Mission ಮುಳಬಾಗಿಲು
Mission ಮುಳಬಾಗಿಲುವಿನ ಗುರಿ:
1. Mission ನ ದಿನಾಂಕ: 09 ಜೂನ್ 2026
2. ಮುಳಬಾಗಿಲು ಆಂಜನೇಯನ ದರ್ಶನ
3. ಮುಳಬಾಗಿಲು ದೋಸೆ ತಿನ್ನುವುದು
4. ಸಾರ್ವಜನಿಕ ಸಾರಿಗೆ ಮಾತ್ರ ಉಪಯೋಗಿಸುವುದು
ಈ ಮಿಷನ್ ನ ರೂಪುರೇಷೆ ತರಾತುರಿಯಲ್ಲಿ ನಿರ್ಧಾರವಾಗಿದ್ದು, ಜೂನ್ ಎಂಟರ ರಾತ್ರಿ ಸುಮಾರು 10 ಗಂಟೆಗೆ.
9ರ ದಿನಾಂಕ ನಿರ್ಧಾರವಾಗಲು ಬಹು ಗಂಭೀರ ಕಾರಣ ಇತ್ತು.. ಅಂದು ನನ್ನ ಹೆಂಡತಿ ವಿಜಯಳ ಸ್ನೇಹಿತೆಯರ ಗುಂಪು, ಅಧಿಕ ಮಾಸದ ಕಾರ್ಯಕ್ರಮಕ್ಕಾಗಿ ನಮ್ಮ ಮನೆಯಲ್ಲಿ ಸೇರುವುದಿತ್ತು. ಅಧಿಕಾಧಿಕ ವಿಶೇಷ ಕಾರ್ಯಕ್ರಮಗಳು ಸಂಜೆಯವರೆಗೂ ರೂಪಿಸಿದ್ದ ಕಾರಣ, ನಾನು ಮನೆಯಲ್ಲಿರುವುದು ಅಷ್ಟು ಸಮಂಜಸವೆನಿಸಲಿಲ್ಲ. ಮನೆಯ ಕೋಣೆಯಲ್ಲಿ ಬಂದಿಯಾಗಿರುವ ಬದಲು, ಹೊರಹೋಗುವ ನಿರ್ಧಾರಮಾಡಿದೆ.
ಮುಂದಿನ ಪ್ರಶ್ನೆ ಮುಳಬಾಗಿಲೇ ಏಕೆ? ಹಿಂದೆ ಒಂದು ಬಾರಿ ಮುಳಬಾಗಿಲಿಗೆ ಹೋಗಿದ್ದಾಗ, ಸಮಯಕ್ಕೆ ಸರಿಯಾಗಿ ಹೋಗಲಿಲ್ಲವೆಂದು ಮುನಿಸಿಕೊಂಡು ಮುನಿಆಂಜನೇಯನಾದ ಕಾರಣ ನಮಗೆ ದರುಶನವನ್ನೇ ನೀಡಿರಲಿಲ್ಲ. ಹಾಗಾಗಿ ಆತನ ದರುಶನ ಭಾಗ್ಯ ಪಡೆಯೋಣವೆಂದು ಅಲ್ಲಿಗೆ ಹೋಗಲು ನಿರ್ಧರಿಸಿದ್ದು.
9ರ ಬೆಳಿಗ್ಗೆ, ಉತ್ಸಾಹದಿಂದ ತಯಾರಾಗಿ, ಬಿಸಿ ಬಿಸಿ ಉಪ್ಪಿಟ್ಟನ್ನು ತಿಂದು, ಮನೆಯ ಹತ್ತಿರದ ಬಸ್ ಸ್ಟಾಪ್ ಹತ್ತಿರ ಬರುತ್ತಿದ್ದಂತೆ ಕಂಡದ್ದು ಮೇಜೆಸ್ಟಿಕ್ ಗೆ ಹೋಗುವ ಬಸ್. ವಾಹ್... ಎಂಥ ಪ್ರಾರಂಭ. ಬಸ್ ಹತ್ತಿ, ಕೂಡಲು ಜಾಗವೂ ಸಿಕ್ಕಿದಾಗ ನನ್ನ ಸಂತೋಷ ಮೇರೆ ಮೀರಿತ್ತು. ಬಸ್ಸಿನ ಎತ್ತರದ ಜಾಗದಲ್ಲಿ ಕೂತು ಕಿಟಕಿಯಿಂದ ನೋಡುವ ದೃಶ್ಯ ಬೇರೆಯೇ ರೀತಿ ಇರುತ್ತದೆ. ಒಂದಾನೊಂದು ಕಾಲದಲ್ಲಿ, ಇದೇ ಬಸ್ಸಿನಲ್ಲಿಯೇ ಸಂಚರಿಸುತ್ತಿದ್ದ ನನಗೆ, ಹೊರಗೆ ಕಾಣುತ್ತಿದ್ದ ದೃಶ್ಯಗಳು, ಅತಿ ವಿನೂತನವಾಗಿದ್ದವು. ಎಲ್ಲವೂ ಹೊಸ ಕಟ್ಟಡಗಳೇ... ಹೊಸತನವೇ.
