಶೌಚಾಲಯದ ಹೆಸರು ಅನ್ವರ್ಥ ಮಾಡುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ.

ಶೌಚಾಲಯದ ಬರಹಗಳು ಈಗೀಗ ಕಡಿಮೆ ಯಾಗುತ್ತಿವೆ. ನಗುತರಿಸುವ ಬರಹಗಳು, ಲೈಂಗಿಕ ರೋಗ ವಾಸಿ ಮಾಡುವ ಜಾಗದ ವಿಳಾಸಗಳು, ಸಲಹೆಗಳು, ಅಲ್ಲಿನ ಕೊಳಕನ್ನು ಸರಿದೂಗಿಸುವ ಕೊಳಕು ಬರಹಗಳು ತುಂಬಿರುತ್ತಿದ್ದವು. ಅವನ್ನೆಲ್ಲಾ ಕುತೂಹಲದಿಂದ ಓದಿದ್ದು ಉಂಟು.

ಬೆಂಗಳೂರಿಗೆ ಬಂದ ಹೊಸತರಲ್ಲಿ, ಮಲ ತುಂಬಿದ ಮಂಕರಿಯನ್ನು ಆಗಾಗ್ಗೆ ಹೊತ್ತೊಯ್ಯುವುದನ್ನು ನೋಡಿದಾಗ, ಅಯ್ಯೋ ಪಾಪ ಎನಿಸುತ್ತಿತ್ತು. ಅದೇ ಕ್ರಿಯೆ ಸರಿಸುಮಾರು ಒಂದೇ ಆದರೂ... ಹಳ್ಳಿಯಲ್ಲಿ ಎತ್ತಿನ ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದ ಕಾರಣವೋ ಏನೋ ಆ ಭಾವ ಬರುತ್ತಿರಲಿಲ್ಲ.

ದಿನಪತ್ರಿಕೆಯಲ್ಲಿ ನೋಡಿದ ಚಿತ್ರ ಹಾಗೂ ಶೀರ್ಷಿಕೆಯ ನೆನಪಾಗುತ್ತಿದೆ. ಅಂದಿನ ಕಾಲದ MG ರಸ್ತೆಯಲ್ಲಿ ಮಲ ತುಂಬಿದ ಗಾಡಿಯನ್ನು ಒಬ್ಬ ವ್ಯಕ್ತಿ ನಡೆಸುತ್ತಿರುತ್ತಾನೆ, ಇನ್ನೊಬ್ಬ ವ್ಯಕ್ತಿ ಮೂಗು ಮುಚ್ಚಿರುತ್ತಾನೆ... ಅದಕ್ಕೆ ಗಾಡಿಯ ವ್ಯಕ್ತಿ ಹೇಳುವುದು "ನೀದಾ ಸೇಯರದಿ (ನೀನೇ ಮಾಡುವುದು ) ". ಈ ಚಿತ್ರಕ್ಕಾಗಿ ಹುಡುಕಾಡಿದೆ.. ಸಿಗದಿದ್ದಾಗ AI ಉಪಯೋಗಿಸಿಕೊಂಡು, ನನ್ನ ಕಲ್ಪನೆಗೆ ಹತ್ತಿರವಾಗುವಂತೆ ತಯಾರಿಸಿಕೊಟ್ಟವರು ಸ್ನೇಹಿತ ಸುಬ್ಬಯ್ಯ ಶೆಟ್ಟರು.



 ಮುದ್ದೆ,  ನಿದ್ದೆ, ಎದ್ದ ತಕ್ಷಣ ಗೊದ್ದೆ ಎನ್ನುವುದು ನಾನು ದೊಡ್ಡಜಾಲದಲ್ಲಿದ್ದಾಗ ಕೇಳಿದ ಆರೋಗ್ಯದ ಸೂತ್ರ. ಎದ್ದ ತಕ್ಷಣ ದಿನದ ಮೊದಲನೆಯ ಕೆಲಸ ಮಲಮೂತ್ರ ವಿಸರ್ಜನೆ. ಅದು ಸುಗಮವಾಗಿ ಆದಾಗ ಆರೋಗ್ಯವಾಗಿರುವ ಸೂಚನೆ. ಶೌಚಾಲಯ ಜೀವನದ ಅನಿವಾರ್ಯ ಹಾಗೂ ಅವಿಭಾಜ್ಯ ಅಂಗ... ರೂಪ ಹಾಗೂ ಸೌಕರ್ಯ ಯಾವುದೇ ಇರಲಿ.

