ತುಳಸಿ ತೋಟದಲ್ಲಿ.. ತುರಿಕೆ ಸೊಪ್ಪು
ಸೂಪರ್ ಮಾರ್ಕೆಟ್ ನಲ್ಲಿ ಗೋಡಂಬಿಗಾಗಿ ಹುಡುಕುತ್ತಿದ್ದೆ, "ನಮಸ್ಕಾರ ಸರ್", ಅಂದದ್ದು ಕೇಳಿ ತಿರುಗಿ ನೋಡಿದರೆ ಮಧ್ಯ ವಯಸ್ಸಿನ ಒಬ್ಬ ಹೆಣ್ಣು ಮಗಳು. ಪ್ರತಿ ನಮಸ್ಕಾರ ಮಾಡಿದೆ, ಆದರೆ ಯಾರೆಂದು ಗೊತ್ತಾಗಲಿಲ್ಲ. ನೆನಪಾಗ್ಲಿಲ್ವಾ ಸರ್, ಅಂತ ತಮಾಷೆಯಾಗಿ ಮಾತಾಡಿದ್ದು ಗಮನಿಸಿದರೆ, ಎಲ್ಲೋ ತುಂಬಾ ಪರಿಚಯ ಇರಬೇಕು ಅನ್ನಿಸ್ತು.. ಆದರೆ ಹೊಳೀಲಿಲ್ಲ... ತುಳಸಿ ತೋಟದಲ್ಲಿ.. ತುರಿಕೆ ಸೊಪ್ಪು.. ನೆನಪಿದೆಯಾ ಸರ್.... ಎಂದಾಗ.... ರಮ್ಯಾ ತಾನೇ.. ಗುರುತಿಸಿದೆ.. ಆತ್ಮೀಯವಾಗಿ ಕೈಕಲುಕಿದಳು ರಮ್ಯ. ಉಭಯ ಕುಶಲೋಪರಿಯಲ್ಲಿ ತಿಳಿದದ್ದು ರಮ್ಯಾ ಈಗ ಸುಖೀ ಗೃಹಿಣಿ, ಅತ್ತೆ ಮಾವನ ಜೊತೆಯಲ್ಲಿದ್ದಾಳೆ, ಎರಡು ಮಕ್ಕಳ ತಾಯಿ, ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಮಗಳ ವಿಚಾರ ಕೇಳಿದೆ.. ರಮ್ಯಾ ಹೇಳಿದ್ದು...“ಹೈ ಸ್ಕೂಲ್ ನಲ್ಲಿ ಓದುತ್ತಿದ್ದಾಳೆ, ಜಾಣೆ,... ನನ್ನ ತರಹ ಅಲ್ಲ ಸರ್”.
ಮನಸ್ಸು ಹಿಂದಕ್ಕೆ ಓಡಿತು...
ಅಂದು ಪ್ರಸನ್ನ ಆಪ್ತ ಸಲಹಾ ಕೇಂದ್ರದ ಕೊನೆಯ ವ್ಯಕ್ತಿಯಾಗಿ ಬಂದವರು ಭಾಗ್ಯಮ್ಮ. ಜೊತೆಯಲ್ಲಿ ಮಗಳು ರಮ್ಯಾ. ಬಂದವರೇ ಕಣ್ಣೀರು ಹಾಕುತ್ತಾ ಆರಂಭ ಮಾಡಿದರು ಭಾಗ್ಯಮ್ಮ...
"ಯಾಕಾದ್ರೂ ಇವಳು ನನಗೆ ಮಗಳಾಗಿ ಹುಟ್ಟಿದಾಳೋ.. ದಿನಾ ದಿನಾ ನನ್ನ ಹೊಟ್ಟೆನ ಉರುಸ್ತಾಳೆ. ಅವರ ಅಕ್ಕಂದಿರ ತರ ಹೇಳಿದಾಗೆ ಕೇಳಿಕೊಂಡು ಮುಚ್ಚಟೆಯಾಗಿ ಇರಕ್ಕೆ ಇವಳಿಗೆ ಏನು ಕಷ್ಟಾನೋ ಗೊತ್ತಾಗ್ತಿಲ್ಲ... ನಿಮಗೆ ಹೇಳಕ್ಕೆ ಸಂಕೋಚ ಆಗುತ್ತೆ.. ಆದರೂ ಅಣ್ಣ ತಮ್ಮ ಅಂತ ಹೇಳ್ಕೋತೀನಿ.. ತಿಂಗಳ ಆ ಮೂರು ದಿನ ಇವಳನ್ನ ಸಂಭಾಳಿಸೋ ಹೊತ್ತಿಗೆ ನನ್ನ ಅರ್ಧ ಜೀವಾನೇ ಹೋಗಿರುತ್ತೆ. ನಮ್ಮೆಜಮಾನ್ರ ಮಡಿ ಮೈಲಿಗೆ ನೋಡ್ಲೋ.. ಅಥವಾ ಇವಳ ಅವಾಂತರಾನ ನೋಡ್ಲೋ ಗೊತ್ತಾಗ್ದೆ ನಲುಗಿ ಹೋಗಿದ್ದೀನಿ. ಇವಳ ವೇಷ ಏನು, ಅಲಂಕಾರ ಏನು, ಆಡೋ ಮಾತುಗಳೇನು.. ಯಾವುದೂ ನಮ್ಮನೆಗೆ ಹೊಂದಾಣಿಕೆ ಆಗಲ್ಲ. ಸಂಜೆ ಮನೆಗೆ ಬೇಗ ಸೇರ್ಕೊ ಅಂತ ಇನ್ನಿಲ್ಲದಾಗಿ ಹೇಳಿದ್ರು, ಇವಳ ತಲೆಗೆ ಹತ್ತಲ್ಲ, ಕತ್ತಲೆ ಮಾಡ್ಕೊಂಡು ಬರ್ತಾಳೆ. ಪೂಜೆ ಮಾಡ್ತಾ ಕೂತಿರೋ ನನ್ ಗಂಡ ಇದನ್ನ ನೋಡಲಾರದೇ ಸಿಡಿ ಸಿಡಿ ಅಂತಾರೆ.. ಕೆಲವು ಸಲ ಏನೇನೋ ಬೈತಾರೆ.. ಇವಳಿಗೆ ಅದೆಲ್ಲ ಯಾವುದು ಲೆಕ್ಕಕ್ಕಿಲ್ಲ. ತಂದೇ ತನ್ನ ದಾರಿ... ಊರಿಗೆಲ್ಲ ಒಂದು ದಾರಿಯಾದರೆ ಎಡವಟ್ಟಂಗೆ ಒಂದ್ ದಾರಿ ಅಂತಾರಲ್ಲ , ಹಾಗೆ ಇವಳದು ಎಡವಟ್ಟು.
