ಮಾತು - (ತಲೆ) ಹರಟೆ

 


ಬೆಳಿಗ್ಗೆ ಉದ್ಯಾನವನದಲ್ಲಿ ಸ್ನೇಹಿತ ಯೋಗಾನಂದ ಅವರ ಜೊತೆ ನಡೆದಾಡುತ್ತಾ ಇದ್ದಾಗ ಒಬ್ಬ ಆಜಾನುಬಾಹು ವ್ಯಕ್ತಿ  ಫೋನಿನಲ್ಲಿ ಯಾರಿಗೋ ಜೋರಾಗಿ ದಬಾಯಿಸುತ್ತಾ ನಮ್ಮ ಪಕ್ಕದಲ್ಲಿ ನಡೆದರು... ಕೆಲ ಕ್ಷಣಗಳು ನಾವಿಬ್ಬರೂ ಮಾತು ನಿಲ್ಲಿಸಿದೆವು.. ಆ ವ್ಯಕ್ತಿ ಮುನ್ನಡೆದಾಗ ಯೋಗಾನಂದ ಅವರು ಹೇಳಿದ್ದು " ಇದರ ಬಗ್ಗೆ ಒಂದು ಬ್ಲಾಗ್ ಬರೆಯಿರಿ". 

ಮುಂದಿನ ಲೇಖನದ ವಿಷಯ ಇನ್ನೂ ನನ್ನ ತಲೆಗೆ ಬರದಿದ್ದರಿಂದ, ಇದೇ ಇರಲಿ ಎಂದು ಆಯ್ಕೆ ಮಾಡಿದೆ. ಹಾಗಾಗಿ ಈ ಲೇಖನ.. 

ಕಿವಿಗೆ headphone ಗಳನ್ನು ಸಿಕ್ಕಿಸಿದ್ದ  ವ್ಯಕ್ತಿಯ ಶಾರೀರ, ಶರೀರದಷ್ಟೇ ದೊಡ್ಡದಾಗಿತ್ತು. ಕೋಪ ಎದ್ದು ಕಾಣುತ್ತಿತ್ತು. ಕೋಪ ಬಂದಾಗ ಎದುರಿನ ವ್ಯಕ್ತಿ ತುಂಬಾ ಹತ್ತಿರದಲ್ಲೇ ಇದ್ದರೂ, ಎಲ್ಲೋ ದೂರದಲ್ಲಿರುವವರೊಡನೆ ಮಾತನಾಡುವಂತಿರುತ್ತದೆ. ಏಕೆಂದರೆ ಮಾನಸಿಕವಾಗಿ ಅವರು ದೂರದಲ್ಲಿ ಇರುತ್ತಾರೆ. ಅದೇ ಪ್ರೀತಿ ಇದ್ದರೆ ಪಿಸು ಮಾತು ಸಹ ಬೇಗ ಮನ ಮುಟ್ಟುತ್ತದೆ. ಇದು ನವದಂಪತಿಗಳಲ್ಲಿ ಹಾಗೂ ಪ್ರೇಮಿಗಳಲ್ಲಿ ಹೆಚ್ಚು ಕಾಣುತ್ತದೆ.

ನುಡಿದರೆ ಮುತ್ತಿನ ಹಾರದಂತಿರಬೇಕು ಎಂದರು ಬಸವಣ್ಣನವರು.  ಅದು ಬುದ್ಧಿವಾದ / ಸಲಹೆ ಮಾತ್ರ. ನಿಜ ಜೀವನದಲ್ಲಿ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವುದೇ ವಸ್ತುಸ್ಥಿತಿ.  ಮುತ್ತಿನ ಹಾರ ಬಲು ಅಪರೂಪ.

ಅದರಲ್ಲೂ ಭಾರತದ ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗಿದ್ದೆ ಹೆಚ್ಚು. ಬಾಯಿಗೆ ಬಂದದ್ದು ಒದರುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಪರಿಗಣಿಸಲಾಗಿದೆ... ಇದರ ಮೇಲೆ ಕಡಿವಾಣ ಹಾಕುವ ಅಗತ್ಯ ಇದೆ.

ಮಾತನಾಡುವುದು ಒಂದು ಕಲೆ. ಕೆಲವರ ಮಾತು ಕೇಳಲು ಜನ ಕಾತುರದಿಂದ ಕಾಯುತ್ತಾರೆ. ಅವರು ಹೇಳುವ ವಿಷಯ, ಪ್ರಸ್ತುತಪಡಿಸುವ ಶೈಲಿ, ಒಂದಷ್ಟು ಹಾಸ್ಯ ಲೇಪನ, ಮಧ್ಯೆ ಮಧ್ಯೆ ಸ್ಪಷ್ಟತೆ ತರಲು ಉದ್ಧರಿಸುವ ಗಾದೆಗಳು, ನಾಣ್ಣುಡಿಗಳು, ಚಾಟೋಕ್ತಿಗಳು, ಉದಾಹರಣೆಗಳು, ಹೋಲಿಕೆಗಳು ಇಂಬು ಕೊಡುತ್ತವೆ.