ಸುಖದ ಕಲ್ಪನೆಯನ್ನು ಚಿತ್ರಿಸುವಾಗಲೂ ಶೌಚಾಲಯಕ್ಕೆ ಬಹು ಮುಖ್ಯ ಪಾತ್ರವಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ, ಮಲಮೂತ್ರ ವಿಸರ್ಜನೆಗೆ ಜಾಗ ಸಿಗದೆ ತಲ್ಲಣಿಸುತ್ತಿದ್ದಾಗ, ಸಿಕ್ಕ ಯಾವುದೇ ಶೌಚಾಲಯದಲ್ಲಿ / ಜಾಗದಲ್ಲಿ ಭಾದೆಯನ್ನು ತೀರಿಸಿಕೊಂಡಾಗ ಸಿಗುವ ಮನಶ್ಶಾಂತಿಯೇ ಸುಖದ ದ್ಯೋತಕ.

ಜಗತ್ತಿನ ಅತಿ ದೊಡ್ಡ ಶೌಚಾಲಯ ಭಾರತದಲ್ಲಿದೆ ಎಂದು ಪ್ರತೀತಿ. ಅದುವೇ ರೈಲ್ವೆ ಹಳಿಗಳ ಇಕ್ಕೆಲಗಳು.  ಇಂದಿಗೂ ರೈಲ್ವೆ ಹಳ್ಳಿಗಳ ಪಕ್ಕದಲ್ಲಿ, ಬೆಳಗಿನ ಹೊತ್ತು ಪಯಣಿಸುವಾಗ, ಈ ದೃಶ್ಯವನ್ನು ಕಾಣಬಹುದು.

ಅಸಹ್ಯ ಎಂದು ಮನೆಯಿಂದ ದೂರವೇ ಇರುತ್ತಿದ್ದ ಶೌಚಗೃಹಗಳು, ಮನೆಗೆ ಹತ್ತಿರ ಬಂದು, ಮನೆಯೊಳಗೆ ಬಂದು ಈಗ ಮಲಗುವ ಕೊಠಡಿಗೆ ಬಂದು ಆಕ್ರಮಿಸಿಕೊಂಡಿದೆ.  ಶುಚಿತ್ವಕ್ಕೆ ಮೊದಲ ಆದ್ಯತೆ ಇರುವುದರಿಂದ, ಆರಾಮವಾಗಿ ಸಮಯವನ್ನು ಕಳೆಯಬಹುದಾದರಿಂದ Rest room  ಎನ್ನುವ ಹೆಸರು ಸರಿ ಇರಬಹುದೇ? 

ಒಂದು ಅಂದಾಜಿನ ಪ್ರಕಾರ... ಶೌಚಾಲಯದ ಅನುಕೂಲಗಳಿಗೆ ಮಾಡುವ ಖರ್ಚು, ಬೇರೆ ವಿಷಯಗಳಿಗೆ ಹೋಲಿಸಿದರೆ ಅತಿ ಹೆಚ್ಚು.

ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಚ್ಛತಾ ಅಭಿಯಾನದ ಅಂಗವಾಗಿ, ಮನೆಮನೆಗೂ ಶೌಚಾಲಯವನ್ನು ಕಟ್ಟಿಸಿಕೊಡುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕೆಂಪುಕೋಟೆಯಿಂದ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಾ, ಶೌಚಾಲಯದ ಬಗ್ಗೆ ತಮ್ಮ ಯೋಜನೆಯನ್ನು ಪ್ರಕಟಿಸಿದಾಗ, ಅದನ್ನು ಹೀಯಾಳಿಸಿದವರು ಬಹಳ ಮಂದಿ. ಆದರೆ ಇದರಿಂದ ಉಪಯೋಗ ಪಡೆದುಕೊಂಡ ಬಹಳಷ್ಟು ಹಳ್ಳಿಯ ಹೆಣ್ಣು ಮಕ್ಕಳು, ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ತಾವು ಗೌರವಯುತವಾಗಿ ಜೀವನ ಮಾಡಲು ಅನುಕೂಲವಾಗಿದೆ ಎಂದು ಹೆಮ್ಮೆ ಪಟ್ಟಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ:

