ಗೆಳೆತನ ಅಂದ್ರೆ. ...


 ವಿದ್ಯಾರ್ಥಿ ಜೀವನದ ಪ್ರಸಂಗಗಳು ಲೇಖನಕ್ಕೆ ಬಂದ ಒಂದು ಪ್ರತಿಕ್ರಿಯೆ ಇದು. ಓದಿದ ಕೂಡಲೇ ಖುಷಿಯಾಯಿತು, ಇದನ್ನು ಬರೆದಿರುವುದು ಪ್ರೇಮನೇ (ಭದ್ರಾವತಿಯ ಪ್ರೇಮ್ ಕುಮಾರ್... ಪ್ರೇಮ್) ಎಂದು ಖಚಿತವಾಯಿತು. ತಕ್ಷಣ ಅವನಿಗೆ ಫೋನ್ ಮಾಡಿದೆ... ಸಂತೋಷದ ತರಂಗಗಳು ನಮ್ಮಿಬ್ಬರ ಮಧ್ಯೆ ಹರಿದಾಡಿದವು. ಸುಮಾರು 10 ನಿಮಿಷಗಳ ಕಾಲದಲ್ಲಿ ಏನೆಲ್ಲ ಮಾತಾಡಿ, ಹಳೆಯದನ್ನು ನೆನಪಿಸಿಕೊಂಡು, ಭೇಟಿ ಮಾಡುವ ನಿರ್ಧಾರ ಮಾಡಿದ್ದಾಯ್ತು. 
ಈ ಪ್ರೇಮ ವಿಶಿಷ್ಟ ವ್ಯಕ್ತಿ. ಅವನನ್ನು ಪ್ರೇಮ್... ಅಂದರೆ ಗಂಡಸು ಎಂದು ಕರೆಸಿಕೊಳ್ಳುವ ಇಚ್ಛೆ.... ಆದರೆ ಮೋತಿ ಕರೆಯುತ್ತಿದ್ದದ್ದು ಪ್ರೇಮ ಎಂದು, ಸಹಜವಾಗಿ ನಾನೂ ಅದನ್ನೆ ಉಪಯೋಗಿಸಿದೆ. ನನ್ನ ನೆನಪಿನಲ್ಲಿರುವಂತೆ,  ಇದುವರೆಗೆ 4 ಸಲ ಭೇಟಿ ಮಾಡಿರಬಹುದೇನೋ.. ಅದರಲ್ಲಿ ಒಂದು ಬಾರಿ ಮಾತ್ರ ಒಂದು ವಾರಕ್ಕೂ ಹೆಚ್ಚು, ಜೊತೆ ಜೊತೆಯಲ್ಲೇ ಕಳೆದದ್ದು. ಇಷ್ಟು ಕಡಿಮೆ ಒಡನಾಟದಲ್ಲಿ, ಅದೆಷ್ಟು ಬಾಂಧವ್ಯ ಬೆಳೆದಿದೆ ಎಂದರೆ.. ಆ ಆತ್ಮೀಯತೆ ಅನುಭವಿಸಿಯೇ ತೀರಬೇಕು. ಆ ವಯಸ್ಸಿನ ಪ್ರಭಾವವೋ, ಗೆಳೆತನಕ್ಕೆ ಬಿದ್ದ ಭದ್ರ ಬುನಾದಿಯೋ.. ಇಂದಿಗೂ ಚೆನ್ನಾಗಿದೆ.    ಅವನು ನೆನಪಿಸಿದ ಬಿದರಗೂಡಿನ ಪ್ರವಾಸ ಈ ಲೇಖನದ ತಿರುಳು.