ಮತ್ತೆ ಕೆಲವರದು ಗಮನ ಸೆಳೆಯುವ ದೊಂಬರಾಟ, ತಕ್ಕ ಪ್ರತಿಕ್ರಿಯೆ ಸಿಗದೇ, ಅವರ ಅರಚಾಟ ಅರಣ್ಯ ರೋದನವಾದದ್ದೆ ಹೆಚ್ಚು.

ಹೇಳಿದ್ದೆ ಹೇಳೋ ಕಿಸಬಾಯಿ ದಾಸ ಎನ್ನುವ ಗಾದೆಯಂತೆ ತಮಗೆ ಗೊತ್ತಿರುವ ಒಂದೆರಡು ವಿಷಯಗಳನ್ನು, ಕೇಳುಗರ ಆಸ್ಥೆಯನ್ನು ಪರಿಗಣಿಸದೆ ಹೇಳುವವರು ಕೆಲವರು. ಅದು ಚರ್ವಿತ ಚರ್ವಣ.

ಸಮಯಾ ಸಮಯದ ಪ್ರಜ್ಞೆ ಇಲ್ಲದೆ ಅರ್ಥಹೀನ ಮಾತುಗಳನ್ನು ಆಡುವವರು ಕೆಲವರು. ಸಾವಿನ ಮನೆಯಲ್ಲೂ, ಅಸಂಬದ್ಧ ಪ್ರಲಾಪ ಮಾಡುವವರೂ ಇದ್ದಾರೆ. ಇಂಥವರಿಗಾಗೇ ಇರಬೇಕು ಮಾತು ಮುತ್ತು ಮೌನ ಬಂಗಾರ ಎನ್ನುವ ಹೇಳಿಕೆ. ಕಡಿಮೆ ಮಾತು ಹೆಚ್ಚು ಮೌನ ಈ ಸಮಯಕ್ಕೆ ಸೂಕ್ತ.

ಮೌನವಾಗಿದ್ದೇ ಸಂವಹನ ಮಾಡುವವರು ಕೆಲವರು. ತಮ್ಮ ಮುಖಭಾವದಿಂದಲೇ ಅಭಿಪ್ರಾಯ ತಿಳಿಸುವವರು, ಅದನ್ನು ಅರ್ಥಮಾಡಿಕೊಳ್ಳುವವರು ಬೇಕಷ್ಟೇ. 

ಪ್ರೇಮಿಗಳು ಕಣ್ಣ ನೋಟದಲ್ಲೇ ಮಾತಾಡಬಲ್ಲರು. 

ಬಂದವರ ಮುಂದೆ ಮಗು ಗಲಾಟೆ ಮಾಡಿದಾಗ ಕಣ್ಸನ್ನೆ ಕಣ್ಣೋಟದಲ್ಲೇ ಹತೋಟಿಯಲ್ಲಿ ಇಡುವ,  ಮಿತಿಮೀರಿದರೆ ಒಳ ಶುಂಠಿ ( ತೊಡೆಯನ್ನು ಗುಟ್ಟಾಗಿ ಗಿಲ್ಲುವ) ಕೊಡುವ ಅಮ್ಮಂದಿರು,

ಕಣ್ಣು ದೊಡ್ಡದಾಗಿ ಬಿಟ್ಟು, ದುರುಗುಟ್ಟಿ ನೋಡುವ ಅಪ್ಪ, ಹಾಗೆ ತಮ್ಮ ಎದುರಾಳಿಗಳನ್ನು, ತಮ್ಮ ಹಾವ ಭಾವಗಳಿಂದಲೇ ಹೆದರಿಸಲು ಪ್ರಯತ್ನಿಸುವ ಶೂರರೂ ಉಂಟು.

ನನ್ಯಾಕೆ ನೀ ಹಾಗೆ ನೋಡುವೆ ಮಾತಾಡ ಬಾಯಿಲ್ಲವೇ.. ಸಿನಿಮಾ ಹಾಡು,  ಬೇಂದ್ರೆಯವರ ನೀ ಹಿಂಗ ನೋಡಬೇಡ ನನ್ನ... ಹಾಡುಗಳು ನೆನಪಾಗುತ್ತವೆ.

ಮೌನೇನ ಕಲಹಂ ನಾಸ್ತಿ ಎನ್ನುವುದು ಸತ್ಯವಾದರೂ, ಅದರ ತಿರುಚಿದ ರೂಪ ಮೌನೇನ ಕವಳಂ ಜಾಸ್ತಿಯೂ ಪ್ರಸ್ತುತವೆ. ಊಟ ಮಾಡುವಾಗ ಮಾತನಾಡಬಾರದು.