ಮೊನ್ನೆ ಏನು ಮಾಡಿದಾಳೆ ಅಂದ್ರೆ...ಸ್ನೇಹಿತೆ ಮನೇಗೆ ಹೋಗ್ತೀನಿ ಅಂತ ಹೋದವಳು, ಲೇಟಾಗಿ ಬರೋದು ಅಲ್ದೆ, ಅವಳ ಪ್ಯಾಂಟು ಶರ್ಟು ಹಾಕ್ಕೊಂಡು ಮನೆಗೆ ಬಂದಿದ್ದಾಳೆ... ನಮ್ಮನೆಯವರದು ನರಸಿಂಹಾವತಾರ.. ಮಾತು ಎಲ್ಲೆಲ್ಲಿಗೋ ಹೋಗಿ.. ' ನಮ್ಮನೇನಲ್ಲೇ ಇರಬೇಡ ನಿಂಗೆ ಎಲ್ಲಿಗೆ ಬೇಕೋ ಹೊರಟೊಗು... ನಮ್ ಪಾಲಿಗೆ ನಿನು ಸತ್ತು ಹೋಗಿದ್ದೀಯಾ ಅಂತ ನೆಮ್ಮದಿಯಾಗಿರ್ತೀವಿ' ಅಂದ್ರು."
ಮಧ್ಯದಲ್ಲಿ ಮಾತನಾಡಿದ ರಮ್ಯಾ ನಗುತ್ತಾ ಏನಂತ ಬೈದ್ರು ಗೊತ್ತಾ ಸಾರ್.. " ತುಳಸಿ ತೋಟದಲ್ಲಿ ತುರಿಕೆ ಸೊಪ್ಪು ಹುಟ್ಟಿದಂಗೆ ನಮ್ಮನೇಲಿ ನೀನು ಹುಟ್ಟಿದ್ದೀಯ... ನಮ್ಮನೆಗೆ ಒಂದು ಕಪ್ಪು ಚುಕ್ಕಿ ನೀನು.”
ಭಾಗ್ಯಮ್ಮ ಮುಂದುವರೆದು ಹೇಳಿದ್ದು.. "ನೀವೇ ನೋಡಿ ಸರ್... ಎಗ್ಗು ತಗ್ಗು ಇಲ್ದಂಗೆ ಧೈರ್ಯದಿಂದ ಹೇಗೆ ನಗ್ತಾ ಹೇಳ್ತಾಳೆ... ಅವರ ಅಪ್ಪನ ಮುಂದೆ ಹೀಗೇನೇ ಮಾತಾಡ್ತಾಳೆ.. ಅವರು ಕೋಪ ಇನ್ನೂ ಜಾಸ್ತಿ ಆಗುತ್ತೆ.. ಇವರ ಮಧ್ಯೆ ಸಿಕ್ಕಿ ನರಳುತ್ತಿರೋದು ನಾನು... ದಯವಿಟ್ಟು ಇವಳಿಗೆ ಸ್ವಲ್ಪ ಬುದ್ಧಿ ಹೇಳಿ."
ತಕ್ಷಣ ರಮ್ಯಾ ಹೇಳಿದ್ದು... "ಎಲ್ಲಾ ನಂದೇ ತಪ್ಪಾ... ಇವರದೇನು ತಪ್ಪೇ ಇಲ್ವಾ... ಕೇಳಿ ಸರ್.."
"ಆಯ್ತು ಅವರದೇನು ತಪ್ಪು ಅಂತ ನೀ ಹೇಳಮ್ಮ" ಅಂದೆ.
“ಅಮ್ಮ ಇರಬಾರದು... ನಾನೊಬ್ಬಳೇ ಮಾತಾಡಬೇಕು”
"ಇವತ್ತು ಸಮಯ ಆಗಿದೆ ಮುಂದಿನ ವಾರ ಬಾ, ಒಬ್ಬಳ ಜೊತೇಲೆ ಮಾತಾಡ್ತೀನಿ." ಭಾಗ್ಯಮ್ಮನ ಮುಖ ನೋಡಿದೆ, ಒಪ್ಪಿಗೆ ಇತ್ತು ಅಂತ ಅನಿಸ್ತು.
ಮುಂದಿನ ವಾರ ಬಂದ ರಮ್ಯಾ ಜೊತೆ ಮಾತುಕತೆ....
“ಹೇಗಿದ್ದೀಯಾ ರಮ್ಯ?”
"ಬಿಂದಾಸ್ ಸರ್"
“ಹೇಳಮ್ಮ ಅದೇನು ಮಾತು..”
"ಸರ್, ನಂದು ಎರಡು ಕಂಡೀಶನ್ ಇದೆ"
"ಏನದು"
"ಮೊದಲನೇದು ನಾನ್ ಹೇಳಿದ್ದನ್ನೆಲ್ಲಾ ಅಮ್ಮಂಗೆ ಹೇಳಬಾರದು"
"ಆಯ್ತು .... ಎರಡನೆಯದು.."
"ಸರ್ you should not flirt with me.."
ನನಗೆ ಗಲಿಬಿಲಿಯಾಯಿತು. ಯಾಕಂದ್ರೆ flirt ಅನ್ನುವ ಪದ ನನಗೆ ಹೊಸದು.