ಅದು 1968 - 69 ರ ಸಮಯ . ಓದು ಮುಗಿಸಿ, ಸರಿಯಾದ, ಪೂರ್ಣ ಪ್ರಮಾಣದ  ಕೆಲಸವಿಲ್ಲದ ದಿನಗಳು. ಸುಮಾರು 12 ರ ತನಕ Bangalore Institute of Engineering ನಲ್ಲಿ ಪಾಠ ಮಾಡಿ ಬಂದರೆ, ಮಿಕ್ಕಿದ್ದೆಲ್ಲಾ ಕಾಲಹರಣ ಇಂಜಿನಿಯರಿಂಗ್ ಮಾತ್ರ. 
ಅದಾಗಲೇ IAF  ಸೇರಿದ್ದ ಮೋತಿ ( ಭದ್ರಾವತಿಯ K.ಮೋತಿ ಸಿಂಗ್.   ಮ ಕಾರದ ಬದಲು, ಕ ಕಾರವನ್ನು ಸೇರಿಸಿ ಕರೆಯುತ್ತಿದ್ದದ್ದು ಉಂಟು) ರಜದ ಮೇಲೆ ಬೆಂಗಳೂರಿಗೆ ಬಂದಿದ್ದ. ಅವನ ಜೊತೆ ಭದ್ರಾವತಿಗೆ ಹೋಗುವ ನಿರ್ಧಾರವಾಯಿತು. ಭದ್ರಾವತಿಯಲ್ಲಿ ನನ್ನ ಇನ್ನೊಬ್ಬ ಗೆಳೆಯ ಅನಂತ (J  Aಅನಂತ Pಪದ್ಮ Nನಾಭ ರಾವ್.. JAPN Rao... ಅದು ಜಪಾನ್ ರಾವ್ ಆಗಿತ್ತು) ಹಾಗೂ ವಿಶಾಲು ರಂಗನಾಥ್ ದಂಪತಿ ಇದ್ದಿದ್ದು ಇನ್ನೊಂದು ಸೆಳೆತ.
ಭದ್ರಾವತಿಯಲ್ಲಿ ಮೋತಿಯ ಗೆಳೆಯರು ಪ್ರೇಮ ಹಾಗೂ ಕೆಂಪ ( ಪೂರ್ತಿ ಹೆಸರು ತಿಳಿಯದು). ಇವರೊಂದಿಗೆ ಅಲೆದಾಡಿದ್ದು ‌...ಹುತ್ತ ಕಾಲೋನಿ, ಪೇಪರ್ ಟೌನ್ ಮತ್ತೆಲ್ಲೆಲ್ಲೋ.... ಹೀಗೆ ಅಲೆದಾಡುವವರನ್ನು ಪೊರ್ಕಿ ಎಂಬ ಬೈಗುಳದಿಂದ ಆದರಿಸುತ್ತಿದ್ದವರು ಕೆಲವರು ಎಂದು ಅರ್ಥವಾಗಿದ್ದು ಆಗಲೇ.
ಪ್ರೇಮನ ಮನೆಯವರು, ಅವನ ಅಕ್ಕನ ಊರು ಬಿದರಗೂಡಿಗೆ ಹೊರಟಿದ್ದರು. ಅದು ಹೇಗೋ ನಾನು ಮತ್ತು ಮೋತಿ ಅವರ ಜೊತೆಗೆ ಹೊರಟೇ ಬಿಟ್ಟೆವು.  ಆಗೆಲ್ಲ ಶೆಟ್ಟಿ ಬಿಟ್ಟಲ್ಲೇ ಪಟ್ಟಣ ಎನ್ನುವಂತೆ ಎಲ್ಲಿ ಬೇಕಾದರೂ ಆರಾಮವಾಗಿ ಇರುವ ಮನೋಭಾವ ಇತ್ತು. 
ಮಲೆನಾಡ ಪ್ರದೇಶ, ಎಲ್ಲ ಕಡೆ ಹಸಿರು, ಜೊತೆಗೆ ತುಂತುರು ಮಳೆ (ಕಾರಿನಲ್ಲಿ ಹೋದದ್ದಾ? ನೆನಪು ಮಾಸಿದೆ) ಆಹ್ಲಾದಕರವಾಗಿತ್ತು . ಮಲೆನಾಡ ಪ್ರದೇಶದ ಬಗ್ಗೆ ಓದಿ ತಿಳಿದಿದ್ದ ನನಗೆ , ಇದು ಮೊದಲ ಭೇಟಿ.
ಬಿದರಗೂಡಿನ ಮನೆ ತಲುಪುವಷ್ಟರಲ್ಲಿ ಜೋರಾಗಿ ಮಳೆ ಬರುತ್ತಿತ್ತು, ಮನೆಯವರ ಮೊದಲ ಆದರ/ ಆತಿಥ್ಯ ಬಿಸಿ ಬಿಸಿ ಕಷಾಯದೊಂದಿಗೆ, ನನಗಷ್ಟು ರುಚಿಸದಿದ್ದರೂ.