ಮಾತನಾಡಿ ಜಯಿಸಲು ಸಾಧ್ಯವಾಗದ ಸಮಯದಲ್ಲಿ (ನಮಗಿಂತ ದೊಡ್ಡವರು / ಶಕ್ತಿಶಾಲಿಗಳು) ಮೌನ ಪ್ರತಿಭಟನೆ ನಡೆಸುವುದು ಸಾಮಾನ್ಯ. 

ಚಿಕ್ಕಂದಿನಲ್ಲಿ ಈ ಮೌನ ಪ್ರತಿಭಟನೆ ಅಳುವಿನಲ್ಲಿ ಸಮಾಪ್ತಿಯಾಗುತ್ತಿತ್ತು.

ತುಂಬಾ ಮಾತನಾಡುವ ಮಕ್ಕಳನ್ನು ಸುಮ್ಮನಿರಿಸಲು ಚಾಕಲೇಟ್ ನ ಆಸೆ ತೋರಿಸಿ ಕೆಲಕಾಲವಾದರೂ ಸುಮ್ಮನಿರಿಸುತ್ತಿದ್ದದ್ದು. ಈಗೀಗ ಚಾಕಲೇಟಿಗೆ ಬಗ್ಗದ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸುಮ್ಮನಿರಿಸುವ ಪ್ರಯೋಗ ಯಶಸ್ವಿಯಾಗಿದೆ.. ಅದೇ ಈಗ ಮಕ್ಕಳಿಗೆ ಮುಳುವಾಗಿದೆ.

ಮೌನವ್ರತ ಅತಿ ಕಷ್ಟದ ಸಾಧನೆ.

ಮೌನದ ಇನ್ನೊಂದು ಮುಖವೇ, ಸ್ವಗತ. ತನ್ನೊಂದಿಗೆ ತಾನೇ ಮಾತನಾಡಿಕೊಳ್ಳುವುದು. ಇದು ಆತ್ಮವಿಮರ್ಶೆಗೆ ಬಹು ಸೂಕ್ತ. ಇಲ್ಲಿ ಇನ್ನೊಂದು ನ್ಯೂನತೆ ಇದೆ... ಅದುವೇ... ಹಳಹಳಿಕೆ. ಎಲ್ಲರೂ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ, ಮುಖಭಂಗ / ಸೋಲನ್ನು ಅನುಭವಿಸಿದ ಸಂದರ್ಭ ಇದ್ದೇ ಇರುತ್ತದೆ ಎಂದು ನನ್ನ ನಂಬಿಕೆ. ಆ ಮುಖಭಂಗ / ಸೋಲು ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿರುತ್ತದೆ. ಅದರ ಬಗ್ಗೆ ಚಿಂತನೆಯು ನಡೆದಿರುತ್ತದೆ, ಆ ಸಮಯದಲ್ಲಿ ಹಾಗೆ ಮಾಡಬಹುದಿತ್ತು, ಹೀಗೆ ಮಾಡಬೇಕಿತ್ತು, ಮುಖದ ಮೇಲೆ ಹೊಡೆದಂಗೆ ಹೇಳಬೇಕಿತ್ತು... ಹೀಗೆ ಮನಸ್ಸಿನಲ್ಲಿ ಮಂಥನ.. ಆದರೆ ಅದ್ಯಾವುದೂ ಸಾಧ್ಯವಿಲ್ಲದ ಮಾತು. ಇದೇ ಹಳಹಳಿಕೆ.

ನಾಟಕಗಳಲ್ಲಿ ಸ್ವಗತ  ಪ್ರಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಮನಸ್ಸಿನಲ್ಲಿ ಆಗುವುದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ, ಇದು ಪ್ರಸ್ತುತ.

ಬಹು ಹಿಂದೆ, ಮಾತಿಗೆ ತುಂಬಾ ಬೆಲೆಯಿತ್ತು ಎಂದು ಕೇಳಿದ್ದೇನೆ. ಅದು ವಾಗ್ದಾನ.  ಎಲ್ಲ ವ್ಯವಹಾರಗಳು ಮಾತಿನ ಮೇಲೆ. ಮಾತು ಕೊಟ್ಟಾದ ಮೇಲೆ, ಯಾವುದೇ ಕಾರಣಕ್ಕೂ ಅದನ್ನು ಬದಲಿಸದಿದ್ದ ಕಾಲವೊಂದಿತ್ತು.

ಕೊಟ್ಟ ಮಾತನ್ನು ತಪ್ಪಿದವನನ್ನು " ಮಾತಿಗೆ ತಪ್ಪಿದ ಮುಠ್ಠಾಳ " ಎಂದು ಮೂದಲಿಸುತ್ತಿದ್ದದ್ದು.  

ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಂಡತಿ ಮಗನನ್ನು ಮಾರಿ, ತಾನು ಸ್ಮಶಾನದಲ್ಲಿ ಕೆಲಸ ಮಾಡಿದ ಹರಿಶ್ಚಂದ್ರನ ಕಥೆ ಹಾಗೂ ಅಪ್ಪ ಕೊಟ್ಟ ಮಾತನ್ನು ಉಳಿಸಲು, ಅಪ್ಪನ ಗೌರವವನ್ನು ಕಾಪಾಡಲು ಸಿಂಹಾಸನವನ್ನೇ ಬಿಟ್ಟು ವನವಾಸಕ್ಕೆ ಹೊರಟ ಶ್ರೀರಾಮಚಂದ್ರನ ಕಥೆ, ಕೊಟ್ಟ ಮಾತನ್ನು ತಪ್ಪದ ಪುಣ್ಯಕೋಟಿ ಎಂಬ ಹಸುವಿನ ಪದ್ಯವನ್ನು ಚಿಕ್ಕಂದಿನಲ್ಲಿ ಓದಿದ್ದು ಇನ್ನೂ ಹಸಿರಾಗಿ ನನ್ನಲ್ಲಿ ಉಳಿದಿದೆ.

ಮನಸ್ಸಿಗೆ ಬಂದದ್ದನ್ನು ಬಡಬಡಿಸುವವರಿಗೆ, ಮಾತಿನ ಮೇಲೆ ನಿಗಾ ಇರಲಿ ಎಂಬ ಎಚ್ಚರಿಕೆಯನ್ನು ಕೊಡುವುದುಂಟು.

ಆಡುವ ಪದಗಳು ಅದೇ ಆದರೂ, ಹೇಳುವ ರೀತಿ, ಏರಿಳಿತಗಳು, ಜೊತೆಗೆ ಹಾವಭಾವವು ಸೇರಿದರೆ, ಅದೇ ಪದಗಳು ವ್ಯಂಗ್ಯ, ದರ್ಪ, ಅಪಹಾಸ್ಯ, ಕ್ರೋಧ, ಅಟ್ಟಹಾಸ ಹೀಗೆ  ಯಾವುದೇ ಭಾವವನ್ನು ಪ್ರದರ್ಶಿಸಬಹುದು. ಹಾಗಾಗಿ ಸರಿಯಾದ ಪದ ಬಳಕೆ, ಹೇಳುವ ಶೈಲಿಯ ಮೇಲೆ ಸಂದರ್ಭಗಳು ರೂಪುಗೊಳ್ಳುತ್ತವೆ. 

ಮಾತಿನಿಂದ ಸಮಸ್ಯೆಯೂ ಆಗಬಹುದು, ಸಂಬಂಧಗಳು ಹಾಳಾಗಬಹುದು. ಹಾಗೆ ಸಮಸ್ಯೆಯನ್ನು ಮಾತಿನಿಂದಲೇ ಪರಿಹರಿಸಲೂಬಹುದು, ಸಂಬಂಧಗಳನ್ನು ಬೆಸೆಯಲೂಬಹುದು.  ಅದು ಮಾತಿನ ಗಟ್ಟಿತನ.

ಹರಟು, ಎಂದಾಗ ಗೊತ್ತು ಗುರಿಯಿಲ್ಲದೆ ಮಾತಾಡುವುದು ಎಂಬ ಭಾವ ಬರುತ್ತದೆ. ಅದಕ್ಕೆ ಇರಬಹುದು ಆ ಮಾತುಗಳನ್ನು ತಲೆ ಹರಟೆ, ಕಾಡು ಹರಟೆ ಎನ್ನುವುದು. 

ಹರಟೆ ಪದಕ್ಕೆ, ವಿಷಯವನ್ನು ಹಾಸ್ಯಮಯವಾಗಿ ಮಾತಾಡುವುದು ಎಂಬ ಅರ್ಥವೂ ಇದೆ. ಹೀಗೆ ಮಾತಾಡುವವರನ್ನು ಹರಟೆ ಮಲ್ಲ / ಹರಟೆ ಮಲ್ಲಿ ಎಂದು ಕರೆಯುವುದು. ಉದಯ ಟಿವಿಯಲ್ಲಿ ಹರಟೆ ಎಂಬ ಕಾರ್ಯಕ್ರಮ ಬರುತ್ತಿತ್ತು. ಆ ಕಾರ್ಯಕ್ರಮದಲ್ಲಿ ಹಿರೇಮಗಳೂರು ಕಣ್ಣನ್, ಕೃಷ್ಣೆಗೌಡರು, Y V ಗುಂಡುರಾವ್, ರಿಚರ್ಡ್ ಲೂಯಿಸ್, ಸುಧಾ ಬರಗೂರು ಮುಂತಾದವರು ಹರಟೆ ಹೊಡೆದು (ಹರಟೆ ಕೊಚ್ಚಿ) ಖುಷಿಕೊಡುತ್ತಿದ್ದರು. ಇವರಿಗೆ ಮಾತೇ ಬಂಡವಾಳ.