ವಿಕ್ಟೋರಿಯಾ ಆಸ್ಪತ್ರೆ, ಕೋಟೆ, ಟೌನ್ ಹಾಲ್ ಎಲ್ಲವನ್ನು ನೋಡುತ್ತಾ ಮನಸ್ಸು ಆ ಕಾಲಕ್ಕೆ ಹೋಯಿತು. ಅಂದಿನ ಬಸ್ ಪ್ರಯಾಣ ಅನಿವಾರ್ಯವಾಗಿತ್ತು, ಇಂದು ನನ್ನದೇ ಆಯ್ಕೆ, ಹಾಗಾಗಿ ಖುಷಿ.
ಕೋಲಾರದ ಕಡೆ ಹೋಗುವ ಬಸ್ಸುಗಳು ನಿಲ್ಲುವ ಸ್ಥಳಕ್ಕೆ ಹೋಗುವಷ್ಟರಲ್ಲಿ ಒಂದು ಬಸ್ಸು ಹೊರಟೇ ಹೋಯಿತು. ಮುಳಬಾಗಲು ಕಡೆ ಹೊರಟು ನಿಂತಿದ್ದ ಮತ್ತೊಂದು ಬಸ್ಸು ಹತ್ತಿ ಕೂರುವ ಹೊತ್ತಿಗೆ 9:30 ದಾಟಿತ್ತು. ಡ್ರೈವರನ್ನು ವಿಚಾರಿಸಿದಾಗ... ಮುಳಬಾಗಿಲು ಮುಟ್ಟಲು ಕನಿಷ್ಠ 3 ಘಂಟೆ ಬೇಕು. ಆದರೆ ಹೊಸಕೋಟೆಯನ್ನು ದಾಟುವ ತನಕ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿಂದ ಮುಂದಕ್ಕೆ ಬೇಗ ಹೋಗಬಹುದು.
ಬರುವ ಜನರಲ್ಲನ್ನೆಲ್ಲಾ ಕರೆದು ಬಸ್ಸು ಹೊರಡುವ ಹೊತ್ತಿಗೆ 9.45... ತಕ್ಷಣ ಲೆಕ್ಕ ಹಾಕಿದ್ದು 12:45 ಗೆ ಮುಳಬಾಗಿಲು..15 ನಿಮಿಷ ಸಮಯ ಉಂಟು.
ಯಾವ ಯಾವುದೋ ಅಪರಿಚಿತ ರಸ್ತೆಗಳಲ್ಲಿ ಕುಂಟುತ್ತಾ ಹೊರಟ ಬಸ್ಸು, ಚಲಿಸುವುದಕ್ಕಿಂತ ನಿಂತ ಸಮಯವೇ ಜಾಸ್ತಿ ಎಂದು ಅನಿಸುತ್ತಿತ್ತು.. ಆಗಾಗ್ಗೇ ಸಮಯ ನೋಡುವುದು ಲೆಕ್ಕ ಹಾಕುವುದು ನಡೆದೇ ಇತ್ತು.
ಕೃಷ್ಣರಾಜಪುರ ಮುಟ್ಟುವಲ್ಲಿ 11 ಘಂಟೆಯಾಗಿದ್ದು, ಮಧ್ಯಾಹ್ನ ಒಂದು ಗಂಟೆಯೊಳಗಾಗಿ ದೇವಸ್ಥಾನ ಮುಟ್ಟುವ ಸಾಧ್ಯತೆ ಕಡಿಮೆ ಎಂದು ಮನಸ್ಸು ಹೇಳುತ್ತಿತ್ತು... ಹೇಗಾದರಾಗಲಿ 3 ಘಂಟೆಯ ತನಕ ಕಾದು ದೇವರ ದರ್ಶನ ಮಾಡುವುದು ಎಂಬ ಸಮಾಧಾನವೂ ಗೋಚರಿಸುತ್ತಿತ್ತು.
