ಪೋಲೀಸ್ - ಭಯ - ಬದಲಾವಣೆ

 









ಅಕ್ಟೋಬರ್ 28 ರಿಂದ, ನಮ್ಮ ರಾಜ್ಯದ ಪೊಲೀಸರ ಟೋಪಿಯನ್ನು ಬದಲಾಯಿಸುವ ಬಗ್ಗೆ, ಪತ್ರಿಕೆಗಳಲ್ಲಿ ನೋಡಿದ ನಂತರ  .... ಟೋಪಿಯ ಬದಲಾವಣೆ ಹೊರನೋಟಕ್ಕೆ ಕಾಣುವಂತದ್ದು, ನಿಜವಾಗಿ ಬದಲಾವಣೆ ಆಗಬೇಕಾಗಿರುವುದು ಅವರ ಕಾರ್ಯವೈಖರಿ ಎಂದು ಅನಿಸಿದ್ದು ಸತ್ಯ. ಹಾಗಂತ.. ನಮ್ಮ ಪೊಲೀಸ್ ಪಡೆಯ ದಕ್ಷತೆಯ ಬಗ್ಗೆ ನಾನು ಅನುಮಾನ ಪಡುತ್ತಿಲ್ಲ. Every herd has a black sheep ಎನ್ನುವ ಮಾತಿನಂತೆ, ಅಲ್ಲಿಯೂ ಕೆಲ ಅಪಸವ್ಯಗಳು ಇರುವುದು ಸಾಧ್ಯ.

ಸಾಮಾನ್ಯವಾಗಿ, ಅವರ ಕೆಲಸದಲ್ಲಿ ಬೇರೆ ಯಾರೂ ಮೂಗು ತೂರಿಸದಿದ್ದಲ್ಲಿ, ಅವರು ತಮ್ಮ ಕಾರ್ಯಕ್ಷೇತ್ರದಲ್ಲಿ ನೈಪುಣ್ಯವನ್ನು ತೋರಿಸಿದ ಉದಾಹರಣೆಗಳು ಸಾಕಷ್ಟಿವೆ.

ಈಚೆಗೆ ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಉತ್ತರ ಪ್ರದೇಶದ ಪೊಲೀಸರು ದುಷ್ಟರ ವಿರುದ್ಧ ಮಾಡಿದ ಕಾರ್ಯಾಚರಣೆಯ ವಿಡಿಯೋ ತುಣುಕುಗಳು ನೋಡುವಾಗ, ಇದು ನಮ್ಮ ಭಾರತದಲ್ಲಿ ಸಾಧ್ಯವಾ ಎನ್ನುವ ಪ್ರಶ್ನೆ ಎದುರಾದದ್ದು ನಿಜ. ಆದರೆ ರಾಜಕೀಯ ಇಚ್ಛಾಶಕ್ತಿ ಇದ್ದಾಗ ಎಲ್ಲವೂ ಸಾಧ್ಯ ಎಂದು ಸಾಬೀತಾಯಿತು. 

ದುರ್ದೈವವೆಂದರೆ, ರಾಜಕೀಯ ಇಚ್ಛಾ ಶಕ್ತಿಯನ್ನು, ಎದುರಾಳಿಗಳ ವಿರುದ್ಧ ಬಳಸುವ, ಹಾಗೆ ತಮ್ಮವರನ್ನು ರಕ್ಷಿಸುವ ಮಾರ್ಗವಾಗಿತ್ತೇ ಹೊರತು, ನಿಜವಾದ ದುಷ್ಟರನ್ನು ಹಾಗೂ ದೇಶದ್ರೋಹಿಗಳನ್ನು ಗುರುತಿಸಿ ಶಿಕ್ಷಿಸುವ ಮಾರ್ಗವಾಗಿದ್ದಂತೆ ಬಹಳಷ್ಟು ಸಮಯದಲ್ಲಿ ಕಂಡು ಬರಲಿಲ್ಲ. ಈ ಎಲ್ಲ ಸಮಯದಲ್ಲೂ  ನಮ್ಮ ಕಣ್ಣಿಗೆ ಕಾಣುತ್ತಿದ್ದದ್ದು ಪೋಲಿಸ್ ಇಲಾಖೆಯ ಕಾರ್ಯವೈಖರಿ/  ಅವರ ವೈಫಲ್ಯವೇ. ತುರ್ತು ಪರಿಸ್ಥಿತಿಯ ಸಮಯದ ಪೊಲೀಸರ ಅತಿರೇಕದ ದೌರ್ಜನ್ಯ ಒಂದು ಜ್ವಲಂತ ಉದಾಹರಣೆ.     

