ಗೋವಿಂದಾ... ಗೋ....ವಿಂದ
ಬೆಳಗಿನ ವಾಕಿಂಗ್ ಸಮಯ.. ಇದ್ದಕ್ಕಿದ್ದಂತೆ ಒಂದು ಮೂಲೆಯಿಂದ ಕೇಳುತ್ತಿದ್ದ ಗೋವಿಂದಾ ಎಂಬ ಕೂಗು... ಅದಕ್ಕೆ ಇನ್ನೊಂದು ಕಡೆಯಿಂದ ಬರುತ್ತಿದ್ದ ಪ್ರತಿಕ್ರಿಯೆ ಗೋ...ವಿಂದ, ಮತ್ತೊಮ್ಮೆ ಇನ್ನೊಂದು ಗೋವಿಂದ ಮತ್ತದಕ್ಕೆ ಪ್ರತಿಕ್ರಿಯೆ. ಹೀಗೆ ಸಾಕಷ್ಟು ಜನರ ಬಾಯಲ್ಲಿನ ಗೋವಿಂದನಾಮ, ಅದಕ್ಕೆ ಪ್ರತಿಕ್ರಿಯಿಸುತ್ತಿದ್ದವರು ಒಬ್ಬರೇ ಎಂದು ತಿಳಿಯಿತು. ಅವರ ಧ್ವನಿ ಪರಿಚಿತವಾಗಿದ್ದರೂ, ಮುಖತಃ ನೋಡಿರಲಿಲ್ಲ. ಈಚೆಗೆ ಅವರ ದರ್ಶನವಾಯಿತು. ನಮಸ್ಕರಿಸಿದೆ. ಹಣೆಯಲ್ಲಿ ದುಂಡು ಕುಂಕುಮವಿದ್ದ, ಸಾತ್ವಿಕ ವರ್ಚಸ್ಸಿನ ಹಿರಿಯರು. ಇನ್ನೂ ನನಗೆ ಪರಿಚಯವಾಗಿಲ್ಲ. ಗೋವಿಂದ ನಾಮದ ಮೂಲಕವೇ ಎಲ್ಲರೂ ಅವರನ್ನು ನಮಸ್ಕರಿಸುತ್ತಿದ್ದದ್ದು. ಅದು ಅವರ ವೈಶಿಷ್ಟ್ಯತೆ.
ಗೋವಿಂದ ಪದವನ್ನು ಕೇಳಿದಾಗ ಮನಸ್ಸಿಗೆ ಬರುವುದೇ ತಿರುಪತಿ, ಜೊತೆ ಜೊತೆಗೆ ಬಿಳಿ ಕೆಂಪಿನ ದೊಡ್ಡ ನಾಮ. ಅದು ತಿರುಪತಿಯ ಹೆಗ್ಗುರುತು.
ತಿರುಪತಿಯ ಬೆಟ್ಟವನ್ನು ಹತ್ತುವಾಗ, ಇಳಿಯುವಾಗ ಸತತವಾಗಿ ಕೇಳುವುದೇ ಗೋವಿಂದಾ... ಗೋ...ವಿಂದ ಎನ್ನುವ ನಾಮಸ್ಮರಣೆ. ಬೆಟ್ಟದ ಮೇಲೆ ಕಣ್ಣಿಗೆ ಕಾಣುವುದು, ಲಿಂಗ ಭೇದವಿಲ್ಲದ, ವಯಸ್ಸಿನ ಅಂತರ ಲೆಕ್ಕಕ್ಕೆ ಇಲ್ಲದ ಬೋಡು ಗುಂಡುಗಳು, ಹಣೆಯ ಮೇಲಿನ ನಾಮಗಳು.