"ಏನಮ್ಮ flirt ಅಂದ್ರೆ.."
"ಅದೇ ಸರ್ ಹುಡುಗ್ರು ಲೈನ್ ಹೊಡ್ಕೊಂಡು ಹತ್ರ ಆಗಕ್ಕೆ ಬರ್ತಾರಲ್ಲ ಅದೇ..."
ರಮ್ಯಾಳ ಚಿಂತನೆಯ ಓಟಕ್ಕೆ ನನಗೆ ನಗು ಬಂತು... ವಿಷಯ ಹೊಸದಲ್ಲದಿದ್ದರೂ, ಬಹುಶಃ ಆಕೆಯ ಅನುಭವ ಹಾಗೆ ಮಾಡಿರಬೇಕು.
flirt ಪದವನ್ನು ಇಂದು ಗೂಗಲ್ ಮಾಡಿದಾಗ ಬಂದ ವಿಷಯ ವಿಸ್ತಾರ... ಅಂದಿಗಿಂತ ಹೆಚ್ಚು ತಿಳಿಯಿತು.
ಹರೆಯದ ಯುವ ಚಿಂತನೆಗಳು ಇರುವುದೇ ಹಾಗೆ... ಇದು ಎಲ್ಲರ ಜೀವನದಲ್ಲೂ ಬರುವ ಘಟ್ಟ... ಕೆಲವರು ಹೇಳಬಲ್ಲರು... ಇನ್ನು ಕೆಲವರು ಮನಸ್ಸಿನಲ್ಲಿ ಮಂಡಿಗೆ ಸವಿಯುವವರು. ಅದರಲ್ಲೂ ರಮ್ಯನಂತಹ ಆಕರ್ಷಕ ಹುಡುಗಿಯ ಸೆಳೆತ ಕಡಿಮೆಯಲ್ಲ.
“ನಂಗೆ ಮದುವೆಯಾಗಿದೆ ಮಗಳಿದ್ದಾಳೆ... ನೀನೇನು ಯೋಚನೆ ಮಾಡಬೇಡ...no flirting, ಮುಂದುವರಿಸು...”
“ ನಮ್ಮನೆ ವಾತಾವರಣ ನನಗೆ ಉಸಿರು ಕಟ್ಟಿಸುವ ಹಾಗಿರುತ್ತೆ... ತುಂಬಾ ಮಡಿ, ಪೂಜೆಗಳು, ಸಂಪ್ರದಾಯಗಳು... ಅದನ್ನೆಲ್ಲ ನನ್ನ ಮೇಲೆ ಬಲವಂತವಾಗಿ ಹೇರುವುದು. ಬಟ್ಟೆ ಹೀಗೆ ಹಾಕ್ಕೋ ಬೇಡ, ತಲೆ ಕೂದಲು ಹೀಗೆ ಕಟ್ಕೋಬೇಡ, ಹಣೆಬೊಟ್ಟು ಹೀಗಿಟ್ಟುಕೊಳ್ಳಬೇಡ.. ಹೀಗೆ ಎಲ್ಲದರ ಮೇಲೂ ಅವರ ವಕ್ರ ದೃಷ್ಟಿ. ಎಲ್ಲಕ್ಕೂ ಅಕ್ಕಂದಿರು ಹಾಗಿದ್ರು... ನೀನು ಇದ್ದೀಯಾ ಅನ್ನುವ ಹೋಲಿಕೆ. ಕಾಲೇಜು ಸೇರಿಸಕ್ಕೆ ದೊಡ್ಡ ಗಲಾಟೆ.. ಓದಿ ಏನ್ ಮಾಡಬೇಕು ಅನ್ನುವ ಧೋರಣೆ. ನನಗೆ ಅದೆಲ್ಲ ಸರಿ ಹೋಗಲ್ಲ.
ಅದಕ್ಕೆ ನನಗಿಷ್ಟ ಬಂದಂಗೆ ನಾನಿರ್ತೀನಿ, ಮನೇಲಿ ಕೊಲಾಹಲ. ನಮ್ಮಪ್ಪ ಬೈದ್ರೆ ನನಗೆ ಈಗ ಏನೂ ಅನ್ಸಲ್ಲ... ಅವರಿಗೆ ನೋವಾದರೆ ನನಗೆ ಸಂತೋಷ ಆಗುತ್ತೇನೋ ಅನ್ಸುತ್ತೆ, ನಗು ಬರುವ ಮಟ್ಟಕ್ಕೆ ಹೋಗಿದ್ದೇನೆ. ಹೌದು ನಮ್ಮಮ್ಮನ ಬಗ್ಗೆ ನನಗೆ ತುಂಬಾ ಕನಿಕರ ಇದೆ. ಮನಸ್ಸಿನಲ್ಲಿ ಆದರೂ ಅವಳು ನನ್ನ ಪರ ಇದಾಳೆ ಅಂತ ಅನ್ಸುತ್ತೆ. ಆ ಮೂರು ದಿನ ಅಂತ ಅಮ್ಮ ದೂರು ಹೇಳಿದ್ಲಲ್ಲ... ಮನೇಲಿ ಓಡಾಡಕ್ಕೂ ಅಡ್ಡಿ ಮಾಡಿದರೆ ಬೇಜಾರಾಗಲ್ವಾ.... ಆದಷ್ಟು ಮಟ್ಟಿಗೂ ರೂಮಲ್ಲಿ ಇರ್ತೀನಿ, ಆದರೂ ನಮ್ಮಪ್ಪನ ಕಿರಿಕಿರಿ ಇದ್ದಿದ್ದೆ. ಸ್ನಾನ ಮಾಡಬೇಕು ಅಂದ್ರೆ.. ನೂರು ಅಡ್ಡಿಗಳು... ಮಡಿ ಮಡಿ ಅಂತಾರೆ... ನಾನು ಕೊಳಕು ಕೊಳಕಾಗಿ ಇರಬೇಕಾ... ಮುಟ್ಟು.. ಹೆಣ್ಣಿಗೆ ದೇವರು ಕೊಟ್ಟ ವರ ಅಂತಾರೆ.. ಆದರೆ ನನಗದು ಸದ್ಯಕ್ಕಂತೂ ಶಾಪ ಆಗಿದೆ. ಕಾಲೇಜಿಗೆ ಹೋಗಬೇಕಾದರೆ ನನ್ನ ಮನಸ್ಸು ಹಗುರಾಗಿರಬೇಕು ತಾನೆ?
