ಹುಟ್ಟಿದ ಹಬ್ಬ
ಸಾಮಾಜಿಕ ಜಾಲತಾಣವೇ ಸಂಪರ್ಕ ಮಾರ್ಗವಾಗಿ ಮಂಚೂಣಿಯಲ್ಲಿರುವ, ಇಂದಿನ ಕಾಲಘಟ್ಟದಲ್ಲಿ, ಯಾವುದೇ ಸಂದರ್ಭವಿರಲಿ ಪ್ರತಿಕ್ರಿಯೆಗಳು, ಸ್ಪಂದನೆಗಳು... ಯಾಂತ್ರಿಕವಾಗುತ್ತಿವೆ.. ಅದರಲ್ಲೂ ಗುಂಪುಗಳಲ್ಲಿ ವಿನಿಮಯವಾಗುವ ವಿಚಾರಕ್ಕಂತು.. ಇದು ಇನ್ನೂ ಹೆಚ್ಚು ಅನ್ವಯಿಸುತ್ತದೆ. ಯಾರಾದರೂ ಸತ್ತ ಸುದ್ದಿ ಯನ್ನು ನೋಡಿದ ತಕ್ಷಣ, ಸತ್ತವರು ಯಾರು ಎಂದು ತಿಳಿಯದಿದ್ದರೂ ಸಹ.. RIP, ಓಂ ಶಾಂತಿ, 🙏🏼 🌹 ಹೀಗೆ ಬರೆದರೆ ಮುಗೀತು.
ಇನ್ನು ಹುಟ್ಟುಹಬ್ಬಕ್ಕಂತು HBD ಎಂದು ಬರೆದು ಕೈ ತೊಳೆದು ಕೊಂಡರಾಯಿತು. ಅದು ಒಂದು ಸಾಮಾಜಿಕ ಜವಾಬ್ದಾರಿಯೇನೋ... ಅದನ್ನು ನಿರ್ವಹಿಸದಿದ್ದರೆ ಅಪರಾಧವೇನೋ ಎನ್ನುವ ರೀತಿಯಲ್ಲಿ ಮಾಡುವುದು. ಇನ್ನು ಕೆಲವರು ಅದನ್ನು forwarded message ಮೂಲಕ ಮಾಡುತ್ತಾರೆ. ಇದೆಲ್ಲ ಗಮನಿಸಿದಾಗ.. ಭಾವನೆಯೇ ಕಣ್ಮರೆಯಾಗಿದೆಯೇನೋ ಅನಿಸುತ್ತದೆ.
ಇದೇ ಸಾಮಾಜಿಕ ಜಾಲತಾಣದಲ್ಲಿ ನನಗೂ ಇತ್ತೀಚೆಗೆ ಜನ್ಮದಿನದ ಶುಭಾಶಯಗಳ ಸುರಿಮಳೆ ಯಾಗುತ್ತದೆ, ನಿಜ ಹೇಳಲೇ... ಖುಷಿಯೂ ಆಗುತ್ತದೆ... ಎಷ್ಟೊಂದು ಜನ ಯಾಂತ್ರಿಕವಾಗಿಯಾದರೂ ನನ್ನನ್ನು ನೆನೆಸಿಕೊಂಡಿದ್ದಾರೆ ಎಂದು.
ಹುಟ್ಟು ಹಬ್ಬದ ಆಚರಣೆ, ಚಿಕ್ಕಂದಿನಲ್ಲಿ ಕಂಡು ಕೇಳರಿಯದ ಸಂಗತಿ. ನನಗೆ ಎರಡು ಹುಟ್ಟಿದ ದಿನಾಂಕಗಳಿವೆ. ಒಂದು ನಾನು ನಂಬಿರುವ ಜಾತಕದಲ್ಲಿ ಇರುವ 30.03.1948... ಎರಡನೆಯದು ನನ್ನ ಎಲ್ಲ ದಾಖಲಾತಿಗಳಲ್ಲಿ ಇರುವ,04.05.1947. ಈ ಎರಡರಲ್ಲೂ ನನಗೆ ಹುಟ್ಟು ಹಬ್ಬದ ಶುಭಾಶಯಗಳ ಸಂದೇಶ ಬರುತ್ತದೆ.