ಅಲ್ಲಿಂದ ಮುಂದೆ ಬಸ್ಸಿನ ವೇಗ ಜಾಸ್ತಿಯಾಗಿ..12.50 ಕ್ಕೆ ಮುಳಬಾಗಿಲು ಬಂದು ಮುಟ್ಟಿ... ದೇವಸ್ಥಾನದ ಕಡೆ ಓಡುವಷ್ಟು ಜೋರಾಗಿ ನಡೆದೆ. ದೇವಸ್ಥಾನದ ಪ್ರಾಂಗಣ ಮುಟ್ಟುತ್ತಿದ್ದಂತೆ "ಓಡಿ ಓಡಿ ಒಂದು ಗಂಟೆಗೆ ದೇವಸ್ಥಾನ ಮುಚ್ಚುತ್ತೆ " ಎಂಬ ಸಲಹೆಯೊಡನೆ ಮತ್ತಷ್ಟು ಜೋರಾಗಿ ನಡೆದು ದೇವಸ್ಥಾನದ ಬಾಗಿಲೊಳಗೆ ಹೆಜ್ಜೆ ಇಡುತ್ತಿದ್ದಂತೆ ಮನಸ್ಸಿಗೆ ಶಾಂತಿ.
ದೇವಸ್ಥಾನ ಮುಚ್ಚುವ ಮೊದಲು ಗರ್ಭಗುಡಿಯನ್ನು ಸ್ವಚ್ಛ ಮಾಡುತ್ತಿದ್ದ ಕಾರಣ... ನಾನು ದೇವರ ಮುಂದೆ ಕುಳಿತುಕೊಳ್ಳಲು... ಮೊದಲನೆಯದಾಗಿ ವಿಶ್ರಾಂತಿ, ಎರಡನೆಯದಾಗಿ ಕಣ್ಮುಚ್ಚಿ ದೇವರ ಧ್ಯಾನ ಮಾಡುವ ಅವಕಾಶ ಸಿಕ್ಕಿತು. ನೆಮ್ಮದಿಯ ನಿಟ್ಟುಸಿರು.
ಮಂಗಳಾರತಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಹೊರಗೆ ಬರುವ ದಾರಿಯನ್ನು ಅನುಸರಿಸುವಾಗ ನಮಸ್ಕರಿಸಲು ಜಾಗವೇ ಸಿಗಲಿಲ್ಲ. ಹಾಗಾಗಿ ಮತ್ತೊಮ್ಮೆ ದೇವಸ್ಥಾನದ ಬಾಗಿಲನ್ನು ಹೊಕ್ಕು ವಿಶಾಲವಾದ ಜಾಗದಲ್ಲಿ ನಮಸ್ಕರಿಸಿ ಕೆಲ ಕ್ಷಣ ಕೂತರೆ, ಯಾರೋ ಬಂದು ಬಾಗಿಲು ಮುಚ್ಚಿ ಬೀಗ ಹಾಕಿದ್ದು ಕಂಡಿತು. ಮತ್ತೆ ಆತ ಗರ್ಭಗುಡಿಯ ಕಡೆಗೆ ಕೈ ತೋರಿದ. ಹೊರಗೆ ಹೋಗಲು ಮತ್ತದೇ ದಾರಿ... ಆಂಜನೇಯನ ಮುಂದೆ ಮತ್ತೆ ಹೋಗುವ ಅವಕಾಶ.. ನಾನೇ ಕೊನೆಯವನಾದ್ದರಿಂದ ಅರ್ಚಕರ ಜೊತೆ ಎರಡು ನಿಮಿಷ ಮಾತನಾಡುವ ಅವಕಾಶ. ಹೊರಕ್ಕೆ ಬರುತ್ತಾ ಅನಿಸಿದ್ದು.... ಆಗ ದರ್ಶನ ಕೊಡದಿದ್ದ ಆಂಜನೇಯ, ಈಗ ಎರಡನೆಯ ಬಾರಿ ತಾನಾಗೆ ದರ್ಶನ ಕಲ್ಪಿಸಿಕೊಟ್ಟು ಸಮಾಧಾನ ಮಾಡಿದನೇ ?
ಧಾವಂತವೆಲ್ಲ ಮುಗಿದಿತ್ತು, ಮನಸ್ಸು ತುಂಬಿ ಬಂದಿತ್ತು, ಪ್ರಾಂಗಣದಲ್ಲಿ ಹಾಯಾಗಿ ಒಂದಷ್ಟು ಹೊತ್ತು ಕುಳಿತು ಕಾಲ ಕಳೆದೆ.
