ಮಾತು - (ತಲೆ) ಹರಟೆ
ಬೆಳಿಗ್ಗೆ ಉದ್ಯಾನವನದಲ್ಲಿ ಸ್ನೇಹಿತ ಯೋಗಾನಂದ ಅವರ ಜೊತೆ ನಡೆದಾಡುತ್ತಾ ಇದ್ದಾಗ ಒಬ್ಬ ಆಜಾನುಬಾಹು ವ್ಯಕ್ತಿ ಫೋನಿನಲ್ಲಿ ಯಾರಿಗೋ ಜೋರಾಗಿ ದಬಾಯಿಸುತ್ತಾ ನಮ್ಮ ಪಕ್ಕದಲ್ಲಿ ನಡೆದರು... ಕೆಲ ಕ್ಷಣಗಳು ನಾವಿಬ್ಬರೂ ಮಾತು ನಿಲ್ಲಿಸಿದೆವು.. ಆ ವ್ಯಕ್ತಿ ಮುನ್ನಡೆದಾಗ ಯೋಗಾನಂದ ಅವರು ಹೇಳಿದ್ದು " ಇದರ ಬಗ್ಗೆ ಒಂದು ಬ್ಲಾಗ್ ಬರೆಯಿರಿ". ಮುಂದಿನ ಲೇಖನದ ವಿಷಯ ಇನ್ನೂ ನನ್ನ ತಲೆಗೆ ಬರದಿದ್ದರಿಂದ, ಇದೇ ಇರಲಿ ಎಂದು ಆಯ್ಕೆ ಮಾಡಿದೆ. ಹಾಗಾಗಿ ಈ ಲೇಖನ.. ಕಿವಿಗೆ headphone ಗಳನ್ನು ಸಿಕ್ಕಿಸಿದ್ದ ವ್ಯಕ್ತಿಯ ಶಾರೀರ, ಶರೀರದಷ್ಟೇ ದೊಡ್ಡದಾಗಿತ್ತು. ಕೋಪ ಎದ್ದು ಕಾಣುತ್ತಿತ್ತು. ಕೋಪ ಬಂದಾಗ ಎದುರಿನ ವ್ಯಕ್ತಿ ತುಂಬಾ ಹತ್ತಿರದಲ್ಲೇ ಇದ್ದರೂ, ಎಲ್ಲೋ ದೂರದಲ್ಲಿರುವವರೊಡನೆ ಮಾತನಾಡುವಂತಿರುತ್ತದೆ. ಏಕೆಂದರೆ ಮಾನಸಿಕವಾಗಿ ಅವರು ದೂರದಲ್ಲಿ ಇರುತ್ತಾರೆ. ಅದೇ ಪ್ರೀತಿ ಇದ್ದರೆ ಪಿಸು ಮಾತು ಸಹ ಬೇಗ ಮನ ಮುಟ್ಟುತ್ತದೆ. ಇದು ನವದಂಪತಿಗಳಲ್ಲಿ ಹಾಗೂ ಪ್ರೇಮಿಗಳಲ್ಲಿ ಹೆಚ್ಚು ಕಾಣುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದರು ಬಸವಣ್ಣನವರು. ಅದು ಬುದ್ಧಿವಾದ / ಸಲಹೆ ಮಾತ್ರ. ನಿಜ ಜೀವನದಲ್ಲಿ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವುದೇ ವಸ್ತುಸ್ಥಿತಿ. ಮುತ್ತಿನ ಹಾರ ಬಲು ಅಪರೂಪ. ಅದರಲ್ಲೂ ಭಾರತದ ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗಿದ್ದೆ ಹೆಚ್...