ಮೊದಲನೆಯದು ಯುಗಾದಿ ಹಬ್ಬಕ್ಕೆ ಹತ್ತಿರವಿತ್ತು ಎನ್ನುವ ಕಾರಣಕ್ಕಾಗಿ ನನ್ನ ಹುಟ್ಟುಹಬ್ಬ ಯುಗಾದಿಯ ಸಂಭ್ರಮದೊಂದಿಗೆ ಮಿಳಿತವಾಗುತ್ತಿತ್ತು, ಎಂದು ಕೇಳಿದ್ದೇನೆ. ನಮ್ಮಮ್ಮನಿಗೆ ಇದ್ದ ಏಳು ಮಕ್ಕಳಿಗೆ ಹುಟ್ಟುಹಬ್ಬ ಮಾಡುವ ಪರಿಪಾಠ ಆಗ ಇರಲು ಸಾಧ್ಯವೇ?
ಬಹುಶಃ ನನ್ನ ಹುಟ್ಟುಹಬ್ಬವನ್ನು ಗುರುತಿಸಿ ಆಚರಿಸಿದ್ದು ನನ್ನ ಹೆಂಡತಿಯೇ. ಇಲ್ಲದಿದ್ದರೆ ಆ ದಿನವೂ ಸಾಮಾನ್ಯ ದಿನವೇ ಆಗಿರುತ್ತಿತ್ತು.
ನನಗಿರದ ಹುಟ್ಟು ಹಬ್ಬದ ಪ್ರಾಮುಖ್ಯತೆಯ ಪರಿಣಾಮವಾಗಿ ನನ್ನ ಹೆಂಡತಿಯ ಹುಟ್ಟುಹಬ್ಬವನ್ನು ನೆನಪಿಸಿಕೊಳ್ಳದೆ ಆಕೆಯ ಕೋಪಕ್ಕೆ ಗುರಿಯಾದ ವರ್ಷಗಳು ಇವೆ. ಆದರೆ ನನ್ನ ಮಗಳಿಗೆ ತಿಳುವಳಿಕೆ ಬಂದ ಮೇಲೆ ಅವಳ “ಹೂ ತಗೊಂಡು ಅಮ್ಮನಿಗೆ ಕೊಡು... ಶುಭಾಶಯ ಹೇಳು” ಎಂಬ ಎಚ್ಚರಿಕೆ ನನಗೆ ಸಹಾಯವಾಗಿತ್ತು.
ಈಗೀಗ ಆ ದಿನವನ್ನು ಮೊದಲೇ ಕ್ಯಾಲೆಂಡರ್ ನಲ್ಲಿ ಗುರುತು ಮಾಡಿ.. ನನಗೆ ನೆನಪಿಸುವ ಹಾಗೆ ಮಾಡಿಕೊಂಡು ಸಂಕಷ್ಟದಿಂದ(?) ಪಾರಾಗಿದ್ದೇನೆ.
ಇದೆಲ್ಲದರ ಮಧ್ಯೆ, ಭಾವನೆಗಳ ತರಂಗಗಳನ್ನೇ ಎಬ್ಬಿಸಿದ ಒಂದು ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ನಾನು ಸಾಕ್ಷಿಯಾದೆ, ಅದೊಂದು ಅಭೂತಪೂರ್ವ ಅನುಭವ.
ಮೊನ್ನೆ ಶನಿವಾರ ಸಂಜೆ ಸುಮಾರು 6.30 ರ ಸಮಯ ನಮ್ಮ ಮನೆಗೆ ಬಂದವರು ಸುಮಾರು 30 ಜನ. ಇಬ್ಬರು ಗೆಳತಿಯರನ್ನು ಬಿಟ್ಟರೆ ಮಿಕ್ಕವರೆಲ್ಲ ನನ್ನ ಹೆಂಡತಿ ವಿಜಯಳ ಚಿಕ್ಕಪ್ಪನ ಕುಟುಂಬದವರು ಹಾಗೂ ತಮ್ಮ ತಂಗಿಯರ ಕುಟುಂಬದವರು. ಬಂದಿದ್ದು ಅಡುಗೆಯನ್ನು ಹೊತ್ತ ಭಟ್ಟರ ಸಮೇತ... ಉದ್ದೇಶ ವಿಜಯಳ 70 ನೇ ಹುಟ್ಟಿದ ಹಬ್ಬವನ್ನು ಆಚರಿಸುವುದು. ಇದು ಅವಳಿಗೆ ತಿಳಿಯದಂತೆ, ಆಶ್ಚರ್ಯಕರವಾಗಿ ಇರಲೆಂದು ಯೋಜಿಸಿದ ಕಾರ್ಯಕ್ರಮ. ಇದಕ್ಕೆ ನಾನು, ನನ್ನ ಮಗಳು ಪೂರಕವಾಗಿ ಸಹಭಾಗಿಗಳು.
