ಹೌದು ಸ್ವಾಮಿ ನಾವಿರೋದೆ ಹೀಗೆ
" ನಾರಾಯಣ ಸಾಕು ಮಾಡಪ್ಪಾ, ಬೇಗ ಕರೆಸ್ಕೋ" ಈ ಮಾತು ಕಿವಿಗೆ ಬಿದ್ದಾಗ, ಆರ್ತನಾದ ಅನಿಸಿತು. ತಿರುಗಿ ನೋಡಿದಾಗ ಕಂಡದ್ದು, ಕೃಶ ದೇಹದ 75 ವರ್ಷದ ಆಸುಪಾಸಿನ ಒಬ್ಬ ಹಿರಿಯರು. ಉದ್ಯಾನವನದಲ್ಲಿ ನಿಧಾನವಾಗಿ ನಡೆಯುತ್ತಿದ್ದರು, ಕಿವಿಯ ಹತ್ತಿರ ಹಿಡಿದ ಕೈಯಲ್ಲಿ ಮೊಬೈಲ್ ಫೋನ್, ಬಿಳಿ ಪಂಚೆ ಶರ್ಟು, ಕಾಲಲ್ಲಿ ಶೂ. ಏನೋ ನೋವಿರಬೇಕು ಅಂತ ಭಾವಿಸಿದೆ. ಮತ್ತೆರಡು ದಿನದ ನಂತರ ಆ ಹಿರಿಯರು ಕಂಡರು. ಏರು ದಾರಿಯಲ್ಲಿ ನಡೆಯುತ್ತಿದ್ದೆವು. ಸ್ವಲ್ಪ ದೂರ ಸಾಗಿದ ನಂತರ, ಸುಧಾರಿಸಿಕೊಳ್ಳುವ ರೀತಿ ನಿಂತು "ನಾರಾಯಣ ಸಾಕು ಮಾಡಪ್ಪಾ, ಬೇಗ ಕರೆಸ್ಕೋ" ಎಂದು ಹೇಳಿದ್ದು ಗಮನಿಸಿದೆ. ಅದರ ಹಿಂದೆ ನೋವಿತ್ತು. ವಯೋಸಹಜ ಸುಸ್ತೂ ಇತ್ತು. ಸಂಕಟ ಬಂದಾಗ ವೆಂಕಟರಮಣ ಎನ್ನುವ ನಾಣ್ಣುಡಿ ಅಕ್ಷರಶಃ ಸತ್ಯ . ಒಬ್ಬೊಬ್ಬರ ಸಂಕಟ ಒಂದೊಂದು, ಅದಕ್ಕೆ ತಕ್ಕ ಹಾಗೆ ದೇವರಲ್ಲಿ ಬೇಡಿಕೆ... ದೇವರು ಬೇಡಿಕೆ ಈಡೇರಿಸ್ತಾನೋ ಇಲ್ಲವೋ... ಅವನಿಗೇ ಗೊತ್ತು... ನಾವ್ ಮಾತ್ರ ಬೇಡಿಕೊಳ್ಳುವುದು ಬಿಡಲ್ಲ. ದೇವರನ್ನು ನಂಬುವ ಆಸ್ತಿಕರದು ಈ ಬಗೆಯಾದರೆ, ದೇವರನ್ನೇ ನಂಬದ ನಾಸ್ತಿಕರೂ ಇದ್ದಾರೆ. ತಮ್ಮ ಹತ್ತು ಜನ್ಮದಲ್ಲಿ ದೇವರನ್ನು ದ್ವೇಷಿಸುತ್ತಿದ್ದ ಜಯ ವಿಜಯರು ಇದ್ದರೆಂಬುದು ದಶಾವತಾರದ ಕಥೆ. ನನ್ನೂರು ದೊಡ್ಡಜಾಲದಲ್ಲಿ, ಚಿಕ್ಕಂದಿನಲ್ಲಿ ನೋಡಿದ್ದು... ಮುನೀರಣ್ಣ ಒಬ್ಬ ಕೆಳ ಜಾತಿಯವರು, ಜೊತೆಗೆ ಕುಷ್ಟರೋಗಿ. ಕೈಬೆರಳುಗಳೆಲ್ಲ ಮುರುಟಿ ಹೋಗಿದ್ದವು. ಸ...