ಅಂತ್ಯೇಷ್ಟಿ/ ಶ್ರಾದ್ಧಕ್ಕೆ ಮಗನೇ ಏಕೆ ?









ಸಾಮಾನ್ಯವಾಗಿ ಯಾರನ್ನಾದರೂ ಭೇಟಿಯಾದಾಗ ನಮಸ್ಕಾರ ಹೇಳಿ, ಆರಾಮಾನಾ / ಚೆನ್ನಾಗಿದ್ದೀರಾ ಎಂದು ಕೇಳುವುದು ವಾಡಿಕೆ. ಅದರಲ್ಲೂ ಬೆಳಗಿನ ವಾಕಿಂಗ್ ಸಮಯದಲ್ಲಿ ಮುಂದುವರಿದು ಈಗ ಬಂದ್ರಾ / ಎಷ್ಟು ಸುತ್ತು ಆಯಿತು ಎಂದು ಕೇಳಿ... ಅವರ ಹಾಜರಾತಿಯ ವಿಷಯಕ್ಕೆ ಬಂದು... ಏನು ಎರಡು ದಿವಸದಿಂದ ಕಾಣಲಿಲ್ಲ ಎಂಬ ಪ್ರಶ್ನೆ ತಾನಾಗಿ ಬರುತ್ತದೆ.

ಇಂಥ ಒಂದು ಪ್ರಶ್ನೆಯನ್ನು ಮೊನ್ನೆ ನಾನು ಲಕ್ಷ್ಮೀನಾರಾಯಣ ಹಾಗೂ ಜಯಶ್ರೀ ದಂಪತಿಯನ್ನು ಕೇಳಿದೆ. ಅದಕ್ಕೆ  ನಮ್ಮತ್ತೆಯ ಶ್ರಾದ್ದ ಇತ್ತು ಎಂದು ಹೇಳಿದವರು ಲಕ್ಷ್ಮಿ ನಾರಾಯಣ ಅವರು. ತಮ್ಮ ಬಂದಿದ್ನಾ ಎಂದು ಜಯಶ್ರೀ ಅವರನ್ನು ಕೇಳಿದಾಗ, ಅವನೆಲ್ಲಿ ಬರ್ತಾನೆ ಅಷ್ಟು ದೂರದಿಂದ... ನಾನೇ ಮಾಡ್ತೀನಿ ಎಂದು ಹೇಳಿದ್ದು ಕೇಳಿ, ಒಂದು ತರಹ ಖುಷಿ / ಆಶ್ಚರ್ಯ/ ಕುತೂಹಲದ ಭಾವ ಮನಸ್ಸಿನಲ್ಲಿ ಮೂಡಿತು. ಮುಂದುವರಿದು ಅವರು ಹೇಳಿದ್ದು, ನಾನೇ ಅಡಿಗೆ ಮಾಡುತ್ತೇನೆ.. ಪಿಂಡಪ್ರದಾನ ಮಾಡುವುದನ್ನು ಬಿಟ್ಟು, ತರ್ಪಣ ಬಿಡುವವರೆಗೆ ಎಲ್ಲವನ್ನು ನಾನೇ ಮಾಡುತ್ತೇನೆ. ಇವರು ಬಡಿಸುವುದಕ್ಕೆ ಸಹಾಯ ಮಾಡುತ್ತಾರೆ.  

ಇಂದಿನ ದಿನಮಾನದ ಹೆಂಗಸರ ಮನಸ್ಥಿತಿಯನ್ನು ನೆನೆದಾಗ ಮೇಲಿನ ಎರಡು ಕೆಲಸಗಳು ವಿಶೇಷ ಎನ್ನಿಸಿದವು.

ಅವರ ಅಮ್ಮ ಸತ್ತಾಗ, ತಮ್ಮ,  ತುಂಬಾ ಚಿಕ್ಕವನಲ್ಲದಿದ್ದರೂ... ಅವನ ಭಯವನ್ನು/ ಹಿಂಜರಿಕೆಯನ್ನು ಗಮನಿಸಿ, ಅವನೋಡನೆ ಸರಿಸಮನಾಗಿ ನಿಂತು, ಅಂತ್ಯ ಸಂಸ್ಕಾರದ ಎಲ್ಲ ವಿಧಿಗಳನ್ನು ಪೂರೈಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿ ಬಂದವರು ಜಯಶ್ರೀ. ನಂತರದ ದಿನಗಳಲ್ಲಿ ಸತತವಾಗಿ ಅಮ್ಮನ ಶ್ರಾದ್ಧವನ್ನು ಮಾಡುತ್ತಲೇ ಬಂದಿದ್ದಾರೆ. ಅಪ್ಪನ   ಶ್ರಾದ್ಧವನ್ನು ಪಕ್ಷ  ಮಾಸದಲ್ಲಿ ಮಾಡುತ್ತಾರೆ.

ಇಲ್ಲಿ ಇನ್ನೊಂದು ಸೂಕ್ಷ್ಮವೂ ಉಂಟು. ಲಕ್ಷ್ಮೀನಾರಾಯಣ ಅವರಿಗೆ ವಯಸ್ಸಾದ ತಂದೆ ತಾಯಿ ಇಬ್ಬರೂ ಇದ್ದಾರೆ. ಹಾಗಾಗಿ ಅವರು  ಶ್ರಾದ್ಧಕರ್ಮಗಳಲ್ಲಿ ನೇರವಾಗಿ ಭಾಗವಹಿಸಬಾರದು. ಮಡದಿಗೆ ನೆರವಾಗುವುದು ಅನಿವಾರ್ಯ. ಹೀಗಾಗಿ ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಲಕ್ಷ್ಮೀ ನಾರಾಯಣ ಅವರ ಮೇಲೆ.

ಆಗಲೇ ಅನಿಸಿದ್ದು... ಅಂತ್ಯೇಷ್ಟಿ/ ಅಂತ್ಯಸಂಸ್ಕಾರ / ಶ್ರಾದ್ಧಕ್ಕೆ ಮಗನೇ ಏಕೆ ? ಮಗಳೂ ಆಗಬಹುದಲ್ವಾ... ಅವಳೂ ಸಹ ಅದೇ ತಾಯಿಯ ಗರ್ಭದಲ್ಲಿ ಹುಟ್ಟಿದವಳು. ಈಗಿನ ಕಾನೂನಿನಂತೆ ಆಸ್ತಿಯಲ್ಲಿ ಹಕ್ಕು ಪಡೆದಿರುವ ಮಗಳು, ತಂದೆ ತಾಯಿಗೆ ಸಲ್ಲಿಸುವ ಕರ್ತವ್ಯದಲ್ಲಿ ಭಾದ್ಯತೆಯೂ ಇರಬೇಕಾದವಳು.

ಜನ್ಮ ಕೊಡಲು ತಾಯಿ, ಮನೆ ವಾಳ್ಕೆಗೆ ಯಜಮಾನಿ, ರಾಜ್ಯಗಳನ್ನು ಆಳಿದ ರಾಣಿ,  ಸಮಯದಲ್ಲಿ ತಂದೆಯೂ ಆಗಬಲ್ಲ ಹೆಣ್ಣು, ಮಗನ ಪಾತ್ರವನ್ನು ನಿರ್ವಹಿಸಲಾರಳೇ...?  

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು... ಕುವರನಾದೊಡೆ ಬಂದ ಗುಣವೇನದರಿಂದ ಕುವರಿಯಾದೊಡೆ ಕುಂದೇನು... 

ಸಂಚಿ ಹೊನ್ನಮ್ಮ ಬರೆದ ಹದಿಬದೆಯ ಧರ್ಮದ ಈ ಸಾಲುಗಳು ಎಷ್ಟು ಸಮಂಜಸ  ಅಲ್ಲವೇ?

ನಮ್ಮಲ್ಲಿ ಒಂದು ಸಂಪ್ರದಾಯ ಅನೂಚಾನವಾಗಿ ಬಂದಿದೆ.  ಅದು ಅಂತ್ಯೇಷ್ಟಿ/ ಅಂತ್ಯಸಂಸ್ಕಾರ ಹಾಗೂ ಶ್ರಾದ್ಧಕರ್ಮಗಳನ್ನು ಮಾಡುವುದು ಗಂಡು ಮಕ್ಕಳು ಮಾತ್ರ. ಮನೆಯ ಯಜಮಾನಿಕೆ ಗಂಡಸರ ಸ್ವತ್ತಾಗಿದ್ದ ಸಮಾಜದಲ್ಲಿ, ನಿರ್ಧಾರಗಳು ಯಜಮಾನನದು. ಅವನು ಕುಟುಂಬದ ರಕ್ಷಕ. ಹಾಗಾಗಿ ಹೆಂಗಸರು ಮತ್ತು ಮಕ್ಕಳನ್ನು ಭಾವನಾತ್ಮಕವಾಗಿ ಕಷ್ಟವಾದ ಈ ಕೆಲಸದಿಂದ ದೂರ ಇಟ್ಟಿರಬಹುದೇ ?

ಗಂಡು ಮಕ್ಕಳು ಇಲ್ಲದಿದ್ದರೆ, ಆ ಜಾಗಕ್ಕೆ ಯಾರಾದರೂ ನಿಂತು ಕ್ರಿಯೆಗಳನ್ನು ಮುಗಿಸುವುದು. ಅವರು ಸಿಗದಿದ್ದರೆ, ಈ ಕೆಲಸವನ್ನು ಮಾಡಲು ಒಪ್ಪುವ ಯಾರೋ ಅಪರಿಚಿತರಿಗೆ ವ್ಯವಹಾರಿಕವಾಗಿ ವಹಿಸಿಕೊಡುವುದು. 

ಅದರಲ್ಲೂ ದೇಹವನ್ನು ಅಗ್ನಿಗರ್ಪಿಸುವ ಸಂಪ್ರದಾಯ ಇರುವವರಲ್ಲಿ ಮಕ್ಕಳು ಹಾಗೂ ಹೆಂಗಸರು ಸ್ಮಶಾನಕ್ಕೆ ಹೋಗುವುದನ್ನು ತಡೆಯುತ್ತಾರೆ.  ತಂದೆ ಬದುಕಿರುವ ಗಂಡುಮಕ್ಕಳು, ವಯಸ್ಸು ಎಷ್ಟಾಗಿದ್ದರೂ ಸ್ಮಶಾನಕ್ಕೆ ಹೋಗಲು ಅನರ್ಹರು.

ತಂದೆ ಸತ್ತ ನಂತರ, ಮನೆಯ ಜವಾಬ್ದಾರಿಯನ್ನು ಹೊರಬೇಕಾದ್ದು ಗಂಡಮಕ್ಕಳು... ಹಾಗಾಗಿ ಅವರು ಎಲ್ಲವನ್ನು ಎದುರಿಸುವ ಶಕ್ತಿಯನ್ನು ಗಳಿಸುವುದು ಅನಿವಾರ್ಯ. 

ನನ್ನಮ್ಮನ ಶವವನ್ನು ವಿದ್ಯುತ್ ಚಿತಾಗಾರದೊಳಗೆ ಸರಿಸಿದಾಗ, ಭಗ್  ಅಂತ ಬೆಂಕಿ ಆವರಿಸಿದಾಗ.. ನನಗಾದ ಆಘಾತ ಮರೆಯಲು ಸಾಧ್ಯವೇ ಇಲ್ಲ.. ಅಮ್ಮಾ ಎಂಬ ಆರ್ತನಾದ ನನ್ನಿಂದ ಹೊರಬಂದು ಕೆಲ ಕ್ಷಣಗಳ ಮಟ್ಟಿಗೆ ನನ್ನ ಮೇಲೆ ನನಗೆ ಹಿಡಿತವಿರಲಿಲ್ಲ.

ಶವವನ್ನು ಸೌದೆಯಲ್ಲಿ ಸುಡುವುದನ್ನು  ನಾನು ಮೊದಲು ನೋಡಿದ್ದು, ನನ್ನ ಸೋದರ ಮಾವ ಸುಬ್ಬಣ್ಣಯ್ಯನ ಸಾವಿನ ಸಮಯದಲ್ಲಿ.   ದೇಹ, ಸೌದೆಯ ಬೆಂಕಿಯ ಜೊತೆಗೆ, ಹತ್ತಿ ಉರಿಯುವಾಗ, ಕೊಬ್ಬು ಕರಗಿ ಹರಿದು ಸುಡುವಾಗ, ನೋಡಲು ಎಂಟೆದೆ(?) ಬೇಕು. ಇದೇ ಮುಖ್ಯ ಕಾರಣ ಗಂಡು ಈ ಕಾರ್ಯವನ್ನು ಮಾಡಲು ಸೂಕ್ತ ಆಯ್ಕೆ ಇರಬಹುದೇ?

ಅದೇ ಮಣ್ಣಲ್ಲಿ ಹೂಳುವ ಸಂಪ್ರದಾಯ ಇರುವವರು... ಹೆಂಗಸರು ಮಕ್ಕಳಾದಿಯಾಗಿ ಸ್ಮಶಾನಕ್ಕೆ ಹೋಗುತ್ತಾರೆ.

ತಾರ್ಕಿಕವಾಗಿ ಯೋಚನೆ ಮಾಡಿದರೆ, ಸಾಮಾನ್ಯವಾಗಿ, ಗಂಡು ದೈಹಿಕವಾಗಿ ಶಕ್ತ , ಭಾವನೆಗಳನ್ನು ತಾತ್ಕಾಲಿಕವಾಗಿಯಾದರೂ ಹಿಡಿದು ಇಟ್ಟುಕೊಳ್ಳಬಲ್ಲ ಶಕ್ತಿಯುಳ್ಳವನು. ಹೆಣ್ಣು ಹೆರಿಗೆ ಸಮಯದಲ್ಲಿ ದೈಹಿಕವಾಗಿ ಬ್ರಹ್ಮಾಂಡ ನೋವನ್ನು ಸಹಿಸಬಲ್ಲಳಾದರೂ, ದೈಹಿಕ ಶಕ್ತಿಯಲ್ಲಿ ಸ್ವಲ್ಪ ಹಿಂದೆ... ಭಾವನಾತ್ಮಕವಾಗಿ, ಸುಲಭವಾಗಿ ಕುಸಿಯುವ.. ಅಳುವ ಗುಣವುಳ್ಳವಳು,  ಹಾಗಾಗಿ ಅಬಲೆ.  

ಕೊಟ್ಟ ಹೆಣ್ಣು ಕುಲಕ್ಕೆ ಹೊರಗು.. ಅವಳು ಆ ಮನೆಯ ಭಾಗ. ಮಗ ಕುಲೋದ್ಧಾರಕ, ಮನೆಯ ಆಗು ಹೋಗುಗಳು ಅವನದು, ಎಂಬುದು ರೂಢಿಗತವಾಗಿ ಬಂದದ್ದು. ನಂಗೆ ಕೊಳ್ಳಿ ಇಡಕ್ಕಾದರೂ ಒಬ್ಬ ಗಂಡು ಮಗು ಬೇಕು ಎಂದು ಆಶಿಸುವವರಿದ್ದರು.  ಸ್ವರ್ಗಕ್ಕೇರಲು ಗಂಡು ಮಗ ಮಾಡಿದ ಶ್ರಾದ್ಧಕರ್ಮಗಳೇ ಕಾರಣ ಎಂದು ನಂಬಿದವರಿದ್ದರು.

ಇಂದಿನ ಕಾಲಮಾನದಲ್ಲಿ, ಒಂದು ಎರಡು ಇರುವ ಮಕ್ಕಳು, ದೂರ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಕಾರಣ, ತಂದೆ ತಾಯಿಗಳ ಅಂತಿಮ ದಿನದಲ್ಲಿ ಜೊತೆಯಲ್ಲಿರಲು ಸಾಧ್ಯವೇ ಇಲ್ಲ.  ಅಂತಿಮ ಸಂಸ್ಕಾರಕ್ಕೆ ಬಂದರೂ.. ಅದೊಂದು ಕರ್ತವ್ಯ ಅಷ್ಟೇ.  ಭಾವನಾತ್ಮಕ ಸಂಬಂಧಗಳ ಕೊರತೆ ಇದ್ದೇ ಇದೆ.  ಎಲ್ಲ ಹೆಣ್ಣು ಮಕ್ಕಳು, ಅಂತ್ಯಸಂಸ್ಕಾರದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಒಪ್ಪಲಾರರು... ಕಾರಣಗಳು ಏನೇ ಇರಲಿ, ಶಾಸ್ತ್ರ ಸಂಪ್ರದಾಯಗಳ ಮೊರೆ ಹೋಗುವುದು ಸುಲಭದ ದಾರಿ.

ಶ್ರಾದ್ಧದ ಸ್ವರೂಪಗಳೂ ಬದಲಾಗುತ್ತಿವೆ.  ಶ್ರಾದ್ಧವನ್ನು ಶ್ರದ್ಧೆಯಿಂದ ಮಾಡುವವರು ಇದ್ದಾರೆ.. ಹಾಗೆ ಮಾಡದಿದ್ದರೆ, ಮುಂದೆ ಏನಾದರೂ ಕೇಡು ಸಂಭವಿಸಬಹುದು ಅಥವಾ ಸುತ್ತು ಮುತ್ತಲಿನ ಜನ ಏನಂದುಕೊಂಡಾರು ಎಂಬ ಭಯದಿಂದ,  ಕರ್ತವ್ಯವೆಂಬತೆ ಮಾಡುವವರೂ ಇದ್ದಾರೆ. 

ಹೆಣ್ಣು ಮಕ್ಕಳು ಅಂತ್ಯ ಸಂಸ್ಕಾರ / ಶ್ರಾದ್ಧ ಮಾಡುವುದು ಅಪರೂಪವೆನಿಸಿದರೂ, ಅಲ್ಲಲ್ಲಿ ನಡೆಯುತ್ತಿರುವುದನ್ನು ಕೇಳಿದ್ದುಂಟು. ನನ್ನ ಅತ್ತಿಗೆಯ ಅಣ್ಣನಿಗೆ ಒಬ್ಬಳೇ ಮಗಳು. ಅವರು ಸತ್ತಾಗ ಮಗಳೇ ಮುಂದೆ ನಿಂತು ಅಂತ್ಯ ಸಂಸ್ಕಾರಗಳನ್ನು ನಡೆಸಿದಳು ಎಂದು ಕೇಳಿದ್ದೇನೆ. ಆಗ ಆ ಹುಡುಗಿಯ ಬಗ್ಗೆ ಹೆಮ್ಮೆ ಪಟ್ಟಿದ್ದುಂಟು.



ಈ ಸಮಯದಲ್ಲಿ ನೆನಪಿಸಿ ಕೊಳ್ಳಬೇಕಾದದ್ದು, ಪೂಜಾ ಶರ್ಮ ಎಂಬ ದೆಹಲಿಯ ಮೂಲದ ಹೆಣ್ಣು ಮಗಳು. ಈಕೆ ಕೊಲೆಯಾದ ತನ್ನಣ್ಣನ ಶವವನ್ನು ದಹನ ಮಾಡಬೇಕಾದ ಅನಿವಾರ್ಯತೆಯಿಂದ ಪ್ರಾರಂಭಿಸಿದ ಈ ಕೆಲಸವನ್ನು, ಸಾವಿರಾರು ಅನಾಥ ಶವಗಳ ಅಂತ್ಯ ಸಂಸ್ಕಾರವನ್ನು ಗೌರವ ಪೂರಕವಾಗಿ ನಡೆಸಿಕೊಟ್ಟಿದ್ದಾರೆ.  



ನಮ್ಮ ಬೆಂಗಳೂರಿನಲ್ಲಿ ಈ ಸಾಹಸ ಕಾರ್ಯವನ್ನು ಮಾಡುತ್ತಿದ್ದವರು ತ್ರಿವಿಕ್ರಮ ಮಹಾದೇವ. ಇವರು ಸಾವಿರಾರು ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಗೌರವ ಪೂರಕವಾಗಿ ನಡೆಸಿಕೊಟ್ಟಿದ್ದಾರೆ.  

ರಾಜ ಸರ್ವಸ್ಯ ಬಂಧುಃ ಎನ್ನುವುದು ನೀತಿ ಸಂಹಿತೆಯ ಒಂದು ಹೇಳಿಕೆ. ಯಾರಿಗೆ ಬಂಧುಗಳು ಇರುವುದಿಲ್ಲವೋ ಅವರಿಗೆ ರಾಜನೇ ಬಂದು, ಹಾಗಾಗಿ ಅಂತಹವರ ಅಂತ್ಯ ಸಂಸ್ಕಾರ ಮಾಡುವುದು ರಾಜನ ಧರ್ಮ.

ಈಗ ರಾಜರು ಇಲ್ಲದಿರುವ ಕಾರಣ, ಆ ಹೊಣೆ ಸ್ಥಳೀಯ ಸರ್ಕಾರದ ಮೇಲಿದೆ. 

ಅನಾಥ ಪ್ರೇತ ಸಂಸ್ಕಾರಾತ್ ಅಶ್ವಮೇಧ ಫಲಂ ಲಭೇತ್...  ಸಂಸ್ಕೃತ ಸುಭಾಷಿತ.  ಅನಾಥ ಶವ ಸಂಸ್ಕಾರದ ಫಲ, ಅಶ್ವಮೇಧ ಯಾಗ ಮಾಡಿದ ಫಲಕ್ಕೆ ಸಮಾನ  ಎಂದು ಹೇಳುತ್ತದೆ.

ಅಂತ್ಯ ಸಂಸ್ಕಾರ ಯಾರು ಮಾಡುತ್ತಾರೆ ಹೇಗೆ ಮಾಡುತ್ತಾರೆ ಅನ್ನುವುದು ಮುಖ್ಯವಲ್ಲವಾದರೂ, ಯಾವುದೇ ಸತ್ತ ಪ್ರಾಣಿಯ ಅಂತ್ಯ ಸಂಸ್ಕಾರ ಆಗಬೇಕಾದದ್ದು ಅನಿವಾರ್ಯ. ಇಲ್ಲದಿದ್ದರೆ ಶವ ಕೊಳೆತು, ನಾರಿ... ಸುತ್ತು ಮುತ್ತಲಿನವರ ಆರೋಗ್ಯಕ್ಕೆ ಹಾನಿಕರವಾಗುತ್ತದೆ.

ಕೊನೆ ಹನಿ:

ಮನೆಯ ಮುಂದೆ ನಾಯಿ ಸತ್ತು ಬಿದ್ದದ್ದ ಕಂಡು ಶಂಕರ ಶಾಸ್ತ್ರಿಗಳು, ನಗರ ಪಾಲಿಕೆಗೆ ಫೋನಾಯಿಸುತ್ತಾರೆ. ವಿಷಯ ತಿಳಿದ ಅತ್ತ ಕಡೆಯ ವ್ಯಕ್ತಿ.. ಶಾಸ್ತ್ರಿಗಳೇ ಹೇಗೂ ನೀವು ಅಂತ್ಯ ಸಂಸ್ಕಾರ ಮಾಡಿಸುತ್ತೀರ  ... ನೀವೇ ಮಾಡಿಬಿಡಿ ಎಂದು ತಮಾಷೆ ಮಾಡುತ್ತಾನೆ..

ಅದಕ್ಕೆ ಜಾಣ ಶಾಸ್ತ್ರಿಗಳ ಉತ್ತರ ಏನು ಗೊತ್ತೇ?

ಹೌದಪ್ಪ ನಾನು ಅಂತ್ಯ ಸಂಸ್ಕಾರ ಮಾಡಿಸುತ್ತೇನೆ... ಆದರೆ ಮಾಡುವ ವಾರಸುದಾರ ಬೇಕಲ್ಲ... ಅದಕ್ಕೆ ನಿನಗೆ ಕರೆ ಮಾಡಿದ್ದು.

ಜಾಣತನದ ಪರಮಾವಧಿ.

ಈ ಲೇಖನದ ಅಂತ್ಯಕ್ಕೆ ಬಂದಾಯಿತು....

ನಮಸ್ಕಾರ.....

ಡಿ ಸಿ  ರಂಗನಾಥ ರಾವ್

9741128413





    



Comments

  1. ಆತ್ಮೀಯ ರಂಗನಾಥ್ ರವರಿಗೆ, ಧನ್ಯವಾದಗಳು. 🙏🙏🙏

    ReplyDelete
  2. ಗುರು ಪ್ರಸನ್ನ, ಚಿಂತಾಮಣಿ23 July 2026 at 16:26

    ಹೆಣ್ಣು ಮಕ್ಕಳು ಪಿತೃಗಳಿಗೆ ಅಗ್ನಿಸಂಸ್ಕಾರವನ್ನು ಮಾಡುವುದು ಅಪರೂಪವಾದರೂ ನಿಷಿದ್ಧ ಏನಲ್ಲ. ಶಾಸ್ತ್ರಗಳಲ್ಲಿ ಆ ಬಗ್ಗೆ ಅನುಮತಿ ಇದೆ ಎಂದು ಕೇಳಲ್ಪಟ್ಟಿದ್ದೇನೆ.

    ಮಗಳು ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ತಂದೆ ತಾಯಿಗಳ ಅಗ್ನಿ ಸಂಸ್ಕಾರ ಅಥವಾ ಶ್ರಾದ್ಧ ಮಾಡುವುದು ಮುತ್ತೈದೆ ಎಂಬ ಕಾರಣಕ್ಕೆ ನಿರಾಕರಿಸಲಾಗುವುದೋ ಏನೋ? ಹಾಗೂ ಈ ಕಾರ್ಯಕ್ಕಾಗಿ ಗಂಡ ಹಾಗೂ ಅತ್ತೆ ಮನೆ ಕಡೆಯವರ ಅನುಮತಿ ಸಿಗುವುದು ಕಷ್ಟವಿರಬಹುದು.

    ಲೇಖನದಲ್ಲಿ ಹೇಳಿರುವಂತೆ ಅಗ್ನಿ ಸ್ಪರ್ಶ ಮಾಡುವುದನ್ನು ನೋಡುವುದಕ್ಕೂ ನಿಜವಾಗು ಧೈರ್ಯ ಇರಬೇಕು. ಮೃದು ಮನಸ್ಸಿನವರಿಗೆ ಇದು ಆಗದ ಕಾರ್ಯ.

    ಪೂಜಾ ಶರ್ಮ ಹಾಗೂ ಮಹಾದೇವ ರವರ ಈ ಸೇವೆ ಅತ್ಯಂತ ಅಭಿನಂದನೀಯ ಹಾಗೂ ಮಹತ್ ಕಾರ್ಯವೇ ಸರಿ.

    ಮುಗಿಸುವ ಮುನ್ನ:

    ಶಂಕರ ಶಾಸ್ತ್ರಿಗಳು ನಗರ ಪಾಲಿಕೆಯವರಿಗೆ
    "ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ನಾನೇ ಮಾಡುತ್ತೇನೆ ಆದರೆ ಸಂಬಂಧಿಕರಿಗೆ ಒಂದು ಮಾತು ತಿಳಿಸಬೇಕೆಲ್ಲವೇ" ಎಂದಿದ್ದರೆ ಚೆನ್ನಾಗಿತ್ತು


    ReplyDelete

Post a Comment

Popular posts from this blog

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ

ದಾಂಪತ್ಯ - ಸಾಂಗತ್ಯ