ಕಾಕತಾಳಿಯವೋ ಎಂಬಂತೆ ಆ ಸಮಯದಲ್ಲಿ ನನ್ನ ಹೆಂಡತಿ ಶೌಚಾಲಯಕ್ಕೆ ಹೋಗಿದ್ದದ್ದು, ಯೋಜಿಸಿದ ಕಾರ್ಯಕ್ರಮಕ್ಕೆ ಇಂಬು ಕೊಟ್ಟಿತ್ತು. ಎಲ್ಲರೂ ಮನೆಯೊಳಗೆ ಸೇರಿಕೊಂಡು ದೀಪಗಳನ್ನು ಆರಿಸಿ ಕಾಯುತ್ತಿದ್ದ ಸಮಯದಲ್ಲಿ, ಹೊರಗೆ ಬಂದ ವಿಜಯಳಿಗೆ ಶುಭಾಶಯ ಹೇಳುತ್ತಾ ದೀಪಗಳನ್ನು ಬೆಳಗಿಸಿದ್ದು, ಕಳೆ ಕಟ್ಟಿತ್ತು.
ಸಾವಿರ ಪದಗಳಲ್ಲಿ ಬಣ್ಣಿಸಲಾಗದ ಆ ಭಾವನೆಗಳನ್ನು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ತುಣುಕನ್ನು ನೋಡಿ.
ನಂತರ ನಡೆದ ಮಾತುಗಳಲ್ಲಿ ಕೇಳಿ ಬಂದದ್ದು.... ಗುಟ್ಟು ಮಾಡಿದ್ದು, ಎಲ್ಲರೂ ದೇವಸ್ಥಾನದ ಬಳಿ ಕಾದು ಗುಂಪು ಸೇರಿದ್ದು, ವೈಶಾಖ ಎಲ್ಲರಿಗೂ ಫೋನ್ ಮಾಡಿದ್ದು, ನನಗೆ ವಿಚಾರ ಮೊದಲೇ ಗೊತ್ತಿತ್ತಾ ಇಲ್ಲವಾ? ಮೊದಲೇ ಸ್ಟೆಂಟ್ ಹಾಕಿದ್ದಾರೆ... ಅವಳಿಗೆ ಶಾಕ್ ಆದ್ರೆ ಏನು ಅಂತ ಯೋಚನೆ ಆಯ್ತು... ಹೀಗೆ.
ಈ ಮಧ್ಯದಲ್ಲಿ, ಮನೆ ಉಡುಗೆಯಲ್ಲಿದ್ದ ನನ್ನ ಮಡದಿಯನ್ನು.. ಎಳೆದೊಯ್ದು, ಸಿಂಗಾರ ಮಾಡಿ ಕರೆ ತಂದಾಯ್ತು. ತರಾತುರಿಯಲ್ಲಿ ಕೇಕ್ ಕಟ್ ಮಾಡಲು ಜಾಗವನ್ನು ಅಣಿ ಮಾಡಾಯ್ತು. ಎಲ್ಲವೂ ರಾಕೆಟ್ ಲಾಂಚಿಂಗ್ precision ನಲ್ಲಿ ನಡೆದಂತಿತ್ತು. ನಾನೊಬ್ಬ ಮೂಕ ಪ್ರೇಕ್ಷಕನಾಗಿದ್ದೆ. ನನ್ನದೇ ಸಡಗರದಲ್ಲಿ, ನನ್ನ ದೃಷ್ಟಿಯಲ್ಲಿ ಮಾಡಬೇಕಾದ ಕೆಲಸಗಳಲ್ಲಿ, ಬಂದವರೊಡನೆ ಉಭಯ ಕುಶಲೊಪರಿಯಲ್ಲಿ ತೊಡಗಿದ್ದೆ.