ನನ್ನ ಅಂದಿನ ಎಣಿಕೆಯಲ್ಲಿ ಅವರದು ಬಹುದೊಡ್ಡ ಮನೆ, ಸಾಕಷ್ಟು ಅನುಕೂಲಗಳನ್ನು  ಮಾಡಿಕೊಂಡಿದ್ದರು. ಅಟ್ಟವೋ / ಮಹಡಿಯೋ ಇದ್ದ ಮನೆ. ಅಲ್ಲಿನ ಕಿಟಕಿಯಿಂದ ನೋಡಿದ, ಮಳೆಯಿಂದ ತೋಯ್ದ ತೋಟದ ನೋಟ, ಕಣ್ಣಿಗೆ ಕಟ್ಟಿದಂತಿದೆ.
ಸುಮಾರು ಮೂರು ದಿನ ಇದ್ದದ್ದು... ಎಲ್ಲ ಓಡಾಟವೂ ಮಳೆಯಲ್ಲೇ. ಕಂಬಳಿಯಲ್ಲಿ ಮಾಡಿದ, ತಲೆ ಮತ್ತು ಬೆನ್ನನ್ನು ಮಳೆಯಿಂದ ರಕ್ಷಿಸುವ ಒಂದು ಸಾಧನ ( ಹೆಸರು ಮರೆತಿದೆ) ತಲೆಯ ಮೇಲೆ ಹಾಕಿಕೊಂಡು ಹೊರಟರೆ, ಮಳೆಯ ಪರಿವೆಯೇ ಇಲ್ಲ. ಎಲ್ಲಿ ನೋಡಿದರೂ, ಇದೇ ಕಂಬಳಿಯ ನೋಟ.
ಕುತೂಹಲಕ್ಕೆ, ನಾನು ಹಾಕಿಕೊಂಡಿದ್ದು ಉಂಟು.
ಆ ಮಳೆಯಲ್ಲೂ ಜೀವನ ಸಾಮಾನ್ಯವೆಂಬಂತೆ ನಡೆಯುತ್ತಿತ್ತು. ನನ್ನ ಹಳ್ಳಿಯಲ್ಲಾದರೆ ಈ ಮಳೆಗೆ ಮನೆಯಲ್ಲಿ ಸೇರಿ ಬೆಚ್ಚಗೆ ಕೂಡುತ್ತಿದ್ದೆ.
ಇಂಥ ಮಳೆಯಲ್ಲಿ, ಒಂದು ಅಂಗಡಿಯ  ಮುಂದೆ ಸೇರಿದ್ದ ಜನ, ಆಗಾಗ್ಗೆ ಹೋ ಎಂದು ಕೂಗುತ್ತಿದ್ದದ್ದು ನನ್ನ ಕುತೂಹಲವನ್ನು ಕೆರಳಿಸಿತು. ಅಲ್ಲಿ ಕಂಡದ್ದು ತೆಂಗಿನಕಾಯಿಯ ಆಟ (ಜೂಜು ಸಹ). ಇಬ್ಬರು ವ್ಯಕ್ತಿಗಳು ಎದುರು ಬದುರಾಗಿ ಕುಳಿತು, ಕೈಯಲ್ಲಿ ತೆಂಗಿನಕಾಯಿ ಹಿಡಿದು, ಕಲ್ಲುಹಾಸಿನ ನೆಲದ ಮೇಲೆಯೇ ತಳ್ಳಿ, ತೆಂಗಿನಕಾಯಿ ಡಿಕ್ಕಿ ಹೊಡೆಸಿ, ಯಾರ ಕಾಯಿ ಮೊದಲು ಸೀಳುವುದೋ ಅವರು ಸೋತಂತೆ. ನಂತರ ದುಡ್ಡಿನ ವಿನಿಮಯ. 