ಬಹುಶಃ ಈ ರಾಜಕೀಯ ಚಿಂತನೆಯಲ್ಲಿ ಸ್ವಲ್ಪ ಮಟ್ಟಿಗೆ ಆದ ಬದಲಾವಣೆಯ ಪರಿಣಾಮವೇ ಉತ್ತರ ಪ್ರದೇಶದ ಕಾರ್ಯಾಚರಣೆ ಎಂದು ನನ್ನ ಅನಿಸಿಕೆ.

ಯಾವ ಹಸ್ತ ಕ್ಷೇಪವೂ ಇಲ್ಲದೆ, ಅಪರಾಧಿಗಳನ್ನು ಗುರುತಿಸಿ ಶಿಕ್ಷಿಸುವ ಅಧಿಕಾರವನ್ನು ಸಂಬಂಧಿಸಿದವರಿಗೆ ಕೊಟ್ಟಾಗ, ಅಲ್ಲಲ್ಲಿ ಅಪಭ್ರಂಶವಿದ್ದರೂ, ಗುರಿಯೆಡೆಗೆ ಸಾಗುವುದು ನಿಶ್ಚಿತ, ಹಾಗೂ ಉತ್ತರದಾಯಿತ್ವದ ಹೊಣೆ ನಿರ್ಧರಿಸಿದಂತಾಗುತ್ತದೆ. ಸಬೂಬುಗಳನ್ನು ಹುಡುಕುವ ಸಂದರ್ಭಗಳು ಕಡಿಮೆಯಾಗುತ್ತದೆ.

ಆಪರೇಷನ್ ಸಿಂಧೂರ್ ಇದಕ್ಕೊಂದು ಜ್ವಲಂತ ಉದಾಹರಣೆ. ಗುರಿಯನ್ನು ನಿರ್ಧರಿಸಿ, ಕಾರ್ಯಾಚರಣೆಯ ಸಂಪೂರ್ಣ ಹೊಣೆಯನ್ನು ಸೈನ್ಯಕ್ಕೆ ವರ್ಗಾಯಿಸಿದಾಗ ಸಿಕ್ಕ ಫಲಿತಾಂಶ ನಮ್ಮ ಕಣ್ಣಮುಂದಿದೆ. 

ಪೋಲಿಸ್ ಎಂದಾಕ್ಷಣ ಕಣ್ಣಿನ ಮುಂದೆ ಬರುವ ಚಿತ್ರಣ... ಖಾಕಿ ಬಟ್ಟೆಯದು. ಬಾಲ್ಯದಲ್ಲಿ ಕಂಡ ಪೊಲೀಸ್.   ಪೋಲೀಸ್ ಅಂದರೆ ಕಳ್ಳರನ್ನು ಹಿಡಿಯುವವರು... ಹಾಗಾಗಿ ನಾವು ಆಡುತ್ತಿದ್ದದ್ದು ಕಳ್ಳ ಪೋಲಿಸ್ ಆಟ.  ಪೋಲಿಸ್ ಎಂದರೆ ಭಯ ಎಂಬುವ ಭಾವನೆ ಸಾಮಾನ್ಯವಾದದ್ದು. ಪ್ರಾಯಶಃ, ಬ್ರಿಟಿಷರ ಕಾಲದ, ಪೊಲೀಸರ ದೌರ್ಜನ್ಯ ಇದಕ್ಕೆ ಕಾರಣ. ಈಗೀಗ ಆ ಭಾವನೆ ಬದಲಾಗುತ್ತಿರುವುದು ಸಂತೋಷದ ಸಂಗತಿ. 