ನೀವೇ ಹೇಳಿ ನಾನು ಸ್ನಾನ ಮಾಡೋದೆ ತಪ್ಪಾ...? ನನ್ನ ಸ್ನೇಹಿತರ ಮನೇನಲ್ಲಿ ಈ ಮಟ್ಟದ ಬಂಧನ ಇಲ್ಲ, ದೇವರ ಮನೆಗೆ, ಅಡಿಗೆ ಮನೆಗೆ ಹೋಗಲ್ಲ, ಮಿಕ್ಕ ಕಡೆ ಯಾವ ಅಡೆತಡೆಯು ಇಲ್ಲ. ಈ ವಿಚಾರ ಮನೆಯ ಗಂಡಸರಿಗೆ ಗೊತ್ತೇ ಆಗಿರಲ್ಲವಂತೆ.. ನಮ್ಮನೇಲೋ ಜಗಜ್ಜಾಹೀರು "
ರಮ್ಯಳ ಮಾತು ಬೇಜಾರಿನ ಘಟ್ಟವನ್ನು ಮುಟ್ಟಿತ್ತು.. ಒಂದಷ್ಟು ಕೋಪವೂ ಬೆರೆತಿತ್ತು. ಕಣ್ಣಲ್ಲಿ ನೀರು ತುಂಬಿತ್ತು, ಅದನ್ನು ಮುಚ್ಚಿಡುವ ಧೀರ ಪ್ರಯತ್ನ ಎದ್ದು ಕಾಣುತ್ತಿತ್ತು.
ಏನು ಹೇಳಲೂ ಸಾಧ್ಯವಾಗದ ನಾನು
"Rebellion Ramya... ಆಗಿದ್ದೀಯಾ ಅನ್ನು" ಅಂತ ತಮಾಷೆ ಮಾಡಿದೆ. ಸಮ್ಮತಿ ಸೂಚಿಸುವಂತೆ ತಲೆಯಾಡಿಸಿದಳು... ಜೊತೆಗೆ ಕಣ್ಣೀರ ಹನಿಯೂ ಆಚೆ ಬಂದಿತು.
" ಹೇಗಿದ್ದೀಯಾ ಅಂದಾಗ ಬಿಂದಾಸ್ ಅಂತ ಉತ್ತರ ಕೊಟ್ಟೆಯಲ್ಲ... ಬಿಂದಾಸ್ ನ ವಿವರಿಸ್ತೀಯಾ" ಅಂತ ಮಾತು ಶುರು ಮಾಡಿದೆ...
" ಮನೆಯಿಂದ ಆಚೆ ಹೊರಟ್ರೆ ನಾನು free bird... ಫ್ರೆಂಡ್ಸ್ ಜೊತೆಯಲ್ಲಿ ಹಾಯಾಗಿರ್ತೀನಿ. ಕ್ಲಾಸಿಗೆ ಚಕ್ಕರ್ ಹೊಡೆದು ಹೋಟೆಲ್, ಸಿನಿಮಾಗೆ ಹೋಗ್ತೀವಿ. ನಮ್ ಜೊತೆ ನಾಲ್ಕು ಹುಡುಗರಿದ್ದಾರೆ... ಅದರಲ್ಲಿ ಒಬ್ಬ ಹುಡುಗ ನನ್ನ ಜೊತೆ ತುಂಬಾ ಫ್ರೀಯಾಗಿರುತ್ತಾನೆ.. ನನ್ನ ಮನೆ ವಿಚಾರ ಎಲ್ಲ ಕೇಳಿ, ನಾನು ಮಾಡಿದ್ದು ಸರಿ ಅಂತಾನೆ... ಎಲ್ಲಾ ಸೇರಿ ಮಜವಾಗಿರ್ತಿವಿ.
(ಅಡ್ಡದಾರಿ ಕಡೆ ನೋಟನಾ.. ಅನ್ನಿಸ್ತು).
ಸರ್ ನಮ್ಮಮ್ಮಂಗೆ ಹೇಳಲ್ಲ ಅಂತ ಪ್ರಾಮಿಸ್ ಮಾಡಿದರೆ ಇನ್ನೊಂದಷ್ಟು ವಿಷಯ ನಿಮ್ಮತ್ರ ಹೇಳ್ತೀನಿ... ಪ್ರಾಮಿಸ್”
“ಪ್ರಾಮಿಸ್” ಅಂದೆ,
ಅಂಗೈ ಮುಂದೆ ಚಾಚಿದಳು... ನನ್ನ ಕೈಯಿಟ್ಟು ಪ್ರಾಮಿಸ್ ಅಂತ ಮತ್ತೆ ಹೇಳಿದೆ.
