ಅರ್ಹತೆಯ ಸವಾಲು ಎದುರಾದಾಗ..
ಆಪ್ತ ಸಮಾಲೋಚಕನಾಗಿ, ಮೂರು ದಶಕಕ್ಕೂ ಮಿಕ್ಕಿದ ನನ್ನ ಪಯಣದಲ್ಲಿ, ವಿವಿಧ ರೀತಿಯ ಚಿಂತನೆಗಳು, ಸಮಸ್ಯೆಗಳು, ಅದನ್ನು ಪರಿಹರಿಸಿಕೊಳ್ಳಬೇಕಾದಂತಹ ಮನಸ್ಸು, ಅದಕ್ಕೆ ಮಾಡುವ ಪ್ರಯತ್ನ ಹೀಗೆ ವಿವಿಧ ರೀತಿಯ ವ್ಯಕ್ತಿಗಳ ಜೊತೆ ಸಂವಹನ ಮಾಡ ಬೇಕಾದದ್ದು ಅನಿವಾರ್ಯ ಹಾಗೂ ಅವಕಾಶ ಸಹ. ಅದೇ ಒಂದು ಪ್ರಪಂಚ.
ವ್ಯಕ್ತಿಯ ಹಿನ್ನೆಲೆ ಏನೇ ಇರಲಿ, ಆಪ್ತ ಸಮಾಲೋಚಕನಾಗಿ ನಮ್ಮ ಬಳಿ ಮನಸ್ಸು ಬಿಚ್ಚಿ ಮಾತಾಡಲು, ಅವರಿಗೆ ನಮ್ಮ ಮೇಲೆ ವಿಶ್ವಾಸ ಬರಬೇಕಾದದ್ದು ಬಹು ಮುಖ್ಯ. ಆಪ್ತ ಸಮಾಲೋಚಕನಾಗಿ, ಪರಿಣಾಮಕಾರಿ ಫಲಿತಾಂಶಗಳನ್ನು ಕೊಡಬೇಕಾದರೆ ಮೊದಲ ಹಂತ ಅವರ ವಿಶ್ವಾಸವನ್ನು ಗಳಿಸುವುದೇ ಆಗುತ್ತದೆ. ಅದೇ ಸವಾಲಾಗಿ ನನ್ನ ಮುಂದೆ ಧುತ್ತೆಂದು ನಿಂತ ಪ್ರಸಂಗ ನಿಮ್ಮ ಮುಂದೆ.
ಅಂದು ನನ್ನ ಮುಂದೆ ಬಂದವರು ನನಗಿಂತಲೂ ಹಿರಿಯರಾದ ಒಬ್ಬ ವ್ಯಕ್ತಿ. ಅವರ ಮುಖದಲ್ಲಿ ಕೋಪ ಇತ್ತು, ಅಸಮಾಧಾನ ಇತ್ತು... ನಮಸ್ಕರಿಸಿ ಕೂಡಲು ಹೇಳಿದೆ... ಪ್ರತಿಯಾಗಿ ನಮಸ್ಕಾರವೂ ಮಾಡದೆ ಕೂರುತ್ತಾ ಹೇಳಿದ್ದು.." ನಿಮಗೊಂದು ಪ್ರಶ್ನೆ ಕೇಳಬೇಕು... ಕೌನ್ಸೆಲಿಂಗ್ ಮಾಡಲು ನಿಮಗೇನು ಅರ್ಹತೆ ಇದೆ... ನೀವು ನನಗಿನ್ನ ಚಿಕ್ಕವರು." ಒಂದು ಕ್ಷಣ ಅಧೀರನಾಗಿದ್ದು ಸತ್ಯ. ಸಮಜಾಯಿಷಿ ಕೊಡುವ ರೀತಿಯಲ್ಲಿ ಹೇಳಿದ್ದು.." ಹೌದು ಸರ್ ನಾನು ನಿಮಗಿನ್ನ ಚಿಕ್ಕವನು, ತಕ್ಕಮಟ್ಟಿಗಿನ ಅನುಭವ ಇದೆ, ನಿಮಗೆ ಒಪ್ಪಿಗೆ ಆದರೆ ನನ್ನ ಜೊತೆ ಮಾತನಾಡಿ... ನನ್ನ ಸೀಮಿತ ಅನುಭವದಲ್ಲಿ ಸಾಧ್ಯವಾದಷ್ಟೂ ನಿಸ್ಪೃಹತೆಯಿಂದ ಪ್ರಯತ್ನ ಮಾಡುತ್ತೇನೆ " ಎಂದು ಕೈಜೋಡಿಸಿದೆ.
ಸ್ವಲ್ಪ ಮೃದುವಾದಂತೆ ಕಂಡರು.