ಕೇಕ್ ಕಂಡಾಕ್ಷಣ, ಮಕ್ಕಳ ಸಂಭ್ರಮ ಹೇಳತೀರದು. ಅಭಿನವ ತಾನು ಕೇಕ್ ಕಟ್ ಮಾಡಬೇಕು(?), ಮಾಡಬಾರದು ಎಂಬ ಮಾತಿನಲ್ಲಿ ತೊಡಗಿದ್ದರೆ, ಪುಟ್ಟ ಶರ್ವ ಕೇಕ್ ಅನ್ನು ಮುಟ್ಟುವ (ಎಳೆದಾಡುವ ಎನ್ನಲೇ) ಪ್ರಯತ್ನ ಮಾಡುತ್ತಲೇ ಇದ್ದ... ಅದನ್ನು ತಪ್ಪಿಸಲು ಅವರಮ್ಮ, ಹರ ಸಾಹಸ ಪಡುತ್ತಲೇ ಇದ್ದಳು.
ಅಂತೂ ವಿಜಯ ಕೇಕ್ ಕಟ್ ಮಾಡಿದಾಗ ಅವರವರದೇ ಕಂಠದಲ್ಲಿ ವೈವಿಧ್ಯವಾಗಿ ಹೇಳಿದ happy birthday ಹಾಡು... ವಿಶೇಷವಾಗಿ ಮಂದ ಬುದ್ಧಿ ಮಗುವಿನ ಶೈಲಿಯಲ್ಲಿ ತನ್ನಷ್ಟಕ್ಕೆ ತಾನು ಹಾಡಿದ ಮನಸ್ವಿನಿ ಗಮನ ಸೆಳೆದಳು. ಕೇಕ್ ಎಲ್ಲರಿಗೂ ತಿನ್ನಿಸಿ, ತಾನೂ ತಿನ್ನಿಸಿಕೊಂಡು, ಫೋಟೋಗಳನ್ನು ತೆಗೆಸಿಕೊಂಡು..
ಕೊಟ್ಟ ಉಡುಗೊರೆಗಳನ್ನು ಸ್ವೀಕರಿಸಿ... (ಹೂವಿನ ಜೊತೆ ನಾರು ದೇವರ ಪಾದ ಸೇರಿದಂತೆ, ನನಗೂ ಉಡುಗೊರೆ ಬಂತು.)
ಈ ಕಲಾಪದ ಕೊನೆಯ ಹಂತವಾಗಿ ಆರತಿ ಮಾಡಲು ನಿರ್ಧರಿಸಿಯೇಬಿಟ್ಟರು. ಆಗ ನಡೆದದ್ದೇ ಆರತಿ ತಟ್ಟೆಗೆ ಹಾಕುವ ಕಾಸಿನ ವಿಚಾರವಾಗಿ ಚೌಕಾಸಿ. ಅದು ಒಂದು ಖುಷಿಯ ವಿಚಾರವೇ. ಈ ಚೌಕಾಸಿಯನ್ನು ತಮ್ಮದೇ ರೀತಿಯಲ್ಲಿ ಸೂಚ್ಯವಾಗಿ ತೋರಿಸಿದವರು ನಾಗರತ್ನ.
ಆರತಿ.... ಯ ವೀಡಿಯೋ ತುಣುಕು ನೋಡಿ.
ನಂತರದ ಬಹು ಮುಖ್ಯ ಘಟ್ಟ... ಊಟ..
ಒಬ್ಬರಿಗೊಬ್ಬರು ಉಪಚರಿಸುತ್ತಾ, ತಮಗೆ ಬೇಕಾದುದನ್ನು ಮೆಲ್ಲುತ್ತಾ, ಮಕ್ಕಳಿಗೆ ಊಟ ಮಾಡಿಸಲು ಅಮ್ಮಂದಿರು ಮಾಡುತ್ತಿದ್ದ ಪ್ರಯತ್ನಗಳನ್ನು ನೋಡುತ್ತಾ, ನಾನು ಊಟವನ್ನು ಸವಿದೆ.
ಮುಂದೆ ಮನರಂಜನೆಯ ಕಡೆಗೆ ಗಮನ..