“ ಹೋದ ವಾರ ನಾವೆಲ್ಲ ಲಾಲ್ ಬಾಗ್ ಗೆ ಹೋಗಿದ್ದೆವು... ಮಾತಾಡ್ತಾ... ಮಾತಾಡ್ತಾ ಆ ಹುಡುಗ ಒಂದು ಸಿಗರೇಟ್ ತೆಗೆದು ಹಚ್ಚಿ, ತಾನು ಸೇದಿ.. ಇನ್ನಿಬ್ಬರಿಗೂ ಕೊಟ್ಟು... ನಂತರ ಹುಡುಗೀರಿಗೆ ಪ್ರಯತ್ನ ಮಾಡಿ ಅಂತ ಹೇಳಿದ... ನಾವು ಹಿಂಜರಿದೆವು.. ಆದರೆ ಬಲವಂತ ಮಾಡಿ.. ನನ್ನನ್ನ ಉಬ್ಬಿಸಿ... ನಿಮ್ಮಪ್ಪಂಗೆ ನೀನು ಹೆದರ್ಕೊಳಲ್ವಲ್ಲ, ಒಂದ್ ಸಲ ಟ್ರೈ ಮಾಡು ಏನು ಆಗಲ್ಲ ಅಂತ ಪುಸಲಾಯಿಸಿದ.. ನಾನು ಒಂದು ಕೈ ನೋಡೋಣ ಅಂತ ಟ್ರೈ ಮಾಡಿದೆ.. ಒಂತರಾ ಮಜವಾಗಿತ್ತು ಅನ್ನಿಸ್ತು. ಮುಂದಿನ ವಾರದ ಟ್ರಿಪ್ ಗೆ, ಇನ್ನು ವಿಶೇಷವಾದ ಸಿಗರೇಟ್ ತರ್ತೀನಿ, ಬೀರ್ ತರ್ತೀನಿ, ಸಾಧ್ಯ ಆದರೆ ಒಂದು ರಾತ್ರಿ ಉಳಿಯೋಣ ಅಂದಿದ್ದಾನೆ... ನನ್ನ ಸ್ನೇಹಿತೆಯರು ಯಾರು ಬರಕ್ಕೆ ಒಪ್ಪಲಿಲ್ಲ.. ಹೋದ್ರೆ ಮಜವಾಗಿ ಇರುತ್ತೆ ಅನ್ನಿಸುತ್ತೆ. "
ನನಗೆ ಅಧೀರತೆ ಕಾಡಿತು. ಹೇಗೆ ಮುಂದುವರಿಯಬೇಕು... ಅಡ್ಡದಾರಿಲಿ ನಿಂತಿರುವ ಈ ಹುಡುಗೀನ ಎಚ್ಚರಿಸುವುದು ಹೇಗೆ ಅಂತ ಯೋಚನೆ ಮಾಡಿದೆ. ಹೇಗಾದರಾಗಲಿ ಒಂದು ಪ್ರಯತ್ನ ಮಾಡೋಣ ಅನಿಸಿ...
" ನೀನು ಸರಿಯಾದ ಸ್ನೇಹಿತರ ಜೊತೆಯಲ್ಲಿ ಇದ್ದೀಯ ಎಂದು ಅನಿಸುತ್ತಾ?"
" "
" ಆ ಹುಡುಗನ ಉದ್ದೇಶ ಏನಿದೆ ಅಂತ ನೀನು ಯೋಚನೆ ಮಾಡಿದ್ದೀಯಾ?"
" ”
" ನಿಮ್ಮಪ್ಪನ ಮೇಲಿನ ಕೋಪಕ್ಕೆ, ಅವರಿಗೆ ನೋವು ಮಾಡಬೇಕು ಅನ್ನೋ ನಿನ್ನ ಮನಸ್ಸಿನ ಭಾವನೆಗೆ, ನೀನ್ ಹೀಗೆಲ್ಲಾ ಮಾಡ್ತಿದ್ದೀಯಾ ಅಂತ ಅನ್ಸಲ್ವಾ? ”
“ ”
“ ಅಪ್ಪನ ಮೇಲಿನ ಕೋಪ, ಮನೆ ಮೇಲಿನ ಬೇಜಾರು ಪಕ್ಕಕ್ಕಿಟ್ಟು, ಒಬ್ಬ ಹೆಣ್ಣು ಮಗಳಾಗಿ, ಯೋಚನೆ ಮಾಡು...ನೀನು ಎಂಥ ಚಕ್ರವ್ಯೂಹದೊಳಗೆ ಹೋಗ್ತಾ ಇದ್ದೀಯಾಂತ. ಅದು ಇಳಿಜಾರು...ಮೇಲೆ ಬರೋದು ಬಹಳ ಕಷ್ಟ "
“ ”
"ಮಾತಾಡು ರಮ್ಯಾ, ನಿನ್ನ ಮನಸ್ಸಿನಲ್ಲಿ ಏನ್ ನಡಿತಾ ಇದೆ ಅಂತ, ಹೇಳು. ಬರೀ ಇಮೋಶನಲ್ಲಾಗಿ ಯೋಚಿಸಬೇಡ... ಪ್ರಾಕ್ಟಿಕಲ್ ಆಗಿ ಯೋಚನೆ ಮಾಡು..."
" ಸರ್ ತಲೆ ಸಿಡಿತಾ ಇದೆ, ನಾನು ಮನೆಗೆ ಹೋಗ್ಲಾ ಸರ್..."
" ಆಯ್ತಮ್ಮ ಹೋಗು... ನಾನು ಕೇಳಿದ ಪ್ರಶ್ನೆಗೆ ಉತ್ತರ ಕಂಡುಕೊಂಡು ಬಾ ಆಮೇಲೆ ಮಾತಾಡೋಣ" ಅಂತ ಹೇಳಿ ಕಳುಹಿಸಿದೆ.
ನನ್ನ ಮನಸ್ಸು ಹೇಳ್ತು... ಇನ್ನು ಆ ಹುಡುಗಿ ಬರೋದು ಅನುಮಾನ ಅಂತ.
ಅದಕ್ಕೆ ತಕ್ಕ ಹಾಗೆ, ಎರಡು ವಾರಗಳು ರಮ್ಯಾ ಮುಖ ತೋರಿಸಲಿಲ್ಲ. ಮುಂದಿನ ವಾರ ಅಮ್ಮ ಮಗಳು ಇಬ್ಬರೂ ಬಂದರು.