ದೊಡ್ಡ ಪ್ರಾಕಾರದಲ್ಲಿ ಸುತ್ತಾಡಿದ ನಂತರ ಮನಸ್ಸಿಗೆ ಬಂದದ್ದು ದೋಸೆ ತಿನ್ನುವ ಆಸೆ. ಮೂಲವಾಗಿ ಮುಳಬಾಗಿಲು ದೋಸೆ ಪ್ರಾರಂಭ ಮಾಡಿದ ಹೋಟೆಲ್ ಬಗ್ಗೆ ವಿಚಾರಿಸಿದಾಗ... ಅದು ಬೆಳಿಗ್ಗೆ 12ರ ಸುಮಾರಿಗೆ ಮುಚ್ಚುತ್ತದೆ ಮತ್ತೆ ತೆರೆಯುವುದು 6 ಘಂಟೆಗೆ ಎಂದು ತಿಳಿಯಿತು. ಹಾಗಾದರೆ ನನಗೆ ಮಸಾಲ ದೋಸೆಯ ಯೋಗವಿಲ್ಲ ಅನಿಸಿತು. ಬೆಂಗಳೂರಿನಲ್ಲೇ ಸಿಗುವ ಮುಳಬಾಗಿಲು ದೋಸೆ, ಮುಳಬಾಗಿಲಿನಲ್ಲಿ ಸಿಗಲಾರದೇ ಎಂದು ಯೋಚಿಸುತ್ತಾ ನಡೆದಾಗ ಕಂಡಿದ್ದೆ ಮುಳಬಾಗಿಲು ದೋಸೆ ಪಾಯಿಂಟ್. ಮಸಾಲೆ ದೋಸೆ ಮೊಸರನ್ನ ತಿಂದಾಗ ನನ್ನ ಗುರಿಯನ್ನು ಸಾಧಿಸಿದೆ ಎಂಬ ಸಂತೋಷ.
ಮುಂದಿನದ್ದು, ಮನೆಯ ಕಡೆಯ ಪಯಣ. ಬಸ್ ಸ್ಟ್ಯಾಂಡ್ ನಲ್ಲಿ ಕಂಡ ಬಸ್ಸನ್ನು ಹತ್ತಿ ಕೂತೆ. ಅದು ಹೆಸರಿಗೆ express ಬಸ್.. ಆದರೆ ಸಾಕಷ್ಟು ಕಡೆ ಹೆದ್ದಾರಿಯಿಂದ ಪಕ್ಕಕ್ಕೆ ಬಂದು, ಕೆಲ ಕಡೆ ನಿಲ್ಲಿಸಿ ಮುಂದೆ ಹೋಗುತ್ತಿದ್ದದ್ದು. ಅಂತಹ ಒಂದು ಸಮಯದಲ್ಲಿ ನರಸಾಪುರ ಎಂಬ ಹೆಸರು ಕಂಡಿದ್ದು... ಕೆಲವೇ ನಿಮಿಷಗಳ ನಂತರ ಕಂಡದ್ದು ಆ ಚಿಕ್ಕ ದೇವಸ್ಥಾನ... ನನ್ನನ್ನು ಹಳೆಯ ನೆನಪಿಗೆ ಜಾರಿಸಿತು.
ಅಂದು ಕೋಲಾರದಿಂದ ಸ್ಕೂಟರ್ ನಲ್ಲಿ ವಾಪಸ್ ಬರುತ್ತಿದ್ದಾಗ, ಮಳೆಯ ಹನಿ ಶುರುವಾಯಿತು. ಹಾಗಾಗಿ ಈ ದೇವಸ್ಥಾನದ ಹತ್ತಿರ ಬಂದು ನಿಂತದ್ದು. ಅಲ್ಲಿ ಇದ್ದ ಕೆಲವು ಜನ ಹಳ್ಳಿಗರು ಹುಲಿ ಗಟ್ಟ ಆಟ ಆಡುತ್ತಿದ್ದರು. ನನಗೂ ಸ್ವಲ್ಪ ಆಟದ ರುಚಿ ಇದ್ದಿದ್ದರಿಂದ, ಆಡಲು ಮುಂದೆ ಹೊರಟೆ. ಅಲ್ಲಿದ್ದ ಒಬ್ಬ ಹಿರಿಯರು, ಹೇಳಿದ್ದು.... ನೀವು ಪಟ್ಟಣದವರು ಜಾಣರು ಹಾಗಾಗಿ ಹುಲಿಯನ್ನೇ ಆಡಿ, ನಾನು ಕುರಿ, ಸುಲಭವಾಗಿ ತಿನ್ನಬಹುದು ಎಂದು ಉಬ್ಬಿಸಿ ಹುಲಿಯಾಗಿ ಆಡಲು ಒಪ್ಪಿಸಿದರು.