CMCA ಎಂಬ ಸಂಸ್ಥೆಯ ಜೊತೆಯ ಒಡನಾಟದ ಸಮಯದಲ್ಲಿ, ಹೈಸ್ಕೂಲ್ ಮಕ್ಕಳಿಗೆ, ನಾಗರೀಕ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸುವಾಗ...traffic ಪೊಲೀಸರಿಗೆ, ಧನ್ಯವಾದಗಳನ್ನು ಹೇಳುವ ಒಂದು ಕಾರ್ಯಕ್ರಮವಿತ್ತು.  ಪ್ರತೀ ವರ್ಷ ಮಕ್ಕಳು ಪೋಲೀಸರಿಗೆ ಹೂ / thank you... card ಕೊಡುತ್ತಿದ್ದರು.  ಅಂತಹ ಒಂದು ಕಾರ್ಯಕ್ರಮದಲ್ಲಿ ಪೊಲೀಸರಿಗೆ ಆಟವಾಡಿಸುವ ಅವಕಾಶ ನನಗೆ ದೊರಕಿತ್ತು.   ಆ ಸಮಯದಲ್ಲಿ ಮಕ್ಕಳು ಪೊಲೀಸರೊಂದಿಗೆ ಬೆರೆತು, ಮಾತನಾಡುವ ಅವಕಾಶ ದೊರೆತು, ಪೊಲೀಸರೆಂದರೆ ನಮ್ಮ ರಕ್ಷಕರು ಎಂಬ ಭಾವನೆ ಬೆಳೆಯಲು ಸಾಧ್ಯವಾಗಿದ್ದು.  ಕೆಲ ಸಂದರ್ಭಗಳಲ್ಲಿ, ತಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಪೊಲೀಸ್ ಠಾಣೆಗೆ ಹೋಗಿ, ಪ್ರಯತ್ನ ಪಟ್ಟಂತಹ ಉದಾಹರಣೆಗಳು ಇವೆ.

ನಾನು ಮೊದಲು ಕಂಡದ್ದು, ನಮ್ಮೂರು ದೊಡ್ಡಜಾಲಕ್ಕೆ ಸಂಬಂಧಿಸಿದ ಪೊಲೀಸ್ ಠಾಣೆ, ಅದಿದ್ದದ್ದು ಚಿಕ್ಕಜಾಲದಲ್ಲಿ. ಏನಿದ್ದರೂ ನಾವುಗಳು ಅದರಿಂದ ಸ್ವಲ್ಪ ದೂರವೇ... ಭಯವೇ ಅದರ ಮೂಲ.

ಖಾಕಿ ಬಟ್ಟೆಯ ಜೊತೆ ನನ್ನ ಮೊದಲ ಮುಖಾ ಮುಖಿ.. ನಾನು ಎಂಟನೇ ತರಗತಿಯಲ್ಲಿದ್ದಾಗ.. ಆಗ ಸೈಕಲ್ ಗೆ  ಲೈಸೆನ್ಸ್ ಬೇಕಾಗಿತ್ತು. ನಾನು ಅಣ್ಣನ ಸೈಕಲ್ ತುಳಿಯುತ್ತಾ ಗಾಂಧಿಬಜಾರ್ ಸರ್ಕಲ್ಲನ್ನು ದಾಟಿದ್ದೆ.. ನನ್ನನ್ನು ಗಬಕ್ ಎಂದು ಹಿಡಿದು ಲೈಸೆನ್ಸ್ ಎಲ್ಲಿ ಎಂದು ಕೇಳಿದಾಗ ನಾನು ಕಕ್ಕಾಬಿಕ್ಕಿ. ಮನೆಗೆ ಹೋಗಿ ಕಿಟ್ಟಣ್ಣನಿಗೆ ಹೇಳಿ, ನನ್ನ ಜವಾಬ್ದಾರಿಯನ್ನು ಕಳೆದುಕೊಂಡಿದ್ದೆ. ಟಿ ಆರ್ ಶಾಮಣ್ಣನವರ ಪ್ರಯುತ್ನದ  ಪರಿಣಾಮ ಸೈಕಲ್ ಲೈಸೆನ್ಸ್ ರದ್ದುಗೊಂಡು, ಬಹಳ ಜನ ಸಂತೋಷಪಟ್ಟಿದ್ದು... ಜನಪ್ರಿಯ ಕೆಲಸಕ್ಕಾಗಿ ಹೋರಾಡಿದ ಅವರಿಗೆ ನನ್ನದೊಂದು ಹೃತ್ಪೂರ್ವಕ ನಮಸ್ಕಾರ.