ಗೋವಿಂದ ಪದದ ಹುಟ್ಟಿನ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಭೂಮಿಯಲ್ಲಿ ವಾಸ ಮಾಡಲು ಬಂದ ವಿಷ್ಣು, ಸನ್ಯಾಸಿಯ ರೂಪದಲ್ಲಿ ಅಗಸ್ತ್ಯ ಋಷಿಗಳ ಆಶ್ರಮಕ್ಕೆ ಬಂದು ತನ್ನ ಉಪಯೋಗಕ್ಕಾಗಿ ಒಂದು ಹಸುವನ್ನು ಬೇಡುತ್ತಾನೆ. ಅದಕ್ಕೆ ಅಗಸ್ತ್ಯರು, ಪತ್ನೀ ಸಮೇತವಾಗಿ ಬಂದರೆ, ಹಸುವನ್ನು ದಾನ ಕೊಡುವುದಾಗಿ ಹೇಳುತ್ತಾರೆ. ಪದ್ಮಾವತಿಯ ಸಂಗಡ ಅಗಸ್ತ್ಯರ ಆಶ್ರಮಕ್ಕೆ ಬಂದ ಶ್ರೀನಿವಾಸ, ಅಗಸ್ತ್ಯರು ಇಲ್ಲದಿದ್ದನ್ನು ಮನಗಂಡು ಶಿಷ್ಯರಲ್ಲಿ ಹಸುವನ್ನು ಕೇಳುತ್ತಾರೆ. ಇವರನ್ನು ಗುರುತಿಸದ ಶಿಷ್ಯರಾದರೋ, ಗುರುವಿನ ಅಪ್ಪಣೆ ಇಲ್ಲದೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಾರೆ. ದಂಪತಿಗಳು ಹಿಂದಿರುಗುತ್ತಾರೆ. ಕೆಲವೇ ಕ್ಷಣಗಳಲ್ಲಿ ಬಂದ ಅಗಸ್ತ್ಯರಿಗೆ ವಿಷಯ ತಿಳಿದು, ಪಶ್ಚಾತ್ತಾಪ ಪಟ್ಟು, ಒಂದು ಹಸುವನ್ನು ಹಿಡಿದು ಪದ್ಮಾವತಿ ಶ್ರೀನಿವಾಸ ಹೋದೆಡೆಗೆ ಓಡುತ್ತಾರೆ. ಓಡುತ್ತಾ.. ಗೋವು (ಹಸು) ಯಿಂದಾ (ತೆಲುಗಿನಲ್ಲಿ ತೆಗೆದುಕೋ ಎಂದು ಅರ್ಥ) ಗೋವು ಯಿಂದಾ ಎಂದು ಕೂಗುತ್ತಾರೆ. ಗೋವು+ ಯಿಂದಾ ಸೇರಿ ಗೋವಿಂದ ಎಂದಾಯಿತು ಎನ್ನುವುದು ಕಥೆಯ ತಿರುಳು.
ನನಗೆ ಗೋವಿಂದನ ಪರಿಚಯವಾದದ್ದು... ನನ್ನೂರಿನ ಶನಿವಾರದ ಭಜನೆಯ ಸಮಯದಲ್ಲಿ. ಯಾರೋ ಒಬ್ಬರು ಶ್ರೀಮದ್ ರಮಾರಮಣ ಗೋವಿಂದ ಎಂದಾಗ ಉಳಿದವರೆಲ್ಲರೂ ಗೋ...ವಿಂದ ಎಂದು ಒಕ್ಕೊರಲಿನಲ್ಲಿ ಹೇಳುತ್ತಿದ್ದಾಗ. ಎತ್ತರದ ಧ್ವನಿಯಲ್ಲಿ, ರಾಗವಾಗಿ ಹೇಳುವುದರಲ್ಲೇ ಒಂದು ಸಂತೋಷ ಇರುತ್ತಿತ್ತು.
ಚಿಕ್ಕಬಳ್ಳಾಪುರದ ತಾತನ (ನನ್ನಮ್ಮನ ಅಪ್ಪ) ಬಾಯಲ್ಲಿ ಯಾವಾಗಲೂ ಗೋವಿಂದ ನಾಮ.
ಹರಿ ಗೋವಿಂದ ಗೋವಿಂದ
ಗುರು ಗೋವಿಂದ ಗೋವಿಂದ,
ಹರಿನಾರಾಯಣ ಸಚ್ಚಿದನಂದ
ಗುರು ಗೋವಿಂದ ಸಚ್ಚಿದನಂದ.... ಎಂದು ಹೇಳುತ್ತಿದ್ದದ್ದು ನನ್ನ ನೆನಪಿನಲ್ಲಿ ಮಾಸು ಮಾಸಾಗಿದೆ. ಅಜ್ಜಿ ತಾತನ ಜೊತೆಯಲ್ಲಿದ್ದು ಓದಿದ ನನ್ನ ಅಣ್ಣಂದಿರು ನೆನಪಿಸಿಕೊಳ್ಳುವಂತೆ... ತಾತ ಪಂಚೆಯನ್ನು ಭದ್ರವಾಗಿ ಕಟ್ಟಿಕೊಳ್ಳುವಾಗ ಸಹ ಗೋವಿಂದ ಗೋವಿಂದ ಗೋವಿಂದ ಎಂದು ಹೇಳುತ್ತಿದ್ದದ್ದು.