" ಎರಡು ವಾರದಿಂದ ರಮ್ಯಾ ಸಪ್ಪಗಿದ್ದಾಳೆ, ಮಾತು ಕಡಿಮೆಯಾಗಿದೆ.. ರಂಪ ಮಾಡ್ತಿದ್ದಾಗ ಕೋಪ ಬರೋದು.. ಈಗ್ಯಾಕೋ ಭಯ ಆಗ್ತಾ ಇದೆ ನನಗೆ... ಏನ್ ಮಾತಾಡಿದ್ಳು ನಿಮ್ಮ ಹತ್ರ ಅಂತ ಹೇಳ್ತೀರಾ..."
" ಮೊದಲು ರಮ್ಯ ಹತ್ರ ಮಾತಾಡ್ತೀನಿ ಆಮೇಲೆ ನಿಮಗೆ ಉತ್ತರ ಹೇಳ್ತೀನಿ... ಸ್ವಲ್ಪ ಹೊತ್ತು ಆಚೆಕಡೆ ಕೂತಿರಿ" ಆಚೆ ಕಳುಹಿಸಿದೆ.
" ಮಾತಾಡು ರಮ್ಯ...."
" ಸರ್ ನಿಮ್ಮ ಪ್ರಶ್ನೆ ಕೇಳಿದ ತಕ್ಷಣ ಮೊದಲು ಬಂದಿದ್ದು ನಿಮ್ಮ ಮೇಲೆ ಕೋಪ, ಹುಡುಗನ ಉದ್ದೇಶ ಅನ್ನುವ ಪ್ರಶ್ನೆಗೆ ಏನೋ ಗೊಂದಲ, ಆಮೇಲೆ ನನ್ ಮೇಲೆ ನನಗೆ ಅನುಮಾನ, ಕೊನೆಗೆ ಅನಿಸಿದ್ದು, ನೀವು ನನಗೆ ಎಚ್ಚರಿಕೆ ಕೊಡ್ತಾ ಇದ್ದೀರಾ... ಮುಂದುವರಿಯೋದು ಬೇಡ ಅನ್ನುವ ಸೂಚನೆ. ಬರೀ ಗೊಂದಲ, ಏನೋ ಆತಂಕ, ತಳಮಳ.
ಎರಡು ದಿನ ಕಾಲೇಜ್ ಗೆ ಹೋಗ್ಲಿಲ್ಲ... ಆಮೇಲೆ ನನ್ನ ಸ್ನೇಹಿತೆಯರನ್ನ ಭೇಟಿ ಮಾಡ್ದೆ... ನಿಮ್ಮತ್ರ ಮಾತಾಡಿದ್ದು ಹೇಳ್ದೆ.... ಸಾಕಷ್ಟು ಆಗು ಹೋಗುಗಳನ್ನ ಚರ್ಚೆ ಮಾಡಿದ್ವಿ... ಟ್ರಿಪ್ ಬಗ್ಗೆ ಮಾತಾಡಿದ್ವಿ... ಯಾವುದೋ ಸಿನಿಮಾದಲ್ಲಿ ನಡೆದ ಇಂತದ್ದೇ ಘಟನೆ ನನ್ನ ಸ್ನೇಹಿತೆ ವಿವರವಾಗಿ ಹೇಳಿದ್ಲು... ಆ ಹುಡುಗಿಯ ಮನಸ್ಸು ಮತ್ತು ದೇಹದ ಮೇಲೆ ಆದ ಪರಿಣಾಮ ಕೇಳಿ... ನನಗೆ ನನ್ನ ಮೇಲೆ ಬೇಜಾರ್ ಬಂತು. ನಾವೆಲ್ಲ ಇನ್ಮೇಲೆ ಆ ಹುಡುಗರ ಜೊತೆ ಸೇರಲ್ಲ ಅಂತ ನಿರ್ಧಾರ ಮಾಡಿ, ಅವರಿಂದ ದೂರ ಇದ್ದೀವಿ... ಅವರು ಮಾತಾಡ್ಸುವ ಪ್ರಯತ್ನಕ್ಕೆ ಸ್ಪಂದಿಸಿಲ್ಲ. ... ನನ್ನ ಮನಸ್ಸು ಇನ್ನೂ ಗೊಂದಲದ ಗೂಡು... ಏನ್ ಮಾಡಬೇಕು ಹೇಳಿ ಸರ್...."
" ರಮ್ಯ.. ಒಂದು ಹಂತದಲ್ಲಿ ನಿನ್ನ ಮೇಲೆ ನಂಬಿಕೆನೇ ಕಳ್ಕೊಂಬಿಟ್ಟಿದ್ದೆ.... ದಾರಿ ತಪ್ತಿದ್ದೀಯಾ ಅಂತ... ಆದರೆ ಇವತ್ತು ಭೇಷ್ ಅನ್ನುವಷ್ಟು ಸಂತೋಷ ಹಾಗೂ ಹೆಮ್ಮೆ ಅನಿಸ್ತಾ ಇದೆ.... ನೀನ್ ಮಾಡಿರೋ ನಿರ್ಧಾರ ತುಂಬಾ ಸರಿ ಇದೆ. ಒಂದು ಸಣ್ಣ ಬದಲಾವಣೆ ಮಾಡ್ಕೊಳಕ್ಕೆ ಸಾಧ್ಯ ಆದರೆ ನಿನ್ನ ಮನಸ್ಸು ಶಾಂತವಾಗಿರುತ್ತೆ.
ನಿಮ್ಮಪ್ಪ ಅಮ್ಮ ಬೆಳೆದು ಬಂದ ವಾತಾವರಣ ಅವರ ಯೋಚನಾ ಲಹರಿಯನ್ನು ನಿರ್ಧರಿಸುತ್ತೆ. ನಿನಗೆ ಅದು ಸಂಪೂರ್ಣ ಒಪ್ಪಿಗೆ ಇಲ್ಲದಿರಬಹುದು... ಆದರೆ ಅದನ್ನ ತಪ್ಪು ಅಂತ ಹೇಳಕ್ಕಾಗಲ್ಲ... ಅಲ್ವಾ?