ಬಾಯಿ ಇದ್ದವ ಬರಗಾಲದಲ್ಲಿ ಬದುಕಿದ ಎನ್ನುವ ಒಂದು ನಾಣ್ಣುಡಿ ಇದೆ. ಒಳ್ಳೆಯ ಮಾತುಗಳು, ಕೆಲಸವನ್ನು ಸಾಧಿಸಲು ಸಹಾಯ ಮಾಡುತ್ತವೆ. ಎಲ್ಲರ ಜೊತೆಯ ಸಂಬಂಧಗಳನ್ನು ಚೆನ್ನಾಗಿ ಇಡುತ್ತವೆ. ಅಂದರಿಕಿ ಮಂಚೋಡು ಅನಂತಯ್ಯ ಹೇಳಿಕೆ ಅನಂತಯ್ಯನ ಜಾಣತನದ ಮಾತುಗಾರಿಕೆಗೆ ಸಂಬಂಧಿಸಿದ್ದು.

ಇಂಥ ಮಾತುಗಳನ್ನು " ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ" ಎಂದು ಹೇಳುವುದು.

ಇಂಗ್ಲೀಷಿನಲ್ಲಿ verbal diarrhoea ಎಂಬುದು ಅತಿಯಾಗಿ ಮಾತನಾಡುವುದನ್ನು ಸೂಚಿಸುತ್ತದೆ. ಇದನ್ನು ಕನ್ನಡದಲ್ಲಿ ನೇರವಾಗಿ ಅನುವಾದಿಸಿ ಮಾತಿನ ಅತಿಸಾರ (ಭೇದಿ) ಅನ್ನುವುದಕ್ಕಿಂತ ಬಾಯಿ ಬಡುಕತನ ಎಂದು ಕರೆಯುವುದು ಸೂಕ್ತ ಎಂದು ನನ್ನ ಅನಿಸಿಕೆ.

ಮಾತು ಬಾರದ ಮೂಕರ ಭಾಷೆ ಬರಿ ಸಂಜ್ಞೆ, ಹಾವಭಾವಗಳ ಮೂಲಕವೇ ಅಭಿವ್ಯಕ್ತಿ. ಅವರ ಇತರ ಜ್ಞಾನೇಂದ್ರಿಯಗಳು ಬಲು ಚುರುಕು.

ಮಾತು ಕಲಿಯುತ್ತಿರುವ ಪುಟ್ಟ ಮಕ್ಕಳ ಬಾಲಭಾಷೆಯೇ ಬಲುಚಂದ. ಅವರ ಉಚ್ಚಾರಣೆಗಳು, ಉಪಯೋಗಿಸುವ ಪದಗಳ ಅರ್ಥವನ್ನು ಅವರ ಅಪ್ಪ ಅಮ್ಮಂದಿರೇ  ಹೇಳಬೇಕಾಗುತ್ತದೆ. ನನ್ನ ಮಗಳು ಚಮಚವನ್ನು ಪುಸ್ಸೂಸ ಎಂದು ಕರೆಯುತ್ತಾ ಇದ್ದದ್ದು ನೆನಪಿದೆ.. ಅದು ಹೇಗೆ ಹೊಂದುತ್ತೆ ಎನ್ನುವುದು ಹೇಳಲಾಗದು.

ತಾಯಂದಿರು ಮಕ್ಕಳನ್ನು ಮುದ್ದಿಸುವಾಗ ಉಪಯೋಗಿಸುವ  ವಿಶೇಷ ಹೆಸರುಗಳು.. ಚಿನ್ನುಮರಿ ಬಂಗಾರ, ಚೋನು, ಚಂದನ, ಕುಚ್ಚಿಮುಚ್ಚಿ... ಹೀಗೆ ಲೆಕ್ಕವಿಲ್ಲದಷ್ಟು ಅವರದೇ ನಿಘಂಟಿನಲ್ಲಿ ಇರುವಷ್ಟು. 

ಮೊಮ್ಮಮ್ಮು ತಿನಿಸ್ಲಾ.. ಬುಜ್ಜಣ್ಣಿ ಅಶು ಆಗ್ತಾ ಇದಾ, ಆರು ನನ್ ಕಂದನ್ನ ಬೇದಿದ್ದು, ಅತ್ತ ಮಾಡ್ತೀನಿ... ಕೇಳಕ್ಕೆ ಎಷ್ಟು ಚೆನ್ನ ಅಲ್ವಾ.

ಸಾಕು ಪ್ರಾಣಿಗಳ ಜೊತೆ, ಅದರಲ್ಲೂ ನಾಯಿಯನ್ನು ಮಕ್ಕಳಂತೆಯೇ ಮಾತನಾಡಿಸುತ್ತಾ ಅವನು ಅವಳು ಎಂದು ಸಂಭೋಧಿಸುತ್ತಾ ಮುದ್ದಾಡುವವರನ್ನು ಕಂಡಿದ್ದೇನೆ.