" ನಮ್ಮದು ದಾಂಪತ್ಯದಲ್ಲಿನ ಬಿಕ್ಕಟ್ಟು.. ನಿಮಗೆ ಅನುಭವ ಇದ್ಯಾ?" ಮತ್ತದೇ ಸವಾಲಿನ ಮಾತು
"ಎಲ್ಲವನ್ನು ಅನುಭವಿಸಿಯೇ ತಿಳಿಯಬೇಕೆ?... ಹಾಗಾದರೆ ಡಾಕ್ಟರ್ ಗಳು ಕಾಯಿಲೆ ಬಿದ್ದು ಅನುಭವ ಪಡೆದರೆ ಮಾತ್ರ ಔಷಧಿ ಕೊಡಲು ಸಾಧ್ಯವೇ....
ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳನೋದುತಂ, ಕೆಲವು ಮಾಳ್ಪವರಿಂದ ಕಂಡು, ಕೆಲವಂ ಸಜ್ಜನ ಸಂಗದಿಂದಲರಿಯಲ್.." ಅನ್ನುವಷ್ಟರಲ್ಲಿ ಹರ ಹರಾ ಶ್ರೀ ಚನ್ನ ಸೋಮೇಶ್ವರ ಎಂದು ದನಿಗೂಡಿಸಿದರು.
ನನ್ನಲ್ಲೇ ನನಗೆ ಅಲ್ಪ ವಿಶ್ವಾಸ ಮೂಡಿತು... ಅವರ ಮುಖ ನೋಡಿದೆ " ನೀವು ಹೇಳಿದ್ರಲ್ಲೂ ಅರ್ಥ ಇದೆ ಬಿಡಿ... ನಿಮ್ಮ ಹೆಸರು" ಎಂಬುದು ಅವರ ಪ್ರತಿಕ್ರಿಯೆ.
ಮಾತು ಸುಲಭವಾಗಿ ಮುಂದುವರಿಯಿತು. ಅವರ ಹೆಸರು ಪ್ರಕಾಶ್ ಚಂದ್ರ, KEB ಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾಗಿ ಐದು ವರ್ಷದ ಹೆಣ್ಣು ಮಗುವಿದೆ. ಹೆಂಡತಿ ತವರು ಮನೆಗೆ ಹೋಗಿದ್ದಾರೆ. ಗಂಡನ ಬಳಿ ಬರಲು ನಿರಾಕರಿಸುತ್ತಿದ್ದಾರೆ. ಮಗುವನ್ನು ಅಲ್ಲಿಯೇ ಶಾಲೆಗೆ ಸೇರಿಸಿದ್ದಾರೆ. ಈಚಿನ ದಿನಗಳಲ್ಲಿ ಆಫೀಸಿನಲ್ಲೂ ಸಹೋದ್ಯೋಗಿಗಳಿಂದ ಕಿರಿಕಿರಿ ಶುರುವಾಗಿ... ಕೆಲಸಲ ಜೋರಾಗಿ ಕೂಗಾಡುವ ಹಂತಕ್ಕೂ ಹೋಗಿದೆ. ನನ್ನ ಮಾತು ಯಾರೂ ಕೇಳುವುದಿಲ್ಲ, ನನ್ನನ್ನು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆ ಭದ್ರವಾಗಿದೆ. ಮತ್ತಷ್ಟು ಮಾತುಕತೆಯಿಂದ ತಿಳಿದದ್ದು... ಪ್ರಕಾಶ್ ಚಂದ್ರ ಸ್ವಭಾವತಃ ತನ್ನದೇ ನಡೆಯಬೇಕೆನ್ನುವ(dominating nature) ಮನೋಭಾವದವರು. ಇದು ಕೆಲವು ಸಲ ಅತಿರೇಕಕ್ಕೆ ಹೋಗಿ... ವಾಗ್ವಾದದ ಹಂತ ಮುಟ್ಟಿ.. ಮನಸ್ತಾಪಗಳು ಆಗಿದ್ದೂ ಇದೆ. ಈ ಸ್ವಭಾವವನ್ನು ಒಂದಷ್ಟಾದರೂ ಬದಲಿಸಿಕೊಂಡು, ಹೊಂದಾಣಿಕೆ ಮಾಡಿಕೊಳ್ಳದೆ ಇರುವುದೇ ಸಮಸ್ಯೆಯ ಮೂಲ ಕಾರಣ. ಮಾನಸಿಕ ಒತ್ತಡವೂ ಸೇರಿರುವುದರಿಂದ, ಡಾಕ್ಟರ್ ಮೂಲಕ ಔಷಧಿಯನ್ನು ತೆಗೆದುಕೊಳ್ಳಬೇಕು, ಬೇರೊಬ್ಬರ ಭಾವನೆಗಳಿಗೂ ಒಂದಷ್ಟಾದರೂ ಗೌರವ ಕೊಡಲೇಬೇಕು ಎಂದು ಮನವರಿಕೆ ಮಾಡಿಕೊಡಲು ಸಾಕಷ್ಟು ತಿಣುಕಿದ್ದಾಯಿತು
(ಮೂರು ಭೇಟಿಗಳ ನಂತರ). ಹಾಗಾದರೆ ಮಾತ್ರ ಅವರ ಮಡದಿಯ ಜೊತೆ ಮಾತನಾಡಿ ಮನಸ್ಸು ಬದಲಾವಣೆ ಮಾಡಿಕೊಳ್ಳಲು ಪ್ರಯತ್ನ ಮಾಡಬಹುದು ಎಂದು ಖಂಡ ತುಂಡವಾಗಿ ಹೇಳಿದ್ದು.