ಮಾತು ಗಂಡ ಹೆಂಡತಿಯ ಸಂಬಂಧ ಹಾಗೂ ಮುಂದಿನ ಜನ್ಮ ದಲ್ಲಿನ ಆಯ್ಕೆಗೆ ಹೊರಳಿತು. ಆಗ ಒಬ್ಬೊಬ್ಬರು ಅವರ ಅಭಿಪ್ರಾಯವನ್ನು ಮಂಡಿಸುತ್ತಾ.. ದಂಪತಿಗಳಲ್ಲಿ ಒಬ್ಬರಾದರೂ ಈ ಜನ್ಮಕ್ಕೆ ಸಾಕು ಎಂದು ಹೇಳಿದ್ದೇ ಹೆಚ್ಚು.. ಆದರೆ ವಿಧಿ ಇಚ್ಛೆ ಅದೇ ಆದರೆ, ಒಪ್ಪಬೇಕಾದದ್ದು ಅನಿವಾರ್ಯ ಅನ್ನುವ ಅಭಿಪ್ರಾಯ ಸಹ ಬಂತು ಎನ್ನುವುದು ಅಷ್ಟೇ ಸತ್ಯ.
ಮೊದಲು ನಮ್ಮಿಬ್ಬರನ್ನು ಕೂಡಿಸಿ ಒಂದಷ್ಟು ತಮಾಷೆಯ,ಒಂದಷ್ಟು ಗಂಭೀರ ಪ್ರಶ್ನೆಗಳನ್ನು ಕೇಳಿದ್ದು HP ರಂಗನಾಥ್.
ಪ್ರಶ್ನೋತ್ತರ. ದ ವೀಡಿಯೋ ತುಣುಕು ನೋಡಿ.
ನಂತರ ಒಮ್ಮತದಿಂದ ಆಯ್ಕೆ ಮಾಡಿದ್ದು dumb charades ಆಟ. ಆಟದ ಸಮಯದಲ್ಲಿ ಗಲಾಟೆ ಗರಿಷ್ಠ ಮಟ್ಟದಲ್ಲಿದ್ದು... ಸಧ್ಯ ಅಕ್ಕ ಪಕ್ಕದವರು ಯಾರೂ ಬಂದು ದೂರು ಮಾಡಲಿಲ್ಲ ಎನ್ನುವುದೇ ಸಮಾಧಾನದ ಸಂಗತಿ.
ನನ್ನ ಹೆಂಡತಿಯ ಮನಸ್ಸು ತುಂಬಿ ಬಂದಿತ್ತು, " ನನ್ನ ಜನ್ಮ ಸಾರ್ಥಕವಾಯಿತು... " ಎಂಬ ಉದ್ಗಾರ ಅವಳ ಬಾಯಿಂದ ಬಂತು.
ನಾನೆಂದೂ ಆಚರಿಸದ ರೀತಿಯಲ್ಲಿ, ನಡೆದ ಹೆಂಡತಿಯ ಹುಟ್ಟುಹಬ್ಬದ ಸಂಭ್ರಮ ಮುಗಿಯುತ್ತಾ ಬಂತು.. ಕೃತಜ್ಞತೆಯನ್ನು ಹೇಳಲು ಪದಗಳಿಗೆ ತಡಕಾಡಬೇಕಾಯಿತು.
ಒಬ್ಬೊಬ್ಬರಾಗಿ, ಹೊರಟವರನ್ನು ಬೀಳ್ಕೊಡುತ್ತಾ, ಎಲ್ಲರೂ ಹೊರಡುವ ಹೊತ್ತಿಗೆ ರಾತ್ರಿ 10.30 ಗಂಟೆ ದಾಟಿತ್ತು.
ನನಗೆ ಈ ವಿಷಯ ಮುಂಚೆ ತಿಳಿದಿತ್ತು... ಎಂದು ಹೇಳಿ..ನಾವಿಬ್ಬರೂ ಅಂದಿನ ಘಟನೆಗಳನ್ನು ಮೆಲುಕು ಹಾಕುತ್ತಾ.. ಕಳೆದ ಆ ಕ್ಷಣಗಳು ಮಧುರವಾಗಿತ್ತು.