ಆಗಿನ್ನೂ ಬೆಂಗಳೂರಿಗೆ ಟ್ರಾಫಿಕ್ ಸಿಗ್ನಲ್ ಲೈಟ್ ಬಂದ ಹೊಸದು... ಕಾರ್ಪೊರೇಷನ್ ಆಫೀಸಿನ ಸುತ್ತಮುತ್ತ ಅದನ್ನು ಅಳವಡಿಸಿದ್ದರು. ಅದರ ಬಗ್ಗೆ ಇನ್ನೂ ಸರಿಯಾದ ತಿಳುವಳಿಕೆ ಇರಲಿಲ್ಲ. ಡಿಪ್ಲೋಮಾ ಎರಡನೆಯ ವರ್ಷದ ಪರೀಕ್ಷೆ, ಬೇಗ ಹೋಗುವ ಆತುರ... ಸೈಕಲ್ಲಿನಲ್ಲಿ ಟ್ರಾಫಿಕ್ ಲೈಟ್ ಅನ್ನು ದಾಟಿದ್ದೆ... ಪೊಲೀಸರು ಕೈಯಡ್ಡ ಇಟ್ಟು ನಿಲ್ಲಿಸಿದರು.. ನನಗೆ ಪ್ರಾಣ ಸಂಕಟ.. ಕಾಡಿ ಬೇಡಿ ಪರೀಕ್ಷೆಯ ವಿಷಯವನ್ನು ತಿಳಿಸಿ ಅವರಿಂದ ಬಿಡಿಸಿಕೊಂಡು.. ಬದುಕಿದೆಯೋ ಬಡಜೀವವೇ ಎಂದು ಓಡಿದ್ದು... ಕಹಿ ಘಟನೆ, ಈಗ ನಗೆ ತರಿಸುವ ನೆನಪು.

ಮದರಾಸಿನಲ್ಲಿದ್ದ ಸಮಯ, ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡಿ ಬೆಳಗಿನ ಜಾವ ಮದರಾಸು ತಲುಪಿದ್ದೆ. ಕೈಯಲ್ಲಿ ಅಂದವಾದ ಸಣ್ಣದಾದ ಸೂಟ್  ಕೇಸಿತ್ತು. ಹೊಸದಾಗಿದ್ದ ಲೆದರ್ ಶೂಸ್ ಕಾಲಿನಲ್ಲಿ, ನಡೆಯುವಾಗ ಟಪಾ ಟಪ್ ಸದ್ದು ಮಾಡುತ್ತಿತ್ತು... ಎಲ್ಲಿಂದಲೋ ಬಂದ ಇಬ್ಬರೂ ಪೊಲೀಸರು ತಡೆಯೊಡ್ಡಿ ನಿಲ್ಲಿಸಿದರು. ಸೂಟ್ಕೇಸ್  ತೆರೆದು ತೋರಿಸಲು ಆಜ್ಞೆ ಮಾಡಿದರು. ನಾನೇನು ತಪ್ಪು ಮಾಡಿಲ್ಲ ಎನ್ನುವ ವಿಶ್ವಾಸವಿತ್ತು, ಆದರೂ ಮನಸ್ಸಿನಲ್ಲಿ ಅಳುಕಿತ್ತು. ತಪಾಸಣೆ ಮಾಡಿದ ನಂತರ...ಪೋ..ಪೋ ಎಂದು ಹೇಳಿ ಹೊರಟರು. ಇಂಗ್ಲೀಷ್ ಮಾತನಾಡುತ್ತಿದ್ದ ಒಬ್ಬ ವ್ಯಕ್ತಿ ಬಂದು ನನಗೆ ಸಮಾಧಾನ ಹೇಳಿದ್ದು ಹೀಗೆ... ತಮಿಳುನಾಡಿನಲ್ಲಿ ಮದ್ಯಪಾನ ನಿಷೇಧವಿತ್ತು... ಕರ್ನಾಟಕದಲ್ಲಿ ಮದ್ಯದ ಹೊಳೆ ಹರಿಯುತ್ತಿತ್ತು. ಬೆಂಗಳೂರಿಂದ ವಾಪಸ್ ಬರುವಾಗ ಗುಟ್ಟಾಗಿ ಒಂದಷ್ಟು  ಮದ್ಯವನ್ನು ತರುವ ಜನರಿದ್ದರು. ಅಂತಹವರಿಂದ ಒಂದಷ್ಟು ಲಾಭ ( ಮದ್ಯಕ್ಕೆ ಆದ್ಯತೆ ಎನ್ನಲೇ) ಪಡೆಯುವ ಹುನ್ನಾರ.