ಓಹೋಯ್ ಎಂದು ಎತ್ತರದ ದನಿಯಲ್ಲಿ ಕೂಗುವುದು, ಮಲೆನಾಡಿನ ಸಂವಹನದ ರೀತಿ.

ಇದ್ದ ಎರಡು ರಾತ್ರಿ ಮೂರು ಹಗಲು, ಆ ಸಮಯದಲ್ಲಿ ಅವರ ಮನೆಯವರು ತೋರಿದ ಪ್ರೀತ್ಯಾದರಗಳು, ಆತಿಥ್ಯ ಅದ್ಧೂರಿಯಾಗಿದ್ದವು. ಅದರಲ್ಲೂ ಅಡುಗೆ ಮನೆಯಲ್ಲಿ ಕೂಡಿಸಿಕೊಂಡು ದೋಸೆ ಮಾಡಿಕೊಟ್ಟ ಅಕ್ಕನ ಆ ಪ್ರೀತಿಗೆ ಎಣೆಯೇ ಇಲ್ಲ. 
ಆತ್ಮೀಯವಾಗಿ ಬೀಳ್ಗೊಂಡು, ಸೂರ್ಯ ಮುಳುಗುವ ವೇಳೆಗೆ ಬಂದು ಸೇರಿದ್ದು ತೀರ್ಥಹಳ್ಳಿಯ (ಪ್ರೇಮನ ಚಿಕ್ಕಪ್ಪನ ?) ಮನೆ.
ನಾನು ಪ್ರೇಮ ಮೋತಿ.. ಜೊತೆಯಲ್ಲಿ ಇನ್ಯಾರು ಇದ್ದರೋ ನೆನಪಿಲ್ಲ, ತೀರ್ಥಹಳ್ಳಿಯ ರಸ್ತೆಗಳಲ್ಲಿ ಸುತ್ತಾಡಲು ಹೊರಟೆವು. ಹರಟೆಯು ಓತಪ್ರೋತವಾಗಿ ಸಾಗಿತ್ತು. ಈ ಸಮಯದಲ್ಲಿ ಪ್ರೇಮನ ಉವಾಚ... " ನಮ್ಮಪ್ಪ ಮಿನಿಸ್ಟರ್ ಆಗಿದಾರೆ..". ನನಗೇನೂ ತಿಳಿಯಲಿಲ್ಲ... 
ಅವರ ಆಪ್ತ ಗುಂಪಿನಲ್ಲಿ ಒಂದು ಸಣ್ಣ ಪಾರ್ಟಿ ಮಾಡುವ ಸಮಯದಲ್ಲಿ ಅವರಿಗೆ ತೊಂದರೆ ಕೊಡಬಾರದು ಅಷ್ಟೇ... ಅದಕ್ಕೇ ಮಿನಿಸ್ಟರ್ ಹೆಸರು.
ಮಾತು ಎಲ್ಲೆಲ್ಲೋ ಸುತ್ತಿ, ಕುಡಿತ, ಕುಡುಕರು, ಅವರ ಮಾತುಗಳು, ಅವರ ನಡೆದಾಟದ ಕಡೆ ಹೊರಳಿತು.. ಅದೆಲ್ಲಿಂದ ಸ್ಪೂರ್ತಿ ಬಂತೋ ನನಗೆ, ಕುಡಿದವನಂತೆ ನಟಿಸುತ್ತಾ " ಲೇಯ್... ಸ್ವಲ್ಪ ತಾಳ್ರೋ.. ಬರ್ತೀನಿ... wait a minute for five minutes..." ಅಂತ ಹೇಳ್ತಾ ರಸ್ತೆ ಮೇಲೆ ಮಲಗಿಬಿಟ್ಟೆ, ಅವರ ಎಳೆದಾಟಕ್ಕೂ ಸ್ಪಂದಿಸದೆ.. ಏನೇನೋ ವಟ ಗುಟ್ಟುತ್ತಾ.
ವಾವ್.... ತರಲೆ ಎನಿಸಿದರು... ಆ ಕ್ಷಣಗಳನ್ನು ಎಲ್ಲರೂ ಸಂಭ್ರಮಿಸಿದ್ದು, ಸಂತೋಷಿಸಿದ್ದು ಸತ್ಯ.