ಮಾತನಾಡುವ ಗಿಳಿಗಳು ಇವೆ ಎಂದು ಕೇಳಿದ್ದೇನೆ. ಹೇಳಿಕೊಟ್ಟಿದ್ದಷ್ಟನ್ನೇ ಹೇಳಿದರೆ ಗಿಣಿಪಾಠ ಒಪ್ಪಿಸಿದಂತೆ.

ಬುಡುಬುಡಿಕೆಯವರು, ಹೇಳುವ ಮಾತು ಜಲಪಾತದಂತೆ..

ಚಿಕ್ಕಂದಿನಲ್ಲಿ ತುಂಬಾ ಇಷ್ಟಪಟ್ಟು ಕೇಳುತ್ತಿದ್ದದ್ದು, ಗುರುರಾಜುಲು ನಾಯ್ಡು ಅವರ ಹರಿಕಥೆಯ ಮಾತಿನ ಶೈಲಿ. ಅವರಲ್ಲಿದ್ದ ಹಾಸ್ಯ ಪ್ರಜ್ಞೆ. ಹಾಗೆ ನಮ್ಮ ಮಾಜಿ ಪ್ರಧಾನ ಮಂತ್ರಿ, ಅಟಲ್ ಬಿಹಾರಿ ವಾಜಪೇಯಿ ಅವರು, ಮಾತನಾಡುವ ಶೈಲಿ, ಹಾಗೂ ಅವರು ಮಾತಿನ ಮಧ್ಯೆ ಸೇರಿಸುತ್ತಿದ್ದ ಕೆಲಸಂಡುಗಳ ಮೌನ ನನಗೆ ಮೆಚ್ಚುಗೆ.

ಮಲೆನಾಡಿನ ಕಡೆ, ಮನೆಗಳು ದೂರ ಇರುವ ಕಾರಣ, ಓಹೋಯ್ ಎಂದು ಜೋರಾಗಿ ಕೂಗಿ ಗಮನ ಸೆಳೆಯುವುದು.

ಗುಟ್ಟಿನ ಮಾತು ಹೇಳಿ, ಯಾರಿಗೂ ಹೇಳಬೇಡ ಎಂಬ ತಾಕೀತಿನೊಡನೆ ಕೊನೆಯಾದರೂ, ಅದು ಹಾಗೆ ಮುಂದುವರೆಯುವುದು ಮಾತ್ರ ಗುಟ್ಟು ಮಾತಿನ ವಿಶೇಷ.

ಮನ ಬಂದಂತೆ ಆಶ್ವಾಸನೆ ಕೊಡುವ ಕೆಲ ಜನ, ಅದರಲ್ಲೂ ರಾಜಕಾರಣಿಗಳು.. ಮಾತಲ್ಲೇ ಮನೆಯನ್ನು ಕಟ್ಟುವವರು,  ಬೆಂಗಳೂರಿಗೂ ಸಮುದ್ರವನ್ನು ತರಬಲ್ಲರು.

ಮಾಡಿದೆಯೋ ಸರಿ.. ಇಲ್ದೆ ಇದ್ರೆ ಎನ್ನುವುದು ಎಚ್ಚರಿಕೆಯ ಮಾತು.

ಗಂಡ ಹೆಂಡತಿಯ ಮಧ್ಯೆ ಮನಸ್ತಾಪ ಆದಾಗ, ಮಕ್ಕಳಿಗೆ ಹೇಳುವಂತೆ ಜೋರಾಗಿ ಹೇಳಿ( ಬೇಕು ಅಂತ ಅಪ್ಪಂಗೆ ಹೇಳು, ಆಗಲ್ಲ ಅಂತ ಅಮ್ಮಂಗೆ ಹೇಳು) ತಲುಪಿಸುವ ಸೂಚ್ಯ ಮಾತು. ಇಲ್ಲಿ ನೆನಪಿಗೆ ಬರುವುದು, ರಾಮಾಯಣದ ಸಂದರ್ಭ. ಸೀತೆ ಲಂಕೆಯಲ್ಲಿದ್ದಾಗ, ರಾವಣನ ಜೊತೆ ಅನಿವಾರ್ಯವಾಗಿ ಮಾತಾಡಬೇಕಾದಾಗ ಒಂದು ಹುಲ್ಲು ಕಡ್ಡಿಯನ್ನೇ ನೆಪವಾಗಿಟ್ಟುಕೊಂಡು, ಉತ್ತರ ಹೇಳಿದ್ದನ್ನು ಓದಿದ ನೆನಪು.

ಕೆಲವು ಜಾಣ ಮಾತುಗಾರರು.. ವಿಷಯದ ಅರ್ಧ ಭಾಗವನ್ನು ಹೇಳಿ, ಇನ್ನು ಅರ್ಧ ಭಾಗವನ್ನು ಕೇಳುಗರೇ ಸುಲಭವಾಗಿ ಊಹಿಸಿ ಹೇಳುವಂತೆ ಮಾಡಬಲ್ಲರು.