ದೆಹಲಿಯಿಂದ ಚಂದೀಗಢಕ್ಕೆ ರಾತ್ರಿಯ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದೆವು... ಸಿಹಿ ನಿದ್ರೆ ಸಮಯ... ಬಸ್ಸಿನಲ್ಲಿ ಗುಜುಗುಜು.. ಮೊದಲು ಕಣ್ಣಿಗೆ ಕಂಡದ್ದು ಬಂದೂಕುಗಳೇ... ಆಗಿನ್ನೂ ಖಲಿಸ್ತಾನ್ ಚಳುವಳಿ ಉತ್ತುಂಗದಲ್ಲಿದ್ದ ಸಮಯ.. ಮನಸ್ಸಿನಲ್ಲಿ ಭಯವೋ ಭಯ.. ನಂತರ ತಿಳಿದದ್ದು ಯಾವುದೋ ಸುಳಿವು ದೊರೆತು, ಆ ಅನುಮಾನದ ಮೇಲೆ ಬಸ್ಸಿನಲ್ಲಿ ಇದ್ದವರ ತಪಾಸಣೆ. ನೆಮ್ಮದಿಯ ನಿಟ್ಟುಸಿರು.

ಪೀಣ್ಯದ ಫ್ಯಾಕ್ಟರಿಯಲ್ಲಿ ಇದ್ದ ಸಮಯ... ಭಾವಿಗೆ ಅಳವಡಿಸಿದ್ದ ಪಂಪನ್ನು ಬಿಚ್ಚಿದ ಕಳ್ಳ ಏನೋ ಕಾರಣದಿಂದ... ಅಲ್ಲಿಯೇ ಇದ್ದ ಪೊದೆಯಲ್ಲಿ ಇಟ್ಟು ಹೋಗಿದ್ದ... ಯಾರೋ ಬುದ್ಧಿವಂತರು ನೀಡಿದ ಸಲಹೆ ಮೇರೆಗೆ ಪೊಲೀಸ್ ಸ್ಟೇಷನ್ ಗೆ  ದೂರು ಕೊಟ್ಟಿದ್ದಾಯ್ತು. ಬಂದ ಪೊಲೀಸರು, ಮಹಜರು ಮಾಡಿ, ಪಂಪನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ, ಅಲ್ಲಿನ ವಿಧಿಗಳನ್ನು ಪೂರೈಸಿದ ಬಳಿಕ.... "ನ್ಯಾಯಾಲಯಕ್ಕೆ ತೋರಿಸಬೇಕಾದ ಸಮಯದಲ್ಲಿ ಪಂಪನ್ನು ಅಲ್ಲಿಗೆ  ಹಾಜರು ಪಡಿಸುತ್ತೇವೆ .." ಎಂದು ಮುಚ್ಚಳಿಕೆಯನ್ನು  ಬರೆಸಿಕೊಂಡು ಪಂಪನ್ನು ನಮಗೆ ವಾಪಸ್ಸು ಕಳಿಸಿಕೊಟ್ಟರು. ನಂತರದ ನಮ್ಮ ಯೋಚನೆ..... ಸುಮ್ಮನೆ ಇದ್ದಿದ್ದರೆ ಪೊಲೀಸ್ ಠಾಣೆಗೆ ಅಲೆಯುವ, ಅವರನ್ನು ಕರೆತರಲು ಆಟೋರಿಕ್ಷಾ ಗೆ ಖರ್ಚು ಮಾಡುವ, ಮತ್ತೆ ಅದನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವ ಪರಿಪಾಟಲೇ ಇರುತ್ತಿರಲಿಲ್ಲ... ಕೈ ಕೊಟ್ಟು ಕಚ್ಚಿಸಿಕೊಂಡಂತಾಯ್ತು... ಅದೊಂದು ಅನುಭವ.

ಮತ್ತೊಂದು ಅನುಭವ...ಫ್ಯಾಕ್ಟರಿಯಲ್ಲಿ ಬಾಗಿಲು ಒಡೆದು ಕಳ್ಳತನವಾಗಿತ್ತು...ಆಗ ಬಂದಿದ್ದು ಹೊಯ್ಸಳ ಗಸ್ತು ವಾಹನ. ಅದರಲ್ಲಿದ್ದ ಪೊಲೀಸರು ಏನಾಯ್ತು ಎಂದು ವಿಚಾರಿಸುತ್ತಿದ್ದರು... ಆಗ ಅವರಿಗೆ ಬಂದ ಫೋನ್ನಲ್ಲಿ ಆ ಕಡೆಯಿಂದ ಕೇಳಿದ್ದು " ಮುನೇಶ್ವರ ಬ್ಲಾಕ್ನಲ್ಲಿ ಬಾಗಿಲು ಒಡೆದಿದ್ದಾರಂತೆ....ಅವರ ಗ್ಯಾಂಗೇ .."  ಇಲ್ಲೇ ಬಂದಿದ್ದೇವೆ ಎಂಬುದು ಇವರ ಉತ್ತರ. ಅಲ್ಲಿಗೆ ಈ ವಿಷಯ ಅವರಿಗೆ ಮೊದಲೇ ತಿಳಿದಿತ್ತು... ನಮ್ಮೊಡನೆ ಆಡಿದ ಮಾತು ಬರೀ ತೋರಿಕೆಗಾಗಿತ್ತು. ಅವರ ಮಾತಿನಿಂದ ಕಳ್ಳರು ಯಾರು ಎಂಬುದು ಅವರಿಗೆ ತಿಳಿದಿತ್ತು ಎಂದು ನನ್ನ ಅನಿಸಿಕೆ. ಹಿಂದಿನ ಅನುಭವದಿಂದ ಪೊಲೀಸ್ ಠಾಣೆಗೆ ದೂರು ಕೊಡಲು ಮನಸ್ಸು ಒಪ್ಪಲಿಲ್ಲ.