ನನಗೆ ಉಪನಯನವಾದಾಗ ತಾತ ಸಂಧ್ಯಾವಂದನೆ ಮಾಡುವ ವಿಧಾನವನ್ನು ಮಂತ್ರ ತಂತ್ರ ಸಮೇತ ಹೇಳಿಕೊಟ್ಟಿದ್ದರು. ಜೊತೆಗೆ ಹೇಳಿಕೊಟ್ಟದ್ದು ಈ ಗೋವಿಂದ ಮಂತ್ರ:
ಗೋವಿಂದೇತಿ ಸದಾ ಸ್ನಾನಂ, ಗೋವಿಂದೇತಿ ಸದಾ ಜಪಂ, ಗೋವಿಂದೇತಿ ಸದಾ ಧ್ಯಾನಂ,ಸದಾ ಗೋವಿಂದ ಕೀರ್ತನಂ...
ಸಾಮಾನ್ಯವಾಗಿ ಮಠಗಳಲ್ಲಿ, ಗೋವಿಂದ ಹೇಳಿದ ನಂತರ ಊಟ ಪ್ರಾರಂಭ ಮಾಡುವುದು, ಒಂದು ಕಟ್ಟಳೆ. ಇದರ ಅಭ್ಯಾಸವಾಗಿದ್ದ ಒಂದು ಮಗು... ಶ್ರಾದ್ಧದ ಮನೆಯಲ್ಲಿ, ಬಾಳೆ ಎಲೆಯಲ್ಲಿ ಬಡಿಸಿದ್ದನ್ನು ಕಂಡೋ ಏನೋ, ಎಲ್ಲರೂ ಊಟ ಮಾಡಲು ಪ್ರಾರಂಭ ಮಾಡಿದರೂ.. ಗೋವಿಂದ ಹೇಳಲೇ ಇಲ್ಲ ಎಂಬ ಕೊರಗು. ಮಗುವಿನ ಅಮ್ಮ ಗೋವಿಂದ ಎಂದು ಹೇಳಿದ ನಂತರ ಅದು ಪ್ರಾರಂಭ ಮಾಡಿದ್ದು. ಇದು ಗೋವಿಂದನ ಪ್ರಭಾವ.
ನಮ್ಮ ಒಂದು ತಂಡ, ಅಶಕ್ತ ಪೋಷಕ ಸಭಾಗೆ... (ವೃದ್ಧಾಶ್ರಮ) ಸೋಮವಾರದಿಂದ ಶನಿವಾರದ ತನಕ ಪ್ರತಿದಿನ ಹೋಗಿ, ಅವರ ಜೊತೆ ಒಡನಾಡುತ್ತೇವೆ. ಕೆಲವರು ದಿನದ ಮೊದಲನೆಯ ಪ್ರಾರ್ಥನೆಯ ನಂತರ, ವೆಂಟ್ರೋಣ ಸ್ವಾಮಿ ಪಾದಾಲುಕು ಗೋವಿಂದ ಎಂದು ಹೇಳಿದಾಗ... ಎಲ್ಲರೂ ಗೋವಿಂದ ಎಂದು ಪ್ರತಿಧ್ವನಿಸುತ್ತಾರೆ. ಅಲ್ಲಿನ ಆಂಜನೇಯ ದೇವಸ್ಥಾನದ ಪೂಜಾ ಸಮಯದಲ್ಲಿ, ಬೇರೆ ಬೇರೆ ದೇವರುಗಳ ಹೆಸರಿನಲ್ಲೂ ಗೋವಿಂದ ಹೇಳುವ ಪರಿಪಾಠ ಉಂಟು.
ಗೋವಿಂದ ನಾಮಾವಳಿಯನ್ನು ಹೇಳುತ್ತಾ, ಒಂದು ಆಟವಾಡಿಸುತ್ತೇನೆ. ಶ್ರೀನಿವಾಸ ಗೋವಿಂದ ಎಂದು ಶುರುವಾಗುವ ಈ ನಾಮಾವಳಿಯ ಭಾಗವನ್ನು ನಾನು ಹೇಳಿದಾಗ... ಅವರು ಗೋವಿಂದ ಎಂದು ಒಟ್ಟಿಗೆ ಹೇಳುತ್ತಾರೆ.. ಆದರೆ ಗೋಕುಲನಂದನ.. ಎಂದು ಹೇಳಿದಾಗ ಮಾತ್ರ ಎಲ್ಲರೂ ಮೂರು ಚಪ್ಪಾಳೆಯ ಮೂಲಕ ಗೋವಿಂದನನ್ನು ಧ್ವನಿಸಬೇಕು, ಬಾಯಲ್ಲಿ ಹೇಳಬಾರದು. ಇದು ತಾವು ಮಾಡುತ್ತಿರುವ ಚಟುವಟಿಕೆಯಲ್ಲಿ ಎಷ್ಟು ಗಮನವಿಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ. ಬಹಳಷ್ಟು ಮಂದಿ ಇದನ್ನು ಗಮನವಿಟ್ಟು ಮಾಡುತ್ತಾರೆ ಎನ್ನುವುದು ಖುಷಿಕೊಡುತ್ತದೆ.