ಜೀವನದ ಎಲ್ಲ ಹಂತದಲ್ಲೂ.. ಒಂದು ಪ್ರಾರಂಭ, ಅದರ ಜೊತೆಗೆ ಒಂದು ಕೊನೆ ಸಹಜ. ಭದ್ರಾವತಿ, ಬಿದರಗೂಡು ಹಾಗೂ ತೀರ್ಥಹಳ್ಳಿಯ ಪ್ರವಾಸ ಮುಗಿದು, ಬೆಂಗಳೂರಿನ ಸಾಮಾನ್ಯ ಜೀವನ ಸಾಗಿತ್ತು. 
ನಂತರದ ದಿನಗಳಲ್ಲಿ   ಶಹಾಬಾದಿನಲ್ಲಿ ಕೆಲಸ ಮಾಡಿ , ಬೆಂಗಳೂರಿನಲ್ಲಿ ಸ್ವಂತ ಕಾರ್ಖಾನೆ ಪ್ರಾರಂಭ ಮಾಡಿ, ಅದಕ್ಕಾಗಿ   ಓಡಾಡುವ ಸಮಯದಲ್ಲಿ, ಒಂದು ಬಾರಿ Graphite India ಕಾರ್ಖಾನೆಗೆ ಹೋಗಿದ್ದಾಗ, ಸಿಕ್ಕವನು ಇದೇ ಪ್ರೇಮ. 
ಆನಂತರ ಭೇಟಿ ಮಾಡಲಾಗಿಲ್ಲ. ಹಳೆಯ ಸಂಬಂಧಗಳನ್ನು ನವೀಕರಿಸುವ ಪ್ರಯತ್ನದಲ್ಲಿ ಅವನ ಟೆಲಿಫೋನ್ ನಂಬರ್ ಸಿಕ್ಕಿ ಮಾತನಾಡಿದ್ದು ಮಾತ್ರ. ಆದರೆ ಸ್ನೇಹದ ಸೆಳೆತ ಮಾತ್ರ ಗಟ್ಟಿಯಾಗಿದೆ. " ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತಾ.. " ಎಂಬ ಗೋಪಾಲಕೃಷ್ಣ ಅಡಿಗರ ಕವನ ಪ್ರಸ್ತುತವೆನಿಸುತ್ತದೆ.
ಆದಷ್ಟು ಬೇಗ, ನಮ್ಮ ಮೂವರ, ಸಾಧ್ಯವಾದರೆ ಕೆಂಪನ ಭೇಟಿಯಾಗಲೆಂದು ಆಶಿಸುತ್ತೇನೆ.

ನನ್ನ ಜೀವನದಲ್ಲಿ ಇಣುಕಿ, ಪ್ರಭಾವ ಬೀರಿ, ಮರೆಯಾದ ಕೆಲವು ಮಿತ್ರರು, ಇನ್ನೂ ಜೊತೆಯಲ್ಲಿಯೇ ಇದ್ದು ಒಡನಾಟ ಇಟ್ಟುಕೊಂಡಿರುವ ಸ್ನೇಹಿತರು, ಯಾವಾಗಲಾದರೂ ಒಮ್ಮೆ ಫೋನ್ ಮೂಲಕ ಆದರೂ ನಂಟು ಇಟ್ಟುಕೊಂಡಿರುವ ಕೆಲವರು,  ಮನಸ್ಸಿದ್ದರೂ... ಕಾರಣಾಂತರಗಳಿಂದ ಭೇಟಿಯಾಗದ, ಮಾತನಾಡದ ಸ್ನೇಹಿತರಿಗೆಲ್ಲಾ ಈ ನನ್ನ ಲೇಖನದ ಅರ್ಪಣೆ...

ನಮಸ್ಕಾರ..
ಡಿ ಸಿ  ರಂಗನಾಥ ರಾವ್
9741128413










    

Comments

Popular posts from this blog

ಕನಕಾಭಿಷೇಕ - ಸಂಭ್ರಮ

ಕಣ್ಮರೆಯಾದ ಕೃಪ

ದೈವಾಧೀನನಾದ ಮೋಹನ