ನೀನು ಹೇಗೆ ನಿನ್ನ ಭಾವನೆಗಳನ್ನ ಗೌರವಿಸಬೇಕು ಅಂತಿಯೋ ಅದೇ ತರಹ ನೀನು ಸಹ ಅವರ ಭಾವನೆನಾ ತಕ್ಕಮಟ್ಟಿಗೆ ಗೌರವಿಸ್ಬೇಕು ಅಲ್ವಾ?
ನಿನ್ನ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅದನ್ನ ಸಮಾಧಾನವಾಗಿ ಮಾತಾಡಿ ಒಂದು ಮಧ್ಯದ ದಾರಿ ಕಂಡುಕೋ ಬೇಕಲ್ವಾ?
ಯೋಚನೆ ಮಾಡು ಮುಂದೆ ನಿನ್ನ ಮಗಳು, ನಿನಗೆ... ಕಾಟ ಕೊಟ್ಟರೆ ನಿನ್ನ ಪರಿಸ್ಥಿತಿ ಹೇಗಿರುತ್ತೆ?....
ಬದಲಾವಣೆ ಮೊದಲಿಗೆ ಕಷ್ಟ ಅನಿಸಿದರೂ ಸಾಧ್ಯ ಆಗುತ್ತೆ... ಅದರಲ್ಲೂ ನಿನ್ನ ಬದಲಾದ ಯೋಚನಾಲಹರಿಯ ಕಾರಣ ಇನ್ನೂ ಸುಲಭ.
ಜೀವನದಲ್ಲಿ ಒಂದಷ್ಟು ಶಿಸ್ತು, ಸಂಯಮ, ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ಇವೆಲ್ಲ ಇರಬೇಕು , ಆಗಲೇ ಜೀವನಕ್ಕೆ ಒಂದು ಗುರಿ, ಜೊತೆಗೆ ಮನಸ್ಸಿನ ನೆಮ್ಮದಿ.
ಪ್ರಯತ್ನ ಮಾಡು ಒಳ್ಳೆಯದಾಗಲಿ, ಯಾವಾಗ ಬೇಕಾದರೂ ಬಂದು ನನ್ನ ಜೊತೆ ಮಾತಾಡಬಹುದು....
ಅಮ್ಮನ್ನ ಕಳಿಸು ಅವರ ಜೊತೆ ಸ್ವಲ್ಪ ಮಾತಾಡ್ತೀನಿ."
ಭಾಗ್ಯಮ್ಮನ ಮುಖದಲ್ಲಿ ಆತಂಕ ಇತ್ತು..
"ಏನೂ ತೊಂದರೆ ಇಲ್ಲ ಮಗಳು ಆರಾಮಾಗಿದ್ದಾಳೆ. ಅವಳಿಗೆ ನಾನು ಮಾಡಿದ್ದು ತಪ್ಪು ಅನಿಸಿದೆ. ನೀವು ಈಗ ಒಂದಷ್ಟು ಬದಲಾವಣೆ ಮಾಡ್ಕೋಬೇಕು. ನಿಮ್ಮ ಮನೆಯವರಿಗೆ ಹೇಳಿ... ಅವರು ಕೋಪದಲ್ಲಿ ಹೇಳಿದ "ಮನೆ ಬಿಟ್ಟು ಹೋಗು" ಅನ್ನುವ ಮಾತಿಗೆ ಅವಳು ಮನೆ ಬಿಟ್ಟು ಹೋದರೆ.. ನಿಮ್ಮ ಸಂಸಾರದ ಮರ್ಯಾದೆಯ ಪ್ರಶ್ನೆ ಏನಾಗುತ್ತೆ? ನಿಮ್ಮ ಮಡಿ ಹೆಚ್ಚೋ ಅಥವಾ ಮಗಳು ಹೆಚ್ಚೋ ಯೋಚಿಸಿ. ಮಾತಾಡಿದರೆ ಮುಗೀತು... ಅಷ್ಟು ಕಾಠಿಣ್ಯ ಬೇಡ. ಈಗಿನ ಕಾಲಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳಬೇಕಾದ ಅಗತ್ಯ ಇದೆ. ನೀವು ಮನಸ್ಸು ಮಾಡಿ ಮಗಳ ಜೊತೆಯಲ್ಲಿ ಸಮಾಧಾನವಾಗಿ ಮಾತಾಡಿ.. ಒಂದು ಮಧ್ಯದ ದಾರಿ ಕಂಡುಕೊಳ್ಳಿ.
ಯೋಚನೆ ಮಾಡಿ, ಜೀವನದ ಒಂದು ಹಂತದಲ್ಲಿ, ನೀವು ರಮ್ಯನ ಆಶ್ರಯದಲ್ಲೇ ಇರಬೇಕಾದರೆ, ನಿಮ್ಮ ಈ ಕಾಠಿಣ್ಯಕ್ಕೆ ಗೌರವ ಬಂದೀತೆ? ನೀವುಗಳೂ ಬದಲಾಗಬೇಕಲ್ಲವೇ? ಪ್ರಯತ್ನಿಸಿ ಒಳ್ಳೆದಾಗಲಿ."
ಕೆಲಕ್ಷಣ ಸುಮ್ಮನಿದ್ದ ಭಾಗ್ಯಮ್ಮ...
" ಆ ದೇವರೇ ನನ್ನ ಗಂಡನಿಗೆ ಸಹನೆ ತಾಳ್ಮೆ ಕೊಡಬೇಕು... ನಾನು ಪ್ರಾರ್ಥನೆ ಮಾಡಬಹುದಷ್ಟೇ...ಪ್ರಯತ್ನ ಅಂತೂ ಮಾಡ್ತೀನಿ"
ಅವರ ಅಸಹಾಯಕತೆ ನೋಡಿ ನಾನು ಮರುಗಿದೆ.