ವ್ಯಾಪಾರದ ಸಂಬಂಧ ಅಂದಿನ ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಶ್ರೀ ಎಆರ್ ನಿಜಾಮುದ್ದೀನ್ ಹಾಗೂ ಡೆಪ್ಯೂಟಿ ಕಮಿಷನರ್ (ಟ್ರಾಫಿಕ್) ಆಗಿದ್ದ ಶ್ರೀ ಎಚ್ ಟಿ ಸಾಂಗ್ಲಿಯಾನ ಅವರನ್ನು ಭೇಟಿ ಮಾಡುವ ಅವಕಾಶ ವಾಗಿತ್ತು. ಆ ಸಮಯದಲ್ಲಿ ಆದ ಮಾತುಕತೆ, ತೆಗೆದುಕೊಂಡ ನಿರ್ಧಾರ ನನಗೆ ಬಹಳ ಮೆಚ್ಚುಗೆ ಆಯ್ತು. 

ನನ್ನದಲ್ಲದ ಕಾರಣಗಳಿಗೆ, ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಬೇಕಾದ ಪ್ರಸಂಗ ಜೀವನದಲ್ಲಿ ಎರಡು ಬಾರಿ ಆಯ್ತು. ಅದರಿಂದಾದ ಪ್ರಯೋಜನ ಏನೆಂದು ಇಂದಿಗೂ ನನಗೆ ಮನವರಿಕೆಯಾಗಿಲ್ಲ. ಒಂದು ಅನುಭವವನ್ನು ಅನ್ನು ಬ್ಲಾಗ್ ಮೂಲಕ ಬರೆದಿದ್ದೆ... ಇದೋ ನಿಮಗಾಗಿ...     

https://sihikahinenapugalu.blogspot.com/2022/11/blog-post_21.html

ಓದಿ ಎಂಬ ಆಗ್ರಹದೊಂದಿಗೆ.

ಇನ್ನೊಂದು ತಮಾಷೆಯ ಪ್ರಸಂಗ... ರಾತ್ರಿ ಪಾಳಿಯ ಪೊಲೀಸ್ ಪಹರೆ ಇದ್ದ ಕಾಲ.. ರಾತ್ರಿ ಪೀಪಿ ಊದುತ್ತಾ, ಲಾಠಿ ಬಡಿಯುತ್ತಾ ಇದ್ದದ್ದು ನನ್ನ ಮೇಲೆ ಪ್ರಭಾವ ಬೀರಿತ್ತು. ಹೀಗೊಂದು ದಿನ ನಾನು ಪೀಪಿಯನ್ನು ತಯಾರು ಮಾಡಿಟ್ಟುಕೊಂಡು ರಾತ್ರಿ ಒಂದು ಹೊತ್ತಿನಲ್ಲಿ ಊದಿ ಎಚ್ಚರಿಸಬೇಕು ಎಂಬ ಆಲೋಚನೆಯೊಂದಿಗೆ ಮಲಗಿದ್ದೆ. ರಾತ್ರಿ ತೆರೆದ ಕಿಟಕಿಯ ಮೂಲಕ ರೂಮಿನಲ್ಲಿ ಹಾಕಿದ್ದ ಬಟ್ಟೆಗಳನ್ನು ಕಳ್ಳ ಹಾರಿಸಿಕೊಂಡು ಹೋಗಿದ್ದ, ಬೆಳಿಗ್ಗೆ ಎದ್ದರೆ ಕಳ್ಳತನ  ಪತ್ತೆಯಾಗಿದೆ ..ಪೀಪಿ ಮಾತ್ರ ನನ್ನ ಬಳಿಯೇ ಹಾಯಾಗಿದೆ. ನನ್ನ ಪೊಲೀಸ್ ಗಿರಿಗೆ ಸಂಪೂರ್ಣ ಸೋಲು.