ಕಾರ್ಯಕ್ರಮದ ರೂಪುರೇಷೆಯನ್ನು ಯೋಜಿಸಿದವರು ನನ್ನ ನಾದಿನಿ ಮಣಿ ಮತ್ತು ಮಕ್ಕಳು. ಅದರಲ್ಲೂ ತುಂಬಾ ಆಸಕ್ತಿವಹಿಸಿ, ಎಲ್ಲಾ ಏರ್ಪಾಟುಗಳನ್ನು ಮಾಡಿದವನು ವೈಶಾಖ. ಮುಂಚಿತವಾಗಿ ಮಾತನಾಡಿ... ಅವಳ ಹುಟ್ಟಿದ ದಿನವಾದ 17ನೇ ತಾರೀಕು ಕಾರ್ತಿಕ ಸೋಮವಾರ ಆದ್ದರಿಂದ, ಹೊರಗಿನ ಊಟ ಮಾಡಲು ಇಷ್ಟಪಡದ ಜನ ಇದ್ದಿದ್ದರಿಂದ, ಶನಿವಾರಕ್ಕೆ ಮುಂದೂಡಿ... ನಾವು ಮನೆಯಲ್ಲೇ ಇರಬೇಕೆಂದು ಸೂಚಿಸಿ, ಊಟದ ವ್ಯವಸ್ಥೆ ನಾನು ಮಾಡುತ್ತೇನೆ ಎಂದು ಹೇಳಿದ ಮಾತನ್ನು ಧಿಕ್ಕರಿಸಿ, ನನ್ನ ಹೆಂಡತಿಗೆ ತಿಳಿಯದಂತೆ ಎಲ್ಲವನ್ನು ಗುಟ್ಟಾಗಿರಿಸಿದವನೇ... ವೈಶಾಖ... ಅದಕ್ಕೆ ಪೂರಕವಾಗಿ ನಿಂತವಳು ಮಣಿ.
ಅವನ ಪ್ರೀತಿಗೆ ಸರಿದೂಗುವಂತ ಕೃತಜ್ಞತೆ ಹೇಗೆ ಹೇಳಲಿ? ಧನ್ಯವಾದ ವೈಶಿ.. ನಿನ್ನ ದೊಡ್ಡಮ್ಮನಿಗೆ 70ನೆಯ ವರ್ಷಕ್ಕೆ ಒಂದು ಸುಂದರವಾದ, ಬಹುಕಾಲ ನೆನಪಿಸಿಕೊಳ್ಳಬಹುದಾದ ಉಡುಗೊರೆಯನ್ನು ಕೊಟ್ಟಿದ್ದೀಯಾ.. ಮತ್ತೊಮ್ಮೆ...🙏🏼🙏🏼
ಎಂಥಾ ಮರಳುಗಾಡಿನಲ್ಲೂ ಓಯಸಿಸ್ (ನೀರಿನ ಸೆಲೆ) ಇರುತ್ತದೆ. ಹಾಗೆಯೇ ಈಗಿನ ಯಾಂತ್ರಿಕ ಜೀವನದ ಬರಡು ಸಮಯದ ಮಧ್ಯೆ.. ಇಂಥ ಚೈತನ್ಯಮಯ ಕ್ಷಣಗಳು ಇರುತ್ತವೆ ಎನ್ನುವುದು ಎಷ್ಟು ಸತ್ಯ ಅಲ್ಲವೇ?
ಆ ಕ್ಷಣಗಳನ್ನು ಆಗು ಮಾಡಿದ ಎಲ್ಲ ಆತ್ಮೀಯ ಮನಸ್ಸುಗಳಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.. ಕೃತಜ್ಞತೆಗಳು.
ನಿಮಗೆಲ್ಲಾ ನಾನು ಋಣಿ.
ಡಿ ಸಿ ರಂಗನಾಥ ರಾವ್
9741128413

ಹೌದು ಬಹಳ ಸರಳ ಹಾಗೂ ಸಂತಸ ದಿಂದ, ಸಂಭ್ರಮ ದಿಂದ ಕೂಡಿತ್ತು ಆ ದಿನ. ಸಾರ್ಥಕ ಕ್ಷಣ ಅನ್ನಿಸಿತು.
ReplyDeleteLakshmi Harish
Sooper celebration 🎈🎉
ReplyDelete