ಮಧ್ಯೆ ಸಾಕಷ್ಟು ಸಮಯ ತೆಗೆದುಕೊಂಡು, ಹೆಂಡತಿ ಮತ್ತು ಮಗಳಿಗಾಗಿ ಬದಲಾವಣೆಯ ಮನಸ್ಸು ಮಾಡಿ...ಬಂದು ತಿಳಿಸಿದರು.
ಮೊದಲ ಹಂತವಾಗಿ... ಅವರ ಮಡದಿಯ ಜೊತೆ ದೂರವಾಣಿಯಲ್ಲಿ ಮಾತನಾಡಿ, ಆಪ್ತ ಸಲಹಾ ಕೇಂದ್ರಕ್ಕೆ ಬಂದು ಮಾತನಾಡಿರುವ ವಿಷಯ ತಿಳಿಸಿ, ಬದಲಾಗಲು ಮಾಡಿರುವ ನಿರ್ಧಾರವನ್ನು ಮನವರಿಕೆಮಾಡಿ, ಮುಂದಿನ ಹಂತಕ್ಕೆ ಆಕೆಯು ಆಪ್ತ ಸಲಹಾ ಕೇಂದ್ರಕ್ಕೆ ಬರಲು ವಿನಂತಿಸಲು ಹೇಳಿದ್ದು.
ಮಾಡಿದ ಒಂದೆರಡು ಪ್ರಯತ್ನಕ್ಕೆ ಯಾವುದೇ ಸ್ಪಂದನೇ ಸಿಗದಿದ್ದ ಕಾರಣಕ್ಕೆ, ನಿರಾಶೆ ಮತ್ತು ಕೋಪಗೊಂಡ ಪ್ರಕಾಶ್ ಚಂದ್ರ ಅವರಿಗೆ..." ಇನ್ನೊಬ್ಬರ ಭಾವನೆಗಳನ್ನು ಗೌರವಿಸಿ, ಸೂಕ್ತವಾಗಿ ಪ್ರತಿಕ್ರಯಿಸಬೇಕು.. ಅದೇ ನಿಮ್ಮಲ್ಲಿ ಆಗಬೇಕಾಗಿರುವ ಬದಲಾವಣೆ " ಎಂದು ಹೇಳಿ, ಪ್ರಯತ್ನ ಮುಂದುವರಿಸಲು ಸೂಚಿಸಿದ್ದು.
ಮುಂದಿನ ವಾರ ಬಂದಾಗ ಪ್ರಕಾಶ್ ಚಂದ್ರ ಹೆಂಡತಿಗೆ ಫೋನ್ ಮಾಡಿ, ಫೋನ್ ನನ್ನ ಕೈಗೆತ್ತು ಆಚೆ ಹೋದರು. ಮೊದಲು ಮಾತನಾಡಲು ಹಿಂಜರಿದ, ಇಲ್ಲಿಗೆ ಬರಲು ನಿರಾಕರಿಸಿದ,ಮಂಜುಳ ಅವರು, ಅಂತಿಮವಾಗಿ " ನಿಮ್ಮ ನಿರ್ಧಾರ ಬದಲಿಸಿಕೊಳ್ಳಲು ತಯಾರಿಲ್ಲದಿದ್ದರೂ ಪರವಾಗಿಲ್ಲ, ಮಗಳ ಭವಿಷ್ಯವನ್ನು ಮುಂದಿಟ್ಟುಕೊಂಡು, ಒಮ್ಮೆ ಬನ್ನಿ, ದೈವೇಚ್ಛೆ ಹೇಗಿದೆಯೋ ಹಾಗಾಗಲಿ" ಎಂದಾಗ ಮನಸ್ಸಿಲ್ಲದ ಮನಸ್ಸಿನಿಂದ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಮಂಜುಳಾ ಅವರ ಜೊತೆ ಮಾತನಾಡಿದಾಗ ಅರಿವಿಗೆ ಬಂದಿದ್ದು.... ಎಲ್ಲದರಲ್ಲೂ ಮೂಗು ತೂರಿಸುವ, ಎಲ್ಲವೂ ತನ್ನಂತೆಯೇ ನಡೆಯಬೇಕೆನ್ನುವ ಮನೋಭಾವ, ಹಣ ಕಾಸಿನ ವಿಚಾರದಲ್ಲಿ