ಗೋವಿಂದ ಎಂಬ ಹೇಳಿಕೆಗೆ, ವ್ಯಂಗ್ಯವಾಗಿ ಹೇಳುವ ಇನ್ನೊಂದು ಮುಖವೂ ಇದೆ. ಅದು ಅವನತಿಯ ಕೊನೆಯ ಘಟ್ಟದ / ಮೋಸ ಹೋಗುವ ಸೂಚನೆ.
ಉದಾಹರಣೆಯಾಗಿ ನಾವು ಉಪಯೋಗಿಸುವ.. ಅವನನ್ನ ನಂಬಿದ್ರೆ ಅಷ್ಟೇ.. ಗೋ...ವಿಂದ, ಮೂರು ನಾಮ ಹಾಕಿ ಬಿಡ್ತಾನೆ .....
ನೀನ್ ಹೀಗೆ ಮಾಡ್ತಾ ಇದ್ರೆ ನಿನ್ ಗತಿ ಗೋವಿಂದ ಅಷ್ಟೇ.
ಇದೆಲ್ಲಾ ಗೋವಿಂದನ ಹೆಸರಿನ ದುರುಪಯೋಗ ಅಲ್ಲವೇ?
ನಾಮ ಹಾಕುವುದು / ನಾಮ ಹಾಕಿಸಿಕೊಂಡೆ ಎಂಬ ನುಡಿಗಟ್ಟು ಸಹ ಮೋಸ ಮಾಡುವುದು / ಮೋಸ ಹೋಗುವುದರ ಸಂಕೇತವಾಗಿ ಉಪಯೋಗದಲ್ಲಿದೆ.
ಇದು ಯಾಕೆ ರೂಢಿಯಲ್ಲಿ ಬಂದಿರಬಹುದು ಎಂದು ಯೋಚಿಸಿದಾಗ ಹೊಳೆದದ್ದು....
ನುಣ್ಣಗೆ ಬೋಳಿಸುವ ಪ್ರಕ್ರಿಯೆಯನ್ನು, ಸಂಪೂರ್ಣ ನಾಶ ಮಾಡಿದ ಎಂಬ ಭಾವದಲ್ಲಿ ಉಪಯೋಗಿಸುತ್ತೇವೆ. ಗುಡಿಸಿ ಗುಂಡಾಂತರ ಮಾಡಿದ ಎಂದು ಹೇಳುವಾಗಲೂ ಗುಂಡು ಪದಕ್ಕೆ ಪ್ರಾಮುಖ್ಯತೆ ಇದೆ. ಬೋಡು ಗುಂಡು ಸಹ, ತಲೆ ಕೂದಲು ತೆಗೆದ ಸ್ಥಿತಿಯನ್ನು ಬಿಂಬಿಸುತ್ತದೆ.
ಹರಕೆ ಹೊತ್ತು , ಗೋವಿಂದ / ವೆಂಕಟೇಶನಿಗೆ ತಲೆ ಕೂದಲನ್ನು ಕೊಡುವುದು, ನಂತರ ನಾಮವನ್ನು ಹಾಕಿಕೊಳ್ಳುವುದು, ಅನುಚಾನವಾಗಿ ನಡೆದುಕೊಂಡು ಬಂದಿರುವ, ಬಹುಜನರು ಪಾಲಿಸುವ ಸಂಪ್ರದಾಯವೇ ಎನ್ನಬಹುದೇನೋ.
ಇದು ವಯಸ್ಕರಲ್ಲಿ ಸ್ವಯಂ ಪ್ರೇರಿತವಾಗಿ ಮಾಡುವ ಕ್ರಿಯೆ. ಚಿಕ್ಕ ವಯಸ್ಸಿನ ಮಕ್ಕಳ ಮೊದಲ ಕೂದಲನ್ನು ದೇವರಿಗೆ ಅರ್ಪಿಸುವುದು, ಅಪ್ಪ ಅಮ್ಮನ ನಿರ್ಧಾರ.