ನಾನು ಶಹಾಬಾದಿನಲ್ಲಿದ್ದ ಸಮಯ... ಎಲ್ಲ ಸ್ನೇಹಿತರು ಒಂದು ಭಾನುವಾರ ಹತ್ತಿರದ ಭಂಕೂರಿಗೆ ಗಣಪತಿಯ ಗುಡಿಗೆ ಹೋಗಿದ್ದೆವು. ಕತ್ತಲಾಗುತ್ತಾ ಬಂದಿತ್ತು.. ಯಾವುದೋ ಕಾಲುದಾರಿಯನ್ನು ಹಿಡಿದು ನಡೆಯುತ್ತಿದ್ದವು. ಇದ್ದಕ್ಕಿದ್ದಂತೆ ಸಾಲು ಸಾಲಾಗಿ ಹೆಂಗಸರು ನಿಂತದ್ದು ಕಂಡು ಬಂತು. ತಕ್ಷಣ ನಮಗೆ ಹೊಳೆಯದಿದ್ದರೂ ಎಲ್ಲ ಮುಂದೆ ಬಂದೆವು. ಮಾತನಾಡುತ್ತಾ ತಮಾಷೆಯಾಗಿ.. ಆ ಹೆಂಗಸರು ನಮಗೆ ನಿಂತು ಗೌರವ ರಕ್ಷೆಯನ್ನು (guard of honour) ಕೊಟ್ಟರು ಎಂದು ಹೇಳಿದವ ಒಬ್ಬ ಸ್ನೇಹಿತ. ನಂತರದ ವಿಶ್ಲೇಷಣೆಯಲ್ಲಿ... ಮುಸ್ಸಂಜೆಯ ಹೊತ್ತು, ಜನಗಳ ಕಣ್ಣಿಂದ ಮರೆಯಾಗಿ ಬಹಿರ್ದೆಸೆಗೆ ಹೋಗುವ ಸಲುವಾಗಿ, ನೀರಿನ ಪಾತ್ರೆಗಳನ್ನು ಹಿಡಿದು ಬಂದು ಕೂತಿದ್ದ ಹೆಂಗೆಳೆಯರ ನಡುವೆ, ನಾವುಗಳು ತಿಳಿಯದೆ ನುಗ್ಗಿದ್ದು, ಗಾಬರಿಗೊಂಡ ಅವರು ಏನೂ ತೋಚದೆ ಎದ್ದು ನಿಂತು ದೃಷ್ಟಿಯನ್ನು ಬೇರೆಲ್ಲೋ ನೆಟ್ಟಿದ್ದು. ಪಾಪ ಅವರಿಗೆ ಮುಜುಗರವನ್ನು ಮಾಡಿದ ನಾವು ನಿಜಕ್ಕೂ ಪಾಪಿಗಳು. ಇಂಥ ಮುಜುಗರವನ್ನು ತಪ್ಪಿಸಿದ್ದು ಮನೆಮನೆಗೂ ಬಂದ ಶೌಚಾಲಯಗಳು. ನಿಜಕ್ಕೂ ಮೋದಿ ಅವರ ಈ ಕೆಳಮಟ್ಟದ ಹೆಣ್ಣು ಮಕ್ಕಳಿಗೆ ಗೌರವವನ್ನು ತಂದುಕೊಡುವ ಚಿಂತನೆಯನ್ನು ಕಾರ್ಯರೂಪಕ್ಕೆ ತಂದಿದ್ದು ಶ್ಲಾಘನೀಯ.