ಚಲನಚಿತ್ರಗಳಲ್ಲಿ ಬಹುಪಾಲು ಪೊಲೀಸರನ್ನು ಹಾಸ್ಯಮಯವಾಗಿ ತೋರಿಸಿದ್ದೇ ಹೆಚ್ಚು. ಎಲ್ಲ ಮುಗಿದ ಮೇಲೆ ಪೊಲೀಸರ ಹಾಜರಿ ಸಾಮಾನ್ಯ ದೃಶ್ಯ. ಚಿತ್ರದ ಹೆಸರು ಜ್ಞಾಪಕ ಇಲ್ಲ... ಅದರಲ್ಲಿ ಖ್ಯಾತ ಹಾಸ್ಯ ನಟರಾದ ನರಸಿಂಹರಾಜು ಮತ್ತು ಬಾಲಕೃಷ್ಣ ಅವರದು ಪೋಲಿಸ್ ಪಾತ್ರ.. ಸಂಭದ ಮಾವ ಅಳಿಯ. ಮಾತುಗಳು ತಮಾಷೆಯಾಗಿತ್ತು ... ಅದರಲ್ಲೂ " ಏಯ್ ಡ್ಯೂಟಿಯ ಮೇಲೆ ಇರುವಾಗ ಸಾರ್ ಅನ್ನು" ಎನ್ನುವ ಮಾತಿನ ಶೈಲಿಯನ್ನು ಕೇಳಿ ನಕ್ಕಿದ್ದೆ ನಕ್ಕಿದ್ದು.

ನನ್ನ ಭಾವ ನಂಜುಂಡಯ್ಯನವರು ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು... ಅವರನ್ನು ಪೊಲೀಸ್ ಸಮ ವಸ್ತ್ರದಲ್ಲಿ ನೋಡಿದ್ದು ಇಲ್ಲ. ಪೊಲೀಸ್ ಭಾಷೆಯ ಪ್ರಯೋಗವನ್ನು ಕೇಳಿದ್ದೆ.

ತುಂಬಾ ನ್ಯಾಯವಂತ ಹಾಗೂ ಕಾಯಿದೆಗೆ ತಕ್ಕಂತೆ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗೆ ಆಯಕಟ್ಟಿನ ಸ್ಥಳಗಳಲ್ಲಿ ಜಾಗ ಸಿಗದು, ಒಂದು ವೇಳೆ ಸಿಕ್ಕರೂ ಅವರು ಬಹಳ ದಿನ ಆ ಜಾಗದಲ್ಲಿ ಇರಲಾರರು, ಎತ್ತಂಗಡಿ ಖಾತ್ರಿ.. ಎಂದು ಕೇಳಿದ್ದೇನೆ. ಆ ಜಾಗಕ್ಕೆ ಬರಲು ಬೇಕಾದ ಹಣಬಲ ಹಾಗೂ ರಾಜಕೀಯ ಪ್ರಭಾವ ಇರುವವರಿಗೆ ಮಾತ್ರ ಅಂತಹ ಸೌಲಭ್ಯ.

ನಿಸ್ಪ್ರಹತೆಯಿಂದ ಕೆಲಸ ಮಾಡುವ, ಯುವ ಪೊಲೀಸ್ ಪೇದೆಗಳನ್ನು ನೋಡಿದ್ದೇನೆ... ಅವರು ಸಾರ್ವಜನಿಕರೊಡನೆ ನಡೆದುಕೊಳ್ಳುವ ರೀತಿಯನ್ನು ಮೆಚ್ಚಿದ್ದೇನೆ.

ಇದರ ವ್ಯತಿರಿಕ್ತ ಮುಖದ ಪರಿಚಯವೂ ಇದೆ.

ಅವರ ವೃತ್ತಿಜೀವನದ ಅಂಗವಾಗಿ, ಸಮಾಜಘಾತುಕ ವ್ಯಕ್ತಿಗಳೊಡನೆ ವ್ಯವಹರಿಸುವಾಗ, ಉಪಯೋಗಿಸುವ ಭಾಷೆ ಹಾಗೂ ಶಿಕ್ಷಿಸುವ ವೈಖರಿಯನ್ನು ಕೇಳಿದಾಗ... ಅದು ಸಹಜವೇನೋ ಎಂದು ಅನಿಸಿದ್ದಿದೆ.

 ಇನ್ನು ನಮ್ಮ ಜನಗಳ ನಡವಳಿಕೆ... ಪೋಲಿಸ್ ಇದ್ದಾಗ ಮತ್ತು ಇಲ್ಲದಾಗ ನೋಡಿದರೆ, ಕಾನೂನು ಉಲ್ಲಂಘಿಸುವುದು ಹೆಮ್ಮೆಯ ಸಂಗತಿ ಎಂಬ ಮನಃಸ್ಥಿತಿ ಇರ ಬಹುದೇನೋ ಎಂದು ಅನಿಸಿದ್ದಿದೆ. ಟ್ರಾಫಿಕ್ ಸಿಗ್ನಲ್ ಬಳಿ ಪೊಲೀಸ್ ಇದ್ದಾಗ, ಅದನ್ನು ತಕ್ಕಮಟ್ಟಿಗೆ ಗೌರವಿಸುವ ಜನ, ಪೊಲೀಸ್ ಇಲ್ಲದಿದ್ದಾಗ ಸಿಗ್ನಲ್ ಗೆ ಬೆಲೆಯೇ  ಕೊಡದಂತೆ ಹೋಗುವುದನ್ನು ಕಾಣಬಹುದು.

ಪೊಲೀಸರ ಕೆಲಸದ ಬಗ್ಗೆ ವಿಶ್ಲೇಷಿಸುವ, ಟೀಕಿಸುವ ನಾವು... ಅವರೂ ಮನುಷ್ಯರು, ಹಾಗಾಗಿ ನ್ಯೂನತೆಗಳು ಇರುವಂತಹವು ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. We respect those who respect law ಎನ್ನುವ ಪೊಲೀಸರ  ಘೋಷ ವಾಕ್ಯ ವನ್ನು ನಾವು  ಎಷ್ಟರಮಟ್ಟಿಗೆ ಗೌರವಿಸುತ್ತೇವೆ ಎಂದು ಯೋಚಿಸಿದಾಗ, ಕಣ್ಣಿಗೆ ಬೀಳುವುದು ಬಹಳ ಸಲ ವೈಫಲ್ಯ ಮಾತ್ರ.

ಬದಲಾವಣೆ ಜಗದ ನಿಯಮ.. ಟೋಪಿಯ ಬದಲಾವಣೆಯ ಮೂಲಕ.. ಪೊಲೀಸರ ಕಾರ್ಯ ವೈಖರಿ ಸಮಾಜಮುಖಿಯಾಗಿ ಬದಲಾವಣೆಯಾಗಲಿ... ಜೊತೆ ಜೊತೆಗೆ ಕಾನೂನನ್ನು ಗೌರವಿಸುವ / ಪಾಲಿಸುವ ಮನೋಭಾವವು ನಮ್ಮಲ್ಲಿ ಬರಲಿ ಎಂದು ಆಶಿಸುತ್ತಾ..

ನಮಸ್ಕಾರ....


ಡಿ ಸಿ  ರಂಗನಾಥ ರಾವ್

9741128413

    

    

Comments

  1. ಬರಹ ಬಹಳ ವಿಷಯಗಳನ್ನು ನೆನಪಿಗೆ ತರುತ್ತೆ. ಚಡ್ಡಿ ಪೋಲೀಸ್‌ ನೆನಪಿಗೆ ಬರುತ್ತೆ.

    ReplyDelete
  2. ಹಳೆ ನೆನಪುಗಳು ಮರುಕಳಿಸಿದೆವು. Nice 👍

    ReplyDelete
  3. ಆಡು ಮುಟ್ಟದ ಸೊಪ್ಪು ಇಲ್ಲ ರಂಗಣ್ಣ ಮುಟ್ಟದ ವಿಷಯ ಇಲ್ಲ .ಪೋಲೀಸರ ಬಗ್ಗೆ ಬಹಲ ಚಂಧದ ಲೇಖನ

    ReplyDelete

Post a Comment

Popular posts from this blog

ಕನಕಾಭಿಷೇಕ - ಸಂಭ್ರಮ

ದೈವಾಧೀನನಾದ ಮೋಹನ

ಹಿಂದು ಮುಂದಾದರೂ ಒಂದಾಗಬೇಕು