ಗಂಡನ ತಲೆ ಕೂದಲನ್ನು ಕೊಡುವ ಹೆಂಡತಿಯ ಹರಕೆಯಂತೂ, (ಸ್ವಲ್ಪಮಟ್ಟಿನ ಕಲ್ಪನೆಯೂ ಇದೆ) ಗಂಡನ ಮೇಲೆ ಬಲವಂತವಾಗಿ ಹೇರುವಂತದು, ಇಷ್ಟಕ್ಕೆ ವಿರುದ್ಧವಾದುದು. ಬಲವಂತ ಮಾಘ ಸ್ನಾನ. ಇದೂ ಕಾರಣವೋ?
ಜೀವನದ ಅಂತ್ಯ ಯಾತ್ರೆಯಲ್ಲಿ ಹಾಗೂ ಅಂತ್ಯಕ್ರಿಯೆಯಲ್ಲಿ ಗೋವಿಂದ ಗೋವಿಂದ ಗೋವಿಂದ ಎಂದು ಹೇಳುವುದನ್ನು ಕೇಳಿದ್ದೇನೆ...
ಗೋವಿಂದ ನಿನ್ನ ನಾಮವೇ ಚೆಂದ...
ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದ..
ಎಂಬ ಹಾಡುಗಳು ಚಿರಪರಿಚಿತ.
ಕೊನೆ ಮಿನಿ ಕಥೆ:
ಒಬ್ಬ ದಂಪತಿಗೆ ಮುದ್ದಾದ ಗಂಡುಮಗು, ಗೋವಿಂದನ ಆಶೀರ್ವಾದದಿಂದ ಪಡೆದದ್ದು. ಹಾಗಾಗಿ ಹೆಸರು ಗೋವಿಂದ. ಹುಡುಗ ತುಂಬಾ ಚೂಟಿ. 5 ನೇ ವರ್ಷ. ಮಗನಿಗೆ ಗೋವಿಂದನ ದರ್ಶನ ಮಾಡಿಸಿ, ಮುಡಿಯ ಹರಕೆ ತೀರಿಸಲು ಬಂದಿದ್ದಾರೆ. ಮಗು ಗೋವಿಂದನಿಗೆ ತಿರುಪತಿಯ ವೈಭವ ನೋಡಲು ಉತ್ಸಾಹ. ಎಲ್ಲ ಕಡೆ ಇಣುಕುತ್ತಾನೆ. ರಾತ್ರಿಯ ದೀಪದ ಬೆಳಕು, ಜನ ಜಾತ್ರೆ ಅವನ ಉತ್ಸಾಹವನ್ನು ಇಮ್ಮಡಿಸಿತು. ಆ ಜನ ಜಂಗುಳಿಯಲ್ಲಿ ಅಪ್ಪನ ಕೈಬಿಟ್ಟ, ತಪ್ಪಿಸಿಕೊಂಡು ದೂರ ಸರಿದ. ಗಲಿಬಿಲಿಗೊಂಡ ಅಪ್ಪ ಅಮ್ಮ ಗೋವಿಂದಾ ಎಂದು ಜೋರಾಗಿ ಕೂಗುತ್ತಾರೆ. ಅದಕ್ಕೆ ಸುತ್ತ ಮುತ್ತ ಇದ್ದ ಜನ, ಗೋ..ವಿಂದ ಎಂದು ದನಿಗೂಡಿಸುತ್ತಾರೆ. ಮತ್ತೆ ಮತ್ತೆ ಮಾಡಿದ ಪ್ರಯತ್ನಗಳಿಗೂ ಅದೇ ಪರಿಣಾಮ. ಮಗು ಗೋವಿಂದನಿಗೆ ಕೂಗು ತಲುಪಲೇ ಇಲ್ಲ. ಈಗ ಯೋಚನೆ ಗೋವಿಂದನನ್ನು ಕರೆಯದೆ ಹುಡುಕಬೇಕು. ಮೌನ ಪ್ರಾರ್ಥನೆಯೇ ದಾರಿ. ಪ್ರಾರ್ಥನೆಯ ಮೂಲಕ ಸಲ್ಲಿಸಿದ ಆರ್ತ ಕೂಗು, ದೇವರು ಗೋವಿಂದನಿಗೆ ಮುಟ್ಟಿ, ಮಗು ಮರಳಿ ಅಮ್ಮನ ಮಡಿಲು ಸೇರಿತು.... ಎಂಬಲ್ಲಿಗೆ ಇಂದಿನ ಗೋವಿಂದ ಕಥನ ಮುಕ್ತಾಯವಾಯಿತು ಎಂದು ಹೇಳುತ್ತಾ..
ನಮಸ್ಕಾರ
ಡಿ ಸಿ ರಂಗನಾಥ ರಾವ್
9741128413

Comments
Post a Comment