ನಾನು ವಾಸವಿದ್ದ ಒಂದು ವಠಾರದಲ್ಲಿ 6 ಮನೆಗಳಿದ್ದವು, ಎಲ್ಲ ಮನೆಗಳಿಗೂ ಸೇರಿ ಎರಡು ಶೌಚಾಲಯಗಳು ಇದ್ದವು. ಅದರಲ್ಲಿ ಒಂದಕ್ಕೆ ಬಾಗಿಲು ಮುರಿದು ಹೋಗಿತ್ತು.  ಅಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದ ನೀರಿನ ಬಕೆಟ್ ಅನ್ನು ಮುಂದೆ ಇಟ್ಟರೆ... ಅದೇ ಬಾಗಿಲು. ಇಷ್ಟಾದರೂ ಎಲ್ಲ ಮನೆಗಳ ಜನರು ಹೇಗೋ ಹೊಂದಿಕೊಂಡು ಜೀವನ ನಡೆಸುತ್ತಿದ್ದೆವು.

ಈಗ ಮನೆಯ ಎಲ್ಲ ಕೊಠಡಿಗಳಲ್ಲೂ ಶೌಚಾಲಯ, ಮತ್ತೊಂದು ಶೌಚಾಲಯ ಬಂದವರಿಗಾಗಿ. ಇದು ಒಂದು ಜೀವನಶೈಲಿ, ಈಗಿನ ಕಾಲಕ್ಕೆ. ಇಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಬರದು... ಬದಲಾಗಿ  ತಾನು ತನ್ನದು ತನಗಾಗಿ ಎಂಬ ಪ್ರತ್ಯೇಕತೆಯ ಭಾವ ಗಟ್ಟಿಯಾಗುತ್ತಾ ಹೋಗುತ್ತದೆ.

Toilet ಗೆ ಹೋದಾಗ, ದಿನಪತ್ರಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದವರು ಕೆ. ಅನಂತ ಸುಬ್ಬರಾಯರು. ಇವರು ಟೈಪ್ ರೈಟಿಂಗ್ ಮಿಷನ್ ಗಾಗಿ ಅನಂತ ಕೀಬೋರ್ಡ್ ಎಂಬ ಹೆಸರಿನ ಕನ್ನಡ ಕೀಬೋರ್ಡನ್ನು ರೂಪಿಸಿದವರು. ಇವರಿಂದ ಸ್ಪೂರ್ತಿ ಪಡೆದ ನಾನು ಇಂದಿಗೂ toilet ಗೆ ಹೋಗುವಾಗ ಏನಾದರೂ ಓದುವುದಕ್ಕೆ ತೆಗೆದುಕೊಂಡು ಹೋಗುವ ಅಭ್ಯಾಸವನ್ನು ಹೊಂದಿದ್ದೇನೆ.

ಯಾರು ಹೇಳಿದ್ದು ಈ ಕಿರು ಕಥೆ ನೆನಪಿಲ್ಲ... ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು ಎಂಬ ತವಕ ನನ್ನದು. ಹೇಳಿದ ಮಾತು ಕೇಳದ, ಹಠಮಾರಿಯಾದ ಮಕ್ಕಳಿಗೆ ಅನ್ವಯಿಸುವಂಥದ್ದು.

ಒಬ್ಬ ಚಿಕ್ಕ ಹುಡುಗ ಕಕ್ಕ ಮಾಡುತ್ತಾ ಸೌತೆಕಾಯಿಯನ್ನು ತಿನ್ನುತ್ತಿದ್ದ. ಇದನ್ನು ನೋಡಿದ ಹಿರಿಯರೊಬ್ಬರೊಡನೆ ನಡೆದ ಸಂಭಾಷಣೆ...

"ಮಗು ಕಕ್ಕ ಮಾಡುತ್ತಾ ಏನನ್ನೂ ತಿನ್ನಬಾರದು" 

" ಯಾಕೆ ? ತಿಂದರೆ ಏನಾಗುತ್ತೆ?"