ಅತಿಯಾದ ಲೆಕ್ಕಾಚಾರ, ಮಗುವಿನ ವಿಚಾರದಲ್ಲಂತೂ...ತಾಯಿಯಾಗಿ ತಾನು ಯಾವ ವಿಚಾರದಲ್ಲೂ ನಿರ್ಧಾರ ತೆಗೆದುಕೊಳ್ಳಲಾಗದ ಪರಿಸ್ಥಿತಿ. ಹಾಗಾಗಿ ಮನೆಯಲ್ಲಿ ಉಸಿರು ಗಟ್ಟುವ ವಾತಾವರಣ. ಅವರ ಜೊತೆಯಲ್ಲಿ ಬಾಳಲು ಸಾಧ್ಯವೇ ಇಲ್ಲ ಎಂಬ ಮನಸ್ಥಿತಿ. ಮಗುವಿಗೆ ಅಪ್ಪನ ಸಾನಿಧ್ಯವೂ ಬೇಕು ಎಂದಾಗ.. ಅದು ಕಟ್ಟಿ ಹಾಕುವ ಹಗ್ಗವೇ ಹೊರತು... ಹುರಿದುಂಬಿಸುವ ಹಾರ ಆಗಲಾರದು ಎಂಬ ಗಟ್ಟಿ ಭಾವನೆ.
ತೀರ ಎದುರು ಬದುರು ಮೂಲೆಯಲ್ಲಿ ನಿಂತಿದ್ದ ಪ್ರಕಾಶ್ ಚಂದ್ರ ಹಾಗೂ ಮಂಜುಳಾ ಅವರನ್ನು ಅಕ್ಕ ಪಕ್ಕ ನಿಲ್ಲಿಸಲೇ ಸಾಕಷ್ಟು ಸಮಯ ಹಾಗೂ ಪ್ರಯತ್ನ ವಿನಿಯೋಗವಾಯಿತು.
ಮಗುವಿನ ಬೇಸಿಗೆ ರಜದ ಸಮಯದಲ್ಲಿ ಇಬ್ಬರು ಒಟ್ಟಾಗಿ ಇರಬೇಕೆಂದು... ಮಂಜುಳಾ ಅವರು ತಮ್ಮ ನಿಲುವನ್ನು ಸಡಿಲಗೊಳಿಸಬೇಕೆಂದು... ಹಾಗೆ ಪ್ರಕಾಶ್ ಚಂದ್ರ ಅವರು ಮಂಜುಳ ಮತ್ತು ಮಗುವಿನ ಬೇಕು ಬೇಡಗಳನ್ನು ಅವರ ದೃಷ್ಟಿಯಿಂದಲೇ ಯೋಚಿಸಿ ಅದಕ್ಕೆ ಅನುವು ಮಾಡಿಕೊಡಬೇಕೆಂದು... ಯಾವುದೇ ಬಲವಂತ ಮಾಡದೆ.. ಪ್ರೀತಿಯಿಂದ ಎಲ್ಲವನ್ನು ನಿಭಾಯಿಸಲು ಪ್ರಯತ್ನಿಸಬೇಕೆಂದು.. ಇಬ್ಬರಲ್ಲೂ ಬದಲಾವಣೆಗಳು ಕಂಡು ತಕ್ಕಮಟ್ಟಿನ ಹೊಂದಾಣಿಕೆಯಾದರೆ ಮಾತ್ರ, ಮುಂದುವರಿಸುವುದು ಇಲ್ಲವಾದರೆ ಏನು ಮಾಡಬೇಕೆಂದು ನಂತರ ನಿರ್ಧರಿಸುವುದು
ಎಂದು ಸಲಹೆ ಕೊಡಲಾಯಿತು.
ಒಂಟಿಯಾಗಿ ಪ್ರೀತಿಯಿಂದ ವಂಚಿತರಾಗಿದ್ದ ಪ್ರಕಾಶ್ ಚಂದ್ರ ಬಲು ಬೇಗ ಒಪ್ಪಿಗೆ ಇತ್ತರೂ.. ಮಂಜುಳಾ ಮಾತ್ರ ಸ್ಪಂದಿಸಲಿಲ್ಲ.