ಚಿಕ್ಕವರಿದ್ದಾಗ, ಯಾವುದೋ ಕ್ಷುಲ್ಲಕ ಕಾರಣಕ್ಕೆ ಠೂ ಬಿಟ್ಟು, ಮಾತನಾಡದೆ, ಆದರೆ ವಿಷಯವನ್ನು ಮುಟ್ಟಿಸಲು ನನ್ನ ಎನಿಮಿಗೆ( enemy)   ಹೇಳು ಎಂದು ಇನ್ನೊಬ್ಬರಿಗೆ ಪ್ರೇರೇಪಿಸುವುದು.

ಏನೋ ಹೇಳಲು ಹೋಗಿ, ಆ ಸಂದರ್ಭಕ್ಕೆ ಅನುಚಿತ ಅನ್ನಿಸಿ / ಗುಟ್ಟಾಗಿಡಬೇಕು ಅನ್ನಿಸಿ, ಮಾತನ್ನು ಅರ್ಧಕ್ಕೆ ನಿಲ್ಲಿಸುವುದು. ಬಾಯಿ ತಪ್ಪಿ ಹೇಳಿಬಿಟ್ಟರೆ, ತಪ್ಪಿನ  ಅರಿವಾಗಿ ತುಟಿ ಕಚ್ಚಿಕೊಳ್ಳುವುದು.

ಸೂಚ್ಯವಾಗಿ ಹೇಳಿದ ಮಾತನ್ನು, ಅಪಾರ್ಥ ಮಾಡಿಕೊಳ್ಳುವವರು ಕೆಲವರು , ಅಂತಹ ಸಮಯದಲ್ಲಿ ನಿಜಾರ್ಥವನ್ನು ಹೇಳುವ ಅನಿವಾರ್ಯತೆ.

ನಿರರ್ಗಳವಾಗಿ ಮಾತನಾಡುವವರನ್ನು ವಾಚಾಳಿಯಂತಲೂ, ಜೊತೆಗೆ ವಿಷಯ ಪ್ರಭುದ್ಧತೆ ಸೇರಿದರೆ ವಾಗ್ಮಿಯಂತಲೂ ಕರೆಯುತ್ತಾರೆ. ಇವರು ಕೆಲವು ಪದಗಳನ್ನು ಬಳಸುವ ರೀತಿ, ಬೇರೆ ಬೇರೆ ಅರ್ಥಗಳನ್ನೇ ಕೊಡಬಲ್ಲರು. ಅದು ಅವರ ಜಾಣ್ಮೆ.

ಹೇಳಿದ ಪದಗಳನ್ನು, ತಮಗೆ ಬೇಕಾದ ಹಾಗೆ ತಿರುಚಿ, ವಿಷಯವನ್ನು ತಲೆಕೆಳಗು ಮಾಡುವ ಜನರು ಉಂಟು. ಇದು ಇಂದಿನ ಪತ್ರಿಕೋದ್ಯಮದಲ್ಲಿ ಸಾಮಾನ್ಯ... ಹಾಗೆ ರಾಜಕಾರಣಿಗಳು, ತಮ್ಮ ಹೇಳಿಕೆಗಳನ್ನು ತಿರುಚಿದ್ದಾರೆ ಎಂದು ತಪ್ಪನ್ನು ಬೇರೆಯವರ ಹೆಗಲಿಗೆ ಏರಿಸುವುದು ಸಾಮಾನ್ಯ.

ಬೀದಿ ಜಗಳದಲ್ಲಿ ಓತಪ್ರೋತವಾಗಿ ಹರಿಯುವ ಮಾತುಗಳು, ಯಾವ ಮಟ್ಟಕ್ಕೆ ಬೇಕಾದರೂ ಹೋಗಬಹುದು, ಪರಸ್ಪರರ ಚರಿತ್ರೆಯು ಹೊರಕ್ಕೆ ಬರಬಹುದು.

ಮಾತಿನ ಸತ್ಯಾಸತ್ಯತೆಯನ್ನು ದೃಢಪಡಿಸಲು ದೇವರ ಮುಂದೆ ಪ್ರಮಾಣ ಮಾಡುವವರು ಕೆಲವರು, ತಮ್ಮ ಎದುರಾಳಿಗೆ ದೇವರ ಮುಂದೆ ಪ್ರಮಾಣ ಮಾಡಲು ಸವಾಲು ಎಸೆಯುವರು ಮತ್ತೊಬ್ಬರು.

