ಪರಿಸಮಾಪ್ತಿಯಾದ 'ಪರ್ವ'
ನಾನು ಗೌರವ ಭಕ್ತಿಯಿಂದ ನೋಡಿದ ಲೇಖಕರಲ್ಲಿ ಎಸ್ ಎಲ್ ಭೈರಪ್ಪನವರು ಅಗ್ರಗಣ್ಯರು. ಅವರು ನಮ್ಮನ್ನಗಲಿದ ಸುದ್ದಿಯನ್ನು ಕೇಳಿದಾಗ ಕೆಲ ಕ್ಷಣಗಳು ವಿಚಲಿತನಾದೆ. ವಯೋ ಸಹಜವಾದ ಸಾವು ಆದ್ದರಿಂದ, ಯಾವ ನೋವೂ ಇಲ್ಲದೆ, ಒಪ್ಪಿಕೊಳ್ಳಬೇಕೆಂಬುದು ನನ್ನ ನಿಲುವು. ಆದರೂ ಒಂದರೆಕ್ಷಣ ಸಂಕಟವಾದದ್ದು ಸತ್ಯ. " ದೇವರ ತಾವುಕ್ಕೆ ಹೋದದ್ದು, ಇನ್ನೇನು ಮಾತಾಡಿ ಸುಖವಿಲ್ಲ.. ಮುಂದಿನ ಕೆಲಸ ನೋಡೋಣ " ಎಂಬ ಗೃಹಭಂಗದ ಅಯ್ಯನವರ ಮೂಲಕ ಭೈರಪ್ಪನವರು ಹೇಳಿದ ಮಾತು ಕಟು ಸತ್ಯ. ಎಸ್ ಎಲ್ ಭೈರಪ್ಪನವರ ಬಗ್ಗೆ ಮೊದಲು ಕೇಳಿದ್ದು, ನಾನು ಶಹಾಬಾದಿನಲ್ಲಿದ್ದಾಗ. ನಾನಿನ್ನೂ ನನ್ನ ಓದಿನ ಗುಂಗಿನಲ್ಲೇ ಇದ್ದ ಕಾರಣ, ಕಾದಂಬರಿಗಳ ಬಗ್ಗೆ ಗಮನವಿರಲಿಲ್ಲ. ಆದರೆ ಸ್ನೇಹಿತರ ಗುಂಪಿನಲ್ಲಿ ನಡೆಯುತ್ತಿದ್ದ, ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣಾತ್ಮಕ ಚರ್ಚೆಯ ಮೂಲಕ. ಗೃಹಭಂಗದ ಗಂಗಮ್ಮನ ಬೈಗುಳ, " ಅನ್ನೆಲ್ಡಾಳುದ್ದ ಬಾವಿಗೆ ಆರಾಳುದ್ದ ಹಗ್ಗ ಬುಟ್ರೆ ಎಟುಕುತೈತಾ" ಎಂಬ ವಿಷಯದ ಬಗ್ಗೆ ನಡೆದ ಚರ್ಚೆ, ನನ್ನ ಗಮನ ಸೆಳೆದದ್ದು. ಆಗ ಬಂದಿದ್ದೆ ಗೃಹಭಂಗ ಕಾದಂಬರಿಯನ್ನು ಓದಬೇಕೆಂಬುವ ಕುತೂಹಲ. ಜೀವನದ ಒಂದು ಘಟ್ಟದಲ್ಲಿ, ಗೃಹಭಂಗ ಕಾದಂಬರಿಯನ್ನು, ಗಂಗಮ್ಮನ ಬೈಗುಳದ ವೈಶಿಷ್ಟ್ಯವನ್ನು ಸವಿಯಲು ಆರಂಭ ಮಾಡಿದರೂ, ಮನಸ್ಸಿಗೆ ತಾಕಿದ್ದು ನಂಜಮ್ಮನ ಪಾತ್ರ. ನಂಜಮ್ಮನ ಪಾತ್ರದಲ್ಲಿ ಕಂಡದ್ದು ನನ್ನಮ್ಮನನ್ನು. ಈ ವಿಷಯವನ...