D C Ranganatha Rao
9741128413


ತುಂಬಾ ಚೆನ್ನಾಗಿದೆ ಚಿಕ್ಕಪ್ಪ
ReplyDeleteಆಧುನಿಕ ಜಗತ್ತಿಗೆ ಮಡಿವಂತರು ಸ್ವಲ್ಪ ಹೊಂದಿಕೊಂಡರೆ ಮಕ್ಕಳು ಒಳ್ಳೆ ನಡತೆಯಲ್ಲೆ ಇರುತ್ತಾರೆ ಎನ್ನುವ ಸಂದೇಶವನ್ನು ಬಹಳ ಸರಳ ವಾಗಿ ಬರೆದಿದ್ದೀರಿ sir
ReplyDeleteNice
Deleteಮನಸ್ಸಿಗೆ ಬಹಳ ಹತ್ತಿರವಾದ ನೈಜ ಘಟನೆ...😊😊
ReplyDeleteರಮ್ಯಾ ಈಗ 2 ಮಕ್ಕಳ ತಾಯಿ ..ನಾನು ಆಗ ಹಾಗಿದ್ದೆ ..ನನ್ನ ಮಕ್ಕಳಿಗೆ ಈ ಮಡಿ ಮೈಲಿಗೆ ಬಗ್ಗೆ ಅಷ್ಟೊಂದು ಒತ್ತಡ ಹಾಕಬಾರದು ಎಂದು ರಮ್ಯಾ ಅಂದುಕೊಂಡು ಮಕ್ಕಳನ್ನು ಬೆಳೆಸುತ್ತಿದ್ದರೂ ಬೇರೆ ತರಹ challengeಗಳು ಇರುತ್ತದೆ.. ಇದುವೇ ಜೀವನ..
ಈಗ ತುರಿಕೆ ಸೊಪ್ಪಿನಲ್ಲಿ ಒಂದೆರಡು ತುಳಸೀ ದಳ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ಕೆಲವೊಂದು ಮನೆಗಳಲ್ಲಿ
ಉತ್ತಮ ಲೇಖನ 👌👌🙏🙏
ReplyDeleteತುಳಸೀ ತೋಟದಲ್ಲಿ ತುರಿಕೆ ಸೊಪ್ಪು ಶೀರ್ಷಿಕೆ ಗಮನ ಸೆಳೆಯಿತು. ಸುಲಭವಾಗಿ ಓದಿಸಿಕೊಂಡಿತು ಸಧ್ಯ ಹುಡುಗಿ ಸರಿದಾರಿಗೆ ಬಂದಳು ಎಂಬ ಸಮಾಧಾನ ಆಯಿತು.ತಮ್ಮ ಸಮಾಜದೆಡೆಗಿನ ನೋಟ ವೆರಿ ಪಾಸಿಟಿವ್
ReplyDeleteರಮ್ಯಾಳದು ಅದೇ ಹರೆಯದ ಹಸಿಹಸಿತನ.. ಇದು ಸಾಮಾನ್ಯವಾಗಿ ಕೆಲವು ಹೆಣ್ಣು ಮಕ್ಕಳಲ್ಲಿ ಇರಬಹುದು. ಇದಕ್ಕೆ ಆಟ ಪಾಠಗಳು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುವುದು, ಹಿರಿಯರ ಮಾರ್ಗದರ್ಶನ, ಆಪ್ತ ಸಮಾಲೋಚಕರ ಸಲಹೆ ಸೂಚನೆ ಇವುಗಳೆ ಮದ್ದು. ಹದಿಹರೆಯ ದಾಟಿದರೆ ತಮಗೆ ತಾವೇ ಸರಿ ಹೋಗುತ್ತಾರೆ. ಅಲ್ಲಿಯವರೆಗೂ ಎಚ್ಚರಿಕೆ ಅತ್ಯಗತ್ಯ.
ReplyDeleteಯುವ ಮನಸ್ಸುಗಳು ಈ ಪ್ರಪಂಚದಲ್ಲಿ ತಮಗೊಬ್ಬರಿಗೆ ಯೌವ್ವನ ಬಂದಿದೆ ಎಂದು ತಿಳಿಯುವುದೇ ಈ ಸಮಸ್ಯೆಗೆಲ್ಲ ಮೂಲ ಕಾರಣ.
ಲೇಖಕರ ಈ ವೃತ್ತಿ ಇಂತಹ ಅದೆಷ್ಟೋ ಜನರಿಗೆ ಹೊಸ ಬೆಳಕನ್ನು ಮೂಡಿಸಿರುವುದು ಸಂತಸದ ಹಾಗೂ ಹೆಮ್ಮೆಯ ಸಂಗತಿ. ಇದು ಹೀಗೆ ಮುಂದುವರೆಯಲಿ ಎಂದು ಆಶಿಸೋಣ.
ಗುರು ಪ್ರಸನ್ನ
ಚಿಂತಾಮಣಿ
ತುಂಬಾ ಚೆನ್ನಾಗಿ ಬರೆದಿದ್ದೀರಾ, ಹದಿಹರೆಯದ ಆಸೆ ಆಕಾಂಕ್ಷೆಗಳನ್ನು ಹತ್ತಿಕ್ಕಲು ಸಾಧ್ಯವಾಗದೆ, ತಾಯಿಗಳು ಅಡ್ಡಿಪಡಿಸುತ್ತಾರೆ ಎಂದು ವಿರೋದಿಸುತ್ತಾರೆ. ಹುಚ್ಚು ಮನಸ್ಸಿನ ವಯಸ್ಸು. ಬದಲಾವಣೆ ಆಗಿದ್ದು ಇಷ್ಟ ಆಯ್ತು.
ReplyDeleteಹಿಂದಿನ ನೆನಪಿನಿಂದ ಮುಂದಿನ ರಮ್ಯಳ ಭೇಟಿ ಮಾತುಕತೆ ಇದ್ದಿದ್ದರೆ ಚೆನ್ನಾಗಿತ್ತು. ಪರಿಪೂರ್ಣ ಆಗ್ತಾ ಇತ್ತು. ಒಟ್ಟಿನಲ್ಲಿ ಚೆನ್ನಾಗಿದೆ, ಧನ್ಯವಾದಗಳು🙏
ರತ್ನಪ್ರಭಾ