ತುಂಬಾ ಉತ್ಸಾಹ ಹಾಗೂ ಆತ್ಮವಿಶ್ವಾಸದಿಂದ ಆಡಲು ಶುರು ಮಾಡಿದ ನಾನು ಎರಡು ಕುರಿಯನ್ನು ಕೊಂದೆ (ಅವರೇ ಸುಲಭವಾಗಿ ಕೊಟ್ಟರಾ?).. ಉತ್ಸಾಹ ಇಮ್ಮಡಿಸಿತು.. ಆದರೆ ಕೆಲವೇ ನಿಮಿಷಗಳ ನಂತರ ನನ್ನ ಹುಲಿಯನ್ನು ಪೂರಾ ಕಟ್ಟಿ ಹಾಕಿದ್ದರು... ಜೊತೆಗೆ ಉಳಿದ ಒಂದು ಕುರಿಯನ್ನು ನನ್ನ ಕೈಗೆ ಕೊಟ್ಟು... ತಿನ್ನು ಎಂದು ಹೇಳಿದ್ದು. ಚಾಣಾಕ್ಷ ಆಟಗಾರ. ಸೋತರೂ, ಅವರು ಆಡಿದ ರೀತಿ ತುಂಬಾ ಮೆಚ್ಚುಗೆಯಾಗಿತ್ತು.. ಅಭಿನಂದಿಸಿ, ಸ್ವಲ್ಪ ಹೊತ್ತು ಕಾದು ಮಳೆ ನಿಂತ ತಕ್ಷಣ ಹೊರಟಿದ್ದರ ನೆನಪು ಮರುಕಳಿಸಿತು.
ಬಸ್ಸು ಸಾಗುತ್ತಿತ್ತು, ಮೊದಲೇ ನಿರ್ಧರಿಸಿದಂತೆ ಕೃಷ್ಣರಾಜಪುರ ಬಂದ ತಕ್ಷಣ ಇಳಿದು, ಮೆಟ್ರೋ ರೈಲು ಹತ್ತಿ, ನ್ಯಾಷನಲ್ ಕಾಲೇಜ್ ಬಳಿ ಬಂದು ಇಳಿದೆ. ಸಮಯ 5 ಘಂಟೆ ದಾಟಿತ್ತು. ಬಸ್ ಸ್ಟಾಪ್ ಗಾಗಿ ರಾಮಕೃಷ್ಣಾಶ್ರಮದ ತನಕ ನಡೆಯಬೇಕಿತ್ತು... ಹಾಗಾಗಿ ಆಟೋದಲ್ಲಿ ಮನೆಗೆ ಹೋಗೋಣ ಎಂದು ಒಂದು ಮನಸ್ಸು ಹೇಳಿತು.
ಇಷ್ಟೆಲ್ಲ ಪ್ರಯಾಣ ಮುಗಿಸಿ ಕೊನೆಯ ಹಂತದಲ್ಲಿ ಸೋಲಬೇಕು ಯಾಕೆ? ಎಂದ ಇನ್ನೊಂದು ಮನಸ್ಸಿನ ಮಾತು ಕೇಳಿ, ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ಗುನುಗುತ್ತಾ ಸರಸರ ಹೆಜ್ಜೆ ಹಾಕಿದೆ .. ರಾಮಕೃಷ್ಣ ಆಶ್ರಮದ ಕಡೆಗೆ...
ಬಂದ ಬಸ್ಸು ಏರಿ, ಮನೆಯ ಹತ್ತಿರ ಇಳಿದು ಮತ್ತೆ ನಡೆದು ಮನೆ ಸೇರಿದಾಗ Mission ಮುಳಬಾಗಿಲು ಸಂಪನ್ನವಾಗಿತ್ತು.
Mission ಅನ್ನು ಯಶಸ್ವಿಯಾಗಿ ಮುಗಿಸಲು ಶಕ್ತಿ ಕೊಟ್ಟ ಆ ಮುಳಬಾಗಿಲು ಆಂಜನೇಯನಿಗೆ ಮನಸ್ಸಿನಲ್ಲಿ ವಂದಿಸುತ್ತಾ....
ನಮಸ್ಕಾರ....
ಡಿ ಸಿ ರಂಗನಾಥ ರಾವ್
9741128413




Comments
Post a Comment