ಕಡೆಯ ಅಸ್ತ್ರವಾಗಿ....." ಒಂದು ಕೆಲಸ ಮಾಡೋಣ... ನಿಮಗೆ ತುಂಬಾ ನೋವು ಕೊಡುವ ಘಟನೆ ನಡೆದರೆ, ನೀವು ಯಾರಿಗೂ ತಿಳಿಸದೆ ನಿಮ್ಮ ದಾರಿಯನ್ನು ನೀವು ತುಳಿಯಬಹುದು.... ಆದರೆ ಮಗುವಿನ ದೃಷ್ಟಿಯಿಂದ ಹೊಂದಾಣಿಕೆಗೆ ನಿಮ್ಮ ಪ್ರಯತ್ನವು ಸೇರಿದರೆ ಒಳ್ಳೆಯದು" ಎಂಬ ಮಾತಿಗೆ ಬಲವಂತವಾಗಿ ಒಪ್ಪಿದ್ದು ಆಪ್ತ ಸಮಾಲೋಚಕನಾಗಿ ನನಗೆ ಸಮಾಧಾನ ಕೊಟ್ಟಿತ್ತು.
ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಲು, ಮತ್ತೆ ಬಂದು ಮಾತನಾಡಿ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿಕೊಳ್ಳಲು ಸಲಹೆ ಕೊಟ್ಟಿದ್ದು.
ಮನೆಯ ಹಿರಿಯರ ಒತ್ತಾಸೆಯೂ, ಸಹಯೋಗವು ಸೇರಿ ಬೇಸಿಗೆ ರಜದ ಕಾಲಘಟ್ಟವು.. ಸಣ್ಣಪುಟ್ಟ ಏರಿಳಿತಗಳು, ಭಿನ್ನಾಭಿಪ್ರಾಯಗಳು ಬಂದರೂ... ಎಲ್ಲವನ್ನು ವಿಶ್ಲೇಷಿಸಿ, ಬದಲಾವಣೆಯ ದಿಕ್ಕನ್ನು ನಿರ್ಧಾರ ಮಾಡಲು ಸಹಾಯ ಮಾಡಿ, ಪ್ರೋತ್ಸಾಹಿಸಿದ್ದು.
ಯೋಗಾ ಯೋಗವೋ, ದೇವರ ದಯೆಯೋ, ಜೀವನ ಒಟ್ಟಿಗೆ ಮುಂದುವರೆಸಲು ಇಬ್ಬರೂ ಒಪ್ಪಿದ್ದು ಸಂತಸದ ಸಂಗತಿ. ಇದರ ಪ್ರಭಾವ ಮಗುವಿನ ಮೇಲೂ ಆಗಿತ್ತು... ಅದು ಅಪ್ಪ ಅಮ್ಮನ ಪ್ರೀತಿಯನ್ನು ಪಡೆದಿತ್ತು.
ಸಮಯ ಯಾರಿಗೂ ಕಾಯುವುದಿಲ್ಲ... ವರ್ಷಗಳು ಉರುಳಿದವು....
ಒಂದು ದಿನ ಪ್ರಕಾಶ್ ಚಂದ್ರ ಅವರು ಫೋನ್ ಮಾಡಿ.. ನನ್ನನ್ನು ಭೇಟಿಯಾಗಲು ಬಯಸಿದರು. ಹೇಗಿದ್ದೀರಿ ಎಂಬ ಪ್ರಶ್ನೆಗೆ... ನಾವಿಬ್ಬರೂ ತಕ್ಕಮಟ್ಟಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ.... ಮತ್ತೊಂದು ಸಮಸ್ಯೆ ಎದುರಾಗಿದೆ.... ಅದಕ್ಕಾಗಿ ನಿಮ್ಮನ್ನು ಭೇಟಿಯಾಗಬೇಕು....
ಪ್ರಕಾಶ್ ಚಂದ್ರ ಮತ್ತು ಮಂಜುಳಾ ಅವರು ಬಂದು... ತಮ್ಮ ಮಗಳ ಮದುವೆಯಾದದ್ದು, ಅವಳಿ ಜವಳಿ ಮಕ್ಕಳಾದದ್ದು.... ಇದರ ಜೊತೆ ಅತ್ತೆಯ ಮನೆಯಲ್ಲಿನ ಹೊಂದಾಣಿಕೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮಗಳು ಮತ್ತು ಅಳಿಯನನ್ನು ಕರೆತರುವ ಬಗ್ಗೆ ಮಾತನಾಡಿದರು.
ಲೋಕಾರೂಢಿಯಾಗಿ ಹೇಗಿದ್ದೀರಾ ಎಂದು ಮಂಜುಳಾ ಅವರನ್ನು ಕೇಳಿದಾಗ..." ನಿಮ್ಮ ಮೇಲೆ ನನಗೆ ಕೋಪ ಇದೆ... ಏನೋ ತಲೆ ತಿಕ್ಕಿ ಒಪ್ಪಿಸಿ ಕಳಿಸಿಬಿಟ್ಟಿರಿ... ತುಂಬಾ ಬದಲಾವಣೆಗಳು ಕಾಣದಿದ್ದರೂ, ಮಗಳಿಗಾಗಿ ಜೀವಿಸಬೇಕು ಎಂಬ ನಿಮ್ಮ ಮಾತನ್ನು ಛಲವಾಗಿ ಸ್ವೀಕರಿಸಿ ಜೀವನ ನಡೆಸ್ತಾ ಇದ್ದೀನಿ.... ಅವಳ ಸಮಸ್ಯೆ ತೀರಿದರೆ ಸಾಕು"
ಅವರ ಕೋಪವೂ ನನಗೆ ಸಂತೋಷವನ್ನು ತಂದಿತು.
ಜೀವನ ಎಷ್ಟು ಸಂಕೀರ್ಣ ಅಲ್ಲವೇ?
ಒಂದಿಷ್ಟು ಕೊಸರು:
ಮೊದಲೇ ಹೇಳಿದಂತೆ ಆಪ್ತಸಮಾಲೋಚಕನಾಗಿ ಬಂದಂತಹ ವ್ಯಕ್ತಿಗಳ ವಿಶ್ವಾಸವನ್ನು ಗಳಿಸಬೇಕಾದದ್ದು ನಮ್ಮ ಮೊದಲ ಆದ್ಯತೆ. ಇಲ್ಲವಾದಲ್ಲಿ ಅವರು ಮತ್ತೆ ನಮ್ಮ ಬಳಿ ಹಿಂತಿರುಗಿ ಬರುವ ಸಾಧ್ಯತೆ ಕಡಿಮೆ.
ಸಾಮಾನ್ಯವಾಗಿ, ಎರಡನೆಯ ಬಾರಿ ಬರದಿದ್ದರೆ... ಅದಕ್ಕೆ ಕಾರಣ ಬಂದ ವ್ಯಕ್ತಿಗೆ ಅವರಿಗೆ ಬಯಸಿದಂತಹ ಸಲಹೆ ಸಿಗದಿರುವುದು ಅಥವಾ ನಮ್ಮಿಂದ ಅವರು ನಿರೀಕ್ಷಿಸಿದಂತಹ ಸ್ಪಂದನೆ ಸಿಗದಿರುವುದು...
ಧನಾತ್ಮಕವಾಗಿ ಯೋಚಿಸಿವುದಾದರೆ.... ಕಾಲ್ಪನಿಕವಾಗಿಯಾದರೂ.... ನಮ್ಮ ಒಂದು ಬಾರಿಯ ಮಾತುಕತೆಯಿಂದ ಅವರಿಗೆ ಸಂಪೂರ್ಣ ಸಮಾಧಾನ ಸಿಕ್ಕಿ, ಸಮಸ್ಯೆಯಿಂದ ಹೊರಬಂದಿರಬಹುದಲ್ಲ ಎಂಬುದು ನನ್ನ ಚಿಂತನೆ ( ತಲೆ ಹರಟೆ ಎನ್ನಬಹುದು ಸಹ). ಇದು ಗೊತ್ತಾಗುವುದು ಅವರು ತಿಳಿಸಿದಾಗ ಮಾತ್ರ. ಇದು ಸಾಮಾನ್ಯವಾಗಿ ನಡೆಯುವ ವಿಚಾರವಲ್ಲ. ಕಾಯಿಲೆ ವಾಸಿಯಾಗಿದೆ ಎಂದು ಡಾಕ್ಟರ್ ಬಳಿ ಹೋಗಿ ತಿಳಿಸಿ ಬರುವುದು ರೂಢಿಯಲ್ಲಿ ತುಂಬಾ ಕಡಿಮೆ.
ವಾಸ್ತವವಾಗಿ ನಾನು " ಮತ್ತೆ ಯಾವಾಗ ಬರಬೇಕು " ಎಂಬ ಪ್ರಶ್ನೆಗೆ "ಬರದಿದ್ದರೆ ಒಳ್ಳೆಯದು" ಎಂಬ ಉತ್ತರ ಹೇಳಿ... ಅವರ ಪ್ರಶ್ನಾರ್ಥಕ ಮುಖಭಾವಕ್ಕೆ ಉತ್ತರವಾಗಿ "ನಿಮ್ಮ ಸಮಸ್ಯೆಗೆ ಬೇಗ ಪರಿಹಾರ ಸಿಕ್ಕಿ ಸಮಾಧಾನವಾಗಲಿ ಎಂಬ ಆಶಯ ನನ್ನದು" ಎಂದು ಹೇಳಿದ್ದೇನೆ.
ಇದಕ್ಕೊಂದು ನಾ ಕಂಡ ಅಪರೂಪದ ಪ್ರಸಂಗ ನಿಮ್ಮ ಮುಂದೆ:
ಪ್ರಸನ್ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ME ಮಾಡಿದ ಸ್ನಾತಕೋತ್ತರ ಪದವೀಧರ. ಹೆಸರಾಂತ ಇಂಜಿನಿಯರಿಂಗ್ ಕಾಲೇಜಿನಲ್ಲಿ lecturer. ಪಾಠ ಮಾಡುವ ಕೆಲಸ ಇಷ್ಟವಾದರೂ ಕೆಲಸ ಮಾಡುವ ವಾತಾವರಣ ಇಷ್ಟವಾಗುತ್ತಿಲ್ಲ... Head of the department ಜೊತೆ ಸಂಬಂಧ ಚೆನ್ನಾಗಿಲ್ಲ. ಕಾರಣದ ಸ್ಪಷ್ಟತೆ ಇಲ್ಲದಿದ್ದರೂ, ವೈಯಕ್ತಿಕವಾಗಿ ಅವಹೇಳನವನ್ನು ಮಾಡಿಸಿಕೊಂಡಿದ್ದಾರೆ... ಅದು ಮುಂದುವರೆದಿದೆ. ಮನಸ್ಸಿಗೆ ಸಮಾಧಾನವಿಲ್ಲ, ಕೆಲಸದಲ್ಲೂ ಹಿನ್ನಡೆಯಾಗುತ್ತಿದೆ.
ಪ್ರಸನ್ನ ಅವರ technical knowledge ಬಗ್ಗೆ ಅವರಿಗಿರುವ ವಿಶ್ವಾಸ, ಹಾಗೂ ಕೆಲಸ ಮಾಡಲು ಇರುವ ಉತ್ಸಾಹವನ್ನು ಗಮನಿಸಿ, ಬೇರೊಂದು ಕಡೆ ಕೆಲಸ ಹುಡುಕಬಹುದಲ್ಲ ಎಂಬ ಸಲಹೆಯನ್ನು ಕೊಟ್ಟಿದ್ದು. ಅಂದು ಹೋದ ಪ್ರಸನ್ನ ತಿರುಗಿ ಬರಲಿಲ್ಲ.
ಸುಮಾರು ಐದು ತಿಂಗಳ ನಂತರ ಒಬ್ಬ ಹುಡುಗನನ್ನು (ಸೋದರಳಿಯ) ಜೊತೆಯಲ್ಲಿ ಕರೆದು ತಂದ ಪ್ರಸನ್ನ... ಆ ಹುಡುಗನ ಓದಿನ ಸಮಸ್ಯೆಯನ್ನು ಮುಂದಿಟ್ಟರು. ಅವರ ಕೆಲಸದ ಬಗ್ಗೆ ಕೇಳಿದಾಗ " ಎರಡು ದಿನ ಯೋಚನೆ ಮಾಡಿದೆ, ಮನಸ್ಸು ತೂಗುಯ್ಯಾಲೆಯಾಡಿತು, ನಿರ್ಧಾರ ಮಾಡಿ ನನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಪ್ರಿನ್ಸಿಪಲ್ ಕರೆದು ಮಾತನಾಡಿ, ನನ್ನ ನಿರ್ಧಾರವನ್ನು ಬದಲಾಯಿಸಲು ಸಲಹೆ ಮಾಡಿದರು... ಒಪ್ಪದೇ ನನ್ನ ನಿರ್ಧಾರಕ್ಕೆ ಅಂಟಿಕೊಂಡೆ. ಮತ್ತೆ ಎರಡು ದಿನ, ನನ್ನ ನಿರ್ಧಾರ ಸರಿಯಾ? ಇಲ್ಲವಾ? ಎಂಬ ಗೊಂದಲದಲ್ಲಿ ಕಳೆದೆ. ಎರಡು ತಿಂಗಳ ಸತತ ಪ್ರಯತ್ನದಿಂದ ಬೇರೆ ಕೆಲಸ ಸಿಕ್ಕಿದೆ, ಕೆಲಸದ ವಾತಾವರಣ ಚೆನ್ನಾಗಿದೆ ಸಂತೋಷವಾಗಿದ್ದೇನೆ" ಎಂದು ಹೇಳಿದ ಪ್ರಸನ್ನ ಮುಂದುವರಿದು " better resign than suffer ಎನ್ನುವ ನಿಮ್ಮ ಮಾತು ನಾನು ನಿರ್ಧಾರ ಮಾಡಲು ಸಹಾಯ ಮಾಡಿತು.. ಥ್ಯಾಂಕ್ಯು ಸರ್" ಎಂದು ಹೇಳಿ ಮಾತು ಮುಗಿಸಿ ಅಳಿಯನ ವಿಚಾರಕ್ಕೆ ಬಂದಿದ್ದು, ಅವರ ವಾಸ್ತವಿಕ ದೃಷ್ಟಿಯನ್ನು ಅನಾವರಣ ಮಾಡಿತು.
ಸಹಜವಾಗಿ ನನಗೆ ಸಂತೋಷವಾಯಿತು.
ಆಪ್ತ ಸಮಾಲೋಚನೆ ಜವಾಬ್ದಾರಿ ಹಾಗೂ ಸವಾಲಿನ ಕೆಲಸ. ಅದು ಸಂತೃಪ್ತಿಯನ್ನು ಹಾಗೂ ಧನ್ಯತಾಭಾವವನ್ನು ಕೊಡುತ್ತದೆ. ಸಮಾಜದ ಋಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡ ಭಾವ ನನ್ನದು.
ಮತ್ತೊಂದು ಬರಹದೊಡನೆ ನಿಮ್ಮ ಭೇಟಿ ಅಲ್ಲಿಯವರೆಗೆ ನಮಸ್ಕಾರ..
ಡಿ ಸಿ ರಂಗನಾಥ ರಾವ್
9741128413
ಅರಿಕೆ: ಈ ಲೇಖನವನ್ನು ನಿಮ್ಮ ಪರಿಚಯದವರಿಗೆ ಕಳಿಸಿ...ದಯವಿಟ್ಟು

ಪ್ರಕಾಶ್ ಚಂದ್ರ ಹಾಗೂ ಮಂಜುಳಾರ ಸಮಸ್ಯೆ ಈಗಿನ ಪೀಳಿಗೆಯಲ್ಲಿ ಸಾಮಾನ್ಇದು ಡಾಮಿನೇಷನ್ ಹಾಗೂ ಈಗೋ ವಿಚಾರಕ್ಕೆ ಸಂಬಂಧಿಸಿರುವುದರಿಂದ ಪರಿಹಾರ ಕಷ್ಟ ಸಾಧ್ಯ.
ReplyDeleteಇನ್ನು ಪ್ರಸನ್ನ ರವರ ಸಮಸ್ಯೆಗೆ ಬಂದರೆ, ಸುಮ್ಮನೆ ಕಷ್ಟ ಪಟ್ಟು ಅಲ್ಲಿ ಬದುಕುವುದಕ್ಕಿಂತ ಬೇರೊಂದು ಕಡೆ ಪರಿಹಾರ ಕಂಡುಕೊಂಡು ಬಾಳಲ್ಲಿ ನೆಮ್ಮದಿ ಕಂಡುಕೊಳ್ಳುವುದು ಸೂಕ್ತ ಹಾಗೂ ಜಾಣತನ.
ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಂಡು ಬರುವ ಹಲವಾರು ಸಂತ್ರಸ್ತರುಗಳಿಗೆ ನೀವು ಸಲಹೆ ಮಾರ್ಗದರ್ಶನ ನೀಡಿ ಅವರ ಬಾಳಿನಲ್ಲಿ ಬೆಳಕಾಗುತ್ತಿರುವುದು ಸಂತಸದ ವಿಷಯ.
ಲೇಖನ ಹಾಗೂ ಆಪ್ತ ಸಮಾಲೋಚನೆ, ಈ ಎರಡು ಹೀಗೆ ಮುಂದುವರೆಯಲಿ.
ಗುರು ಪ್ರಸನ್ನ
ಚಿಂತಾಮಣಿ
ವಿವಾಹ ಪೂರ್ವ ಸಮಾಲೋಚನೆಗಳು ನಡೆದರೂ ಮತ್ತದೇ ವಿಚ್ಛೇದನ ನಡೆಯುತ್ತಲೇ ಇರುತ್ತದೆ. ಕಷ್ಟ ಆದರೂ ಮಗಳ ಭವಿಷ್ಯಕ್ಕಾಗಿ ನಿಮ್ಮ ಆಪ್ತಸಮಾಲೋಚನೆಯಿಂದ ಒಂದಾದದ್ದು ಸಮಾಧಾನ ತಂದಿತು..
ReplyDeleteನಿಮ್ಮ
"ಸಮಾಜದ ಋಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡ
ಭಾವ ನನ್ನದು." ಎಂಬ ನಿಮ್ಮ ವಾಕ್ಯ ಮನಸ್ಸಿಗೆ ಇಷ್ಟ ಆಯಿತು.
ಪ್ರಸಕ್ತ ವೈದ್ಯಕೀಯ ಜಗತ್ತಿನಲ್ಲಿನ ವಿದ್ಯಮಾನ ಹಾಗೂ ಧೋರಣೆಯನ್ನು ಗಮನಿಸಿದಾಗ, "ಆಪ್ತ ಸಮಾಲೋಚನೆ " ಯನ್ನು ಒಪ್ಪಿ, ಅನುಸರಿಸುವ ಮನಸ್ಸು ಮತ್ತು ಅದರ ಪರಿಣಾಮ
ReplyDelete