ತಮಗೆ ಆಗದವರಿಗೆ, ನೋವು ಮಾಡಿದವರಿಗೆ  ಶಾಪ ಹಾಕುವ ಚಟ ಕೆಲವರಿಗೆ.. ಬೊಗಸೆ ತುಂಬಾ ಮಣ್ಣನ್ನು ಹಿಡಿದು, ಆಗದವರ ಮನೆಯ ಮುಂದೆ ಚೆಲ್ಲಿ ಅವರಿಗೆ ಕೆಟ್ಟದ್ದು ಬಯಸುವುದೇ ಹಿಡಿ ಶಾಪ. 

ಅದೇ ಒಳ್ಳೆಯದು ಬಯಸಿದರೆ ಆಶೀರ್ವಾದ.

ಸಾಮಾನ್ಯವಾಗಿ ಹೆಂಗಸರು ಮಾತನಾಡುವುದು ಜಾಸ್ತಿ ಎಂದು ಪ್ರತೀತಿ. ಹಾಗಾಗಿಯೇ ಅವರನ್ನು ಮಾತೆಯರು ಎಂದು ಕರೆಯುವುದು ಹೌದಾ?

ಬಾಯಿ ಚಪಲ ಎನ್ನುವ ಮಾತಿದೆ... ಇದು ಮಾತಿಗೆ ಹಾಗೂ ತಿನ್ನುವುದಕ್ಕೆ ಎರಡಕ್ಕೂ ಅನ್ವಯಿಸುತ್ತದೆ. ಹಾಗಾಗಿಯೇ ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ.

ಭೀಕರ ಭಾಷಣ ಮಾಡಿ, ಕೊನೆಗೆ ನನ್ನ ನಾಲ್ಕು ಮಾತುಗಳನ್ನು ಮುಗಿಸುತ್ತೇನೆ, ಎಂದು ಕೇಳುಗರಿಗೆ ಬಿಡುಗಡೆ ಕೊಡುವ ಮಹಾಶಯರು ಉಂಟು.

ಬಾಯಿ ಮುಚ್ಚು, ಬಾಯಿಗೆ ಬೀಗ ಹಾಕು ಎಂಬುದು ಎಚ್ಚರಿಕೆಯ ಮಾತುಗಳು.

ಆ ಎಚ್ಚರಿಕೆಯ ಮಾತುಗಳು ನನಗೆ ಬರುವ ಮುಂಚೆ,  ಈ ಲೇಖನವನ್ನು, ಯೋಗಾನಂದ ಅವರಿಗೆ ಸಮರ್ಪಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ನಮಸ್ಕಾರ.


    

Comments

  1. ಯೋಗಾನಂದ17 January 2026 at 18:41

    ಧನ್ಯವಾದಗಳು ರಂಗನಾಥ್. ಉದ್ಯಾನವನದಲ್ಲಿ ಆ ದಢೂತಿ ವ್ಯಕ್ತಿ ಫೋನಿನಲ್ಲಿ ಜೋರಾಗಿ ಅರಚುತ್ತಾ ಮಾತನಾಡುತ್ತಿದ್ದುದು ಈ ಬ್ಲಾಗ್ ಗೆ ಕಾರಣ. ವಿಧ ವಿಧವಾದ ಮಾತುಗಳ ವಿಶ್ಲೇಷಣೆ ಚೆನ್ನಾಗಿದೆ.

    ReplyDelete
  2. ಗುರುಪ್ರಸನ್ನ , ಚಿಂತಾಮಣಿ20 January 2026 at 14:19

    ಮೊಬೈಲ್ ಫೋನಿನಲ್ಲಿ ಎತ್ತರದ ಧ್ವನಿಯಲ್ಲಿ ಮಾತನಾಡುತ್ತಿದ್ದ ಆ ವ್ಯಕ್ತಿಗೆ ಮೊಬೈಲ್ ಫೋನ್ ಅವಶ್ಯಕತೆ ಇರಲಿಲ್ಲ ಹಾಗೆಯೇ ಸಂಬಂಧಿತ ವ್ಯಕ್ತಿಗೆ ಆ ಮಾತುಗಳು ಕೇಳಿಸುತ್ತಿತ್ತು ಎಂದು ನನ್ನ ಭಾವನೆ.
    ಪುಸ್ಸೂಸ ಎಂಬುದು ಆಂಗ್ಲ ಭಾಷೆಯ ಸ್ಪೂನ್ ಪದದ ಅಪಭ್ರಂಶ ಇರಬಹುದೇ?

    ಮಾತಿನ ಮಣಿಗಳನ್ನು ಲೇಖಕರು ಮುದ್ದಾಗಿ ಪೋಣಿಸಿ ಯಥಾ ಪ್ರಕಾರ ತೊಡಿಸಿದ್ದಾರೆಂದು ಅನಿಸಿಕೆ.

    ಕೊನೆ ಹನಿ
    ಮಾತು ಅಮ್ಮ ಮೌನ ಅಪ್ಪ ಎಂಬುದು ಹೊಸ ನಾಣ್ನುಡಿ 😄😅

    ವಂದನೆಗಳು

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು