ರೂಪಾಂತರ - metamorphasis
ಬೆಳಗಿನ ವಾಕಿಂಗ್ ಸಮಯದಲ್ಲಿ ಪರಿಚಯವಾಗಿ, ಭೇಟಿಯಾಗುವ ಹಿರಿಯರು, ರಾಮಣ್ಣನವರು. ಅವರು ಯಾವಾಗಲೂ ಶುಭ್ರವಾದ ಬಿಳಿಯ ಪ್ಯಾಂಟ್ ಮತ್ತು ಅರ್ಧ ತೋಳಿನ ಬಿಳಿಯ ಶರ್ಟ್ ನಲ್ಲಿ ಕಾಣಿಸುತ್ತಿದ್ದವರು. ಬೆಳ್ಳಿಯ ಕೂದಲಿನ, ಬಿಳಿ ಬಣ್ಣದ, ಬಿಳಿಯ ಉಡುಗೆ ತೊಡುಗೆಯ ರಾಮಣ್ಣನವರನ್ನು ಬಣ್ಣ ಬಣ್ಣದ ಪ್ಯಾಂಟ್ ಮತ್ತು ಟೀ ಶರ್ಟ್ ನಲ್ಲಿ ಕಂಡಾಗ ಆಶ್ಚರ್ಯ ಹಾಗೂ ಸಂತೋಷ ಒಟ್ಟಿಗೆ ಆಯ್ತು. smart young man ತರ ಕಾಣ್ತೀರ ಅಂತ ಮೆಚ್ಚುಗೆಯನ್ನು ಸೂಚಿಸಿದೆ. ಈಚೆಗೆ ಜಪಾನ್ ಗೆ ಹೋಗಿ ಬಂದ ರಾಮಣ್ಣನವರಿಗೆ, ಅಲ್ಲಿ ಉಪಯೋಗಿಸಲು, ಮಗಳು ತಂದುಕೊಟ್ಟ ಐದಾರು ಜೊತೆ ಬಣ್ಣ ಬಣ್ಣದ ಬಟ್ಟೆಗಳನ್ನು, ಸವೆಸುವ/ ಅನುಭವಿಸುವ ಅವಕಾಶ. ಹೆಣ್ಣು ಮಕ್ಕಳ ಈ ಪ್ರೀತಿಯನ್ನು ಅನುಭವಿಸುವುದೇ ಒಂದು ಆನಂದ.
ಈ ಸಮಯದಲ್ಲಿ ಜ್ಞಾಪಕಕ್ಕೆ ಬಂದದ್ದೇ metamorphasis ಪದ. ಚಿಟ್ಟೆಯ ಜೀವನಚಕ್ರ ಪಾಠದಲ್ಲಿ, ಹೈಸ್ಕೂಲಿನಲ್ಲಿ ಓದಿದ್ದು. ಕಂಬಳಿ ಹುಳುವಿನಿಂದ ಚಿಟ್ಟೆಯಾಗಿ ರೂಪಾಂತರಗೊಂಡು.. ಮೊಟ್ಟೆ ಇಟ್ಟು ಮತ್ತೆ ಕಂಬಳಿ ಹುಳು ಆಗುವ ಜೀವನಚಕ್ರ. ಹಳ್ಳಿಯಲ್ಲಿ ದಿನ ದಿನವೂ ಕಣ್ಣಿಗೆ ಬೀಳುತ್ತಿದ್ದ ಮುಟ್ಟಿದರೆ ಚುಚ್ಚಿ ಕೈ ನವೆ ಆಗುತ್ತಿದ್ದ ಕಂಬಳಿ ಹುಳ ಹಾಗೂ ಕೈಯಲ್ಲಿ ಹಿಡಿಯಲು ಇಷ್ಟಪಟ್ಟು, ಪ್ರಯತ್ನಿಸುತ್ತಿದ್ದ ಬಣ್ಣ ಬಣ್ಣದ ಚಿಟ್ಟೆಗಳ ಮಧ್ಯೆ ಇಂಥ ಒಂದು ಸಂಕೀರ್ಣ ಸಂಬಂಧ ಇದೆ ಎಂದು ತಿಳಿದಾಗ ಆಶ್ಚರ್ಯವಾದದ್ದು ಸಹಜವೇ ಅಲ್ಲವೇ?
ಶರ್ವ ( ನನ್ನ ನಾದಿನಿ ಮಣಿಯ ಮಗ - ವೈಶಾಖ ಮತ್ತು ಸೌಮ್ಯ ದಂಪತಿಗಳ ಮಗ) ವಾರಿಗೆಯಲ್ಲಿ ನಮಗೂ ಮೊಮ್ಮಗನೇ. ಬಲು ಪ್ರೀತಿ ಅಭಿಮಾನ. ಅಜ್ಜಿ ತಾತ ಎಂದು ಪ್ರೀತಿಯಿಂದ ಕರೆಯುತ್ತಾ, ಆತ್ಮೀಯವಾಗಿ ಜೊತೆಯಲ್ಲಿರುವ, ಮೂರನೆಯ ವರ್ಷ ನಡೆಯುತ್ತಿರುವ ಮುದ್ದು ಕಂದ. ನನ್ನ ಹೆಂಡತಿ ವಿಜಯ ಕಷ್ಟಪಟ್ಟು ಅವರ ಮನೆಯ ಮೆಟ್ಟಿಲು ಹತ್ತುತ್ತಿರುವಾಗ, ನಿಲ್ಲಲು ಹೇಳಿ, ತಾನು ಕೆಳಗಿಳಿದು ಅಜ್ಜಿಯ ಕೈಯನ್ನು ಹಿಡಿದು ಮೆಟ್ಟಿಲು ಹತ್ತಿಸಿದ ಧೀರ. ಇತ್ತೀಚೆಗೆ ಅವನ ಜುಟ್ಟು ಬಿಡಿಸುವ ಕಾರ್ಯಕ್ರಮ ಇತ್ತು. ಹೆಣ್ಣು ಮಕ್ಕಳಿಗೆ ಮೊಗ್ಗಿನ ಜಡೆ ಹಾಕಿಸುವುದು ಸಾಮಾನ್ಯವಾದರೂ, ತುಂಬ ಕೂದಲಿದ್ದ ಗಂಡು ಮಕ್ಕಳಿಗೂ ಮೊಗ್ಗಿನ ಜಡೆ ಹಾಕಿಸಿ, ಹೆಣ್ಣು ಮಗುವಿನ ಉಡುಗೆ ಹಾಕಿ ಸಂತೋಷ ಪಡುವುದು ಕೆಲವರಲ್ಲಂಟು.
ಮೊಗ್ಗಿನ ಜಡೆಯ ಮುದ್ದು ಮುದ್ದು ಶಾರದೆಯಂತೆ ಕಾಣುತ್ತಿದ್ದ ಶರ್ವ ಜುಟ್ಟು ಬಿಡಿಸಿದ ನಂತರ.. ಗಂಭೀರ ಮುಖದ ಉದ್ದ ಜುಟ್ಟಿನ ಚಾಣಕ್ಯನಂತೆ ರೂಪಾಂತರಗೊಂಡಿದ್ದು ನೋಡಿ ನಾವುಗಳು ಹಿಗ್ಗಿದ್ದು.
ವೇಷ ಬದಲಾವಣೆಯ ಮೂಲಕ ರೂಪಾಂತರಗೊಳ್ಳುವುದನ್ನು, ಮೊದಲು ಕಂಡದ್ದು ನಾಟಕದ ಪಾತ್ರಧಾರಿ ಗಳನ್ನು ನೋಡುವ ಮೂಲಕ, ಹಾಗೂ ನಾನು ಪಾತ್ರಧಾರಿಯಾಗಿ ಬಣ್ಣ ಹಚ್ಚಿಕೊಂಡು, ಮೀಸೆ, ಕಿರೀಟ ಹಾಗೂ ಅದಕ್ಕೆ ತಕ್ಕ ಬಟ್ಟೆಗಳನ್ನು ಹಾಕಿಕೊಂಡಾಗ.
ನಾಟಕದ ವಿವಿಧ ಪರದೆಗಳು, ಅರಮನೆ, ಸಿಂಹಾಸನಗಳ ರಂಗದ ಅಲಂಕಾರವನ್ನು ರಾತ್ರಿಯ ಪೆಟ್ರೋಮ್ಯಾಕ್ಸ್ ಬೆಳಕಿನಲ್ಲಿ ನೋಡಿದಾಗ, ಇದೇನಾ ಮಧ್ಯಾಹ್ನ, ಚಾಪೆ / ಟಾರ್ಪಾಲಿನ್ ಹಾಕಿ ಕಟ್ಟುತ್ತಿದ್ದ ಗುಡಾರ ಎಂದು ಆಶ್ಚರ್ಯ ಚಕಿತನಾಗಿದ್ದು.
ಒಂದು ಸಣ್ಣಗಾತ್ರದ ಬೀಜವು ಮೊಳಕೆಯೊಡೆದು, ಬೆಳೆದು, ಹೂ ಬಿಟ್ಟು, ಕಾಯಾಗಿ ಹಣ್ಣಾಗಿ, ಅದರಿಂದ ಬಂದ ಬೀಜದಿಂದ ಜೀವನ ಚಕ್ರ ಮತ್ತೆ ಬದಲಾಗುವುದು ಪ್ರಕೃತಿಯ ನಿರಂತರ ರೂಪಾಂತರ. ಹಾಗೇ ಭೂಮಿಯಿಂದ ಆವಿಯಾದ ನೀರು, ಮೋಡವಾಗಿ, ಮಳೆಗೆರೆದು, ಹಳ್ಳ, ತೊರೆಯಾಗಿ, ನದಿಯಾಗಿ ಸಮುದ್ರ ಸೇರುವುದು ಪ್ರಕೃತಿಯ ಇನ್ನೊಂದು ರೂಪಾಂತರ.
ನಾ ಚಿಕ್ಕವನಾಗಿದ್ದಾಗ, ನನ್ನೂರು ದೊಡ್ಡಜಾಲ ಒಂದು ಸಣ್ಣ ಗ್ರಾಮವಾಗಿತ್ತು. ಹತ್ತಿರದಲ್ಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆದ ನಂತರ, ಈಚೆಗೆ ನೋಡಿದ ನನ್ನೂರು ನಗರದಂತೆ ರೂಪಾಂತರಗೊಂಡಿರುವುದು ಸತ್ಯ.
ಕಬ್ಬಿಣದ ಒಂದು ತುಂಡು, ನಮ್ಮೂರ ರಾಮಲಿಂಗಣ್ಣಯ್ಯನ ಕುಲುಮೆಯಲ್ಲಿ ಕಾದು, ಅವರ ಸುತ್ತಿಗೆಯ ಏಟು ತಿಂದ ನಂತರ .. ಕಡಿಯುವ ಮಚ್ಚಾಗಿ, ಉಳುವ ನೇಗಿಲಿನ ಗುಳವಾಗಿ, ಹೀಗೆ ಬೇರೆಬೇರೆ ರೂಪಾಂತರಗೊಳ್ಳುತ್ತಿದ್ದದ್ದನ್ನು, ಆಶ್ಚರ್ಯ ಹಾಗೂ ಕುತೂಹಲದಿಂದ ನೋಡುತ್ತಾ ಕೂರುತ್ತಿದ್ದದ್ದು ಹವ್ಯಾಸವೇ ಆಗಿತ್ತು.
ನನ್ನ ಜೀವನದಲ್ಲಿ ಕಂಡ ದೊಡ್ಡ ರೂಪಾಂತರ ಎಂದರೆ... ದೂರವಾಣಿ. ಸ್ಥಿರ ದೂರವಾಣಿಯಿಂದ.. ಚರ ದೂರವಾಣಿ... ಅದರಲ್ಲಿ ಈಗ ಏನುಂಟು ಏನಿಲ್ಲ.. ಅಂಗೈಯಲ್ಲಿ ಪ್ರಪಂಚವನ್ನು ತೋರಿಸುವ, ವಿಷಯಗಳನ್ನು ತಿಳಿಸುವ, ಹಾಗೇ... ಗಡಿಯಾರ, ಕ್ಯಾಮರಾ, ಹಣಕಾಸು ವ್ಯವಹಾರ ಹೀಗೆ ಹಲವಾರು ಉಪಯೋಗದೊಡನೆ ಹಳ್ಳಿ ಹಳ್ಳಿಗೂ ತಲುಪಿರುವ ಸಾಧನವಾಗಿದೆ.
ಚಿಕ್ಕ ಪುಟ್ಟ ರೌಡಿಗಳು, ಸಮಾಜಘಾತುಕ ವ್ಯಕ್ತಿಗಳು, ರಾಜಕೀಯ ವ್ಯಕ್ತಿಗಳ ಸಂಪರ್ಕಕ್ಕೆ ಬಂದು, ತಮ್ಮ ತೋಳ್ಬಲ ಹಾಗೂ ಹಣಬಲದಿಂದ, ರಾಜಕಾರಣಿಗಳಾಗಿ ರೂಪುಗೊಂಡು, ಸುಭಗರಂತೆ, ಸಮಾಜಸೇವಕರಂತೆ ತೋರಿಸಿಕೊಳ್ಳುವುದು ಸಾಮಾನ್ಯ ರೂಪಾಂತರವೇ?
ಸ್ವಾರ್ಥಕ್ಕಾಗಿ ಪಕ್ಷ ಬದಲಾವಣೆ ಮಾಡಿ, ಅದನ್ನು ಯಾವುದೋ ತತ್ವಕ್ಕೆ ಹೋಲಿಸಿಕೊಂಡು ಸಮರ್ಥಿಸಿಕೊಳ್ಳುವ ಪರಿಯಂತೂ ಅವರ ಗೋಮುಖ ವ್ಯಾಘ್ರ ತನವನ್ನು ಪ್ರದರ್ಶಿಸುತ್ತದೆ.
circumstances changes a bitter enemy to a bosom friend, necessity makes strange bed fellows ಹಾಗೂ ರಾಜಕಾರಣದಲ್ಲಿ ಯಾರು ಶಾಶ್ವತ ಶತ್ರುಗಳಲ್ಲಾ, ಶಾಶ್ವತ ಮಿತ್ರರಲ್ಲ ಎಂಬ ಮಾತುಗಳು, ಇವರ ಅಧಿಕಾರಕ್ಕಾಗಿ, ಹಣಕ್ಕಾಗಿ ಇರುವ ಹಪಾಪಿತನಕ್ಕೆ, ತಮ್ಮನ್ನು ಸಮರ್ಥಿಸಿಕೊಳ್ಳಲು ಉಪಯೋಗಿಸುವ ನುಡಿಗಟ್ಟುಗಳು.
ರಾಮಾಯಣದ ಪ್ರಸಂಗದಲ್ಲಿ , ಶಾಪದಿಂದ ಕಲ್ಲಾಗಿದ್ದ ಅಹಲ್ಯೆಯನ್ನು, ಮತ್ತೆ ನಿಜರೂಪಕ್ಕೆ ತಂದು ರೂಪಾಂತರ ಮಾಡಿದವನು ಶ್ರೀರಾಮಚಂದ್ರ.
ಕಲ್ಲಿಗೂ ಶ್ರೀರಾಮನಿಗೂ ವಿಶೇಷ ಸಂಬಂಧ. ಶ್ರೀ ರಾಮನ ಹೆಸರು ಬರೆದ ಕಲ್ಲುಗಳು ಸಮುದ್ರದಲ್ಲಿ ತೇಲುವ ಹಾಗೆ ರೂಪಾಂತರಗೊಂಡಿದ್ದು ಸಾಮಾನ್ಯವೇ?
ಇತ್ತೀಚೆಗೆ ನಮ್ಮ ಕುಟುಂಬದ ಒಂದು ಗುಂಪು ಕಲ್ಲೂರಿನ ರಾಮನ ದರ್ಶನಕ್ಕೆ ಹೋಗಿದ್ದೆವು. ಅಮೃತಶಿಲೆಯ ಮುದ್ದಾದ ವಿಗ್ರಹಗಳು ಆಕರ್ಷಕವಾಗಿದ್ದವು. ಅದರಲ್ಲೂ ಸೀತೆಯ ತಲೆ ರಾಮನ ಕಡೆ ವಾಲಿದ್ದು , ರಾಮನ ಮೇಲಿನ ಪ್ರೀತಿಯೋ ಅಥವಾ ರಾಮನಲ್ಲಿ ಆಸರೆಯನ್ನು ಪಡೆಯುವ ಹಂಬಲವೋ, ತಿಳಿಯದು.
ಮಂದಿರದ ಪರಿಸರ ಹಿತವಾಗಿತ್ತು. ಮನಸ್ವಿನಿ ನೃತ್ಯ ಸೇವೆಯನ್ನು ಅರ್ಪಿಸಿದ್ದು ಸಮಯೋಚಿತವಾಗಿತ್ತು.
ರಾಮಾಯಣದ ಹನುಮಂತ ಲಂಕೆಗೆ ಹಾರುವ ಮುನ್ನ, ಆಕಾಶದೆತ್ತರಕ್ಕೆ ಬೆಳೆದದ್ದು, ಮಧ್ಯ ದಾರಿಯಲ್ಲಿ ಸಿಕ್ಕ ಸುರಸೆಯಿಂದ ತಪ್ಪಿಸಿಕೊಳ್ಳಲು ತನ್ನ ಶರೀರವನ್ನು ಚಿಕ್ಕದಾಗಿ ಮಾಡಿಕೊಂಡು, ಸುರಸೆಯ ಬಾಯಿಯಲ್ಲಿ ಹೊಕ್ಕು, ತಕ್ಷಣ ಹೊರಕ್ಕೆ ಬಂದು ದೊಡ್ಡ ರೂಪವನ್ನು ತಾಳಿ, ಲಂಕೆಗೆ ಹಾರಿದ್ದು ರೂಪಾಂತರಕ್ಕೆ ನಿರ್ದಿಷ್ಟ ಉದಾಹರಣೆ.
ಮಾರೀಚನು ಮಾಯಾ ಜಿಂಕೆಯಾಗಿ ರೂಪುಗೊಂಡು, ಸೀತೆಯನ್ನು ಆಕರ್ಷಿಸಿದ್ದು, ರಾಮನ ಅಯನಕ್ಕೆ ಕಾರಣವಾಯಿತು.
ರಾಮಾಯಣದ್ದೇ ಇನ್ನೊಂದು ರೂಪಾಂತರದ ಮುಖ.... ರಾವಣ ಸೀತೆಯನ್ನು ಒಲಿಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಪ್ರಯತ್ನ ಮಾಡಿ, ಸೋತ ನಂತರ ಅವನಿಗೆ ಬಂದ ಸಲಹೆ... ರಾಮನ ರೂಪದಲ್ಲಿ ಹೋಗಿ ಸೀತೆಯನ್ನು ಭೇಟಿ ಮಾಡು ಎಂದು.. ಅದಕ್ಕೆ ರಾವಣನ ಉತ್ತರ... ಅದೂ ಪ್ರಯತ್ನ ಮಾಡಿದೆ.. ರಾಮನ ರೂಪವನ್ನು ಧರಿಸಿದಾಗ, ಪರಸ್ತ್ರೀಯರ ಬಗ್ಗೆ ಗೌರವ ಮೂಡಿ, ಸೀತೆಯ ಬಳಿ ಮಾತನಾಡಲು ಧೈರ್ಯವೇ ಬರಲಿಲ್ಲ ಎಂದು. ಬಾಹ್ಯದಲ್ಲಿ ರೂಪಾಂತರವಾದರೂ.. ಅಂತರಂಗದಲ್ಲಿ ರಾಮನ ರೂಪ ತಾಳಲಾಗಲಿಲ್ಲ ಎಂಬುದು, ರಾಮನ ಪ್ರಭಾವವನ್ನು ಎತ್ತಿ ತೋರುತ್ತದೆ.
ಶ್ರೀರಾಮನ ಪ್ರಭಾವವು ಚಿಕ್ಕಂದಿನಿಂದಲೂ ನನ್ನ ಮೇಲೆ ನಿರಂತರವಾಗಿದೆ. ರಾಮನು ಕಾಡಿಗೆ ಹೋದನು, ಇದು ಕನ್ನಡದಲ್ಲಿ ನಾನು ಕಲಿತ ಮೊದಲ ವಾಕ್ಯ. ಸಂಸ್ಕೃತದಲ್ಲಿ ಮೊದಲು ಕಲಿತದ್ದು, ಬೇರೆ ವಿಭಕ್ತಿಗಳಲ್ಲಿ ಶಬ್ದ ಪ್ರಯೋಗ ಅಕಾರಂತ ಪುಲ್ಲಿಂಗ ರಾಮ ಶಬ್ದಃ...
ಶುದ್ಧ ಬ್ರಹ್ಮ ಪರಾತ್ಪರ ರಾಮ... ಕಾಲಾತ್ಮಕ ಪರಮೇಶ್ವರ ರಾಮ... ಎಂದು ಶುರುವಾಗುತ್ತಿದ್ದ ರಾಮನಾಮದ ಕಾಪಿ ಪುಸ್ತಕ, ಶನಿವಾರದ ನನ್ನ ಅಕ್ಕ ಮಾಡುತ್ತಿದ್ದ ರಾಮನ ಪೂಜೆ, ಸಿಗುತ್ತಿದ್ದ ತಂಬಿಟ್ಟಿನ ಪ್ರಸಾದ.... ಹೀಗೆ ಇನ್ನೆಷ್ಟೋ.
Tom & jerry show ದೂರದರ್ಶನದಲ್ಲಿ ನೋಡುತ್ತಿದ್ದ ತುಂಬಾ ಇಷ್ಟವಾದ ಚಿತ್ರಗಳು. ಮಗುವಿನ ಮನಸ್ಸಿರುವ ಎಲ್ಲ ವಯಸ್ಸಿನವರು ನೋಡಿ ನಕ್ಕು ನಲಿಯುವ ಚಿತ್ರಗಳು. ಬೆಕ್ಕು ಏಟು ತಿಂದು ರೂಪ ಬದಲಾಗುವುದು... ಅದರಲ್ಲೂ ರೋಲರ್ ಕೆಳಗೆ ಸಿಕ್ಕಿ ಪೇಪರ್ ನಂತಾದ ಬೆಕ್ಕು ಪುನಃ ಅದರ ರೂಪ ತಾಳುವುದು ಅಚ್ಚುಮೆಚ್ಚು.
ಶ್ರೀರಾಮನ ಭಕ್ತರೆಂದು ಮೇಲ್ನೋಟಕ್ಕೆ ಪ್ರದರ್ಶಿಸುತ್ತಾ ಒಳಗೊಳಗೆ ರಾಕ್ಷಸರಾಗಿರುವುದು, ಅಯೋಧ್ಯೆಯಲ್ಲಿ ನಡೆದ ಹುಂಡಿ ಹಣದ ಕಳ್ಳತನವು ಸಾಕ್ಷೀಭವಿಸಿದೆ.
ಅಷ್ಟೇಕೆ, ಅಯೋಧ್ಯೆಯ ರಾಮನ ದರ್ಶನ ಮಾಡುವ ಪ್ರವಾಸಕ್ಕೆಂದು ನಾವುಗಳು ಯೋಜಿಸುತ್ತಿದ್ದಾಗ, ಅದಕ್ಕಾಗಿ ನಾವು ನಂಬಿದ ವ್ಯಕ್ತಿ ನಮ್ಮೆಲ್ಲರ ಹಣ ದೊಂದಿಗೆ ಪರಾರಿಯಾಗಿದ್ದು ಮತ್ತೊಂದು ರಾಕ್ಷಸಿ ರೂಪ.
ಉದರ ನಿಮಿತ್ತ ಬಹುಕೃತ ವೇಷಂ ಎಂದು ಭಜ ಗೋವಿಂದ ಶ್ಲೋಕಗಳಲ್ಲಿ ಹೇಳಿದ ಶಂಕರಾಚಾರ್ಯರ ಸಾಲುಗಳನ್ನು ತಮ್ಮದೇ ಆದ ಶೈಲಿಯಲ್ಲಿ ಉದರ ನಿಮಿತ್ತ ಬಹುಕೃತ ಮೋಸಂ ಎಂದು ವ್ಯಾಖ್ಯಾನಿಸಿದವರು ನಮ್ಮ ಕೈಲಾಸಂ. ಮೂಲ ಸಾಲಿನ ಭಾವವೂ ರೂಪಾಂತರದ ಮುಖದ ಅನಾವರಣ. ಇನ್ನು ವ್ಯಾಖ್ಯಾನವಂತೂ ಮೂಲ ಸಾಲಿನ ರೂಪಾಂತರವೇ.
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ ಎಂಬ ನಾಣ್ಣುಡಿಯು ಮನಸ್ಥಿತಿಯ ಬದಲಾವಣೆಯನ್ನು ಸೂಚಿಸುತ್ತದೆ ಎಂದು ನನ್ನ ಅನಿಸಿಕೆ.
ಬದಲಾವಣೆ ಜಗದ ನಿಯಮ ಎಂದು ಹೇಳಿದ ಶ್ರೀಕೃಷ್ಣನ ಮಾತುಗಳು, ರೂಪಾಂತರವೂ ಬದಲಾವಣೆಯ ಇನ್ನೊಂದು ಮುಖ ಎಂದು ಅನಿಸುತ್ತಲ್ಲವೇ....
ನಮಸ್ಕಾರ..
ಡಿ ಸಿ ರಂಗನಾಥ ರಾವ್
9741128413




ಪ್ರಕೃತಿಯ ರೂಪಾಂತರ ವಿಸ್ಮಯ, ಅಮೋಘ ಹಾಗೂ ಸೂಕ್ಷ್ಮವಾಗಿ ಗಮನಿಸಿದಾಗ ಮನಸ್ಸಿಗೆ
ReplyDeleteಮುದ ನೀಡುವ ಅನುಭವವಾದರೆ.... ಮಾನವನ ರೂಪಾಂತರ (ನಾಟಕವನ್ನು ಹೊರತುಪಡಿಸಿ) ಸ್ವಾರ್ಥ, ಕಾಮ, ಕ್ರೋಧ ಗಳಿಂದ ತುಂಬಿ ಸಮಾಜದ ಪಿಡುಗಾಗಿ ನೆಮ್ಮದಿಯ ಬದುಕನ್ನು ಹಾಳು ಮಾಡುತಿದೆ
ನಾನು ಕೂಡ ಒಮ್ಮೆ ನಾಟಕದಲ್ಲಿ ಬೃಹಸ್ಪತಿ ಮುನಿಯ ವೇಷ ಧರಿಸಿದ್ದು ನೆನಪಿಗೆ ಬಂದು ಖುಷಿ ಆಯಿತು...
ಧನ್ಯವಾದಗಳು
ಬಾಬು
ದೊಡ್ಡಜಾಲ ಈಗ ಹೈಟೆಕ್ ಗ್ರಾಮ ಆಗಿದೆ!! ಅಚ್ಚುಕಟ್ಟಾದ ರಸ್ತೆ, ಬಸ್ ಸ್ಟ್ಯಾಂಡ್, ಕಸ ತೆಗೆಯುವ ವಾಹನಗಳು, ಅಂಬ್ಯುಲೆನ್ಸ್ ಸೇವೆ ಎಲ್ಲಾ ಇದೆ!! ಗ್ರಾಮದ ಜನರಲ್ಲಿ ಧಾರ್ಮಿಕ, ಸೇವಾ ಭಾವನೆ ಸಹ ಹೆಚ್ಚಿದೆ.
ReplyDeleteಈಶ್ವರನ ದೇವಾಲಯಲ್ಲಿ ನಿತ್ಯ ಪೂಜೆ, ಮುತ್ಯಾಲಮ್ಮನ ದೇವಾಲಯದಲ್ಲಿ ಮಂಗಳವಾರ ಶುಕ್ರವಾರ ವಿಶೇಷ ಪೂಜೆ, ಪ್ರಸಾದ ವಿತಣೆ ಸಹ ಇದೆ.