" ಆರೋಗ್ಯಕ್ಕೆ ಒಳ್ಳೆಯದಲ್ಲ ಮಗು...  ನೊಣ ಬಂದು ಕುತ್ಕೊಳುತ್ತೆ... ಗಲೀಜ್ ಆಗುತ್ತೆ ಅದಕ್ಕೆ ತಿನ್ನಬಾರದು"

" ನೊಣಾನ ನಾನು ಓಡುಸ್ತೀನಿ, ಒರೆಸಿಕೊಂಡ್ ತಿಂತೀನಿ.. ನಿಮಗೇನೀಗ"

" ನಿನ್ನ ಒಳ್ಳೆಯದಕ್ಕೆ ಹೇಳ್ದೆ, ತಿಂದೇ ತಿಂತೀನಿ ಅಂದ್ರೆ ತಿನ್ನು.... ಬೇಕಾದರೆ ಅದರಲ್ಲೇ ಅದ್ದುಕೊಂಡು ತಿನ್ನು"

ಸ್ವಲ್ಪ ಕಟು ಎನಿಸಿದರು, ಅಸಹಾಯಕತೆ ಅಸಹನೆಯಾಗಿ ಹೊರಹೊಮ್ಮಿದ ಮಾತುಗಳು ಎಂದು ನನ್ನ ಭಾವನೆ.            

ಈಚೆಗೆ ಕೇಳಿದ ಒಂದು ಮಾತು, ಸತ್ಯಕ್ಕೆ ಬಹು ಹತ್ತಿರ. ಆಗೆಲ್ಲ ಮನೆಯಲ್ಲಿ ಅಡಿಗೆ ಊಟ....ಮನೆಯ ಆಚೆ ಶೌಚ.  ಕಾಲ ಬದಲಾಗಿದೆ...ಈಗ ಮನೆಯ ಹೊರಗಿನ ಊಟ..ಮನೆಯಲ್ಲಿ  ಶೌಚ. ಶ್ವಪಚತನವೇ?

ಕೊನೆಯದಾಗಿ commode ಒಂದು ಪಾಶ್ಚಿಮಾತ್ಯ ಸಲಕರಣೆ ಎಂದು ಹೇಳುವುದಿದೆ. ಆದರೆ ನನಗೆ ಇದಕ್ಕೆ ಒಪ್ಪಿಗೆ ಇಲ್ಲ. ಯಾಕೆಂದರೆ ಇದರ ಮೂಲ ಕಲ್ಪನೆ ಇರುವುದು ನಮ್ಮ ದೇಶದ ಅಮ್ಮಂದಿರ ಕಾಲುಗಳಲ್ಲಿ. ನೆಲದ ಮೇಲೆ ಕೂತು ಎರಡು ಪಾದದ ತಳಗಳನ್ನು ಹತ್ತಿರ  ಜೋಡಿಸಿದಾಗ, ಮಧ್ಯಭಾಗದಲ್ಲಿ ಮೂಡುವ ಜಾಗದಲ್ಲಿ ಮಗುವನ್ನು ಕೂಡಿಸಿ, ಕಕ್ಕ ಮಾಡಿಸುವ ರೀತಿಯನ್ನು ನಾನು ನೋಡಿದ್ದೇನೆ. ಇದು ಮಗು ಕಮೋಡ್ ಮೇಲೆ ಕೂತಂತಹ ನೋಟವನ್ನೇ ಸೃಷ್ಟಿಸುತ್ತದೆ. 

ಮುಗಿಸುವ ಮೊದಲು... ನೀವು ಈ ಲೇಖನವನ್ನು ಓದುವಾಗ ಮೂಗುಮುಚ್ಚುವ ಅವಶ್ಯಕತೆ ಬರಲಿಲ್ಲ ಎನ್ನುವುದು ನನಗೆ ಖಾತ್ರಿ... ಆದರೆ ಮೂಗು ಮುರಿಯದೇ ಓದಿದ್ದರೆ ನಾನು ಧನ್ಯ.... ಇಲ್ಲವಾದರೆ ಲೇಖನವು ವಾಸನೆ ಬೀರುವಷ್ಟು ನೈಜತೆಗೆ ಹತ್ತಿರವಾಗಿತ್ತು ಎಂದು ಹೆಮ್ಮೆ ಪಟ್ಟುಕೊಳ್ಳುವ ಆಯ್ಕೆ ನನ್ನದು.

ನಮಸ್ಕಾರಗಳೊಂದಿಗೆ...


ಡಿ ಸಿ  ರಂಗನಾಥ ರಾವ್

9741128413




    

Comments

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